ಜಲಸ್ಥವಿಷ್ಣುಪೂಜೆ

ವೈಶಾಖ ಮಾಸವು ಬಿಸಿಲಿಗೆ ಕುಖ್ಯಾತ! ವಿಶಾಖಾ ನಕ್ಷತ್ರದೊಂದಿಗೆ ಗುರುತಿಸಿಕೊಂಡಿರುವ ಮಾಸವಾದ್ದರಿಂದಲೇ ಇಷ್ಟೊಂದು ಬಿರುಬಿಸಿಲು ಇರುವುದು. ಈ ವಿಶಾಖಾ ನಕ್ಷತ್ರದ ಹೆಸರಲ್ಲೇ ವಿಶೇಷವಾದ ಶಾಖವುಂಟಲ್ಲವೇ!?

ಶಾಖಕ್ಕೆ ಕಾರಣ ಏನೇ ಇರಲಿ. ಅನುಭವಿಸಲೇಬೇಕಾಗಿರುವುದಂತೂ ಸತ್ಯ. ಸಂಪೂರ್ಣ ತಪ್ಪಿಸಿಕೊಳ್ಳಲು ಆಗದೇ ಹೋದರೂ ಕೂಡ ಸ್ವಲ್ಪಮಟ್ಟಿಗೆ ಬೇಗೆಯಿಂದ ಪಾರಾಗಲು ಅನೇಕ ಉಪಾಯಗಳಿವೆ. ಈ ಉಪಾಯಗಳಲ್ಲಿ ದೈಹಿಕ ತಾಪವನ್ನು ಮಾತ್ರ ಕಳೆಯುವುವು ಕೆಲವಾದರೆ, ಇನ್ನೂ ಕೆಲವು ನಮ್ಮ ಆತ್ಮತಾಪವನ್ನೂ ಕಳೆದು, ಪುಣ್ಯವನ್ನು ತಂದು ಕೊಡುತ್ತವೆ.

ತಂಪು ಪಾನೀಯಗಳು, ಎಳನೀರು, ಗಡಿಗೆಯ ನೀರು ಕುಡಿಯುವುದು ಇತ್ಯಾದಿಗಳು ಕೇವಲ ದೈಹಿಕ ತಾಪವನ್ನು ಶಮನ ಮಾಡಿಕೊಳ್ಳುವ ಕೆಲ ಉಪಾಯಗಳು. ಸಾರ್ವಜನಿಕರಿಗೆ ಉಚಿತವಾಗಿ ನೀರು ಪೂರೈಸುವುದು, ಪಶುಪಕ್ಷಿಗಳಿಗೆ ನೀರನ್ನು ಒದಗಿಸುವುದು, ದಾರಿಯಲ್ಲಿ ಮರಗಳನ್ನು ನೆಟ್ಟು ಲೋಕೋಪಕಾರವನ್ನು ಮಾಡುವುದು ಎರಡನೆಯ ವರ್ಗದಲ್ಲಿ ಬರುವ ಉಪಾಯಗಳು. ಇವು ನಮ್ಮನ್ನು ಮಾತ್ರವಲ್ಲ, ನಮ್ಮ ಮುಂದಿನ ಅನೇಕ ತಲೆಮಾರುಗಳನ್ನೂ ತಂಪಾಗಿ ಇಡುತ್ತವೆ. ಇವುಗಳು ಶ್ರೀಹರಿಯ ಪೂಜೆಯೇ ಆಗಿವೆ. ಸಾರ್ವಜನಿಕರ ಮಟ್ಟದಲ್ಲಿ ಮಾಡುವಂತಹವುಗಳು ಇವು.

ವ್ಯಕ್ತಿಗತವಾದ ಮಟ್ಟದಲ್ಲಿ, ಮನಸ್ಸಿಗೆ ಬಹಳ ಖುಷಿ ನೀಡುವ ಪೂಜೆಯೊಂದನ್ನು ಕೂಡ ನಮ್ಮ ಹಿರಿಯರು ತಿಳಿಸಿಕೊಟ್ಟಿದ್ದಾರೆ. ಜಲಸ್ಥ ವಿಷ್ಣುಪೂಜೆಯೆಂದು ಅದಕ್ಕೆ ಹೆಸರು. ಬಹಳ ಸರಳವಾದ, ಆದರೆ ಪುರುಷೋತ್ತಮನ ಪೂಜೆಯಲ್ಲಿ ನಲಿವು ಕಾಣುವರ ಮೈಮನಗಳಿಗೆ ಬಹಳ ತಂಪನ್ನು ಕೊಡುವ ಪೂಜೆ ಇದು. ಪ್ರಯತ್ನಿಸಿ. ಹೆಚ್ಚು ಹಣವೂ ಬೇಕಿಲ್ಲ, ಬಹಳಷ್ಟು ಸಮಯವೂ ಬೇಕಿಲ್ಲ.

ಜಲಸ್ಥಂ ವಿಷ್ಣು, ಡೋಲಸ್ಥಂ ಕೃಷ್ಣಂ, ರಥಸ್ಥಂ ಕೇಶವಂ ದೃಷ್ಟ್ವಾ ಪುನರ್ಜನ್ಮ ನ ವಿದ್ಯತೇ ಎಂದು ಹಿರಿಯರು ಹೇಳಿದ್ದಾರೆ. ಕೇಶವನ ರಥೋತ್ಸವವನ್ನೂ ಕೃಷ್ಣನ ತೊಟ್ಟಿಲು ಸೇವೆಯನ್ನೂ ನಾವು ಅನೇಕ ಕಡೆ ನೋಡಿದ್ದೇವೆ. ಆದರೆ ಜಲಶಾಯಿಯಾದ ನಾರಾಯಣನನ್ನು ನೋಡಿರುವವರು ಕಡಿಮೆ. ಕೇವಲ ಭಾಗ್ಯಶಾಲಿಗಳಷ್ಟೇ ನೋಡಲು ಸಾಧ್ಯ. ಯಾಕೆಂದರೆ ಜಲನಾರಾಯಣನ ಗುಡಿಯು ಇರುವುದು ನೇಪಾಳದಲ್ಲಿ. ಅಲ್ಲಿಗೆ ಎಲ್ಲರೂ ಹೋಗಲಾಗುವುದಿಲ್ಲ ಅಲ್ಲವೇ!? ಚಿಂತೆ ಬೇಡ. “ಸುಲಭಪೂಜೆಯ ಮಾಡಿ ಬಲವಿಲ್ಲದವರು” ಎಂಬ ದಾಸರ ಮಾತನ್ನು ನೆನೆಸಿಕೊಳ್ಳೋಣ. ಕೆಳಗೆ ಕೊಟ್ಟಿರುವ ಸರಳ ಕ್ರಮಗಳನ್ನು ಅನುಸರಿಸಿ ಭಕ್ತಿಯಿಂದ, ಆದಷ್ಟೂ ಅನುಸಂಧಾನಪೂರ್ವಕವಾಗಿ ಪೂಜಿಸೋಣ. ದೇವನು ಖಂಡಿತವಾಗಿಯೂ ಪ್ರೀತನಾಗುವನು. ಎಷ್ಟು ಸುಲಭವಾದ ಪೂಜೆ ನೋಡಿ ಇದು.

ಬೇಕಾಗಿರುವ ಪ್ರತಿಮೆ ಮತ್ತು ವಸ್ತುಗಳು

 1. ಶ್ರೀವಿಷ್ಣುಪ್ರತಿಮೆ (ಮನೆಯಲ್ಲಿ ವಿಷ್ಣುಪ್ರತಿಮೆ ಇಲ್ಲದಿದ್ದರೆ ನರಸಿಂಹ, ಕೃಷ್ಣ, ಶಿಂಶುಮಾರ, ಮಾಧವ, ವೇದವ್ಯಾಸ, ಹಯಗ್ರೀವ, ಕಾಲಿಯಮರ್ದನ ಕೃಷ್ಣ, ವಾಸುದೇವ….. .. .. ಇತ್ಯಾದಿ ಯಾವ ವಿಷ್ಣುಪ್ರತಿಮೆಯಾದರೂ ಆದೀತು)
 2. ಒಂದು ಬೆಳ್ಳಿ / ತಾಮ್ರ / ಹಿತ್ತಾಳೆ / ಕಂಚು ಬಟ್ಟಲು
 3. ತುಲಸಿ, ಶುದ್ಧಗಂಧ, ಒಂದೆರಡು ಹೂವುಗಳು, ಮಂಗಳಾರತಿ ಬತ್ತಿಗಳು, ನೈವೇದ್ಯಕ್ಕೆ ಒಂದಿಷ್ಟು ಶುದ್ಧ ಪದಾರ್ಥ
 4. ಒಂದು ಸ್ವಚ್ಛತಂಬಿಗೆಯಲ್ಲಿ ಶುದ್ಧವಾದ ನೀರು
 5. ಆಚಮನ ಮತ್ತು ಸಂಕಲ್ಪಕ್ಕೆ ಪ್ರತ್ಯೇಕವಾದ ಪಾತ್ರೆ ಮತ್ತು ಪ್ರತ್ಯೇಕವಾದ ನೀರು.

ಪೂಜಾ ಕ್ರಮ

 1. ವೈಶಾಖ ಮಾಸದ ಪೂರ್ಣಿಮೆಯಿಂದ ಜ್ಯೇಷ್ಠ ಮಾಸದ ಪೂರ್ಣಿಮೆಯ ವರೆಗೆ ಈ ಪೂಜೆಯನ್ನು ಮಾಡಬೇಕು.
 2. ಪ್ರತಿನಿತ್ಯ ಬೆಳಗಿನ ದೇವತಾರ್ಚನೆಯು ಸಂಪೂರ್ಣವಾಗಿ ಮುಗಿದ ನಂತರ ವಿಷ್ಣುಪ್ರತಿಮೆಯನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಿರಿ.
 3. ಬಟ್ಟಲಿನಲ್ಲಿ ಶುದ್ಧವಾದ ನೀರನ್ನು ತುಂಬಿಸಿ, ಅದರಲ್ಲಿ ಒಂದಿಷ್ಟು ಗಂಧವನ್ನು ಹಾಕಿ ಕಲಿಸಿ. ಇದು ಗಂಧೋದಕವೆನಿಸುತ್ತದೆ. ಈ ಬಟ್ಟಲನ್ನು ಒಂದು ಪುಟ್ಟ ಮಣೆಯ ಮೇಲೆ ಇಟ್ಟುಕೊಳ್ಳಿರಿ
 4. ಗಂಧೋದಕದಲ್ಲಿ ವಿಷ್ಣುಪ್ರತಿಮೆಯನ್ನಿಡಿ
 5. ಆಚಮನ ಮತ್ತು ಸಂಕಲ್ಪವನ್ನು ಮಾಡಿ.
 6. ಪ್ರತಿಮೆಯಲ್ಲಿ ವಿಷ್ಣುವನ್ನು ಆವಾಹಿಸಿ
 7. ಪಂಚೋಪಚಾರಗಳಿಂದ ಪೂಜಿಸಿ

ಬೆಳಗಿನಲ್ಲಿ ಮಾಡುವುದು ಇಷ್ಟೇ.. ಇನ್ನು ನೀವು ಆಫೀಸಿಗೆ ಹೋಗಬಹುದು

ಸಂಜೆ

 1. ಶುದ್ಧವಸ್ತ್ರರಾಗಿ ವಿಷ್ಣುಮೂರ್ತಿಯನ್ನು ತೆಗೆದು ಮೊದಲಿನ ಜಾಗದಲ್ಲಿ ಇರಿಸಬೇಕು.
 2. ಪಂಚೋಪಚಾರಗಳಿಂದ ಪೂಜಿಸಬೇಕು, ಪ್ರಾರ್ಥನೆಯನ್ನು ಸಲ್ಲಿಸಿ.
 3. ಆ ಗಂಧೋದಕದಿಂದ ಮನೆಯೆಲ್ಲವನ್ನೂ ಪ್ರೋಕ್ಷಿಸಿ, ತನಗೂ ಪ್ರೋಕ್ಷಣೆ ಮಾಡಿಕೊಳ್ಳಬೇಕು.
 4. ಗಮನಿಸಿ : ದ್ವಾದಶಿಯಂದು ಬೆಳಿಗ್ಗೆ ದೇವರನ್ನು ಹಗಲಿನ ಸಮಯದಲ್ಲಿ ನೀರಿನಲ್ಲಿ ಇಡಬಾರದು. ಸೂರ್ಯಾಸ್ತದ ನಂತರ ಕೆಲಕಾಲ ಗಂಧೋದಕದಲ್ಲಿಟ್ಟು ಪೂಜಿಸಿ, ಸ್ವಸ್ಥಾನದಲ್ಲಿ ಇರಿಸಬೇಕು.

ಎಫ್.ಎ.ಕ್ಯೂ

ಪಂಚೋಪಚಾರ ಪೂಜೆ ಎಂದರೆ ಏನು?
ಪೂಜೆಗಳಲ್ಲಿ ಹಲವು ವಿಧ. ಚತುರ್ವಿಂಶತಿ ಉಪಚಾರ, ಷೋಡಷೋಪಚಾರ,  ಪಂಚೋಪಚಾರ ಇತ್ಯಾದಿ ಆಚಾರ್ಯ ಮಧ್ವರು ತಂತ್ರಸಾರಸಂಗ್ರಹದಲ್ಲಿ ಮತ್ತು ಶ್ರೀಜಯಾರ್ಯರು ಪದ್ಯಮಾಲಾ ಗ್ರಂಥದಲ್ಲಿ ಒತ್ತುಕೊಟ್ಟಿರುವುದು ಷೋಡಷೋಪಚಾರಕ್ಕೆ. ಆದಾಗ್ಯೂ ಸಮಯವಿಲ್ಲದೇ ಇರುವ ಪ್ರಸಂಗದಲ್ಲಿ ಪಂಚೋಪಚಾರ (ಐದು ಉಪಚಾರಗಳಿಂದ) ಪೂಜಿಸುವ ಸಂಪ್ರದಾಯವೂ ಗ್ರಾಹ್ಯವಾಗಿದೆ.

ದೇವರಿಗೆ ಗಂಧ, ಪುಷ್ಪ, ಧೂಪ, ದೀಪ ಮತ್ತು ನೈವೇದ್ಯಗಳಿಂದ ಉಪಚರಿಸುವುದೇ ಪಂಚೋಪಚಾರ ಪೂಜೆ. ಈ ಪಂಚ ಉಪಚಾರದ ದ್ರವ್ಯಗಳು ಪಂಚಭೂತಗಳ ಪ್ರತಿನಿಧಿಗಳು ಎಂಬುವುದನ್ನು ನಾವು ಅನುಸಂಧಾನ ಮಾಡಬೇಕು.

ಸಂಕಲ್ಪವನ್ನು ಏನೆಂದು ಮಾಡಬೇಕು?
ದೇಶ ಕಾಲಗಳನ್ನು ಸ್ಮರಿಸಿ, ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶ್ರೀರಾಘವೇಂದ್ರತೀರ್ಥ ಗುರ್ವಂತರ್ಗತ ಭಾರತೀರಮಣಮುಖ್ಯಪ್ರಾಣಾಂತರ್ಗತ ಪದ್ಮೀನೀಸಮೇತ ಶ್ರೀವಿಷ್ಣುಪ್ರೇರಣಯಾ ವಿಷ್ಣುಪ್ರೀತ್ಯರ್ಥಂ ಜಲಸ್ಥವಿಷ್ಣುಪೂಜಾಂ ಕರಿಷ್ಯೇ | ಎಂದು ಸಂಕಲ್ಪವನ್ನು ಮಾಡಬೇಕು. ರಾತ್ರಿ ಪೂಜೆಯ ನಂತರ ಇದೇ ರೀತಿಯಾಗಿ ಕೃಷ್ಣಾರ್ಪಣಮಸ್ತು ಎಂದು ಹೇಳಬೇಕು.

ನಮ್ಮ ಮನೆಯಲ್ಲಿ ನೀವು ಹೇಳಿರುವ ಎಲ್ಲ ವಿಗ್ರಹಗಳೂ ದೊಡ್ಡ ದೇವರ ಪೆಟ್ಟಿಗೆಯಲ್ಲಿ ಇವೆ. ಹೊರತೆಗೆಯಲು ಕಷ್ಟ. ಆದರೆ ಆಮೆಯ ಒಂದು ಮೂರ್ತಿ ಇದೆ. ಅದನ್ನು ಬಳಸಬಹುದೇ?
ಕೆಲವರ ಮನೆಯಲ್ಲಿ ಪ್ರಾಚೀನ ವಿಗ್ರಹಗಳನ್ನು ವಿಶೇಷದಿನಗಳಲ್ಲಿ ಮಾತ್ರ ತೆಗೆಯುತ್ತಾರೆ. ಹೊರಗೆ ಇಟ್ಟುಕೊಳ್ಳಲಿಕ್ಕೆ ಬೇರೆ ವಿಗ್ರಹಗಳಿರುವುದಿಲ್ಲ.  ಆದರೆ ಇತ್ತೀಚೆಗೆ ಒಂದು ಪುಟಾಣಿ ಆಮೆಯ ವಿಗ್ರಹವನ್ನು ತಾಮ್ರದ ಪುಟ್ಟ ತಟ್ಟೆಯಲ್ಲಿಟ್ಟು ನೀರು ಹಾಕಿ, ದೇವರ ಕಟ್ಟೆಯ ಮೇಲೆ ಇಡುವುದನ್ನು ನೋಡುತ್ತೇವೆ. ವಿಚಾರಿಸಿ ನೋಡಿದಾಗ ಇದು ಚೈನಾ ವಾಸ್ತು ಎಂಬ ಉತ್ತರ ಬರುತ್ತದೆ. ಎಂತಹ ಚೋದ್ಯ ನೋಡಿ! ಸರ್ವೋತ್ತಮನಾದ ಸನಾತನದೇವನ ಆರಾಧಕರು ನಾವು. ಅವನನ್ನು ಕೂರ್ಮಸ್ವರೂಪಿಯಾಗಿ ಪೂಜಿಸದೆ, ಆಮೆಯನ್ನು ತಿನ್ನುವರ ಮಾತಿನಂತೆ ನಡೆದುಕೊಳ್ಳುತ್ತೇವೆ! ವಾಸ್ತು ಉದ್ದಾರಕ್ಕಾಗಿ ಹಿಂದೆ ಮುಂದೆ ತಿಳಿಯದೆ ಆಮೆಯ ಗೊಂಬೆಯನ್ನೇಕೆ ಪೂಜಿಸಬೇಕು? ಶುದ್ಧ ತಾಮ್ರದ ಆ ಆಮೆಯ ಮೂರ್ತಿಯಲ್ಲೇ ಕೂರ್ಮರಾಯನನ್ನು ಆವಾಹಿಸಿ, ಅವನನ್ನೇ ಗಂಧೋದಕದಲ್ಲಿಟ್ಟು ಪೂಜಿಸಿ. ಪೂಜಿಸುವಾಗ ನಮ್ಮ ಕುಲಗುರುರಾಯನಾದ ಮಾರುತಿಯು ಹೇಳಿಕೊಟ್ಟಿರುವ ದ್ವಾದಶಸ್ತೋತ್ರವನ್ನು ಪಠಿಸಿ. … ದೇವಕಿ ನಂದನ ನಂದ ಕುಮಾರ…. (ದ್ವಾ.ಸ್ತೋ 6ನೇ ಅಧ್ಯಾಯ) ಎಂದು. ಖಂಡಿತವಾಗಿಯೂ ನಿಮ್ಮ ಪೂಜೆಯನ್ನು ಪರಿಗಣಿಸುತ್ತಾನೆ, ದೇವರು.

ವಿಶೇಷವೇನೆಂದರೆ, ಜಲಸ್ಥವಿಷ್ಣುಪೂಜೆಯು ಪ್ರಾರಂಭವಾಗುವುದು ಕೂರ್ಮಜಯಂತಿಯಂದೇ! ಒಳ್ಳೆಯ ಅವಕಾಶವಲ್ಲವೇ!

ಮುನ್ನಡೆಯಿರಿ! ಪೂಜೆಯ ಸಿದ್ಧತೆ ಮಾಡಿಕೊಳ್ಳಿರಿ.

ಈ ಪೂಜೆಯನ್ನು ಮಡಿಯಿಂದ ಮಾಡಬೇಕೇ?
ಈ ಪೂಜೆ ಮಾತ್ರವಲ್ಲ. ಎಲ್ಲ ಪೂಜೆಯನ್ನೂ ಮಡಿಯಿಂದಲೇ ಮಾಡಬೇಕು. ಬೆಳಗಿನಲ್ಲಿ ಪೂಜಿಸುವಾಗ ಮಡಿಯಿಂದಲೇ ಇರುತ್ತೇವೆ ಆದ ಕಾರಣ ಪ್ರತ್ಯೇಕವಾದ ಮಡಿಯ ಅಗತ್ಯವಿಲ್ಲ. ಸಂಜೆ ಮತ್ತೊಮ್ಮೆ ಸ್ನಾನ ಮಾಡಿಯೇ ಪೂಜೆ ಮಾಡುತ್ತೇನೆಂದರೆ ಉತ್ತಮ ಪಕ್ಷ. ಅನುಕೂಲವಿಲ್ಲದ ಪಕ್ಷದಲ್ಲಿ ಧಾವಳಿಯನ್ನುಟ್ಟುಕೊಂಡಾದರೂ ಮಾಡಿ. ಬೆಳಗ್ಗೆ ಸಂಜೆ ಎರಡೂ ಸಮಯದಲ್ಲಿ ಮಡಿಸ್ನಾನಕ್ಕೆ ಅನುಕೂಲವಿಲ್ಲದ ಪಕ್ಷದಲ್ಲಿ ಸ್ನಾನವನ್ನು ಮಾಡಿ, ನಿಮ್ಮಲ್ಲಿರುವ ಅತ್ಯಂತ ಶುದ್ಧವಾದ ವಸ್ತ್ರವನ್ನು ಧರಿಸಿಯಾದರೂ ಪೂಜೆ ಸಲ್ಲಿಸಿ.

ಪೂಜೆಯು ಪ್ರಾರಂಭವಾಗುವ ಮತ್ತು ಮುಕ್ತಾಯದ ದಿನಗಳು ಯಾವುವು?
ಪೂಜೆಯು ವೈಶಾಖದ ಪೂರ್ಣಿಮೆಯಿಂದ ಪ್ರಾರಂಭಿಸಿ ಜ್ಯೇಷ್ಠದ ಪೂರ್ಣಿಮೆಯವರೆಗೂ ಇರುತ್ತದೆ. ಈ ವರ್ಷ 29.04.2018 ರಿಂದ 28.06.2018ರ ವರೆಗೆ ಮಾಡಬೇಕು. ಸಾಮಾನ್ಯವಾಗಿ ಇದು ಒಂದು ತಿಂಗಳ ಕಾಲವೇ ಇರುತ್ತದೆ. ಈ ಬಾರಿ ಅಧಿಕಮಾಸವು ಜ್ಯೇಷ್ಠದಲ್ಲಿ ಇರುವುದರಿಂದ ಒಂದು ತಿಂಗಳು ಹೆಚ್ಚುವರಿಯಾಗಿ ಪೂಜಿಸುವ ಸದವಕಾಶ ಇದೆ. ಪ್ರಿವಿಲೇಜ್! ಅಲ್ಲವೇ

ಪೂಜೆಯನ್ನು ಪ್ರಾರಂಭಿಸಿದ ನಂತರ ಮಧ್ಯದಲ್ಲಿ ಒಂದಿಷ್ಟು ದಿನ ಪರವೂರಿಗೆ ಹೋಗುವ ಸಂದರ್ಭ ಇದೆ. ಆಗ ಏನು ಮಾಡಬೇಕು?
ಎಲ್ಲಿ ಹೋದರೂ ಈ ಪೂಜೆಯನ್ನು ಮಾಡುವುದು ಮಾಡುವುದು ಅಸಾಧ್ಯವೇನೂ ಅಲ್ಲ. ಅತ್ಯಂತ ಸುಲಭವಿರುವುದರಿಂದ ಅನುಕೂಲಗಳನ್ನು ಕಲ್ಪಿಸಿಕೊಂಡು ಪೂಜೆ ಮಾಡಬಹುದು. ಆದರೆ ಬಹಳ ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿದ್ದರೆ ಊರಿಗೆ ಹೊರಡುವ ಮುನ್ನ ಮನೆಯಲ್ಲಿರುವ ಬೇರೆ ಸದಸ್ಯರಿಗೆ ಪೂಜೆಯನ್ನು ಮುಂದುವರೆಸಲು ಹೇಳುವುದು ಉತ್ತಮ. ಮನೆಯಲ್ಲಿ ಪೂಜೆ ಮಾಡುವರು ಯಾರೂ ಇಲ್ಲದಿದ್ದರೆ, ನೀವು ಊರಿನಿಂದ ಬಂದ ನಂತರ ಮುಂದುವರೆಸುವುದು ಉತ್ತಮ ಪಕ್ಷ.

ಪೂಜೆಯು ಸಂಪೂರ್ಣವಾದ ನಂತರ ಏನು ಮಾಡಬೇಕು?
ಜ್ಯೇಷ್ಠ ಮಾಸದ ಪೂರ್ಣಿಮೆಯಂದು ಪೂಜೆಯನ್ನು ಮುಗಿಸಿ, ಶ್ರೀಕೃಷ್ಣಾರ್ಪಣ ಹೇಳುವ ಸಂದರ್ಭದಲ್ಲಿ ಬ್ರಾಹ್ಮಣ ಸಂತರ್ಪಣೆ ಮಾಡುವುದು ಉತ್ತಮ ಪಕ್ಷ. ಅದಾಗದಿದ್ದರೆ ರಾಯರ ಮಠದಲ್ಲಿ ಅನ್ನದಾನಕ್ಕೆಂದು ಕಾಣಿಕೆಯನ್ನು ಸಲ್ಲಿಸಬಹುದು. ಸತ್ಪಾತ್ರರಾದ ಬ್ರಾಹ್ಮಣರು (ಉದಾ:- ಈ ಲೇಖನವನ್ನು ಬರೆದ ದೊಡ್ಡಮನುಷ್ಯರು 😉 ) ಊಟ ಮಾಡಿದರೆ ಹರಿಯು ಒಲಿವ.

ಸಹೃದಯರೇ ಈ ಲೇಖನವನ್ನು ಈಗಾಗಲೇ ಪ್ರಕಟಿಸಿ ನಾಲ್ಕಾರು ದಿನಗಳಾದರೂ ಆಗಿರಬೇಕಿತ್ತು. ಆಗ ನಿಮಗೆಲ್ಲ ನಾಳೆಯಿಂದಲೇ ಪೂಜೆ ಮಾಡುವ ಅನುಕೂಲವಾಗುತ್ತಿತ್ತು. ಆದರೆ ನನಗೆ ಸಮಯದ ತೊಂದರೆಯಿತ್ತು. ಪೂಜೆಯನ್ನು ಮಾಡುವ ಮನಸ್ಸಿದ್ದವರು ನಾಳೆಯಿಂದ ಆಗದಿದ್ದರೆ ನಾಡಿದ್ದಿನಿಂದಾದರೂ ಮಾಡಲಿ ಎನ್ನುವ ಒಂದು ಉದ್ದೇಶದಿಂದ ಈಗ ಪ್ರಕಟಿಸುತ್ತಿದ್ದೇನೆ. ಶ್ರೀರಾಯರ ಅಂತರ್ಯಾಮಿಯಾದ ಮಧ್ವರ ಹೃದಯವಾಸಿ ನಮ್ಮ ತುಂಟ ಕೃಷ್ಣನು ನಿಮ್ಮ ಪೂಜೆಯನ್ನು ಸ್ವೀಕರಿಸಲಿ.

ಜಲನಾರಾಯಣನ ಚಿತ್ರದ ಕೃಪೆ : ವಿಕಿಪಿಡಿಯಾ

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.