ರಥಬೀದಿಯ ಮಹಾರಥ

ರಥಬೀದಿಯನ್ನು ಸುತ್ತುತ್ತಾ…

ಉಡುಪಿಗೆ ಬಂದಾಗ ದರ್ಶನ ಬೇಗ ಮುಗಿದು ಊಟ ತಿಂಡಿ ಎಲ್ಲ ಮುಗಿದ ಮೇಲೆ, ಹಾಗೆಯೇ ಒಂದು ಸುತ್ತು ನಿಧಾನವಾಗಿ ರಥಬೀದಿಯಲ್ಲಿ ಸುತ್ತಾಡುತ್ತೀರಿ. ಒಂದೊಂದಾಗಿಯೇ ಮಠ ಮಂದಿರಗಳ ಫಲಕಗಳನ್ನು ನೋಡುತ್ತಾ ಕಾ…ಣಿ…ಯೂ…ರು ಮಠ, ಓಹೋ ಇಲ್ಲಿದೆ ಏನು ಸೋದೆ ಮಠ? ಎಂದು ನಿಮ್ಮೊಳಗೆಯೇ ಮಾತನಾಡುತ್ತಾ, ಮುಂದುವರೆದು ಪುತ್ತಿಗೆ ಮಠ, ಭಂಡಾರಕೇರಿ ಮಠಗಳನ್ನು ನೋಡಿದ ನಂತರ ಮುಳಬಾಗಿಲು ಮಠದ ಬ್ರಾಂಚು ಕೂಡ ಉಂಟೇನು ಎಂದು ವಿವಿಧ ಉದ್ಗಾರಗಳನ್ನು ತೆಗೆಯುತ್ತಾ, ತರಕಾರಿ ಅಂಗಡಿಯಾಗಿ ಹೋಗಿರುವ ವ್ಯಾಸರಾಜ ಮಠದ ಬಗ್ಗೆ ವ್ಯಾಕುಲಗೊಂಡು ಹಾಗೆಯೇ ಮುಂದೆ ಬರುತ್ತೀರಿ ತಾನೆ? ಅಲ್ಲಿಂದ ಹಾಗೆಯೇ ಎರಡು ಹೆಜ್ಜೆ ಮುಂದೆ ಇಟ್ಟಾಗ ಅದಮಾರು ಮಠ ಕಾಣಿಸುವುದು.

ಈ ಅದಮಾರು ಮಠದ ಒಳಗೆ ಹೆಜ್ಜೆ ಇಟ್ಟರೆ ಪಡಸಾಲೆಯಲ್ಲಿ ಒಂದು ದಿವ್ಯಕಳೆಯಿರುವ ಮಹಾಪುರುಷರ ಫೋಟೋ ಕಾಣಿಸುವುದು. ಆನೆಯ ದಂತದ ಅಂಡಾಕಾರದ ಕಟ್ಟಿನೊಳಗೆ ಈ ಭಾವಚಿತ್ರವನ್ನು ಕೂರಿಸಿದ್ದಾರೆ. ಇವರು ಶ್ರೀವಿಬುಧಪ್ರಿಯತೀರ್ಥ ಮಹಾಸ್ವಾಮಿಗಳು. ದೊಡ್ಡ ಜ್ಞಾನಿಗಳು ಹಾಗು ಮಹಾಧೈರ್ಯಶಾಲಿಗಳು. ಅನೇಕರು ಇದನ್ನು ನೋಡಿರಬಹುದು. ಆದರೆ ಈ ಭಾವಚಿತ್ರದ ಹೃದಯಂಗಮ ಹಿನ್ನೆಲೆಯನ್ನು ತಿಳಿದವರು ಕಡಿಮೆ.

ಉಡುಪಿಯ ಹಿರಿಯರನ್ನು ಕೇಳಿದರೆ ಹೇಳುವ ರೀತಿ ಇದು. ಶ್ರೀಪಾದರ ಭವ್ಯವ್ಯಕ್ತಿತ್ವ ಹಾಗು ತಪಸ್ಸಿನಿಂದ ದೃಢಗೊಂಡ ಹೃದಯಶಕ್ತಿ ಇವೆರಡಕ್ಕೂ ಭಯಪಡದವರೇ ಇದ್ದಿಲ್ಲ. ಇವರು ಮಠದ ಹೊರಗೆ ತಮ್ಮ ಪಾದುಕೆಗಳನ್ನು ಧರಿಸಿಕೊಂಡು ಬಂದರೆ ಆ ನಡೆಯುವ ಲಯದ ಮೇಲೆಯೇ ಇವರು ಬರುತ್ತಿರುವ ವಿಷಯ ತಿಳಿಯುತ್ತಿತ್ತು. ಅದನ್ನು ಗಮನಿಸಿದರೆ ಹೊರಗಿನ ಜನ ಇರಲಿ, ಆಗಿನ ಇನ್ನಿತರ ಯತಿಗಳೂ ಕೂಡ ಗೌರವದಿಂದ ತಮ್ಮ ಧ್ವನಿಯನ್ನು ತಗ್ಗಿಸಿ ಮಾತನಾಡುತ್ತಿದ್ದರು. ಮಠಗಳ ಜೊತೆಗೆ ಯಾರೂ ಅನ್ಯಾಯ ಹಾಗು ಅಕ್ರಮವೆಸಗುವಂತೆ ಇದ್ದೇ ಇಲ್ಲ. ಅಕಸ್ಮಾತ್ತಾಗಿ ಕೆಟ್ಟವಿಚಾರದಿಂದ ಯಾರೇ ಆಗಲಿ ಮಠದತ್ತ ನೋಡಿದ್ದೇ ಆದಲ್ಲಿ ಅವರು ತ್ರಾಹಿ ತ್ರಾಹಿ ಅನ್ನುವಂತೆ ಮಾಡುತ್ತಿದ್ದರು. ತಮ್ಮ ಸಾತ್ವಿಕ ತಪಸ್ಸಿನಿಂದಲೇ ಅವರಿಗೆ ಈ ಒಂದು ಮಹಾವರ್ಚಸ್ಸು ಬಂದಿದ್ದು. ವಾಮಾಚಾರಿಗಳು ಕೂಡ ಶ್ರೀಗಳವರ ತಪೋಬಲದ ಎದುರು ಶರಣಾಗತರಾಗಿದ್ದು ಉಂಟು.

ಶ್ರೀವಿಬುಧಪ್ರಿಯತೀರ್ಥರು ಅದಮಾರು ಮಠದ 30ನೆಯ ಯತಿಗಳು. ನಮ್ಮ ಮಠದಲ್ಲಿ ಶ್ರೀಸುಶೀಲೇಂದ್ರತೀರ್ಥರು ಇವರ ಸಮಕಾಲೀನರು. ಇವರು ಕೂಡ ಹುಲಿ ಎಂದು ಹೆಸರಾದವರು. ಒಮ್ಮೆ ಉಡುಪಿಯ ದರ್ಶನಕ್ಕೆಂದು ಬಂದಿದ್ದರು. ಈ ಭೇಟಿಗೆ ನಿರ್ದಿಷ್ಟವಾದ ಉದ್ದೇಶವಿತ್ತೋ ಇಲ್ಲವೋ ಅನ್ನುವುದು ಬೇರೆಯ ವಿಷಯ. ಆದರೆ ಈ ಇಬ್ಬರು ಮಹಾ ಚೇತನರು ಸೇರಿ ಇತಿಹಾಸವನ್ನು ಪುನಃ ಎತ್ತಿ ಹಿಡಿದು ನಮಗೆಲ್ಲ ಉಪಕಾರವನ್ನು ಮಾಡಿದರು. ನೀಚರ ಮುಖ ಕಂದುವಂತೆ ಮಾಡಿದರು.

ಏನದು ಇತಿಹಾಸ?

ಶ್ರೀವಿಜಯೀಂದ್ರತೀರ್ಥರೂ ಹಾಗು ಶ್ರೀವಾದಿರಾಜತೀರ್ಥರು ಸಮಕಾಲೀನರಾದ ಇಬ್ಬರು ಮಹಿಮಾವಂತರು. ಶ್ರೀವಿಜಯೀಂದ್ರತೀರ್ಥರು ಉಡುಪಿಯ ದರ್ಶನಕ್ಕೆಂದು ಬಂದಾಗ ಅವರ ಯತಿಸ್ನೇಹಿತರಾದ ಶ್ರೀವಾದಿರಾಜತೀರ್ಥರು ತಮ್ಮ ಸಂಮಿಲನದ ಸ್ಮರಣಿಕೆಯಾಗಿ ಉಡುಗೊರೆಯ ರೂಪದಲ್ಲಿ ಮಠ ನಿರ್ಮಾಣಕ್ಕೆಂದು ಸ್ಥಳವನ್ನು ಕೊಟ್ಟರು. ಅದೂ ಶ್ರೀಕೃಷ್ಣರಾಯನ ಎದುರಿನಲ್ಲಿಯೇ. ಈಗ ಕನಕನಕಿಂಡಿ ಎಂದೇ ಪ್ರಸಿದ್ಧವಾಗಿರುವ ಅಂದಿನ ಕೃಷ್ಣಮಠದ ಕಿಟಕಿಯ ಎದುರಿನ ಭಾಗಕ್ಕೆ ಇದೆ ಆ ಸ್ಥಳ. ಅವರು ಕೊಟ್ಟಿದ್ದು ಕೇವಲ ಖಾಲಿ ಸ್ಥಳವೂ ಆಗಿರಬಹುದು ಅಥವಾ ಸುಸಜ್ಜಿತವಾದ ಮಠವೇ ಆಗಿರಬಹುದು. ಏನೇ ಇರಲಿ ಶ್ರೀಪದ್ಮನಾಭತೀರ್ಥರ ಪರಂಪರೆಗೆ ಸ್ಥಳವು ಪ್ರಾಪ್ತವಾಗಿದ್ದು ಹೀಗೆ ಅಧಿಕೃತವಾಗಿಯೇ. ಸ್ಥಳದಾನ ಮಾಡಿದವರ ಸ್ಥಳವನ್ನೇ ಇಂಚು ಇಂಚಾಗಿ ಗುಳುಂ ಮಾಡುವ ಅಸಹ್ಯ ಕೆಲಸವನ್ನೆಂದೂ ಮಾಡದೇ ಶ್ರೀವಿಜಯೀಂದ್ರಗುರುಸಾರ್ವಭೌಮರ ಪರಂಪರೆಯು ತನ್ನ ಹಿರಿಮೆಯನ್ನು ನೂರಾರು ವರ್ಷಗಳ ಕಾಲ ಕಾಪಾಡಿಕೊಂಡು ಬಂದಿದೆ.

ಕಾರಣಾಂತರಗಳಿಂದ ಮಠವು ಈ ಸ್ಥಳದ ಬಹಳಷ್ಟನ್ನು ಕಾಲಾಂತರದಲ್ಲಿ ಕಳೆದುಕೊಂಡಿದೆ. ದುರ್ದೈವದಿಂದ ಕೆಲ ಸ್ಥಳೀಯರಿಂದಲೂ ಮತ್ತು ಘಟ್ಟದ ಮೇಲಿನ ಕೆಲ ಕುತಂತ್ರಿಗಳಿಂದಾಗಿಯೂ ಸಂಪೂರ್ಣ ಕೈತಪ್ಪಿ ಹೋಗುವ ಅವಸ್ಥೆಗೆ ಬಂದಿತ್ತು.

Sri Susheelendra Teertharu
Sri Susheelendra Teertharu

ಇಂತಹ ಸಂದಿಗ್ಧಸಮಯದಲ್ಲಿಯೇ ಸುಶೀಲೇಂದ್ರತೀರ್ಥರು ಉಡುಪಿಯ ಸಂಚಾರಕ್ಕೆ ಬಂದಿದ್ದು. ಆಗ ಅದಮಾರು ಮಠದಲ್ಲಿ ವಿಬುಧಪ್ರಿಯರ ಕಾಲ. ಇಬ್ಬರೂ ಪರಿಸ್ಥಿತಿಯನ್ನು ಚೆನ್ನಾಗಿ ಅವಲೋಕಿಸಿ, ಇರುವ ಮಠದಲ್ಲಿ ಶ್ರೀರಾಘವೇಂದ್ರತೀರ್ಥ ಮಹಾಪ್ರಭುಗಳ ಮೃತ್ತಿಕಾವೃಂದಾವನವನ್ನು ಪ್ರತಿಷ್ಠಾಪಿಸುವ ತೀರ್ಮಾನವನ್ನು ಕೈಗೊಂಡರು. ಆದರೆ ಸಮಯಾವಕಾಶ ಬಹಳ ಕಡಿಮೆ ಇತ್ತು. ವೃಂದಾವನದ ನಿರ್ಮಾಣ ಅಷ್ಟು ಶೀಘ್ರವಾಗಿ ಆಗುವುದಲ್ಲ. ಆಗ ವಿಬುಧಪ್ರಿಯರೇ ತಮ್ಮ ಮಠದಲ್ಲಿದ್ದ ಶ್ರೀತುಲಸಿಯ ವೃಂದಾವನವನ್ನು ಆ ಉದ್ದೇಶಕ್ಕಾಗಿ ಬಳಸುವಂತೆ ಸಲಹೆ ಇತ್ತರು. ಸರಿ ಇದಕ್ಕಿಂತಲೂ ಪವಿತ್ರವಾದ ಶಿಲೆ ದೊರಕೀತೇ? ಸಮಯ ವ್ಯರ್ಥ ಮಾಡದೆ ಶಾಸ್ತ್ರೋಕ್ತವಾದ ಸಿದ್ಧತೆ ಮಾಡಿ ಎರಡೇ ದಿನಗಳಲ್ಲಿ ಶ್ರೀಸುಶೀಲೇಂದ್ರತೀರ್ಥರು ಶ್ರೀಗುರುರಾಜರ ಪ್ರತಿಷ್ಠಾಪನೆಯನ್ನು ನೆರವೇರಿಸಿಯೇ ಬಿಟ್ಟರು. ಇದಕ್ಕೆ ಯಾವುದೇ ರೀತಿಯಾದ ಕಿರುಕುಳ ಬಾರದಂತೆ ಬೆಂಬಲವಾಗಿ ನಿಂತು ಶ್ರೀರಾಯರ ಸೇವೆಯನ್ನು ಮಾಡಿದ್ದು ಶ್ರೀವಿಬುಧಪ್ರಿಯತೀರ್ಥರು. ಅವರ ತಾಕತ್ತಿನ ಅರಿವಿದ್ದ ಯಾರೂ ಸಹ ಈ ಕಾರ್ಯಕ್ರಮಕ್ಕೆ ಅಡ್ಡಿ ಮಾಡುವ ಸಾಹಸವನ್ನು ಮಾಡಲಿಲ್ಲ.

ಉಡುಪಿಯಲ್ಲಿ ಶ್ರೀವಿಜಯೀಂದ್ರರಿಗೆ ಬಳುವಳಿಯಾಗಿ ಬಂದಿದ್ದ ಸ್ಥಳದ ಉಸ್ತುವಾರಿಗಾಗಿ ಶ್ರೀರಾಯರು ಬಂದು ನಿಂತಿದ್ದು ಹೀಗೆ. ಇದೇ ಇಂದಿಗೂ ನಾವೆಲ್ಲ ದರ್ಶನ ಪಡೆದು ಸಂತಸಗೊಳ್ಳುವ ಉಡುಪಿಯ ಶ್ರೀರಾಯರ ಮಠ. ಐತಿಹಾಸಿಕವಾದ ಈ ಘಟನೆಗೆ ಕಾರಣೀಭೂತರು ಶ್ರೀವಿಬುಧಪ್ರಿಯರು ಹಾಗು ಶ್ರೀಸುಶೀಲೇಂದ್ರರು.

Sri Raghavendra Swamy Matha - Udupi

ಪಟ್ಟದ ಆನೆ

ಶ್ರೀವಿಬುಧಪ್ರಿಯರು ಅಪಾರವಾದ ಕರುಣೆ ಉಳ್ಳವರು. ಮಠದಲ್ಲಿ ಯಥೇಚ್ಛವಾಗಿ ಸಾಕಿದ ಹಸುಗಳಲ್ಲದೇ ಸ್ವಂತ ಮುತುವರ್ಜಿಯಿಂದ ಕುದುರೆ ಹಾಗು ಆನೆಯನ್ನೂ ಸಾಕಿದ್ದರೆಂದು ತಿಳಿದು ಬರುತ್ತದೆ. ಈ ಆನೆಯಲ್ಲಿ ಅವರಿಗೆ ಅಪಾರವಾದ ಮಮತೆ ಇತ್ತು. ಆನೆಗೂ ಸಹ ಇವರಲ್ಲಿ ಅತಿ ಹೆಚ್ಚಿನ ಪ್ರೀತಿಯಿತ್ತು. ಶ್ರೀಗಳವರಿಗೆ ತೊಂದರೆಯನ್ನು ಮಾಡಿದ ಕೆಲ ದುಷ್ಟ ಜನರ ವ್ಯವಹಾರಗಳನ್ನು ಯಾರೂ ಹೇಳದಿದ್ದರೂ ತಾನಾಗಿಯೇ ಹೋಗಿ ಧ್ವಂಸ ಮಾಡಿ ಬಂದಿತ್ತು ಈ ಆನೆ. ಹಳೆಯ ಜನ ಇದನ್ನುಇಂದಿಗೂ ಶ್ರೀಗಳವರ ಮಹಿಮೆ ಎಂದೇ ಪರಿಗಣಿಸುತ್ತಾರೆ.

ಶ್ರೀವಿಬುಧಪ್ರಿಯತೀರ್ಥರು ವೃಂದಾವನ ಪ್ರವೇಶ ಮಾಡಿದ್ದು ಉಡುಪಿಯಿಂದ ಸಾವಿರ ಕಿಲೋಮೀಟರು ದೂರವಿರುವ ಘಟಿಕಾಚಲದಲ್ಲಿ. ಅಲ್ಲಿ ಅವರು ತಮ್ಮ ಇಹಶರೀರವನ್ನು ತ್ಯಜಿಸಿದ ದಿನವೇ ಇಲ್ಲಿ ಉಡುಪಿಯಲ್ಲಿ ಈ ಭವ್ಯ ಶರೀರದ  ಆನೆ ಧಾವಿಸಿ ಶ್ರೀಮಠದ ಮುಂದೆ ಬಂದು ನಿಂತು ತನ್ನ ಅಶ್ರುವಿನಿಂದ ಅವರಿಗೆ ಅಂತಿಮ ನಮನ ಸಲ್ಲಿಸಿ, ಜೋರಾಗಿ ಘೀಳಿಟ್ಟು ತಕ್ಷಣವೇ ತನ್ನ ಪ್ರಾಣವನ್ನು ಕೂಡ ತ್ಯಜಿಸಿಬಿಟ್ಟಿತು. ಆ ಹಸ್ತಿಯ ಅಂತ್ಯಸಂಸ್ಕಾರಾನಂತರ ಅದರ ದಂತಗಳನ್ನು ಜೋಪಾನವಾಗಿ ತೆಗೆದು, ಅದರ ನೆಚ್ಚಿನ ಒಡೆಯರಾದ ಶ್ರೀವಿಬುಧಪ್ರಿಯ ಶ್ರೀಪಾದರ ಭಾವಚಿತ್ರಕ್ಕೆ ಅಲಂಕರಿಸಿ ಅದಮಾರು ಮಠದಲ್ಲಿಯೇ ಇರಿಸಿದ್ದಾರೆ. ಇದೇ ಭಾವಚಿತ್ರವನ್ನೇ ನಾವು ನೀವೆಲ್ಲರು ಇಂದಿಗೂ ನೋಡುತ್ತಿರುವುದು.

vibudhapriyaru1

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.