ವನದೊಳಾಯ್ದು ವರಾಹನತ್ತ

ಇದ್ದಕ್ಕಿದ್ದ ಹಾಗೆ ಹರಿಯ ಕರೆಯು ಬಂದಿದ್ದು ನಿಜಕ್ಕೂ ಆಶ್ಚರ್ಯ. ಹತ್ತು ವರ್ಷಗಳಿಂದ ಇದ್ದ ಬಯಕೆಯು ಅನಿರೀಕ್ಷಿತವಾಗಿ ಮೊನ್ನೆ ಮೊನ್ನೆ ಪೂರೈಸಿತು.

ಹೌದು. ನಾನು ಈ ಪುರುಷೋತ್ತಮನನ್ನು ನೋಡುವ ಕನಸು ಕಾಣಲು ಶುರುಮಾಡಿದ್ದು ಸುಮಾರು ಹತ್ತು ವರ್ಷಗಳ ಹಿಂದೆ. ಇಷ್ಟು ವರ್ಷಗಳಿಂದ ಸುಮ್ಮನೇ ಇದ್ದವನು ಮೊನ್ನೆ ಇದ್ದಕ್ಕಿದ್ದ ಹಾಗೆ ಬಾ ಎಂದು ಹೇಳಿಬಿಟ್ಟ! ಅನುಕೂಲವನ್ನೂ ಅವನೇ ಒದಗಿಸಿಕೊಟ್ಟ. ನಾನು ಹಿಂದೆ ಇದ್ದ ಊರಿನಿಂದಲೇ ದೇವರು ತನ್ನನ್ನು ನೋಡಲು ಕರೆಸಿಕೊಳ್ಳುತ್ತಿದ್ದನೇನೋ. ಆದರೆ ಅಷ್ಟು ಉದ್ದದ ಪಯಣದ ನೆನಪು ಈಗ ಇರುವಷ್ಟು ಹಸಿರಾಆಆಆಅಗಿ ಇರುತ್ತಿರಲಿಲ್ಲ.ಇದು ನಿಜ.

ಮೊನ್ನೆ ನಾಲ್ಕಾರು ದಿನಗಳ ಕೆಳಗೆ ಗೋವೆಯಿಂದ ಸುಮಾರು 120 ಕಿಲೋಮೀಟರು ದೂರ ಇರುವ ಹಲಸಿ ಎನ್ನುವ ಪುಟ್ಟ ಗ್ರಾಮದಲ್ಲಿ ನೆಲೆಸಿರುವ ಭೂವರಾಹ ದೇವರ ದರ್ಶನದ ಲಾಭ ಆಯಿತು. ಗೋವೆಯಿಂದ ಹಲಸಿಯವರೆಗೂ ದಟ್ಟಕಾಡಿನ ಮಧ್ಯದಲ್ಲಿ ಕೃಷ್ಣಮೇಘವನ್ನು ಓಡಿಸಿಕೊಂಡು ಹೋಗಿ ಬಂದ ಒಂದು ರೋಚಕ ಅನುಭವವೂ ಹೃದಯದಲ್ಲಿ ರಿಜಿಸ್ಟರಾಯಿತು.

ಏನನ್ನು ವರ್ಣಿಸಲಿ? ಮಡಗಾಂವಿನ ಹೊರಗಿನ ತಿಳಿಹಸಿರು ಗದ್ದೆಗಳನ್ನೇ? ಗದ್ದೆಗಳ ಹಿಂದೆ ಕಾಣುವ ಸಿದ್ಧಪರ್ವತದ ಸೌಂದರ್ಯವನ್ನೇ? ಮೈಮೇಲೆ ಒಂದಿನಿತೂ ಕಸವಿಲ್ಲದೆ ಮಹಾ ಹೆಬ್ಬಾವಿನಂತೆ ಮಲಗಿರುವ ಕಪ್ಪು ಹೆದ್ದಾರಿಯನ್ನೇ? ಪುಟುಪುಟು ಎಂದು ಹಾರಾಡಿ ಮುದನೀಡುವ ಚಿಟ್ಟೆಗಳನ್ನೇ? ಕರುಗಳೊಂದಿಗೆ ನಿರ್ಭಯವಾಗಿ ಓಡಾಡುತ್ತಿರುವ ಹಸುಗಳ ಮಂದೆಯನ್ನೇ? ದಟ್ಟ ಹಸಿರ ಮಧ್ಯ ಇಣುಕಿ ನೋಡುವ ವಿಭಿನ್ನ ವರ್ಣದ ಹೂವುಗಳನ್ನೇ? ಅವುಗಳ ಹತ್ತಿರದಲ್ಲೇ ಇರುವ ಚಿಕ್ಕ ಚಿಕ್ಕ ಜಲಪಾತಗಳನ್ನೇ? ನನ್ನ ಪಯಣದ ಮುಖ್ಯಗುರಿಯಾದ ವರಾಹದೇವನನ್ನೇ? ಏನೆಂದು ವರ್ಣಿಸಲಿ? ನಾನು ಎಷ್ಟು ಬರೆದರೆ ಆದೀತು ಆ ಅನುಭವ ನಿಮಗೆ? ಹೋಗಿ ನೋಡಿ ಬಂದೇ ಅನುಭವಿಸಬೇಕು. ಅದೆಲ್ಲ ನಿಮ್ಮ ಹೃದಯದ ವ್ಯವಹಾರ.  ನಾನು ಇಲ್ಲಿ ಬರೆದಿರುವುದು ಸ್ವಲ್ಪವೇ ಸ್ವಲ್ಪ ಮಾಹಿತಿ ಮಾತ್ರ. (ಇದೇನಪ್ಪ ಪೀಠಿಕೆಯೇ ಇಷ್ಟುದ್ದ ಇದೆ ಬರೆದಿರೋದು ಸ್ವಲ್ಪ ಅಂತಿದಾನೆ ಅಂತ ನಿಮಗೆ ಅನಿಸಬಹುದು. ಆದರೆ ಹೇಳುತ್ತಿರುವುದು ನಿಜ. ನಾನು ಬರೆದಿರೋದು ಸ್ವಲ್ಪ ಮಾತ್ರ).

ಈ ಚೂರು ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ ಸಂತೋಷ.

ಮೂರೇ ಮೂರು ಹೆದ್ದಾರಿಗಳು ಗೋವೆಯನ್ನು ಹೊರಜಗತ್ತಿನೊಂದಿಗೆ  ಜೋಡಿಸುತ್ತವೆ. ಅದರಲ್ಲಿ ಒಂದು ಎನ್.ಹೆಚ್ 4 ಎ. ಈ ಹೆದ್ದಾರಿಯ ಮೂಲಕ ಪಯಣಿಸಿದರೆ ಸುಮಾರು 85 ಕಿಲೋಮೀಟರಿನ ನಂತರ ರಾಮನಗರ ಎನ್ನುವ ಪುಟ್ಟ ಊರು ಸಿಗುತ್ತದೆ. ಹುಬ್ಬಳ್ಳಿ ಹಾಗು ಬೆಳಗಾವಿಗೆ ಇಲ್ಲಿಂದ ಮಾರ್ಗಗಳು ಬೇರ್ಪಡುತ್ತವೆ. ರಾಷ್ಟ್ರೀಯ ಹೆದ್ದಾರಿಯು ಬೆಳಗಾವಿಗೆ ಹೋಗುತ್ತದೆ. ಹುಬ್ಬಳ್ಳಿಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಮುಂದುವರೆದರೆ ನಾಗರಗಾಳಿ ಎನ್ನವ ಮತ್ತೊಂದು ಹಳ್ಳಿಯು ಕಾಣಿಸುವುದು. ಇಲ್ಲಿಂದ 2 ಕಿ.ಮೀ ಮುಂದುವರೆದರೆ ಮುಖ್ಯರಸ್ತೆಯ ಎಡಭಾಗದಲ್ಲಿ ಹಲಸಿಗೆ ಹೋಗುವ ನಾಮಫಲಕವು ಕಾಣಿಸುವುದು. ಆ ದಾರಿಯಲ್ಲಿ ಕಾಡಿನ ಮಧ್ಯ ಸುಮಾರು ೧೦ ಕಿಲೋಮೀಟರು ಪಯಣಿಸಬೇಕು. ಕಾಡು ಮುಗಿದ ನಂತರ ಜನವಸತಿ ಇರುವ ಒಂದು ಪುಟ್ಟ ಕಾಲೋನಿಯು ಕಾಣಿಸುತ್ತದೆ. ಅದನ್ನು ದಾಟಿ ೪-೫ ಕಿಲೋಮೀಟರಿನ ನಂತರಹಲಸಿ ಗ್ರಾಮವು ಬರುತ್ತದೆ.

ಕಾಡಿನ ಸೌಂದರ್ಯವನ್ನು ಆಸ್ವಾದಿಸುತ್ತಾ  ಬಂದಿದ್ದರಿಂದ ಮನಸ್ಸಿಗೆ ಏನೂ ಆಯಾಸವಾಗಿದ್ದಿಲ್ಲ. ಆದರೆ ದೇಹವು “ಸ್ವಲ್ಪ ಇರು ಮಹಾರಾಯ!”  ಎನ್ನುತ್ತ ಸೊಂಟಕ್ಕೆ ವಿಶ್ರಾಂತಿಯನ್ನು ಕೇಳುತ್ತಿತ್ತು. ಗಾಡಿಯನ್ನು ನಿಧಾನವಾಗಿ ಓಡಿಸುತ್ತ ಊರೊಳಗೆ ಬಂದೆ. ಅರ್ಕಿಯಾಲಜಿಯವರು ಸಾಮಾನ್ಯವಾಗಿ ನಿಲ್ಲಿಸುವಂತಹುದೇ ಒಂದು ಫಲಕವು ಕಾಣಿಸಿತು. ಹಾಂ, ಇಲ್ಲಿಯೇ ಇರಬೇಕು ಎಂದುಕೊಂಡು ಮುಂದೆ ಹೋದೆ.  ಗಿಡಗಂಟಿಗಳ ಮಧ್ಯ ಒಂದು ಭವ್ಯವಾದ ಮಂದಿರವು ಕಾಣಿಸಿತು. ಆದರೆ ಅದು ನಾನು ಚಿತ್ರಗಳಲ್ಲಿ ನೋಡಿದಂತಹ ಗುಡಿಯಾಗಿರಲಿಲ್ಲ.

ದೇಗುಲದ ಅಕ್ಕಪಕ್ಕದಲ್ಲಿ ಕೆಲವು ಮನೆಗಳು ಇದ್ದವು. ಅವುಗಳ ಮುಂದೆ ಹಣೆಯ ಮೇಲೆ ಹಳದೀ ಭಂಡಾರವನ್ನು ಬಳಿದುಕೊಂಡು,  ಕೊರಳಲ್ಲಿ ಬಂಗಾರದ ಕೋವಿಸರವನ್ನು ಧರಿಸಿದ ಹತ್ತಿಯ ಸೀರೆಯ ಹೆಂಗಸರು ಕೂತಿದ್ದರು. “ಇಲ್ಲೆ ಈಸೊರುನ್ ಗುಡಿ ಯಲ್ಲೈತ್ರಿ ಅಕ್ಕಾರso?” ಎಂದು ಪ್ರಶ್ನಿಸಿದರೆ ಆ ಹೆಂಗಸರು ಸುಮ್ಮನೆ ಇಷ್ಟಗಲ ಅಮಾಯಕ ನಗೆ ನಕ್ಕು ತಿಕಡೆಗಿಕಡೆ ಅಂತೇನೋ ಅಂದರು.  ಜೊತೆಗೆ ಬಂದ ನಾಗರಾಜಾರ್ ಅವರು ತಮ್ಮ ಹೆಂಡತಿ ಸಂಧ್ಯಾ ಬಾಯಿಗೆ “ಏ ಇವು ಮರಾಠೀ ಮಾರೀವು. ಸರ‍್ಯಾಗಿ ಕೇಳು ಮರಾಠ್ಯಾಗ”  ಅಂದ ತಕ್ಷಣ ಅವರು “ಇಲ್ಲಿ ಭೂವರಾಹದೇವರ ಗುಡಿ ಎಲ್ಲಿದೆ?” ಎಂದು ಸಂಸ್ಕೃತಭೂಯಿಷ್ಠವಾದ ಶೈಲಿಯಲ್ಲಿ  ಕೇಳಿದರು. ಅದನ್ನು ಕೇಳಿ ಆ ಹೆಂಗಸರು ದಿಗಿಲುಗೊಂಡು ತಮ್ಮ ತಮ್ಮಲ್ಲೇ ಗುಸು ಗುಸು ಚರ್ಚೆಗೆ ಶುರುವಿಟ್ಟುಕೊಂಡರು. ಆಗಲೇ ಗೊತ್ತಾಗಿದ್ದು ನನಗೆ.ನಾನು ಮರಾಠಿಯ ಬಳ್ಳಿಯಿಂದ ದಟ್ಟವಾಗಿ ಸುತ್ತುವರೆಯಲ್ಪಟ್ಟ ಕನ್ನಡದ ಹೆಮ್ಮರದ ಬಳಿಯಿದ್ದೇನೆ ಎಂದು.ಗಹನ ಚರ್ಚೆಯ ನಂತರ ಅವರ ಮರಾಠಿಯಲ್ಲಿ ನನಗೆ ಅರ್ಥ ಆಗಿದ್ದು ಇಷ್ಟು “ಇಲ್ಲಿ ಅಂತಹ ಗುಡಿ ಇಲ್ಲವೇ ಇಲ್ಲ”

ಮನದಲ್ಲಿ ತಕ್ಷಣವೇ ಭಯಮಿಶ್ರಿತವಾದ ಒಂದು ಅನುಮಾನಮೂಡಿತು. ಹಲಸಿ ಎನ್ನುವ ಊರು ಇನ್ನೂ ಒಂದೇನಾದರೂ ಇದೆಯೇನೋ ಎಂದು. ಮತ್ತೆ ಪಕ್ಕದಲ್ಲೇ ಇದ್ದ ಆ ಗುಡಿಯನ್ನು ತೋರಿಸಿ ಹಾಗಾದರೆ ಇದಾವ ಮಂದಿರ ಎಂದು ಹಿಂದಿಯಲ್ಲಿ ಕೇಳಿದೆ. “ಈಶ್ವರಲಿಂಗನ ಗುಡಿ” ಎಂದು ಮರಾಠಿಯಲ್ಲಿ ಉತ್ತರಿಸಿದರು! ಮಾತ್ರವಲ್ಲ, ನಾನು ಬಂದಿದ್ದು ಗುಡಿಯ ಹಿಂಭಾಗವೆಂದೂ ಹೇಳಿ ಸರಿದಾರಿಯನ್ನು ತೋರಿಸಿದರು! ಆ ದಾರಿಯಿಂದ ಹೋಗಿ ನೋಡಿದರೆ ಅದೊಂದು ದಿವ್ಯವಾದ ಶಿವ ಮಂದಿರ.

ಮನಸ್ಸಿನೊಳಗೆಇನ್ನೂ ದುಗುಡ ತುಂಬಿಕೊಂಡೇ ಹತ್ತಿರ ಹೋದೆ.  ನೋಡುತ್ತಿರುವಾಗ ನನ್ನ ಜೊತೆಗೆ ಬಂದ ಒಬ್ಬರು “ಐ! ಇದು ಜಕಣಾಚಾರಿ ಕಟ್ಟಡ” ಎಂದು ಷರಾ ಬರೆದೇಬಿಟ್ಟರು. ಅವರ ಯಜಮಾನರು “ಹೌದು, ಇದು ಜಕಣಾಚಾರಿದs ಕಟ್ಟಡ, ಹಂಪ್ಯಾಗ ಸೈತ ಭಾಳ ಛಂದ ಕೆತ್ತ್ಯಾನs, ಅಂಥಾದ್ದ ಇದೂ ಸೈತ” ಎಂದು ಫುಟ್ ನೋಟ್ ಕೂಡ ದಯಪಾಲಿಸಿದರು.

ಇತಿಹಾಸ ಹಾಗು ಸೌಂದರ್ಯಪ್ರಜ್ಞೆ ಎರಡೂ ಇಲ್ಲದ ಜನರಿಗೆ ಹಳೆಯ ಕಟ್ಟಡಗಳೆಲ್ಲವೂ ಜಕಣಾಚಾರಿಯೇ ನಿರ್ಮಿಸಿದ ಹಾಗೆ ಕಾಣಿಸುವುದು ನನಗೆ ನಿಜಕ್ಕೂ ಸೋಜಿಗವೆನಿಸುತ್ತದೆ. ನಿಜಕ್ಕೂ ಆ ಜಕ್ಕಣಾಚಾರಿಯು ದೇಶಹಾಗು ಕಾಲಗಳಿಗೆ ಅತೀತನಾದವನೇ ಸರಿ. ಯಾವತ್ತೂ ಇಲ್ಲದಿದ್ದ ವ್ಯಕ್ತಿಯೊಬ್ಬನ ಮೇಲೆ ನಾಡೊಂದರ ಜನತೆ ಈ ಪರಿಯ ಆತ್ಮವಿಶ್ವಾಸವನ್ನು ಹೊಂದಿರುವುದು ಎಂದರೆ ಅದು ಜಕಣಾಚಾರಿಯೊಬ್ಬನ ವಿಷಯದಲ್ಲಿ ಮಾತ್ರ ಅನ್ನಿಸಿತು.

ವರಾಹ ಮಂದಿರವು ಈ ಊರಲ್ಲಿ ಇಲ್ಲದೇ ಇದ್ದಲ್ಲಿ ಹೇಗೆ ಎಂದು ಚಿಂತೆಯಲ್ಲಿಯೇ ತೊಡಗಿದ್ದೆ ಆದ್ದರಿಂದ ಈ ಶಿವಮಂದಿರದ ಸೊಬಗನ್ನು ಸವಿಯಲು ಆಗಲಿಲ್ಲ. ಇಂತಹ ಸಮಯದಲ್ಲಿ ನನ್ನ ಕಣ್ಣಿಗೆ ಆ ದೇವಸ್ಥಾನದ ಎದುರಿಗೆ ಪಾಪಿಗಳನ್ನು ರಕ್ಷಿಸುವರ ಗುಡಿಯೊಂದು ಇರುವುದು ಕಾಣಿಸಬೇಕೆ! ಯಾರನ್ನ ಯಾವುದಕ್ಕೆ ಬಯ್ಯಬೇಕು ಎಂದು ತಿಳಿಯಲಿಲ್ಲ. ತಲೆ ಕೆಡಲು ಶುರು ಆಯಿತು. ಸುಮ್ಮನೆ ಅಲ್ಲಿದ್ದ ಅಂಗಡಿಯವರನ್ನು ಕೇಳಿದೆ ಹಿಂದಿಯಲ್ಲಿ. ನರಸಿಂಹನ ಗುಡಿ ಎಲ್ಲಿದೆ ಎಂದು. ಅವರು ಕನ್ನಡದಲ್ಲಿಯೇ ಉತ್ತರಿಸಿದರು. “ಹಿಂಗs ಸೀದಾ ಹೋಗ್ರಿ, ಅಲ್ಲೇ ಊssದ್ದಕs ಐತಲ್ರಿs ಆ ತೆಂಗಿನ ಮರದ ತಳಾಗs ಐತ್ರಿs ನರಸಿಂವ್ದೇವ್ರು ಗುಡಿ” ಎಂದರು. “ವರಾಹ ದೇವರ ಗುಡಿ?” ಎಂದು ಪ್ರಶ್ನಿಸಿದರೆ “ಖರೇ ಅಂದ್ರs ಅದು ವರಾಹದೇವರ ಗುಡೀನs ಐತ್ರಿ, ಅದರಾssಗನs ನರಸಿಂವ್ದೇವ್ರು ಸೈತs ಅದಾನ್ರೀ” ಎಂದು ಹೇಳಿ ಹೃದಯಕ್ಕೆ ತಂಪು ಎರೆದ.

ಇನ್ನೇನು? ಕೃಷ್ಣಮೇಘವನ್ನು ಜೋರಾಗಿ ಓಡಿಸಿ ಆ “ಉದ್ದಕ ಐತಲ್ರೀ” ಮರದ ದಿಕ್ಕಿನ ಕಡೆಗೆ ಸಾಗಿದೆ. ಒಂದೇ ನಿಮಿಷದಲ್ಲಿ ಆ ಸಾರ್ವಭೌಮನ ಮಂದಿರದ ಮುಂದೆ ಇದ್ದೆ. ಸಂಜೆಯ ಹೊಂಬಣ್ಣದ ಬಿಸಿಲು ದೇವಸ್ಥಾನದ ಪೌಳಿಯ ಒಳಗೆಲ್ಲಾ ಚೆಲ್ಲಿತ್ತು. ಮನಮೋಹಕ ದೃಶ್ಯವದು.

ಹಲಸಿ:

ಹಲಸಿಯು ಪಶ್ಚಿಮಘಟ್ಟಗಳ ದಟ್ಟಹಸಿರಿನ ಹಿನ್ನೆಲೆಯಲ್ಲಿ ನಿರ್ಮಿತವಾದ ಐತಿಹಾಸಿಕ ಸ್ಥಳವಾಗಿದೆ. ಪ್ರಾಚೀನ (ಸುಮಾರು ೪ನೆಯ ಶತಮಾನ) ಕಾಲದಲ್ಲಿ ಪಲಸಿಕಾ ಎಂದು ಕರೆಸಿಕೊಂಡು ಕದಂಬರ ಶಾಖೆಯೊಂದಕ್ಕೆ ರಾಜಧಾನಿಯಾಗಿ ಮೆರೆದ ಸ್ಥಳ ಇದು. ಈಗಲೂ ಈ ಊರಿನಲ್ಲಿ ಆ ರಾಜಧಾನಿಯ ಕುರುಹುಗಳು ಕಾಣಿಸುತ್ತವೆ. ಕದಂಬರ ಮೊದಲ ಕೆಲವು ತಲೆಮಾರಿನವರೆಗೆ ಹಲಸಿಯು ಅವರ ಎರಡನೆಯ ರಾಜಧಾನಿ ಆಗಿತ್ತು. ಗೋವೆಯ ಆಳ್ವಿಕೆಯು ಇಲ್ಲಿಂದಲೇ ನಡೆಯುತ್ತಿತ್ತು. ಆದರೆ ಕೊನೆಯ ತಲೆಮಾರಿನ ಕದಂಬರ ಮಟ್ಟಿಗೆ ಒಂದು ತಾತ್ಕಾಲಿಕ ರಾಜಧಾನಿಯ ಮಟ್ಟಿಗೆ ಬದಲಾಯಿತು. ಸಧ್ಯಕ್ಕೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಒಂದು ಚಿಕ್ಕ ಗ್ರಾಮ ಪಂಚಾಯಿತಿಯ ಸ್ಥಾನಮಾನಕ್ಕೆ ಬಂದು ನಿಂತಿದೆ.

ಇದು ತಾಲ್ಲೂಕು ಕೇಂದ್ರವಾದ ಖಾನಾಪುರದಿಂದ 15 ಕಿ.ಮೀ ದೂರದಲ್ಲಿದೆ. ಇನ್ನೊಂದು ಪ್ರಸಿದ್ಧ ಐತಿಹಾಸಿಕ ಸ್ಥಳ ಕಿತ್ತೂರು ಕೂಡ ಇಲ್ಲಿಂದ 20 ಕಿ.ಮೀ ದೂರದಲ್ಲಿದೆ. ಧಾರವಾಡವು 65 ಕಿ.ಮೀ ಪೂರ್ವದಿಕ್ಕಿಗೆ ಹಾಗು ಜಿಲ್ಲಾಕೇಂದ್ರವಾದ ಬೆಳಗಾವಿಯು 40 ಕಿ.ಮೀ ಪಶ್ಚಿಮ ದಿಕ್ಕಿನಲ್ಲಿ ಇವೆ.

ಪ್ರಾಚೀನ ಕಾಲದಲ್ಲಿ ಸಂಪೂರ್ಣ ಕನ್ನಡವೇ ಇದ್ದಿರಬಹುದೇನೋ ಆದರೆ ಈಗ ಸಧ್ಯಕ್ಕೆ ಅಲ್ಲಿ ಮರಾಠೀಭಾಷೆಯದ್ದೇ ಪ್ರಾಬಲ್ಯ. ಕದಂಬ ಎನ್ನುವ ಹೆಸರು ಸಹ ಕದಮ್ ಎಂದಾಗಿರುವುದನ್ನು ಇಲ್ಲಿ ನಾನು ಗಮನಿಸಿದೆ.

ಕದಂಬರು ಮೂಲತಃ ವೈದಿಕ ಮತವನ್ನು ಆಶ್ರಯಿಸಿದವರು. ವೈದಿಕ ಮತಕ್ಕೆ ಅವರ ಪ್ರಾಶಸ್ತ್ಯವಿರುವುದು ಸಹಜ. ಆದರೆ ಹಲಸಿಯಲ್ಲಿ ಇತರ ಮತಗಳಿಗೂ ಯಥೇಚ್ಛವಾಗಿ ಗೌರವ ಸಿಕ್ಕಿರುವುದನ್ನು ನಾವು ಇಂದಿಗೂ ಗಮನಿಸಬಹುದು. ತಂತ್ರಸಾರಾಗಮದ ವರಾಹ ಮಂದಿರ, ಶೈವಾಗಮ ರೀತ್ಯಾ ಪೂಜೆ ಸ್ವೀಕರಿಸುವ ಮಹದೇವರ ಮಂದಿರಗಳು ಹಾಗು ಜೈನ ಬಸದಿಗಳು ಇಲ್ಲಿ ಕದಂಬರ ಕಾಲದಲ್ಲಿ ನಿರ್ಮಿತವಾಗಿವೆ. ಎಲ್ಲವೂ ನೋಡತಕ್ಕ ಸ್ಥಳಗಳೇ. ಆದರ ವರಾಹದೇವನ ಮಂದಿರ ಈ ಎಲ್ಲ ದೇಗುಲಗಳಲ್ಲಿ ಪ್ರಧಾನವಾಗಿದೆ.ಅವನ ವಿಗ್ರಹವಂತೂ ಮನೋಜ್ಞವಾಗಿದೆ.

ಶ್ರೀನಾರಾಯಣ-ಭೂವರಾಹ-ನರಸಿಂಹ ಮಂದಿರ.

ಕದಂಬ ವಾಸ್ತುಶೈಲಿಯ ಸುಂದರ ಮಂದಿರವಿದು. ಆದರೆ ನಿರ್ಮಾಣ ಹಾಗು ಪ್ರತಿಷ್ಠಾಪನೆಯ ವಿಷಯದಲ್ಲಿ ಗೊಂದಲವಿದೆ. ಆ ಬಗ್ಗೆ ಇನ್ನೊಂದು ಲೇಖನವಿದೆ. ಇನ್ನೊಂದು ಬಾರಿ ನೋಡೋಣ.

ಬೇಲೂರು ಹಳೇಬೀಡಿನಂತೆ ಸೂಕ್ಷ್ಮ ಕೆತ್ತನೆಗಳನ್ನು ಮಂದಿರದ ಗೋಡೆಗಳಲ್ಲಿ ನೋಡಲಾರೆವಾದರೂ ಒಳಗಿರುವ ಭಗವಂತನ ಪ್ರತಿಮೆಗಳು ಉತ್ಕೃಷ್ಟವಾದ ಚೆಲುವನ್ನುಹೊಂದಿವೆ. ಇದಕ್ಕೆ ಎರಡನೆಯ ಮಾತೇ ಇಲ್ಲ.

ದೇವಸ್ಥಾನವು ಆಯತಾಕಾರದ ಕಟ್ಟಡವಾಗಿದ್ದು ಸುಮಾರು 30 ಅಡಿಗಳಷ್ಟು ಎತ್ತರದ ಗೋಪುರವನ್ನು ಹೊಂದಿದೆ. ಎರಡು ಗರ್ಭಗೃಹಗಳನ್ನು ಒಳಗೊಂಡಿರುವ ಅಪೂರ್ವ ದೇಗುಲವಿದು. ಈ ಎರಡೂ ಗರ್ಭಗೃಹಗಳು ಪೂರ್ವ ಹಾಗು ಉತ್ತರದ ಭಾಗಗಳಲ್ಲಿ ಇವೆ. ದಕ್ಷಿಣ ಹಾಗು ಉತ್ತರ ದಿಕ್ಕುಗಳಲ್ಲಿ ಎರಡು ಪ್ರವೇಶದ್ವಾರಗಳು ಇವೆ.

ಪೂರ್ವದಿಕ್ಕಿನಲ್ಲಿ ಇರುವ ಗರ್ಭಗೃಹದಲ್ಲಿ ಶ್ರೀನಾರಾಯಣನ ಚೆಲುವಾದ ಮೂರ್ತಿಯು ಇದೆ. ಕುಳಿತಿರುವ ಭಂಗಿಯ ಭವ್ಯ ಶಿಲ್ಪವಿದು. ಇಲ್ಲಿರುವ ಪ್ರತಿಮೆಗಳಲ್ಲೆಲ್ಲ ಇದುವೆ ಅತ್ಯಂತ ಪ್ರಾಚೀನವಾದುದು. ಶಾಲಗ್ರಾಮ ಶಿಲೆ ಎಂದು ಅರ್ಚಕರು ಹೇಳಿದರು. ಆದರೆ ನನಗೆ ಹಾಗೆ ಇರಲಿಕ್ಕಿಲ್ಲ ಎನಿಸಿತು. ಶಿಲೆಯು ಕಡುಗಪ್ಪು ವರ್ಣದ್ದಾಗಿರದೆ ಬೂದುವರ್ಣದ್ದಾಗಿದೆ. ಮುಖ ಮಾತ್ರ ಫಳಫಳ ಹೊಳೆಯುತ್ತಿದೆ. ಈ ಹೊಳೆಯುವಿಕೆಯಿಂದಾಗಿಯೇ ಈ ಅಭಿಪ್ರಾಯ ಮೂಡಿರಲಿಕ್ಕೂ ಸಾಕು. ಪ್ರತಿನಿತ್ಯದ ಪೂಜಾವಿಧಾನಗಳು ಸಹ ಮೊದಲು ಇಲ್ಲಿಯೇ ನಡೆಯುತ್ತವೆ. ಅರ್ಚಕರು ತಮ್ಮೆಲ್ಲ ಪೂಜಾ ಪರಿಕರಗಳನ್ನು ಇಲ್ಲಿಯೇ ಇಟ್ಟುಕೊಂಡಿದ್ದಾರೆ. ಅದು ಅವರಿಗೆ ಅನುಕೂಲವಿದ್ದಂತೆ ಕಂಡಿತು.

ಇದೇ ಗರ್ಭಗುಡಿಯ ಒಳಭಾಗದಲ್ಲಿ, ದೇವರ ಎಡಭಾಗದ ಗೋಡೆಯಲ್ಲಿ ಇನ್ನೊಂದು ಚಿಕ್ಕ ಮಂಟಪದಂತಹುದನ್ನು ನಿರ್ಮಿಸಲಾಗಿದೆ. ಇದರಲ್ಲಿ ಪ್ರಾಚೀನವಾದ ಶ್ರೀನರಸಿಂಹದೇವರ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಮತಯೋಗಿ(?) ಎಂಬುವನಿಂದ ಈ ಪ್ರತಿಮೆಯ ಪ್ರತಿಷ್ಠಾಪನೆ ಆಗಿದೆ ಎಂದು ಹೇಳುತ್ತಾರೆ. ವೀರಾಸನದ ಭಂಗಿಯಲ್ಲಿ ಕುಳಿತಿರುವ ಬಲು ಚೊಕ್ಕನಾದ ನರಸಿಂಹನೀತ. ಇವನ ಹೆಸರು “ಅನಂತವಿಕ್ರಮವೀರನರಸಿಂಹ” ಎಂದು.ವೀರಾಸನದ ಭಂಗಿಯಲ್ಲಿ ಕುಳಿತಿರುವುದಕ್ಕೆ ವೀರನರಸಿಂಹನೆಂದಿರಬೇಕು. ಯುದ್ಧಕ್ಕೆ ಹೊರಡುವ ಮೊದಲು ಇವನಲ್ಲಿ ವಿಜಯಕ್ಕಾಗಿ ಪ್ರಾರ್ಥಿಸುತ್ತಿದ್ದರು ಎಂದು ಕೂಡ ಭಾವಿಸಬಹುದೇನೋ. ಹಾಗಾಗಿ ಅನಂತ ವಿಕ್ರಮ ಎನ್ನುವ ಬಿರುದು ಇರಬಹುದು. ಒಟ್ಟಿನಲ್ಲಿ ಬಲು ಗಂಭೀರವಾದ ಹೆಸರು ಈ ಪುಟಾಣಿ ನರಸಿಂಹನಿಗೆ. ಆದರೆ ಇಷ್ಟುದೊಡ್ಡ ಹೆಸರು ಹೇಳಲು ಬೇಸರವೋ, ಅಥವಾ ಗೊತ್ತೇ ಇಲ್ಲವೋ ಅಥವಾ ಪುಟ್ಟ ಶರೀರವುಳ್ಳದ್ದಕ್ಕೇ ಏನೋ ಈ ಊರಿನಲ್ಲಿ ಇವನ ಹೆಸರು ಬಾಲನರಸಿಂಹ ಎಂದಾಗಿ ಹೋಗಿದೆ. ಅದೂ ಚೆಂದದ ಹೆಸರೇ ಇರಬಹುದು. ಆದರ ಮೂಲ ಸ್ವರೂಪಕ್ಕೆ ಮಾಡಿದ ಅಪಚಾರವೆಂದು ನನ್ನ ಅನಿಸಿಕೆ.

ಪಶ್ಚಿಮದಿಕ್ಕಿನ ಗರ್ಭಗೃಹ ವರಾಹರಾಯನಿಗೆ ಮೀಸಲು. ಅದ್ಭುತವಾದ ರೂಪವಂತ ಇವನು. ಕೂರ್ಮವೊಂದರ ಮೇಲೆ ಬಲಗಾಲನ್ನೂ ನಾಗನೋರ್ವನ ಮೇಲೆ ಎಡಗಾಲನ್ನೂ ಇಟ್ಟು, ತನ್ನ ಭುಜದ ಮೇಲೆ ತನ್ನ ಅರಸಿಯನ್ನು ಕೂರಿಸಿಕೊಂಡು ವೈಭವದಿಂದ ನಿಂತಿದ್ದಾನೆ. ಕಣ್ಣಲ್ಲಿ ತನ್ನ ಪತ್ನಿಯೆಡೆಗಿನ ಅಪಾರವಾದ ಪ್ರೇಮ ಮತ್ತು ಮುಖದಲ್ಲಿ ಜವಾಬ್ದಾರಿಯನ್ನು ಸುಲಲಿತವಾಗಿ ನಿರ್ವಹಿಸಬಲ್ಲೆನೆಂಬ ದೈವೀಗಾಂಭೀರ್ಯವು ಮನೋಹರವಾಗಿ ಕಾಣಿಸುತ್ತದೆ. ಸುಮಾರು 5 ಅಡಿ ಎತ್ತರದ ಪ್ರತಿಮೆ ಇದು. 5 ಅಡಿಗಳ ಒಂದು ಪೀಠದ ಮೇಲೆ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಆಭರಣಗಳು ಬಹಳ ಸೂಕ್ಷ್ಮವಾದ ಕೆತ್ತನೆಯಿಂದ ಕೂಡಿದೆ.

ಎರಡೂ ಗರ್ಭಗೃಹಗಳ ಮಧ್ಯ ಒಂದು ನವರಂಗವಿದೆ. ಇದು ಸುಮಾರು 30 ಜನರು ಕೂಡಬಹುದಾದಷ್ಟು ವಿಶಾಲವಾಗಿದೆ. ಮಧ್ಯದಲ್ಲಿ ವೃತ್ತಾಕಾರದ ಶಿಲಾಪೀಠದ ಮೇಲೆ ಆಮೆಯ ಮೂರ್ತಿಯೊಂದನ್ನು ಕೆತ್ತಿದ್ದಾರೆ. ಆದರೆ ಇದು ಬರಿ ಆಮೆಯಾಗಿರದೆ ವಿಷ್ಣುವಿನ ಕೂರ್ಮಾವತಾರವೆಂದೇ ಭಾವಿಸಬಹುದು. ಯಾಕೆಂದರೆ ಇದರ ಪಕ್ಕದಲ್ಲಿ ಶಂಖ ಹಾಗು ಚಕ್ರಗಳನ್ನು ಸಹ ಸ್ಪಷ್ಟವಾಗಿಯೇ ಕೆತ್ತನೆ ಮಾಡಲಾಗಿದೆ.  ಪ್ರಾಯಶಃ ಪೂಜೆಯು ಕೂಡ ನಡೆಯುತ್ತಿರಲಿಕ್ಕೆ ಸಾಕು.

ದೇವಾಲಯದ ಆವರಣದಲ್ಲಿಯೇ ಇನ್ನೂ ಒಂದೆರಡು ದೇವಾಲಗಳು ಇವೆ. ಅದರಲ್ಲಿ ಒಂದು ವಾಸುದೇವನ ಗುಡಿ ಎಂದು ಅನಿಸುತ್ತದೆ. ಗರ್ಭಗೃಹದಲ್ಲಿ ಬೆಳಕು ಇದ್ದಿಲ್ಲವಾದ್ದರಿಂದ ಸರಿಯಾಗಿ ಅರ್ಥವಾಗಲಿಲ್ಲ. ಒಂದು ಪುಟ್ಟ ರುದ್ರಮಂದಿರವೂ ಉಂಟು. ಅವರ ದರ್ಶನಕ್ಕೆ ಹೋದೆ. ರುದ್ರದೇವರ ಹೆಸರು ಗೊತ್ತಾಗಲಿಲ್ಲ. ಅಲ್ಲಿಯೇ ಮಗುವನ್ನು ಆಡಿಸುತ್ತ ಕುಳಿತಿದ್ದ ಹೆಂಗಸೊಬ್ಬರನ್ನು ಕೇಳಿದೆ. “ಈ ಈಶ್ವರನ ಹೆಸರೇನ್ರಿ ಅಕ್ಕಾರ?” ಎಂದು. “ಇದರೀ? ಇದು ಈಸೊರಲಿಂಗಪ್ಪ್ರೀ” ಎಂಬ ಉತ್ತರ ಬಂದಿತು. ಏನು ಹೇಳಲಿ? ಸುಮ್ಮನೆ ನಮಸ್ಕರಿಸಿ ಬಂದೆ. ಊರಿಗೆ ಬಂದು ಅಲ್ಲಿ ಇಲ್ಲಿ ಕೆದಕಿ ನೋಡಿದಾಗ ಹಾಟಕೇಶ್ವರ ಎನ್ನುವ ಸುಂದರ ಹೆಸರು ತಿಳಿಯಿತು. ಅದು ಇನ್ನೂ ಖಚಿತವಾಗಿಲ್ಲ. ಮತ್ತೊಮ್ಮೆ ಹೋದಾಗ ನೋಡಬೇಕು. ಸರಿಯಾಗಿ.


ಶ್ರೀಸುವರ್ಣೇಶ್ವರ

ಶ್ರೀಸುವರ್ಣೇಶ್ವರ ಮಂದಿರವು ಹಲಸಿಯ ಪೂರ್ವದಿಕ್ಕಿನಲ್ಲಿ ಇರುವ ಭವ್ಯ ಮಂದಿರ. ಒಟ್ಟಾರೆ ಮಂದಿರದ ಅಧಿಷ್ಠಾನವೇ ಸುಮಾರು ಐದು ಅಡಿಗಳಷ್ಟು ಇದೆ. ನವರಂಗವನ್ನು ಎತ್ತರವಾದ ಸ್ಥಂಬಗಳು ಹಿಡಿದು ನಿಲ್ಲಿಸಿವೆ. ದುರ್ದೈವ ಎಂದರೆ ನವರಂಗದ ಛಾವಣಿಯನ್ನು ಹಾಗು ನಂದಿಯನ್ನು ಹಾಳುಮಾಡಿ ಹಾಕಿದ್ದಾರೆ.ಇತಿಹಾಸಕ್ಕೆ ಅಪಚಾರವಾಗದಂತೆ ಛಾಚಣಿಯನ್ನು ಪುನಃ ನಿರ್ಮಿಸಬಹುದಿತ್ತು. ಆದರೆ ಸರ್ಕಾರ ಯಾಕೆ ಮನಸ್ಸು ಮಾಡಿಲ್ಲವೋ? ಇದರಷ್ಟೇ ಬೇಸರವಾಗುವ ಇನ್ನೊಂದು ಸಂಗತಿ ಇದೆ. ಗರ್ಭಗೃಹದಲ್ಲಿ ಒಂದು ದೊಡ್ಡ ಶಿವಲಿಂಗವಿದೆ. ನಿತ್ಯ ಪೂಜೆಯೂ ಇದೆ. ಆದರೆ ಪಾಣಿಪೀಠಕ್ಕೆ ವಿವಿಧ ವರ್ಣಗಳ ಡಿಸ್ಟೆಂಪರ್ ಅನ್ನು ಬಳಿದುಬಿಟ್ಟಿದ್ದಾರೆ. ಗುಡಿಯನ್ನು ನೋಡಿ ಪಟ್ಟ ಆನಂದವೆಲ್ಲ ಈ ವಿಕೃತಿಯನ್ನು ನೋಡಿ ಹೊರಟು ಹೋಗುತ್ತದೆ.

ನನಗೆ ಇದ್ದ ಸಮಯದಲ್ಲಿ ನಾನು ನೋಡಿದ್ದು ಇವೆರಡೇ ಸ್ಥಳಗಳನ್ನು. ಹಲಸಿಯು ಹಲವಾರು ಸುಂದರ ಗುಡಿಗಳಿಗೆ ಕಟ್ಟಡಗಳಿಗೆ ಆಶ್ರಯವಿತ್ತಿರುವ ತಾಣ. ಕಲ್ಮೇಶ್ವರ, ರಾಮೇಶ್ವರ, ವಿಠಲ, ರಾಧಾಕೃಷ್ಣ ಮಂದಿರ ಹೀಗೆ ಹಲವಾರು ದೇವಸ್ಥಾನಗಳು ಅಲ್ಲಿವೆ. ಮುಂದಿನ ಬಾರಿ ಹೋದಾಗ ನೋಡಿ ಅವುಗಳನ್ನು ಕುರಿತು ಬರೆಯಬೇಕು.

ಹಲಸಿಗೆ ತಲುಪುವುದು ಹೇಗೆ?

ಹುಬ್ಬಳ್ಳಿಯಿಂದ ಖಾನಾಪುರಕ್ಕೆ ಬಸ್ಸಿನಲ್ಲಿ ಪಯಣಿಸಿ ಅಲ್ಲಿಂದ ಬಾಡಿಗೆ ಗಾಡಿಯ ಮೂಲಕ ಬರಬಹುದು. ಇದು ಉತ್ತಮ ಪಕ್ಷ. ಗೋವೆಗೆ ಹೋಗುವ ಬಸ್ಸಿನಲ್ಲಿ ಕುಳಿತು ನಾಗರಗಾಳಿ ಎನ್ನುವ ಊರಿನಲ್ಲಿ ಇಳಿದು ಮತ್ತೊಮ್ಮೆ ಆಟೋದಂತಹ ಗಾಡಿಯಲ್ಲಿ ಪಯಣಿಸಬೇಕು. ಹುಬ್ಬಳ್ಳಿಯಿಂದ ಕಿತ್ತೂರಿನವರೆಗೆ ಮೂಲಕವೂ ಹಲಸಿಗೆ ಬರಬಹುದು.

ಬೆಳಗಾವಿಯಿಂದ ಖಾನಾಪುರ ಮಾರ್ಗವಾಗಿ ಹಲಸಿಗೆ ನೇರ ಬಸ್ಸುಗಳ ಸಂಪರ್ಕವಿದೆ.

ಹತ್ತಿರದ ರೈಲ್ವೇ ನಿಲ್ದಾಣ ಖಾನಾಪುರ. ಹುಬ್ಬಳ್ಳಿಯಿಂದ ಬೆಳಗಾವಿ, ಮಿರಜ ಕಡೆ ಹೋಗುವ ಕೆಲವು ಎಕ್ಸ್ ಪ್ರೆಸ್ ಗಾಡಿಗಳು, ಮತ್ತು ಎಲ್ಲ ಪ್ಯಾಸೆಂಜರ್ ರೈಲುಗಳೂ ಖಾನಾಪುರದಲ್ಲಿ ನಿಲ್ಲುತ್ತವೆ. ಅಲ್ಲಿಂದ ಆಟೋ ರಿಕ್ಷಾದಂತಹ ಗಾಡಿಗಳಲ್ಲಿ ಹಲಸಿಗೆ ಬರಬಹುದು.

ಈ ಊರನ್ನು ತಲುಪುವುದು ದುಃಸಾಧ್ಯವೇನಲ್ಲ. ಆದರೆ ಕೆಲವು ಕಡೆ ಗೊಂದಲ ಉಂಟಾಗಬಹುದು. ಸ್ಥಳೀಯರ ಸಹಕಾರ ಪಡೆಯಿರಿ.

ಈ ಲೇಖನವು ಈ ಸ್ಥಳದ ಬಗ್ಗೆ ಅಂತಿಮವೇನಲ್ಲ. ಇದರಲ್ಲಿ ತಪ್ಪಿಸಿಕೊಂಡಿರುವ ಮಾಹಿತಿ, ಅಥವಾ ನಾನು ತಪ್ಪಾಗಿ ಭಾವಿಸಿರುವ ಸಂಗತಿಗಳೇನಾದರೂ ಓದುಗರ ಗಮನಕ್ಕೆ ಬಂದರೆ ತಿದ್ದಿಕೊಳ್ಳಲು ನಾನು ಸದಾ ಸಿದ್ಧ.

001-anmod 002-anomd 003-GHARLI-COBRA 004-direction board 005-halaga 006-halasi 007-halasi 008-halasi 009-halasi 010-halasi 011-halasi 012-narayana-halasi 014-VARAHA-halasi 015-koorma-halasi 016-narashimha-halasi 017-tulasi-halasi 018-shaale-halasi 019-brahma

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

2 Comments

 1. Laxminarayana
  August 24, 2017
  Reply

  I am laxminarana I like this

 2. Phaniraj
  September 12, 2018
  Reply

  Very good explanation thanks

Leave a Reply

This site uses Akismet to reduce spam. Learn how your comment data is processed.