​​​ನೀ ಕರುಣದಿಂದ ಪಾಲಿಸದೆ ಇದ್ದರೆ

ನೀ ಕರುಣದಿಂದ ಪಾಲಿಸದೆ ಇದ್ದರೆ ಇನ್ನುನಾಕಾಣೆ ಮನ್ನಿಸುವರ
ಸಾಕಾರಿ ರೂಪ ಸರ್ವೋತ್ತಮನೆ ಸಲಹೊ ಪರಾಕು ಮಾಡದೆ ಎನ್ನನು

ಗುರುಹಿರಿಯರನು ಕಂಡು ದುರುಳತನದಲಿ ನಾನು ಚರಣಕೆರಗದೆ ಪೋದೆನೊ
ಸ್ಮರನಬಾಣಕೆ ಸಿಲುಕಿ ಪರಸತಿಗೆ ಮನಸಿತ್ತು ದುರ್ಗತಿಗೆ ಒಳಗಾದೆನೊ
ವರಸಕಲಸಂಪದವು ಬರಿದೆ ಬಯಸುತೆ ನಿಮ್ಮ ಚರಣವನು ನಾ ಮರೆತೆನೋ
ಪರಮಪೌರುಷನೆ ನಿನ್ನ ಪಾದದೊಲೊಮೆನಗಿತ್ತು ಕರಪಿಡಿದಿ ಕಡೆ ಹಾಯಿಸೈ ||

ಆರು ಮಂಗಗಳೆಂಬ ಕ್ರೂರವೈರಿಗಳಿಂದ ಗಾರಾದೆ ಅವರ ದೆಸೆಗೆ
ಮಾರಿಹಬ್ಬದ ಕುರಿಯು ಮೆಲುವಂತೆ ತಿನುವಂತೆ ತೋರುತಿದೆ ಮತಿಯು ಎನಗೆ
ಘೋರಪಾತಕವೆಂಬ ವಾರಿಧಿಯ ದಾಟಿಸುವ ಚಾರುತರ ಬಿರುದು ನಿನಗೆ
ಮಾರನಯ್ಯನೆ ನಿನ್ನ ಮಹಿಮೆಗಳ ಕೇಳಾಡಿ ಕೂಡಿದೆನು ನಿಮ್ಮಡಿಗಳ ||

ಹಲವು ಜನುಮಗಳಲ್ಲಿ ಬಲುನೊಂದು ಬಾಯಾರಿ ಬಳಲುತ್ತ ತಿರುಗುತಿಹೆನೊ
ಸಲೆ ಉದರ ಪೋಷಣೆಗೆ ತಲೆಹುಳುಕ ನಾಯಂತೆ ಮನೆಮನೆಯ ಅಲೆಯುತಿಹೆನೊ
ಜಲದಮೇಲಿನ ಗುಳ್ಳೆಯಂತಿಪ್ಪ ಈ ದೇಹ ನೆಲೆ ಎಂದು ನೆಚ್ಚುತಿಹೆನೊ
ಜಲಜನಾಭನೆ ನಿನ್ನ ಮಹಿಮೆಯನು ಪೊಗಳುವೆನೊ ಚೆಲುವ ಹಯವದನ ಕಾಯೋ ||

 
Featured image courtesy : www.framepool.com

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Comments are closed.