ಪರಿಮಳಪ್ರಸಾದ, ಶಾಲಗ್ರಾಮ ಮತ್ತು ಪ್ರವಾಹದ ವೃತ್ತಾಂತವು

ಇತ್ತೀಚೆಗೆ ಬಾಗಲಕೋಟೆಯ ಭಕ್ತರೊಬ್ಬರ ಮನೆಯಲ್ಲಿ ಪರಿಮಳಪ್ರಸಾದವು ಶಾಲಗ್ರಾಮಗಳಾಗಿದ್ದಾವೆ ಎಂಬ ಒಂದು ಮಾತು ಬಂದಿತು. ಅದನ್ನು ಕುರಿತು ಶ್ರೀ ವಾದಿರಾಜ ಹೆಚ್.ಕೆ ಎನ್ನುವ ಒಬ್ಬರು ಕೆಲವು ಧರ್ಮಸಂದೇಹಗಳನ್ನು ಮಾಡಿದ್ದರು. ಆದರೆ ತಿಳಿದವರಾರೂ ಅದಕ್ಕೆ ಉತ್ತರ ಕೊಡದೆ ಹೋದ ಪ್ರಯುಕ್ತ ಸುಮ್ಮನೆ ಚರ್ಚೆಯು ಅಡ್ಡ ಹಾದಿಗೆ ಹೋಯಿತು. ಯಾರೋ ದೇಶಪಾಂಡೆ ಎನ್ನುವವರು ರಾಯರ ಮಹಿಮೆಯನ್ನೇ ಪ್ರಶ್ನಿಸಿದರು. ಅವರ ಮಾತಿಗೆ ಉತ್ತರ ಬರೆವಷ್ಟರಲ್ಲಿ ವಾದಿರಾಜರು ಕಮೆಂಟ್ಸನ್ನು ಆಫ್ ಮಾಡಿಬಿಟ್ಟರು. ಸರಿ ಹೇಗಿದ್ದರೂ ಬರೆಯುತ್ತಿದ್ದೇನೆ ಡೀಟೇಲ್ ಆಗಿಯೇ ನನ್ನ ಅಭಿಪ್ರಾಯವನ್ನು ಇಲ್ಲಿ ಬರೆಯೋಣವೆಂದುಕೊಂಡೆ. ಇಲ್ಲಿದೆ ನನ್ನ ಉತ್ತರ.

ನೀವು ಜರ್ನಲಿಸ್ಟು ಎಂದು ಬರೆದುಕೊಂಡಿದ್ದೀರಿ ನಿಮ್ಮ ಪ್ರೊಫೈಲಿನಲ್ಲಿ. ಆದರೆ ಯಾವ ರೀತಿಯಾದ ಸಿದ್ಧಾಂತ ನಿಮ್ಮದು ಎನ್ನುವದು ನಿಮಗೇನೇ ಇನ್ನೂ ಸ್ಪಷ್ಟವಿಲ್ಲವೆಂದೆನಿಸುತ್ತಿದೆಯಲ್ಲ. ಇಲ್ಲಿ ನಿಮ್ಮ ನಿಲುವು ಯಾವುದು? ಪರಿಮಳಪ್ರಸಾದವು ಶಾಲಗ್ರಾಮಗಳಾಗಿ ಪರಿವರ್ತನೆಯಾಗಿಲ್ಲ ಎಂಬುದೋ ಅಥವಾ ರಾಯರು ಪವಾಡಪುರುಷರಲ್ಲ ಎಂಬುದೋ? ಮೊದಲನೆಯದ್ದು ನಿಮ್ಮ ಅಭಿಪ್ರಾಯವಿದ್ದರೆ ಅವರನ್ನೇ ನೇರವಾಗಿ ಖಂಡಿಸಿ. ಅದನ್ನು ಬಿಟ್ಟು ಪ್ರವಾಹದ ವಿಷಯವನ್ನು ಯಾಕೆ ಎತ್ತುತ್ತಿದ್ದೀರಿ? ಇನ್ನು ಎರಡನೆಯದಾದ “ರಾಯರು ಪವಾಡಪುರುಷರಲ್ಲ” ಎನ್ನುವ ಅಭಿಪ್ರಾಯ ನಿಮ್ಮದಾಗಿದ್ದರೆ ನೀವು ವಿಪ್ರರೆನ್ನುವುದೇ ಅನುಮಾನಾಸ್ಪದ. ಹಾಯ್ ಬೆಂಗಳೂರಿನಂತಹ ವಿಕ್ಷಿಪ್ತ ಮನಸ್ತತ್ವದ ಪತ್ರಿಕೆಯಲ್ಲಿ ಕೂಡ ರಾಯರ ಬಗ್ಗೆ ಸಭ್ಯವಾದ ಭಾಷೆಯಲ್ಲಿ ಮಾತನಾಡಿ, ರಾಯರ ಕೃತಿಗೆ ಅಗೌರವ ತೋರಿದವರನ್ನು ಧಿಕ್ಕರಿಸಿದ್ದಾರೆ. ಅನೇಕ ಮಂದಿ ಆಧುನಿಕ ವಿಚಾರವಾದಿಗಳು ಸಹ ಪವಾಡಗಳ ವಿಷಯ ಬಂದಾಗ ರಾಯರನ್ನು ಗೌರವದಿಂದಲೇ ನೋಡಿದ್ದಿದೆ. ಇಂತಹುದರಲ್ಲಿ ಮಾಧ್ವಬ್ರಾಹ್ಮಣರ ಸಮೂಹದ ಒಬ್ಬ ಸದಸ್ಯರಾಗಿದ್ದುಕೊಂಡು ಇಂತಹ ಮಾತನ್ನು ಆಡಿದರೆ ಏನನ್ನಬೇಕು? ಮೂಢನಂಬಿಕೆಗಳನ್ನು ಪ್ರಶ್ನಿಸಿ, ಅವುಗಳನ್ನು ನಿವಾರಿಸುವತ್ತ ನಿಮ್ಮ ಲಕ್ಷ್ಯವಿದ್ದಲ್ಲಿ ನಿಮಗೆ ಅಭಿನಂದನೆಗಳು. ಆದರೆ ಪ್ರಶ್ನೆಗಳು ಅಗೌರವದ ಧ್ವನಿಯಲ್ಲಿ ಇರಬಾರದು.

ಮಂತ್ರಾಲಯ ಪ್ರವಾಹದ ವಿಷಯವೇ ಇಲ್ಲಿ ಅಪ್ರಸ್ತುತವಾದ ವಿಚಾರ. ಆದರೂ ನೀವು ಪ್ರವಾಹವನ್ನು ಮುಂದಿಟ್ಟುಕೊಂಡು ರಾಯರ ಮಹಿಮೆಯನ್ನು ಅಳೆಯಲು ನೋಡುತ್ತೀರಾದರೆ ಅದರ ಹಿನ್ನೆಲೆ ಮುನ್ನೆಲೆಯನ್ನೂ ಆಲೋಚನೆ ಮಾಡಿ ಮಾತನಾಡಬೇಕು. ಅದನ್ನು ಬಿಟ್ಟು “ಪವಾಡ ಪುರುಷ ರಾಯರು ಎಲ್ಲಿ ಹೋಗಿದ್ದರು?” ಎನ್ನುವ ಮಾತನ್ನು ನಿಮ್ಮಷ್ಟು ಹಿರಿಯ ವಯಸ್ಸಿನವರು ಮಾತನಾಡಬಾರದು.

ವಾಸ್ತವವಾಗಿ ಮಂತ್ರಾಲಯಕ್ಕಿಂತಲೂ ಹೆಚ್ಚಿನ ಪ್ರಮಾಣದ ಪ್ರವಾಹವು ಉಂಟಾಗಿದ್ದು ಕರ್ನೂಲು ನಗರದಲ್ಲಿ. ಆ ಊರಿನ ಕೆಲವೆಡೆಯಂತೂ 25 ಅಡಿಗಳಷ್ಟು ನೀರು ತುಂಬಿಕೊಂಡಿತ್ತು. ಇಲ್ಲಿನ ಮೂಲ ವೃಂದಾವನ, ಮೃತ್ತಿಕಾವೃಂದಾವನ ಸನ್ನಿಧಿಗಳು, ಅನೇಕ ದೇಗುಲಗಳು, ಸಾವಿರಾರು ಮನೆಗಳು ಕೂಡ ಮುಳುಗಡೆಯಾಗಿದ್ದವು. ಮಂತ್ರಾಲಯದಲ್ಲಂತೂ ನಿಮ್ಮ ಪ್ರಕಾರ ಪವಾಡ ನಡೆಯಲಿಲ್ಲ. ಆದರೆ ಕರ್ನೂಲಿಗೆ ಏನಾಗಿತ್ತಪ್ಪ? ಯಾರ ಕೋಪಕ್ಕೆ ಗುರಿಯಾಗಿತ್ತು ಆ ಮಹಾನಗರ? ಅಲ್ಲಿ ಯಾಕೆ ಯಾರೂ ಮಹಿಮೆಯನ್ನು ತೋರಲಿಲ್ಲ?

ಪ್ರವಾಹ ಅಥವಾ ಬರಗಾಲದಂತಹ ಘಟನೆಗಳು ಮಹಾತ್ಮರ ವ್ಯಕ್ತಿತ್ವದ ಮೇಲೆ ಏನೂ ಪರಿಣಾಮವನ್ನು ಬೀರುವುದಿಲ್ಲ. ಎಲ್ಲವನ್ನೂ ಇವರುಗಳು ಸಮದೃಷ್ಟಿಯಲ್ಲಿಯೇ ನೋಡುತ್ತಾರೆ. ಪ್ರವಾಹವಿದ್ದರೂ ಇಲ್ಲದಿದ್ದರೂ ಅವರ ಅನುಸಂಧಾನಕ್ಕೆ ಏನೂ ಭಂಗಬಾರದು. ಪ್ರವಾಹವು ಬರಲೇಬೇಕು ಎನ್ನುವುದು ಪ್ರಕೃತಿಯ ನಿಯಮವಿದ್ದಲ್ಲಿ ಗುರುಗಳು ತಾವು ಸಮರ್ಥರಿದ್ದೂ (ಅಗಮ್ಯ ಮಹಿಮಾ ….) ಕೂಡ ಅದನ್ನು ತಡೆಯಲಾರರು. ಆದರೆ ನಿಜ ಶಿಷ್ಯರ, ಭಕ್ತರ ರಕ್ಷಣೆಗಾಗಿ ತಾವು ನಾವೆಯಾಗಿ (ದುರತ್ಯಯೋಪಪ್ಲವ….) ನಿಂತು ಅವರನ್ನು ಪ್ರವಾಹದಿಂದ ಖಂಡಿತವಾಗಿಯೂ ಪಾರು ಮಾಡಬಲ್ಲರು.

  • ಹುಕ್ಕೇರಿಯಲ್ಲಿ ನಿಂತು ಮಂತ್ರಾಲಯದ ಪ್ರವಾಹದ ಬಗ್ಗೆ ಮಾತನಾಡುವುದು ಬಹಳ ಸುಲಭ. ಮಂತ್ರಾಲಯಕ್ಕೆ ಬಂದು ಇಲ್ಲಿನ ಜನರನ್ನು ಕೇಳಿ ನೋಡಿ. ಪ್ರವಾಹದ ನಂತರ ಜನರು ಸುಖಿಗಳಾಗಿಯೇ ಉಳಿದಿದ್ದರೋ ಅಥವಾ ಸಂಕಟಪಡುತ್ತಾ ಜೀವಿಸುತ್ತಿದ್ದಾರೋ ಎಂದು.
  • ಅಕ್ಟೋಬರ್ 1 ರಂದು ರಾತ್ರಿ ಪ್ರಾರಂಭವಾದ ಪ್ರವಾಹವು ಅಕ್ಟೋಬರ್ 2 ರಂದು ಪೂರ್ಣಪ್ರಮಾಣದಲ್ಲಿ ಇತ್ತು. ಆದರೆ ರಾಯರ ಭಕ್ತರಾರೂ ಕೈಕಟ್ಟಿ ಕುಳಿತಿಲ್ಲ. ನಮ್ಮ ರಾಯರ ಊರು ಎನ್ನುವ ಅಭಿಮಾನಿಗಳೆಲ್ಲರೂ 3ನೇ ತಾರೀಕಿನಿಂದಲೇ ಧಾವಿಸಿ ಬಂದು ಮಂತ್ರಾಲಯ ಗ್ರಾಮದ ಸ್ವಚ್ಛತೆಯಲ್ಲಿ ತೊಡಗಿದರು. ಇವರೆಲ್ಲ ರಾಯರ ಮಹಿಮೆಗೆ ತಲೆ ಬಾಗಿ ಬಂದವರು ಹೌದೋ ಅಲ್ಲವೋ?
  • ಈ ಹತ್ತು ವರ್ಷಗಳಲ್ಲಿ ಶ್ರೀಗುರುರಾಜರು ತಮ್ಮ ಪೀಠದಲ್ಲಿ ಕುಳಿತ ಶ್ರೀಶ್ರೀಸುಯತೀಂದ್ರತೀರ್ಥ ಶ್ರೀಪಾದರ ಮತ್ತು ಶ್ರೀಶ್ರೀಸುಬುಧೇಂದ್ರತೀರ್ಥ ಶ್ರೀಪಾದರ ಮೂಲಕ ಮಂತ್ರಾಲಯದಲ್ಲಿ ಮಾಡಿಸಿರುವ ಅಭಿವೃದ್ಧಿಕಾರ್ಯಗಳನ್ನು ರಾಯರ ಮಹಿಮೆ ಎಂದು ಕರೆಯದೆ ಪಿ.ಡಬ್ಲು.ಡಿ ಕೆಲಸಗಳು ಎಂದು ಕರೆಯಬೇಕೇ?
  • ಪ್ರವಾಹ ಬಂದಿದ್ದು ಮಂತ್ರಾಲಯದಲ್ಲಿ ಮಾತ್ರ. ಆದರೆ ಇದರ ಪರಿಹಾರಗಳ ಕಾರ್ಯಕ್ರಮದಡಿ ಮಂತ್ರಾಲಯದಿಂದ ದೂರದ ಸ್ಥಳಗಳಲ್ಲಿಯೂ ಕೂಡ ಮಠದಿಂದ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಇದನ್ನು ರಾಯರ ಮಹಿಮೆ ಎನ್ನುವಿರೋ ಅಥವಾ ಯಾವುದೋ ಒಂದು ಕಂಪನಿಯ ಸಿ.ಎಸ್.ಆರ್ ಎನ್ನುವಿರೋ?

ಸೌಭಾಗ್ಯವುಳ್ಳವರೆಲ್ಲ ಇಲ್ಲಿಗೇ ಬಂದು ಸೇವೆ ಮಾಡಿದರು. ಇವರೆಲ್ಲರಿಗೂ ಕೃತಾರ್ಥ ಭಾವನೆ ಬಂದಿದ್ದೇ ಮಂತ್ರಾಲಯ ಕ್ಷೇತ್ರದಲ್ಲಿ ತಮಗೊಂದು ಸೇವಾ ಅವಕಾಶ ಸಿಕ್ಕಿದೆ ಎಂದು. ಆದರೆ ಮಂದಭಾಗ್ಯರು ಕಣ್ಣ ಮುಂದೆಯೇ ನಡೆದ ಮಹಿಮೆಗಳನ್ನು ಹೃದಯದಿಂದ ಗ್ರಹಿಸದೆ 10 ವರ್ಷಗಳಾದರೂ ಇನ್ನೂ ಹಲುಬುತ್ತಾ ಕೂತಿದ್ದಾರೆ.

ಶ್ರೀರಾಯರು ಮಾತ್ರವಲ್ಲ. ಅನೇಕ ಮಹಿಮೋಪೇತರು ನಮ್ಮ ಮಧ್ವಮತದಲ್ಲಿ ಆಗಿಹೋಗಿದ್ದಾರೆ. ಇವರುಗಳ ಮಹಿಮೆಯ ಪ್ರಭಾವಕ್ಕೆ ಒಳಗಾಗಿ ಪ್ರಕೃತಿಯೂ ಕೂಡ ತನ್ನ ನಿಲುವನ್ನು ಬದಲಿಸಿರುವ ಅನೇಕ ಉದಾಹರಣೆಗಳು ಲಭ್ಯ. ನೀವು ಗುಣಗ್ರಾಹಿಗಳಾಗಿದ್ದರೆ ಮಾತ್ರ ಇಂತಹ ಸೂಕ್ಷ್ಮವಿಷಯಗಳು ಮನಸ್ಸಿಗೆ ನಾಟುತ್ತವೆ. ಅಷ್ಟೆ.

ಇನ್ನು ಪರಿಮಳಪ್ರಸಾದವು ಶಾಲಗ್ರಾಮವಾಗಿ ಪರಿವರ್ತನೆಯಾದ ವಿಷಯವನ್ನು ನೋಡುವಾ

ರಾಯರನ್ನು ಪವಾಡಪುರುಷರೆಂಬ ಸೀಮಿತ ಅರ್ಥದಲ್ಲಿ ನೋಡುವುದು ಅಶಾಸ್ತ್ರೀಯವಾದ ವಿಚಾರ. ಶ್ರೀಹರಿವಾಯುಗುರುಗಳ ನಿರಂತರ ಧ್ಯಾನದಲ್ಲಿ ಇರುವ ಅವರನ್ನು ಮಾಧ್ಯಮವಾಗಿಟ್ಟುಕೊಂಡು ಶ್ರೀಹರಿಯು ತನ್ನ ಮಹಿಮೆಗಳನ್ನು ತೋರುವನು. ಗುರುರಾಜರು “ನಾನು ಪವಾಡವನ್ನು ಮಾಡುವೆನು” ಎಂದು ಎಲ್ಲಿಯೂ ಹೇಳಿಲ್ಲ. ಆದರೆ ನನ್ನನ್ನು ನಂಬಿದ ಜನರಿಗೆ ಹರಿಸರ್ವೋತ್ತಮ ವಾಯುಜೀವೋತ್ತಮನೆನ್ನುವ ದಾರಿಗೆ ತರುತ್ತೇನೆ ಎನ್ನುವ ಜವಾಬ್ದಾರಿಯನ್ನು ಮೇಲಿಂದ ಮೇಲೆ ವ್ಯಕ್ತಮಾಡಿದ್ದಾರೆ. ಇದನ್ನು ಅವರ ಮೂರೂ ಅವತಾರಗಳಲ್ಲಿ ಸ್ಪಷ್ಟವಾಗಿ ತೋರಿಸಿದ್ದಾರೆ.

  1. ಶ್ರೀನೃಸಿಂಹದೇವರು ಕರೆದಾಗ್ಯೂ ಹೋಗದೆ, ತನ್ನ ಹಿಂಬಾಲಕರನ್ನು ಸರಿದಾರಿಗೆ ತಂದು ಅವರನ್ನೂ ಕರೆದುಕೊಂಡು ಬರುವೆ ಎಂದು ಪ್ರಹ್ಲಾದನಾಗಿದ್ದಾಗ ಹೇಳುವ ಮೂಲಕ
  2. ಸರ್ವಕಾಲೀನ ಶ್ರೇಷ್ಠವಾದ ವೇದಾಂತಗ್ರಂಥಗಳನ್ನು ರಚಿಸಿ ಮಾಧ್ವರಿಗೆ ಶಾಶ್ವತವಾದ ಮರ್ಯಾದೆಯನ್ನು ಕಲ್ಪಿಸುವ ಮೂಲಕ
  3. ಗ್ರಂಥಗಳ ಮೂಲಕ ಸಾರಸ್ವತಲೋಕಕ್ಕೂ ಮತ್ತು ವಾತ್ಸಲ್ಯದ ಮೂಲಕ ಭಕ್ತಕೋಟಿಗೂ ಇಂದಿಗೂ ಆಪ್ಯಾಯಮಾನರಾಗುವ ಮೂಲಕ
    ಗುರುಗಳು ಯಾವಾಗಲೂ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿಯೇ ನಿರ್ವಹಿಸಿದ್ದಾರೆ.

ತಮ್ಮ ಗ್ರಂಥಗಳ ಮೂಲಕ ಶ್ರೀರಾಯರು ಶ್ರೀವಾಯುಜೀವೋತ್ತಮತ್ವ ಮತ್ತು ಶ್ರೀಹರಿಸರ್ವೋತ್ತಮತ್ವವನ್ನು ತಿಳಿಸಿಕೊಡುವ ಪರಿಯು ಸಹಜವಾಗಿಯೆ ವಿದ್ವಾಂಸರಿಗೆ ಹೆಚ್ಚು ಆಪ್ತ. ಆದರೆ ಗ್ರಂಥಗಳನ್ನು ಅರಿಯಲಾರದ ನಮ್ಮಂತಹವರಿಗೆ ಸರ್ವೋತ್ತಮನ ಹಿರಿಯೆಮನ್ನು ಅವರು ಮಹಿಮೆಗಳ ಮೂಲಕವೇ ತೋರಿಸಬೇಕು. ಅದು ನಮಗೆ ಸುಲಭವಾಗಿ ಅರ್ಥವಾಗುತ್ತದೆ. ಸತ್ತ ಮಗುವನ್ನು ಬದುಕಿಸಿದ್ದು, ಒನಕೆಯನ್ನು ಚಿಗುರಿಸಿದ್ದು, ಮಾಂಸವನ್ನು ಫಲಗಳನ್ನಾಗಿ ಪರಿವರ್ತಿಸಿದ್ದು ಮೊದಲಾದ ಘಟನೆಗಳೆಲ್ಲವನ್ನೂ ಅವರು ಶ್ರೀಹರಿಯ ಸಾಮರ್ಥ್ಯವನ್ನು ನಮಗೆ ತೋರಿಸಲು ಮಾಡಿದ ಘಟನೆಗಳೇ ಹೊರತು ತಮ್ಮ ಗರಿಮೆಯನ್ನು ತೋರಿಸಲು ಮಾಡಿದ ಪವಾಡಗಳಲ್ಲ. ಹಾಗೆ ತಿಳಿಯುವುದೇ ಆದಲ್ಲಿ ನಾವು ಅವರನ್ನು ಸಾಧಾರಣ ದೊಂಬರವನ ಮಟ್ಟಕ್ಕೆ ಇಳಿಸಿದ ಹಾಗೆಯೇ ಸರಿ. ಈ ರೀತಿಯಾದ ಹರಿಯ ಮಹಿಮೆಗಳನ್ನು ರಾಯರ ಮೂಲಕವಾಗಿ ನೋಡಿದ ಅನುಭವಿಸಿದ ಸಾವಿರಾರು ಜನರು ಮಧ್ವಮತದ ಅನುಸಾರಿಗಳಾಗಿದ್ದಾರೆ. ಶ್ರೀರಾಯರ ಉದ್ದೇಶವೇ ಅದು. ಸರಿದಾರಿಗೆ ತರುವುದು ಮಾತ್ರವೇ. ನಂಬಿಕೆಯಿದ್ದವರು ಅವರನ್ನು ಹಿಂಬಾಲಿಸಿಕೊಂಡೇ ಇರುತ್ತಾರೆ. ಈ ನಂಬಿಕೆಯೇ ಅವರ ಮೇಲೆ ಅದಮ್ಯವಾಗಿ ಬೆಳೆವ ಪ್ರೇಮಕ್ಕೆ ಕಾರಣವಾಗಿದೆ. ಹೀಗಾಗಿ ಇವರನ್ನು ಪವಾಡಪುರುಷರೆಂದು ಹೇಳದೆ ಮಹಿಮೆಯುಳ್ಳ ಗುರುಗಳು ಎಂದು ಹೇಳುವುದು ಸರಿ ಎಂದು ನನ್ನ ಅಭಿಪ್ರಾಯ.

ವೃಂದಾವನಪ್ರವೇಶದ ನಂತರವೂ ರಾಯರ ಸಾವಿರಾರು ಮಹಿಮೆಗಳು ಅವರ ಭಕ್ತರ ಜೀವನದಲ್ಲಿ ನಡೆದಿವೆ. ಆದರೆ ಇವುಗಳಲ್ಲಿ ಭಕ್ತರೇ ಕಲ್ಪನೆ ಮಾಡಿಕೊಂಡಿರಬಹುದಾದ ಅನೇಕ ಘಟನೆಗಳು ಸೇರಿರುವ ಸಾಧ್ಯತೆ ಇಲ್ಲದಿಲ್ಲ. ಅಶಾಸ್ತ್ರೀಯವಾದ ವ್ಯವಹಾರಗಳನ್ನು ಕೂಡ ಶ್ರೀರಾಯರ ಮಹಿಮೆ ಎಂದು ಬರೆದುಕೊಂಡಿರುವ ಕೆಲವು ಭಕ್ತರನ್ನು ನಾನು ನೋಡಿದ್ದೇನೆ. ಉದಾ: ವಿದೇಶದಲ್ಲಿ ವಿಸಾ ಅವಧಿ ಮುಗಿದ ನಂತರ ಕಾನೂನು ಬಾಹಿರವಾಗಿ ನೆಲೆಸಿದ್ದು, ಪೋಲಿಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ರಾಯರ ಜಪವನ್ನು ಮಾಡಿದೆ, ಅವರು ನನ್ನನ್ನು ಉಳಿಸಿದರು ಎನ್ನುವ ಕೆಲವು ಘಟನೆಗಳು ಇಂಟರ್ ನೆಟ್ಟಿನಲ್ಲಿ ಇವೆ. ತಿಳಿದೂ ಮಾಡಿದ ಇಂತಹ ಅಪರಾಧವು ಅಧರ್ಮವೇ ಹೌದು. ಇವುಗಳಿಗೆಲ್ಲ ರಾಯರು ಬೆಂಬಲಿಸರು. ಇಂತಹ ಕೆಲವು ವಿಷಯಗಳನ್ನು ಭ್ರಾಂತಿ ಎನ್ನಲೂಬಹುದೇನೋ. ಆದರೆ ಎಲ್ಲವನ್ನೂ ಈ ಒಂದು ವರ್ಗದಲ್ಲಿಯೇ ನೋಡಲು ಆಗದು.

ಬಾಗಲಕೋಟೆಯ ಭಕ್ತರ ಮನೆಯಲ್ಲಿ ಶಾಲಗ್ರಾಮಗಳು ಪ್ರತ್ಯಕ್ಷವಾದ ಘಟನೆಯು ಈಗ ಸಧ್ಯಕ್ಕೆ ಚರ್ಚೆಯ ವಿಷಯವಾಗಿದೆ. ಮೊದಲು ಪರಿಮಳಪ್ರಸಾದವು ಶಾಲಗ್ರಾಮವಾಗಿವೆ ಎಂದೂ, ಮಂತ್ರಾಕ್ಷತೆಗಳು ಶಾಲಗ್ರಾಮವಾಗಿವೆ ಎಂದೂ ಎರಡು ರೀತಿಯ ಹೇಳಿಕೆಯನ್ನು ನಾನು ಫೇಸ್ ಬುಕ್ಕಿನಲ್ಲಿ ಗಮನಿಸಿದೆ. ಟಿವಿಯಲ್ಲಿ ಕೂಡ ಈ ವಿಷಯ ಬಂದಿತಂತೆ.

ಈಗಿನ ಕಾಲದಲ್ಲಿಯೂ ಈ ರೀತಿಯ ಘಟನೆಯು ನಡೆಯಲಿ ಸಾಧ್ಯವೇ? ಇದು ಮೂಢನಂಬಿಕೆ? 21ನೆಯ ಶತಮಾನವಿದು. ನೆಮ್ಮದಿಯ ಬದುಕಿಗೆ ನಂಬಿಕೆ ಇರಬೇಕು (ಅಂದರೆ ಮೂಢನಂಬಿಕೆ ಇರಬಾರದು ಎನ್ನುವ ಅರ್ಥ) ಎನ್ನುವ ಅನೇಕ ಕಮೆಂಟುಗಳು ಮಧ್ವಬ್ರಾಹ್ಮಿನ್ಸ್ ಗ್ರೂಪಿನಲ್ಲಿ ಬಂದಿವೆ. ಮತ್ತೊಬ್ಬರಂತೂ “ಅಕ್ಷಂತಿ ಉಂಡಿ ಇಟ್ಟು ಸುಳ್ಳೇ ಸಾಲಿಗ್ರಾಮ ಅಂತ ಹೇಳ್ತಾರ, ಪರಿಮಳ ಪ್ರಸಾದ ಇದ್ದಿದ್ದು ಎಷ್ಟು ಶಾಲಿಗ್ರಾಮ ಆಗಿದ್ದು ಎಷ್ಟು? ” ಎನ್ನುವ ಅಡಿಟಿಂಗ್ ಕೆಲಸವನ್ನೂ ಶುರುಮಾಡಿದ್ದಾರೆ “

ವಾಸ್ತವವಾಗಿ ಹೇಳಬೇಕೆಂದರೆ ಹಿಂದೆ ಮುಂದೆ ತಿಳಿಯದೆ ಖಂಡಿಸುವುದೂ ಮತ್ತು ಕೇವಲ ಭಾವನೆಗಳಿಗೆ ವಶರಾಗಿ ವಾದವನ್ನು ಮಂಡಿಸುವುದು ಎರಡೂ ತಪ್ಪು.

ಗುರುಗಳ ಕೃಪೆಯು ಚೆನ್ನಾಗಿ ಆಗುವುದೇ ಇದ್ದರೆ ಶಾಲಗ್ರಾಮಗಳಾಗಿ ಪರಿವರ್ತನೆಯಾಗುವ ಅಗತ್ಯವೇನಿಲ್ಲ. ಮನೆಯಲ್ಲಿ ಇರುವ ಪ್ರತಿಮೆಗಳನ್ನೇ ಚೆನ್ನಾಗಿ ಪೂಜೆ ಮಾಡುವ ಬುದ್ಧಿಯನ್ನು ಅವರು ದಯಪಾಲಿಸಬಲ್ಲರು. ಶಾಸ್ತ್ರವನ್ನು ಓದುವ, ಶಾಸ್ತ್ರ ಹೇಳಿದಂತೆ ಜೀವಿಸುವ ಬದಲಾವಣೆಯನ್ನು ಅವರು ನಮ್ಮ ಜೀವನದಲ್ಲಿ ತರಬಲ್ಲರು. ಆ ಒಂದು ಬದಲಾವಣೆಯು ನಮ್ಮ ಯೋಗ್ಯತೆಯ ಮೇಲೆ ಅವಲಂಬಿತವಾಗಿದೆ. ಯೋಗ್ಯತೆಯು ಚೆನ್ನಾಗಿದ್ದರೆ ನಮ್ಮ ಉನ್ನತಿಯು ಪರಿಮಳಪ್ರಸಾದ ಅಥವಾ ಮಂತ್ರಾಕ್ಷತೆಯು ನಮ್ಮ ಮನೆಯ ಒಳಗೆ ಬಂದ ಕ್ಷಣದಿಂದಲೇ ಆಗಬಹುದು. ಗುರುಗಳ ಚಿಂತನೆಯನ್ನು ನಾವು ಮಾನಸಿಕವಾಗಿ ಮಾಡುವ ಮೂಲಕವೂ ಆಗಬಹುದು. ಇದಕ್ಕೆ ಮಂತ್ರಾಕ್ಷತೆಯು ಶಾಲಗ್ರಾಮವಾಗಿ ಬದಲಾಗಲೇಬೇಕೆಂದು ಏನೂ ಇಲ್ಲ. ಇದಾವುದೂ ಅಲ್ಲದೆ ಹೀಗೆ ವಿಲಕ್ಷಣವಾದ ರೀತಿಯಲ್ಲಿ ಮಂತ್ರಾಕ್ಷತೆ/ಪರಿಮಳ ಪ್ರಸಾದವು ಶಾಲಗ್ರಾಮಗಳಾಗಿ ಬದಲಾಗಿದ್ದು ಈಗಿನ ಕಾಲದಲ್ಲಿ ನಂಬಲು ಕಷ್ಟ. ಈಗಿನ ಕಾಲದಲ್ಲಿ ನಾವು ಕಲಿಮಲದಿಂದ ಹೊಲಸುಗೊಂಡಿರುವುದೇ ಈ ಒಂದು ಸಂಶಯಕ್ಕೆ ಕಾರಣವಾಗಿದೆ. ಈ ಸಂಶಯವನ್ನು ನಿವಾರಿಸುವ ಹೊಣೆಗಾರಿಕೆಯು ಆ ಮನೆಯವರ ಮೇಲೆಯೇ ಇದೆ. ಶ್ರೀರಾಯರೇ ಅವರ ಮನೆಯಲ್ಲಿ ಶಾಲಗ್ರಾಮಗಳನ್ನು ಇರಿಸಿದ್ದಾರೆ ಎಂದು ಅವರು ದೃಢವಾಗಿ ನಂಬಿದ್ದೇ ಆದಲ್ಲಿ ನಾವು ಬೇರೆಯವರು ನಂಬಿದರೆಷ್ಟು ಬಿಟ್ಟರೆಷ್ಟು? ಅವರ ನಂಬಿಕೆಯೇ ಮುಂದುವರೆಯಲಿ. ಆದರೆ ಅವರ ಮಾತು ನಿಜವಾದುದೇ ಆದಲ್ಲಿ ಶ್ರೀರಾಯರಿಗೆ ಪ್ರೀತಿಯಾಗುವಂತೆ ಮಧ್ವನಿಷ್ಠೆ, ಆಚಾರ ವ್ಯವಹಾರಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಅವರು ರೂಢಿಸಿಕೊಳ್ಳಬೇಕು. ಒಂದು ವೇಳೆ ಈ ಆಚರಣೆಗಳು ರೂಢಿಯಲ್ಲಿ ಇದ್ದರೆ ಇನ್ನೂ ಹೆಚ್ಚಿನ ಒಂದು ಸಾಧನೆಯನ್ನು ಶ್ರೀರಾಯರು ಅವರಿಂದ ನಿರೀಕ್ಷಿಸುತ್ತಿರಬಹುದೇನೋ. ಅದನ್ನು ಅವರೇ ಆತ್ಮಾವಲೋಕನ ಮಾಡಿಕೊಂಡು ತಿಳಿದುಕೊಳ್ಳಬೇಕು. ಆ ಒಂದು ಬದಲಾವಣೆಯು ಅವರ ಜೀವನದಲ್ಲಿ ಬರಬೇಕು. ಈ ಬದಲಾವಣೆಯು ಆದಷ್ಟು ಬೇಗ ಬರದೆ ಹೋದಲ್ಲಿ ಇದೊಂದು ಕಟ್ಟುಕಥೆಯೇ ಆಗಿ ಉಳಿಯುತ್ತದೆ.

ಒಂದು ವೇಳೆ ಪರಿಮಳಪ್ರಸಾದವನ್ನು ಯಾರೋ ತೆಗೆದುಕೊಂಡು ಹೋಗಿ ಮನೆಯ ಯಜಮಾನರಿಗೆ ಗೊತ್ತಿಲ್ಲದೆ ಆ ಜಾಗದಲ್ಲಿ ಶಾಲಗ್ರಾಮಗಳನ್ನು ಇರಿಸಿಹೋಗಿದ್ದರೂ ಕೂಡ ಅದೊಂದು ರೀತಿಯಿಂದ ಶ್ರೀಗುರುಗಳ ಮಹಿಮೆಯೇ ಹೌದು. ಆದರೆ ಅದನ್ನೂ ಕೂಡ ಅವರೇ ಕಂಡುಕೊಳ್ಳಬೇಕು.

ಪರಿಮಳಪ್ರಸಾದ, ಮಂತ್ರಾಕ್ಷತೆ, ಮೃತ್ತಿಕೆ ಇಷ್ಟ್ಯಾಕೆ ಕಾವಿ ವಸ್ತ್ರವೂ ಕೂಡ ನಮಗೆಲ್ಲ ಮಂಗಲಸೂಚಕಗಳು. ನಮ್ಮ ಮನೆಯಲ್ಲಿ ಇವುಗಳಲ್ಲಿ ಒಂದಾದರೂ ಬಂದರೆ ಸಾಕು ನಮ್ಮ ಇಷ್ಟಾರ್ಥಗಳೆಲ್ಲ ಸಿದ್ಧಿಯಾಗುತ್ತವೆ ಎಂದು ಸಂತಸಪಡುವ ಭಕ್ತರು ನಾವೆಲ್ಲ. ಇವೆಲ್ಲವುಗಳ್ಳೆದರಲ್ಲಿಯೂ ನಾವು ರಾಯರನ್ನು ಕಾಣಲು ಸಾಧ್ಯವಿದೆ. ಆದರೆ ರಾಯರಿಗೆ ಇವುಗಳಿಗಿಂತಲೂ ಇಷ್ಟವಾಗುವ ಸ್ಥಳವು ಒಂದಿದೆ. ಅದು ಯಾವುದೆಂದರೆ ಅವರ ಗ್ರಂಥಗಳು. ಶಾಲಗ್ರಾಮಗಳಷ್ಟೇ ಪವಿತ್ರವಾದವು ಅಕ್ಷರಗಳು. ಅವುಗಳು ವೇದವ್ಯಾಸದೇವರ ಮಂದಿರಗಳು. ಶ್ರೀಮಧ್ವರು, ಶ್ರೀಜಯಾರ್ಯರು, ಶ್ರೀವ್ಯಾಸರಾಜರು, ಶ್ರೀ ವಾದಿರಾಜರು, ಶ್ರೀವಿಜಯೀಂದ್ರರು, ಶ್ರೀರಾಯರು ಬರೆದ ಅಕ್ಷರಗಳೆಂದರೆ ಅವುಗಳಲ್ಲಿ ಶ್ರೀಮಧ್ವರ, ಶ್ರೀವೇದವ್ಯಾಸದೇವರ ನಿತ್ಯ ಸನ್ನಿಧಾನವಿರುತ್ತದೆ. ಶಾಲಗ್ರಾಮಗಳು ಕಂಡು ಬಂದ ಮನೆಯಲ್ಲಿ ಸುಧೆಯು ಬರಲಿ, ನ್ಯಾಯಾಮೃತವು ಬರಲಿ, ಪರಿಮಳಗ್ರಂಥವು ಕೂಡ ಬರಲಿ ಎಂದು ಆಶಿಸೋಣ.

ಇನ್ನು ಪೂರ್ವಾಪರ ತಿಳಿಯದೇ, ಕೇವಲ ಕಮೆಂಟು ಮಾಡಲೇಬೇಕು ಎನ್ನುವ ಹಟದಿಂದ “ಅಕ್ಷಂತಿ ಉಂಡಿ ಇಟ್ಟಾರ, ಸುಳ್ಳೇ ಹೇಳ್ಯಾರ, ಪರಿಮಳ ಪ್ರಸಾದ ಎಷ್ಟು ಇದ್ದವು?” ಎನ್ನುವ ಮಾತನ್ನು ಹೇಳುವವರು  ತಮ್ಮ ಮಾತಿಗೆ ಆಧಾರಗಳನ್ನು ಇಟ್ಟುಕೊಂಡು ಮಾತನಾಡಿದರೆ ಸೂಕ್ತವಾಗಿರುತ್ತದೆ. ಇಲ್ಲವಾದಲ್ಲಿ ಅವರ ಕಮೆಂಟಿಗೆ ಕೇವಲ ಅಸೂಯೆಯೊಂದೇ ಕಾರಣ ಎನ್ನಬೇಕಾಗುತ್ತದೆ ಅಷ್ಟೇ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

One Comment

  1. ರಘು
    January 22, 2019
    Reply

    test

Leave a Reply to ರಘುCancel reply

This site uses Akismet to reduce spam. Learn how your comment data is processed.