ಶ್ರೀರಾಯರ ಔನ್ನತ್ಯ ಮತ್ತು ಶ್ರೀವಿದ್ಯಾಧೀಶರ ವಿನಯ

“ಕರೆದರೆ ಬರಬಾರದೆ ಅಂದ ತಕ್ಷಣ ಬಂದೇ ಬಿಡ್ತಾರೆ ಅಲ್ವೇನು ರಾಯರು” ಅನ್ನುತ್ತಲೇ ನಮ್ಮ ಪ್ರೀತಿಯ ಪಲಿಮಾರು ಶ್ರೀಗಳು ಶ್ರೀರಾಯರ ಅಭಿಷೇಕಕ್ಕೆ ಅಣಿಯಾದರು ಇಂದು ಬೆಳಿಗ್ಗೆ.

ಶ್ರೀಗುರುಸಾರ್ವಭೌಮರೆಂದರೆ ಶ್ರೀವಿದ್ಯಾಮಾನ್ಯರಿಗೆ ಬಹಳ ಪ್ರೀತಿ ಮತ್ತು ಆದರ ಎಂದು ನಾನು ಕೇಳಿದ್ದೆ. ಶ್ರೀರಾಯರ ಹಲವಾರು ಮಹಿಮೆಗಳಿಗೆ ಅವರು ಸ್ವತಃ ಸಾಕ್ಷಿಗಳಾಗಿರುವುದನ್ನು ನಾನು ಓದಿ ಬಲ್ಲೆ. ಅದಮಾರು ಶ್ರೀಗಳು ಪ್ರತಿನಿತ್ಯ ಬೆಳಿಗ್ಗೆ 330ಕ್ಕೆ ಸ್ನಾನಕ್ಕೆ ಮಧ್ವಸರೋವರಕ್ಕೆ ಹೋಗುತ್ತಾರೆ. ಹೋಗುವಾಗ ರಥಬೀದಿಯಲ್ಲಿರುವ ಶ್ರೀರಾಯರ ಮುಂದೆ ತಲೆಬಾಗಿ ಗೌರವವನ್ನು ಸಲ್ಲಿಸಿಯೇ ಮುಂದೆ ಹೋಗುವುದನ್ನು ನಾನು ಹಲವು ಬಾರಿ ನೋಡಿದ್ದೇನೆ. ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಪ್ರತಿಯೊಂದು ಉಪನ್ಯಾಸದಲ್ಲಿಯೂ ರಾಯರ ಒಂದು ಮಾತನ್ನಾದರೂ ಹೇಳುವುದನ್ನು ಕೂಡ ನೋಡಿದ್ದೇನೆ. ಸ್ವತಃ ಬಹುದೊಡ್ಡ ವಿದ್ವಾಂಸರಾದ್ದರಿಂದ ಉಪನ್ಯಾಸದಲ್ಲಿ ಹೀಗೆ ಕೋಟ್ ಮಾಡುವುದು ಸಹಜ ಎಂದುಕೊಂಡಿದ್ದೆ. ಆದರೆ ರಾಯರೆಂದರೆ ಅದೆಷ್ಟು ಭಕ್ತಿಯನ್ನು ಇಟ್ಟುಕೊಂಡಿದ್ದಾರೆ ಎನ್ನುವ ಆಳದ ಚೂರು ಪರಿಚಯ ಇಂದು ಆಯಿತು.

ನಿನ್ನೆ ರಾತ್ರಿಯೇ ಒಂದು ಹತ್ತು ಶಿಷ್ಯರಿಗೆ ಹೇಳಿ ಇಟ್ಟಿದ್ದರು. ನಾಳೆ ಬೆಳಿಗ್ಗೆ ರಾಯರ ಅಷ್ಟೋತ್ತರವನ್ನು ಮಾಡಲು ಬರಬೇಕು ಎಂದು. ಆ ಪಕ್ವ ಶಿಷ್ಯರುಗಳ ಮಧ್ಯ ನೇತಾಡಲು ಅಪಕ್ವನಾದ ನನಗೂ ಒಂದು ಕೊಂಬೆಯು ಸಿಕ್ಕಿತ್ತು. ಪೂರ್ವ ಜನ್ಮದ ಪುಣ್ಯ ಅದು.

ಲೇಟಾಗಿ ಬಂದು ಮುಜುಗರಕ್ಕೆ ಈಡಾಗಬಾರದೆಂದು ನಾನು ಎಲ್ಲರಿಗಿಂತಲೂ ಮೊದಲೇ ಬಂದು ಕೂತಿದ್ದೆ. ಶ್ರೀಕೃಷ್ಣನ ಅಭಿಷೇಕವನ್ನು ಮುಗಿಸಿ ಗುರುಗಳು ಬಂದು ಸಿಂಹಾಸನದ ಮೇಲೆ ಕೂತರು. ಯಾರೂ ಹೇಳಿದ ಸಮಯಕ್ಕೆ ಬರಲಾರರು ಎನ್ನುವ ತಮ್ಮ ಅನುಭವವು ಮತ್ತಷ್ಟು ನಿಜವಾದದ್ದನ್ನು ಕಂಡು ನಸು ನಗುತ್ತಲೇ ಹೇಳಿದ ಮಾತು ಅದು. “ಕರೆದರೆ ಬರಬಾರದೆ ಅಂದ ತಕ್ಷಣ ಬಂದೇ ಬಿಡ್ತಾರೆ ರಾಯರು” “ರಾಯರಷ್ಟು ಸುಲಭ ಯಾರೂ ಇಲ್ಲ ಜಗತ್ತಲ್ಲಿ. ನಮ್ಮ ವಿದ್ಯಾರ್ಥಿಗಳಿಗಿಂತಲೂ ಸುಲಭ” ಎನ್ನುತ್ತಾ, ರಾಯರ ಫೋಟೋವನ್ನು ನೋಡುತ್ತ ಏನೋ ಒಂದು ಸಂತಸವನ್ನು ಮುಖದಲ್ಲಿ ಮೂಡಿಸುತ್ತಾ ಕೂತರು.

ಎಲ್ಲರೂ ಬಂದ ನಂತರ ದೇವರ ಕೋಣೆಯಿಂದ ಶ್ರೀರಾಯರ ಪುಟ್ಟದೊಂದು ಮೃತ್ತಿಕಾವೃಂದಾವನವನ್ನು ತರಿಸಿಕೊಂಡು ಅಭಿಷೇಕಕ್ಕೆ ಅಣಿಯಾದರು. ಈ ವೃಂದಾವನವು ಎಷ್ಟು ಪುಟಾಣಿಗಾತ್ರದ್ದೆಂದರೆ, ಗುರುಗಳ ಹೆಬ್ಬೆರಳ ಮೇಲೆ ಆರಾಮವಾಗಿ ಕೂರುವಷ್ಟು. ಅದನ್ನು ನೋಡಿದ ತಕ್ಷಣವೇ ನನಗೆ ಹೊಳೆದದ್ದು “ಮುದ್ದುವೃಂದಾವನದ ಮಧ್ಯದೊಳಗಿಂದ ಎದ್ದು ಬರುತಾರೆ ಗುರುಗಳು” ಎನ್ನುವ ಗುರುಜಗನ್ನಾಥದಾಸರ ನುಡಿ. ಮಂತ್ರಾಲಯದ ಮೂಲವೃಂದಾವನದೊಳಗೆ ಇಂತಹ ವೃಂದಾವನಗಳು ಏನಿಲ್ಲ ಅಂದರೂ ಒಂದು 12000 ಹಿಡಿಸುತ್ತವೇನೋ. ಬೆಳ್ಳಿಯ ಪಾತ್ರೆಯಲ್ಲಿ ಅವರನ್ನು ಕೂರಿಸಿ ಗುರುಗಳು ತಾವೇ ಶ್ರೀವಾಯುಸ್ತುತಿಯನ್ನು ಹೇಳುವ ಮೂಲಕ ಅಷ್ಟೋತ್ತರವನ್ನು ಪ್ರಾರಂಭಿಸಿದರು. ಇದು ನನ್ನ ಮಟ್ಟಿಗೆ ಒಂದು ಬಹಳ ಸುಂದರವಾದ ಆತ್ಮೀಯವೆನಿಸಿದ ಕ್ಷಣ. ಕಾರಣವಿದೆ ಹೀಗನ್ನಿಸಲು.

ಸಾಮಾನ್ಯವಾಗಿ ಇತರೆಡೆಗಳಲ್ಲಿ ಸಂಸ್ಥೆಯ ಮಹಾಧಿಕಾರಿಗಳೋ, ಮ್ಯಾನೇಜರುಗಳೋ, ವಿಚಾರಣಾಧಿಕಾರಿಗಳೋ ಆಗಿದ್ದರೆ, “ಏ ಬರ್ರ್ಯಲೇ! ಅಷ್ಟೋತ್ತರ ಮಾಡ್ರಿ ಕೂತು ಇಲ್ಲೆ” ಎಂದು ಹೇಳಿ ತಾವು ಗತ್ತನ್ನು ಪ್ರದರ್ಶಿಸುವುದೇ ಹೆಚ್ಚು. ತಮ್ಮ ಕೈಕೆಳಗೆ ವಿದ್ಯಾರ್ಥಿಗಳೇನಾದರು ಇದ್ದಲ್ಲಿ ಅಷ್ಟೋತ್ತರವನ್ನು ಮಾಡುವುದು ಅವರ ಕರ್ತ್ಯವ್ಯವೆಂದೂ ಅವರ ಮೇಲೆ ದರ್ಪವನ್ನು ತೋರುತ್ತ ಅಲ್ಲಿ ಇಲ್ಲಿ ತಿರುಗುವುದು ತಮ್ಮ ಪರಮಾಧಿಕಾರವೆಂದೂ ಭಾವಿಸಿರುವ ಬಹಳ ಮಂದಿ ಅಧಿಕಾರಿಗಳನ್ನು ನಾನು ನೋಡಿದ್ದೇನೆ. ತಮಾಶೆ ಏನೆಂದರೆ ಇವರಲ್ಲಿ ಬಹಳ ಮಂದಿಗೆ ರಾಯರ ಸ್ತೋತ್ರಕ್ಕೂ ವಕ್ರತುಂಡ ಮಹಾಕಾಯ ಶ್ಲೋಕಕ್ಕೂ ವ್ಯತ್ಯಾಸ ಕೂಡ ಗೊತ್ತಿಲ್ಲ.

ನಾವೊಮ್ಮೆ ರಾಯರ ಸ್ತೋತ್ರವನ್ನು ಹೇಳುತ್ತಾ ಅಪರೋಕ್ಷೀಕೃತ ಶ್ರೀಶಃ ಸಮುಪೇಕ್ಷಿತ ಭಾವಜಃ ಎನ್ನುವಲ್ಲಿಗೆ ನಿಲ್ಲಿಸಿ ಮುಂದಿನ ಪಾದಕ್ಕೆಂದು ಕಾಯುತ್ತಿದ್ದಾಗೆ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ ಎಂಬ ಗಟ್ಟಿ ಧ್ವನಿಯು ಮೊಳಗಿತು. ಅಷ್ಟೆ! ಸರಿಯಾಗಿ ಹೇಳುತ್ತಿದ್ದ ಎಲ್ಲರಿಗೂ ದಿಕ್ಕು ತಪ್ಪಿ ಹೋಗಿ ಅವರ ಮಟ್ಟಿಗೆ ಪಂಚಭೂತಗಳೆಲ್ಲ ಒಟ್ಟಿಗೇ ನಿವೃತ್ತವಾಗಿ ಹೋದವು! ಯಾರಪ್ಪಾ ಈ ಗದಾಪ್ರಹಾರ ಮಾಡಿದ್ದು ಎಂದು ನೋಡಿದರೆ ಕಂಡಿದ್ದು ನಮ್ಮಲ್ಲರ ಮೇಲೆ ನಿಗಾ ಇಡಬೇಕಾದ ಧರ್ಮಾಧಿಕಾರಿಗಳು! ಇಂತಿಪ್ಪ ಜಗತ್ತಿನಲ್ಲಿ ನನ್ನ ತೊಳಲಾಟ ನಡೆದಿತ್ತು.

ಇನ್ನೂ ಅನೇಕ ಪಂಡಿತರುಗಳಿಗೆ ರಾಯರ ಸ್ತೋತ್ರವೆಂದರೆ ಅದೊಂದು ಎಲಿಮೆಂಟರಿ ಲೆವೆಲ್ಲಿನ ಒಂದು ಟೆಕ್ಸ್ಟ್ ಅಷ್ಟೇ! “ಆಂ! ಸುಧಾ ಓದ್ಯಾನಂತೇನು ಅಂವಾಽ? ಸೊಟ್ಟ ರಾಯರ ಸ್ತೋತ್ರ ಅರೆ ಬರ್ತದೋ ಇಲ್ಲೋ ಕೇಳಿ ನೋಡ್ರೆಲಾಽ” ಎಂಬ ಕುಹಕವು ತಿರುಚಾನೂರಿನ ಸಭೆಯಲ್ಲಿ ಬಹಳ ಸಲ ಕೇಳಿ ಬಂದಿದೆ. ರಾಯರೆಂದರೆ ಇವರಿಗೆ ಭಕ್ತಿ ಇಲ್ಲವೆಂದಲ್ಲ. ಹೃದಯಪೂರ್ವಕವಾಗಿ ರಾಯರಿಗೆ ತಲೆ ಬಾಗಿಯೆ ಬಾಗುತ್ತಾರೆ. ತಮ್ಮ ಪ್ರವಚನದ ಆದಿಯಲ್ಲಿ ರಾಯರ ಶ್ಲೋಕವನ್ನು ಹೇಳಿ ಮಂಗಲವನ್ನೂ ಮಾಡುತ್ತಾರೆ. ಆದರೆ ಮತ್ತೊಬ್ಬರ ಜ್ಞಾನದ ಬಗ್ಗೆ ಅಪಹಾಸ್ಯ ಮಾಡುವಾಗ ರಾಯರ ಸ್ತೋತ್ರವನ್ನು ಕೆಳಮಟ್ಟಕ್ಕೆ ಒಯ್ಯುತ್ತಿದ್ದೇವೆ ಎನ್ನುವ ಅರಿವು ಮಾಯವಾಗಿರುತ್ತದೆ! ಏನೆನ್ನುವುದು ಇದಕ್ಕೆ?

ಇಲ್ಲಿ ಅತ್ಯುಚ್ಚಮಟ್ಟದ ಅಧಿಕಾರವನ್ನು ಮತ್ತು ಶ್ರೇಷ್ಠ ತರಗತಿಯ ಜ್ಞಾನವನ್ನು ಹೊಂದಿದ್ದರೂ ಕೂಡ ತಮ್ಮ ನಾಜೂಕಾದ ವರ್ತನೆಯಿಂದ, ಸರಳವಾದ ವ್ಯಕ್ತಿತ್ವದಿಂದಲೇ ಎಲ್ಲರಿಂದಲೂ ವಿನಯಪೂರ್ವಕವಾಗಿ ಕೆಲಸ ಮಾಡಿಸಿಕೊಳ್ಳುವ ಶ್ರೀಗಳು ನಮ್ಮ ಯಜಮಾನರಾಗಿ ಇದ್ದಾರೆ. ಇದು ನಮ್ಮ ಸುಯೋಗ.

ತಮಗಿಂತಲೂ ಚಿಕ್ಕ ವಯಸ್ಸಿನ ಹುಡುಗರನ್ನು + ಒಬ್ಬ ದಡ್ಡನನ್ನು ಕೂರಿಸಿಕೊಂಡು, ತಾವು ದೊಡ್ಡ ಹುಡುಗನಾಗಿ, ರಾಯರ ಮುಂದೆ ಚಿಕ್ಕವನಾಗಿ ವಿನಯವಂತರಾಗಿ ಮೇಲಿಂದ ಮೇಲೆ ರಾಯರ ಹೆಸರಿನಲ್ಲಿ ಕೈಮುಗಿಯುತ್ತಾ, ಹೃದಯದಲ್ಲಿ ಅವರನ್ನು ಚಿಂತನೆ ಮಾಡುತ್ತಾ ಒಂದೊಂದೇ ಹನಿ ಹಾಲನ್ನು ರಾಯರ ಮೇಲೆ ಹಾಕುತ್ತಾ ತಾವೂ ಸ್ತೋತ್ರವನ್ನು ಹೇಳುತ್ತಾ ಅಭಿಷೇಕವನ್ನು ಮಾಡಿದರು.

ಪಾರಾಯಣವು ಅರ್ಧ ಮುಗಿದಾಗ ಶ್ರೀಈಶಪ್ರಿಯತೀರ್ಥರು ಶ್ರೀಕೃಷ್ಣನ ಅಲಂಕಾರವನ್ನು ಮುಗಿಸಿ ಬಂದರು. ಆಗ ಇವರು ತಾವು ಮಾಡುತ್ತಿದ್ದ ಅಭಿಷೇಕವನ್ನು ನಿಲ್ಲಿಸಿ ಅವರಿಗೆ ಕೊಟ್ಟು “ಮಾಡಿ ನೀವು” ಎಂದರು. ಅವರು ಮಾಡುವುದನ್ನು ನೋಡುತ್ತ ತಾವೂ ಸಂತಸಪಟ್ಟರು. ನಂತರ ತಾವೂ ಅವರೊಟ್ಟಿಗೆ ಸೇರಿ ಶ್ರೀಕೃಷ್ಣನಿಗೆ ಅರ್ಪಿತವಾದ ಎಳನೀರಿನಿಂದ ಅಭಿಷೇಕವನ್ನು ಮಾಡಿದರು. ನೀವೇ ಹೇಳಿ, ಇರುವ ಅವಕಾಶವನ್ನು ಬಿಟ್ಟುಕೊಡಲು ನಾವು ಎಷ್ಟು ಮಂದಿ ತಯಾರಿದ್ದೇವೆ? (ಸೋಮಾರಿತನದಿಂದ ಪೂಜೆ ಮಾಡುವುದನ್ನೇ ಬೇರೆಯವರಿಗೆ ಒಪ್ಪಿಸುವ ಕಳ್ಳತನ ಬೇರೆಯದೇ ವಿಷಯ).

“ಸತ್ಕಾರ್ಯವನ್ನು ನಾನು ಮಾತ್ರ ಮಾಡುವುದಲ್ಲ, ನನ್ನ ಮಾತನ್ನು ಕೇಳುವರಿಂದಲೂ, ದೇಹ ಸಂಬಂಧಿಗಳಿಂದಲೂ, ವಿದ್ಯಾಸಂಬಂಧಿಗಳಿಂದಲೂ ಮತ್ತು ಅವರಿಗೂ ಸಂಬಂಧಪಟ್ಟ ಎಲ್ಲ ಜನರಿಂದಲೂ ಅನುಸಂಧಾನಪೂರ್ವಕವಾಗಿ ಮಾಡಿಸುತ್ತೇನೆ” ಎನ್ನುವ ರಾಯರ ಮಾತನ್ನು ಅಕ್ಷರಶಃ ಕಾರ್ಯರೂಪಕ್ಕೆ ತಂದವರೆಂದರೆ ಶ್ರೀವಿದ್ಯಾಧೀಶತೀರ್ಥರೇ. ನಿಜವಾದ ಅರ್ಥದಲ್ಲಿ ವಿದ್ಯಾವಂತರಾದ್ದರಿಂದಲೆ ಗುರುಗಳಿಗೆ ರಾಯರ ಮಹತ್ವವು ಬಹಳ ಚೆನ್ನಾಗಿ ತಿಳಿದಿದೆ. ವಿದ್ಯೆಯಿಂದಲೇ ಮಾನ್ಯರಾದವರನ್ನು, ವಿಶ್ವಕ್ಕೇ ಪ್ರಿಯರಾದವರನ್ನು ಮತ್ತ ವಿದ್ಯೆಗೇ ಅಧೀಶರಾದವರನ್ನು ವಿನಮ್ರರನ್ನಾಗಿ ಮಾಡಿದ ರಾಯರ ಯೋಗ್ಯತೆ ಅದೆಷ್ಟು ಎತ್ತರದ್ದೋ ಎನ್ನುವ ಕಲ್ಪನೆಯಲ್ಲಿಯೇ ನನ್ನ ಗಂಟಲು ಉಬ್ಬಿ ಬಂದು ಮಾತು ಹೊರಡದಂತೆ ಆಗುತ್ತದೆ.

ಬಹಳ ವರ್ಷಗಳ ನಂತರ ರಾಯರ ಆರಾಧನೆಯಲ್ಲಿ ತೃಪ್ತಿ ಎನಿಸುವಂತಹ ಭಾವನೆ ಈ ವರ್ಷ ಮೂಡಿದೆ. ಗುರುಗಳ ಅಂತರ್ಯಾಮಿಯಾದ ಶ್ರೀರಾಘವೇಂದ್ರಪ್ರಭುಗಳ ಹೃದಯವಾಸಿ, ಶ್ರೀಮಧ್ವಾಂತರ್ಯಾಮಿ ವಾಸುದೇವನು ಈ ಸಮಾಧಾನವನ್ನು ಬಹುಕಾಲ ಹೀಗೆಯೇ ಇಡಲಿ. ಈ ಅರಾಧನೆಯು ಗುರುಗಳ ವಿನಯದ ಒಂದು ಮಿಂಚನ್ನು ನನ್ನಲ್ಲೂ ಬಿತ್ತಲಿ.

ಈ ವಿಡಿಯೋದಲ್ಲಿ ಬಳಸಿದ ಹಾಡಿನ ಕಾಪಿರೈಟುಗಳು ನನ್ನವಲ್ಲ. ವಾಣಿಜ್ಯ ಉದ್ದೇಶಕ್ಕೆ ಇದನ್ನು ಬಳಸುತ್ತಿಲ್ಲವಾದ್ದರಿಂದ ಹಾಡನ್ನು ಹಾಗೆಯೇ ಉಪಯೋಗಿಸಿದ್ದೆನೆ. ಪ್ರಾಯಶಃ ಅದರ ಹಕ್ಕು ಸುನಾದ ಕ್ಯಾಸೆಟ್ ಕಂಪನಿಯದ್ದಿರಬೇಕು.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.