Sacred Lullabies – I : Laali Govinda Laali

ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕೆಂದು ಅನೇಕರು ಸಂಗೀತದ ಮೊರೆ ಹೋಗುವುದು ಉಂಟು. ಅದರೆ ಸಂಗೀತವು ಮುಗಿದ ನಂತರ  ಮನಸ್ಸು ಸಮಾಧಾನಗೊಂಡಿದೆಯೋ ಅಥವಾ ಹೇಳಿಕೊಳ್ಳಲಿಕ್ಕೇ ಬಾರದ ವಿಚಿತ್ರ ದುಗುಡಗಳು ಮನಸ್ಸಿನಲ್ಲಿ ಉಂಟಾಗುತ್ತಿವೆಯೋ ಎಂದು ಸಂಗೀತವನ್ನು ಆಲಿಸಿದವರೇ ಹೇಳಬೇಕು. ಸಾತ್ವಿಕವಾದ ಆನಂದ ಉಂಟಾಗಿ ಮನಸ್ಸು ಸಮಾಧಾನಗೊಂಡಿದ್ದರೆ ಅದು ನಿಜವಾದ ಅರ್ಥದಲ್ಲಿ ಸಂಗೀತವೆಂದೂ,  ತಾಮಸಿಕ ಆನಂದವೊಂದು ಉಂಟಾಗಿ ಮನಸ್ಸು ಏನೋ ಒಂದು ಉದ್ವೇಗಕ್ಕೆ ಒಳಗಾಗಿದ್ದಲ್ಲಿ ಅದು ಸಂಗೀತದ ಹೆಸರಿನ ಗದ್ದಲವೆಂದೂ ತಿಳಿಯಬಹುದು. ನನಗೆ ಈ ವಿಷಯದಲ್ಲಿ ಸಂದೇಹವೇನೂ ಇಲ್ಲ. ಆದರೆ ಧೈ ಧೈ ಧಿಂ ಧಿಂ ಧಗ್ ಧಗ್ ಎಂದು ಎದೆಯಲ್ಲಿ ನಗಾರಿ ಬಾರಿಸುವಂತಹ ಸದ್ದು ತಾಮಸವೆಂದು ಆ ಸದ್ದಿನ ಪ್ರೇಮಿಗಳು ತಿಳಿಯದಿದ್ದರೆ ಅದು ಅವರ ಇಷ್ಟ.

ಅಂತೂ ಒಂದು ಮಾತು ನಿಜ. ಸಂಗೀತವು ಮನಸ್ಸಿನ ಮೇಲೆ ಪ್ರಭಾವವನ್ನು ಬೀರುವ ಶಕ್ತಿಯನ್ನು ಹೊಂದಿದೆ ಎನ್ನುವುದು. ಸಂಗೀತವನ್ನು ಚೆನ್ನಾಗಿ ಅಧ್ಯಯನ ಮಾಡಿದ (ಸಂಗೀತ ಕಲಿತವರು ಅಲ್ಲ) ವಿದ್ವಾಂಸರು ಹೇಳುವ ಇನ್ನೂ ಒಂದು ಅನುಭವದ ಮಾತು. “ರಾಗಗಳು ಪ್ರತಿದಿನದ ವಿವಿಧ ಕಾಲಾವಧಿಗೆ ತಕ್ಕಂತೆ ಮನುಷ್ಯನ ಮನಸ್ಸಿನ ಮೇಲೆ ಪರಿಣಾಮ ಬೀರಬಲ್ಲವು”. ಬಹಳ ಜನ ಇದನ್ನು ಅನುಭವಿಸಿದ್ದಾರೆ ಸಹ. ಅದರಂತೆ ನೂರಾರು ಕೀರ್ತನೆಗಳು ಸಹ ರಚನಗೊಂಡಿವೆ. ಈ ಎಲ್ಲ ರಾಗಗಳ ಬಗ್ಗೆ ನಾನು ಈಗ ಹೇಳುತ್ತಿಲ್ಲ. (ಹೇಳುವಷ್ಟು ಜ್ಞಾನವೂ ಇಲ್ಲ ಅನ್ನುವುದು ಸಹ ಸತ್ಯ). ರಾತ್ರಿ ಮಗುವನ್ನು ಮಲಗಿಸಲು ಹಾಡುವ ಜೋಗುಳಗಳು ಸಾಮಾನ್ಯವಾಗಿ ಆನಂದಭೈರವಿ ರಾಗದಲ್ಲಿ ಇರುವುದನ್ನು ನಾನು ಗಮನಿಸಿದ್ದೇನೆ. ಈ ಆನಂದ ಭೈರವಿ ರಾಗದಲ್ಲಿ ರಚಿತವಾದ ಒಂದಿಷ್ಟು ಲಾಲಿ ಪದಗಳನ್ನು ಕೊಡುವುದು ಈಗ ಸಧ್ಯದ ಉದ್ದೇಶ. ಅಷ್ಟೇ.

ಆನಂದಭೈರವಿಯು ಶಾಂತತೆಯನ್ನು ಕೊಡುವ ಒಂದು ರಾಗ. ದಿನವಿಡೀ ಮನಸ್ಸಿಗೆ ಉಂಟಾದ ಕಿರಿಕಿರಿಗಳನ್ನು ಈ ರಾಗವು ತೊಡೆದು ಹಾಕಬಲ್ಲದು. ಅತಿಯಾದ ಆಲೋಚನೆ ಹಾಗು ಚಟುವಟಿಕೆಗಳ ಗೂಡಾದ ಮನಸ್ಸನ್ನು ನಿ………ಧಾನವಾಗಿ, ನಿಧಾ…….ನವಾಗಿ ಆಲೋಚನೆಗಳ ಹಿಡಿತದಿಂದ ತಪ್ಪಿಸಿ, ತಣಿಸಿ, ಸಾತ್ವಿಕವಾದ ವಿಶ್ರಾಂತಿಗೆ ಕರೆದೊಯ್ಯುವ ಶಕ್ತಿ ಈ ರಾಗಕ್ಕೆ ಇದೆ. ಹೀಗಾಗಿಯೇ ಬಹುತೇಕ ಲಾಲಿ ಪದಗಳು ಈ ರಾಗದಲ್ಲಿಯೇ ಸಂಯೋಜಿತಗೊಂಡಿವೆ ಎಂದು ನನ್ನ ಅಭಿಪ್ರಾಯ.

ವಾಸ್ತವವಾಗಿ ಮಗುವನ್ನು ಉದ್ದೇಶಿಸಿ ನಾವು ಹಾಡುತ್ತೇವಾದರೂ ಮೂಲ ರಚನೆಕಾರರು ಈ ಜೋಗುಳವನ್ನು ಹಾಡಿದ್ದು ಭಗವಂತನ ಸೇವೆಯ ಅಭಿಪ್ರಾಯದಲ್ಲಿ. ಯೋಗನಿದ್ರೆ ಮಾಡುವ ಅದ್ಭುತಮಗುವಾದ[1] ಭಗವಂತನ ಪ್ರೀತಿಗಾಗಿ ಹೇಳುವ ಜೋಗುಳಪದಗಳು ಇವು. ಆ ಅದ್ಭುತಮಗುವಿನ ರಕ್ಷೆಯೇ ನಮ್ಮ ಪ್ರೇಮದ ಪ್ರತೀಕವಾದ ಈ ಮಗುವಿನ ಮೇಲೆಯೂ ಇರಲಿ ಎನ್ನುವ ಅಭಿಪ್ರಾಯದಿಂದ ದಾಸರು ಬರೆದ ಲಾಲಿಯ ಹಾಡುಗಳನ್ನು ನಾವು ಹಾಡುವುದು ಸಂಪ್ರದಾಯ.

ಲಾಲಿ ಹಾಡಿ ಮಗುವನ್ನು ಮಲಗಿಸಿದ ನಂತರ ಮನೆಯಲ್ಲಿ ಯಾರೂ ಸಹ ಮತ್ತೆ ಗೌಜಿಯನ್ನು ಎಬ್ಬಿಸಲಾರರು. ಇನ್ನಿತರ ಚಿಕ್ಕಮಕ್ಕಳು ಗಲಾಟೆ ಹಾಕಿದರೂ ಕೂಡ ಹಿರಿಯರು ಅವುಗಳನ್ನು ಮೆಲುದನಿಯಲ್ಲಿಯೇ ಗದರಿಸುವರು. ಮಗು ಸಮಾಧಾನವಾಗಿ ನಿದ್ರಿಸುತ್ತಾ ಇದ್ದರೆ ಯಾರಿಗೆ ತಾನೆ ಸಮಾಧಾನವಾಗದು?.

ಇರಿ! ಆ ಸಮಾಧಾನದ ಹಿಂದೆ ಒಂದು ಸುಂದರ ವಿಚಾರವೇ ಇದೆ. ಅದನ್ನು ಸ್ವಲ್ಪ ನೋಡೋಣ.

ಭಗವಂತ ಸರ್ವೋತ್ತಮ, ಎಲ್ಲರಿಗೂ ಹಿರಿಯ. ಅಂತಹವನಿಗೆ ಯಾಕೆ ಲಾಲಿಯ ಅಗತ್ಯ?

ನಿಜ. ಆತನಿಗೆ ಲಾಲಿಯ ಅಗತ್ಯವಿಲ್ಲ. ಆ ಲಾಲಿಯ ಅಗತ್ಯ ಇರುವುದು ನಮಗೆಯೇ. ಮಗುವಿಗೆ ಲಾಲಿ ಹಾಡಿ ಅದು ಮಲಗಿದಾಗ ನಮಗೆ ಸಮಾಧಾನ ಆಗುವಂತೆ, ಭಗವಂತನಿಗೆ ಜೋಗುಳ ಹಾಡಿದಾಗ ಅದನ್ನು ಅವನು ಸ್ವೀಕರಿಸಿ, ನಮ್ಮ ತಮವನ್ನು ಕಳೆದು, ಜಡತ್ವವನ್ನು ಸೆಳೆದು ಸಾತ್ವಿಕವಾದ ಸಮಾಧಾನವನ್ನು ಕೊಡುತ್ತಾನೆ. ಆ ಸಮಾಧಾನಕ್ಕೆ ಸಾತ್ವಿಕ ಎಂದು ಯಾಕೆ ಹೇಳಬೇಕು ಎನ್ನುವುದನ್ನು ಕೆಳಗೆ ನೋಡೋಣ.

ಸಮಾಧಾನಗಳಲ್ಲಿ ಮೂರು ವಿಧ.

  1. ಇನ್ನೊಬ್ಬರಿಗೆ ತೊಂದರೆಯನ್ನು ಕೊಟ್ಟು ನಮ್ಮ ಕೆಲಸವನ್ನು ಪೂರೈಸಿಕೊಂಡಾಗ ಆಗುವ ಸಮಾಧಾನ.
  2. ನಮ್ಮಲ್ಲಿರುವ ಕ್ಲೇಶವನ್ನು ಆತ್ಮೀಯರು ಪರಿಹರಿಸಿದಾಗ ಆಗುವ ಸಮಾಧಾನ.
  3. ಭಗವಂತನ ನಿರಂತರ ಧ್ಯಾನದಿಂದ ಉಂಟಾಗುವ ಸಮಾಧಾನ.

ಮೊದಲನೆಯದ್ದು ಪೈಶಾಚಿಕ ಮತ್ತು ಕ್ಷಣಿಕ, ಎರಡನೆಯದ್ದು ಮಾನವಿಕ ಆದರೆ ತಾತ್ಕಾಲಿಕ, ಮೂರನೆಯದ್ದು ದೈವಿಕ ಹಾಗು ಶಾಶ್ವತ.

ಶಾಶ್ವತವಾದ ಸಮಾಧಾನವೇ ಎಲ್ಲರಿಗೂ ಬೇಕಿರುವುದು. ಅಲ್ಲವೇ? ಇದು ಸುಲಭವಾಗಿಯೇ ಸಿಗುತ್ತದೆ. ಆದರೆ ಇದು ಫ್ರೀ ಆಗಿ ಸಿಗುವುದಿಲ್ಲ. ಇದಕ್ಕೆ ಶುಲ್ಕವಿದೆ. ಅದೇನೆಂದರೆ ನಾವು ಆತನಲ್ಲಿ ಮಾಡಬೇಕಾದ ನಿಸ್ವಾರ್ಥವಾದ ಮತ್ತು ದೃಢವಾದ ಸ್ನೇಹ. ನಮ್ಮ ಮಗುವಿನ ಮೇಲೆ ಹೇಗೆ ಮುಚ್ಚಟೆಯಿಂದ ಪ್ರೇಮವನ್ನು ತೋರಿಸುತ್ತೇವೆಯೋ ಅದೇ ಪ್ರೇಮವನ್ನು ಭಗವಂತನ ಮೇಲೆಯೂ ತೋರಿಸಬೇಕು. ಅದೇ ಅಲ್ಲ, ಅದಕ್ಕಿಂತ ಹೆಚ್ಚೇ ಸ್ನೇಹವನ್ನು, ಪ್ರೇಮವನ್ನು ಮಾಡಬೇಕು. ಆ ಸ್ನೇಹವೇ ಭಕ್ತಿ. ಮುಕ್ತಿ ಸಾಧನೆಗೆ ಈ ಸ್ನೇಹವೇ ಮುಖ್ಯ ಎಂದು ಶ್ರೀಮದಾಚಾರ್ಯರು ಹೇಳುತ್ತಾರೆ.[2] ಭಗವಂತನ ಮಹಿಮೆಯ ತಿಳುವಳಿಕೆಯೊಂದಿಗೆ, ಸುದೃಢವಾಗಿ, ಎಲ್ಲರಿಗಿಂತಲೂ ಅಧಿಕವಾಗಿ ಅವನಲ್ಲಿಯೇ ಮಾಡುವ ಆ ಸ್ನೇಹವೇ ಭಕ್ತಿ. ಅದುವೇ ನಾವು ಉದ್ಧಾರವಾಗುವ ಉಪಾಯ. ಭಗವಂತನ ಮಹಿಮೆಗಳು ತಾವೇ ತಾವಾಗಿ ನಮಗೆ ತಿಳಿಯುವಷ್ಟು ಯೋಗ್ಯತೆ ನಮಗೆ ಇಲ್ಲದ ಪ್ರಯುಕ್ತ ದಾಸರು ಲಾಲಿ ಹಾಡುಗಳ ಮೂಲಕ ಭಗವಂತನ ಸರ್ವೋತ್ತಮತ್ವದ ಮಹಿಮೆಗಳನ್ನು ನಮಗೆ ಸರಳವಾದ ಶಬ್ದಗಳಲ್ಲಿ ತಿಳಿಸುತ್ತಾರೆ. ಅಲ್ಲಿಗೆ ಒಂದು ಶಬ್ದ ಎರಡು ಲಾಭ ಎಂದಾಯ್ತು.

೧. ಮಗುವಿಗೆ ಪರಿಶುದ್ಧವಾದ ಲಾಲಿ, ತನ್ಮೂಲಕ ಸಾತ್ವಿಕ ನಿದ್ದೆ
೨. ನಮಗೆ ಪರಿಶುದ್ಧವಾದ ಸಮಾಧಾನ, ತನ್ಮೂಲಕ ಸಾತ್ವಿಕ ಬುದ್ಧಿ.

ಸಾತ್ವಿಕ ನಿದ್ರೆಯ ಜೊತೆ ಜೊತೆಗೆಯೇ ಮಗುವಿನ ಸಾಂಸ್ಕೃತಿಕ ಜೀವನಕ್ಕೆ ಒಂದು ದೃಢವಾದ ತಳಪಾಯವೂ ಇದರಿಂದ ಸಿಗುತ್ತದೆ.

ವಯಕ್ತಿಕವಾಗಿ ನನಗೆ ಆಗುವ ಸಂತೋಷವೇನೆಂದರೆ, ಮೈಥಿಲಿ ಮತ್ತು ಹಿರಣ್ಯಾ ಇಬ್ಬರಿಗೂ ನಿದ್ರೆ ಬರುವುದು ಶ್ರೀಶ್ರೀಪಾದರಾಜರು ರಚಿಸಿ, ಶ್ರೀವಿದ್ಯಾಭೂಷಣರು ಹಾಡಿರುವ ಲಾಲಿ ಗೋವಿಂದ ಲಾಲಿ ಎನ್ನುವ ಹಾಡು ಕೇಳಿದ ಮೇಲೆಯೇ. ಮೈಥಿಲಿಗೆ ಈಗ ಇದು ಹೆಚ್ಚು ಕಡಿಮೆ ಬಾಯಿಪಾಠವೇ ಆಗಿದೆ. ಅವಳು ತನ್ನ ಬೊಂಬೆ ಮಗಳನ್ನು ಮಲಗಿಸುವುದು ಈ ಜೋಗುಳವನ್ನು ಹಾಡುತ್ತಲೇ! ಇತರ ಮಕ್ಕಳ ಬಗ್ಗೆ, ಅವರು ಬೆಳೆಯುತ್ತಿರುವ ಶೈಲಿಯ ಬಗ್ಗೆ ನಾನು ಕಮೆಂಟ್ ಮಾಡಲಾರೆ. ಆದರೆ ಮೈಥಿಲಿಯ ಪೂರ್ವಜನ್ಮದ ಸಂಸ್ಕಾರವೂ, ಈಗ ಬೆಳೆಯುತ್ತಿರುವ ಸಂಸ್ಕಾರವೂ ಅನನ್ಯ. ಉಡುಪಿಯ ಕೃಷ್ಣಮಠದ ಸುಸಂಸ್ಕೃತ ಪ್ರಭಾವ ಯಾರ ಮೇಲೆ ಎಷ್ಜು ಪ್ರಭಾವ ಬೀರಿದೆಯೋ ಗೊತ್ತಿಲ್ಲ. ಇವಳ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಅನ್ಯ ಸಂಸ್ಕೃತಿಯ ಶಾಲೆಗಳ ನೆರಳು ಇವಳ ಮೇಲೆ ಬೀಳದಿರಲಿ.

ನಿಮ್ಮ ಮನೆಯಲ್ಲಿಯೂ ಮಗುವೊಂದು ಇದ್ದು, ನಿಮ್ಮ ಮನೆಯ ಹಿತ್ತಿಲಲ್ಲಿ ಸುಗಂಧರಾಜದ ಬಳ್ಳಿಯೋ, ಮಲ್ಲಿಗೆಯ ಬಳ್ಳಿಯೋ ಇದ್ದರೆ ಒಂದು ಒಳ್ಳೆಯ ಚಾನ್ಸ್ ನಿಮಗೆ. ಇದು ಮಾರ್ಗಶೀರ್ಷ ಮಾಸ, ಮೃದುವಾದ ಚಳಿ ಬೀಳುತ್ತಿರುವ ಸಮಯ. ರಾತ್ರಿ ಮಗುವಿಗೆ ಹೊಟ್ಟೆಗೆ ಕೊಟ್ಟು, ತುಪ್ಪಳದಂತಹ ಸ್ವೆಟರ್ ಹಾಕಿ, ಕೈ, ಅಂಗಾಲು ಹಾಗು ಕಿವಿಗಳನ್ನು ಬೆಚ್ಚಗೆ ಮುಚ್ಚಿ, ನೀವೂ ಕೂಡ ಒಂದು ಸ್ವೆಟರ್ ಹಾಕಿಕೊಂಡು ಮಗುವನ್ನು ಎತ್ತಿಕೊಂಡು ಈ ಜೋಗುಳವನ್ನು ಹಾಡುತ್ತ ಅತ್ತ ಇತ್ತ ನಿಧಾನವಾಗಿ ಓಡಾಡಿ. ಪ್ರಖರವಾದ ಲೈಟುಗಳಿದ್ದರೆ ಅದನ್ನು ಬಂದು ಮಾಡಿ. ಘಮ್ಮೆನ್ನುವ ಹೂವಿನ ಪರಿಮಳ, ಕಚಗುಳಿ ಇಡುವ ಚಳಿ, ನಿಮ್ಮ ಮುದ್ದಿನ ಖನಿ ನಿಮ್ಮ ಕೈಯಲ್ಲಿ! ಬಾಯಿ ಹಾಗು ಹೃದಯದಲ್ಲಿ ಚಿತ್ತಚೋರನ ಗುಣಗಾನ! ಇದಕ್ಕಿಂತಲೂ ಆನಂದ ಉಂಟೇ?

(ಹಿತ್ತಿಲು ಅಂದರೆ ಏನು ಅಂತ ಕೇಳದಿರಿ) ನೀವು ಫ್ಲ್ಯಾಟ್ ಸಂಸ್ಕೃತಿಯ ಭಾಗವಾಗಿ ಹೋಗಿದ್ದರೆ ಸ್ವಲ್ಪ ದಿನ ರಜೆ ಹಾಕಿ ಅಮ್ಮನ ಮನೆಗೋ, ಅಪ್ಪನ ಮನೆಗೋ ಹೋಗಿ ಬನ್ನಿ. ಎಲ್ಲರಿಗೂ ಸಮಾಧಾನ ಅದರಿಂದ. ಅಪ್ಪ ಅಮ್ಮ ಕೂಡ ಫ್ಲಾಟಿನ ಬಂದಿಗಳೇ ಆಗಿದ್ದಲ್ಲಿ ಯಾರಾದರೂ ಬಂಧುಗಳ ಮನೆಗಾದರೂ ಹೋಗಿ ಬನ್ನಿ. ಯಾಕಂದರೆ ಮಾರ್ಗಶಿರ ಮಾಸ ಬರಲು ಮತ್ತೆ ಒಂದು ವರ್ಷ ಕಾಯಬೇಕು.

ಆನಂದಭೈರವಿಯ ಬಗ್ಗೆ ಹೇಳಲು ಹೋಗಿ ಏನೇನೋ ಆಯಿತು. ಪರವಾಗಿಲ್ಲ. ನನ್ನ ಅನಗತ್ಯವಾದ ಮಾತುಗಳನ್ನು ಮರೆತು ವಿದ್ಯಾಭೂಷಣರ ಧ್ವನಿಯಲ್ಲಿ ಈ ಹಾಡನ್ನು ಕೇಳಿ/ಕೇಳಿಸಿ. ಇದು ಹರಿಯ ವಿವಿಧ ಅವತಾರಗಳನ್ನು ವಿವರಿಸುವ ಜೋಗುಳ.

ಹಾಡುವಾಗ ಅರ್ಥವನ್ನೂ ತಿಳಿದುಕೊಳ್ಳುವ ಹೃದಯ ನಮಗೆ ಇದ್ದಿದ್ದೇ ಆದಲ್ಲಿ ಅದೊಂದು ಬೋನಸ್ ಸಂತೋಷ. ಮಗುವನ್ನು ನಿದ್ದೆಗೆ ಕಳುಹಿಸುವ ಹಾಡಿನ ನೆಪದಲ್ಲಿ ನಮ್ಮನ್ನು ನಿಜವಾದ ಅರ್ಥದಲ್ಲಿ ಎಚ್ಚರಿಸುವ ಕಾರ್ಯವನ್ನು ಹರಿದಾಸರು ಮಾಡುತ್ತಾರೆ. ಈ ಅರ್ಥದಲ್ಲಿ ಮಗುವೇ ನಮ್ಮ ಜ್ಞಾನಕ್ಕೆ ಒಂದು ಕಾರಣವೂ ಆಗಿಬಿಡುತ್ತದೆ. ನಮಗೆ ಬೇಕಾಗಿರುವುದಾದರೂ ಇನ್ನೇನು?

ರಚನೆ : ಶ್ರೀಶ್ರೀಪಾದರಾಜಮುನಿಗಳು.
ರಾಗ : ಆನಂದಭೈರವಿ

ಲಾಲಿ ಗೋವಿಂದ ಲಾಲಿ ಕೌಸಲ್ಯ
ಬಾಲ ಶ್ರೀರಾಮ ಲಾಲಿ ।                   (ಪ )

ಲಾಲಿ ಮುನಿವಂದ್ಯ  ಲಾಲಿ  ಜಾನಕಿ
ರಮಣ  ಶ್ರೀ ರಾಮ  ಲಾಲಿ ।।             ( ಅ. ಪ )

ಕನಕರತ್ನಗಳಲ್ಲಿ  ಕಾಲ್ಗಳನೆ    ಹೂಡಿ
ನಾಲ್ಕು ವೇದಗಳನ್ನು  ಸರಪಣಿಯ   ಮಾಡಿ
ಅನೇಕ ಭೂಮಂಡಲವ  ಹಲಗೆಯ ಮಾಡಿ
ಶ್ರೀಕಾಂತನ  ಉಯ್ಯಾಲೆಯನು   ವಿಚಾರಿಸಿದರು ।।೧।।

ಆಶ್ಚರ್ಯಜನಕವಾಗಿ  ನಿರ್ಮಿಸಿದ
ಪಚ್ಚೆಯ ತೊಟ್ಟಿಲಲ್ಲಿ
ಅಚ್ಯುತಾನಂತನಿರಲು  ತೂಗಿದರು
ಮತ್ಸ್ಯಾವತಾರ ಹರಿಯ ।।೨।।

ಧರ್ಮಸ್ಥಾಪಕನು ಎಂದು  ನಿರ್ವಧಿಕ
ನಿರ್ಮಲ ಚರಿತ್ರನೆಂದು
ಮರ್ಮ ಕರ್ಮಗಳ ಪಾಡಿ  ತೂಗಿದರು
ಕೂರ್ಮಾವತಾರ  ಹರಿಯ ।।೩।।

ಸರಸಿಜಾಕ್ಷಿಯರೆಲ್ಲರೂ  ಜನವಶಿ
ಕರ  ದಿವ್ಯ ರೂಪನೆಂದು
ಪರಮ ಹರುಷದಲಿ ಪಾಡಿ  ತೂಗಿದರು
ವರಾಹವತಾರ  ಹರಿಯ ।।೪।।

ಕರಿ ಕುಂಭಗಳ  ಪೋಲುವ ಕುಚದಲ್ಲಿ
ಹಾರ  ಪದಕವು ಹೊಳೆಯಲು
ವರವರ್ಣಿನಿಯರು  ಪಾಡಿ ತೂಗಿದರು
ನರಸಿಂಹಾವತಾರ  ಹರಿಯ ।।೫।।

ಭಾಮಾಮಣಿಯರೆಲ್ಲರು  ಯದುವಂಶ
ಸೋಮನಿವನೆಂದು  ಪೊಗಳಿ
ನೇಮದಿಂದಲಿ ಪಾಡಿ ತೂಗಿದರು
ವಾಮನವತಾರ ಹರಿಯ ।।೬।।

ಸಾಮಜವರದನೆಂದು  ಅತುಳ  ಭೃಗು
ರಾಮವತಾರನೆಂದು
ಶ್ರೀಮದಾನಂದ  ಹರಿಯ ತೂಗಿದರು
ಪ್ರೇಮಾತಿರೇಕದಿಂದ।।೭।।

ಕಾಮನಿಗೆ ಕಾಮನೆಂದು  ಸುರಸಾರ್ವ
ಭೌಮ  ಗುಣಧಾಮನೆಂದು
ವಾಮನೇತ್ರೆಯರು ಪಾಡಿ ತೂಗಿದರು
ರಾಮಾವತಾರ ಹರಿಯ ।।೮।।

ಸೃಷ್ಟಿಯ ಕರ್ತನೆಂದು  ಜಗದೊಳಗೆ
ಶಿಷ್ಟ ಸಂತುಷ್ಟನೆಂದು
ದೃಷ್ಟಾಂತರ  ಹಿತನೆಂದು  ತೂಗಿದರು
ಕೃಷ್ಣಾವತಾರ  ಹರಿಯ ।।೯।।

ವೃದ್ಧ  ನಾರಿಯರೆಲ್ಲರೂ  ಜಗದೊಳಗೆ ಪ್ರ
ಸಿದ್ಧನಿವನೆಂದು  ಪೊಗಳಿ
ಬದ್ಧಾನುರಾಗದಿಂದ  ತೂಗಿದರು
ಬೌದ್ಧಾವಾತಾರ  ಹರಿಯ ।।೧೦।।

ತಲತಲಾಂತರದಿಂದ  ರಂಜಿಸುವ
ಮಲಯಜ ಲೇಪದಿಂದ
ಜಲಜಗಂಧಿಯರು  ಪಾಡಿ ತೂಗಿದರು
ಕಲ್ಕ್ಯಾವತಾರ ಹರಿಯ ।।೧೧।।

ಕನಕಮಯ ಖಚಿತವಾದ ತಲ್ಪದಲಿ
ವನಜಭವ ಜನಕನಿರಲು
ವನಜನಾಭನ್ನ  ಪಾಡಿ ತೂಗಿದರು
ವನಿತಮಣಿಯರೆಲ್ಲರು ।।೧೨।।

ಪದ್ಮರಾಗವ ಪೋಲುವ  ಹರಿಪಾದ
ಪದ್ಮವನುತ್ತಮ  ಹೃದಯ
ಪದ್ಮದಲಿ   ನಿಲ್ಲಿಸಿ  ಪಾಡಿ ತೂಗಿದರು
ಪದ್ಮಿನಿ ಭಾಮಿನಿಯರು ।।೧೩।।

ಹಸ್ತಭೂಷಣವ  ಮೆರೆಯಲು  ದಿವ್ಯತಾರ
ಹಸ್ತಳಗವಗಳಿಂದ
ಹಸ್ತಗಳ ಪಿಡಿದುಕೊಂಡು ತೂಗಿದರು
ಹಸ್ತಿನಿ ಭಾಮಿನಿಯರು ।।೧೪।।

ಮತ್ತ ಗಜಗಾಮಿನಿಯರು  ದಿವ್ಯತಾರ
ಚಿತ್ರ ವಸ್ತ್ರಗಳನುಟ್ಟು
ಚಿತ್ತ  ಸಂತೋಷದಿಂದ ತೂಗಿದರು
ಚಿತ್ತಿನಿ  ಭಾಮಿನಿಯರು ।।೧೫।।

ಕಂಕಣ ಧ್ವನಿಗಳಿಂದ ರಂಜಿಸುವ
ಕಿಂಕಿಣಿ ಸ್ವರಗಳಿಂದ
ಪಂಕಜಾಕ್ಷಿಯರು ಪಾಡಿ ತೂಗಿದರು
ಶಂಕಿಣಿ  ಭಾಮಿನಿಯರು ।।೧೬।।

ಚೊಕ್ಕ ಕಸ್ತೂರಿ ಪಂಕದಿಂ ರಂಜಿಸುವ
ಮಾಕರಿಕ  ಪತ್ರ ಬರೆದು
ಲಿಕುಚಾಸ್ತನಿಯರು  ಪಾಡಿ ತೂಗಿದರು
ಅಕಳಂಕ ಚರಿತ ಹರಿಯ ।।೧೭।।

ಪಲ್ಲವಧಾರೆಯರೆಲ್ಲ   ಈ ಶಿಶುವು
ತುಲ್ಯವಾರಿಜಾತವೆನುತಲಿ
ಸಲ್ಲಲಿತಗಾನದಿಂದ ತೂಗಿದರು
ಕಲ್ಯಾಣಿ ರಾಗದಿಂದ ।।೧೮।।

ಆನಂದ ಸದನದೊಳಗೆ ಗೋಪಿಯರು
ಆನಂದಸುತನ ಕಂಡು
ಆನಂದಭರಿತರಾಗಿ ತೂಗಿದರು
ಆನಂದಭೈರವಿಯಿಂದ ।।೧೯।।

ದೇವಾದಿದೇವನೆಂದು ಈ ಶಿಶುವ
ಭಾವನಾತೀತನೆಂದು
ದೇವಗಂಧರ್ವರು ಪಾಡಿ ತೂಗಿದರು
ದೇವಗಾಂಧಾರದಿಂದ ।।೨೦।।

ನೀಲ ಘನಲೀಲ ಜೋ ಜೋ ಕರುಣಾಳ
ವಾಲ ಶ್ರೀ ಕೃಷ್ಣ ಜೋ ಜೋ
ಲೀಲಾವತಾರ  ಜೋ ಜೋ ಪರಮಾತ್ಮ
ಬಾಲಗೋಪಾಲ  ಜೋ ಜೋ ।।೨೧।।

ಇಂಧುಧರನೇತ್ರ  ಜೋ ಜೋ ಶ್ರೀ ಕೃಷ್ಣ
ಇಂಧು  ರವಿನೇತ್ರ ಜೋ ಜೋ
ಇಂಧು  ಕುಲಪುತ್ರ ಜೋ ಜೋ  ಪರಮಾತ್ಮ
ಇಂದಿರಾರಮಣ  ಜೋ ಜೋ ।।೨೨।।

ತುಂಗ ಭವಭಂಗ  ಜೋ ಜೋ ಪರಮಾತ್ಮ
ರಂಗ  ಕೃಪಾಂಗ ಜೋ ಜೋ
ಮಂಗಳಾಪಾಂಗ ಜೋ ಜೋ
ರಂಗವಿಠಲನೆ  ಜೋ ಜೋ ।।೨೩।।

ಮುಂದೆ ಶ್ರೀಕನಕದಾಸರ ಕೀರ್ತನೆಯನ್ನು ಪೋಸ್ಟ್ ಮಾಡುತ್ತೇನೆ.

[1] ತಂ ಅದ್ಭುತಂ ಬಾಲಕಂ ಅಂಬುಜೇಕ್ಷಣಂ – ಭಾಗವತ

[2] ಮಾಹಾತ್ಮ್ಯ ಜ್ಞಾನಪೂರ್ವಸ್ತು, ಸುದೃಢ ಸರ್ವತೋಽಧಿಕಃ ಸ್ನೇಹೋ ಭಕ್ತಿರಿತಿ ಪ್ರೋಕ್ತಃ ತಯಾ ಮುಕ್ತಿಃ ನ ಚ ಅನ್ಯಥಾ (ಭಗವಂತನಲ್ಲಿ ಅವನ ಮಹಿಮೆಯನ್ನು ಜ್ಞಾನಪೂರ್ವಕವಾಗಿ ತಿಳಿದು, ನಿಶ್ಚಲವಾಗಿ, ಎಲ್ಲರಿಗಿಂತಲೂ ಅಧಿಕವಾಗಿ ಮಾಡುವ ಸ್ನೇಹವೇ ಭಕ್ತಿ. ಅದರಿಂದಲೇ ಮುಕ್ತಿಯು, ಬೇರೆಯದರಿಂದಲ್ಲ)

 

ಮಲಗಿದ ಮುದ್ದುಕೃಷ್ಣನ ಚಿತ್ರ iskcondesiretree ವೆಬ್ ಸೈಟಿನ ಕೃಪೆ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.