ನಾರಿ ಕುಬುಜೆಗೆ ಭೂರಿ ಸಂತಸವಿತ್ತನ

ಶ್ರೀರಾಘವೇಂದ್ರತೀರ್ಥಗುರ್ವಂತರ್ಗತ ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀವೇದವ್ಯಾಸಾಯ ನಮಃ

ಅಕ್ರೂರನು ಕಂಸನ ಮಾತು ಕೇಳುವ ಅನಿವಾರ್ಯತೆಯಿದ್ದವನು. ಇವನು ಕಂಸನ ಮಾತನ್ನು ಕೇಳಿ ವ್ರಜಭೂಮಿಯಿಂದ ಶ್ರೀಕೃಷ್ಣಬಲರಾಮರನ್ನು ತನ್ನ ರಥದಲ್ಲಿ ಮಥುರೆಗೆ ಕರೆತಂದ. ಶ್ರೀಕೃಷ್ಣನು ಮಥುರೆಗೆ ಬರುವ ವಿಷಯವು ಅಲ್ಲಿನ ವಾಸಿಗಳಿಗೆ ಮೊದಲೇ ತಿಳಿದಿತ್ತು. ಎಲ್ಲರೂ ಅವನು ಬರುವ ದಾರಿಯಲ್ಲಿ ಹೂವನ್ನು ಚೆಲ್ಲಿ ತಮ್ಮ ಭಕ್ತಿಯನ್ನು ತೋರುವ ತವಕದಲ್ಲಿ ಇದ್ದರು. ತ್ರಿವಕ್ರೆ ಎಂಬ ಅಡ್ಡಹೆಸರುಳ್ಳ ಹೆಂಗಳೆಯೊಬ್ಬಳು ಆ ಭಕ್ತರಲ್ಲಿ ಸೇರಿದ್ದಳು. ಎಷ್ಟೋ ಜನರು ಅವಳನ್ನು ಕುಬ್ಜೆ ಎಂದು ಕರೆಯುವರು. ನಿಜವಾದ ಹೆಸರೇ ಮಾಯವಾಗಿ ಹೋಗಿತ್ತು ಅವಳಿಗೆ. ತನ್ನ ದೇಹವೆಲ್ಲ ಅಂಕು ಡೊಂಕಾಗಿ ಹೋಗಿದ್ದರೂ ಚಿಂತೆಯಿಲ್ಲ, ತಾನು ಇನ್ನಿತರರ ಮೈಮನಗಳನ್ನು ಅರಳಿಸುವ ಕೆಲಸ ಮಾಡಬೇಕೆಂದುಕೊಂಡವಳು.  ಅದಕ್ಕಾಗಿ ಚಂದನ ಇತ್ಯಾದಿ ಸುಗಂಧ ದ್ರವ್ಯಗಳನ್ನು ಮಾರುವ ಕಾಯಕದಲ್ಲಿ ಆಕೆ ತೊಡಗಿದ್ದಳು.  ಆದರೆ ದುರ್ದೈವದಿಂದ ಆಕೆಗೆ ಕಂಸನಿಗೆ ಸುಗಂಧದ್ರವ್ಯಗಳನ್ನು ಪೂರೈಸುವ ಕೆಲಸ ಬಂದೊದಗಿತ್ತು.

ಆದರೆ ಆಕೆಯು ಶ್ರೀಕೃಷ್ಣನ ನಿಜ ಭಕ್ತೆ. ಶ್ರೀಕೃಷ್ಣನ ಚೆಲುವು, ಮಹಿಮೆ, ಪ್ರೇಮಮಯ ಲೀಲೆಗಳನ್ನು ಆಕೆ ನಿತ್ಯವೂ ಕೇಳಿ ಕೇಳಿ ಅವನಿಗೆ ತನ್ನ ಹೃದಯವನ್ನು ಒಪ್ಪಿಸಿಬಿಟ್ಟಿದ್ದಳು. ತನ್ನ ದೇಹದ ವಕ್ರತೆಯು ಹೃದಯದಲ್ಲಿರುವ ಕೃಷ್ಣಭಕ್ತಿಯ ದೃಢತೆಯನ್ನು ಅಡ್ಡಿಪಡಿಸಲು ಆಕೆ ಎಂದೂ ಬಿಟ್ಟಿದ್ದಿಲ್ಲ.  ಸೌಂದರ್ಯವೇ ಮೂರ್ತಿಯಾಗಿರುವ ತನ್ನ ಇನಿಯ ಶ್ರೀ ಕೃಷ್ಣನ ದೇಹಕ್ಕೆ ತಾನು ಪ್ರತಿನಿತ್ಯವೂ ಮಾನಸ ಪ್ರಪಂಚದಲ್ಲಿ ಗಂಧವನ್ನು ಲೇಪಿಸಿ ಆತನನ್ನು ಸಂತೋಷಪಡಿಸಿ, ತಾನು ಆನಂದವನ್ನು ಹೊಂದುತ್ತಿದ್ದಳು.

ಅಕ್ರೂರನು ಶ್ರೀಕೃಷ್ಣನನ್ನು ಮಥುರೆಗೆ ಕರೆದುಕೊಂಡು ಬರಲಿದ್ದಾನೆ ಎನ್ನುವ ವಿಷಯವು ಆಕೆಗೆ ತಿಳಿದದ್ದು ಕೆಲದಿನಗಳ ಹಿಂದೆಯಷ್ಟೇ. ಅದು ತಿಳಿದದ್ದೇ ತಡ ಆಕೆಯ ಹೃದಯವು ನಗಾರಿಯಾಗಿ ಬದಲಾಗಿಬಿಟ್ಟಿತು.  ಆ ಕ್ಷಣದಿಂದಲೇ ತನ್ನ ಜೀವಮಾನದ ಅತ್ಯುತ್ತಮ ಅಂಗರಾಗದ ಸಾಧನಗಳನ್ನು ಆಕೆ ತಯಾರಿಸಲು ತೊಡಗಿದಳು.  ತನ್ನ ಹೃದಯಚೋರನಿಗೆ ತನ್ನ ಕೈಯಾರೆ ಗಂಧವನ್ನು ಸವರುತ್ತಾ ಅವನನ್ನು ಸ್ಪರ್ಷಿಸುವ ಸುಖವನ್ನು, ಅವನ ಕಣ್ಣುಗಳು ತನ್ನತ್ತ ನೋಡಿದಾಗ ಆಗುವ ಭಕ್ತಿ ಉದ್ರೇಕಗಳನ್ನು ಸಾಕ್ಷಾತ್ತಾಗಿಯೇ ಅನುಭವಿಸಬೇಕು, ತಾನು ಅವನಲ್ಲಿಯೇ ಕರಗಿಹೋಗಬೇಕೆಂಬ ಉತ್ಕಟತೆಯಿಂದ ಪ್ರತಿಕ್ಷಣವೂ, ಅನುಕ್ಷಣವೂ ಸನ್ನದ್ಧಳಾಗಿ ಆಕೆ ಇಂದು ಮುಖ್ಯಬೀದಿಗೆ ಬಂದಿದ್ದಳು.

ಆದರೆ ಮನೆಯಿಂದ ಹೊರಟು ಮುಖ್ಯಬೀದಿಗೆ ಬಂದದ್ದೇ ಅವಳ ಹೃದಯವು ಬಿರಿದೇ ಹೋಯಿತು. ಅಷ್ಟೊಂದು ಗದ್ದಲ, ವಿಪರೀತ ಜನಸಂದಣಿ. ಮುಂದೆ ಹೋಗಲು ಜಾಗವೇ ಇಲ್ಲ. ಅಯ್ಯೋ ವಿಧಿಯೇ! ಇಷ್ಟೊಂದು ಜನರ ಮಧ್ಯ ತೂರಿಕೊಂಡು ಮುಂದೆ ಹೋಗುವ ಬಲವನ್ನು ಏಕೆ ಕೊಡಲಿಲ್ಲ ನನಗೆ? ಎಂದು ಮೊದಲ ಬಾರಿಗೆ ಅವಳ ಮನಸ್ಸು ವಿಧಿಯನ್ನು ಶಪಿಸಿತು. ಇಲ್ಲಿಯವರೆಗೂ ಕೃಷ್ಣನನ್ನು ಮಾನಸಾಗಸದಲ್ಲಿ ಪೂಜಿಸುತ್ತಿದ್ದ ಆಕೆಗೆ ತನ್ನ ದೈಹಿಕ ನ್ಯೂನತೆಯು ಗಮನಕ್ಕೆ ಬಂದಿದ್ದೆ ಇಲ್ಲ. ಆದರೆ ಇಂದು ಸಾಕ್ಷಾತ್ತಾಗಿ ಬರುತ್ತಿರುವ ಆತನನ್ನು ನೋಡುವ ಒಂದು ಸುವರ್ಣಾವಕಾಶವು ಕೈತಪ್ಪಿಹೋಗಲಿದೆಯಲ್ಲ ಎನ್ನುವ ದುಃಖವು ಅವಳನ್ನು ನಿಜವಾಗಿಯೂ ಕುಬ್ಜಳನ್ನಾಗಿ ಮಾಡತೊಡಗಿತು. ನೂರಾರು ಜನರ ಬೆನ್ನುಗಳ ಹಿಂದೆ, ಕಾಲ್ಗಳ ಸಂದಿಯಲ್ಲಿ ಆಕೆ ಮತ್ತೂ ಕುಗ್ಗಿಹೋಗತೊಡಗಿದಳು.

ಕಣ್ಣೀರಿನಿಂದಲೇ ಒದ್ದೆಯಾಗುತ್ತಿದ್ದ ನೆಲವನ್ನು ಆಕೆಯು ದಿಟ್ಟಿಸಿ ನೋಡುತ್ತಾ, ತನ್ನ ಅಸಹಾಯಕತೆಗೆ ಕೊರಗುತ್ತಾ ನಿಂತಿದ್ದಾಗಲೇ ಕೋಲಾಹಲವು ಜೋರಾಗತೊಡಗಿತು. ತ್ರಿಲೋಕನಾಥನಿಗೆ ಜಯವಾಗಲೆಂಬ ಘೋಷಗಳು ಮುಗಿಲನ್ನೇ ಮುಟ್ಟತೊಡಗಿದವು. ತ್ರಿವಕ್ರೆಗೆ ಜಗನ್ನಾಥನು ಬಂದನೆಂಬ ವಿಷಯದ ಅರಿವಾಯಿತು. ಆದರೇನು ಮಾಡುವುದು? ಜನರು ನಾ ಮುಂದು ತಾಮುಂದು ಎಂದು ಕಮಲಾನಾಥನನ್ನು ನೋಡಲು ಮುನ್ನುಗತೊಡಗಿದರು. ತ್ರಿವಕ್ರೆಯು ಇನ್ನಷ್ಟು ಅಸಹಾಯಳಾಗಿಹೋದಳು. ಆಕೆಗೆ ತಾನು ಘಾಸಿಗೊಳಗಾದರೂ ಚಿಂತೆಯಿಲ್ಲ. ಆದರೆ ಜನರ ಕಾಲ್ತುಳಿತಕ್ಕೊಳಗಾಗಿ ತಾನು ಸಂಪಾದಿಸಿಕೊಂಡು ಬಂದಿದ್ದ ಅಂಗರಾಗ ಸಾಧನವು ಹಾಳಾಗಬಾರದು. “ಇದೇನಿದ್ದರೂ ಸರ್ವೋತ್ತಮನ ಸೇವೆಗೆ ಮೀಸಲು” ಎಂದುಕೊಳ್ಳುತ್ತಾ, ಅಂಥಾ ನೂಕುನುಗ್ಗಲಿನಲ್ಲಿಯೂ ತನ್ನ ಪ್ರೇಮಪ್ರಜ್ಞೆಯನ್ನು ಕಳೆದುಕೊಳ್ಳದೆ ಚಂದನದ ಪುಟಾಣಿಪಾತ್ರೆಯನ್ನು ತನ್ನ ಎದೆಗೆ ಮತ್ತೂ ಮತ್ತೂ ಗಟ್ಟಿಯಾಗಿ ಒತ್ತಿಹಿಡಿದುಕೊಂಡು ತನಗೂ ಒಂದು ಅವಕಾಶಕ್ಕಾಗಿ ಹುಡುಕಾಡತೊಡಗಿದಳು. ಆದರೆ ಅದು ಇಂದು ಅಸಾಧ್ಯವೆನ್ನುವ ದುಃಖವು ದಟ್ಟವಾಯಿತು. ಸೋಲನ್ನೊಪ್ಪಿ, ಕೆಳಗೆ ಕುಸಿದು…. ಕೃಷ್ಣಾ…. ಕೃಷ್ಣಾ… ಎನ್ನುತ್ತ ಶರಣಾಗತಿಯ ಹಂತ ಬಂದದ್ದೇ ತಡ. ಜನರ ಕಾಲ್ಗಳ ಮಧ್ಯ ಒಂದೆಡೆ ಬೆಳಕಿನ ಕಿರಣವು ತೂರಿಬಂದಿತು. ಅತ್ತಲೇ ಓಡಿದಳು ಕುಬ್ಜೆ. ಅದು ಕೇವಲ ಬೆಳಕಿನ ಕಿರಣವಲ್ಲ. ಶ್ರೀಕೃಷ್ಣನತ್ತ ಕುಬ್ಜೆಗೆ ದಾರಿತೋರಿದ ಹೊನ್ನಿನ ಹೊನಲಾಗಿತ್ತು. ಕುಬ್ಜೆಯು ತನ್ನೆಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ಆ ಒಂದು ಸಂದಿಯಮೂಲಕ ತೂರಿಕೊಂಡು ಬಂದೇ ಬಿಟ್ಟಳು. ಮುಖ್ಯಬೀದಿಯ ಮುಂದಿನ ಸಾಲಿಗೆ.

ಆ ಮಹಾರಸ್ತೆಯ ಎರಡೂ ಪಕ್ಕದಲ್ಲಿ ಜನರೋ ಜನರು. ಎರಡೂ ಸಾಲುಗಳ ಮಧ್ಯ ರಥದಿಂದ ದಿವ್ಯವಾದ ಕಾಂತಿಯು ಹೊಮ್ಮುತ್ತಿದೆ. ಜನರು ಸುರಿಸುತ್ತಿದ್ದ ಲಕ್ಷಾವಧಿ ಹೂಗಳ ಮಳೆಯನ್ನು ಬೇಧಿಸಿಕೊಂಡು ಮುಕುಂದನ ಮೈಕಾಂತಿಯ ಉಜ್ವಲ ಮಯೂಖಗಳು ಎಲ್ಲರನ್ನೂ ಮುದಗೊಳಿಸುತ್ತಿದ್ದವು. ಆ ಕಿರಣಗಳು ಒಟ್ಟಾಗಿ ಸೇರಿರುವ ಜಾಗವೇ ತನ್ನ ಹೃದಯಸಾಮ್ರಾಟನಿರುವ ಸ್ಥಳ ಎಂದು ಮುಗುದೆಯು ಗುರುತಿಸಿದಳು. ಹರ್ಷವು ಆಕೆಯ ಮೈಯ ರೋಮಗಳ ಮೂಲಕ ವ್ಯಕ್ತವಾಯಿತು. ರಥವು ಹತ್ತಿರ ಹತ್ತಿರ ಬಂದಷ್ಟೂ ಆಕೆಯ ಉತ್ಕಟತೆಯು ತನ್ನ ಎಲ್ಲೆಯನ್ನು ಮೀರತೊಡಗಿತು. ಅವನು ಇನ್ನೂ ಅಷ್ಟ ದೂರ ಇರುತ್ತಲೇ ಇವಳ ಹೃದಯವು ಒಂದೇ ಸಮನೆ ಪ್ರಾರ್ಥಿಸಲು ತೊಡಗಿತು. “ಕೃಷ್ಣಾ ಬಾಪ್ಪಾ, ನನ್ನತ್ತ ಒಮ್ಮೆ ನೋಡು, ನನ್ನನ್ನು ಹತ್ತಿರ ಕರೆದುಕೋ, ಗಂಧವನ್ನು ಹಚ್ಚಿಸಿಕೊಳ್ಳೋ ನನ್ನಿಂದ” ಎಂದು. “ದೊಡ್ಡ ದೊಡ್ಡ ಸಿರಿವಂತರಿರುವ ಈ ಜನಸಂದೋಹದ ಮಧ್ಯ ನಾನು ಅವನಿಗೆ ಕಾಣಿಸಿಯೇನೇ? ನಾನು ಕಾಣಿಸದೇ ಅವನು ಮುಂದೆ ಹೋಗಿಬಿಟ್ಟರೆ ಕಷ್ಟ. ನನ್ನತ್ತ ಅವನು ಸುಲಭವಾಗಿ ನೋಡುವಂತಾಗಲಿ” ಎಂದು ಅಪಾರ ಕಷ್ಟವಾಗುತ್ತಿದ್ದರೂ ಲೆಕ್ಕಿಸದೆ ತನ್ನ ಹಿಮ್ಮಡಿಗಳನ್ನು ಎತ್ತಿ ತನ್ನ ಹೆಬ್ಬೆರಳುಗಳ ಮೇಲೆ ನಿಂತಳು. ಇಷ್ಟೆಲ್ಲ ಮಾಡಿಯೂ ಜನರ ಸಮೂಹದ ಮಧ್ಯೆ ಮುಚ್ಚಿಯೆ ಹೋದಳು.

ಜನರನ್ನು ದೂರ ತಳ್ಳಿ ಮುಂದುವರಿಯಲಾಗದೆ, ದುಃಖವನ್ನು ತಡೆಯದೆ, ಕಣ್ಣುಗಳೆರಡನ್ನೂ ಮುಚ್ಚಿ, ಕೃಷ್ಣ ಕೃಷ್ಣ…. ಎನ್ನುತ್ತಲೇ ಇರುವಂತೆ… ಜನರ ಮಧ್ಯದಿಂದ ಮತ್ತೊಮ್ಮೆ ಬಂಗಾರದ ಹೊಳೆಯಂತೆ ಬೆಳಕು ಬಂದಿತು. ಕಂಗಳ ಒಳಪಟಲಕ್ಕೆ ಆ ಬೆಳಕು ಸೋಕಿದ್ದೇ ತಡ. ಕಂಬನಿ ತುಂಬಿದ ತನ್ನ ಕಣ್ಣೆವೆಗಳನ್ನು ನಿಧಾನವಾಗಿ ತೆರೆದಳು ಕುಬ್ಜೆ. ಅಷ್ಟೇ!. ಹೃದಯವು ಒಮ್ಮೆಗೇ, ಒಂದೇ ಬಾರಿ ಸದ್ದು ಮಾಡಿ ನಿಂತೇ ಹೋದಂತಾಯಿತು. ಬಂದದ್ದು ಬೆಳಕು ಮಾತ್ರವಲ್ಲ. ತನ್ನ ಹೃದಯಪ್ರಕಾಶದ ಒಡೆಯನೇ ನಡೆದು ಬಂದಿದ್ದ! ಬಂದು ನಿಂತದ್ದು ಮಾತ್ರವಲ್ಲ ಅವನು ತನ್ನನ್ನೇ ನೋಡುತ್ತಿದ್ದಾನೆ. ಎಂಬುದೂ ಅರಿವಾಯಿತು ಅವಳಿಗೆ. ಅರೆ, “ನನ್ನತ್ತ ಒಮ್ಮೆ ನೋಡು ಎಂದು ನನ್ನ ಹೃದಯವು ಪಿಸುಗುಟ್ಟಿದ್ದು ಈ ಚಿನ್ಮಯನಿಗೆ ಕೇಳಿಸಿಬಿಟ್ಟಿತು” ಎಂದು ಅವಳ ಹೃದಯವು ಮೊಟ್ಟಮೊದಲ ಬಾರಿಗೆ ಉತ್ಕಟವಾಗಿ ನಾಚಿಕೊಂಡಿತು. ಇಲ್ಲಿಯವರೆಗೂ ತ್ರಿವಕ್ರೆಯು ಎಲ್ಲರಿಂದ ಕೇವಲ ಅನುಕಂಪದ ಒಳ್ಳೆಯತನವನ್ನು ಅನುಭವಿಸಿದ್ದವಳು. ಆದರೆ ಶ್ರೀಕೃಷ್ಣನ ನೋಟದಲ್ಲಿ ಪ್ರೇಮ, ಕರುಣೆ, ಮಮತೆ, ಶೃಂಗಾರವೆಲ್ಲವೂ ಮೇಳೈಸಿದೆ. ಈ ನೋಟವು ಅವಳಿಗೆ ಅತ್ಯಂತ ಎಳೆಯದು. ತನ್ನ ಹೃದಯವು ಏನು ಹೇಳುತ್ತಿದೆ ಎನ್ನುವುದೇ ಆಕೆಗೆ ತಿಳಿಯದಾಯಿತು. “ಅವನನ್ನು ನೋಡು” ಎಂದೊಮ್ಮೆ ಅನ್ನುತ್ತದೆ, ಮತ್ತೊಮ್ಮೆ ನಾಚಿಕೆಯಿಂದ “ಮುಖವನ್ನು ತಗ್ಗಿಸು” ಎನ್ನುತ್ತಿದೆ. ಪ್ರೇಮದ ಒತ್ತಡವನ್ನು ತಡೆಯಲಾಗದೆ ಆ ಭಾರವನ್ನೆಲ್ಲ ಪುರುಷೋತ್ತಮನಿಗೆ ಸಮರ್ಪಿಸಲು ತಂದಿದ್ದ ಅಂಗರಾಗದ ಪುಟ್ಟ ಭರಣಿಯ ಮೇಲೆಯೇ ಹಾಕಿ ಅದನ್ನು ಗಟ್ಟಿಯಾಗಿ ಹಿಡಿದುಕೊಂಡಳು. ಮನೋಹರನು ತನ್ನ ಹತ್ತಿರ ಒಂದೊಂದೇ ಹೆಜ್ಜೆಯನ್ನಿಡುತ್ತಿದ್ದಂತೆ ಉದ್ರೇಕವು ಕೂಡ ಹೆಚ್ಚುತ್ತಾ ಹೋಯಿತು. ಕೃಷ್ಣನು ಬಂದು ಮುಂದೆ ನಿಂತದ್ದೇ ತಡ, ಆಕೆಯು ಭಾವನೆಗಳ ಉತ್ಕರ್ಷವನ್ನು ತಡೆಯದಾದಳು. ಅವನ ಪಾದಗಳ ಮೇಲೆಯೇ ಕುಸಿದಳು.

ಭಕ್ತೆಯ ಮನದಿಂಗಿತವನ್ನು ಅರಿಯದವನು ಇನಿಯಂದು ಹೇಗೆ ಅನ್ನಿಸಿಕೊಂಡಾನು?

ಭಕ್ತೆಯನ್ನು ಎಬ್ಬಿಸಲೆಂದು ಶ್ರೀಕೃಷ್ಣನು ಆಕೆಯ ತೋಳುಗಳನ್ನು ಹಿಡಿದ. ಅಷ್ಟೇ. ತ್ರಿವಕ್ರೆಯ ಮೈಯ ಕಣಕಣಗಳಲ್ಲೂ ಸುಖದ ವಿದ್ಯುದಲೆಗಳು ಸಂಚರಿಸಿದವು. ಕೃಷ್ಣಾ!! ಎಂದು ಸುಖದಿಂದ ನರಳಿದಳು. ಈ ಸುಖವನ್ನು ಅನುಭವಿಸುತ್ತಿರುವಾಗಲೇ ಆಕೆಯ ಕಿವಿಗಳಿಗೆ ಶ್ರೀಕೃಷ್ಣನ ಮಧುರವಾಣಿಯು ಬಂದು ತಾಕಿತು. “ಆ! ಇದೇನು ಕೃಷ್ಣನು ಇಷ್ಟೆಲ್ಲ ಜನರ ಮಧ್ಯ ತನ್ನನ್ನು ಮಾತನಾಡಿಸುತ್ತಿದ್ದಾನೆ. ನಂಬಲಿಕ್ಕೇ ಆಗುತ್ತಿಲ್ಲವಲ್ಲ ನನ್ನ ಭಾಗ್ಯವನ್ನು”ಎಂದುಕೊಳ್ಳುತ್ತಲೇ ಕುಬ್ಜೆಯು ಆನಂದದ ಅಶ್ರುಗಳನ್ನು ಸುರಿಸಿದಳು. ಅಷ್ಟೆಲ್ಲ ಜನರ ಮಧ್ಯ ತನ್ನನ್ನು ನೋಡಲು ತಪಿಸಿದ ಈ ಹುಡುಗಿಯನ್ನು ಕೃಷ್ಣನೇ ಹತ್ತಿರ ಬಂದು ಮಾತನಾಡಿಸಿದ. “ಗಂಧವನ್ನು ಕೊಡುವೆಯಾ ನನಗೆ” ಎಂದು ಕೇಳಿದ. ಮಾತೇ ಹೊರಡಂತಿದ್ದ ಕುಬ್ಜೆಯು ನಡುಗುವ ಕೈಗಳಿಂದ ಅಂಗರಾಗದ ಭರಣಿಯನ್ನು ತೋರಿದಳು. “ಇದು ನಿನಗಾಗಿಯೇ ತಯಾರಾದದ್ದು, ಇದನ್ನು ನಿನಗೆ ಲೇಪಿಸುವ ಆಶೆ ನನಗೆ” ಎಂದು ಅವಳ ಕಂಗಳು ಹೇಳಿದ್ದನ್ನು ಶ್ರೀಕೃಷ್ಣ ಸ್ವೀಕರಿಸಿದ. ತನ್ನ ಮೈದೋರಿದ. ಅತಿಶಯವಾದ ಆನಂದದಿಂದ ತ್ರಿವಕ್ರೆಯು ತನ್ನ ಇಷ್ಟು ದಿನದ ಅಂಗರಾಗಲೇಪನ ವಿದ್ಯೆಯ ಅನುಭವನ್ನೆಲ್ಲ ತನ್ನ ಬೆರಳುಗಳಲ್ಲಿ ಏಕತ್ರಗೊಳಿಸಿ ಶ್ರೀಕೃಷ್ಣನ ಹಣೆಯಿಂದ ಆರಂಭಿಸಿ ಲೇಪನವನ್ನು ಮಾಡತೊಡಗಿದಳು. ಮೊದಲು ತಿಳಿ ಹಳದಿವರ್ಣದ ಚಂದನ, ನಂತರ ಸಮುದ್ರನೀಲವರ್ಣದ ಚುಕ್ಕಿಗಳು, ಅದರ ಹಿಂದೆ ದಟ್ಟ ನೇರಳೆಯ ಕಸ್ತೂರಿ, ನಂತರ ಆಗಸ ನೀಲವರ್ಣ, ಅದರ ಪಕ್ಕದಲ್ಲಿ ಶುದ್ಧ ಧವಳವರ್ಣ ಹೀಗೆ ತನ್ನೆಲ್ಲ ಪ್ರೇಮದ ನಿವೇದನೆಗಳನ್ನೇ ವರ್ಣಗಳರೂಪದಲ್ಲಿ ಶ್ರೀಕೃಷ್ಣನ ಮೈಮೇಲೆಲ್ಲ ಮೂಡಿಸತೊಡಗಿದಳು

ಶ್ರೀಕೃಷ್ಣನ ಕಣ್ಣು, ಮೂಗು, ತುಟಿಗಳು, ಎದೆ ಹೀಗೆ ನಿಧಾನವಾಗಿ ಮೈಗೆಲ್ಲ ಸುಗಂಧವನ್ನು ಲೇಪಿಸಿದಳು. ನಂತರ ಅವನ ಕಾಲ ಹೆಬ್ಬೆರಳಿಗೆ ಚಂದನವನ್ನು ಹಚ್ಚುವ ಸಮಯದಲ್ಲಿ ಅವಳ ಮನಸ್ಸು ಹೇಳಿತು. “ಇನ್ನೂ ನಿಧಾನವಾಗಿ ಹಚ್ಚು, ಇನ್ನೂ ನಿಧಾನವಾಗಿ ಹಚ್ಚು. ಬೇಗ ಮುಗಿಸಿಬಿಟ್ಟರೆ ಮತ್ತೆ ಕೈಗೆ ಸಿಗುವನೇ ಈ ಚೆಲುವ” ಎಂದು. ಅವನ ಅಗಣಿತವಾದ ಚೆಲುವ ಸೂಸುವ ಆ ಹೆಬ್ಬರಳನ್ನು ನೋಡುತ್ತಲೇ ಕುಬ್ಜೆಯು ಮೈಮರೆತಳು. ಅವಳನ್ನು ಮೈಮರೆವಿನಿಂದ ಎಬ್ಬಿಸಿದ್ದು ಮೈಮೂಲೆಯನ್ನೆಲ್ಲ ವ್ಯಾಪಿಸಿಕೊಂಡ ದಿವ್ಯವಾದ ಪ್ರಾಣಲಹರಿ! ಏನಾಗುತ್ತಿದೆ ಎಂದು ಆಲೋಚನೆ ಮಾಡುವುದರಲ್ಲಿಯೇ ಕುಬ್ಜೆಯ ಕಣ್ಣುಗಳು ಶ್ರೀಕೃಷ್ಣನ ಕಣ್ಣನು ಸಂಧಿಸಿದವು. ಅಲ್ಲಿ ಚೆಲುವಿನ ಗಣಿಯಾದ ಒಬ್ಬ ಕನ್ಯೆಯ ಮುಖವು ಕಾಣಿಸಿತು. ಯಾವ ಕನ್ಯೆಯು ಇನ್ನೊಬ್ಬರ ಮುಖವನ್ನು ನೋಡಲೂ ತನ್ನಿಡೀ ದೇಹವನ್ನು ಒದ್ದಾಡಿಸಿ, ಸೊಂಟವನ್ನು ಹಿಂಬಾಗಿಸಿ ಶ್ರಮಿಸಬೇಕಿತ್ತೋ ಆ ಹುಡುಗಿಯು ಇಂದು ತನ್ನ ಮುಖವನ್ನು ನೇರವಾಗಿ ನಿಂತು ನೋಡುವ ಹಾಗೆ ಗೋವಿಂದನು ಕರುಣಿಸಿಬಿಟ್ಟಿದ್ದನು. ತನ್ನ ಕಾಲಬಳಿ ಬಾಗಿ ಕುಳಿತ ತ್ರಿವಕ್ರೆಯ ಕಾಲ ಬೆರಳುಗಳ ಮೇಲೆ ತನ್ನ ಕಾಲನ್ನಿರಿಸಿ, ಅವಳ ಗಲ್ಲಕ್ಕೆ ತನ್ನ ಹಸ್ತದ ಆಶ್ರಯವನ್ನು ಕೊಟ್ಟು ಅವಳನ್ನು ಮೇಲೆ ಎಬ್ಬಿಸಿದ. ಅಷ್ಟೇ. ಅವಳ ಬೆನ್ನಿನ ಗೂನು ಹೊರಟು ಹೋಗಿ, ಸೊಟ್ಟವಾಗಿದ್ದ ಮೈಯ ಮೂಳೆಗಳೆಲ್ಲ ನೇರವಾಗಿ, ತ್ರಿವಕ್ರೆಯು ನೇರವಾಗಿ ನಿಂತ ಚೆಲುವೆಯಾಗಿ ಬದಲಾಗಿಬಿಟ್ಟಳು. ಹೀಗೆ ನಿಂತಾಗಲೇ ಆಕೆಗೆ ಶ್ರೀಕೃಷ್ಣನ ಕಣ್ಣುಗಳಲ್ಲಿ ತನ್ನ ಪ್ರತಿಬಿಂಬವನ್ನು ನೋಡುವ ಸೌಭಾಗ್ಯವು ಸಿಕ್ಕಿದ್ದು.

ಕುಬ್ಜೆಯು ಲೇಪಿಸಿದ ಗಂಧದಿಂದ ಅಲಂಕೃತನಾದ ಕೃಷ್ಣನಿಗೆ ಅಂದಿನಿಂದ ಕುಬ್ಜಾಗಂಧಾನುಲಿಪ್ತಾಂಗಃ ಎಂಬ ಹೆಸರು ಬಂದಿತು.

ದಿನಾಂಕ 06.12.2018 ರಂದು ಪೂಜ್ಯ ಶ್ರೀಈಶಪ್ರಿಯತೀರ್ಥರು ಮತ್ತು ಪೂಜ್ಯ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ಕುಬ್ಜಾಗಂಧಾನುಲಿಪ್ತಾಂಗಃ ಎನ್ನುವ ಚಿಂತನೆಯೊಂದಿಗೆ ಚಂದನವನ್ನು ಲೇಪಿಸಿ ಅಲಂಕರಿಸಿ ಆರಾಧಿಸಿದ್ದರು. ಆ ಚೆಲುವನ ದರ್ಶನವನ್ನು ಮಾಡಿದಾಗ ಮೂಡಿಬಂದ ಕುಬ್ಜೆಯ ಪ್ರೇಮವೃತ್ತಾಂತವಿದು.

ನಾರಿ ಕುಬುಜೆಗೆ ಭೂರಿಸಂತಸವಿತ್ತನ ಅತಿ ಶಕ್ತನ

ಭಾಗವತದಲ್ಲಿ ಈ ಚರಿತೆಯು ಸಂಕ್ಷಿಪ್ತವಾಗಿ ಬರುತ್ತದೆ. ಶ್ರೀವೇದವ್ಯಾಸದೇವರು ತಮ್ಮ ದಿವ್ಯಾಕ್ಷರಗಳಲ್ಲಿ ವಿವರಿಸಿದ ಕುಬ್ಜೆಯ ಚರಿತೆಯನ್ನೇ ನಾನು ಕನ್ನಡದಲ್ಲಿ ನನ್ನ ಕಲ್ಪನೆಯ ಸೂತ್ರದೊಂದಿಗೆ ಪೋಣಿಸಿ ಇಲ್ಲಿ ಹೇಳಿದ್ದೇನೆ. ಭಗವಂತನ ಮೇಲೆ ನಮಗೆ ಇರಬೇಕಾದ ಉತ್ಕಟಪ್ರೇಮ ಮತ್ತು ಅವನಲ್ಲಿ ಹೊಂದುವ ಶರಣಾಗತಿಗೆ ಸಿಗುವ ಮಹತ್ತರವಾದ ಮರ್ಯಾದೆಯನ್ನು ವಿವರಿಸುವುದು ಈ ಲೇಖನದ ಉದ್ದೇಶ. ಶ್ರೀಕೃಷ್ಣನೇ ಹೇಳಿರುವಂತೆ “ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್ (ಚೂರೇ ಚೂರು ಧರ್ಮವನ್ನು ಆಚರಿಸಿದರೂ ಸಾಕು ಅದು ದೊಡ್ಡ ಭಯದಿಂದ ನಮ್ಮನ್ನೂ ದೂರ ಮಾಡುತ್ತದೆ.) ಎನ್ನುವ ಮಾತಿಗೆ ಕುಬ್ಜೆಯು ಸ್ಪಷ್ಟ ನಿದರ್ಶನವಾಗಿದ್ದಾಳೆ.

ದೊಡ್ಡ ದೊಡ್ಡ ದಾನವನ್ನು ಮಾಡುವುದು ದೊಡ್ಡ ವಿಷಯವಲ್ಲ. ಇರುವುದನ್ನೆಲ್ಲವನ್ನೂ ದಾನ ಮಾಡುವುದು ದೊಡ್ಡ ವಿಷಯ. ಆದರೆ ಇದು ಎಲ್ಲರಿಂದಲೂ ಆಗದು. ಹೀಗೆ ಮಾಡಲು ಭಗವಂತನಲ್ಲಿ ಅವನ ಮಹಿಮಾಜ್ಞಾನಪೂರ್ವಕವಾದ, ಬೇರೆ ಎಲ್ಲರಿಗಿಂತ ಹೆಚ್ಚಾದ, ಯಾರೂ ಅಲುಗಾಡಿಸಲಾಗದ ಸ್ನೇಹಭಾವವಿರಬೇಕು. ವಿಶ್ವಗುರುಗಳಾದ ಶ್ರೀಮಧ್ವಾಚಾರ್ಯರು ಹೇಳಿದ್ದು ಇದನ್ನೇ. ಮಾಹಾತ್ಮ್ಯಜ್ಞಾನಪೂರ್ವಸ್ತು ಸುದೃಢಃ ಸರ್ವತೋ ಅಧಿಕ ಸ್ನೇಹಃ ಭಕ್ತಿರಿತಿ ಪ್ರೋಕ್ತಃ ಎಂದು. ಕುಬ್ಜೆಗೆ ಶ್ರೀಕೃಷ್ಣನಲ್ಲಿ ಇದ್ದಿದ್ದು ಇಂತಹುದೇ ಭಕ್ತಿ. ಹಾಗಾಗಿಯೇ ಆಕೆ ತನ್ನೆಲ್ಲ ಶಕ್ತಿಯನ್ನೂ ವ್ಯಯಿಸಿ, ತನ್ನ ಯೋಗ್ಯತೆಯ ತರಗತಿಯಲ್ಲಿ ಶ್ರೇಷ್ಠವಾದ ಸುಗಂಧ ದ್ರವ್ಯಗಳನ್ನು ತಯಾರಿಸಿ ಅದನ್ನು ಅವನಿಗೆ ಅರ್ಪಿಸಿದಳು. ಕೋಟಿಗಟ್ಟಲೆ ವರಹಗಳನ್ನು ದಾನವಾಗಿ ಕೊಡಬಲ್ಲ ಅನೇಕರನ್ನು ಶ್ರೀಕೃಷ್ಣನು ಬಿಟ್ಟು ಆ ಗುಂಪಿನಲ್ಲಿದ್ದ ಈ ಕುಬ್ಜೆಯನ್ನೇ ಅವನು ಮಾತನಾಡಿಸಿ ಸ್ಪರ್ಷಿಸಿದ್ದು ಇದೇ ಕಾರಣಕ್ಕೆ.

ಕುಬ್ಜೆಗೆ ಈ ಒಂದು ರೂಪವು ಬರಲು ಕಾರಣ ಆಕೆಯ ಹಿಂದಿನ ಜನ್ಮದ ವ್ಯವಹಾರ. ಪಿಂಗಳಾ ಎನ್ನುವ ವೇಶ್ಯಾಸ್ತ್ರೀ ಆಕೆ. ಕಾಯಕವೇನೋ ನಿಕೃಷ್ಟವೇ ಆದರೂ ಜೀವಯೋಗ್ಯತೆಯು ಒಂದಿಷ್ಟು ಒಳ್ಳೆಯದೇ ಇತ್ತು. ಕೃಷ್ಣನೇ ನನಗೆ ಗಂಡನಾಗಲಿ ಎಂಬ ಆಶೆಯೊಂದಿತ್ತು ಆಕೆಗೆ. ಆ ಆಶೆಯನ್ನಿಟ್ಟುಕೊಂಡೇ ಸತ್ತಳು. ಹಿಂದಿನ ಜನ್ಮದ ವೃತ್ತಿಯ ಕಾರಣದಿಂದ ಈ ಜನ್ಮದಲ್ಲಿ ಅಂಗವೈಕಲ್ಯ ಬಂದಿತು. ಆದರೆ ಸಾಯುವ ಕೊನೆಯ ಕ್ಷಣದ ಚಿಂತನೆಯು ಉತ್ತಮವಾಗಿದ್ದ ಕಾರಣದಿಂದ ಈ ಜನ್ಮದಲ್ಲಿ ಶ್ರೀಕೃಷ್ಣ ಆಕೆಯ ಬಯಕೆಯನ್ನೀಡೇರಿಸಿದ. ಇದು ಸಂತತಂ ಚಿಂತಯೇ ಅನಂತಂ ಅಂತ್ಯಕಾಲೇ ವಿಶೇಷತಃ ಎನ್ನುವ ಆಚಾರ್ಯವಾಣಿಗೆ ಉದಾಹರಣೆಯು. ಕುಬ್ಜೆಗೆ ಶ್ರೀಕೃಷ್ಣನಿಂದ ಒಬ್ಬ ಮಗನೂ ಜನಿಸಿದ. ವಿಶೋಕನೆಂದು ಇವನ ಹೆಸರು. ತಾಯಿಯ ಪುಣ್ಯದ ದೆಸೆಯಿಂದ ಇವನು ಮುಂದೆ ಭೀಮಸೇನದೇವರ ರಥದ ಸಾರಥಿಯಾದ. ಉತ್ತಮ ಚಿಂತನೆಯುಳ್ಳ ತಾಯಿಯು ತನ್ನ ಮಕ್ಕಳನ್ನು ಜೀವೋತ್ತರಮರ ನೆರಳಿನಲ್ಲಿಯೇ ಬೆಳೆಸಲು ಬಯಸುತ್ತಾಳೆ ಎನ್ನುವ ಸಂದೇಶವನ್ನು ಕೂಡಾ ನಾವಿಲ್ಲಿ ಗಮನಿಸಬಹುದು.

ಮಥುರೆಯ ಕುಬ್ಜೆಗೆ ಇದ್ದಿದ್ದು ತ್ರಿವಕ್ರತೆ. ಆದರೆ ನಮಗೆಲ್ಲ ಇರುವುದು ಹಲವಾರು ಕಡೆಗಳಲ್ಲಿ ವಕ್ರತೆ. ನಮ್ಮ ದೇಹ ನೇರವಾಗಿದ್ದರಬಹುದೇನೋ. ಆದರೆ ನಡತೆಗಳಲ್ಲಿ ನಾವು ಹಲವಾರು ವಕ್ರತೆಯನ್ನು ಹೊಂದಿದ್ದೇವೆ. ಈ ವಕ್ರತೆಯನ್ನು ಹೋಗಲಾಡಿಸಿಕೊಳ್ಳಬೇಕು. ಇದಕ್ಕಾಗಿ ನಾವು ಶರಣುಹೋಗಬೇಕಾಗಿರುವುದು ಜ್ಞಾನಪೂರ್ವಕವಾದ ಭಕ್ತಿಮಾರ್ಗಕ್ಕೆ. ಇದುವೆ ನಮ್ಮ ಉದ್ಧಾರದ ಮಾರ್ಗವು. ಈ ಮಾರ್ಗದಲ್ಲಿಯೇ ನಡೆಯಲು ನಾವುಗಳು ಪ್ರಯತ್ನಿಸಬೇಕಷ್ಟೆ.

———————————

ಕೃಷ್ಣನು ಕುಬ್ಜೆಯನ್ನು ಮೇಲೆತ್ತಿದ ಚಿತ್ರದ ಕೃಪೆ : ಕೇಶವ್ Krishna for today  ಬಹಳ ಅದ್ಭುತವಾದ ಕಲಾವಿದ ಇವರು

ಕುಬ್ಜಾಗಂಧಾನುಲಿಪ್ತಾಂಗನ ಚಿತ್ರ ಕೃಪೆ : ಶ್ರೀಪಲಿಮಾರು ಮಠ

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

One Comment

Leave a Reply

This site uses Akismet to reduce spam. Learn how your comment data is processed.