ಅನ್ನವನಿತ್ತು ಹಂಗಿಸುವರ ಸಹವಾಸ ಯಾಕಪ್ಪ ಬೇಕು?

ಹರಿಪಾದವಿರಲಿಕೆ ಪರದೈವಂಗಳಿಗೆ ಎರಗಲೇಕೆ?
ವರಮಾಣಿಕವಿದ್ದು ಎರವಿನ ಒಡವೆಯ ಬಯಸಲೇಕೆ?

ಪೆತ್ತ ಪಿತನ ಮಾತು ಕಿವಿಯಲಿ ಕೇಳದ ಪುತ್ರನೇಕೆ?
ಚಿತ್ತಪಲ್ಲಟವಾಗಿ ತಿರುಗುವ ಸತಿಯಳ ಸಂಗವೇಕೆ?
ಉತ್ತಮ ಗುರುವನು ನಿಂದನೆ ಮಾಡುವ ಶಿಷ್ಯನೇಕೆ?
ಶಕ್ತಿಹೀನನಾಗಿ ಸರ್ವಜನರ ಕೂಡೆ ಕ್ರೋಧವೇಕೆ?

ಭಾಷೆಯ ಕೊಟ್ಟು ತಪ್ಪುವ ಪ್ರಭುವಿನೊಳಾಸೆಯೇಕೆ?
ಕಾಸಿಗೆ ಕಷ್ಟಪಡುವ ಲೋಭಿಯ ಗೆಳೆತನವೇಕೆ?
ವೇಶ್ಯೆಯ ನೆಚ್ಚಿ ತನ್ನ ನಾರಿಯ ಬಿಡುವಂಥ ಪುರುಷನೇಕೆ?
ಹಾಸಿಗೆರಿಯತು ಕಾಲ ನೀಡಲರಿಯದ ಮನುಜನೇಕೆ?

ಚೆನ್ನಾಗಿ ಬಾಳ್ದು ಪುಣ್ಯವ ಮಾಡದ ಮನುಜನೇಕೆ?
ಸನ್ನುತ ವಿದ್ಯೆಯ ಮೆಚ್ಚರಲಿಯದ ಅರಸನೇಕೆ?
ಅನ್ನವನಿತ್ತು ಹಂಗಿಸುತಿರುವರ ಬಾಳದೇಕೆ?
ಉನ್ನತ ಪುರಂದರವಿಠಲನ ನೆನೆಯದ ಜನುಮವೇಕೆ?

ಹಾಡು ಡೌನ್ ಲೋಡ್ ಮಾಡಿಕೊಳ್ಳಿ 258.6 KB

ಹಾಡನ್ನು ಇಲ್ಲಿ ಕೇಳಬಹುದು

ಚಿತ್ರಕೃಪೆ : ವಿಕಿಪಿಡಿಯಾ

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ಪಲಿಮಾರಿನ ಪುಣ್ಯಕೋಟಿಗಳು

ಪುಣ್ಯಕೋಟಿ ಎನ್ನುವುದು ಈಗಿನ ಪೀಳಿಗೆಯ ಬಹುತೇಕರಿಗೆ ತಿಳಿಯದ, ಹಿಂದಿನ ಅನೇಕರಿಗೆ ಮರೆತುಹೋಗಿರುವ ಶಬ್ದ. ನೆನಪಿನ ಸುರುಳಿಯನ್ನು ಬಿಚ್ಚಿದರೆ ಪ್ರಯತ್ನಿಸಿದರೆ ಅಲ್ಲಿಇಲ್ಲಿ ಒಂದು ಚೂರು ನೆನಪಾಗಬಹುದೇನೋ. ಆದರೆ “ಖಂಡವಿದೆಕೋ ಮಾಂಸವಿದೆಕೋ” ಎನ್ನುವ ಒಂದು ಸಾಲು ಹೇಳಿಬಿಟ್ಟರೆ ಆಆಆಹ್ ಹೌದಲ್ಲ ಎಂದು ಸಂಪೂರ್ಣ ಹಾಡು ತಾನಾಗಿಯೆ ನೆನಪಿನ ಪರದೆಯ ಮೇಲೆ ಮೂಡುವುದು. ಬಹಳ ಮನೋಜ್ಞವಾದ ಗೋವು ಅದು, ಪುಣ್ಯಕೋಟಿ. ಈಗ ಸುಮಾರು 30ವರ್ಷಗಳ ಹಿಂದೆ ಕನ್ನಡ ಮಾಧ್ಯಮದಲ್ಲಿ ಓದಿದ ಎಲ್ಲರಿಗೂ ಪರಿಚಿತವಾದ ಹಾಡಿನ ರೂಪದ ಕಥೆಯಿದು. ಬಹಳ ಸರಳವಾದ ಆದರೆ ಹೃದಯದ ಆಳಕ್ಕೆ ಇಳಿಯುವ ಕಥಾವಸ್ತುವನ್ನು ಹೊಂದಿದೆ.

ಪುಣ್ಯಕೋಟಿ ಎನ್ನುವ ಹಸುವು ಮೇಯಲು ಹೊರಗೆ ಹೋದಾಗ ಅರ್ಬುತನೆಂಬ ಹುಲಿಯೊಂದು ಅದನ್ನು ತಿನ್ನಲು ಪ್ರಯತ್ನಿಸುತ್ತದೆ. ಧೃತಿಗೆಡದ ಹಸುವು ಹುಲಿಯೊಂದಿಗೆ “ಇನ್ನೂ ಹಾಲು ಕುಡಿಯುತ್ತಿರುವ ಮಗುವೊಂದಕ್ಕೆ ತಾಯಿ ನಾನು. ಅದನ್ನು ಇನ್ನೂ ಗೋಶಾಲೆಯಲ್ಲಿಯೇ ಬಿಟ್ಟು ಬಂದಿರುವೆ. ಸಂಜೆ ಅಮ್ಮ ಬರುವಳೆಂದು ಅದು ಎದುರು ನೋಡುತ್ತಿರುತ್ತದೆ. ಅದಕ್ಕೆ ಹಾಲೂಡಿಸಿ, ನಾಳೆಯಿಂದ ನಾನು ಬರುವುದಿಲ್ಲ, ಎದುರು ನೋಡದಿರು ಎಂದು ಹೇಳಿ ಮತ್ತೆ ಮರಳಿ ಬರುತ್ತೇನೆ” ಎಂದು ಪ್ರಾರ್ಥಿಸುತ್ತದೆ.

ಹಸುವಿನ ಮಾತನ್ನು ನಂಬಬೇಕೆಂದು ಹುಲಿಯ ಅಂತರಾತ್ಮವು ನುಡಿಯಿತು. ಹಾಗಾಗಿ ಅದು ಗೋವಿಗೆ “ಹೋಗಿ ಬಾ” ಎಂದು ಹೇಳಿತು. ಪುಣ್ಯಕೋಟಿಯು ಮನೆಗೆ ಬಂದು ಮಗುವಿಗೆ ಹಾಲು ಕುಡಿಸಿ, ವಾಸ್ತವವನ್ನು ಹೇಳಿ, ಅಕ್ಕ ಪಕ್ಕದಲ್ಲಿರುವ ಇತರ ಹಸುಗಳ ಮುಂದೆಲ್ಲ “ನನ್ನ ಮಗು ಇನ್ನು ಮುಂದೆ ಅನಾಥವಾಗುವುದು. ಅದನ್ನು ಒದೆಯದೆ, ಹಾಯದೆ ನಿಮ್ಮದೇ ಎಂದು ಭಾವಿಸಿರಿ” ಎಂದು ಪ್ರಾರ್ಥಿಸಿ ಅಲ್ಲಿಂದ ಹೊರಟು ಹುಲಿಯಿದ್ದಲ್ಲಿಗೆ ಬಂದಿತು.

ಹುಲಿಯು ನಂಬಿಕೆಯಿಂದ ಇದಕ್ಕೆ ಕಾದುಕೊಂಡೇ ಕೂತಿತ್ತು. ಆದರೆ ಮರಳಿ ಬಂದ ಪುಣ್ಯಕೋಟಿಯ ಪ್ರಾಮಾಣಿಕತೆಯ ಮುಂದೆ ಅದರ ಕ್ರೌರ್ಯವೆಲ್ಲ ನಶಿಸಿಹೋಗಿ “ನಿನ್ನಂತಹ ಪ್ರಾಮಾಣಿಕರನ್ನು ಕೊಂದರೆ ಪರಮಾತ್ಮನು ಮೆಚ್ಚನು” ಎಂದು ಬೆಟ್ಟದ ಮೇಲಿಂದ ಹಾರಿ ಬಿದ್ದು ತಾನೇ ತನ್ನ ಪ್ರಾಣವನ್ನು ನೀಗಿಕೊಂಡಿತು. ಇನ್ನು ಮುಂದೆ ಈ ರೀತಿ ಪರರನ್ನು ನೋಯಿಸಬಾರದೆಂದು ಅದಕ್ಕೆ ಎನಿಸಿರಬೇಕು ಅದಕ್ಕೆ. ಅಂತೂ ಪುಣ್ಯಕೋಟಿಯ ಸಾತ್ವಿಕಬಲದೆದುರು ತಾಮಸವು ತಲೆಬಾಗಿತು.

ಇದು ಪುಣ್ಯಕೋಟಿಯ ಕಥೆಯ ಸಂಕ್ಷಿಪ್ತ ವಿವರಣೆ. ಇದರ ಬಗ್ಗೆ ಹೆಚ್ಚಿನ ವಿವರಗಳು ಇಂಟರ್ನೆಟ್ಟಿನಲ್ಲಿಯೇ ಲಭ್ಯವಿದೆ. ಆಸಕ್ತಿ ಇದ್ದವರು ನೋಡಬಹುದು. ಸಧ್ಯಕ್ಕೆ ನಾನು ಇಲ್ಲಿ ಹೇಳುತ್ತಿರುವುದು ಪಲಿಮಾರಿನ ಪುಣ್ಯಕೋಟಿಯ ಬಗ್ಗೆ. ಪುಣ್ಯಕೋಟಿಗಳು ಎಂದರೆ ಸರಿಯಾದೀತು.

ಹಿರಿಯರಿಂದ ಕೇಳಿ ತಿಳಿದಿರುವ ವಿಷಯವಿದು.

ಪಲಿಮಾರುಮಠದ 25ನೆಯ ಯತಿಗಳು ಶ್ರೀರಘುಪ್ರವೀರತೀರ್ಥರು. (1718 – 1796) ಇವರು ತಮ್ಮ ತೀವ್ರತರವಾದ ತಪಶ್ಚರ್ಯೆಗೆ ಹೆಸರಾದವರು. ಬಹುವಿಧವಾದ ಮಂತ್ರಸಿದ್ಧರಿವರು. ಘಟಿಕಾಲಚಲದಲ್ಲಿ ಪ್ರಾಣದೇವರನ್ನು ಬಹುಕಾಲ ಉಪಾಸನೆ ಮಾಡಿ ಅವನ ಸಂಪೂರ್ಣಕೃಪೆಗೆ ಪಾತ್ರರಾದವರು. ಘಟಿಕಾಲಚದ ಸರೋವರದಲ್ಲಿ ಅವಗಾಹನಸ್ನಾನ ಮಾಡುತ್ತಿದ್ದಾಗ ಪ್ರಾಣದೇವರ ಸುಂದರವಾದ ವಿಗ್ರಹವೊಂದು ಇವರ ಕೈಗೆ ಬಂದು ಸೇರಿತು. ಈ ಪ್ರಾಣದೇವನು ಇಂದಿಗೂ ಪಲಿಮಾರಿನ ಶ್ರೀಮಠದಲ್ಲಿ ಪೂಜೆ ಸ್ವೀಕಾರ ಮಾಡುತ್ತಿದ್ದಾನೆ. ಶ್ರೀಗಳವರು ರಚಿಸಿರುವ ಹನುಮಭೀಮಮಧ್ವಾಷ್ಟೋತ್ತರ ಶತನಾಮಗಳನ್ನು ಇಂದಿಗೂ ಪಠಿಸುವ ಸಂಪ್ರದಾಯವಿದೆ.

ನರ್ಮದೆ ಎನ್ನುವ ಒಂದು ಹಸು ಶ್ರೀರಘುಪ್ರವೀರತೀರ್ಥರಿಗೆ ಅತ್ಯಂತ ಪ್ರೀತ್ಯಾಸ್ಪದವಾಗಿತ್ತು. ಶ್ರೀಕೃಷ್ಣದೇವರ ಪಂಚಾಮೃತಕ್ಕೆ ನರ್ಮದೆಯೇ ಹಾಲುಕೊಡುವವಳು. ದುರ್ದೈವದ ಗಳಿಗೆಯೊಂದರಲ್ಲಿ ಹುಲಿಯೊಂದು ನರ್ಮದೆಯನ್ನು ತಿಂದುಬಿಟ್ಟಿತು. ಇದನ್ನು ತಿಳಿದ ಶ್ರೀರಘುಪ್ರವೀರತೀರ್ಥರ ಹೃದಯವು ತೀವ್ರವಾಗಿ ನೊಂದಿತು. ವ್ಯಥೆಗೊಂಡ ಅವರು ಪದ್ಮಾಸನದಲ್ಲಿ ಕುಳಿತುಬಿಟ್ಟರು. ಮಧ್ಯಾಹ್ನವಾದರೂ ಪೂಜೆಗೆ ಏಳಲಿಲ್ಲ. ಮಠದ ಸಿಬ್ಬಂದಿಗಳು ಚಿಂತಿತರಾದರು. ಇತ್ತ ಮಠದ ಹೊರಗೆ ವಿಲಕ್ಷಣವಾದ ಘಟನೆಯೊಂದು ನಡೆಯಿತು.

ನರ್ಮದೆಯನ್ನು ಕೊಂದ ಹುಲಿಯು ರಥಬೀದಿಯಲ್ಲಿ ಕಾಣಿಸಿಕೊಂಡಿತು. ನಿಧಾನವಾಗಿ ಶ್ರೀಕೃಷ್ಣಮಠದ ಮುಂದೆ ಬಂದು ಬಿದ್ದುಕೊಂಡಿತು. ಅತ್ತಿತ್ತ ಹೊರಳಾಡಿ, ನಾಲಗೆಯನ್ನು ಹೊರಚಾಚಿತು. ಜನರು ಭಯಗ್ರಸ್ತರಾಗಿ ನೋಡುತ್ತಿದ್ದರು. ನಿಧಾನವಾಗಿ ಸ್ವಾಮಿಗಳು ಅಲ್ಲಿಗೆ ಬಂದು “ಹುಲಿಗೆ ಸದ್ಗತಿಯಾಗಲಿ” ಎಂದು ಪ್ರಾರ್ಥಿಸುತ್ತಿದ್ದಂತೆ ಹುಲಿಯ ಪ್ರಾಣವು ಹೊರಟು ಹೋಯಿತು. ಭಯದಿಂದ ದೂರ ನಿಂತಿದ್ದ ಎಲ್ಲ ಜನರು ಈ ಘಟನೆಯನ್ನು ನೋಡಿ ಸೋಜಿಗಗೊಂಡರು. ಅವರೆಲ್ಲರಿಗೂ ಶ್ರೀಗಳವರಿಗೆ ನರ್ಮದೆಯ ಮೇಲೆ ಇದ್ದ ವಾತ್ಸಲ್ಯದ ಬಗ್ಗೆ ತಿಳುವಳಿಕೆ ಇತ್ತು. ಶ್ರೀಗಳವರ ತಪಸ್ಸಿನ ಶಕ್ತಿಯ ಬಗೆಗೆ ಕೂಡ ಅರಿವು ಕೂಡ ಇತ್ತು, ಆದರೆ ಆ ತಪಸ್ಸಿನ ಔನ್ನತ್ಯ ಹಾಗು ವಾತ್ಸಲ್ಯದ ಆಳ ಎರಡನ್ನೂ ಅವರೆಲ್ಲರೂ ಇಂದು ಕಣ್ಣಾರೆ ಕಂಡರು. ಅಂದಿನಿಂದ ಜನರೆಲ್ಲರೂ ಶ್ರೀಗಳವರನ್ನು “ಹುಲಿಕೊಂದ ಸ್ವಾಮಿಗಳು” ಎಂದೇ ಕರೆಯಲಾರಂಭಿಸಿದರು.

ಅರಣ್ಯದಲ್ಲಿ ಹುಲಿಯು ಇತರ ಪ್ರಾಣಿಗಳನ್ನು ತಿಂದೇ ಬದುಕುವುದು ಪ್ರಕೃತಿಯ ನಿಯಮ. ಹೀಗೆ ಇರುವಾಗ ಹುಲಿಯಲ್ಲಿ ದೋಷವನ್ನೆಂತು ಎಣಿಸುವುದು? ಹೀಗಾಗಿ “ಈ ಹುಲಿ ಕೊಂದ ಸ್ವಾಮಿಗಳು” ಎನ್ನುವುದನ್ನು ರೂಢ್ಯರ್ಥದಲ್ಲಿ ಸ್ವೀಕರಿಸದೆ ಯೌಗಿಕ ಅರ್ಥದಲ್ಲಿ ಪರಿಗಣಿಸುವುದು ಹೆಚ್ಚು ಸಮಂಜಸವಾಗಿದೆ. ಇಲ್ಲವಾದಲ್ಲಿ ಶ್ರೀಗಳವರ ತಪಃಶಕ್ತಿಯನ್ನು ಬಹಳ ಸೀಮಿತವಾದ ದೃಷ್ಟಿಯಿಂದ ನೋಡಿದಂತಾಗುತ್ತದೆ.

ರಾಗಾದಿಗಳನ್ನು ಮೆಟ್ಟಿ ನಿಲ್ಲುವುದು ಸಂನ್ಯಾಸದ ಬಹುಮುಖ್ಯ ನಿಯಮ. ನರ್ಮದೆಯ ಸಾವಿಗೆ ಸಾಮಾನ್ಯರಂತೆ ಶೋಕಿಸಿದರು, ಕೋಪದಿಂದ ಹುಲಿಯ ಸಾವಿಗಾಗಿ ಎದುರು ನೋಡುತ್ತ ಕೂತರು ಎನ್ನುವ ಆಲೋಚನೆಯನ್ನು ಶ್ರೀರಘುಪ್ರವೀರರಂತಹ ತಪಸ್ವಿಗಳ ವಿಷಯದಲ್ಲಿ ಸರ್ವಥಾ ಮಾಡಬಾರದು. ನರ್ಮದೆಯು ಸತ್ವಗುಣಕ್ಕೂ ಹುಲಿಯು ತಮೋಗುಣಕ್ಕೂ ಪ್ರತಿನಿಧಿಗಳು. ಪ್ರತಿನಿತ್ಯ ಅಭಿಷೇಕಕ್ಕೆ ಹಾಲು ಕೊಡುವ ಸಾತ್ವಿಕ ಶಕ್ತಿಯ ಎದುರು ರಕ್ತದಾಹಿಯಾದ ತಮೋಶಕ್ತಿಯು ಮೇಲುಗೈ ಸಾಧಿಸಿದ್ದೇ ಅವರ ದುಃಖಕ್ಕೆ ಕಾರಣವಾಗಿತ್ತು. ಆ ದುಃಖವು ಕೂಡ ರಜೋಮೂಲದಿಂದ ಬರದೆ ಸಾತ್ವಿಕ ಮೂಲದಿಂದ ಬಂದದ್ದು. ಹುಲಿಯ ಮರಣವು ನಿಶ್ಚಿತವಾದದ್ದು. ರಘುಪ್ರವೀರತೀರ್ಥರ ಸಾತ್ವಿಕ ಕೋಪವೇ ಅದರ ಮರಣಕ್ಕೆ ನಿಮಿತ್ತವಾಗಿದ್ದು ದೈವನಿಯಮವೇ ಹೊರತು ಮತ್ತೇನೂ ಅಲ್ಲ.

ಸತ್ತ ಹುಲಿಯ ವಿಷಯದಲ್ಲಿ ಶ್ರೀಗಳವರ ಮುಂದಿನ ನಡೆಯೂ ಕೂಡ ಗಮನಾರ್ಹವಾದುದು. ಶ್ರೀಗಳವರು ಆ ಹುಲಿಯ ದೇಹವನ್ನು ನಿಕೃಷ್ಟವಾಗಿ ಕಾಣಲಿಲ್ಲ. ಅದರ ಅಂತ್ಯ ಸಂಸ್ಕಾರವನ್ನು ಶ್ರೀಮಠದ ಪರಿಸರದಲ್ಲಿಯೇ ಮಾಡಿಸಿದರು. ಕ್ಷಮಾಶೀಲರಾಗಿರದೆ ಹೋದಲ್ಲಿ ಹೀಗೆ ಮಾಡುತ್ತಿದ್ದರೆ?

ಇನ್ನೊಂದು ವಿಷಯವು ಕೂಡ ಗಮನಾರ್ಹವಾಗಿದೆ. ಲೋಕದಲ್ಲಿ ತಾತ್ಕಾಲಿಕವಾಗಿ ಕೆಟ್ಟ ಶಕ್ತಿಯು ಒಳ್ಳೆಯ ಶಕ್ತಿಯ ಮೇಲೆ ಜಯಿಸುವಂತೆ ಕಂಡರೂ ಕೂಡ ಅಂತಿಮವಾಗಿ ಸತ್ವಕ್ಕೇ ಶಾಶ್ವತ ಜಯವು ದೊರೆವುದು. ಈ ರೀತಿಯ ಆಸುರೀಸ್ವಭಾವವನ್ನು ತೊಡೆದು ಹಾಕುವ ಗುಣವು ಶ್ರೀರಘುಪ್ರವೀರತೀರ್ಥರಂತಹ ಮಹಾಜ್ಞಾನಿಗಳಿಗೆ ಇದೆ. ಭಗವಂತನೇ ಇಂತಹ ಪವಾಡಗಳನ್ನು ಇವರ ಮೂಲಕ ಮಾಡಿಸಿ ಜಗತ್ತಿಗೆ ತನ್ನ ಮಹಿಮೆಯನ್ನು ತೋರಿಸುತ್ತಾನೆ. ಒಂದು ವೇಳೆ ಜೀವಿಯ ಯೋಗ್ಯತೆಯು ಮೂಲತಃ ಚೆನ್ನಾಗಿದ್ದು ಪ್ರಾರಬ್ಧವಶಾತ್ ಅವನಿಂದ ಕೆಟ್ಟ ಕೆಲಸಗಳು ಆಗುವ ಸಂಭವವೂ ಇಲ್ಲದಿಲ್ಲ. ಅಂತಹ ಘಟನೆಯಾದಾಗ ಆ ಜೀವಿಯು ತನ್ನ ತಪ್ಪನ್ನು ತಿಳಿದು ಪಾಪದಿಂದ ದೂರವಾಗಲು ಅವಕಾಶವೂ ಉಂಟು. ರಘುಪ್ರವೀರರಂತಹ ಮಹಾನುಭಾವರ ಮುಂದೆ ಶುದ್ಧಾಂತಃಕರಣದಿಂದ ಶರಣಾಗತರಾದಲ್ಲಿ ಅವರು ನಮ್ಮ ತಮೋಭಾವನೆಗಳನ್ನು ನಾಶಮಾಡಿ ಉತ್ತಮಗತಿಯೆಡೆಗೆ ನಡೆಸಬಲ್ಲರು. ಹುಲಿಯ ವಿಷಯದಲ್ಲಿ ಆಗಿರುವುದು ಇದೇ. ಯೋಗ್ಯತೆ ಉತ್ತಮವಾಗಿದ್ದಕ್ಕೇ ಅದು ರಘುಪ್ರವೀರತೀರ್ಥರ ಮುಂದೆ ಬಂದು ತನ್ನ ಪ್ರಾಣವನ್ನು ತ್ಯಾಗ ಮಾಡಿತು. ಇಲ್ಲವಾದಲ್ಲಿ ಅದು ಕಾಡಿನಲ್ಲಿಯೇ ಸತ್ತು ಬೀಳಬೇಕಾಗಿತ್ತು ಅಲ್ಲವೇ? ಪ್ರಾಣ ತ್ಯಾಗದ ನಂತರ ಅದಕ್ಕೆ ಸಿಕ್ಕ ಸ್ಥಳವೇ ಅದರ ಉತ್ತಮ ಯೋಗ್ಯತೆಯನ್ನು ತೋರಿಸುತ್ತದೆ.

ಎಂತಹ ಸ್ಥಳ ಅದು? ಮಠದ ಪೂರ್ವಿಕ ಯತಿಗಳು ವೃಂದಾವನಸ್ಥರಾದ ಪ್ರದೇಶದಲ್ಲಿಯೇ, ಅವರುಗಳ ಮಧ್ಯದಲ್ಲಿ ತನಗೂ ಸ್ಥಳವನ್ನು ಸಂಪಾದಿಸಿಕೊಂಡಿತು ಆ ಹುಲಿ. ಕೃಷ್ಣಮಠದಲ್ಲಿ ಇರುವ ವೃಂದಾವನಗಳ ಮಧ್ಯದಲ್ಲಿ ನಾವೆಲ್ಲ ಇಂದಿಗೂ ನೋಡುವ ಹುಲಿಯ ಬೊಂಬೆಯು ಆ ಹುಲಿಯದ್ದೇ ಪ್ರತಿಕೃತಿ.

ಮಹಾಮಹಿಮರಾದ ರಘುಪ್ರವೀರರ ಅತುಲವಾತ್ಸಲ್ಯಕ್ಕೆ ಪಾತ್ರವಾಗಿದ್ದ ನರ್ಮದೆಯು ಒಂದು ರೀತಿಯ ಪುಣ್ಯಕೋಟಿ; ತಪೋನಿಧಿಗಳ ವೃಂದಾವನಸಂಕುಲದಲ್ಲಿಯೇ ಸ್ಥಳಪ್ರಾಪ್ತಿಮಾಡಿಕೊಂಡ ಹುಲಿಯೂ ಕೂಡ ಬಹುಜನ್ಮದ ಪುಣ್ಯವನ್ನೇ ಹೊಂದಿದ್ದರಲ್ಲಿ ಸಂದೇಹವಿಲ್ಲ. ಹೀಗಾಗಿ ಇಲ್ಲಿ ಅದೂ ಕೂಡ ಪುಣ್ಯಕೋಟಿಯೇ ಆಗಿದೆ; ನರ್ಮದೆ ಹಾಗು ಹುಲಿಗೆ ಎರಡಕ್ಕೂ ತಮ್ಮ ಪುಣ್ಯಬಲವನ್ನಿತ್ತ ಶ್ರೀರಘುಪ್ರವೀರತೀರ್ಥರು ನಿಜವಾದ ಅರ್ಥದಲ್ಲಿ ಪುಣ್ಯಕೋಟಿಯಾಗಿದ್ದಾರೆ.

ರಘುಪ್ರವೀರತೀರ್ಥರು ವೃಂದಾವನಸ್ಥರಾದದ್ದು ಇನ್ನೊಬ್ಬ ಸುಪ್ರಸಿದ್ಧ ಪುಣ್ಯಕೋಟಿಯ ಆರಾಧನೆಯ ದಿನದಂದು. ಆ ಪುಣ್ಯಕೋಟಿ ಬೇರೆ ಯಾರೋ ಅಲ್ಲ. ಇಡೀ ಜಗತ್ತಿಗೆ ತಮ್ಮ ಪುಣ್ಯವನ್ನು ಧಾರೆ ಎರೆಯುತ್ತಿರುವ ಶ್ರೀರಾಯರು! ಶ್ರಾವಣ ಬಹುಳ ದ್ವಿತೀಯಾದಂದು ನಡೆಯುವ ಕಾಮಧೇನುವಿನ ಆರಾಧನೆಯ ಸಂದರ್ಭದಲ್ಲಿ ಪುಣ್ಯಕೋಟಿಯ ಸ್ಮರಣೆಯೂ ಅವಶ್ಯವಾಗಿ ನಡೆಯಬೇಕಾದದ್ದು ಕರ್ತವ್ಯವಲ್ಲವೇ!

ರಾಯರ ಆರಾಧನೆಯ ದಿನದಂದು ಯಾರಾದರೂ ಉಡುಪಿಯಲ್ಲಿಯೇ ಇದ್ದರೆ ರಾಯರ ದರ್ಶನವಾದ ನಂತರ ತಪ್ಪದೇ ಕೃಷ್ಣಮಠದಲ್ಲಿರುವ ಶ್ರೀರಘುಪ್ರವೀರತೀರ್ಥರ ದರ್ಶನವನ್ನೂ ಮಾಡಿರಿ. ಇದು ರಾಯರ ಸಂತಸಕ್ಕೂ ಕಾರಣವಾಗಬಲ್ಲದು. ಜ್ಞಾನಿಗಳ ದರ್ಶನವೂ ನಮ್ಮ ತಮೋಗುಣದ ಸಂಹಾರಕ್ಕೆ ಒಂದು ಉಪಾಯ. ಮರೆಯದಿರಿ.

  • ಶ್ರೀರಘುಪ್ರವೀರತೀರ್ಥರು ಹಾಗು ಶ್ರೀರಘುಭೂಷಣತೀರ್ಥರ ಫೋಟೋ ಕೃಪೆ : ವಿದ್ವಾನ್ ಶ್ರೀ ಜನಾರ್ದನ ಆಚಾರ್ಯ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

I trust rayaru to the core

A few wallpapers for your smart phones in different colors are given here for free downloading. These were originally designed for FB page of Goa Rayara Matha. You can download the images either individually or the entire collection in a zip archive.

Set 1 : I trust Rayaru to the core

 

Set 2: Shri Raghavendraya Namaha

Download complete set 4.7 MB

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ಪ್ರಾಯಶ್ಚಿತ್ತವಿಲ್ಲದ ಕಾರ್ಯ

ಸೂಚನೆ: ಈ ಲೇಖನ ಕರ್ಮಾಚರಣೆಯಲ್ಲಿ ಆಸಕ್ತಿ ಇರುವವರಿಗೆ ಮಾತ್ರ.

ಈ ಕಾಲದಲ್ಲಿ ಧರ್ಮ ಗಿರ್ಮ ಅನ್ನುತ್ತ ಕೂತರೆ ಜೀವನ ನಡೆಯೋದು ಕಷ್ಟ ಅಂತ ನಿಮ್ಮ ಅಭಿಪ್ರಾಯವಿದ್ದಲ್ಲಿ ಈ ಲೇಖನವನ್ನು ಒಮ್ಮೆ ನಿಧಾನವಾಗಿ (ಹೌದು! ನಿಧಾ……ನವಾಗಿ) ಓದಿ. ಆಹಾರದ ವಿಷಯದಲ್ಲಿ ಧರ್ಮವು ಏನು ಹೇಳುತ್ತದೆ ಎಂದು ತಿಳಿಸುವುದಷ್ಟೇ ಈ ಲೇಖನದ ಉದ್ದೇಶ. ಈ ಲೇಖನದ ಆಶಯವನ್ನು ಕ್ರಿಯಾರೂಪಕ್ಕೆ ತರುವುದು ಅಥವಾ ಬಿಡುವುದು ನಿಮ್ಮ ಮನಸ್ಸಿನ ಆಯ್ಕೆಗೆ ಬಿಟ್ಟದ್ದು.

ದೇಹವೇ ಭಗವಂತನ ನಿವಾಸ, ನಾವು ಈ ದೇಹೆಂದ್ರಿಯಗಳಿಂದ ಮಾಡುವ ಪ್ರತಿಯೊಂದು ಚಟುವಟಿಕೆಯೂ ಆತನ ಪೂಜೆ ಮತ್ತು ಆ ಪೂಜೆಯಿಂದಲೇ ನಮಗೆ ಆನಂದ ದೊರೆಯುವುದು ಎನ್ನುವ ಸ್ವಾರ್ಥವಿಲ್ಲದ ಜೀವನ ಶೈಲಿಯನ್ನು ಧರ್ಮವು ತಿಳಿಸಿಕೊಡುತ್ತದೆ. ಈ ಧರ್ಮಾಚರಣೆಯಲ್ಲಿ ಕಾಯಿಕ, ವಾಚಿಕ ಹಾಗು ಮಾನಸಿಕ ಎಂಬ ಮೂರು ವಿಧಗಳು. ಊಟ ಮಾಡುವ ವಿಷಯದಲ್ಲಿ ಆಚರಿಸುವ ಧರ್ಮವು ಕಾಯಿಕ ಧರ್ಮದಲ್ಲಿ ಸೇರುತ್ತದೆ.

ಊಟ ಮಾಡುವುದೆಂದರೆ ವಾಸ್ತವವಾಗಿ ದೇಹದಲ್ಲಿ ನೆಲೆಸಿರುವ ಭಗವಂತನ ಹೆಸರಿನಲ್ಲಿ ನಡೆಸುವ ಒಂದು ಪವಿತ್ರವಾದ ಯಜ್ಞವೇ ಹೊರತು ಸಿಕ್ಕಿದ್ದನ್ನು ಒಳಗೆ ಸೇರಿಸಿ ಹೊಟ್ಟೆಯನ್ನು ಭದ್ರಪಡಿಸುವ ಚಟುವಟಿಕೆಯಲ್ಲ. ಪ್ರತಿಯೊಂದು ತುತ್ತು ಸಹ ಅವನಿಗೆ ಅರ್ಪಿಸುವ ಆಹುತಿ ಅಗಿದೆ, ಹೀಗಾಗಿ ಆಹಾರದಲ್ಲಿ ಬಳಸುವ ಪ್ರತಿಯೊಂದು ಪದಾರ್ಥವೂ ಶುದ್ಧವಾಗಿರಬೇಕು. ಯಾವ ಪದಾರ್ಥವನ್ನು ಊಟದಲ್ಲಿ ಬಳಸಬೇಕು ಯಾವುದನ್ನು ಬಳಸಬಾರದು, ಅದಕ್ಕೆ ಏನು ಕಾರಣ ಎನ್ನುವುದನ್ನು ವಿವರಿಸುತ್ತ ಹೊರಟರೆ ಲೇಖನ ಅತಿಯಾಗಿ ಬೆಳೆದುಬಿಡುತ್ತದೆ. ಅದನ್ನೆಲ್ಲ ಇನ್ನಿತರ ಹಿರಿಯರು ಬರೆದಿರುವ ಪುಸ್ತಕಗಳನ್ನು ಓದಿ ತಿಳಿದುಕೊಳ್ಳುವುದು ಉತ್ತಮ. ಈಗ ಸಧ್ಯದಲ್ಲಿ ಈ ಸರಳವಾದ ಕೆಲವು ನಿಯಮಗಳನ್ನು ಅನುಸರಿಸಲು ಪ್ರಯತ್ನಿಸೋಣ.

  1. ಶಾಸ್ತ್ರದಲ್ಲಿ ನಿಷೇಧಕ್ಕೆ ಒಳಪಟ್ಟಿರುವ ಪದಾರ್ಥಗಳ ಬಳಕೆಯನ್ನು ನಿಲ್ಲಿಸೋಣ.
  2. ಹಾರ್ಡ್‍ಕೋರ್ ಮಡಿ ಮಾಡಲು ಸಾಧ್ಯವಿದ್ದರೆ ಒಳ್ಳೆಯದು. ಆದರೆ ಅದು ತುಂಬಾ ಕಷ್ಟವೆನಿಸಿದಾಗ ಏನು ಅಡಿಗೆ ಮಾಡಿದ್ದೇವೆಯೋ ಅದನ್ನು ಭಕ್ತಿಯಿಂದ ಭಗವಂತನಿಗೆ ಸಮರ್ಪಿಸೋಣ. ಅದನ್ನು ಅವನು ಸ್ವೀಕರಿಸುತ್ತಾನೆ. ಒಟ್ಟಿನಲ್ಲಿ ಭಗಂತನಿಗೆ ಅರ್ಪಿತವಲ್ಲದ ಆಹಾರ ಬೇಡವೇ ಬೇಡ.
  3. ಜ್ಞಾನಿಗಳ ಮಾತುಗಳನ್ನು ಕೇಳುತ್ತ ಊಟವನ್ನು ಮಾಡೋಣ.
  4. ಊಟ ಮಾಡುವಾಗ ಸಾಧ್ಯವಾದಷ್ಟೂ ಹರಿಯ ನಾಮವನ್ನು ಸ್ಮರಿಸೋಣ.
  5. ಸಾಧ್ಯವಾದಷ್ಟೂ ನಮ್ಮ ನಮ್ಮ ಮನೆಯಲ್ಲಿಯೇ ಶುದ್ಧವಾದ ಊಟವನ್ನು ಮಾಡೋಣ.
  6. ಊಟವಾಗುವ ಮೊದಲು ಹಾಗು ಆದಮೇಲೆ ಎರಡು ಸಂದರ್ಭದಲ್ಲಿಯೂ ಕೈ ಹಾಗು ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳೋಣ.

ಈ ಮೇಲ್ಕಂಡ ಕ್ರಿಯೆಗಳು ಸಮಾಧಾನವಾದ ಆಹಾರಸ್ವೀಕಾರಕ್ಕೆ ಅನುವು ಮಾಡಿಕೊಡುತ್ತವೆ. ಸಮಾಧಾನವಾಗಿ ಮಾಡಿದ ಊಟವು ದೇಹಕ್ಕೆ ಹಿತಕರ ಎನ್ನುವುದನ್ನು ಬಿಡಿಸಿಹೇಳುವ ಅಗತ್ಯವಿಲ್ಲ.

ಭಗವಂತನಿಗೆ ಅರ್ಪಿತವಲ್ಲದ ಆಹಾರವನ್ನು ಸ್ವೀಕರಿಸುವ ಪ್ರಕ್ರಿಯೆಯನ್ನು ಶಾಸ್ತ್ರವು ಯಾವ ಕಾರಣಕ್ಕೂ ಒಪ್ಪುವುದಿಲ್ಲ. ಈ ರೀತಿಯಾದ ಆಹಾರವು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದು ಶಾಸ್ತ್ರದ ಖಚಿತ ಅಭಿಪ್ರಾಯ.(ಊಟದ ವಿಷಯದಲ್ಲಿ ಈ ರೀತಿಯಾದ ಶಾಸ್ತ್ರವನ್ನು ಒಪ್ಪದವರು, i’m lovin’ it ಎನ್ನುತ್ತಲೇ ಎಲ್ಲವನ್ನೂ ತಿನ್ನಿಸುವ ಮೆಕ್ ಡೊನಾಲ್ಡ್ ಕಂಪನಿಯು ತನ್ನ ಕೆಲಸಗಾರರಿಗೇ “ಅತಿಯಾಗಿ ತನ್ನ ಪದಾರ್ಥಗಳನ್ನು ತಿನ್ನದಿರಿ” ಎಂಬ ಮಾತನ್ನು ಹೇಳಿದೆ ಎನ್ನುವುದನ್ನು ಗಮನಿಸಲಿ) ನಾಲಗೆಯ ದಾಸರಾಗಿ, ಅನಿವಾರ್ಯತೆ ಎನ್ನುತ್ತ ಎಲ್ಲಿ ಬೇಕೆಂದರಲ್ಲಿ ತಿನ್ನುವವರ ಫಜೀತಿಯನ್ನು ಶಾಸ್ತ್ರಕಾರರು ಹೀಗೆ ವರ್ಣಿಸುತ್ತಾರೆ.

ಪ್ರಾಯಶ್ಚಿತ್ತವು ಎನಗೆ ಇಲ್ಲವಯ್ಯಾ | ನಾಯಿಯಂತೆ ಕಂಡಕಂಡಲ್ಲಿ ತಿಂಬುವಗೆ ||ಪ||sri-vijaya-dasaru

ಮಾನಸದಿ ತದೇಕಧ್ಯಾನದಲ್ಲೇ ಕುಳಿತು | ಜ್ಞಾನಿಗಳ ಸಹವಾಸ ಮಾಡದಲೇ ||
ಹೀನರಾಶ್ರಯಿಸಿ ನಾಲಿಗ್ಗೆ ಹಿತವನೆ ಬಯಸಿ | ಮೀನು ಗಾಳಕೆ ಬಿದ್ದು ಮಿಡುಕುವಂದದಲಿ ||೧||

ಸರಸರನೆ ಕಂಠವನು ಕರಗಸದಿ ಕೊಯ್ದರೂ | ತರಹರಿಸದೇ ಪರರ ಮನೆಯ ಅನ್ನವನ್ನು ||
ಕರದಲ್ಲಿ ಸ್ಪರ್ಶ ಸಲ್ಲದು ಎಂದು ಪೇಳುತಿರೆ | ಹಿರಿದಾಗಿ ಕುಳಿತು ಭುಂಜಿಸುವ ಪಾತಕಿಗೆ ||೨||

ಪರರಿತ್ತ ಕೂಳಿನಲಿ ಅವರ ಕುಲಕೋಟಿ ಸಾ | ವಿರ ಜನುಮದಲಿ ಅರ್ಜಿಸಿದ ಪಾಪ ||
ಬೆರೆತಿಹುದು ಎಂದ್ಹೇಳೆ ಕೇಳಿ ಕೇಳಿ ನಗುತ | ಹರುಷದಿಂ ಕುಳಿತು ವಿಷವುಂಬ ಪಾತಕಿಗೆ ||೩||

ಯಾತ್ರೆಯ ಪೋಪದಲ್ಲಿ ತಿಥಿ ಮಿತಿ ಹವ್ಯದಲಿ | ಮತ್ತೆ ಕುಲಹೀನರಲಿ ಅನ್ನ ತಿಂದು |
ನಿತ್ಯ ಹಿಂಗದಲೆ ಈ ನೀಚ ಒಡಲನು ಹೊರೆವ | ತೊತ್ತುಬಡಕಗೆ ಪುಣ್ಯವೆತ್ತ ದೊರಕುವದೊ ||೪||

ಕ್ಷಿಪ್ರಪ್ರಾಯಶ್ಚಿತ್ತವೊಂದಿಹದು ಕೇಳಯ್ಯ | ಈ ಪೃಥ್ವಿಯೊಳಗೆಲ್ಲ ನಿನ್ನ ನಾಮ ||
ಅಪ್ರಾಕೃತಕಾಯ ವಿಜಯವಿಠ್ಠಲರೇಯ | ಸುಪ್ರಸಾದವನಿತ್ತು  ಶುದ್ಧಾತ್ಮನ್ನ ಮಾಡು || ೫||

ಆದರೆ, ಇಲ್ಲಿ ಕೇಳಿ. ಪದೇ ಪದೇ ಅಶುದ್ಧ ಪದಾರ್ಥವನ್ನು ತಿಂದು ಬಂದು ವಿಜಯವಿಠಲ ಕ್ಷಮಿಸಯ್ಯ ಎಂದರೆ ಆತ ಪಾಪಿಗಳನ್ನು ಕ್ಷಮಿಸುವ ದೇವನಲ್ಲ. ನೆನಪಿರಲಿ. ಆದರೂ…. ಒಂದು ಮಾತು ನಿಜ. ಶಾಸ್ತ್ರವು ಮೇಲ್ನೋಟಕ್ಕೆ ಕಠೋರವೆಂದು ಕಾಣಿಸಬಹುದು. ಮಾಡಿರುವ ಕೃತ್ಯಗಳು ತಪ್ಪೆಂದು ಕಂಡುಬಂದು ಅದರಿಂದ ಹೊರಬರಲು ನೈಜವಾದ ಮನಸ್ಸಿದ್ದಲ್ಲಿ ಅದಕ್ಕೆ ಅತ್ಯಂತ ಸರಳವಾದ ಪರಿಹಾರವನ್ನೂ ಶಾಸ್ತ್ರವೇ ತಿಳಿಸಿಕೊಡುತ್ತದೆ. ಈ ಮಾತಿಗೆ ಶ್ರೀವಿಜಯರಾಯರ ಮೇಲಿನ ಪದ್ಯವೇ ಸಾಕ್ಷಿ.

ನಿರಂತರವಾಗಿ ಧರ್ಮದ ದಾರಿಯಲ್ಲಿ ಇದ್ದರೆ ಮನೋಬಲವು ಪುಷ್ಟಿಯಾಗುವುದು ಹಾಗು ಆ ಪುಷ್ಟಿಯಿಂದ ಆನಂದವು ವೃದ್ಧಿಯಾಗುವುದು. ಆನಂದವೇ ಜೀವನದ ಪರಮೋದ್ದೇಶವಲ್ಲವೇ?

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts