ಶ್ರೀ ಶ್ರೀ ವಿದ್ಯಾಮಾನ್ಯತೀರ್ಥರು ೧೯೯೨-೦೦೦೦ ರ ಅವಧಿಯಲ್ಲಿ ಉಡುಪಿಯ ಭಂಡಾರಕೇರಿಮಠ ಹಾಗೂ ಪಲಿಮಾರುಮಠದ ಪೀಠಗಳ ಅಧಿಪತಿಗಳಾಗಿದ್ದವರು. ಇವರು ಮಾಧ್ವಯತಿಪರಂಪರೆಯು ಕಂಡ ಶ್ರೇಷ್ಠ ವಿದ್ವಾಂಸರುಗಳಲ್ಲಿ ಒಬ್ಬರು. ಮಾಧ್ವಸಿದ್ಧಾಂತದ ಮೇಲೆ ಬರಬಹುದಾದ ಎಲ್ಲಾ ಆಕ್ಷೇಪಣೆಯನ್ನು ಪ್ರಮಾಣಬದ್ಧವಾಗಿ ನಿರಾಕರಿಸುವ ಸಾಮರ್ಥ್ಯವನ್ನು ಇವರು ಪಡೆದಿದ್ದವರು. ವಾಕ್ಯಾರ್ಥಗೋಷ್ಠಿಗಳಲ್ಲಿ ಇವರ ವಾದಕೌಶಲಕ್ಕೆ ಬೆರಗಾಗಿ ಪರಮತದವರೂ ತಲೆಬಾಗಿದ್ದಾರೆ. ಇವರು ಮಾಧ್ವಸಮಾಜಕ್ಕೆ ನೀಡಿದ ಕೊಡುಗೆಗಳು ಅಸಂಖ್ಯಾತ. ಉಡುಪಿಯ ಅಷ್ಟಮಠದ ಎಲ್ಲ ಯತಿಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಇವರಲ್ಲಿ ವಿದ್ಯೆಯನ್ನು ಪಡೆದವರೇ ಆಗಿದ್ದಾರೆ. ಅಷ್ಟೇ ಅಲ್ಲ ವಿದ್ಯಾಪೀಠಗಳ ಮೂಲಕ ಅಸಂಖ್ಯ ವಿದ್ವಾಂಸರ ದಂಡನ್ನೇ ಕಟ್ಟಿದವರು ಇವರು. ಬೆಂಗಳೂರಿನ ಪ್ರಸಿದ್ಧವಾದ ಶ್ರೀಪೂರ್ಣಪ್ರಜ್ಞವಿದ್ಯಾಪೀಠವನ್ನು ಶ್ರೀವಿಶ್ವೇಶತೀರ್ಥ ಶ್ರೀಪಾದರು ಪ್ರಾರಂಭಿಸಲು ಮುಖ್ಯ ಪ್ರೇರಣೆ ಇವರೇ ಆಗಿದ್ದಾರೆ.
ವೇದಾಂತ ಹಾಗೂ ಧರ್ಮಶಾಸ್ತ್ರಗಳ ಗ್ರಂಥಗಳನ್ನು ಪುನಃ ಪುನಃ ಸಂಶೋಧನೆ ಮಾಡಿ ಅವುಗಳನ್ನು ಪ್ರಕಟಗೊಳಿಸುವಲ್ಲಿ ಇವರಿಗೆ ಅಪಾರವಾದ ಆಸ್ಥೆ ಇತ್ತು. ವೈದಿಕ ಜ್ಞಾನವು ಮುಂದುವರೆಯಲು ಅವರು ಎಲ್ಲ ಕ್ರಮಗಳನ್ನು ಕೂಡ ತೆಗೆದುಕೊಳ್ಳಲು ಸಿದ್ಧರಿದ್ದರು.
ತಮಗೆ ಪಾದಪೂಜೆಯಲ್ಲಿ ದೊರೆತ ಅಲ್ಪ-ಸ್ವಲ್ಪ ಕಾಣಿಕೆಯನ್ನು ಕೂಡಿಟ್ಟು ದೇಶದ ಎಲ್ಲೆಡೆ ಹರಡಿಹೋಗಿದ್ದ ಪ್ರಾಚೀನ ಗ್ರಂಥಗಳನ್ನು, ತರಿಸಿಕೊಂಡು, ಅಧ್ಯಯನ ಮಾಡಿ, ಸಂಶೋಧಿಸಿ ಅನೇಕ ಶಾಸ್ತ್ರಗ್ರಂಥಗಳನ್ನು ಇವರು ಪ್ರಕಟಗೊಳಿಸಿದರು. ಅನೇಕ ವಿದ್ವಾಂಸರುಗಳನ್ನು ಕೂಡಿಸಿಕೊಂಡು, ಮಠದಲ್ಲಿ ಇದ್ದ ತಾಳವಾರಿ ಗ್ರಂಥಗಳನ್ನು ಸಂಶೋಧಿಸಿ ಆಗಿನ ಕಾಲದಲ್ಲಿಯೇ ಹತ್ತಾರು ಗ್ರಂಥಗಳನ್ನು ಪ್ರಕಟಗೊಳಿಸಿದರು. ಈ ಕಾರ್ಯವು ಶ್ರೀಗಳವರ ದೈನಂದಿನ ಕಾರ್ಯಕ್ರಮಗಳ ಮಧ್ಯ ದೊರೆತ ಬಿಡುವಿನಲ್ಲಿ ನಡೆಯುತ್ತಿತ್ತು. ಈ ವೇಗವು ಸಂಶೋಧನೆಗೆ ಸಾಲದೆಂದು ಮನಗಂಡು ಶ್ರೀಗಳವರು ಇದಕ್ಕಾಗಿ ಒಂದು ತತ್ವಸಂಶೋಧನಸಂಸತ್ತು ಎಂಬ ಒಂದ ಪ್ರತ್ಯೇಕವಾದ ಸಂಸ್ಥೆಯನ್ನೇ ಸ್ಥಾಪಿಸಿದರು.
ಸಂಸ್ಥೆಯ ಮೂಲಕ ಮಧ್ವಾಚಾರ್ಯರ ಸರ್ವಮೂಲ ಗ್ರಂಥಗಳನ್ನು, ಅದರ ಟೀಕೆ-ಟಿಪ್ಪಣಿಗಳನ್ನು ಕೂಡಾ ಮುದ್ರಿಸಿ ಅಧ್ಯಯನಶೀಲರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರ ಅಂದಿನ ಈ ಮುಂದಾಲೋಚನೆಯ ಫಲವಾಗಿಯೇ ಇಂದು ಈ ಸಂಸ್ಥೆಯು ಹೆಮ್ಮರವಾಗಿ ನಿಲ್ಲಲು ಕಾರಣವಾಗಿದೆ. ಸಂಸ್ಥೆಯು ಭಾರತೀಯ ಶಾಸ್ತ್ರಗಳ ಅಧ್ಯಯನ ರಂಗದಲ್ಲಿ ಹೆಸರುವಾಸಿಯಾಗಿದೆ.