ಪೂರ್ಣಫಲ

ವಾಸುದೇವ ಕ್ಷೀರಸಾಗರ ಎಂದೊಬ್ಬ ನನ್ನ ಸ್ನೇಹಿತ. ಒಳ್ಳೆ ಪ್ರತಿಭಾವಂತ, ಮೃದುಭಾಷಿ. MTech ಮಾಡಿಯೂ ಬಹಳ ದಿನ ಕೆಲಸವಿಲ್ಲದೆ ಬಳಲಿದ್ದ. ಒಮ್ಮೆ ಜಯನಗರ ರಾಯರ ಮಠಕ್ಕೆ ಶ್ರೀಗಳು ಬಂದಿದ್ದಾರೆ ಎಂದು ತಿಳಿದು ನನಗೆ ಅವತ್ತು ಸಂಜೆ ಯಾಹೂ ಮೆಸೆಂಜರಿನಲ್ಲಿ ಒಂದು ಸಂದೇಶವನ್ನು ಕಳಿಸಿದ್ದ. ಶ್ರೀಗಳಿಂದ ಅನುಗ್ರಹ ಮಾಡಿಸು ಅಂತ. ಆಗ ನಾನು ಬೇರೆ ಕೆಲಸದ ನಿಮಿತ್ತ ಹೈದರಾಬಾದಿನಲ್ಲಿದ್ದೆ. ನಾನೀಗ ಶ್ರೀಗಳವರ ಸಮೀಪದಲ್ಲಿ ಇಲ್ಲ. ಈ ಸಲ ಡ್ಯೂಟಿ ಬೇರೆ ಕಡೆ ಇದೆ. ನೀನು ಬೆಳಿಗ್ಗೆ ಹೋಗಿ ಪ್ರಾರ್ಥಿಸಿ ಅವರಿಂದ ಮಂತ್ರಾಕ್ಷತೆಯನ್ನು ತೆಗೆದುಕೋ ಎಂದು ಮಾರುತ್ತರ ಕೊಟ್ಟಿದ್ದೆ.

ಇವನು ಮಾರನೆ ದಿನ ಮತ್ತೆ ನನಗೆ ಮೈಲುದ್ದದ ಸಂದೇಶ ಕಳಿಸಿದ್ದ. ಸಾರಂಶ ಇಷ್ಟು.

ಅವನಿಗೆ ಮಾನಸಿಕ ಒತ್ತಡ ಎಷ್ಟಿತ್ತೆಂದರೆ, ನಾಳೆಯವರೆಗೂ ಕಾಯಲೂ ಆಗದೆ ಆ ರಾತ್ರಿಯೇ ಮಠಕ್ಕೆ ಹೋಗಿಯೇ ಬಿಟ್ಟಿದ್ದಾನೆ. ರಾತ್ರಿ 10 ಆಗಿತ್ತಂತೆ ಅವನು ಹೋಗಿದ್ದಾಗ. ಮಠದ ಪೂಜೆ ಮತ್ತು ದರ್ಶನ, ಶ್ರೀಗಳವರು ಮಂತ್ರಾಕ್ಷತೆಯನ್ನು ಕೊಡುವ ಸಮಯ ಎಲ್ಲವೂ ಮುಗಿದೇ ಹೋಗಿತ್ತು. ಆದರೂ ಯಾವುದೋ ಕಾರಣದಿಂದ ಮಠದ ಮುಂಬಾಗಿಲು ತುಸುವೇ ತೆಗೆದಿತ್ತಂತೆ. ಯಾರಾದರೂ ಬೈದರೂ ಪರವಾಗಿಲ್ಲ, ಒಟ್ಟಿನಲ್ಲಿ ಮಂತ್ರಾಕ್ಷತೆ ಸಿಕ್ಕರೆ ಸಾಕು ಎಂದು ಒಳ ಹೋಗಿದ್ದಾನೆ.

ಏನು ಪುಣ್ಯವೋ ಏನೋ ಶ್ರೀಗಳವರು ಮತ್ತು ಒಂದಿಬ್ಬರು ಸಹಾಯಕರು ಬಿಟ್ಟರೆ ಯಾರೂ ಇದ್ದಿಲ್ಲವಂತೆ. ಹೋಗಿ ಅವರ ಮುಂದೆ ನಿಂತ. ಶ್ರೀಗಳವರು ನೀನು ಯಾರು? ಏನು ಬೇಕು ಎಂದೂ ಕೇಳದೆ, ಒಂದು ಪೂರ್ಣಫಲವನ್ನು ತರಿಸಿಕೊಂಡು ಅದನ್ನು ಅಭಿಮಂತ್ರಿಸಿ, ಮಂತ್ರಾಕ್ಷತೆಯೊಂದಿಗೆ ಕೊಟ್ಟು ನಾಳೆ ಕೆಲ್ಸ ಆಗುತ್ತೆ ಹೋಗು ಅಂದವರೇ ಎದ್ದು ವಿಶ್ರಾಂತಿಗೆ ಹೋಗಿಬಿಟ್ಟರಂತೆ. ಇವನಿಗೆ ಬೇರೆ ಏನು ಮಾತನಾಡಲೂ ಅವಕಾಶ ಸಿಕ್ಕೇ ಇಲ್ಲ.

ರಾತ್ರಿ ಎಲ್ಲಾ ಮುಗಿದ ಮೇಲೆ ಒಳಗೆ ನುಸುಳಿದ್ದಕ್ಕೆ ಯಾರಾದ್ರೂ ಬೈತಾರೆ ಅನ್ಕೊಂಡಿದ್ದೆ ಮಾರಾಯ. ಆದರೆ ಎಂಥಾ ಅದೃಷ್ಟ ನಂದು ಯಾರದರೂ ಬೈಯೋದು ಇರಲಿ. ಯಾರು ನೀನು ಅಂತ ಸಹ ಕೇಳಿಲ್ಲ. ಶ್ರೀಗಳವರ ಮಂತ್ರಾಕ್ಷತೆ ಸಿಕ್ಕಿತು. ಸಮಾಧಾನ ಆಯ್ತು ನೋಡು. ಆದರೆ ಒಂದು ತೆಂಗಿನ ಕಾಯಿ ಕೊಟ್ರಪ್ಪ. ಅದನ್ನು ಏನು ಮಾಡಲಿ?”

ಆ ಕಾಯಿಯು ಪೂರ್ಣಫಲ. ನಿನಗೆ ಕೆಲಸ ಸಿಕ್ಕ ನಂತರ ರಾಯರಿಗೆ ನಿನ್ನ ಶಕ್ತಿಯಿದ್ದಷ್ಟು ಸೇವೆ ,ಮಾಡಿಸಿ ಆ ಕಾಯಿಯಿಂದ ಮಿಠಾಯಿ ಮಾಡಿ ಮನೆಯವರ ಜೊತೆಗೆ ಹಂಚಿಕೊಂಡು ತಿನ್ನು ಎಂದು ಉತ್ತರಿಸಿದ್ದೆ ನಾನು.

ಆ ಕೊಬ್ಬರಿಮಿಠಾಯಿ ತಿನ್ನುವ ಸಂದರ್ಭವು ಅಂದು ರಾತ್ರಿಯೇ ಅವನಿಗೆ ಸಿಕ್ಕಿದ್ದು ಮಾತ್ರ ದೊಡ್ಡ ವಿಶೇಷ!.

ರಾತ್ರಿ ಮತ್ತೊಂದು ಮೆಸೇಜ್ ಮಾಡಿ “ಎಂಥಾ ಪವರ್ ಮಾರಾಯ ಇದು? ಮೈಂಡ್ ಟ್ರೀಯಲ್ಲಿ ಇಂಟರ್ ವ್ಯೂ ಇತ್ತು. ಹೋಗಿದ್ದೆ. ಕೆಲಸವೇ ಸಿಕ್ಕುಬಿಟ್ಟಿತು. ಎಂದು ಹರ್ಷಿಸಿದ್ದ. ತನಗೆ ಕೆಲಸ ಸಿಕ್ಕಿದ್ದಕ್ಕಿಂತ ಸೋಜಿಗವು ಅವನಿಗೆ ಶ್ರೀಗಳವರ ಮಹಿಮೆಯ ಬಗೆಗೆ ಆಗಿತ್ತು ಎನ್ನುವುದು ಅವನ ಮೆಸೇಜಿನಲ್ಲಿ ಸ್ಪಷ್ಠವಾಗಿ ಕಂಡಿತು.

Karanam Vijayendra ವಿಜಣ್ಣ, ಏಜ್ ಬಾರ್ ಅಗಲಿಕ್ಕೆ ಇಪ್ಪತ್ತೇ ದಿನ ಉಳಿದಾಗ ರಾಯರು ನಿಮ್ಮತ್ತ ಕಣ್ಣು ತೆರೆದು ಶ್ರೀಗಳ ಮೂಲಕ ನಿಮ್ಮ ವ್ಯಾಕುಲ ಕಳೆದರು ಎಂದು ಹೇಳಿದಿರಲ್ಲ. ಅದಕ್ಕೇ ನನಗೆ ಈ ವೃತ್ತಾಂತವು ನೆನಪಾಯಿತು.

ನಮ್ಮ ನಮ್ಮ ಕರ್ಮನಾಶದ ಹೊತ್ತು ಬಂದಾಗ ಶ್ರೀಹರಿಯು ಇಂತಹ ಏರ್ಪಾಟನ್ನು ಮಾಡುತ್ತಾನೆ. ಶ್ರೀಸುಶಮೀಂದ್ರತೀರ್ಥರಂತಹ ತಪಸ್ವಿಗಳ ಮೂಲಕ ನಮ್ಮಗಳಿಗೆ ಅನುಕೂಲವು ಒದಗುವುದು ನಮ್ಮ ಪುಣ್ಯವೇ ಸರಿ

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.