ಆಟಿ ಅಮಾವಾಸ್ಯೆ – ಹಾಲೆ ಮರದ ಕಷಾಯ

ಶ್ರೀಹರಿವಾಯುಗುರುಭ್ಯೋ ನಮಃ

ಇವತ್ತು ಆಷಾಢದ ಅಮಾವಾಸ್ಯೆ. ಮರವೊಂದಕ್ಕೆ ವಾರ್ಷಿಕ ಪರ್ವಕಾಲ. ಮೈಕೆತ್ತಿಸಿಕೊಂಡು ಗಾಯಕ್ಕೊಳಗಾಗುವ ದಿನವಿಂದು ಅದಕ್ಕೆ. ತಾನು ಮೈಕೆತ್ತಿಸಿಕೊಂಡರೂ ಪರವಾಗಿಲ್ಲ ಕೆತ್ತಿದ ವ್ಯಕ್ತಿಯ ಮನೆ ಮಂದಿ, ಬೀದಿಯ ಮಂದಿ, ಊರ ಮಂದಿಗೆಲ್ಲ ಹಾಲನ್ನು ಕೊಡುವ ಮರ ಇದು. ಹಾಲನ್ನು ಕೊಡುವ ಮರವಾದ್ದರಿಂದಲೋ ಏನೋ ಇದಕ್ಕೆ ಹಾಲೆ ಮರ ಎಂದೇ ಹೆಸರು.

Haale Mara. ಹಾಲೆ ಮರ. ಹಾಲಿಗಾಗಿ ತೊಗಟೆಯನ್ನು ಕೆತ್ತಿರುವುದು

ಹಾಲೆ ಮರವು ಸುಮಾರು 35-40 ಅಡಿ ಎತ್ತರಕ್ಕೆ ಬೆಳೆಯುವ ಒಂದು ಮರ. ಇದರ ಎಲೆಗೊಂಚಲು ಬಹಳ ವಿಶಿಷ್ಟವಾದ ಒಂದು ಸ್ವಭಾವವನ್ನು ಹೊಂದಿವೆ. ಎಲ್ಲ ಗೊಂಚಲಿನಲ್ಲಿಯೂ ಏಳು ಎಲೆಗಳೇ ಇರುತ್ತವೆ. ಈ ವಿಶಿಷ್ಠಲಕ್ಷಣದಿಂದಲೇ ಇದಕ್ಕೆ ಸಂಸ್ಕೃತದಲ್ಲಿ ಸಪ್ತಪರ್ಣೀ ಎನ್ನುವ ಸುಂದರ ಹೆಸರು ಬಂದಿದೆ. ಹಾಲೆಯ ಹೊರತಾಗಿ ಕನ್ನಡದಲ್ಲಿ ಮದ್ದಾಲೆ, ಏಳೆಲೆ ಹೊನ್ನೆ, ಕೊದ್ದಾಲೆ ಎನ್ನುತ್ತಾರೆ. ತುಳುವಿನಲ್ಲಿ ಪಾಲೆ ಎಂದು ಕರೆಯುತ್ತಾರೆ. ತಮಿಳು, ಮಲಯಾಳ ತೆಲುಗು ಭಾಷೆಗಳಲ್ಲಿ ಎರಡು ಮೂರು ಹೆಸರುಗಳಿವೆ. ಎಲ್ಲವೂ ಹಾಲು ಮತ್ತು ಏಳು ಎಲೆಗಳ ಸೂಚಕಗಳೇ ಆಗಿವೆ. ಇಂಗ್ಲೀಷಿನಲ್ಲಿ ಮಾತ್ರ ತೀರಾ ವಿಭಿನ್ನವಾದ ಎರಡು ಹೆಸರುಗಳಿವೆ. ಸ್ಕಾಲರ್ ಟ್ರೀ ಎಂದೂ, ಡೆವಿಲ್ ಟ್ರೀ ಎಂದೂ ಎರಡು ಪ್ರಖ್ಯಾತ ಹೆಸರುಗಳು. ಮಿಲ್ಕಿ ಪೈನ್ ಎನ್ನುವುದು ಇನ್ನೊಂದು ಗುಣಸೂಚಕವಾದ ಹೆಸರು. ಹಿಂದಿಯವರೂ ಕೂಡಾ ಸೈತಾನ್ ಕಿ ಝಾಡ್ ಎನ್ನುತ್ತಾರೆ. ಈ ಕೆಟ್ಟ ಹೆಸರಿಗೆ ಕೂಡಾ ಕಾರಣಗಳಿವೆ.

ಲ್ಯಾಟಿನ್ ಶಾಸ್ತ್ರಿಗಳು ಇದನ್ನು ಅಲ್‍ಸ್ಟೋನಿಯ ಸ್ಕಾಲರಿಸ್ ಎಂದು ಕರೆದಿದ್ದಾರೆ. ಪ್ರೊ. ಚಾರ್ಲ್ಸ್ ಅಲ್‍ಸ್ಟೋನ್ ವಿಜ್ಞಾನಿಯು ಎಂಬಾತ ಇದನ್ನು ಮೊಟ್ಟ ಮೊದಲಿಗೆ ಆಧುನಿಕ ಪದ್ಧತಿಯಿಂದ ವರ್ಗೀಕರಿಸಿದಾತನು. ಸ್ಕಾಲರಿಸ್ ಎಂಬ ಎರಡನೆಯ ಹೆಸರಿಗೆ ಸ್ವಾರಸ್ಯಕರವಾದ ಎರಡು ಕಾರಣಗಳಿವೆ.

  1. ಹಿಂದಿನಕಾಲದಲ್ಲಿ ಅಧ್ಯಯವನ್ನು ಮುಗಿಸಿದ ಸ್ನಾತಕರನ್ನು ಗೌರವಿಸುತ್ತಾ ಘಟಿಕೋತ್ಸವದಲ್ಲಿ ಈ ಏಳೆಲೆಯ ಗೊಂಚಲನ್ನು ಅವರ ಕೈಗೆ ಇಡುತ್ತಿದ್ದರಂತೆ. ಈ ಗೊಂಚಲನ್ನು ಹಿಡಿದಿದ್ದಾನೆಂದರ ಆತನು ಒಬ್ಬ ವಿದ್ವಾಂಸನೆಂದು ಅರ್ಥ. ಇಂಗ್ಲೀಷಿನಲ್ಲಿ ಪಂಡಿತನಿಗೆ ಸ್ಕಾಲರ್ ಎಂದು ಕರೆಯುತ್ತಾರಷ್ಟೇ. ಸ್ಕಾಲರುಗಳ ಟ್ರೋಫಿಯಿದು ಆದ ಕಾರಣ ಸ್ಕಾಲರಿಸ್.
  2. ಈ ಶತಮಾನದ ಆದಿಯಲ್ಲಿ ನಮ್ಮೆಲ್ಲ ಶಾಲೆಗಳ ಕಪ್ಪುಬೋರ್ಡು, ಚಿಕ್ಕ ವಿದ್ಯಾರ್ಥಿಗಳಿಗೆ ಸೀಸದಕಡ್ದಿಗಳು (ಪೆನ್ಸಿಲುಗಳು), ಪಾಟಿಗಳ (ಸ್ಲೇಟ್) ಚೌಕಟ್ಟುಗಳು ಮತ್ತು ದೊಡ್ಡ ವಿದ್ಯಾರ್ಥಿಗಳ ಓದುವ ಮೇಜನ್ನು ತಯಾರಿಸುತ್ತಿದ್ದುದು ಈ ಮರದ ಕಾಂಡದಿಂದಲೇ. ಭವಿಷ್ಯತ್ತಿನ ಸ್ಕಾಲರುಗಳಿಗೆ ಬೇಕಾದ ಮೂಲಸೌಕರ್ಯವನ್ನು ಒದಗಿಸುವ ಮರವಾದ್ದರಿಂದಲೂ ಇದನ್ನು ಸ್ಕಾಲರಿಸ್ ಎಂದು ವರ್ಗೀಕರಿಸಲಾಯ್ತು.

ಡೆವಿಲ್ ಟ್ರೀ ಎಂಬ ಹೆಸರಿಗೆ ಸಂಬಂಧಿಸಿದಂತೆ ಕೇಳಿದಾಗ ದೆಹಲಿಯಲ್ಲಿ ಡಾಕ್ಟರೊಬ್ಬರು ಹಾಸ್ಯಭರಿತವಾಗಿ ಹೇಳಿದ ವಿಷಯವಿದು. ಈ ಮರದಲ್ಲಿ ದೆವ್ವಗಳು ವಾಸಿಸುತ್ತವೆ ಎಂದು ತಿಳಿದು ಇದಕ್ಕೆ ಈ ಜನರು ಸೈತಾನ್ ಕಿ ಝಾಡ್ ಎಂದು ಕರೆಯುತ್ತಾರೆ. ಆದರೆ ವಿದ್ಯೆಗೆ ಎಲ್ಲ ರೀತಿಯಿಂದ ಸೇವೆಯನ್ನು ಸಲ್ಲಿಸುವ ಮರದಲ್ಲಿ ದೆವ್ವಗಳು ಯಾಕಿದ್ದಾವು? ಥಾಯಿಲ್ಯಾಂಡು, ಶ್ರೀಲಂಕಾಗಳಲ್ಲಿ ಮತ್ತು ಕೆಲವೆಡೆಗಳಲ್ಲಿ ಈ ಮರದ ಕಟ್ಟಿಗೆಯಿಂದ ಶವದ ಪೆಟ್ಟಿಗೆಯನ್ನು ತಯಾರಿಸುತ್ತಾರೆ. ಶವದ ಮುಂದಿನ ಅವಸ್ಥೆಯೇ ಡೆವಿಲ್ ಎಂದು ತಿಳಿಯುವವರು ಡೆವಿಲ್ ಟ್ರೀ ಎಂಬ ಹೆಸರು ಕರೆಯುತ್ತಾರೇನೋ ಎಂದು ಹೇಳುತ್ತಾ, ದೇಶದ ಕುಖ್ಯಾತ ರಾಜಕಾರಣಿಯೊಬ್ಬನ ದೆಹಲಿ ಮನೆಯ ಮುಂದೆ ಈ ಮರವುಂಟು. ಅದಕ್ಕಾಗಿ ಇದಕ್ಕೆ ಡೆವಿಲ್ಸ್ ಟ್ರೀ ಎನ್ನುತ್ತಾರೆ ಎಂದು ನಕ್ಕಿದ್ದರವರು.

ಸಪ್ತಪರ್ಣೀ ಮರದ ಹೂವು. ಗೋವಾದಲ್ಲಿ ತೆಗೆದ ಚಿತ್ರ
ಸಪ್ತಪರ್ಣೀ ಮರದ ಹೂವು. ಗೋವಾದಲ್ಲಿ ತೆಗೆದ ಚಿತ್ರ
ಸಪ್ತಪರ್ಣೀ ಮರದ ಹೂವು. ಗೋವಾದಲ್ಲಿ ತೆಗೆದ ಚಿತ್ರ

ಶರದೃತುವಿನಲ್ಲಿ ಈ ಮರವು ಹೂವನ್ನು ಬಿಡುತ್ತದೆ. ಚೆಂಡಿನಾಕಾರದ ಗೊಂಚಲಿನಲ್ಲಿ ನೂರಾರು ಚಿಕ್ಕ ಚಿಕ್ಕ ಹೂವುಗಳು ಅರಳುತ್ತವೆ. ಮರದ ಎತ್ತರಕ್ಕೆ ಹೋಲಿಸಿದರೆ ಹೂವುಗಳು ತೀರಾ ಚಿಕ್ಕವು. ನಕ್ಷತ್ರಾಕಾರ ಇರುತ್ತವೆ ಇವು. ನೋಡಲಷ್ಟೆ ಚಿಕ್ಕವಿವು. ಆದರೆ ಪರಿಮಳವು ಮಾತ್ರ ಮರದ ನಾಲ್ಕು ಪಟ್ಟು ದೊಡ್ಡದು. ಸ್ವಲ್ಪಮಟ್ಟಿಗೆ ದಾಲ್ಚಿನ್ನಿಯ ಪರಿಮಳವನ್ನು ಹೋಲುತ್ತದೆ. ತನ್ನ ಸುತ್ತಮುತ್ತ ಸುಮಾರು ಇನ್ನೂರು ಇನ್ನೂರೈವತ್ತು ಮೀಟರು ವ್ಯಾಪ್ತಿಯಲ್ಲಿ ನವಿರಾದ ಕಂಪನ್ನು ಈ ಹೂವುಗಳು ಹರಡುತ್ತವೆ. ಮರದ ಹತ್ತಿರ ಹತ್ತಿರಕ್ಕೆ ಬಂದಷ್ಟೂ ಈ ಸುವಾಸನೆ ತೀವ್ರವಾಗುತ್ತದೆ. ಎಷ್ಟು ತೀವ್ರ ಎಂದರೆ, ಅನೇಕರಿಗೆ ಈ ಸುವಾಸನೆಯಿಂದ ತಲೆನೋವು ಬರುತ್ತದೆ. ಅಸ್ಥಮಾ ಇದ್ದವರಿಗೆ ಈ ಹೂವಿನ ಪರಾಗವು ಸಮಸ್ಯೆಯನ್ನು ತರಬಲ್ಲದು.

ಇತರ ಎಲ್ಲ ಮರಗಳಂತೆ ಹಾಲೆ ಮರವು ಕೂಡ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಅತಿಸಾರ, ಹಲ್ಲುನೋವು, ಮಲೇರಿಯಾ ಸಮಸ್ಯೆಗಳಿಗೆ ಮರದ ವಿವಿಧ ಭಾಗಗಳಿಂದ ಔಷಧವನ್ನು ತಯಾರಿಸುತ್ತಾರೆ.

ಮರವು ಹಾಲನ್ನು ಕೊಡುತ್ತದೆ ಎಂದ ಮಾತ್ರಕ್ಕೆ ತೊಗಟೆ ಕೆತ್ತಿದ ತಕ್ಷಣ ಕೊಳಾಯಿಯಂತೆ ಹರಿಯುತ್ತದೆ ಎಂದಲ್ಲ. ಇಲ್ಲಿ ಹಾಲು ಎಂದರೆ ಮರವು ಉತ್ಪಾದಿಸುವ, ದ್ರವರೂಪದ ಒಂದು ರಾಸಾಯನಿಕವು. ಮರದ ಕಾಂಡಕ್ಕೆ ಗಾಯವುಂಟು ಮಾಡಿದರೆ ಅದರಿಂದ ಸೂಜಿಯ ತುದಿಯಷ್ಟೇ ಚಿಕ್ಕದಾಗಿ, ನಿಧಾನವಾಗಿ ಈ ದ್ರವವು ಒಸರುತ್ತದೆ. ಕಳ್ಳಿಗಿಡದ ಹಾಲು, ರಬ್ಬರಿನ ಮರದ ಹಾಲಿನಂತೆ ಎಂದುಕೊಳ್ಳಬಹುದು. ನೋಡಲು ಹಾಲಿನಂತೆ ಬಣ್ಣವಿರುತ್ತದೆ ಹಾಗಾಗಿ ಹಾಲು ಎನ್ನುವಬೇಕು. ಅಷ್ಟೆ. ರುಚಿಯು ಮಾತ್ರ ದೇಹವಿಡೀ ಅಲುಗಾಡಿ ಹೋಗುವಷ್ಟು ಕಹಿ. ಮಲೆನಾಡು ಮತ್ತು ಕರಾವಳಿಯ ಜನರು (ಆಟಿ) ಆಷಾಢದ ಅಮಾವಾಸ್ಯಯ ದಿನದಂದು ಈ ಹಾಲನ್ನು ಸಂಗ್ರಹಿಸಿ, ಕಷಾಯವನ್ನು ತಯಾರಿಸಿ, ಅದನ್ನು ಮನೆಮಂದಿಯೆಲ್ಲ ತಲಾ ಎರಡು ಚಮಚೆಯಷ್ಟು ಸೇವಿಸುತ್ತಾರೆ. ಇದರಿಂದ ದೇಹದ ರೋಗನಿರೋಧಕ ಶಕ್ತಿಯ ವ್ಯಾಲಿಡಿಟಿಯು ಮುಂದಿನ ಆಷಾಢದವರೆಗೆ ವಿಸ್ತರಿಸುತ್ತದೆ ಎಂದು ಅನುಭವಸ್ಥರ ಮಾತು. ವಿಶೇಷವಾಗಿ ಕ್ಷಯರೋಗವು ಬಾರದಂತೆ ಈ ಔಷಧವು ತಡೆಯುತ್ತದೆ ಎಂದು ತಿಳಿದವರು ಹೇಳುತ್ತಾರೆ.

ಮರವು ಶತ್ರುಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಏರ್ಪಾಟು ಮಾಡಿಕೊಂಡಿರುವ ಕಹಿಯಾದ ರಸದಿಂದಲೇ ಮಾನವನು ರೋಗನಿರೋಧಕ ಔಷಧಿಯನ್ನು ಮಾಡಿಕೊಂಡಿರುವ ವಿಧಾನವಿದು ಹಾಲೆ ಕಾಂಡದ ಕಷಾಯ. ಬಾಯಿಯ ಮೂಲಕ ತೆಗೆದುಕೊಳ್ಳುವ ಲಸಿಕೆಯಂತೆ ಈ ಕಷಾಯವು ವರ್ತಿಸುತ್ತದೆ ಎಂದು ನಾವು ತಿಳಿಯಬಹುದು.

ಈ ಹಾಲನ್ನು ಯಾವಾಗೆಂದರೆ ಆವಾಗ ಸಂಗ್ರಹಿಸುವಂತಿಲ್ಲ. ಈ ಕೆಲಸವು ಆಷಾಢದ ಅಮಾವಾಸ್ಯೆಯಂದು ಬೆಳಿಗ್ಗೆ ಸೂರ್ಯೋದಯಕ್ಕೆ ಮುನ್ನವೇ ಆಗಬೇಕು. ಹಿಂದಿನ ರಾತ್ರಿ, ತಮ್ಮ ಸರಹದ್ದಿನಲ್ಲಿ ಒಂದು “ಪಾಲೆ” ಮರವನ್ನು ಗುರುತಿಸಿ, ಆ ಮರದ ಅಭಿಮಾನಿ ದೇವತೆಯನ್ನು ನಮಿಸಿ, ಬೆಳಿಗ್ಗೆ ಔಷಧಿಯನ್ನು ಕೊಡು ಎಂದು ಪ್ರಾರ್ಥಿಸುತ್ತಾರೆ. ಬೆಳಿಗ್ಗೆ ಬಂದಾಗ ಮರವನ್ನು ಮತ್ತೆ ಹುಡುಕುವಂತೆ ಆಗಬಾರದು ಎಂದು ಗುರುತಿಗಾಗಿ ಒಂದು ಬಿಳಿ ನೂಲನ್ನೂ ಮತ್ತು ಮರದ ತೊಗಟೆಯನ್ನು ಕೆತ್ತಲು ಒಂದು ಬಿಳಿದಾದ ಕಲ್ಲನ್ನೂ ಅಲ್ಲಿ ಇಟ್ಟು ಬರುತ್ತಾರೆ. ಕಲ್ಲಿನಿಂದಲೇ ಕೆತ್ತಬೇಕು ಎಂಬುದು ಒಂದು ನಿಯಮವಿದೆ. ಕತ್ತಿ ಅಥವಾ ಇನ್ನಿತರ ಲೋಹದ ಆಯುಧವನ್ನು ಇದಕ್ಕಾಗಿ ಬಳಸುವಂತಿಲ್ಲ. ಹಾಲಿನಲ್ಲಿರುವ ರಸಾಯನಿಕ ಸಂಯೋಜನೆಯು ಕಬ್ಬಿಣದೊಂದಿಗೆ ವರ್ತಿಸಿ ತನ್ನ ಔಷಧೀಯ ಗುಣಗಳನ್ನು ಕಳೆದುಕೊಳ್ಳುವುದೇ ಇದಕ್ಕೆ ಕಾರಣ.

ಈ ಕಷಾಯವನ್ನು ಅನುಭವಸ್ಥರ ಕೈಯಿಂದಲೇ ತಯಾರಿಸಿ ಪಡೆಯಬೇಕು. ಮನಸ್ಸಿಗೆ ಬಂದಂತೆ ಮಾಡಿಕೊಂಡು ಕುಡಿದರೆ ವಿಪರೀತವಾದ ಪರಿಣಾಮಗಳೂ ಆಗಬಲ್ಲವು. ಅದೇ ರೀತಿ, ಮರವನ್ನು ಸರಿಯಾಗಿ ಗುರುತಿಸಲಾಗದೆ ಬೇರೆ ಮರಗಳ ರಸವನ್ನು ಕುಡಿದು ಕೆಲವರು ನೇರವಾಗಿ ಧನ್ವಂತರಿಯ ಪಾದವನ್ನೇ ಸೇರಿದ ಘಟನೆಗಳೂ ನಡೆದಿವೆ. ಹೀಗಾಗಿ ಗುರುವಿನ ಮೂಲಕವೇ ಎಲ್ಲವನ್ನೂ ತಿಳಿಯುವುದು ಸರಿಯಾದ ಮಾರ್ಗವು.

ಇಂದು ಮತ್ತೊಂದು ಶುಭಪರ್ವ. ಪುಷ್ಯಾರ್ಕ ಎನ್ನುವ ಪರ್ವ. ಈ ಸನ್ನಿವೇಶದಲ್ಲಿ ಕೂಡ ಒಂದು ಹಾಲಿನ ಮರದ ಪೂಜೆಯುಂಟು. ಎಲ್ಲಿದೆ ಮರ ಎಂದು ಹುಡುಕುವ ಶ್ರಮವೇ ಇಲ್ಲ. ನಾವಿದ್ದಲ್ಲಿಗೇ ಬರುವುದು ಈ ಮರ. ಹಾಲು ಸಹ ಕಹಿಯಲ್ಲ. ಯಾವತ್ತೂ ಸಿಹಿ. ಈ ಹಾಲನ್ನು ಪಡೆಯಲು ನಾವು ತೊಗಟೆಯನ್ನು ಕೆತ್ತುವ ಶ್ರಮ ಪಡಬೇಕಿಲ್ಲ. ಕೇವಲ ಭಕ್ತಿಯಿಂದ ಪ್ರಾರ್ಥಿಸಿದರೂ ಸಾಕು. ಹಾಲು ಹರಿಯತೊಡಗುತ್ತದೆ. ದೈಹಿಕ ವ್ಯಾಧಿಗಳನ್ನಷ್ಟೇ ಅಲ್ಲ ಮಾನಸಿಕ ವ್ಯಾಧಿಗಳನ್ನೂ ಈ ಮರದ ಹಾಲು ನಿವಾರಿಸಬಲ್ಲದು. ಹೀಗಾಗಿಯೇ ಈ ಮರವನ್ನು ಕಲ್ಪವೃಕ್ಷ ಎಂದೂ, ಕಾಮಧೇನು ಎಂದೂ ಕರೆದರು, ಶ್ರೀರಾಘವೇಂದ್ರಪ್ರಭುಗಳು ಎಂಬುದು ಜನಪ್ರಿಯ ಹೆಸರು. ಕರೆಯಲು ಸುಲಭವಾಗಲಿ ಎಂದು ರಾಯರು ಎಂಬ ಮತ್ತೊಂದು ಹೆಸರಿದೆ. ಪುಷ್ಯಾ ನಕ್ಷತ್ರವು ಭಾನುವಾರದೊಡಗೂಡಿದ ದಿನದ ಪೂಜೆಯಂತೂ ಅಲ್ಟ್ರಾ ಫಾಸ್ಟ್ ಪರಿಣಾಮಕಾರಿ. ಇವರನ್ನು ಸ್ಮರಿಸುತ್ತಾ ಹಾಲನ್ನು ಸೇವಿಸಿದರೆ ತಸ್ಯ ಕುಕ್ಷಿಗತಾಃ ದೋಷಾಃ ಸರ್ವೇ ನಶ್ಯಂತಿ ತತ್ ಕ್ಷಣಾತ್! ಅಷ್ಟೇ.

ಆಟಿ ಆಮಾವಾಸ್ಯೆ + ಪುಷ್ಯಾ ನಕ್ಷತ್ರ + ಭಾನುವಾರ! ಇಂದಿನ ದಿನವೇ ಶುಭದಿನವು.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.