ಹಿರಿಯರನ್ನು ಮರೆಯಬಾರದು. – ಆಲೂರು ವೆಂಕಟರಾಯರು

ಕನ್ನಡ ಸಂಸ್ಕೃತಿಗೆ ಮರಾಠಿ, ತಮಿಳು, ತೆಲುಗು ಮತ್ತು ಮಲಯಾಳಿಗಳ ಪ್ರಭಾವದಿಂದ ಏಟು ಬೀಳುತ್ತಿದೆ. ಇತರರನ್ನು ದೂಷಿಸುವ ಮೊದಲು ನಮ್ಮದನ್ನು ಗಟ್ಟಿಮಾಡಿಕೊಳ್ಳಬೇಕು ಎನ್ನುವ ದೂರದೃಷ್ಟಿ ಬಹಳ ಹಿಂದೆಯೇ ನೂರಾರು ಜನರಿಗೆ ಇತ್ತು. ಆದರೆ ದೂರದೃಷ್ಟಿ ಇರುವ ಎಲ್ಲರಿಗೂ ಕರ್ತೃತ್ವ ಶಕ್ತಿಯು ಇರಬೇಕಲ್ಲ? ನಾಯಕತ್ವದ ಗುಣಗಳಿರುವವರು ಬಹಳ ಕಡಿಮೆ. ಅನೇಕರ ರಾಜಕೀಯಗಳ ಮಧ್ಯ ನಮ್ಮತನವನ್ನು ಎತ್ತಿ ಹಿಡಿವ ನಾಯಕನೊಬ್ಬ ನಮ್ಮ ಭಾಷೆಗೆ ಬೇಕಿದ್ದ. ನಮ್ಮ ಸುದೈವದಿಂದ ಅಂತಹ ಒಬ್ಬ ಸಾತ್ವಿಕ ನಾಯಕ ನಮ್ಮ ಮಧ್ವಮತದಿಂದಲೇ ಹೊರಹೊಮ್ಮಿದ. ಅವನೇ ವೆಂಕಟರಾಯ. ತನ್ನ ಪಾಂಡಿತ್ಯ ಹಾಗು ಧೈರ್ಯಶಾಲಿಗುಣಗಳಿಂದ ವೆಂಕಟರಾಯರು ಎಂದೇ ಪ್ರಖ್ಯಾತನಾದ. ತನ್ನೂರಿನ ಹೆಸರಿನಿಂದಲೇ ಗುರುತಿಸಿಕೊಂಡು, ಕನ್ನಡವೂ ಒಂದು ಪ್ರಬಲ ರಾಜ್ಯ. ಕನ್ನಡಿಗರು ಕೂಡ ಶಕ್ತಿಶಾಲಿಗಳು ಎಂದು ತೋರಿಸಿಕೊಟ್ಟ ಮಹನೀಯರು ಆಲೂರು ವೆಂಕಟರಾಯರು.

ಕನ್ನಡದವರನ್ನು ಮುಂಬಯಿಯವರೂ, ಹೈದರಾಬಾದಿನವರೂ ಮತ್ತು ಮದರಾಸಿಗಳಿಂದಲೂ ಆಳಿಸಿಕೊಳ್ಳುವ ದೈನ್ಯದ ಸ್ಥಿತಿಯಿಂದ ಹೊರತಂದದ್ದೇ ಇವರ ನಾಯಕತ್ವ. ಬರೀ ಬಾಯಿಮಾತಲ್ಲೇ ಸ್ವತಂತ್ರ ಬೇಕೆಂದು ಹಲಬುತ್ತ ಕೂತಿದ್ದ ಕೋಟಿ ಕೋಟಿ ಜನರನ್ನು ಒಂದು ಅಭಿಪ್ರಾಯಕ್ಕೆ ತರುವಂತ ಒಂದು ಮಂಗಲ ಕಾರ್ಯವನ್ನು ಮಾಡಿಸಿದ ಪುರೋಹಿತರು ಇವರು. ಹೀಗಾಗಿಯೇ ಕನ್ನಡದ ಕುಲಪುರೋಹಿತರು ಎಂಬ ಒಂದು ಬಿರುದು ಇವರಿಗೆ.

ಬ್ರಾಹ್ಮಣರು ಎಂದರೇನೆ ದ್ವೇಷಿಸುವ ಜನರು ಇನ್ನು ಇವರಿಗೆ ಪುರೋಹಿತರು ಎಂದು ಬಿಟ್ಟರೆ ಸಹಿಸಿಯಾರೇ? ಬ್ರಾಹ್ಮಣರು ಎಂಬ ಒಂದೇ ಕಾರಣದಿಂದ ಬಾಲಗಂಗಾಧರ ತಿಲಕರು ಮತ್ತು ಸರ್. ಎಂ. ವಿಶ್ವೇಶ್ವರಾಯರನ್ನು ದ್ವೇಷಿಸುವರ ಸಂತತಿ ಇನ್ನೂ ಬದುಕಿದೆಯಲ್ಲ.ಅಂತಹವರು ಕೂಡ ಇಂದು ಕರ್ನಾಟಕ ಎಂಬ ಸ್ವಂತ ರಾಜ್ಯದಲ್ಲಿ ನೆಲೆನಿಂತಿದ್ದಾರೆ ಎಂದರೆ ಅದಕ್ಕೆ ವೆಂಕಟರಾಯರ ದೂರದರ್ಶಿತ್ವ ಹಾಗು ನಾಯಕತ್ವದ ಹೋರಾಟವೇ ಕಾರಣ.

ಇವರ ಹೆಸರಿನಲ್ಲಿ ಬೆಂಗಳೂರಿನಲ್ಲಿ ಒಂದು ರಸ್ತೆ ಇದೆ. ಕಲಾಸಿಪಾಳ್ಯದಿಂದ ಮೈಸೂರು ರಸ್ತೆಗೆ ಸೇರುವ ಬಹುದೊಡ್ಡ ರಸ್ತೆಯದು. ಚಾಮರಾಜಪೇಟೆಯಲ್ಲಿದೆ. ಪ್ರಾಯಶಃ ಸರ್ಕಾರದಿಂದ ಇದೊಂದೇ ದೊಡ್ಡ ಮಟ್ಟದ ಮರ್ಯಾದೆ ಇವರಿಗೆ ದೊರಕಿದ್ದು. ಆದರೆ ಅದು ಕೂಡ ಶಾಶ್ವತವೆನ್ನುವ ಸಂತಸ ನಮಗಿಲ್ಲ. ಯಾಕೆಂದರೆ ಈ ರಸ್ತೆಗೆ ಅಲ್ಬರ್ಟ್ ವಿಕ್ಟರ್ ರಸ್ತೆ ಎಂಬ ಹೆಸರು ಕೂಡ ಇದೆ. ಚಿಕ್ಕದಾಗಿ ಇದನ್ನು ಎ.ವಿ. ರಸ್ತೆ ಎಂದೇ ಎಲ್ಲರೂ ಕರೆವುದು. ಈ ಎ.ವಿ. ಎನ್ನುವುದನ್ನು ಹೇಗೆ ಬೇಕಾದರೂ ಅರ್ಥೈಸಿಕೊಳ್ಳಬಹುದು. ಅಲ್ಬರ್ಟ್ ವಿಕ್ಟರ್ ಎಂದಾದರೂ ಕರೆಯಿರಿ ಆಲೂರು ವೆಂಕಟರಾಯರ ರಸ್ತೆ ಎಂದಾದರೂ ಕರೆಯಿರಿ! ಇಂತಹ ದುರ್ಗತಿ ನಮಗೆ ಒಳ್ಳೆಯದನ್ನು ಮಾಡಿಕೊಟ್ಟ ಮಹನೀಯರಿಗೆ.

ಕನ್ನಡ, ಮರಾಠಿ, ಇಂಗ್ಲೀಷಿನಲ್ಲಿ ಸಾಹಿತ್ಯವನ್ನು ಹಾಗೂ ಮಧ್ವಸಿದ್ಧಾಂತದ ಮೇಲೆ 6 ಸಂಶೋಧನಾತ್ಮಕ ಗ್ರಂಥಗಳನ್ನೂ ಶ್ರೀವೆಂಕಟರಾಯರು ರಚಿಸಿದ್ದಾರೆ.ಇಂದು ಫೆಬ್ರುವರಿ 25. ಕುಲಪುರೋಹಿತರು ಕಣ್ಮರೆಯಾದ ದಿನ. ಬೇರೆ ಯಾರಾದರೂ ಸ್ಮರಿಸುತ್ತಾರೋ ಇಲ್ಲವೋ. ನಾವಂತೂ ಸ್ಮರಿಸಲೇಬೇಕಾದದ್ದು ಕರ್ತವ್ಯ. ಹಿರಿಯರನ್ನು ಮರೆಯಬಾರದು.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.