ಸಾಯಲೊಪ್ಪದ ಬಳ್ಳಿಯೊಂದಿದೆ. ತಿನೋಸ್ಪೋರಾ ಕಾರ್ಡಿಫೋಲಿಯಾ ಎಂದು ಲ್ಯಾಟಿನ್ ಶಾಸ್ತ್ರಿಗಳು ಕರೆವರು. ಗುಡೂಚ ಎಂದು ಭಾರತೀಯ ಶಾಸ್ತ್ರಿಗಳು ಕರೆವರು. ಈ ಎರಡೂ ಹೆಸರಿಗಿಂತಲೂ ಇದು ನಮಗೆ ಪರಿಚಿತವಾಗಿರುವುದು ಅಮೃತಬಳ್ಳಿ ಎಂಬ ಹೆಸರಿನಿಂದ.
ಸಾಯಲೊಪ್ಪದ ಅಲ್ಲ, ಸಾಯದ ಎಂದರೆ ಸರಿಯಾದ ಮಾತು. ಈ ಗುಣವುಳ್ಳ ಬಳ್ಳಿಯಾದ್ದರಿಂದಲೇ ಅ-ಮೃತ ಎನ್ನುವ ಹೆಸರಿದಕ್ಕೆ. ವಾತಾವರಣದಲ್ಲಿ ಚೂರು ತೇವ ಇದ್ದರೂ ಸಾಕು ಹಲವು ತಿಂಗಳುಗಟ್ಟಲೆ, ಈ ಬಳ್ಳಿಯು ಮಣ್ಣಿನ ಸಂಪರ್ಕವೇ ಇಲ್ಲದಿದ್ದರೂ ಬದುಕಿ ಇರಬಲ್ಲದು. ವಾತಾವರಣದಲ್ಲಿ ನೀರಿನ ಅಂಶ ಕಡಿಮೆ ಇದ್ದರೂ ಸಾಕಷ್ಟು ಕಾಲ ಹಸಿಯಾಗಿಯೇ ಇರುತ್ತದೆ. ಬಳ್ಳಿಯ ಒಂದಿಂಚಿನ ತುಂಡನ್ನು ನೆಲದಲ್ಲಿ ಚುಚ್ಚಿದರೂ ಸಾಕು ಚಿಗಿತು ಮನೆಯ ಮೇಲೆಲ್ಲ ಹಬ್ಬಿ ನಸುನಗುತ್ತದೆ.
ನಾವು ಹಿಂದೆ ವಾಸವಾಗಿದ್ದ ಮನೆಯ ಬಳಿ ಒಂದು ಪುಟ್ಟ ಕಾಡು ಇತ್ತು. ಕಾಡಿನೊಳಗಿಂದ ಅಮೃತ ಬಳ್ಳಿಯೊಂದು ಹಬ್ಬಿ, ಹತ್ತಿರದ ಕರೆಂಟು ಕಂಬವನ್ನು ಹತ್ತಿ, ಅದರ ಲೈನುಗಳ ಮೇಲೆಲ್ಲಾ ಬೆಳೆದಿತ್ತು. ಮಳೆಗಾಲವು ಹತ್ತಿರ ಬಂದಾಗ ಒಮ್ಮೆ ಕೆ.ಇ.ಬಿ. ಯವರು ಬಂದು ಅದನ್ನೆಲ್ಲಾ ಕಿತ್ತು ಹಾಕಿ ಹೋಗಿದ್ದರು. ಆದರೆ ಹೇಗೋ ಅವರ ಕಣ್ಣು ತಪ್ಪಿಸಿ ಒಂದು ಉದ್ದನೆಯ ತುಂಡು ಆ ಲೈನಿನ ಮೇಲೆ ಉಳಿದುಕೊಂಡಿತ್ತು. ಎಲ್ಲಿಯವರೆಗೆ ಉಳಿದಿತ್ತು ಎಂದರೆ, ಮುಂದಿನ ಬೇಸಿಗೆಯು ಬರುವವರೆಗೂ. ಮಣ್ಣಿನ ಸಂಪರ್ಕವೇ ಇಲ್ಲದೆ, ಏನಿಲ್ಲ ಎಂದರೂ ೨೦-೨೫ ಅಡಿ ಎತ್ತರದಲ್ಲಿ ಇದ್ದ ಆ ತುಂಡಿನಲ್ಲಿ ಎರಡನೆಯ ಬೇಸಿಗೆ ಮುಗಿದು, ಚೂರು ಮಳೆ ಪ್ರಾರಂಭವಾದ ತಕ್ಷಣ ಎಲೆಗಳು ಚಿಗಿತವು. ಬೇರು ಕೂಡ ಹೊರಹೊಮ್ಮತೊಡಗಿತು.
ಮುಂದಿನ ಬಾರಿಯ ಮೈನ್ಟೆನನ್ಸ್ ಕಾರ್ಯಕ್ರಮದಲ್ಲಿ ಕೆಯಿಬಿಯವರು ಈ ಅಂತರಿಕ್ಷದಲ್ಲಿನ ತುಂಡನ್ನು ಸಹ ಕಿತ್ತು ದೂರ ಎಸೆದು ಹೋದರು.
ಎಂತಹ ಸಂದರ್ಭದಲ್ಲೂ ಸೋಲನ್ನೊಪ್ಪದ ಬಳ್ಳಿಯಿದು. ನೀರಿಲ್ಲ ಎನ್ನುವುದು ಸಾವುದಕೆ ಕಾರಣವೇ ಅಲ್ಲ ಇದಕ್ಕೆ. ತುಂಡು ಮಾಡಿ ಎಸೆದರೆ ತಂಡ ತಂಡವಾಗಿ ಬರುತ್ತೇನೆ ಎನ್ನುತ್ತದೆ. ಪ್ರಾಣವನ್ನು ಅಧಿಕೃತವಾಗಿ ತ್ಯಾಗ ಮಾಡುವುದು ಏನಿದ್ದರೂ ಧನ್ವಂತರಿದೇವನ ಹೆಸರಿನಲ್ಲಿ ಮಾತ್ರ.
ಧನ್ವಂತರಿಹೋಮದಲ್ಲಿ ಇದು ಪ್ರಧಾನ ದ್ರವ್ಯವು. ಹಸುವಿನ ತುಪ್ಪ, ಹಸುವಿನ ಹಾಲಿನಲ್ಲಿ ಅದ್ದಿದ ಅಮೃತಬಳ್ಳಿಯ ಸಮಿಧೆಗಳನ್ನು ದೇವಧನ್ವಂತರಿಗೆ ಸಮರ್ಪಿಸುತ್ತಾರೆ. ಸರಿಯಾದ ಪ್ರಮಾಣ ಮತ್ತು ಅನುಸಂಧಾನದೊಂದಿಗೆ ಹೋಮವನ್ನು ಮಾಡಿದಲ್ಲಿ ಈ ಅಮೃತಬಳ್ಳಿಯಲ್ಲಿರುವ ಜಿಜೀವಿಷೆಯು ನಮ್ಮಲ್ಲಿಯೂ ಕೂಡಾ ಬಂದೇ ಬರುವುದು. ಇದನ್ನು ಅದ್ದಿರುವ ಹಾಲು ಸಹ ಔಷಧಿಯೇ ಆಗುವುದು.
ಅತ್ಯಂತ ತೀವ್ರತರವಾದ ಕಹಿಯನ್ನು ಹೊಂದಿರುವುದು ಕೂಡಾ ಈ ಬಳ್ಳಿಗೆ ಬದುಕುವ ಒಂದು ಉಪಾಯ. ಈ ಕಹಿಯಿಂದಾಗಿಯೇ ಬಳ್ಳಿಗೆ ಹುಳಗಳು ಹತ್ತುವುದು ತೀರಾ ಕಡಿಮೆ. ತೀರಾ ಕಡಿಮೆ ಅನ್ನುವಷ್ಟು ಹುಳಗಳು ಈ ಗಿಡವನ್ನು ಆಶ್ರಯಿಸಿ ಬದುಕುತ್ತವೆ. ಅದೂ ಒಂದು ನಿರ್ದಿಷ್ಟ ಅವಧಿಗೆ ಮಾತ್ರ. ಬಳ್ಳಿಯ ಈ ಕಹಿಯು ಒಂದು ಉತ್ಕೃಷ್ಟ ಪ್ರೋಟಿನು. ಈ ಪ್ರೊಟೀನನ್ನು ಹೀರಿಯೇ ಬೆಳೆಯುವ ಹುಳಗಳು ಕೆಲವು ಇದ್ದಾವೆ. ಈ ಗಿಡದ ರಸದಿಂದ ತಮ್ಮಲ್ಲಿ ರೋಗನಿರೋಧಕ ಶಕ್ತಿ ಮತ್ತು ಇತರ ಶತ್ರುಗಳಿಗೆ ಅಪಾಯವನ್ನು ಉಂಟು ಮಾಡಬಲ್ಲ ವಿಷವನ್ನು ಅವು ಬೆಳೆಸಿಕೊಳ್ಳುತ್ತವೆ. ಕಂಬಳಿಹುಳದಂತಹ ಒಂದು ಕೀಟವು ಈ ಪ್ರೋಟೀನನ್ನು ಹೀರಿಕೊಂಡು ಉಜ್ವಲ ಹಸಿರಿನ ವಿಷವೊಂದನ್ನು ತಯಾರಿಸಿಕೊಳ್ಳುತ್ತದೆ. ಇತರ ಹುಳಗಳು ಅಥವಾ ಪಕ್ಷಿಗಳು ಇದನ್ನು ಹಿಡಿಯಲು ಬಂದರೆ ಈ ವಿಷವನ್ನು ಅವುಗಳತ್ತ ರಭಸವಾಗಿ ಚಿಮ್ಮಿಸುತ್ತವೆ. ಅಪಾಯದಿಂದ ಪಾರಾಗುತ್ತವೆ. ಕೆಲವು ಸಲ ಈ ಚಿಮ್ಮುವಿಕೆಯು ನೀರಿನ ಪಿಸ್ತೂಲಿನಿಂದ ಚಿಮ್ಮುವ ಹಾಗೆ ರಭಸವಾಗಿ ಇರುತ್ತದೆ. ಅಂತೂ ಈ ರೀತಿಯಲ್ಲಿಯೂ ಕೂಡ ಈ ಗುಡೂಚಿಯು ಗುಡ್ ಗರ್ಲ್ ಎನ್ನಿಸಿಕೊಳ್ಳುತ್ತದೆ. ಜೀವರಕ್ಷಕವಾಗುತ್ತದೆ.
ಈ ಬಳ್ಳಿಯ ಮೇಲಿನಿಂದ ಹಾಯ್ದುಬರುವ ಗಾಳಿಯು ಸಹ ಆರೋಗ್ಯಕರ ಎಂದು ಹಿರಿಯರು ಹೇಳುತ್ತಾರೆ. ಔಷಧೀಯ ಗುಣಗಳ ಬಗ್ಗೆ ಹೇರಳವಾದ ಮಾಹಿತಿಯು ಇಂಟರ್ ನೆಟ್ಟಿನಲ್ಲಿ ಲಭ್ಯ.
Be First to Comment