ಷಷ್ಠಿಪೂರ್ತಿಯಲ್ಲಿ ಭಯಹುಟ್ಟಿಸಿದ ಭಯನಾಶನ

2015ರ ನವೆಂಬರ್ ತಿಂಗಳ ಕೊನೆಯ ಮೂರು ನಾಲ್ಕು ದಿನಗಳಂದು ತಿರುಮಲ ಪರ್ವತದ ಮೇಲೆ ನೆರೆದಿದ್ದ ಅನೇಕ ಮಂದಿ ಭಕ್ತರ ಮುಖಗಳಲ್ಲಿ ಏನೋ ಒಂದು ವಿಚಿತ್ರವಾದ ದುಗುಡ ಮನೆಮಾಡಿತ್ತು. ಅದಕ್ಕೆ ಕಾರಣವಾಗಿದ್ದು ಎಡೆಬಿಡದೆ ಸುರಿಯುತ್ತಿದ್ದ ಮಳೆ. ಇವರೆಲ್ಲರೂ ಕಷ್ಟಸಾಧ್ಯವಾದ ಪ್ರಯತ್ನದಿಂದ ತಿರುಮಲ ದೇವಸ್ಥಾನದ ಪರವಾನಗಿ ಪಡೆದುಕೊಂಡು ತಮ್ಮ ಪ್ರೀತಿಯ ಗುರುಗಳ 60ನೆ ವರ್ಷದ ವರ್ಧಂತಿಯನ್ನು ಆಚರಿಸಲು ಎಲ್ಲ ವಿಧವಾದ ಸಿದ್ಧತೆಯನ್ನು ಮಾಡಿಕೊಂಡಿದ್ದರು. ವೈಭವದ ವೇದಿಕೆ, ನೂರಾರು ಜನರಿಗೆ ಶೀಘ್ರದರ್ಶನ, ಊಟ ಎಲ್ಲಕ್ಕೂ ಭಾರೀ ಪ್ರಮಾಣದ ವ್ಯವಸ್ಥೆಯನ್ನು ಆಗಿತ್ತು. ಆದರೆ ಮಳೆಯು ಇವರಿಗಿಂತಲೂ ಭಾರೀ ಪ್ರಮಾಣದ ಸಿದ್ಧತೆಯನ್ನು ಮಾಡಿಕೊಂಡೇ ಬಂದು ಬಹಳ ಶಿಸ್ತಿನಿಂದ ಕಾರ್ಯತತ್ಪರವಾಗಿತ್ತು. ತಿ.ತಿ.ದೇ ಎಕ್ಸೆಕ್ಯೂಟಿವ್ ಆಫಿಸರಿಗೆ ಈ ಮೋಡದ ಮೇಲೇನಾದರೂ ನಿಯಂತ್ರಣವಿದ್ದರೆ ಕಾರ್ಯಕ್ರಮದ ಸಂಘಟಕರು ಅವರನ್ನೇ ಹೋಗಿ ದುಂಬಾಲು ಬಿದ್ದು ಪರಿಸ್ಥಿತಿಯನ್ನು ಸರಿಮಾಡಿಕೊಳ್ಳುತ್ತಿದ್ದರೇನೋ. ಏನು ಮಾಡುವುದು? ಹಾಗೆ ಇಲ್ಲವಲ್ಲ! ಒಂದೇ ಸಮನೆ ಮಳೆ ಸುರಿಯುತ್ತಲೇ ಇತ್ತು.

ಮುಖ್ಯವಾದ ದಿನದಂದು ನಡೆವ ಭಗವಂತನ ಚಮತ್ಕಾರದ ಬಗ್ಗೆ ಅವರಿಗೆ ಮೊದಲೇ ಅರಿವಿದ್ದರೆ ಯಾರಿಗೂ ದುಗುಡವೂ ಇರುತ್ತಿದ್ದಿಲ್ಲ.  ಆದರೆ ಅವರೂ ಮಾನವರೇ ಅಲ್ಲವೇ!

ಕಾರ್ಯಕ್ರಮದ ಹಿಂದಿನ ದಿನದವರೆಗೆ ತಲೆ ಚಿಟ್ಟು ಹಿಡಿಸುವ ಮಳೆಯು ಇದ್ದರೆ, ಉದ್ಘಾಟನೆಯ ದಿನ ಮೂಡಿದ್ದು ಪ್ರಫುಲ್ಲತೆಯ ಹೊಂಬೆಳಕು. ಅಲ್ಲಿಂದ ಮುಂದೆ ಮೂರು ದಿನಗಳ ಕಾಲ ಇದ್ದಿದ್ದು ತಿರುಮಲದಲ್ಲಿ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಭಕ್ತವೃಂದದ ಸಡಗರದ ಓಡಾಟದ ಜೊತೆಗೆ ಮೈ ಚುರ್ರೆನ್ನಿಸುವ ಬಿಸಿಲಿನ ಆರ್ಭಟ ಮಾತ್ರ. ಅಲ್ಲಿಗೆ ಮಳೆಯೊಂದಿಗೆ ಕೊಚ್ಚಿಹೋಗಬಹುದಾಗಿದ್ದ ಸುಂದರ ಕ್ಷಣಗಳೆಲ್ಲ ಮತ್ತೆ ಚಿಗಿತು ಎಲ್ಲರ ಸಂಘಟಕರ ಕಣ್ಣಲ್ಲಿ ಆನಂದಬಾಷ್ಪಗಳಾಗಿ ನಲಿದಾಡಿದವು. ಅಯೋಜನೆ ಮಾಡಿಕೊಂಡಂತೆಯೇ ಕಾರ್ಯಕ್ರಮವೆಲ್ಲ ಸುಸೂತ್ರವಾಗಿ ನಡೆದವು. ಆದರೆ ಚಮತ್ಕಾರದ ಅರಿವಾಗಿದ್ದೇ ಕಾರ್ಯಕ್ರಮವು ಮುಕ್ತಾಯವಾದಾಗ. ಶ್ರೀಕೃಷ್ಣಾರ್ಪಣಮಸ್ತು ಹೇಳುವುದೇ ತಡ ದೇಶಾಂತರ ಹೋಗಿದ್ದ ಮೋಡಗಳೆಲ್ಲ ಒಮ್ಮೆಗೆ ದಟ್ಟೈಸಿ ಧಾರಾಕಾರ ಮಳೆಯು ಆರಂಭವಾಗಿಬಿಟ್ಟಿತು. ಅಂದರೆ, ಷಷ್ಟಿಪೂರ್ತಿ ಕಾರ್ಯಕ್ರಮವು ನಡೆವಷ್ಟು ಕಾಲ ಮಾತ್ರ ಮಳೆಯು ನಿಂತಿತ್ತು! ಮೂರು ದಿನಗಳ ಕಾಲ. ಮುಗಿದಿದ್ದೇ ತಡ ಧೋ ಎಂದು ಶುರುವಾಗಿದೆ!

ಈ ವಿದ್ಯಮಾನವನ್ನು ನೇರವಾಗಿ ನೋಡಿದ ಎಲ್ಲರ ಮೈಯು ಕ್ಷಣಕಾಲ ಜುಮ್ಮೆಂದಿರಲಿಕ್ಕೂ ಸಾಕು. ಗುರುಗಳ ಷಷ್ಟಿಪೂರ್ತಿಶಾಂತಿಯು ಭಗವಂತನ ಮುದ್ರಿಕೆಯೊಂದಿಗೆ ಆಗಿದೆ ಎಂಬ ಅರಿವು ಮೂಡಿದೊಡನೆ ಯಾರಿಗೆ ರೋಮಾಂಚನವಾಗದು ಹೇಳಿ? ಹಾಗೇನಾದರೂ ಆಗದೆ ಇದೆಯೆಂದರೆ ಅವರು ಸಂವೇದನಾರಹಿತರಾಗಿರಬೇಕಷ್ಟೇ.

ಶ್ರೀವೇಂಕಟೇಶ್ವರ ಸ್ತೋತ್ರದಲ್ಲಿ “ಭಯಕೃದ್ ಭಯನಾಶನಃ…” ಎಂದು ಯಾಕೆ ಹೇಳಿದ್ದಾರೆ ಎನ್ನುವ ವಿಷಯಕ್ಕೆ ಮೇಲಿನ ಘಟನೆಯಲ್ಲಿ ಉತ್ತರ ಸಿಕ್ಕಿತು. ಭಯವನ್ನು ಹುಟ್ಟಿಸಿ ಅದರ ನಾಶವನ್ನೂ ಮಾಡುವುದು ಅವನ ಆಟದ ಒಂದು ಪದ್ಧತಿ. ನಮಗೆ ಸಮಸ್ಯೆ ಇರಬಾರದೆಂದರೆ ಅವನಲ್ಲಿ ಶರಣಾಗತಿಯನ್ನು ವ್ಯಕ್ತಪಡಿಸಬೇಕು ಮತ್ತು ಶ್ರೀವಿದ್ಯಾಧೀಶತೀರ್ಥ ಶ್ರೀಪಾದಂಗಳವರಂತಹ ಯೋಗ್ಯರಾದ ಗುರುಗಳ ಹಿಂದೆ ನಿಲ್ಲಬೇಕು. ಯಾವುದನ್ನೂ ಮಾಡದಿದ್ದರೆ ಭಯವನ್ನು ಹುಟ್ಟಿಸುತ್ತಾನೆ. ಗುರುಗಳೊಂದಿಗೆ ಇದ್ದಲ್ಲಿ ಭಯವನ್ನು ನಾಶಪಡಿಸುತ್ತಾನೆ.

ತಮ್ಮ ಶಾಂತಿಯ ಕಾರ್ಯಕ್ರಮದಲ್ಲಿ ಭಗವಂತನ ಸಾನಿಧ್ಯವನ್ನು ತುಂಬಿಸುವುದರ ಮೂಲಕ ನಮಗೆಲ್ಲ ಶಾಂತಿಯನ್ನು ತಂದಿತ್ತವರು ಶ್ರೀಶ್ರೀವಿದ್ಯಾಧೀಶತೀರ್ಥ ಶ್ರೀಪಾದಂಗಳವರು. ಅವರಿಗೆ ನನ್ನ ನಮನಗಳು.

ತಿರುಮಲೆಯ ದೇಗುಲದ ಚಿತ್ರದ ಕೃಪೆ: ವಿಕಿಪಿಡಿಯಾ

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.