ಶ್ರೀವೇದವ್ಯಾಸಾಯ ನಮಃ
ಮಂತ್ರಾಲಯದಿಂದ ಪೂರ್ವದಿಕ್ಕಿಗೆ ಸುಮಾರು 75 ಕಿಲೋಮೀಟರು ಪಯಣಿಸಿದರೆ ಗದ್ವಾಲ್ ಎಂಬ ಊರು ಸಿಗುತ್ತದೆ. ಪುಟ್ಟ ನಗರವೆಂದೋ ಅಥವಾ ದೊಡ್ಡ ಪಟ್ಟಣವೆಂದೋ ನೀವು ಕರೆಯಬಹುದು. ಕೃಷ್ಣಾ ನದಿಗೆ ಬಲು ಸಮೀಪದಲ್ಲೇ ಇರುವ ಈ ಊರಿಗೆ ಬಿರುಬಿಸಿಲೇ ಬಟ್ಟೆ. ಯಥೇಚ್ಛವಾಗಿ ಹಾರಾಡುವ ಧೂಳೇ ಶೃಂಗಾರ ಸಾಮಾಗ್ರಿ. ಇಂದು ಧೂಳಿನ ಸಾಮ್ರಾಜ್ಯವಾದ ಈ ಊರು ಹಿಂದೊಮ್ಮೆ ರಾಜಕೀಯವಾಗಿ ದೊಡ್ಡ ಶಕ್ತಿಕೇಂದ್ರವೇ ಆಗಿತ್ತು. ಆದರೆ ಆಧ್ಯಾತ್ಮ ಚಿಂತಕರ ಮಾತು ಬಂದಲ್ಲಿ ಈ ಊರು ಯಾವತ್ತೂ ಅತ್ಯಂತ ಭಾಗ್ಯಶಾಲಿ. ಶ್ರೀಗೋಪಾಲದಾಸರು, ಶ್ರೀಶೇಷದಾಸರು, ಶ್ರೀವ್ಯಾಸತತ್ತ್ವಜ್ಞರು, ಮಾದನೂರು ವಿಷ್ಣುತೀರ್ಥರೇ ಮೊದಲಾದ ಬಹುದೊಡ್ಡ ಸಾಧಕರು ಈ ಊರಿನ ಸುತ್ತಮತ್ತಲಿನಲ್ಲಿಯೇ ತಮ್ಮ ಸಾಧನಾ ವ್ಯಾಪಾರವನ್ನು ನಡೆಸಿದವರು.
ಈ ಎಲ್ಲ ಸಾಧಕರಿಗೆ ಪ್ರತ್ಯಕ್ಷ ಹಾಗು ಅಪ್ರತ್ಯಕ್ಷವಾಗಿ ನಿರಂತರವಾದ ಚೈತನ್ಯವನ್ನು ತುಂಬಿದ ಶ್ರೇಯವು ಶ್ರೀಭುವನೇಂದ್ರತೀರ್ಥರೆನ್ನುವ ಮಹಾತಪಸ್ವಿಗಳಿಗೆ ಸಲ್ಲುತ್ತದೆ.
ಶ್ರೀಭುವನೇಂದ್ರತೀರ್ಥರು ಮಧ್ವರ ಮೂಲಪರಂಪರೆಯಲ್ಲಿ ಶ್ರೀರಾಯರ ನಂತರ 9ನೆಯವರು. ಇವರ ವಿದ್ಯೆ ಮತ್ತು ಅಸೀಮವಾದ ಆತ್ಮವಿಶ್ವಾಸಕ್ಕೆ ಶ್ರೀಹರಿವಾಯುಗುರುಗಳ ಸಂಪೂರ್ಣ ಅನುಗ್ರಹವಿತ್ತು. ಅಂತೆಯೇ ಇವರು ಸರ್ವಜ್ಞಪೀಠದಲ್ಲಿ ಕುಳಿತುಕೊಳ್ಳುವ ಅವಕಾಶವನ್ನು ಪಡೆದುಕೊಂಡರು. ಇವರು ವಿಶ್ವಾಸದಿಂದ ನುಡಿದ ಮಾತಿಗೆ ಶ್ರೀಮದಾಚಾರ್ಯರೇ ಇವರೊಳಗೆ ನಿಂತು ಸಿದ್ಧಾಂತಸ್ಥಾಪನೆ ಮಾಡಿಸಿದ ಅಪೂರ್ವವಾದ ಒಂದು ಸಂಗತಿ ಇವರ ಜೀವನ ಚರಿತ್ರೆಯಲ್ಲಿ ಕಂಡುಬರುತ್ತದೆ.
ಅರಮನೆಯಲ್ಲಿ ವಾಕ್ಯಾರ್ಥ
ಗದ್ವಾಲು ಹಿಂದೆ ಅನೇಕ ರಾಜರುಗಳ ಆಶ್ರಯದಲ್ಲಿ ಇದ್ದ ಒಂದು ಮಾಂಡಲಿಕ ಸಂಸ್ಥಾನವಾಗಿತ್ತು. ಒಮ್ಮೆ ಈ ಸಂಸ್ಥಾನದ ಅರಮನೆಯಲ್ಲಿ ಒಂದಷ್ಟು ವಿದ್ವಾಂಸರು ಸೇರಿ ಚರ್ಚೆಯೊಂದನ್ನು ಆರಂಭಿಸಿದರು. ಚರ್ಚೆಯ ಆರಂಭಿಕ ಉದ್ದೇಶವೇನಿತ್ತೋ ಅದು ಮರೆಯಾಗಿ ಅದು ಮಧ್ವಮತವನ್ನೇ ಹಳಿಯುವ ಗದ್ದಲವಾಗಿ ಮಾರ್ಪಟ್ಟಿತು. ಈ ಸಭೆಗೆ ಶ್ರೀಭುವನೇಂದ್ರತೀರ್ಥರನ್ನೂ ಆಹ್ವಾನಿಸಲಾಗಿತ್ತು. ಪರೋಕ್ಷವಾಗಿ ಇವರ ತೇಜೋವಧೆಯನ್ನು ಮಾಡುವುದೂ ಇತರರ ಆಶಯವಿತ್ತೋ ಏನೋ, ವಾದಿಗಳು ಮಧ್ವಾಚಾರ್ಯರ ಗ್ರಂಥರಚನೆಯ ಸಾಮರ್ಥ್ಯವನ್ನೇ ಪ್ರಶ್ನಿಸಿದರು. “ವಿದ್ಯೆಯು ಇಲ್ಲದ್ದರಿಂದಲೇ ಮಧ್ವಾಚಾರ್ಯರು ವೇದದ ಎಲ್ಲ ಮಂತ್ರಗಳಿಗೂ ವ್ಯಾಖ್ಯಾನ ಮಾಡಿಲ್ಲ. ಕೇವಲ ಕೆಲವೇ ಸೂಕ್ತಗಳಿಗೆ ಮಾತ್ರವೇ ಅವರು ಅರ್ಥವನ್ನು ಹೇಳಿದ್ದಾರೆ. ಇದು ಮಧ್ವಾಚಾರ್ಯರ ಜ್ಞಾನದ ಕೊರತೆಯನ್ನು ತೋರಿಸುತ್ತದೆ” ಎಂದೊಬ್ಬ ವಾದಿಸಿದ. ಬೇರೆಲ್ಲ ಅಪಶಬ್ದಗಳಿಗೆ ಕೋಪಗೊಳ್ಳದೆ ಪ್ರಶಾಂತರಾಗಿದ್ದ ಶ್ರೀಭುವನೇಂದ್ರತೀರ್ಥರ ಸಹನೆಯ ಕಟ್ಟೆ ಒಡೆದದ್ದು ಈ ದುರಹಂಕಾರದ ಮಾತುಗಳಿಗೆ. ಆದರೂ ಅವರು ದೃಢಚಿತ್ತರಾಗಿ, ಅಪಾರವಿಶ್ವಾಸದ ಮುಗುಳ್ನಗೆಯಿಂದ ಉತ್ತರಿಸಿದರು. ” ಎಲ್ಲ ಮಂತ್ರಗಳಿಗೂ ಶ್ರೀಮಧ್ವವ್ಯಾಖ್ಯಾನವು ಇದೆ. ನಿಮಗೆ ಗೊತ್ತಿಲ್ಲವಷ್ಟೇ” ಎಂದು.
“ಹಾಗಿದ್ದರೆ ತಂದು ತೋರಿಸಿ ಆ ವ್ಯಾಖ್ಯಾನವನ್ನು” ಎಂದು ಆ ಶಬ್ಧಭಂಡಾರಿಯು ಎಗರಾಡಿದ. “ಆಯ್ತು ನಾಳೆಯೇ ತೋರಿಸುತ್ತೇವೆ” ಎಂದು ಶ್ರೀಭುವನೇಂದ್ರತೀರ್ಥರು ತಮ್ಮ ವಾಸ್ತವ್ಯಕ್ಕೆ ಮರಳಿ, ಶುಚಿರ್ಭೂತರಾಗಿ ಧ್ಯಾನಮಗ್ನರಾದರು. ಅಲ್ಲಿಂದ ಮುಂದೆ ನಡೆದದ್ದೆಲ್ಲ ಶ್ರೀಮಧ್ವರ ಮಹಿಮೆಯೇ.
ವೇದವ್ಯಾಖ್ಯಾನ ಹೊರಹೊಮ್ಮಿತು
ತಮ್ಮ ಅಸ್ತಿತ್ವದ ಮೇಲೆ ಅಷ್ಟು ದೃಢವಿಶ್ವಾಸವಿಟ್ಟಿರುವ ತಮ್ಮ ಕಂದನೇ ಆದ ಯತಿಯ ಮನೋಪಟಲದಲ್ಲಿ ಶ್ರೀಮದಾಚಾರ್ಯರು ಮೂಡಿದರು. ಹಾಗೆಯೇ ನಿಧಾನವಾಗಿ ದೇಹಾದ್ಯಂತ ವ್ಯಾಪ್ತರಾಗಿ ಕಣಕಣದಲ್ಲೂ ಆವರಿಸಿಕೊಂಡರು. ಶ್ರೀಭುವನೇಂದ್ರತೀರ್ಥರ ಕೈಗಳು ಗ್ರಂಥಬರೆವ ಸಾಮಾಗ್ರಿಗಳನ್ನು ಕೈಗೆತ್ತಿಕೊಂಡವು. ಶ್ರೀಕಾರವು ಮೊದಲಾಯಿತು, ದುರ್ಗೆಯ ಸ್ಮರಣೆಯೂ ಆಯಿತು. ಸಮಗ್ರವೇದಭಾಷ್ಯ ಗ್ರಂಥದ ರಚನೆ ಮೊದಲ ಅಕ್ಷರವು ಕೂಡ ಪ್ರಾರಂಭಗೊಂಡೇ ಬಿಟ್ಟಿತು. ತಮ್ಮಲ್ಲಿ ಪ್ರವಹಿಸುತ್ತಿರುವ ಈ ಮಹದಾನಂದಕಾರಕವಾದ ಈ ಚೈತನ್ಯದ ಕಣಕಣವನ್ನೂ ಆನಂದಿಸುತ್ತ, ಆನಂದದ ಕಣ್ಣೀರು ಸುರಿಸುತ್ತ ಭಾಷ್ಯದ ರಚನೆಯನ್ನು ಮಾಡುತ್ತಲೇ ಸಾಗಿದರು. ಅವರಿಗೆ ಗೊತ್ತು, ತಮ್ಮೊಳಗೆ ಸಂಚರಿಸುತ್ತಿರುವುದು ರಕ್ತವಲ್ಲ. ಸಕಲಲೋಕಗಳ ಗುರುವಾದ ಪೂರ್ಣಪ್ರಜ್ಞರೇ ವಿದ್ಯುತ್ತಿನ ರೂಪದಿಂದ ಒಳಗೆ ಸಂಚಾರ ಮಾಡುತ್ತಿದ್ದಾರೆ ಎಂದು. ಎಷ್ಟು ಸಾಧ್ಯವಾಗುವುದೋ ಅಷ್ಟನ್ನೂ ಆನಂದಿಸಲೇಬೇಕು ಎಂಬುದು ಅವರ ತುಡಿತ.
ಆಗಾಧವಾದ ಶಕ್ತಿಯ ಸಂಚಾರವಾದರೂ ದೇಹವು ಕಿಂಚಿತ್ತೂ ಬಳಲಿಲ್ಲ. ಉಷಃಕಾಲವು ಪ್ರಾರಂಭಗೊಳ್ಳಲು ಸಾಕಷ್ಟು ಸಮಯವಿದ್ದಂತಯೇ ಗ್ರಂಥರಚನೆಯು ಸಂಪೂರ್ಣ ಆಗಿಯೇ ಬಿಟ್ಟಿತು. ಶ್ರೀಗಳವರು ಉಳಿದ ಸಮಯವನ್ನೆಲ್ಲ ವಿಷ್ಣುಜಾಗರದಲ್ಲಿಯೇ ಕಳೆದು, ಶ್ರೀಮಧ್ವರ ಅಂತಃಕರಣದ ಪ್ರಭಾವವು ತಮ್ಮ ಮೇಲೆ ಇರುವುದನ್ನೇ ನೆನೆದು ನೆನೆದು ಆನಂದಿಸಿದರು.
ಮರುದಿನ ಸಭೆಯಲ್ಲಿ ಗ್ರಂಥವನ್ನು ಪ್ರದರ್ಶಿಸಲಾಯ್ತು. ಮೊದಲಿಗೆ ಅನುಮಾನದಿಂದಲೇ ಅದರತ್ತ ನೋಡಿದ ದುರ್ವಾದಿಗಳು ಕೊನೆಗೆ ಬೆಪ್ಪು ಬೆರಗಾಗಿ, ಯಾಕಾದರೂ ಆ ಮಾತು ಆಡಿದೆವೋ ಎಂಬ ಭಾವನೆಯಿಂದ ತಲೆತಗ್ಗಿಸಿದರು. ಯಾಕೆಂದರೆ ಅವರಿಗೆ ಶ್ರೀಮಧ್ವರ ಗ್ರಂಥರಚನೆಯ ಶೈಲಿಯ ಅರಿವು ಚೆನ್ನಾಗಿ ಇತ್ತು! ಮತ್ತೆ ಮತ್ತೆ ಗ್ರಂಥವನ್ನು ನೋಡುತ್ತಾ ಅದನ್ನೇ ಶ್ಲಾಘನೆ ಮಾಡಲಾರಂಭಿಸಿಬಿಟ್ಟರು. ಶ್ರೀಭುವನೇಂದ್ರತೀರ್ಥರೋ ವ್ಯಾಸದೇವಸುತನು ತಮ್ಮ ಮೇಲೆ ಸುರಿಸಿದ ಕರುಣಾಮೃತಧಾರೆಯನ್ನು ಮತ್ತೆ ಮತ್ತೆ ನೆನೆದು ಪುಲಕಿತರಾದರು.
ವ್ಯಾಖ್ಯಾನಕ್ಕೆ ದಿವ್ಯವಾದ ಬೀಳ್ಕೊಡುಗೆ
ನೆರೆದ ಎಲ್ಲ ವಿದ್ವಾಂಸರನ್ನು ಸತ್ಕರಿಸಿ, ಅವರನ್ನು ಬೀಳ್ಕೊಟ್ಟು ಶ್ರೀಗಳವರು ತಮ್ಮ ಬಿಡಾರಕ್ಕೆ ಬಂದು ಮತ್ತೊಮ್ಮೆ ಶ್ರೀಸರ್ವಜ್ಞಮೂರ್ತಿಯನ್ನು ಧ್ಯಾನಿಸುತ್ತಾ ವಿರಮಿಸಿದರು. ಸ್ವಪ್ನಪಟಲದಲ್ಲಿ ಮತ್ತೊಮ್ಮೆ ಆನಂದಮುನಿಗಳ ದರ್ಶನವಾಯ್ತು. ಆಗ ಕೇಳಿದರು. “ಮಹಾಚಾರ್ಯ! ಈ ವೇದಭಾಷ್ಯವನ್ನು ನಾವು ಮುದ್ರಿಸಿ ಪ್ರಚುರಪಡಿಸುವುದೇ?” ಎಂದು. ಮುಗುಳ್ನಗುತ್ತಾ ಮಧ್ವರೆಂದರು. “ನಮ್ಮ ಇಷ್ಟು ಮಾತ್ರದ ವ್ಯಾಖ್ಯಾನದಿಂದಲೇ ಬೇರೆ ಎಲ್ಲದಕ್ಕೂ ಅರ್ಥ ಸಿಗುವುದು. ಓದುಗನಿಗೆ ಅರಿವು ಇರಬೇಕಷ್ಟೇ. ವಿಸ್ತೃತವಾದ ವ್ಯಾಖ್ಯಾನವು ಮುಂದೆ ಅಯೋಗ್ಯರ ಕೈಗೆ ಸಿಕ್ಕರೆ ಅನಾಹುತವೇ ಆಗುವುದು. ಅದಾಗಕೂಡದು. ಈಗ ನೀವು ನಮ್ಮ ಮೇಲಿನ ಅತಿಶಯವಾದ ಪ್ರೀತಿಯಿಂದಲೇ ಸಭೆಯಲ್ಲಿ ವಾಗ್ದಾನ ಮಾಡಿಬಂದಿರಿ. ಆ ನಿಮ್ಮ ಪ್ರೀತಿಗೆ ಸೋತು ನಾವು ನಿಮ್ಮೊಳಗೆ ನಿಂತು ನಿಮ್ಮ ಮಾತನ್ನು ನಡೆಸಿದ್ದೇವಷ್ಟೇ. ಹಾಗಾಗಿ ಇದರ ಪ್ರಚಾರದ ಅಗತ್ಯವಿಲ್ಲ” ಎಂದು.
“ಸರಿ, ಹಾಗಾದರೆ ಈ ಗ್ರಂಥವನ್ನೇನು ಮಾಡುವುದು?” ಎಂದು ಇವರು ಕೇಳಿದಾಗ “ಅದನ್ನು ತುಂಗಭದ್ರೆಯಲ್ಲಿ ವಿಸರ್ಜಿಸಿ. ಆಕೆಯು ಆ ಅಕ್ಷರಗಳನ್ನೆಲ್ಲ ಪುನಃ ವಾಸುದೇವನಲ್ಲಿ ತಂದು ಸೇರಿಸುವಳು” ಎಂಬ ಉತ್ತರವು ಬಂದಿತು. ತಡವೇಕೆ? ಶ್ರೀಭುವನೇಂದ್ರತೀರ್ಥರು ಆ ಗ್ರಂಥವನ್ನು ಪೂಜಿಸಿ ಸಕಲಮರ್ಯಾದೆಯಿಂದ ತುಂಗಭದ್ರೆಯಲ್ಲಿ ವಿಸರ್ಜಿಸಿಬಿಟ್ಟರು.
ಅಬ್ಬಾ! ಎಂತಹ ಮಹಾವ್ಯಕ್ತಿತ್ವ ಶ್ರೀಭುವನೇಂದ್ರ ತೀರ್ಥರದ್ದು? ಬರೆದ ಒಂದಕ್ಷರವನ್ನು ಕೂಡ ಅಳಿಸಿ ಹಾಕಲು ನಮ್ಮ ಮನಸ್ಸೊಪ್ಪದು. ಅಂತಹುದರಲ್ಲಿ ಸಕಲ ಅಕ್ಷರಾಭಿಮಾನಿ ದೇವತೆಗಳೆಲ್ಲ ನಾಮುಂದು ತಾಮುಂದು ಎಂದು ಬಂದು ನೆಲೆಸಿದ ಮಹಾನ್ ಭಾಷ್ಯವೊಂದನ್ನು ನೀರಲ್ಲಿ ವಿಸರ್ಜನೆ ಮಾಡಲು ಅದೆಷ್ಟು ಧೈರ್ಯ ಇದ್ದಿರಬೇಕು? ಆಚಾರ್ಯ ಮಧ್ವರ ಮಾತು ಎಂದರೆ ಅದೆಂತಹ ನಿಷ್ಠೆ ಅವರಿಗೆ? ಅದೆಷ್ಟು ಪ್ರೇಮ ಅವರ ಮೇಲೆ? ಆಚಾರ್ಯ ಮಧ್ವರ ಪ್ರೇಮವಾದರೂ ಎಷ್ಟು ಅತಿಶಯವಾದದ್ದು ಇವರ ಮೇಲೆ ಅಲ್ಲವೇ? ಶ್ರೀಹರಿಯ ಸರ್ವೋತ್ತಮತ್ವದ ನಿಷ್ಠೆ ಇರುವವರಿಗೆ, ಶಾಸ್ತ್ರಾಚಾರದ ವಿಷಯದಲ್ಲಿ ಎಂದಿಗೂ ಅಪವಿತ್ರ ರಾಜಿಯನ್ನು ಮಾಡಿಕೊಳ್ಳದ ಶ್ರದ್ಧಾಳುವಿನಲ್ಲಿ ತಾವೇ ನಿಂತು, ಭಕ್ತನು ನುಡಿದ ಮಾತನ್ನು ಸತ್ಯಮಾಡಿ ತೋರಿಸುವಷ್ಟು ಅಂತಃಕರಣವುಳ್ಳವರು ನಮ್ಮ ಜೀವೋತ್ತಮರು. ಶ್ರೀಭುವನೇಂದ್ರತೀರ್ಥರ ಜೀವನವೇ ಇದಕ್ಕೊಂದು ಸಾಕ್ಷಿ.
ಸುಮಾರು 20 ವರ್ಷಗಳ ಕೆಳಗೆ ಈ ದಿವ್ಯಚರಿತ್ರೆಯನ್ನು ತಿಳಿಸಿಕೊಟ್ಟದ್ದು ಪೂಜ್ಯರಾದ, ಮಹಾಮಹೋಪಾಧ್ಯಾಯರಾದ ಶ್ರಿ ಗಿರಿ ಆಚಾರ್ಯರು. ಇಲ್ಲಿ ಇರುವುದು ನನ್ನ ಶಬ್ದಗಳು ಮತ್ತು ನಿರೂಪಣೆ ಮಾತ್ರವೇ. ಈ ಚರಿತ್ರೆಯಿಂದ ಶ್ರೀಹರಿವಾಯುಗುರುಗಳು ಸಂತಸಪಟ್ಟಲ್ಲಿ, ಓದುಗರು ಆನಂದಿಸಿದಲ್ಲಿ ಅದರ ಫಲವೆಲ್ಲ ಅತ್ಯಂತ ಹಿರಿಯರಾದ ಶ್ರೀಆಚಾರ್ಯರಿಗೆ ಸಲ್ಲುವುದು. ತಪ್ಪುಗಳೇನಿದ್ದರೂ ನನ್ನವು.
ರಾಜೋಳಿ (ರಾಜವಳ್ಳಿ) ಗ್ರಾಮ
ಮುಂದೆ ಶ್ರೀಭುವನೆಂದ್ರತೀರ್ಥರು ಗದ್ವಾಲ್ ರಾಜಸಂಸ್ಥಾನದಿಂದ ರಾಜಗುರುಗಳೆಂದು ಮಾನಿತರಾದರು. ಮಂತ್ರಾಲಯದ ಸುತ್ತ ಮುತ್ತ ಇರುವ ಎಲ್ಲ ಗ್ರಾಮಗಳೂ ಕೂಡ ಒಂದಲ್ಲ ಒಂದು ರೀತಿ ಶ್ರೀಭುವನೇಂದ್ರತೀರ್ಥರಿಗೆ ಜಹಗೀರುಗಳಾಗಿ ಬಂದಿವೆ. ಇವರು ತಮ್ಮ ಇಹಲೋಕದ ಸಾಧನೆಯ ಕೊನೆಯ ದಿನಗಳನ್ನು ಕಳೆದದ್ದು ತುಂಗಭದ್ರಾನದಿಯ ದಡದ ಮೇಲೆ ಇರುವ ರಾಜೋಳಿ ಎಂಬ ಹಳ್ಳಿಯಲ್ಲಿ. ಇದು ಈಗಿನ ತೆಲಂಗಾಣ ರಾಜ್ಯದ ಗದ್ವಾಲ್ ಜಿಲ್ಲೆಯಲ್ಲಿರುವ ಕುಗ್ರಾಮ. ತೆಲಂಗಾಣ ರಾಜ್ಯಕ್ಕೆ ಸೇರಿದೆ. ಗದ್ವಾಲ್ ಜಿಲ್ಲೆಯ ಆಡಳಿತಕ್ಕೆ ಒಳಪಟ್ಟಿದೆ. ಮಂತ್ರಾಲಯದಿಂದ 75 ಕಿಲೋಮೀಟರು ದೂರದಲ್ಲಿದೆ. ಕರ್ನೂಲಿಗೆ ಸುಮಾರು 25ಕಿ.ಮೀ ಆಗುತ್ತದೆ. ಈ ಸುತ್ತಮುತ್ತಲಿನ ಪ್ರದೇಶವೆಲ್ಲ ತೀವ್ರವಾದ ಬಿಸಿಲಿನ ಹೊಡೆತಕ್ಕೆ ಸಿಕ್ಕಿದ್ದರೂ ವೃಂದಾವನವಿರುವ ಪರಿಸರವು ಮಾತ್ರ ಅದ್ಭುತ ಎನ್ನುವಂತೆ ತಂಪಾಗಿ ಇರುತ್ತದೆ. ಸೆಪ್ಟಂಬರ್ ತಿಂಗಳಿನಲ್ಲಿ ನದಿಯ ದಡವಂತೂ ಒಂದು ಪುಟ್ಟ ಪಕ್ಷಿಧಾಮವಾಗಿ ಬದಲಾಗಿರುತ್ತದೆ.
ವೃಂದಾವನ ಸ್ಥಳಾಂತರ ಮತ್ತು ಮಹಿಮಾಪ್ರದರ್ಶನ
ಆಗಿನ ಆಂಧ್ರರಾಜ್ಯ ಸರ್ಕಾರವು ಈ ಹಳ್ಳಿಯ ಬಳಿ ಜಲಾಶಯವೊಂದನ್ನು ನಿರ್ಮಿಸುವ ಯೋಜನೆಯೊಂದನ್ನು ಹಾಕಿಕೊಂಡಿತು. ಆಗ ಗುರುಗಳ ವೃಂದಾವನದ ಮೂಲ ಸ್ಥಳವು ಮುಳುಗಡೆಯಾಗುವ ಪ್ರಸಂಗ ಬಂದಿತು. ಶ್ರೀಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರು ವೃಂದಾವನದ ಕಳಾಕರ್ಷಣೆಯನ್ನು ಮಾಡಿ, ಮಂತ್ರಾಲಯಕ್ಕೆ ಅದನ್ನು ಸ್ಥಳಾಂತರಿಸುವ ಒಂದು ಅಭಿಪ್ರಾಯವನ್ನು ಹೊಂದಿದ್ದರು. ಆದರೆ ಆ ಗ್ರಾಮಸ್ಥರು ಶ್ರೀಗಳವರಲ್ಲಿ ಬಂದು “ಸ್ವಾಮಿ, ಈ ಗುರುಗಳು ನಮ್ಮನ್ನೆಲ್ಲ ಕಾಯುತ್ತಿದ್ದಾರೆ. ದಯಮಾಡಿ ಇವರನ್ನು ನಮ್ಮ ಊರಿನಲ್ಲಿಯೇ ಇರುವಂತೆ ವ್ಯವಸ್ಥೆ ಮಾಡಿ” ಎಂದು ಕೇಳಿಕೊಂಡರು. ಅವರೆಲ್ಲರ ಮನವಿಯನ್ನು ಪುರಸ್ಕರಿಸಿ ಶ್ರೀಸುಶಮೀಂದ್ರತೀರ್ಥರು ಶ್ರೀಭುವನೇಂದ್ರತೀರ್ಥ ಶ್ರೀಪಾದರ ವೃಂದಾವನದ ಕಳಾಕರ್ಷಣೆಯನ್ನು ಮಾಡಿ, ಮೂಲವೃಂದಾವನವನ್ನು ರಾಜೋಳಿಯಲ್ಲಿಯೇ ಮತ್ತೊಂದು ಕಡೆ ಸ್ಥಾನಾಂತರಿಸಿ, ಪುನಃ ಪ್ರತಿಷ್ಠಾಪನೆಯನ್ನು ಮಾಡಿದರು.
ಸ್ಥಾನಾಂತರಕ್ಕಾಗಿ ವೃಂದಾವನದ ಸ್ಥಳವನ್ನು ತೆಗೆದು ನೋಡಿದಾಗ ಅಲ್ಲಿ 2 ಶತಮಾನಗಳ ಕೆಳಗೆ ಇರಿಸಿದ ಶಂಖ, ಶಾಲಗ್ರಾಮ, ತೀರ್ಥದ ಗಿಂಡಿಗಳು ಹಾಗೆಯೇ ಇದ್ದವು. ಆ ವಸ್ತುಗಳನ್ನು ಸ್ಪರ್ಷಿಸುವ ಭಾಗ್ಯವನ್ನು ಶ್ರೀಸುಯಮೀಂದ್ರ ಆಚಾರ್ಯ, ಶ್ರೀವಾದೀಂದ್ರ ಆಚಾರ್ಯ ಮತ್ತು ನನ್ನ ಕೆಲ ಸ್ನೇಹಿತರು ಪಡೆದುಕೊಂಡಿದ್ದರು. ಅವುಗಳನ್ನು ಮುಟ್ಟಿದಾಗ ವರ್ಣನೆಗೆ ಮೀರಿದ ಒಂದು ಚೇತನದ ಅಲೆಯು ತಮ್ಮ ದೇಹದಲ್ಲಿ ಪ್ರವೇಶಿಸಿದ ಅನುಭವವನ್ನು ಇವರೆಲ್ಲರೂ ಆ ನಂತರ ಹಂಚಿಕೊಂಡರು. ಇದು ಶ್ರೀಭುವನೇಂದ್ರತೀರ್ಥರು ಅದೃಶ್ಯರೂಪದಲ್ಲಿ ಆ ಪ್ರದೇಶದಲ್ಲಿ ಸನ್ನಿಹಿತರಾಗಿದ್ದುಕೂಂಡು, ಭಕ್ತರನ್ನು ಕಾಯುತ್ತಿರುವ ವಿಷಯಕ್ಕೆ ಇರುವ ಸೂಚನೆಯಾಗಿದೆ.
ಶ್ರೀಮಧ್ವರಾಯರ ಪೀಠದ ಪ್ರಸ್ತುತ ಅಧಿಪತಿಗಳಾದ ಶ್ರೀಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರು ತಮ್ಮ ಚಿಕ್ಕವಯಸ್ಸಿನಿಂದಲೂ ಶ್ರೀಭುವನೇಂದ್ರತೀರ್ಥರ ಪ್ರತಿಯೊಂದು ಆರಾಧನೆಯಲ್ಲಿಯೂ ತಪ್ಪದೇ ಭಾಗವಹಿಸಿರುವುದು ಒಂದು ವಿಶೇಷ.
ಪೂಜೆ, ಹಸ್ತೋದಕ ಇತ್ಯಾದಿ ವ್ಯವಸ್ಥೆ
ಶ್ರೀಗುರುಗಳ ಸನ್ನಿಧಿಯಲ್ಲಿ ಪ್ರತಿನಿತ್ಯ ಪೂಜೆ ಮತ್ತು ಹಸ್ತೋದಕದ ವ್ಯವಸ್ಥೆ ಇದೆ. ಇದಕ್ಕೆಂದೇ ಶ್ರೀಮಠದಿಂದ ವ್ಯವಸ್ಥಾಪಕರು ಇದ್ದಾರೆ. ಮೊದಲೇ ತಿಳಿಸಿದಲ್ಲಿ ತೀರ್ಥಪ್ರಸಾದದ ವ್ಯವಸ್ಥೆಯು ಆಗುವುದು. ಮಂತ್ರಾಲಯಕ್ಕೆ ದರ್ಶನಕ್ಕಾಗಿ ಬಂದವರು, ಮಧ್ಯಾಹ್ನ ಊಟವಾದ ನಂತರ ಒಂದು ಗಾಡಿಯನ್ನು ಮಾಡಿಕೊಂಡು ರಾಜೋಳ್ಳಿಗೆ ಭೇಟಿ ನೀಡಬಹುದು. ಹೋಗಿ ಬರಲು ಸುಮಾರು 5-6 ಗಂಟೆಗಳು ಸಾಕು.
ರಾಜೋಳ್ಳಿಯ ಹತ್ತಿರ ಯಾವ ಕ್ಷೇತ್ರಗಳಿವೆ?
ಮಾಧ್ವರಿಗೆ ಪರಮಪ್ರಿಯವಾಗುವ ಬಹಳಷ್ಟು ಕ್ಷೇತ್ರಗಳು ರಾಜೋಳ್ಳಿಗೆ ಬಹಳ ಸಮೀಪ. ಇಲ್ಲಿಗೆ ಸುಮಾರು 25 ಕಿ,ಮೀ ಸುತ್ತಳತೆಯಲ್ಲಿ ಏನೆಲ್ಲೆ ಇವೆ ನೋಡಿ!
- ಗದ್ವಾಲ್ : ಶ್ರೀಚನ್ನಕೇಶವನ ಪ್ರಾಚೀನವಾದ ಗುಡಿ
- ವೇಣಿಸೋಮಪುರ : ಶ್ರೀವ್ಯಾಸತತ್ತ್ವಜ್ಞತೀರ್ಥರ ಸನ್ನಿಧಿ
- ಮೊದಲಕಲ್ : ಬೇಟೆಗಾರ ಶ್ರೀನಿವಾಸನ ಸನ್ನಿಧಿ ಮತ್ತು ಶ್ರೀಶೇಷದಾಸರ ಕಾರ್ಯಕ್ಷೇತ್ರ
- ಉತ್ತನೂರು : ಶ್ರೀಗೋಪಾಲದಾಸರ ಮನೆ
- ಸಂಕಾಪುರ : ಶ್ರೀಗೋಪಾಲದಾಸರಿಗೆ ಗಾಯತ್ರೀಮಂತ್ರ ಸಿದ್ಧಿಯಾದ ಸ್ಥಳ
ಹೇಗೆ ಹೋಗುವುದು?
ದಾರಿ 1: ಮಂತ್ರಾಲಯದಲ್ಲಿ ಬಸ್ ನಿಲ್ದಾಣಕ್ಕೆ ಹೋಗುವಾಗ ನಾಲ್ಕು ದಿಕ್ಕಿನಲ್ಲಿಯೂ ರಾಯರನ್ನು ಕೂರಿಸಿರುವ ಒಂದು ಸರ್ಕಲ್ ಕಾಣಿಸುತ್ತದೆ ಅಲ್ಲವೆ. ಒಂದು ರೈಲ್ವೇ ನಿಲ್ದಾಣಕ್ಕೂ ಇನ್ನೊಂದು ಬಸ್ ನಿಲ್ದಾಣಕ್ಕೂ ಹೋಗುತ್ತದೆಂದು ಎಲ್ಲ ಯಾತ್ರಿಕರಿಗೂ ಗೊತ್ತು. ಯಾರೂ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗದ ಇನ್ನೊಂದು ದಾರಿ ಉಂಟಲ್ಲ, ಅದುವೆ ನಮ್ಮನ್ನು ನಮ್ಮ ಕಥಾನಾಯಕರಾದ ಶ್ರೀಭುವನೆಂದ್ರತೀರ್ಥರೆಡೆಗೆ ಕರೆದುಕೊಂಡು ಹೋಗುವುದು. ಆ ದಾರಿಯಲ್ಲಿ ಸುಮಾರು 25 ಕಿ.ಮೀ ಕ್ರಮಿಸಿದ ನಂತರ ಗುಂಡ್ರೇವುಲ ಎಂಬ ಪುಟಾಣಿ ಹಳ್ಳಿ ಸಿಗುವುದು. ಅಲ್ಲಿ ಶ್ರೀಭುವನೇಂದ್ರತೀರ್ಥರ ಶಿಷ್ಯರಾದ ಶ್ರೀಸುಬೋಧೇಂದ್ರತೀರ್ಥರ ಮೃತ್ತಿಕಾ ವೃಂದಾವನವಿದೆ. ಅಲ್ಲಿ ಹೋಗಿ, ದರ್ಶನ ಮಾಡಿಕೊಂಡು ಮುಂದುವರೆಯಿರಿ.
ನಿಮ್ಮ ಎಡಗಡೆಗೆ ಅಲ್ಲಲ್ಲಿಯೇ ತುಂಗಭದ್ರೆಯು ಕಣ್ಣಾಮುಚ್ಚೇ ಆಟವಾಡುತ್ತಾ ಬರುವಳು. ಅವಳನ್ನೇ ಗಮನಿಸುತ್ತಾ ಮತ್ತೆ ಸುಮಾರು 25 ಕಿ.ಮೀ ಮುಂಬರಿದರೆ ನಿಮಗೊಂದು ಜಲಾಶಯವು ಕಾಣಿಸುವುದು. ಮೇಲೆ ಹೇಳಿದ ಜಲಾಶಯವು ಇದೇ. ಈ ಊರಿಗೆ ಸುಂಕೇಸುಲ ಎಂದು ಹೆಸರು. ಇಲ್ಲಿ ರಸ್ತೆ ಇಬ್ಭಾಗ ಆಗುತ್ತದೆ. ಎಡಪಕ್ಕದಲ್ಲಿರುವ, ಅಣೇಕಟ್ಟೆಯ ಸೇತುವೆಯ ಮೇಲೆ ಮುಂದುವರೆಯಿರಿ. (ನೇರವಾಗಿ ಹೋಗುವ ರಸ್ತೆ ಕರ್ನೂಲಿಗೆ ಹೋಗಿ ಸೇರುತ್ತದೆ) ಸೇತುವೆಯಿಂದ ಕೆಳಗೆ ಇಳಿದು, ಕುಲುಕಾಡುವ ರಸ್ತೆಯಲ್ಲಿ ಮುಂದುವರೆಯಿರಿ. ಕನ್ನಡ ಮಾತನಾಡುವ ಜನರು ಸಾಕಷ್ಟು ಇದ್ದಾರೆ. ಅಲ್ಲಿ ಕೇಳಿದರೆ ಶ್ರೀಭುವನೇಂದ್ರತೀರ್ಥರ ಸನ್ನಿಧಿಗೆ ದಾರಿಯನ್ನು ತೋರಿಸುತ್ತಾರೆ.
ದಾರಿ 2 : ರೈಲ್ವೇ ನಿಲ್ದಾಣಕ್ಕೆ ಹೋಗುವ ರಸ್ತೆಯನ್ನು ಹಿಡಿದುಕೊಂಡು, ರಾಯಚೂರಿನ ದಿಕ್ಕಿನತ್ತ ಮುಂದುವರೆಯಿರಿ. ಯರಗೇರಾ ಎನ್ನುವ ಹಳ್ಳಿಯ ಬಳಿ ಇರುವ ಜಂಕ್ಷನ್ನಿನಲ್ಲಿ ಬಲ ತಿರುವು ತೆಗೆದುಕೊಳ್ಳಬೇಕು. ಇದು ಕರ್ನೂಲಿಗೆ ಹೋಗುವ ರಸ್ತೆ. ಸುಮಾರು 40 ಕಿ.ಮೀ ಆದ ನಂತರ ಶಾಂತಿನಗರ ಎನ್ನುವ ಪಟ್ಟಣ ಬರುತ್ತದೆ. ಅಲ್ಲಿಂದ ಸುಮಾರು 5 ಕಿ.ಮೀ ದೂರ ಈ ರಾಜೋಳ್ಳಿ. ಶಾಂತಿ ನಗರದ ಮುಖ್ಯ ವೃತ್ತದಲ್ಲಿ, ಸ್ಥಳಿಯರನ್ನು ಕೇಳಿಕೊಂಡು ರಾಜೋಳ್ಳಿಯತ್ತ ಮುಂದುವರೆಯಿರಿ.
ರಾಜೋಳಿಯಲ್ಲಿ ಶ್ರೀಗಳವರ ಸನ್ನಿಧಿಯ ಹತ್ತಿರದಲ್ಲಿಯೇ ಪ್ರಾಚೀನವಾದ ರಂಗನಾಥನ ದೇವಳವೊಂದು ಇದೆ. ಗುರುಗಳ ದರ್ಶನವಾದ ನಂತರ ಅಲ್ಲಿ ಕೂಡ ದರ್ಶನವನ್ನು ತಪ್ಪದೇ ಮಾಡಿ.
– ಈಶಾವಾಸ್ಯಮ್ ಶರ್ಮ
- ಸೂರಿಗೆ ಮತ್ತು ಶ್ರೀನಿಧಿಗೆ ವಿಶ್ವಾಸಪೂರ್ವಕ ಧನ್ಯವಾದಗಳು
Be First to Comment