ಕರ್ನಾಟಕಕ್ಕೆ ಒಂದು ಹೊಸಾ ರೈಲು ಸಿಕ್ಕಿತು. ನಿಜ. ಸಂತೋಷ ಪಡಬೇಕಾದದ್ದೇ. ಆದರೆ ಈ ಹೊಸಾ ರೈಲು ಸಂತೋಷ ಕೊಡುವದಕ್ಕಿಂತ ಗೊಂದಲವನ್ನು ಹುಟ್ತು ಹಾಕಿರುವುದೇ ಹೆಚ್ಚು. ಹಸಿದ ಹೊಟ್ಟೆಗೆ ಗಂಜಿಯನ್ನು ಕೊಟ್ಟು, ಅದನ್ನು ನಾವು ತಿನ್ನುತ್ತಿರುವಾಗ ನಿಧಾನವಾಗಿ ಅಡಿಗೆ ಮನೆಯಲ್ಲಿದ್ದ ಉಪ್ಪಿನ ಕಾಯಿ, ಅಕ್ಕಿ, ಬೇಳೆ, ಹಿಟ್ಟು, ತರಕಾರಿ ಎಲ್ಲವನ್ನು ಕಸಿದುಕೊಂಡು ಹೋದಂತೆ ಆಗಿದೆ ಈ ಹೊಸ ರೈಲಿನ ಪ್ರಾರಂಭ.
ಯಶವಂತಪುರ ವಾಸ್ಕೋ ಮಾರ್ಗಕ್ಕೆ ಒಂದು ಹೊಸರೈಲು ಬಂತೆಂದು ನಾವೆಲ್ಲ ಅಂದುಕೊಂಡದ್ದೇ ತಪ್ಪು. ಈ ಮಾರ್ಗಕ್ಕೆ ಬೇರೊಂದು ರೈಲು ಬಂತೆನ್ನುವುದು ಹೆಚ್ಚು ಸೂಕ್ತ. ಯಾಕೆಂದರೆ ಮೊದಲಿನ ಕಾರವಾರ ಬೆಂಗಳೂರು ರೈಲು ರದ್ದಾಗಿದೆ. ರದ್ದಾಗಿರುವ ರೈಲಾವುದು? ಹೊಸ ರೈಲಾವುದು? ಯಾವ ರೈಲಿನ ಸಂಖ್ಯೆ ಯಾವುದು? ಯಾವುದು ಎಷ್ಟು ಗಂಟೆಗೆ ಹೊರಡಲಿದೆ? ಎಂಬ ಯಾವ ಪ್ರಶ್ನೆಗಳಿಗೂ ಉತ್ತರವನ್ನು ಸಿದ್ಧಪಡಿಸಿಟ್ಟುಕೊಳ್ಳದೆ ಹೊಸರೈಲನ್ನು ಪ್ರಾರಂಭಿಸಿ ಹಳೆಯ ರೈಲನ್ನು ರದ್ದುಮಾಡಲಾಗಿದೆ.
ಅಸಲಿಗೆ ಹೊಸರೈಲು ಬಂತೋ ಅಥವಾ ಇರುವ ರೈಲಿನ ಸಂಖ್ಯೆ, ಹೊರಡುವ ಸಮಯ ಹಾಗು ಕೊನೆಯ ನಿಲ್ದಾಣಗಳು ಬದಲಾಗಿವೆಯೋ ಎನ್ನುವುದೇ ಸ್ಪಷ್ಟವಾಗಿಲ್ಲ.
ಇಲ್ಲಿವೆ ನೋಡಿ ಕೆಲವು ಗೊಂದಲಗಳು
1. ಮಾಧ್ಯಮಗಳಲ್ಲೆಲ್ಲ ಇದನ್ನು ವಾಸ್ಕೋ ಯಶವಂತಪುರ ರೈಲೆಂದು ಹೇಳುತ್ತಿವೆ. ಹಾಗೆಂದು ಐ.ಆರ್. ಸಿ.ಟಿ.ಸಿ ವೆಬ್ ಸೈಟಿನಲ್ಲಿ ವಾಸ್ಕೋದಿಂದ ಯಶವಂತಪುರಕ್ಕೆ ರೈಲು ಹುಡುಕಿದರೆ ಈ ರೈಲು ಇಲ್ಲವೇ ಇಲ್ಲ. 16514 ರೈಲಿನ ಸಂಖ್ಯೆಯಿಂದ ಹುಡುಕಿದರೆ ಕಾರವಾರ-ಯಶವಂತಪುರ ಎಕ್ಸ್ಪ್ರೆಸ್ ಎಂದು ತೋರಿಸುತ್ತದೆ. ಹೀಗಿರುವಾಗ ಇದನ್ನು ವಾಸ್ಕೋ-ಯಶವಂತಪುರ ಎಕ್ಸ್ ಪ್ರೆಸ್ ಎಂದು ಹೇಳುವುದ್ಯಾಕೆ?
2. ಅತ್ಯಂತ ಜನಪ್ರಿಯವಾದ ಇಂಡಿಯಾರೇಲ್ಇನ್ಛೋ.ಕಾಂ ಸೈಟಿನಲ್ಲಿ 16595/16596 ಸಂಖ್ಯೆಯ ರೈಲು ಇದೆ. ಅದು ಈ ಹೊಸದಾಗಿ ಘೋಷಣೆಯಾದ ವೇಳೆಗೆ ಓಡುತ್ತದೆ. ಹಾಗಾದಲ್ಲಿ ಅದನ್ನು ಐ.ಆರ್.ಸಿ.ಟಿ.ಸಿಯಲ್ಲಿ ಯಾಕೆ ಸೇರಿಸಿಲ್ಲ ಇನ್ನೂ? ಚೂರು ಸಮಾಧಾನವಾಗಿರಿ, ನಿಧಾನವಾಗಿ ಆಗುತ್ತದೆ ಎನ್ನುತ್ತಾ ಜಾರುವ ಹಾಗಿಲ್ಲ. ರೈಲು ತನ್ನ ಓಡಾಟ ಶುರುಮಾಡುವ ಮೊದಲೇ ಇದರ ರಿಸರ್ವೇಶನ್ ಕೂಡ ಓಪನ್ ಆಗಲೇಬೇಕು. ಅಲ್ಲವೇನು? ಇತರೆ ರಾಜ್ಯಗಳಿಗೆ ಘೋಷಣೆ ಮಾಡಿದ ರೈಲುಗಳಿಗೆ ಈ ವಿಳಂಬ ನೀತಿಯನ್ನು ಅನುಸರಿಸುತ್ತಾರೋ ಇವರು?
3. ನಾನು 10.03.2020ಕ್ಕೆ ಉಡುಪಿಯಿಂದ ಬೆಂಗಳೂರಿಗೆ ರೈಲಿನ ಸಂಖ್ಯೆ 16514 ಟಿಕೆಟ್ಟು ಪಡೆದಿದ್ದೇನೆ. ಇದು ಕನ್ಫರ್ಮ್ ಆಗಿರುವ ಟಿಕೆಟ್. ಟಿಕೆಟ್ ಪಡೆದಾಗ ರೈಲಿನ ವೇಳೆ ಸಂಜೆ 6 ರ ಸುಮಾರಿಗೆ ಇತ್ತು ಪಿಎನ್ನಾರ್ ಸಂಖ್ಯೆಯನ್ನೊಮ್ಮೆ ಪರಿಶೀಲಿಸಲು ಹೋದಾಗ 18:16ಕ್ಕೆ ಬೋರ್ಡಿಂಗ್ ಸಮಯವೆಂದು ತೋರಿಸುತ್ತಿದೆ. ಆದರೆ ರೈಲ್ವೇ ವೇಳಾಪಟ್ಟಿಯನ್ನು ನೋಡಿದಾಗ ಈ ರೈಲು ಉಡುಪಿಯಿಂದ ಹೊರಡುವ ಸಮಯ 21.04 ಎಂದು ತೋರಿಸುತ್ತಿದೆ. ಬದಲಾಗಿರುವುದು ಏನು ಹಾಗಾದರೆ? ರೈಲಿನ ಸಂಖ್ಯೆಯೋ? ರೈಲೋ? ಸಮಯವೋ? ರೈಲಿನ ಹೆಸರೋ? ಈ ರೈಲಿನ ಟಿಕೆಟ್ ಪಡೆದುಕೊಂಡವರಿಗೆ ಒಂದು ಎಸ್. ಎಂ. ಎಸ್ ಕಳುಹಿಸಿ ರೈಲಿನ ಸಮಯ ಮೊದಲಿಗಿಂತ ಇಷ್ಟರ ಮಟ್ಟಿಗೆ ಬದಲಾಗಿದೆ ಎಂದು ಒಂದು ಮಾಹಿತಿಯನ್ನು ಕೊಡಬಹುದಲ್ಲ? ಹೊನ್ನಾವರದ ಮೂಲೆಯಲ್ಲೆಲ್ಲೋ ಕುಳಿತ ಒಬ್ಬ ವೃದ್ಧರಿಗೆ ತಾನೇ ತಾನಾಗಿ ಈ ಬದಲಾವಣೆಯ ಬಗ್ಗೆ ಅರಿವಾಗುವುದಾದರೂ ಹೇಗೆ?
4. ಮೇಲೆ ಹೇಳಿದ ಟಿಕೆಟ್ಟಿಗೆ ಸಂದಾಯ ಮಾಡಿದ ಹಣವು 327.29 ರೂಪಾಯಿ ಎಂದೂ ತೋರಿಸುತ್ತಿದೆ. ಆದರೆ ಇದೇ ಸಂಖ್ಯೆಯ ರೈಲಿನಲ್ಲಿ ದರವನ್ನು ನೋಡಿದರೆ 265.00 ರೂಪಾಯಿಗಳು ಎಂದು ತೋರಿಸುತ್ತಿದೆ. ಒಂದು ವೇಳೆ ದರವನ್ನು ಕಡಿತಗೊಳಿಸಿದ್ದರೆ ಇಷ್ಟು ಹೊತ್ತಿಗಾಗಲೇ ಹೆಚ್ಚುವರಿ ಹಣವನ್ನು ಇಲಾಖೆಯು ಗ್ರಾಹಕರಿಗೆ ಮರಳಿಸಬೇಕಿತ್ತಲ್ಲವೇ?
5.ಹೊಸ ರೈಲಿನ ಓಡಾಟ ಶುರು ಆಯ್ತೋ ಇಲ್ಲವೋ ಮತ್ತೆ ನೋಡುವಾ. ಆದರೆ ಇಲ್ಲಿನ ಜನರ ಅಭಿಪ್ರಾಯಕ್ಕೆ ಮನ್ನಣೆ ಕೊಡದೆ ಇರುವ ರೈಲಿನ ಗಮ್ಯಸ್ಥಾನವನ್ನು ಬದಲಾಯಿಸಿದ್ದು ಯಾಕೆ?ಹಳೆಯ ರೈಲು ಇದ್ದಿದ್ದು ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಕ್ಕೆ. ಈಗ ಹೊಸ ರೈಲು ಕೊಟ್ಟೆವೆಂದು ಹೇಳಿ ಯಶವಂತಪುರಕ್ಕೆ ನಮ್ಮನ್ನು ನಿಲ್ಲಿಸಿಬಿಟ್ಟಿರಿ. ಅದೇ ಕಣ್ಣೂರಿನಿಂದ ಬರುವ ರೈಲು ಆದರೆ ಮೆಜೆಸ್ಟ್ಟಿಕ್ಕಿನವರೆಗೂ ಹೋಗುತ್ತದೆ. ಯಾಕೆ ಈ ಮೋಸದ ನಡುವಳಿಕೆ? ಕರ್ನಾಟಕಕ್ಕೆ ಬೇರೆಯವರು ಬರಬಾರದೆಂದು ಹೇಳುವುದಿಲ್ಲ. ಆದರೆ ಕರ್ನಾಟಕದ ಊರುಗಳು, ನಿಲ್ದಾಣಗಳು ಕನ್ನಡದವರಿಗೆ ಅನುಕೂಲವಾಗಲೆಂದು ಇರುವುದೋ ಅಥವಾ ಬೇರೆಯವರಿಗೆ ಅನುವಾಗಲೆಂದು ಇರುವವೋ? ನಮ್ಮವರನ್ನು ಹೊರಗೆ ನಿಲ್ಲಿಸಿ ಬೇರೆಯವರನ್ನು ಒಳಕರೆದು ಓಗರವುಣ್ಣಿಸುವ ಈ ನೀಚ ಕಾರ್ಯಕ್ಕೆ ಯಾರ ಬೆಂಬಲವಿದೆ? ನಾವು ಕೊಟ್ಟ ಹಣ ಮೆಜೆಸ್ಟಿಕ್ಕಿಗೆ. ನೀವು ಇಳಿಸುತ್ತಿರುವುದು ಯಶವಂತಪುರಕ್ಕೆ. ಇಲ್ಲಿಂದ ಅಲ್ಲಿಗೆ ಹೋಗುವ ಖರ್ಚು ಯಾರು ಕೊಡುತ್ತಾರೆ ನೂರಾರು ಜನರಿಗೆ? ರೈಲು ಕೊಡಿಸಿದ ಸಚಿವರೇ, ಖುಷಿಯಿಂದ ಬೀಗದಿರಿ. ಮುಂದೆ ನಿಮಗೆ ಕೈಮುಗಿದು ನಿಮ್ಮ ಬೆನ್ನ ಹಿಂದೆ ನಿಮ್ಮನ್ನು ಅಣಕಿಸಿ ನಗುತ್ತಿದ್ದಾರೆ ನೋಡಿ ನಿಮ್ಮ ಕೈಕೆಳಗಿನ ಅಧಿಕಾರಿಗಳು. ಹೊಸ ರೈಲಿನ ಹೆಸರಿನಲ್ಲಿ ಇದೇ ಆಗಿರುವುದು.
6. ನೀಚ ಅಧಿಕಾರಿಗಳೇ ಕುಂದಾಪುರ, ಉಡುಪಿ, ವಾಸ್ಕೋದವರಿಗೆ ರೈಲು ಕೊಡುವ ನೆವದಲ್ಲಿ ಮಂಗಳೂರಿಗರಿಗೆ ಯಾಕೆ ಅನ್ಯಾಯ ಮಾಡಿದಿರಿ? ಹೊಸ ರೈಲು ಬಂತೆಂದು ಇರುವ ರೈಲನ್ನು ರದ್ದುಮಾಡಿದ್ದು ತಪ್ಪಲ್ಲವೇ? ಹೇಗಿದ್ದರೂ ಹೊಸ ರೈಲು ಬಂದಿದೆಯಲ್ಲ ಎನ್ನುತ್ತೀರಾದರೆ ಮಂಗಳೂರಿನಿಂದ ಕೊಯಮತ್ತೂರಿಗೆ ಇರುವ ರೈಲುಗಳಲ್ಲಿ ಅನೇಕವನ್ನು ಈಗಾಗಲೇ ರದ್ದು ಮಾಡಿರಬೇಕಿತ್ತಲ್ಲ ನೀವು? ಕೊಚ್ಚುವೇಲಿಗೆ ಸಾಕಷ್ಟು ರೈಲುಗಳಿದ್ದಾಗ ಹೊಸವನ್ನು ಅಲ್ಲಿಗೆ ಕೊಡುತ್ತಲೇ ಇರುವ ಅಗತ್ಯವೇನಿದೆ? ಹೊಸ ರೈಲುಗಳನ್ನು ಕೊಟ್ಟಾಗ ಅಲ್ಲಿಗೆ ಕೂಡ ಹಳೆಯ ರೈಲನ್ನು ರದ್ದು ಮಾಡಬೇಕಿತ್ತಲ್ಲವೇ ನೀವು? ಅವರಿಗೊಂದು ನ್ಯಾಯ ನಮಗೊಂದು ನ್ಯಾಯವೇಕೆ? ರೈಲು ಕೊಡಿಸಿರುವ ಮಾನ್ಯ ಮಂತ್ರಿಗಳೇ ಸಂಸದರೇ ನಿಮ್ಮ ಮುಂದೆ ಹಲ್ಲು ಕಿಸಿದು ಹಿಂದೆ ತಮ್ಮದೇ ಹಾಡು ಹೇಳುವ ಈ ಅಧಿಕಾರಿಗಳ ಬಗ್ಗೆ ನಿಮಗೆ ತಿಳುವಳಿಕೆ ಇಲ್ಲವೇ?
7. ಈ ರೈಲನ್ನು ಓಡಿಸಲು ಕೊಂಕಣದ ರೈಲಧಿಕಾರಿಗಳು ಕಿರಿ ಕಿರಿ ಮಾಡಿದರು. ಈಗಾಗಲೇ ಬಹಳ ಒತ್ತಡವಿದೆ ಈ ಮಾರ್ಗದ ಮೇಲೆ. ಮತ್ತೊಂದು ಬೇಡ ಎನ್ನುತ್ತಿದ್ದಾರೆ ಎಂದೆಲ್ಲ ಸುದ್ದಿ ಇದೆ. ನಮ್ಮ ಜನರು ನಮ್ಮ ಊರುಗಳಿಗೆ ಓಡಾಡಾಲು ಈ ದಪ್ಪಚರ್ಮದ ನೀಚರ ಅಪ್ಪಣೆ ಯಾಕೆ ಬೇಕು? ನಮ್ಮಗಳು ಓಟು ಪಡೆದ ನೀವು ಇವರನ್ನು ಗುರಾಯಿಸಿ ನೋಡುವಷ್ಟೂ ಬಲವಿಲ್ಲದವರಾದಿರೇನು ಸಂಸದರೇ! ಮಂತ್ರಿಗಳೇ! ಒತ್ತಡವಿದೆ ಎನ್ನುವದನ್ನು ಒಪ್ಪುವುದೇ ಆದರ ರದ್ದು ಪಡಿಸಿ ಒತ್ತಡವನ್ನು ನಿವಾರಿಸಿಕೊಳ್ಳಲು ಬೇಕಾದಷ್ಟು ರೈಲುಗಳಿದ್ದವಲ್ಲ? ದಿನಕ್ಕೆ ಹತ್ತಾರು ರೈಲುಗಳು ಕೊಚ್ಚುವೇಲಿಗೆ ಹೋಗುತ್ತಿವೆ. ಅಗತ್ಯವೇ ಇಲ್ಲದೆ ಚಾಲುಕ್ಯ ಎಕ್ಸ್ ಪ್ರೆಸ್ ಅನ್ನು ಈ ಮಾರ್ಗದ ಮೇಲೆ ರೈಲು ಓಡಿಸುತ್ತಿದ್ದೀರಿ. ತಮಿಳುನಾಡಿಗೆ ಹತ್ತಾರು ರೈಲುಗಳು ಓಡುತ್ತಿವೆ. ಆದರೆ ಒತ್ತಡ ಬಿದ್ದದ್ದು ಮಾತ್ರ ಕನ್ನಡಿಗರು ಮತ್ತು ತೌಳವರದ್ದೇ?
8. ಹೋಗಲಪ್ಪ ಯಾವ ರೈಲು ಕೊಟ್ಟಿದ್ದೀರೋ ಅದರಲ್ಲೇ ಹೋಗೋಣ ಎಂದುಕೊಂಡು ಟಿಕೆಟ್ ಮಾಡಿಕೊಳ್ಳಲು ಹೋದರೆ ರಿಸರ್ವೇಶನ್ ಈಸ್ ಸಸ್ಪೆಂಡೆಡ್ ಅನ್ನುವ ಉತ್ತರ ಬರುತ್ತಿದೆ. ಬೇರೆ ರಾಜ್ಯಗಳಿಗೆ ಇದೇ ರೀತಿ ಮಾಡುತ್ತೀರೇನು ನೀವು? ಹೊಸ ರೈಲನ್ನು ಹೊರಡಿಸುವ ಮೊದಲು ಎಲ್ಲ ಹೋಂ ವರ್ಕ್ ಮಾಡಿ ಮುಗಿಸಿಕೊಳ್ಳಬೇಕಲ್ಲವೇನು? ರೈಲು ಉಂಟು ಆದರೆ ರಿಸರ್ವೇಶನ್ ಮಾಡುವ ಹಾಗಿಲ್ಲವೆಂದರೆ ಏನು ಪ್ರಯೋಜನ?
ವಸ್ತು ಸ್ತಿತಿ ಹೀಗೆ ಇರುವಾಗ ನಮಗೆ ಏನನ್ನು ಕೊಟ್ಟಹಾಗೆ ಆಯಿತು ಇವರು? ಜನಪ್ರತಿನಿಧಿಗಳಿಗೂ ಕೂಡ ಇದು ಮೋಸವೇ ಹೌದು. ಹೊಸ ರೈಲನ್ನು ಕೊಟ್ಟೆವು (ಭಿಕ್ಷಾ ರೂಪವೆಂದೇ ಅಂದುಕೊಳ್ಳೋಣ) ಎಂಬುದನ್ನು ಬಹಳ ಜೋರಾಗ ಜಾಗಟೆ ಹೊಡೆದ ಅಧಿಕಾರಿಗಳು ಹಳೆಯ ರೈಲನ್ನು(ರೈಲುಗಳನ್ನು) ರದ್ದು ಮಾಡಿದ್ದೇವೆ ಎಂಬ ವಿಷಯವನ್ನು ಮಾತ್ರ ತಣ್ಣಗೆ ಜಾದೂಗಾರನ ಗೊಂಬೆಯಂತೆ ಹೇಳಿದರು. ಈ ಹಳೆಯ ರೈಲಿನ ರದ್ದತಿಗೆ ಅವರು ಏನೇ ಕಾರಣಗಳನ್ನು ಕೊಡಲಿ. ಆ ಎಲ್ಲ ಕಾರಣಗಳನ್ನೂ ಹೊಡೆದು ಹಾಕಿ ರೈಲನ್ನು ಈ ಮಾರ್ಗದಲ್ಲಿ ಲಾಭದೊಂದಿಗೆ ಓಡಿಸುವುದು ಅಸಾಧ್ಯವೇನಲ್ಲ. ಮನಸ್ಸು ಇರಬೇಕು. ಅಷ್ಟೇ. ಇನ್ನೂ ಎಲ್ಲರೂ ಅಂದುಕೊಳ್ಳುತ್ತಿರುವಂತೆ ಇಲ್ಲಿನ ಖಾಸಗೀ ಬಸ್ಸುಗಳ ಲಾಬಿಯೇ ಈ ರೈಲಿನ ಹಿಂದೆಯೂ ಕೆಲಸ ಮಾಡಿದ್ದಲ್ಲಿ ಮಂಗಳೂರಿನ ಜನತೆಗೆ ಗೋಳಿಬಜೆಯೇ ಗತಿ.
ಪ್ರತೀ ಸಲವೂ ಕರ್ನಾಟಕದವರೇ ಈ ರೀತಿಯ ಅನ್ಯಾಯಕ್ಕೆ ಒಳಗಾಗಬೇಕೇ? ಸಾವಿರಾರು ಜನ ನಿತ್ಯ ಬ್ಲಾಕಿನಲ್ಲಿ ಹಣ ಕೊಟ್ಟಾದರೂ ಓಡಾಡುವ ಮಾರ್ಗವೊಂದರಲ್ಲಿ ರೈಲನ್ನು ಓಡಿಸಲು ಅದೆಷ್ಟು ಬೇಸರ ಈ ಇಲಾಖೆಗೆ? ನಮ್ಮ ಹಕ್ಕಾಗಿರುವ ಈ ವಿಷಯಕ್ಕೆ ನಾವು ಎಷ್ಟೆಂದು ಅಳಬೇಕಾಗಿದೆಯಲ್ಲ ಇವರೆಲ್ಲರ ಮುಂದೆ? ಕೊಟ್ಟ ರೈಲುಗಳಿಗೂ ನೂರೆಂಟು ಕಂಡಿಷನ್ನುಗಳು. ಈ ಕಂಡಿಷನ್ನುಗಳಿಗೆ ಒಪ್ಪಿಕೊಂಡರೂ ಏನಾದರೂ ಒಂದು ಕೊರತೆಯನ್ನು ಬೇಕೆಂದೇ ನಿರ್ಮಿಸುತ್ತಾರಲ್ಲ. ಎಂತಹ ದುರ್ದೈವ ನಮ್ಮದು?
ನಮ್ಮ ಸಂಸದರಾದ ಶೋಭಾ ಕರಂದ್ಲಾಜೆಯವರೂ, ಮಾನ್ಯ ಮಂತ್ರಿಗಳಾದ ಸುರೇಶ್ ಅಂಗಡಿಯವರೂ ಅಧಿಕಾರಿಗಳ ಈ ಕುತಂತ್ರಗಳತ್ತ ಗಮನ ಹರಿಸುವುದು ಒಳ್ಳೆಯದು.
Be First to Comment