ಶ್ರೀವೇದವ್ಯಾಸಾಯನಮಃ
ಇಲ್ಲೊಂದು ಚಿಕ್ಕ ವಿಡಿಯೋ ಇದೆ ನೋಡಿ. ಇದು ಕೇವಲ 30 ಸೆಕೆಂಡುಗಳಷ್ಟು ಇದೆಯಷ್ಟೇ. ಗುರುಗಳು ತಮ್ಮ ಶಿಷ್ಯರಿಗೆ ಪಾಠ ಹೇಳುತ್ತಿರುವುದು ಇದು.
ಇದೊಂದು ಹೃದಯಂಗಮವಾದ ಸನ್ನಿವೇಶವನ್ನು ನೋಡುವ ಅವಕಾಶ ಸಿಕ್ಕಿತು ಇಂದು. ತಕ್ಷಣವೇ ಅದನ್ನು ರೆಕಾರ್ಡು ಮಾಡಿಕೊಂಡೆ. ಇದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವ ಆಸೆಯಿಂದಲೇ ರಿಕಾರ್ಡು ಮಾಡಿಕೊಂಡದ್ದು. ಅದರ ಹಿಂದೆ ಒಂದು ಅತ್ಯಂತ ಗಹನವಾದ ವಿಚಾರವೂ ಉಂಟು. ಹೃದಯದಲ್ಲಿ ಯಾವುದೇ ರೀತಿಯ ಪೂರ್ವ ಆಗ್ರಹವಿಲ್ಲದಲೆ ಈ ಕೆಳಗಿನ ಲೇಖನವನ್ನು ಓದಿ. ಆನಂತರ ಮತ್ತೊಮ್ಮೆ ವಿಡಿಯೋವನ್ನು ನೋಡಿ. ಆಗ ನಿಮಗೂ ಗುರುಗಳು ಜವಾಬ್ದಾರಿಯನ್ನು ಚಾಚೂ ತಪ್ಪದೆ, ಎಷ್ಟು ತನ್ಮಯರಾಗಿ ಮಾಡುತ್ತಾರೆ ಎನ್ನುವುದು ತಿಳಿವುದು.
ಸುಮಾರು ಒಂದೂವರೆ ವರ್ಷಗಳ ಹಿಂದೆ ಹೋಗುವಾ.
ಆಗ ಗುರುಗಳು ಮಲ್ಲೇಶ್ವರ ಮಠದಲ್ಲಿ ಮೊಕ್ಕಾಂ ಮಾಡಿದ್ದರು. ನಾನು ಅಲ್ಲಿಗೆ ಹೋಗಿ ಒಂದು ಅಧಿಕ ಪ್ರಸಂಗವನ್ನು ಮಾಡಿದೆ. ಧೈರ್ಯ ಎಲ್ಲಿಂದ ಬಂತೋ ಗೊತ್ತಿಲ್ಲ. ಹೋಗಿ ಗುರುಗಳ ಬಳಿ ’ಸಲಹೆ’ ಕೊಟ್ಟೆ. “ಸ್ವಾಮಿ, ಶ್ರೀಕೃಷ್ಣನ ಪರ್ಯಾಯ ಮುಗಿಯುವುದರೊಳಗಾಗಿ ಪಲಿಮಾರು ಮಠಕ್ಕೆ ಅಂತ ಏನು ಕಾರ್ಪಸ್ ಫಂಡ್ ಮಾಡಿ ಇಡುವ ಆಲೋಚನೆಯನ್ನು ಮಾಡಿದ್ದೀರಿ? ಈ ಎರಡುವರ್ಷಗಳಲ್ಲಿ ನೀವು ಹೂಂ ಎಂದರೆ ಕೆಲವು ಐಡಿಯಾ ಇದ್ದಾವೆ, ಅವುಗಳನ್ನು ಮಾಡೋಣ ಪರ್ಯಾಯದ ನಂತರವೂ ನಿರಂತರವಾಗಿ ವರ್ಷಕ್ಕೆ ಇಂತಿಷ್ಟು ಎಂದು ಆದಾಯ ಬರುವುದು. ” ಎಂದು.
ಮಂದಹಾಸದಿಂದ ನನ್ನ ಅಧಿಕಪ್ರಸಂಗವನ್ನೆಲ್ಲ ಆಲಿಸಿದ ಗುರುಗಳು ಮುಗುಳ್ನಗುತ್ತಲೇ ಕೊಟ್ಟದ್ದು ಒಂದೇ ವಾಕ್ಯದ ಉತ್ತರ. “ನಮ್ಮದೆಲ್ಲವನ್ನೂ ಕೃಷ್ಣನಿಗೆ ಕೊಡಬೇಕಷ್ಟೇ, ಇಲ್ಲಿಂದ ಏನನ್ನೂ ತೆಗೆದುಕೊಂಡು ಹೋಗಲಿಕ್ಕಿಲ್ಲ” ಎಂದು.
ಆಹ್ ಹೌದಲ್ಲ! ಎಷ್ಟು ಸರಳವಾಗಿ, ಮುಗುಳ್ನಗುವಿನಲ್ಲೇ ನನ್ನ ಅವಿವೇಕವನ್ನು ತೊಡೆದು ಹಾಕಿದರಲ್ಲ ಎಂದುಕೊಂಡು ನಮಿಸಿ ಹೊರಬಂದೆ.
ಆ ಘಟನೆಯಾದ ನಂತರ ಅಲ್ಲಿಂದ ಸುಮಾರು ಒಂದು ಆರು ತಿಂಗಳು ಮುಂದೆ ಬರೋಣ.
ಪರ್ಯಾಯ ಪ್ರಾರಂಭವಾಗಿ ತಿಂಗಳ ನಂತರ ಹೀಗೆಯೇ ಕುಳಿತುಕೊಂಡು ಒಂದು ಲೆಕ್ಕಾಚಾರವನ್ನು ಮಾಡಿದೆ. ಈ ಪರ್ಯಾಯ ಮುಗಿಯುವುದರಲ್ಲಿ ಶ್ರೀಗಳವರು ಹಾಕಿಕೊಂಡಿರುವ ಎಲ್ಲ ಯೋಜನೆಗಳು ಹಾಗು ಶ್ರೀಕೃಷ್ಣಮಠದ ದೈನಂದಿನ ವೆಚ್ಚಗಳೆಲ್ಲವೂ ಒಟ್ಟು ಎಷ್ಟಾಗಬಹುದು ಎಂದು.
ಸ್ವರ್ಣಗೋಪುರ, ರಥದ ಗಾಲಿ ಬದಲಾವಣೆ, ಸರ್ವಜ್ಞಪೀಠದ ನವೀಕರಣ, ಭಕ್ತಾದಿಗಳ ಅನ್ನಪ್ರಸಾದ, ಚಿಣ್ಣರ ಸಂತರ್ಪಣೆ, ಸಿಬ್ಬಂದಿಗಳ ವೇತನ, ಕರೆಂಟು ಬಿಲ್ಲು, ನಿತ್ಯ ಜ್ಞಾನಯಜ್ಞ ಹೀಗೆ ಎಲ್ಲವನ್ನೂ ಸೇರಿಸಿದರೆ ಒಂದು ಅಜಮಾಸಿನಂತೆ ಶ್ರೀಗಳವರು 10 ಲಕ್ಷ ರೂಪಾಯಿಗಳನ್ನು ಪ್ರತಿನಿತ್ಯವೂ ಸಂಗ್ರಹಿಸಲೇಬೇಕು. ಸಂಗ್ರಹಿಸದೇ ಇದ್ದಲ್ಲಿ ಸಂಕಲ್ಪವು ದಾರಿ ತಪ್ಪುವುದರಲ್ಲಿ ಸಂದೇಹವೇ ಇಲ್ಲ. ಒಂದು ಕ್ಷಣ ಮೈ ಜುಂ ಎಂದಿತು. ಪ್ರತಿ ನಿತ್ಯ 10 ಲಕ್ಷ ರೂಪಾಯಿಗಳನ್ನು ಹುಟ್ಟಿಸುವುದೆಂದರೆ ಸಾಮಾನ್ಯವೇ? ಶ್ರೀಗಳವರು ಬಂಗಾರದ ಗೋಪುರದ ಪ್ಲಾನು ಹಾಕಿಕೊಳ್ಳದಿದ್ದರೆ ಚೆನ್ನಾಗಿತ್ತೇನೋ. ಎಂಬ ಒಂದು ಆಲೋಚನೆ ಮನಸಲ್ಲಿ ಹುಟ್ಟಿತು.
ಆ ಘಟನೆಯೂ ಆಗಿ 02.06.2019ಕ್ಕೆ ಅಂದರೆ ಇಂದಿನ ದಿನಕ್ಕೆ ಬರೋಣ.
ಈಗ 2ನೇ ತಾರೀಕು ಮುಗಿದು ಹೋಗಿದೆ. ಬಂಗಾರದ ಗೋಪುರವು ಶ್ರೀಕೃಷ್ಣನಿಗೆ ಸಮರ್ಪಣೆಯಾಗಲು ಇನ್ನು ಕೇವಲ ಮೂರೇ ದಿನಗಳು ಉಳಿದಿವೆಯಷ್ಟೇ! ಹೌದು ಇನ್ನು ಮೂರು ಬಾರಿ ಸೂರ್ಯನು ಮುಳುಗಿ, ನಾಲ್ಕನೆ ದಿನ ಹುಟ್ಟುವಷ್ಟರಲ್ಲಿ, ಈ ಲೇಖನವನ್ನು ಓದುತ್ತಿರುವ ಅನೇಕರು ಇನ್ನೂ ಹಾಸಿಗೆ ಬಿಟ್ಟು ಎದ್ದೂ ಇರುವುದಕ್ಕೂ ಮೊದಲೇ ಶ್ರೀಕೃಷ್ಣನ ಮನೆಯ ಮೇಲೆ ಬಂಗಾರದ ಮಾಡು ಜಗಮಗಿಸುತ್ತಿರುವುದು. ನನ್ನ ಮನದಲ್ಲಿ ಹುಟ್ತಿದ ಮತ್ತೊಂದು ಅವಿವೇಕದ ಪ್ರಶ್ನೆಗೆ ಗುರುಗಳ ಕಾರ್ಯವೇ ಉತ್ತರವನ್ನು ಕೊಟ್ಟಿತ್ತು. ಇದಪ್ಪಾ ಸಾಮರ್ಥ್ಯ ಎಂದರೆ.
ಈ ಸಮರ್ಪಣಾ ಕಾರ್ಯಕ್ರಮಕ್ಕೇ ನಡೆದಿರುವ ಸಿದ್ಧತೆ, ನಡೆಯುತ್ತಿರುವ ಕಾರ್ಯಕ್ರಮಗಳಾವುವೂ ಚಿಕ್ಕವಲ್ಲ. ಎಲ್ಲವೂ ಉನ್ನತವಾದ ಎತ್ತರವನ್ನು ಹೊಂದಿರುವವೇ. 20 ಜನ ಸ್ವಾಮಿಗಳು, 10ಕ್ಕೂ ಹೆಚ್ಚಿನ ರಾಜ ಮಹಾರಾಜರುಗಳು, 50ಕ್ಕೂ ಹೆಚ್ಚಿನ ಗಣ್ಯವ್ಯಕ್ತಿಗಳು, ನೂರಾರು ಜನ ವಿದ್ವಾಂಸರು ಹಾಗು ಕಲಾವಿದರು ಮತ್ತು ಸಾವಿರಾರು ಜನ ಭಕ್ತರು! ಎಲ್ಲರಿಗೂ ಯಥೋಚಿತವಾದ ವ್ಯವಸ್ಥೆಯನ್ನು ಮಾಡಿ, ಏನೂ ಕುಂದಾಗದಂತೆ ಕಾರ್ಯಕ್ರಮವನ್ನು ನಡೆಸಬೇಕು. ಚಿಂತೆಯಿಲ್ಲ. ಪ್ರಾಣದೇವರ ನಿರಂತರವಾದ ಕೃಪೆಯಿದ್ದೇ ಇರುವ ನಮ್ಮ ಗುರುಗಳು ಇದನ್ನು ಖಂಡಿತವಾಗಿ ಮಾಡಿಯೇ ಮಾಡುತ್ತಾರೆ. ಇದಪ್ಪಾ ಕರ್ಮನಿಷ್ಠೆ ಎಂದರೆ.
06.06.2019ರಂದು ಗೋಪುರದ ಸಮರ್ಪಣೆಯು ಆಗುವುದು. ಅಂದಿನ ಎಲ್ಲ ಕಾರ್ಯಕ್ರಮಗಳು ಇಷ್ಟು ಹೊತ್ತಿಗೆ (ಅಂದರೆ ರಾತ್ರಿ 1130ಗೆ) ಮುಗಿದು ಹೋಗಿರುತ್ತವೆ. ಮನೆಯ ಲೈಟ್ ಆಫ್ ಮಾಡಿಕೊಂಡು ನಮ್ಮ ನಿಮ್ಮಲ್ಲಿ ಶೇಕಡಾ 5 ಜನರು (ಹಿರಿಯರಿದ್ದಲ್ಲಿ) ನಿದ್ದೆ ಹೋಗಿರುತ್ತಾರೆ. ಉಳಿದ 94 ಶೇಕಡಾ ಜನರು ಕತ್ತಲಲ್ಲೇ ತಡಕಾಡುತ್ತಾ ಹೆಬ್ಬೆರಳಿನಿಂದ ಫೇಸ್ಬುಕ್ ಮತ್ತು ವಾಟ್ಸ್ಯಾಪ್ ಸ್ಟೇಟಸಿನ ಮಧ್ಯ ಉಯ್ಯಾಲೆಯಾಡುತ್ತಾ ಕಾಲಕಳೆಯುತ್ತಿರುತ್ತಾರೆ. ಆದರೆ ಶ್ರೀಕೃಷ್ಣಮಠದ ಬಡಗು ಮಾಳಿಗೆಯ ಮೊದಲ ಮಹಡಿಯಲ್ಲಿ, ನೈಋತ್ಯ ಮೂಲೆಯ ಕೊಠಡಿಯಲ್ಲಿ ದೀಪವು ಉರಿಯುತ್ತಾ ಇರುತ್ತದೆ.
ಯಾಕೆಂದರೆ ಅಲ್ಲಿ ಹಿರಿಯ ಗುರುಗಳು ನಮ್ಮೆಲ್ಲರ ಕಿರಿಯ ಗುರುಗಳಿಗೆ ಶಾಸ್ತ್ರಪಾಠವನ್ನು ಹೇಳುತ್ತಾ ಕುಳಿತಿರುತ್ತಾರೆ! ಹಿರಿಯರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಕಿರಿಯರು ಶ್ರೀವಿದ್ಯಾರಾಜೇಶ್ವರ ತೀರ್ಥರು. ಅದೆಂತಹ ಭಾಗ್ಯಶಾಲಿಗಳೋ ನಮ್ಮ ಕಿರಿಯಗುರುಗಳು. ಇಂತಹುದೇ ಒಂದು ದೃಶ್ಯವನ್ನು ನೀವು ಈಗ ಒಮ್ಮೆ ನೋಡಿದ್ದು.
ಪಾಠ ಹೇಳುವ ಒಂದು ವಿಡಿಯೋ ತೋರಿಸಲು ಇಷ್ಟೆಲ್ಲ ಮಾತು ಹೇಳಬೇಕಿತ್ತೇನು? ಎಂಬ ಪ್ರಶ್ನೆಯು ನಿಮಗೆ ಬರಬಹುದು.
ಈಗ ನೋಡಿ. ನಮಗೆ ಕೆಲಸ ಜಾಸ್ತಿ ಇದ್ದ ದಿನದಂದು ಹಾಸಿಗೆಯ ಮೇಲೆ ಬಿದ್ದರೆ ಸಾಕಪ್ಪಾ ಎನಿಸುವುದು. ಚೂರು ತಡವಾಗಿ ಮಲಗಿದಲ್ಲಿ ಮಾರನೆಯ ದಿನ ಲೇಟಾಗಿ ಏಳಲು ಅದೊಂದು ನೆಪವು ಸಾಕು. ಇದೇ ರೀತಿ ನಾಲ್ಕಾರು ದಿನ ಮೇಲಿಂದ ಮೇಲೆ ಇದ್ದರೆ ವಾರದ ಕೊನೆಗೆ ರಜೆಯು ಬೇಕೇ ಬೇಕು ನಮಗೆಲ್ಲ. ನಾವೆಲ್ಲ ಎದ್ದೇಳುವುದು 7ಕ್ಕೇನೇ. ಸಂಧ್ಯಾವಂದನೆ ಮತ್ತು ಜಪ ಅರ್ಧ, ಗೋಪೀಧಾರಣೆ ಮಾಡಲು ಸಮಯವಿಲ್ಲ, ದೇವರ ಪೂಜೆಯಂತೂ ವಾರ್ಷಿಕ ಕಾರ್ಯಕ್ರಮವೇ ಹೌದು. ಮನೆಗೆ ಒಂದಿಬ್ಬರು ಅತಿಥಿಗಳು ಬಂದರೆ ಅವರೊಡನೆ ಮಾತನಾಡಲು ನಮಗೆ ಸಮಯವಿಲ್ಲ. (ಈಗಂತೂ ಮಾತನಾಡಲು ಶಬ್ದಗಳೂ ಇಲ್ಲವೆನ್ನಿ). ಊಟ ಮತ್ತು ತಿಂಡಿಗಳು ಮಾತ್ರ ಸಮಯಕ್ಕೆ ಸರಿಯಾಗಿ ದಿನಕ್ಕೆ 3 ಬಾರಿ ಆಗಲೇ ಬೇಕು. ಇಷ್ಟೆಲ್ಲ ಮಾಡಿಯೂ ನಮ್ಮಲ್ಲಿ ಅನೇಕರ ಸಂಪಾದನೆ ತಿಂಗಳಿಗೆ 25000 ದಾಟದು. (ತಿಂಗಳಿಗೆ ಹೇಳಿದ್ದು ನಾನು. ದಿನಕ್ಕೆ ಅಲ್ಲ). ಆದರೆ ನಮಗಾಗುವಷ್ಟು ಸುಸ್ತು ಬೇರಾರಿಗೂ ಆಗದು! ಅಲ್ಲವೇ?
ಶ್ರೀಗಳವರು ಸಲಹುತ್ತಿರುವ ಶಿಷ್ಯರ ಮತ್ತು ಸಿಬ್ಬಂದಿಗಳ ಸಂಖ್ಯೆ : ಪ್ರತ್ಯಕ್ಷ ಹಾಗು ಪರೋಕ್ಷ ಎರಡೂ ಸೇರಿ ಸುಮಾರು 500ಕ್ಕೂ ಹೆಚ್ಚು. ನಾವುಗಳು ಸಲಹುತ್ತಿರುವುದು ಹೆಚ್ಚೆಂದರೆ 4-5 ಜನ. ಶ್ರೀಗಳವರು ಜೋಪಾನ ಮಾಡುತ್ತಿರುವ ಗೋವುಗಳ ಸಂಖ್ಯೆ 50ಕ್ಕೂ ಹೆಚ್ಚು. ನಾವು ಅಬ್ಬಬ್ಬಾ ಎಂದರೆ ಒಂದು ನಾಯಿಯನ್ನು ಸಾಕಿಯೇವು. ಅಷ್ಟೇ.
ಈಗ ಶ್ರೀಗಳವರ ದಿನಚರಿಯನ್ನೊಮ್ಮೆ ನೋಡೋಣ.
- ರಾತ್ರಿ 11:30ರ ನಂತರ ಮಲಗುವುದು
- ಬೆಳಗ್ಗೆ 2:45 ರಿಂದ 3:00ರ ಮಧ್ಯ : ಎದ್ದೇಳುವುದು (ಅಲಾರಂ ಅನ್ನು ಇವರೇ ಎಬ್ಬಿಸುವುದು)
- 3:45ರಿಂದ 7:00ವರೆಗೆ : ಜಪತಪಾನುಷ್ಠಾನ
- 7:30 – 8:45 : ಚಂದ್ರಿಕಾ ಪಾಠ
- 9:00 ಮಧ್ಯಾಹ್ನ 1:00 : ಶ್ರೀಕೃಷ್ಣನ ಪೂಜೆ ಹಾಗು ಭಿಕ್ಷೆ
- 1:15 ರಿಂದ 2:30 : ಮಂತ್ರಾಕ್ಷತೆ ಕೊಡುವುದು
- 2:30 – 2:50 ವಿಶ್ರಾಂತಿ (ಯಾರೂ ಇಲ್ಲದಿದ್ದರೆ)
- 3:00 ಇಂದ 4:00 : ತತ್ವಪ್ರದೀಪ ಪಾಠ
- 4:00 ರಿಂದ 5:00 : ಶ್ರೀಸುಧಾಪಾಠ
- 5:00 : ರಾಜಾಂಗಣಕ್ಕೆ ಓಡೋಡಿಕೊಂಡು ಹೋಗುವುದು.
- 5:10 ರಿಂದ 6:15 ಕುಂತಿಯ ಚಿಂತನೆಯನ್ನು ನಮ್ಮ ಹೃದಯದಲ್ಲಿ ತುಂಬಿಸುವ ಪ್ರಯತ್ನ ಮಾಡುವುದು.
- 6:30 – 9:00 ಶ್ರೀಕೃಷ್ಣನ ನಾನಾ ಪೂಜೆಗಳು, ಮಂತ್ರಾಕ್ಷತೆ ಮತ್ತು ಗಣ್ಯರ ಭೇಟಿ
- 9:30 – 10:00 – ಶ್ರೀಕೃಷ್ಣಮಠದ ದೈನಂದಿನ ವ್ಯವಹಾರಗಳನ್ನು ಗಮನಿಸುವುದು
- 10.00 – 11:30 – ಕಿರಿಯ ಶ್ರೀಗಳವರಿಗೆ ಪಾಠ ಹೇಳುವುದು.
ಇಲ್ಲಿ ಹೇಳಿರುವ ಟೈಂ ಟೇಬಲ್ಲಿನಲ್ಲಿ ಕಿಂಚಿತ್ತು ಸಮಯವು ಏನಾದರೂ ವ್ಯತ್ಯಾಸಗೊಂಡಾಗ ಅವರು ಕಾಂಪ್ರೋಮೈಸ್ ಮಾಡಿಕೊಳ್ಳುವುದು ಪಾಠದ ಸಮಯವಾಗಲಿ ಅಥವಾ ಜಪದ ಸಂಖ್ಯೆಯಲ್ಲಾಗಲಿ ಅಲ್ಲ. ಅದೆಲ್ಲವೂ ಚಾಚೂ ತಪ್ಪದೇ ಆಗುತ್ತವೆ. ಗುರುಗಳು ಬಿಟ್ಟುಕೊಡುವುದೇನಿದ್ದರೂ ತಮಗೆಂದು ಇಟ್ಟುಕೊಂಡ ವಿಶ್ರಾಂತಿಯ ಸಮಯವನ್ನೇ. ಅವರ ಮನಸ್ಸು ಮತ್ತೆ ಮುಗುಳ್ನಗುತ್ತಾ ಮುಂದಿನ ಕೆಲಸದಲ್ಲಿ ತೊಡಗುತ್ತದೆ. ಬೇಸರಿಸಿಕೊಂಡದ್ದನ್ನಾಗಲಿ ಕೋಪಿಸಿಕೊಂಡದ್ದನ್ನಾಗಲೀ ಯಾರಾದರೂ ನೋಡಿದ್ದೀರೋ? ಈಗಂತೂ ಬಂಗಾರದ ಗೋಪುರವನ್ನು ಸಮರ್ಪಿಸುವ ಹಬ್ಬದ ಸಡಗರದ ದಿನಗಳು. ಮೇಲೆ ಹೇಳಿದಂತೆ ಸಾವಿರಾರು ಜನರ ಸದ್ದುಗದ್ದಲವಿದ್ದೇ ಇದೆ. ಹಿರಿಯ ಕಿರಿಯ ಸ್ವಾಮಿಗಳಲ್ಲರೂ ಬಂದಿದ್ದಾರೆ. ಯಾವ ಕಡೆಯಿಂದ ನೋಡಿದರೂ ಶ್ರೀಗಳವರ ಮೇಲೆ ಇರುವುದು ಅಗಾಧವಾದ ಒತ್ತಡವೇ. ಆದರೂ ಅದನ್ನೇ ಒಂದು ನೆಪ ಮಾಡಿಕೊಂಡು ಶ್ರೀಗಳವರು ತಮ್ಮ ಕಿರಿಯರಿಗೆ ಪಾಠ ಹೇಳುವುದನ್ನು ಮರೆತಿಲ್ಲವಲ್ಲ!!
ಮೊನ್ನೆ ಗುರುಗಳು ಕಿರಿಯ ಶ್ರೀಗಳವರ ಪಟ್ಟಾಭಿಷೇಕವಾದ ನಂತರ ಅವರನ್ನು ತಾವೇ ಒಳಗೆ ಕರೆದುಕೊಂಡು ಹೋಗಿ, ಮೂರುಜುಟ್ಟಿನ ಕೃಷ್ಣಯ್ಯನನ್ನು‘ತೋರಿಸುತ್ತಿರುವ’, ಮಂಗಳಾರತಿಯನ್ನು ಮಾಡಿಸುತ್ತಿರುವ ದೃಶ್ಯವನ್ನು ನೀವೆಲ್ಲರೂ ನೋಡಿಯೇ ಇದ್ದೀರಿ. ಅದರಲ್ಲಿಯೂ ಗುರುಗಳ ಮುಖದಲ್ಲಿ ಕಾಣುತ್ತಿರುವುದು ಇದೇ ಶಿಷ್ಯಪ್ರೇಮವಲ್ಲವೇ? “ಜವಾಬ್ದಾರಿಯನ್ನು ನಿರ್ವಹಿಸಿದೆ ನಾನು” ಎನ್ನುವ ಸಮಾಧಾನವೇ ಅಲ್ಲವೇ ಕಾಣುತ್ತಿರುವುದು?
ಜವಾಬ್ದಾರಿಯನ್ನು ಹೇಗೆ ನಿರ್ವಹಿಬೇಕು ಎಂಬುದಕ್ಕೆ ಗುರುಗಳೇ ಪ್ರತ್ಯಕ್ಷ ಮಾದರಿ. ಇದೇ ಅಲ್ಲವೇ ಪ್ರೇಮವೆಂದರೆ? ಇದೇ ಅಲ್ಲವೇ ಸಾಮರ್ಥ್ಯವೆಂದರೆ? ಇದುವೆ ಅಲ್ಲವೇ ಶ್ರೀ-ಪ್ರಾಣ-ನಾಥನ ಒಲುಮೆಗೆ ಪಾತ್ರರಾಗುವುದು ಎಂದರೆ?
ಈಗ ಮತ್ತೊಮ್ಮೆ ವಿಡಿಯೋವನ್ನು ನೋಡಿ. 🙂
ಸಂತಸವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮರೆಯದಿರಿ. ಗುರುಗಳ ಪ್ರಶಂಸೆಯನ್ನು ಮಾಡಿದಷ್ಟೂ ನಾಲಗೆ ಮತ್ತು ಮನಸ್ಸು ಎರಡೂ ಶುದ್ಧವಾಗುವುವು.
ಗುರುಗಳ ಶಿಷ್ಯ ಕಾರುಣ್ಯಕ್ಕೆ ಎಣೆಯೇ ಇಲ್ಲ. ನಮ್ಮಂತಹ ಪಾಮರ ಶಿಷ್ಯರನ್ನೇ ಪ್ರೇಮದಿಂದ ಮಾತನಾಡಿಸಿ ಅನುಗ್ರಹಿಸುವ ಗುರುಗಳು, ತಮ್ಮ ಪರಂಪರೆಯನ್ನು ಮುಂದುವರೆಸುವ ಪ್ರೀತಿಯ ಶಿಷ್ಯನ ಮೇಲೆ ಶಿಷ್ಯ ವಾತ್ಸಲ್ಯದ ಸಾಗರವನ್ನೇ ಹರಿಸಿಯಾರು.. ಇಂತಹ ಗುರುಗಳನ್ನು ಪಡೆದ ಶ್ರೀ ಶ್ರೀ ವಿದ್ಯಾರಾಜೇಶ್ವರ ತೀರ್ಥರೇ ಧನ್ಯರು..
ಇಂತಹ ಅಪೂರ್ವ ಸನ್ನಿವೇಶವನ್ನು ಪ್ರತ್ಯಕ್ಷ ನೋಡಿ ನಮಗೆಲ್ಲಾ ತೋರಿಸಿದ ನೀವು ಮಾನ್ಯರು