ಗರ್ಭಪುರ / ಗೋಪುರಪುರ ಎನ್ನುವ ಒಂದು ಅಗ್ರಹಾರವಿತ್ತು ಎಂದರೆ ಯಾರಿಗೂ ತಿಳಿಯದು. ಗಬ್ಬೂರು ಎಂದರೆ ಸ್ವಲ್ಪ ಮಂದಿಗೆ ತಿಳಿದೀತು. ಬಿಸಿನೀರನ್ನು ಹಾಕಿದರೆ ತಣ್ಣೀರು ಮಾಡುವ ವೆಂಕಟೇಶ್ವರನ ಗುಡಿ ಎಂದರೆ ಥಟ್ಟನೆ ಬಹಳ ಜನರಿಗೆ ವೆಂಕಟೇಶ ಸ್ತೋತ್ರ ಹೇಳುತ್ತಾ ಅಭಿಷೇಕ ಮಾಡುತ್ತಿರುವ ಗಬ್ಬೂರಿನ ಶ್ರೀಶ್ರೀನಿವಾಸದೇವರ ವಿಡಿಯೋ ಸ್ಮರಣೆಗೆ ಬರುತ್ತದೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಒಂದು ಹಳ್ಳಿ ಇದು ಗಬ್ಬೂರು. 800 ವರ್ಷಗಳಷ್ಟು ಹಳೆಯ ಶ್ರೀನಿವಾಸನ ಆಲಯವಿದೆ ಈ ಊರಲ್ಲಿ. ಕೆಲವಾರು ಕಾರಣಗಳಿಂದ ಶ್ರೀನಿವಾಸನ ಶಿಲ್ಪವನ್ನು ವಿಸರ್ಜಿಸಿ, ಹೊಸತನ್ನು ಪ್ರತಿಷ್ಠಾಪನೆ ಮಾಡಲು ಅರ್ಚಕರು ಯೋಚಿಸಿದರೆ, ಶ್ರೀನಿವಾಸನ ಚಿತ್ತವೇ ಬೇರೆ ಇತ್ತು. ಪ್ರಶ್ನಶಾಸ್ತ್ರದ ಮೂಲಕ ಶ್ರೀನಿವಾಸನು ತಾನು ಇಲ್ಲಿಯೇ ಇರುವೆ. ಹೊಸ ವಿಗ್ರಹವು ಬೇಡ ಎಂದು ಸೂಚಿಸಿದ. ಸನ್ನಿಧಾನವು ಇದೆ ಎಂದು ತಿಳಿಯಲು ಕುದಿವ ನೀರಿನಿಂದ ಅಭಿಷೇಕ ಮಾಡಿರಿ. ಕಾಲಬಳಿ ಬರುವಷ್ಟರಲ್ಲಿ ನೀರು ತಂಪಾದರೆ ಸನ್ನಿಧಾನವು ಜಾಗ್ರತೆಯಾಗಿದೆ ಎಂದು ತಿಳಿಯುವಂತೆ ಸೂಚನೆಯು ದೊರೆಯಿತು. ಅದರಂತೆ ಮಾಡಲಾಗಿ ಕುದಿಯುವ ನೀರು ತಂಪಾಗುವುದು ಎಲ್ಲರಿಗೂ ಅನುಭವಕ್ಕೆ ಬಂದಿತು. ಇಂದಿಗೂ ಯಾರಾದರೂ ಈ ಮಹಿಮೆಯನ್ನು ವೀಕ್ಷಿಸಲು ಇಚ್ಚಿಸಿದರೆ ನಿಗದಿತ ವೇಳೆಯಲ್ಲಿ ಅಭಿಷೇಕವನ್ನು ಮಾಡುತ್ತಾರೆ. ಇದಕ್ಕಾಗಿ ಯಾವುದೇ ಶುಲ್ಕವಿರುವುದಿಲ್ಲ. ಇದು ಸಹ ಶ್ರೀಶ್ರೀನಿವಾಸದೇವರ ಸೂಚನೆಯಾಗಿದೆ.
(ಗಮನಿಸಿ : ಗಬ್ಬೂರಿಗೆ ಬಿಸಿನೀರಿನ ಘಟನೆಯನ್ನು ಪರೀಕ್ಷೆ ಮಾಡಲು ಹೋಗಬಾರದು. ಮಹಿಮಾ ವಿಶೇಷವನ್ನು, ಅಚಿಂತ್ಯಾದ್ಭುತನ ಲೀಲೆಯನ್ನು ನೋಡಿ ಸಂತೋಷಪಡಲಷ್ಟೇ ಹೋಗಬೇಕು.)
ಶ್ರೀಶ್ರೀನಿವಾಸದೇವರಲ್ಲಿ ಇಷ್ಟಾರ್ಥ ಪೂರೈಕೆಗಾಗಿ ಪ್ರಾರ್ಥಿಸಿ, ತೆಂಗಿನಕಾಯಿಯನ್ನು ಕಟ್ಟುವ ಪದ್ಧತಿ ಈ ದೇಗುಲದಲ್ಲಿದೆ. ಆಶೆಯು ಈಡೆರಿದ ನಂತರ ಆ ಕಾಯಿಯನ್ನು ಪಡೆದುಕೊಂಡು, ಶ್ರೀದೇವರಿಗೆ ಯಥಾಶಕ್ತಿ ಸೇವೆಯನ್ನು ಭಕ್ತರು ಸಲ್ಲಿಸುತ್ತಾರೆ.
ಗಬ್ಬೂರು ಎನ್ನುವ ಇಂದಿನ ಒಂದು ಗ್ರಾಮವು ಹಿಂದೆ ಘಟಿಕಾಸ್ಥಾನವಾಗಿತ್ತು ಎನ್ನಲು ಊರಲ್ಲಿ ನೂರೆಂಟು ಸಾಕ್ಷಿಗಳು ಲಿಪಿಬದ್ಧವಾಗಿ ದೊರಕುತ್ತವೆ. ಈ ಊರಿನ ಇತಿಹಾಸವನ್ನು ತಿಳಿಸಲೆಂದೇ ಪ್ರತ್ಯೇಕವಾಗಿ ಒಂದು ಲೇಖನವನ್ನು ಬರೆಯಬೇಕು. ಅಷ್ಟರ ಮಟ್ಟಿಗೆ ಈ ಊರು ಬಹುದೊಡ್ಡ ಐತಿಹಾಸಿಕ ಕ್ಷೇತ್ರ. ವಿದ್ವಾಂಸರನ್ನು ತಯಾರುಗೊಳಿಸಿದ ವಿದ್ಯಾಪೀಠ.
ಈ ಶತಮಾನದ ಜ್ಞಾನಮಾರ್ತಾಂಡರಾದ ಶ್ರೀಶ್ರೀಸುವಿದ್ಯೇಂದ್ರತೀರ್ಥ ಶ್ರೀಪಾದರು ಅವತರಿಸಿದ್ದು ಕೂಡ ಈ ಗರ್ಭಪುರದಲ್ಲಿಯೇ . ಈ ವಿಷಯವೇ ಸಾಕ್ಷಿ ಗಬ್ಬೂರಿನ ನೆಲದಲ್ಲಿ ವಿದ್ಯೆಯು ಹುಟ್ಟುತ್ತದೆ ಎನ್ನಲು.
Be First to Comment