ಮಾಧವನೀತನ್ ಪೆರನಲ್ಲ

ದಶದೀಪಗಳು 6/10:

(ಪ್ರಾಚೀನ ನಾರಾಯಣ ದೇವಾಲಯ – ವಿಚುಂದ್ರೆ, ಗೋವಾ)
———————————————————————–
ಸಾಮಾನ್ಯವಾಗಿ ಬೇರೆಡೆ ಐತಿಹಾಸಿಕ ಸ್ಥಳಗಳಲ್ಲಿ ಗುಡಿಗಳು ಉಳಿದುಕೊಂಡು ಗರ್ಭಗುಡಿಯಲ್ಲಿ ಮೂರ್ತಿಯು ಕಾಣೆಯಾಗಿ ಹೋಗಿರುವುದನ್ನು ನೋಡಿದ್ದೇವೆ. ಆದರೆ ಗೋವಾದಲ್ಲಿ ಒಂದು ವ್ಯತಿರಿಕ್ತವಾಗಿರುವ ಉದಾಹರಣೆಯಿದೆ. ಇಲ್ಲಿ ದೇವರ ಶಿಲ್ಪವು ತನ್ನ ಮೂಲಸ್ಥಾನದಲ್ಲಿ ಭದ್ರವಾಗಿ ನಿಂತಿದೆ. ಆದರೆ ಗುಡಿಯು ಮಾತ್ರ ಸಂಪೂರ್ಣ ನಾಶವಾಗಿದೆ.

ದೇವಾಲಯದ ಬುನಾದಿ, ಗೋಡೆಯ ಕೆಲವು ಭಾಗಗಳು, ಪರಿವಾರ ದೇವತೆಗಳು, ಶಿಖರದ ಭಾಗಗಳು ಅಲ್ಲಿಯೇ ಪಕ್ಕದಲ್ಲಿ ಅಸ್ತವ್ಯಸ್ತವಾಗಿ ಬಿದ್ದಿವೆ. ದೇವರ ಶಿಲ್ಪವು ಹಾಗೆಯೇ ನಿಂತಿರುವುದನ್ನು ನೋಡಿದರೆ ನಿಧಿಗಾಗಿ ದೇವಾಲಯವನ್ನು ಧ್ವಂಸಮಾಡಿಲ್ಲ, ಅಥವಾ ಮತಾಂಧತೆಯಿಂದಲೂ ನಾಶ ಮಾಡಿಲ್ಲವೆನಿಸುತ್ತದೆ. ನಾಶವಾಗಿದ್ದು ಬಹುಶಃ ಅರ್ಚಕರ ಮನೆತನವು ಇದನ್ನು ತೊರೆದು ಬೇರೆಲ್ಲೋ ಹೋಗಿದ್ದಕ್ಕಾಗಿ ಇರಬೇಕೆನಿಸುತ್ತದೆ. ಅಥವಾ ಅರ್ಚಕರು ಹತ್ತಿರದಲ್ಲಿ ಎಲ್ಲೋ ಇದ್ದರೂ ಇದರನ್ನು ನಿರ್ಲಕ್ಷಿಸಿದ್ದಾರೆ. ವರ್ಷಾಂತರದಲ್ಲಿ ಅತಿಯಾದ ಮಳೆಯಿಂದ ಗುಡಿಯು ಬಿದ್ದರೂ ಬಿದ್ದಿರಬಹುದು. ಅಂತೂ ಎಲ್ಲ ರೀತಿಯಿಂದ ಶತಮಾನದಿಂದಲೂ ಇದು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಒಂದು ಸುಂದರ, ಹಚ್ಚ ಹಸಿರಿನ ತಾಣವು.

ಈ ಹಳ್ಳಿಯ ಹೆಸರು ವಿಚುಂದ್ರೆ. ಗೋವಾದ ದಕ್ಷಿಣಭಾಗದಲ್ಲಿದೆ. ಮೊನ್ನೆ ಬರೆದ ನೇತ್ರಾವಳೀ ಗೋಪೀನಾಥನ ಗುಡಿಯಿಂದ ಸುಮಾರು 5-6 ಕಿ.ಮೀ ದೂರದಲ್ಲಿದೆ.

ಸ್ಥಳೀಯರು ಮತ್ತು ಪುರಾತತ್ವದವರು ಇದನ್ನು ನಾರಾಯಣದೇವ್ ಮಂದಿರ್ ಎಂದೂ, ಇನ್ನೂ ಕೆಲವು ತಿಳಿದವರು ಪದ್ಮನಾಭ ದೇವರು ಎಂದೂ ಕರೆಯುತ್ತಾರೆ. ಆದರೆ ಶಿಲ್ಪಲಕ್ಷಣಗಳನ್ನ ಗಮನಿಸಿದರೆ ಚತುರ್ವಿಂಶತಿ ಮೂರ್ತಿಗಳಲ್ಲಿ ಪರಿಗಣಿಸುವ ಶ್ರೀಮಾಧವ ಎನ್ನುವುದು ಸ್ಪಷ್ಟವಾಗುತ್ತದೆ.

ಗುಡಿಯು ಮುರಗಲ್ಲಿನಿಂದ ಕಟ್ಟಲ್ಪಟ್ಟದ್ದು. ಗೋಡೆ ಮತ್ತು ಛಾವಣಿಗಳು ಅಲ್ಲಿಯೇ ಬಿದ್ದಿವೆ. ಗೋಡೆಯ ಕಲ್ಲುಗಳನ್ನು ಗಮನಿಸಿದರೆ ತೀರಾ ಅದ್ಭುತವೆನಿಸುವ ಶಿಲ್ಪಕಲೆಯಿಂದೇನೂ ಕೂಡಿದ್ದಿಲ್ಲವೆನಿಸುವುದು. ಆದರೆ ಶಿಲ್ಪವು ಮಾತ್ರ ಬಹಳ ಸುಂದರವಾಗಿದೆ.

ಶಿಲ್ಪವು ಕಪ್ಪುಕಲ್ಲಿನಿಂದ ನಿರ್ಮಿತವಾದದ್ದು. ಸುಮಾರು ನಾಲ್ಕಡಿ ಎತ್ತರದ್ದು. ಮಂದಹಾಸದ ಮುಖವಿದೆ. ಗದಾ,ಚಕ್ರ, ಶಂಖ ಮತ್ತು ಪದ್ಮಗಳನ್ನು ಧರಿಸಿದ್ದಾನೆ. ತೋರಣದಲ್ಲಿ ದಶಾವತಾರದ ಕೆತ್ತನೆಗಳಿವೆ. ಕಾಲಬಳಿ ಶ್ರೀದೇವಿ, ಭೂದೇವಿ ಮತ್ತು ಪ್ರಾಣದೇವರಿದ್ದಾರೆ. ಗರ್ಭಾಲಯದ ಎದುರಿಗೆ ಗರುಡನ ಸ್ಥಾನವಿದೆ. ಗರುಡನ ಶಿಲ್ಪವೂ ಸಹ ಮುಕ್ಕಾಗದೇ ಉಳಿದಿದೆ.

ಈ ಶಿಲ್ಪವು ಏನಿಲ್ಲವೆಂದರೂ ನೂರು ವರ್ಷಗಳಿಂದ ಬಯಲಿನಲ್ಲಿಯೇ ನಿಂತಿದೆ. ಎಲ್ಲೂ ಭಗ್ನವಾಗಿಲ್ಲ. ಆದರೆ ಸಮುದ್ರದ ಕಡೆಯಿಂದ ಬೀಸಿಕೊಂಡು ಬರುವ ಉಪ್ಪಿನಾಂಶದ ಗಾಳಿಯಿಂದ ಶಿಲೆಯು ಚೂರು ಚೂರಾಗಿ ತನ್ನ ನಯವಾದ ಮೇಲ್ಮೈಯನ್ನು ಕಳೆದುಕೊಂಡು ಒರಟಾಗಿದೆ. ಜೊತೆಗೆ ಹೇರಳವಾಗಿ ಸುರಿಯುವ ಮಳೆಯಿಂದ ಪಾಚಿಯೂ ಕಟ್ಟಿರುತ್ತದೆ.

ಪಕ್ಕದಲ್ಲಿ ಮತ್ತೊಂದು ಗುಡಿಯಿದೆ. ಅಲ್ಲಿ ಮಹಿಷಮರ್ದಿನಿಯು ಇದ್ದಳಂತೆ. ಈಗ ಎಲ್ಲಿದ್ದಾಳೋ ಆ ದುರ್ಗೆ. ತಿಳಿಯದು. ಗೋವಾದ ಎಲ್ಲ ಊರಿನಲ್ಲೂ ಒಂದು ಮಹಿಷಮರ್ದಿನಿಯ ಆಲಯವಿದ್ದೇ ಇದೆ. ಪ್ರಾಚೀನವಾದ ಎಲ್ಲ ಆಲಯಗಳೂ ಧ್ವಂಸವಾಗಿವೆ. ನಮ್ಮ ಮಹಿಷಮರ್ದಿನಿಗೆ ಪೋರ್ಚುಗೀಸರ ಕಾಟಕ್ಕಿಂತಲೂ ಈ ಕೊಂಬಿನವನ ಬಳಗದವರ ಕಾಟ ಹೆಚ್ಚು. ಇವರ ಮೂಲಕ ಅವರು ತಮ್ಮ ಕೆಲಸವನ್ನು ಈಡೇರಿಸಿಕೊಂಡಿರಲಿಕ್ಕೂ ಸಾಕು..

ಪುರಾತತ್ವ ಇಲಾಖೆಯು ಇಲ್ಲಿ ಇರಿಸಿರುವ ಬೋರ್ಡಿನ ಪ್ರಕಾರ ಇದು ಲಕ್ಷ್ಮೀನಾರಾಯಣ ಮಂದಿರ. ಅಂದ ಮೇಲೆ ಲಕ್ಷ್ಮೀ ದೇವಿಗೂ ಒಂದು ಗುಡಿಯಿತ್ತೆಂಬುದು ಸಿದ್ಧವಾಯಿತು. ಮಾಧವನಿಗೆ ಜೊತೆಯಾಗಿ ಕಮಲಾದೇವಿಯೂ ಇದ್ದಳೆನಿಸುತ್ತದೆ. ಈಗ ಕಮಲಮ್ಮನವರು ಇಲ್ಲಿಲ್ಲ. ಅವಳನ್ನೇ ನಿಧಿಯೆಂದು ತಿಳಿದು ಹೊತ್ತೊಯ್ದರೋ ಏನೋ ಯಾರಿಗೆ ಗೊತ್ತು?

ನನಗೆ ಈ ಕ್ಷೇತ್ರದ ದರ್ಶನವಾದದ್ದು ಅಚಾನಕ್ಕಾಗಿ. ಇಲ್ಲಿಗೆ ಹೋದಾಗ ಈ ಗುಡಿಯ ಅಕ್ಕ ಪಕ್ಕದವರನ್ನು ನೋಡಿದೆ. ಇವರೆಲ್ಲ ಇಲ್ಲಿನ ಮೂಲನಿವಾಸಿಗಳ ಇಂದಿನ ಪೀಳಿಗೆ ಎಂಬುದು ನೋಡಿದ ತಕ್ಷಣವೇ ತಿಳಿಯುತ್ತದೆ. ಆದರೆ ತಮ್ಮ ಅಡಿಕೆ ಟೋಪಿ, ಹೆಗಲು ವಸ್ತ್ರ ಚಿಕ್ಕ ಬೈರಾಸದ ಬಟ್ಟೆಗಳನ್ನು ತ್ಯಜಿಸಿ ಕೌಬಾಯ್ ಟೋಪಿ, ಬುಷ್ ಷರ್ಟು ಮತ್ತು ಜೀನ್ಸ್ ಪ್ಯಾಂಟಿಗೆ ವಸ್ತ್ರಾಂತರಗೊಂಡು ಶತಮಾನಗಳೇ ಕಳೆದಿವೆ. ಇವರನ್ನು ಗುಡಿಯ ಬಗ್ಗೆ ಕೇಳಿದೆ. ಇವರು ಮಾತನಾಡುವುದು ಶುದ್ಧ ಗ್ರಾಮೀಣ ಕೊಂಕಣಿ. ಹಿಂದಿಯೂ ಅಸ್ಪಷ್ಟ ಇಲ್ಲಿ. ಆದರೂ ಅವರು ಆಸಕ್ತಿಯಿಂದ ಹೇಳಿದ್ದು ಇಷ್ಟು. “ಇದು ಪ್ರಾಚೀನ ಕಾಲದ್ದು. ಯಾರೋ ಒಬ್ಬ ಋಷಿಗಳು ಇದನ್ನು ಸ್ಥಾಪಿಸಿದ್ದಾರೆ. ಬಹುತ್ ಪವರ್ ಫುಲ್ ಭಗವಾನ್ ಹೈ.“

ದೇವರಿಗೆ ಗುಡಿಯಿಲ್ಲದಿರಬಹುದು. ಆದರೆ ಭಕ್ತರು ಇದ್ದಾರೆ ಎನ್ನುವುದು ಚೂರು ಸಮಾಧಾನದ ಸಂಗತಿ. ಈ ಮತಾಂತರಗೊಂಡ ಜನರೂ ಸಹ ಇಲ್ಲಿ ತಮ್ಮದೇ ಆಗಿರುವ ನಂಬಿಕೆಯಿಂದ ನಡೆದುಕೊಳ್ಳುತ್ತಾರೆ. ಇಲ್ಲಿನ ಸೋಡಾ ಅಂಗಡಿಯವನು ಹೇಳಿದ್ದು ಇದು. ಮನೆಯಲ್ಲಿ ಏನಾದರೂ ಸಮಸ್ಯೆಯಾದರೆ ನೇರವಾಗಿ ಇಲ್ಲಿ ಬಂದು ಒಂದು ಇಡೀ ತೆಂಗಿನ ಕಾಯನ್ನು (ಪೂರ್ಣಫಲ, ಸಿಪ್ಪೆ ಸುಲಿಯದೇ ಇರುವುದು) ದೇವರ ಮುಂದೆ ಇಟ್ಟು ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಅವರ ಸಮಸ್ಯೆಯನ್ನು ನಾರಾಯಣ ದೇವನು ಬಗೆ ಹರಿಸುತ್ತಾನೆ. ದೇವರ ಮುಂದೆ ಇರುವ ಒಂದು ಚಪ್ಪಟೆ ಕಲ್ಲಿನ ಮೇಲೆ ರಂಗೋಲಿಯನ್ನು ಹಾಕಿ, ಒಂದು ಬಟ್ಟಲಲ್ಲಿ ಸಕ್ಕರೆಯನ್ನು ಇಟ್ಟು ಕೈಮುಗಿದು ಹೋಗುವ ಜನರೂ ಇದ್ದಾರೆ. ಅಂತೂ ಬಲವಿಲ್ಲದ ಈ ಜನರಿಂದ ಸುಲಭಪೂಜೆಯನ್ನು ಈ ದೇವರು ಸ್ವೀಕರಿಸುತ್ತಾ ಇದ್ದಾನೆ.

ಭಿನ್ನಗೊಂಡ ಮೂರ್ತಿಯನ್ನು ಪೂಜಿಸಬಾರದು ಎನ್ನುತ್ತಾರೆ. ನಿಜ. ಅದು ಶಾಸ್ತ್ರೀಯ ಕೂಡಾ. ಆದರೆ ಸಂಪ್ರದಾಯಗಳನ್ನೇ ಭಗ್ನವಾಗಿಸಿಕೊಂಡ ನಮ್ಮ ಇಂದಿನ ಜನರಿಗಿಂತ ಈ ಜನರು ಎಷ್ಟೋ ಮೇಲು. ತುಂಡಾದ ಸಾಲಿಗ್ರಾಮವು ಪೂಜೆಯೊಪ್ಪುವಂತೆ ಶ್ರೀಹರಿಯು ಇವರ ಭಕ್ತಿಯನ್ನು ಸ್ವೀಕರಿಸಿಯೇ ಸ್ವೀಕರಿಸುತ್ತಾನೆ.

ಇಂತಿಪ್ಪ ಈ ಗುಡಿಯನ್ನು ನಮ್ಮದು ಎಂದು ಹೇಳಿಕೊಳ್ಳಲು ಪುರಾತತ್ವದವರು ನಾಚಿಕೆ ಪಡುತ್ತಿದ್ದರಂತೆ. ಮುಂದೆ ಯಾವ ಅಧಿಕಾರಿಗೆ ಪ್ರೇರಣೆಯಾಯ್ತೋ ಏನೋ ೨೦೦೩ರಲ್ಲಿ ಇದು ಭಾರತದ ಸಂರಕ್ಷಿತ ಸ್ಮಾರಕಗಳಲ್ಲಿ ಒಂದಾಯಿತು. ಅದು ಒಂದು ಬೋರ್ಡನ್ನು ನಿಲ್ಲಿಸುವ ಮಟ್ಟಿಗೆ ಸೀಮಿತಗೊಂಡಿತು. ಆದರೆ ಈ ಬೋರ್ಡು ಹಾಕಿದ್ದು ಕೂಡ ತಕ್ಕ ಮಟ್ಟಿಗೆ ರಕ್ಷಣೆಯನ್ನು ಕೊಟ್ಟಂತೆ ಆಗಿದೆ. ಇಲ್ಲದಿದ್ದರೆ ಈ ಭಾಗದಲ್ಲಿ ಪ್ರಬಲವಾಗಿರುವ ಕಬ್ಬಿಣದ ಅದುರಿನ ಗಣಿಗಾರಿಕೆಯ ಮಾಫಿಯಾಕ್ಕೆ ಇರುವುದೂ ಬಲಿಯಾಗಿ ಹೋಗಿರುತ್ತಿತ್ತು.

ಈ ವಿಚುಂದ್ರೆ ಎನ್ನುವ ಊರು ದಕ್ಷಿಣ ಗೋವಾದ ತೀರಾ ಒಳಭಾಗದಲ್ಲಿ ಇದೆ. ಸುತ್ತ ಮುತ್ತ ಕಾಡು ಇದೆ. ಇಲ್ಲಿ ಬರಬೇಕೆಂದರೆ ಸ್ವಂತ ಗಾಡಿಯಿದ್ದರೆ ಮಾತ್ರ ಸಾಧ್ಯ. ಸರ್ಕಾರದ ವಾಹನಗಳಿಲ್ಲ. ಉಡುಪಿ ಕಡೆಯಿಂದ ಬರುವವರು (ಯಾರು ಬರುತ್ತಾರೆ ಎನ್ನುವುದು ಪ್ರಶ್ನೆ) ಕಾಣಕೋಣ ಎನ್ನುವ ನಗರದ ಬಳಿ, ಕಾಡಿಲಾಖೆಯ ಕಚೇರಿಯ ಗೇಟಿನ ಒಳಗಿಂದ ಪ್ರವೇಶಿಸಬಹುದು. ಅಲ್ಲಿಂದ ದಟ್ಟ ಕಾಡಿನ ಮಧ್ಯ ಗಾಡಿಯನ್ನು ಓಡಿಸುತ್ತಾ ಬರಬಹುದು. ಅದೃಷ್ಟವಿದ್ದರೆ ಕಾಡುಕೋಣ, ಜಿಂಕೆ, ನರಿ, ಪ್ಯಾಂಗೋಲಿನ್ನುಗಳಂತಹ ಪ್ರಾಣಿಗಳನ್ನು ನೋಡಬಹುದು.

ಹುಬ್ಬಳ್ಳಿಯ ಕಡೆಯಿಂದ ಬರುವವರಾದರೆ (ಬರುವವರಾದರೆ) ಪೋಂಡಾ ಎನ್ನುವ ಊರಿನ ಬಳಿ ಎಡಕ್ಕೆ ಹೆದ್ದಾರಿ ಹಿಡಿದು, ಗಣಿಗಾರಿಕೆಯ ಲಾರಿಗಳನ್ನು ಹಿಂದಿಕ್ಕೆ ಸಾವರ್ಡೆ. ಸಿರ್ವೋಯ್, ರಿವೋಣಾ ಎನ್ನುವ ಊರುಗಳ ಮೂಲಕ ಇಲ್ಲಿಗೆ ಬಂದು ಸೇರಬಹುದು.

ಈ ಊರಿಗೆ ಬರುವ ದಾರಿಗಳು ನಿಮಗೆ ಅತ್ಯಂತ ಸ್ಮರಣೀಯವಾದ ಅನುಭವವನ್ನು ಕೊಡುತ್ತದೆ. ಒಂದು ವೇಳೆ ಬೈಕ್ ಸವಾರಿ ಮಾಡಿಕೊಂಡು ಬರುವುದಾದರಂತೂ ನಿಜಕ್ಕೂ ಸುಂದರವಾದ ಅನುಭವ. ಹಾಗೆ ಮಾಡುವುದಾದಲ್ಲಿ, ಸುರಕ್ಷಿತವಾಗಿ ಚಾಲನೆ ನಿಮ್ಮದಾಗಿರಲಿ, ಒಂದು ಉತ್ತಮ ವೈದಿಕ ಕ್ಷೇತ್ರದ ದರ್ಶನ ನಿಮಗಾಗಲಿ ಎಂದು ಎಂದು ನಾನು ಹಾರೈಸುವೆ.

“ನ ಮಾಧವ ಸಮೋ ದೇವೋ, ನ ಚ ಮಧ್ವ ಸಮೋ ಗುರುಃ”

ದೇವಾಲಯದ ಲೊಕೇಶನ್ https://maps.app.goo.gl/vQe1GqD7h9HRBDvf8

ಚಿತ್ರ ಕೃಪೆ : ಗೋವಾ ಹೆರಿಟೇಜ್ ಆಕ್ಷನ್ ಗ್ರುಪ್.
ಶೋಭನಕೃನ್ನಾಮ ಸಂವತ್ಸರದ ಮಧ್ವನವರಾತ್ರಿಯ ಆರನೆಯ ದೀಪವು, ಶ್ರೀಮಧ್ವರೊಳಗಿನ ಶ್ರೀದುರ್ಗೆ ಪರಶುರಾಮರಿಗೆ, ಶ್ರೀಮಾಧವನಿಗೆ ಅರ್ಪಿತವಾಗಲಿ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.