ಇಂದಿನ ದರ್ಶನ : ಗುಡೆಬಲ್ಲೂರು ಸ್ವಯಂಭೂ ಶ್ರೀನಿವಾಸ
ನಮ್ಮ ಶ್ರೀನಿವಾಸರಾಯರಿಗೆ ಹುತ್ತ, ಗುಹೆಗಳೆಂದರೆ ಬಲು ಇಷ್ಟ :). ಅದೇ ನಮಗೆ ಅವನ ಗುಹೆ ಸುತ್ತ ಗುಡಿಯ ಕಟ್ಟುವುದಿಷ್ಟ!
ಇಲ್ಲೊಂದೂರಿದೆ. ಗುಡೇಬಲ್ಲೂರು ಎಂದು. ಇಲ್ಲಿ ಒಣಬಯಲಿನ ಮಧ್ಯದಲ್ಲಿರುವ ಬಂಡೆಗಳ ಮಧ್ಯ ಈ ವೃದ್ಧದಂಪತಿಗಳು ಮನೆಮಾಡಿಕೊಂಡಿದ್ದಾರೆ ನೋಡಿ.
ಈ ಗುಡೇಬಲ್ಲೂರು ರಣಬಿಸಿಲನ್ನು ಹೊದ್ದುಕೊಂಡು, ಕೃಷ್ಣಾನದಿಯ ದಂಡೆಗೆ ಮಲಗಿರುವ ಹಳ್ಳಿಯು. ರಾಯಚೂರಿನಿಂದ ಹೈದರಾಬಾದಿಗೆ ಹೋಗುವಾಗ ಶಕ್ತಿನಗರವನ್ನು ದಾಟುತ್ತೀರಲ್ಲ. ಇಲ್ಲಿಂದ ಒಂದು 6-7 ಕಿ.ಮೀ ಮುಂದೆ ಹೋದರೆ ತೆಲಂಗಾಣರಾಜ್ಯದ ವ್ಯಾಪ್ತಿಯಲ್ಲಿ ಈ ಊರಿದೆ. ಈ ಮಹಾದಾರಿಯ ಬಲಗಡೆಯಲ್ಲಿ ಸ್ವಯಂಭೂ ವೇಂಕಟೇಶ್ವರ ದೇವಾಲಯ ಎಂದು ಒಂದು ದೊಡ್ಡ ಕನ್ನಡದ್ದೇ ಕಮಾನು ಕಾಣುತ್ತದೆ. ಈ ಕಮಾನಿನ ಕೆಳಹಾಯ್ದು ಮುನ್ನಡೆದರೆ ಬಂಡೆಗಳ ಕೆಳಗೆ ಮನೆಮಾಡಿಕೊಂಡಿರುವ ಶ್ರೀಲಕ್ಷ್ಮೀವೇಂಕಟೇಶ್ವರ ದರ್ಶನವಾಗುತ್ತದೆ. ಬಂಡೆಯ ಮೇಲೆ, ಒಡಮೂಡಿದ್ದಾರೆ. ಒಡಮೂಡಿದ್ದು ತಮ್ಮ ಭಕ್ತನ ಕಷ್ಟನಿವಾರಣೆಗಾಗಿ.
ಮಾಂಡವ್ಯಋಷಿಗಳೊಮ್ಮೆ ತಿರುಮಲಕ್ಕೆ ಹೊರಟರು. ಮಾರ್ಗದಲ್ಲಿ ಕೃಷ್ಣವೇಣಿಯು ತುಂಬಿಹರಿಯುತ್ತಿದ್ದ ಕಾರಣ ನದಿಯನ್ನು ದಾಟಲು ಕಷ್ಟವಾಯಿತು. ವರ್ಷಗಳ ಕಾಲ ನದಿಯ ಪ್ರವಾಹ ಇಳಿಯಲೇ ಇಲ್ಲ. ಋಷಿಗಳು ಈ ಗುಹೆಯಲ್ಲಿ ಕುಳಿತು ತಪಸ್ಸು ಮಾಡತೊಡಗಿದರು. ಭಕ್ತನ ತಪನೆಯನ್ನು ನೋಡಿ ಶ್ರೀಲಕ್ಷ್ಮೀವೇಂಕಟೇಶ್ವರರು ಗುಹೆಯೊಳಗಿನ ಬಂಡೆಯ ಮೇಲೆ ಕಾಣಿಸಿಕೊಂಡು ಭಕ್ತನ ಮನಸ್ಸನ್ನು ಸಂತಸಪಡಿಸಿದರು. ಇದು ಇಲ್ಲಿನ ಸ್ಥಳ ಮಹಾತ್ಮ್ಯೆ.
ಮೇಲಿನದ್ದೆಲ್ಲ ಪ್ರಾಚೀನ ಮಾತಾಯಿತು. ಈಗ ಗುಹೆಯನ್ನೇ ಒಳಗೊಂಡ ಹಾಗೆ ಗುಡಿಯ ನಿರ್ಮಾಣವಾಗಿದೆ. ಗರ್ಭಗುಡಿಯ ಗೋಡೆಗೆ ಮೊಸಾಯಿಕ್ ಟೈಲುಗಳು ಬಂದಿವೆ. ಗುಡಿಯ ಸುತ್ತ ದೊಡ್ಡ ಮಂಟಪವೂ ಇದೆ. ಚೈತ್ರ ಮಾಸದ ಹುಣ್ಣಿಮೆಯಂದು ಜಾತ್ರೆಯು ನಡೆಯುತ್ತದೆ.
Be First to Comment