ಹರಿಹರ ಕ್ಷೇತ್ರ – ೧

ಕರ್ನಾಟಕರಾಜ್ಯದ ಭೂಪಟದಲ್ಲಿ ಸರಿಯಾಗಿ ಮಧ್ಯಭಾಗದಲ್ಲಿ ಇರುವ ಊರು ಇದು, ಹರಿಹರ. ತುಂಗಭದ್ರಾ ನದಿಯು ಇಲ್ಲಿ ಹರಿಯುತ್ತದೆ. ಪ್ರಾಚೀನವಾಗಿ ಇದಕ್ಕೆ ಗುಹಾರಣ್ಯ ಎಂಬ ಹೆಸರಿತ್ತು. ಗುಹ ಎಂಬ ಅಸುರನಿಂದಾಗಿ.
ಈ ಅಸುರನನ್ನು ಅವನು ಪಡೆದುಕೊಂಡ ವರದಿಂದಾಗಿ ಹರಿ ಮತ್ತು ಹರ ಇಬ್ಬರೂ ಒಂದೇ ಶರೀರವನ್ನಾಶ್ರಯಿಸಿ ಬಂದು ಸಂಹಾರ ಮಾಡಿದರು. ಸಾಯುವ ವೇಳೆಯಲ್ಲಿ ಅಸುರ ಮತ್ತೊಂದು ವರವನ್ನು ಪಡೆದುಕೊಂಡ. ತನ್ನೆದೆಯ ಮೇಲೆ ಈ ದಿವ್ಯಮೂರ್ತಿಯ ಕಾಲುಗಳು ಶಾಶ್ವತವಾಗಿರಬೇಕು ಎಂದು. ಅಸ್ತು ಎಂದ ಹರಿಹರರು ಅವನನ್ನು ತಮ್ಮ ಮೊಣಕಾಲು ನೆಲದೊಳಗೆ ಹೋಗುವಷ್ಟರ ಮಟ್ಟಿಗೆ ತುಳಿದು ಯಾವತ್ತೂ ಅವನ ಎದೆಯ ಮೇಲೆ ನಿಂತರು. ನಿಂತ ಜಾಗದಲ್ಲಿಯೇ ಶಿಲಾರೂಪರೂ ಆದರು. ಅಲ್ಲಿಂದ ಮುಂದೆ ಗುಹಾರಣ್ಯವು ಹರಿಹರಕ್ಷೇತ್ರವೆಂದೂ ಮತ್ತು ಶಂಕರನಾರಾಯಣ ಪುರವೆಂದೂ, ಹೆಸರಾಯಿತು.
ಹರಿಹರರ ಮೂರ್ತಿಯ ಬಲಭಾಗವು ಶಿವರೂಪ. ಎಡಭಾಗವು ವಿಷ್ಣುರೂಪ. ಹರನ ಭಾಗದಲ್ಲಿ ಅವನ ರುದ್ರಾಕ್ಷಿಯ ಕಿರೀಟ, ಕೈಯಲ್ಲಿ ತ್ರಿಶೂಲವುಂಟು. ಕೆಳಗೈ ಅಭಯ ಮುದ್ರೆಯಲ್ಲಿದೆ. ಹರಿಯ ಭಾಗದಲ್ಲಿ ಮೇಲುಗೈಯಲ್ಲಿ ಚಕ್ರ ಕೆಳಗೈಯಲ್ಲಿ ಶಂಖವಿದೆ.
ಮುಂದೆ 12ನೆಯ ಶತಮಾನದಲ್ಲಿ ಈ ಹರಿಹರೇಶ್ವರನಿಗೆ ಒಂದು ಸುಂದರವಾದ ದೇಗುಲವನ್ನು ನಿರ್ಮಿಸಲಾಯಿತು. ನಿರ್ಮಿಸಿದ್ದು ಹೊಯ್ಸಳರ ದಂಡನಾಯಕನಾದ ಪೊಲಾಳ್ವ ಎಂಬಾತ. ಮುಂದೆ ಸೋಮ ಎಂಬ ಮತ್ತೊಬ್ಬ ದಂಡನಾಯಕನು ದೇವಾಲಯವನ್ನು ಮತ್ತಷ್ಟು ವಿಸ್ತರಿಸಿದ. ಈ ದೇಗುಲವು ಅತ್ಯಂತ ಸುಂದರವಾಗಿದೆ. ಈ ಶಂಕರನಾರಾಯಣದೇವರಿಗೆ ಮುಂದೆ ಬಂದ ನೂರಾರು ರಾಜರು ತಮ್ಮ ಶಕ್ತ್ಯನುಸಾರವಾಗಿ ಕಾಣಿಕೆಗಳನ್ನು ಸಲ್ಲಿಸಿದ್ದಾರೆ. ಸುತ್ತಮುತ್ತಲಿರುವ ಹಲವು ನೂರು ಹಳ್ಳಿಗಳು ಈ ದೇವರ ಸೇವೆಗಾಗಿಯೇ ಮೀಸಲಾಗಿದ್ದವು. ಈ ಎಲ್ಲ ಶಾಸನಗಳು ದೇವಾಲಯದ ಆವರಣದಲ್ಲಿವೆ.
ಕೂಡಲೂರು ಎಂಬುದು ಮತ್ತೊಂದು ಹೆಸರಿದೆ ಈ ಊರಿಗೆ. ತುಂಗಾ-ಭದ್ರಾ ಎಂಬ ಕೂಡು ಹೆಸರಿನ ನದಿ ಹರಿಯುವುದಕ್ಕೂ. ಈ ನದಿಗೆ ಹರಿದ್ರಾ ಎನ್ನುವ ಮತ್ತೊಂದು ನದಿಯು ಇಲ್ಲಿ ಕೂಡುವುದಕ್ಕೂ ಮತ್ತು ಶಂಕರ-ನಾರಾಯಣ ಸನ್ನಿಧಾನಗಳು ಒಂದೇ ಪ್ರತಿಮೆಯನ್ನಾಶ್ರಯಿಸಿ ಕೂಡಿರುವುದಕ್ಕೂ ಕೂಡಲೂರು ಎಂದು ಕರೆದಿದ್ದಾರೆ.
ಶ್ರೀವಾದಿರಾಜಪ್ರಭುಗಳು ಮತ್ತೊಂದು ಸುಂದರವಾದ, ಗಹನಾರ್ಥದಿಂದ ಕೂಡಿದ ಹೆಸರನ್ನು ಇದಕ್ಕೆ ಕೊಟ್ಟಿದ್ದಾರೆ. ಮುರಹರಪುರ ಎಂಬುದಾಗಿ.
ಶ್ರೀವಾದಿರಾಜಪ್ರಭುಗಳು, ಶ್ರೀರಾಯರು, ಶ್ರೀವಿಜಯದಾಸರು, ಶ್ರೀಗೋಪಾಲದಾಸರು, ಶ್ರೀಸುಮತೀಂದ್ರ ತೀರ್ಥರಂತಹ ಮಹಾತ್ಮರೆಲ್ಲರೂ ಶ್ರೀಹರಿಹರೇಶ್ವರನ ದರ್ಶನವನ್ನು ಪಡೆದು ಸ್ತುತಿಮಾಡಿದ್ದಾರೆ.
ಶ್ರೀವಾದಿರಾಜರು ತೀರ್ಥಪ್ರಬಂಧದಲ್ಲಿ ಬಹುಸುಂದರವಾಗಿ “ಉಜ್ವಲ ಸುದರ್ಶನವನ್ನು ಹಿಡಿದು, ಲಕ್ಷ್ಮೀದೇವಿ ಜೊತೆಗೆ ವಿಹಾರ ಮಾಡುತ್ತಿರುವ ಮುರಾರಿಯೇ, ಶುಭ್ರಮೈಕಾಂತಿಯಿಂದ ಕೂಡಿ ದುಷ್ಟರಿಗೆ ಅಸಹನೀಯವಾದ ದಿವ್ಯ ತ್ರಿಶೂಲವನ್ನು ಹಿಡಿದು ಪಾರ್ವತಿಯೊಂದಿಗೆ ವಿಹಾರ ಮಾಡುತ್ತಿರುವ ತ್ರಿಪುರಾರಿಯೇ, ಜ್ಞಾನೋಪದೇಶಕನಾಗಿರುವ ಗುರವೇ ನಿಮ್ಮೀರ್ವರ ಪಾದಗಳಿಗೆ ನಮಿಸುವೆ ಎಂದು ಒಂದೇ ಶ್ಲೋಕದಲ್ಲಿ ಇಬ್ಬರ ಸ್ತೋತ್ರವನ್ನೂ ಮಾಡಿದ್ದಾರೆ1.
ಮತ್ತೊಂದು ಶ್ಲೋಕದಲ್ಲಿ, ಹರಿಯೇ, ಮೋಕ್ಷದಾಯಕವಾದ ನಿನ್ನ ಪಾದಗಳಲ್ಲಿ ಭಕ್ತಿಯನ್ನು ಕೊಡು. ಹರನೇ ಹರಿಭಕ್ತಿಸಾಧಕವಾದ ವಿರಕ್ತಿಯನ್ನು ನನಗೆ ಕೊಡು ಎಂಬುದಾಗಿ ಕೇಳಿಕೊಳ್ಳುತ್ತಾರೆ2.
ಇಲ್ಲಿ ಹರಿಯುವ ತುಂಗಭದ್ರೆಯು ಪಶ್ಚಿಮದಿಂದ ಥಟ್ಟನೆ ಉತ್ತರಕ್ಕೆ ತಿರುಗಿ ಹರಿಯುತ್ತಾಳೆ. ಈ ಉತ್ತರದ ತಿರುವಿನಲ್ಲಿ ಗಂಗೆಯ ವಿಶೇಷ ಸನ್ನಿಧಿಯಿದೆಯೆಂದು ನಮಗೆ ಪುರಾಣಗಳು ತಿಳಿಸುತ್ತವೆ. ಈ ಉತ್ತರವಾಹಿನಿಯಲಿ ಬ್ರಹ್ಮತೀರ್ಥ, ಭಾರ್ಗವತೀರ್ಥ, ನೃಸಿಂಹತೀರ್ಥ, ವಹ್ನಿತೀರ್ಥ, ಗಾಲವತೀರ್ಥ, ಪಿಶಾಚಮೋಚನತೀರ್ಥ, ರುದ್ರಪಾದತೀರ್ಥ, ಚಕ್ರತೀರ್ಥ, ಋಣಮೋಚನತೀರ್ಥ ಮತ್ತು ವಟಚ್ಛಾಯಾತೀರ್ಥ ಮತ್ತು ಪಾಪನಾಶನತೀರ್ಥ ಎಂಬ ಹನ್ನೊಂದು ತೀರ್ಥಗಳಿವೆ. ಹೆಸರುಗಳೇ ಈ ತೀರ್ಥಸ್ನಾನದ ಫಲಗಳನ್ನು ತಿಳಿಸುತ್ತವೆ.
ಈ ತುಂಗಭದ್ರೆಯೇ ನಮ್ಮ ಕನ್ನಡನಾಡಿನ ಎರಡು ಸಾಂಸ್ಕೃತಿಕ ವಲಯಗಳನ್ನು ಪ್ರತ್ಯೇಕಿಸುವ ಭೌಗೋಳಿಕೆ ಎಲ್ಲೆಯಾಗಿದೆ. ಉತ್ತರವಾಹಿನಿಯ ಎಡಕ್ಕಿರುವುದೆಲ್ಲ ಹೊಳೆಯಾಚೆಯ ಸೀಮೆ, ಬಲಕ್ಕಿರುವುದೂ ಹೊಳೆಯಾಚೆಯೆ ಸೀಮೆಯೇ! ಎಡಗಡೆಯದ್ದು ಧಾರವಾಡದ ಸೀಮೆ, ಬಲಗಡೆಯದ್ದು ಮೈಸೂರು ಸೀಮೆ.
1. ಮುರಹರಪುರ ಲಕ್ಷ್ಮೀಪಾರ್ವತೀಕೇಲಿಲೋಲ
ಸ್ಫುರದಸಿತಸಿಂಗಾಸಹ್ಯಚಕ್ರತ್ರಿಶೂಲ
ಪರತರಗುರುಮೂರ್ತೇ ಪಾವನಾಪಾರಕೀರ್ತೇ
ಹರಿಹರ ತವ ಪಾದಂಭೋಜಯುಗ್ಮಂ ನತೋಸ್ಮಿ |
2. ಹರೇ ಭವಹರೇ ತೇಂಽಘ್ರೌ ಭಕ್ತಿರ್ಮುಕ್ತಿಪ್ರದಾಸ್ತು ಮೇ
ವೈರಾಗ್ಯಭಾಗ್ಯಂ ವಿತರ ಹರ ಗೌರೀಮನೋಹರ ||
ಶ್ರೀಶೋಭನಕೃನ್ನಾಮದ ಪುರುಷೋತ್ತಮ ಮಾಸದ ಈ ಮೊದಲ ತುಳಸೀದಳವು ಶ್ರೀಹರಿಗರ್ಪಿತವಾಗಲಿ

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.