ಶ್ರೀರಾಘವೇಂದ್ರತೀರ್ಥಗುರ್ವಂತರ್ಗತಭಾರತೀರಮಣಮುಖ್ಯಪ್ರಾಣಾಂತರ್ಗತಶ್ರೀವೇದವ್ಯಾಸಾಯ ನಮಃ
2015ನೇ ವರ್ಷದ ಚೈತ್ರ ಮಾಸದ ಪೌರ್ಣಮಿಯ ರಾತ್ರಿ ಅದು. ಸಮಯ ಸುಮಾರು 10:30 – 11:00 ಆಗಿದ್ದೀತು. ಬೆಳಗಿನಿಂದ ಇದ್ದ ಕಲರವ, ಚಿಲಿಪಿಲಿ, ಮಂತ್ರಘೋಷ ಎಲ್ಲವೂ ನಿದ್ರಿಸಿ ಗುರುಕುಲದಲ್ಲಿ ಪ್ರಶಾಂತಿಯೇ ಆಡಳಿತ ನಡೆಸುತ್ತಾ ಇತ್ತು. ಮುಂಜಾನೆ ನಡೆದ ನೂರೆಂಟು ಹೋಮಗಳ ಧೂಮದ ಅದೃಶ್ಯ ಅಲೆಗಳು ಘಮವನ್ನು ಇನ್ನೂ ಸಾಗಿಸುತ್ತಲೇ ಇದ್ದವು. ಕ್ಷೀಣವಾಗಿ, ಆದರೆ ಇಡೀ ಗುರುಕುಲದ ಉದ್ದಗಲಕ್ಕೆ ವ್ಯಾಪಿಸುವಂತೆ ಕೀಟವೊಂದು ಕ್ರೀತ್ಕಾರ ನಡೆಸಿತ್ತು. ಇಡೀ ಗುರುಕುಲದಲ್ಲಿ ಉರಿಯುತ್ತಿದ್ದ ದೀಪಗಳು ಮೂರೇ ಮೂರು. ಒಂದು ಶ್ರೀವೇದವ್ಯಾಸರ ಸನ್ನಿಧಿಯಲ್ಲಿ. ಇನ್ನೊಂದು ಕುಲಪತಿಗಳ ಕೋಣೆಯಲ್ಲಿ. ಮಗದೊಂದು ಗುರುಕುಲದ ಕೊಟ್ಟಾರಿಗಳ ಕೋಣೆಯಲ್ಲಿ.
ಕೊಟ್ಟಾರಿಗಳ ಕೋಣೆಯಲ್ಲಿ ಸಹಾಯಕ್ಕಾಗಿ ಬಂದ ಇನ್ನೂ ಇಬ್ಬರು ವಿದ್ಯಾರ್ಥಿಗಳು ಕುಳಿತಿದ್ದರು. ಅವರೊಂದಿಗೆ ಅಗತ್ಯವಿದ್ದಷ್ಟೇ ಮಾತನಾಡುತ್ತಾ, ಉಳಿದಿದ್ದ ಎಲ್ಲ ಸಿಹಿ ತಿಂಡಿಗಳನ್ನು ಜೋಪಾನವಾಗಿ ಒಂದೆಡೆ ಸುರಕ್ಷಿತವಾಗಿ ಜೋಡಿಸಿದ ಕ್ರಮವನ್ನು ನೋಡಿ ತೃಪ್ತಿಗೊಂಡ ಕೊಟ್ಟಾರಿಗಳು ತಮ್ಮ ಕಟ್ಟಿಗೆಯ ಕುರ್ಚಿಗೆ ಬೆನ್ನು ಆನಿಸಿಕೊಂಡು ಕುಳಿತುಕೊಂಡರು. ಕುಲಪತಿಗಳು ಹೇಳಿದ ರೀತಿಯಲ್ಲೇ ಹನುಮನ ಹುಟ್ಟುಹಬ್ಬವನ್ನು ನಡೆಸಿದ ಸಮಾಧಾನ ಅವರ ಮುಖದಲ್ಲಿ ಕಾಣುತ್ತ ಇತ್ತು. ಕುಲಪತಿಗಳ ತೃಪ್ತಿಯೇ ಎಲ್ಲಕ್ಕಿಂತಲೂ ಮುಖ್ಯವಲ್ಲವೇ?
ನೀಲ ಗಗನದೊಳು ಮೇಘಗಳಾ…. ಎಂಬ ಪದ್ಯದ ಸಾಲನ್ನು ತಮ್ಮಲ್ಲಿಯೇ ಗುಣುಗುಣಿಸುತ್ತಾ, ತಮ್ಮ ಮುಂದೆ ಇದ್ದ ಖಾರವಾದ ವೀಳ್ಯದೆಲೆಯ ತೊಟ್ಟನ್ನು ಕಿತ್ತಿ, ಸುಣ್ಣವನ್ನು ಹಚ್ಚಿ, ಅದನ್ನು ಸುತ್ತಿ ಬಾಯೊಳಗೆ ಇನ್ನೇನು ಹಾಕಿಕೊಳ್ಳಬೇಕು. ಅಷ್ಟರಲ್ಲಿ ಕುಲಪತಿಗಳ ಕೋಣೆಯ ದೀಪವಾರಿದ್ದನ್ನು ಅವರು ಗಮನಿಸಿದರು. ಹುಬ್ಬು ಕಿರಿದುಗೊಳಿಸಿ “ಇದೇನು ಇಷ್ಟು ಬೇಗ” ಎಂದು ಕ್ಷಣಕಾಲ ಎಲೆಯಡಿಕೆಯನ್ನು ಬಾಯಿಗೆ ಹಾಕದೆ ಹಾಗೆಯೇ ಸ್ಥಬ್ದರಾದರು. ಆ ಸ್ತಬ್ಧತೆಯಲ್ಲಿ “ಕುಲಪತಿಗಳಿಗೆ ಏನಾದರೂ ಬೇಕಿದೆಯೇನೋ” ಎಂಬ ಅಭಿಪ್ರಾಯವಿತ್ತು.
ಓರೆಗಣ್ಣಲ್ಲಿ ಬಾಗಿಲತ್ತ ನೋಡುತ್ತಿದ್ದಂತೆ ಬಾಗಿಲ ಅಸ್ಪಷ್ಟವಾದ ನೆರಳೊಂದು ಕಾಣಿಸಿತು. ಆ ನೆರಳನ್ನು ನೋಡಿಯೇ ಮೂವರೂ ಎದ್ದು ನಿಂತರು. ಬಂದವರು ಕುಲಪತಿಗಳೇ ಆಗಿದ್ದು ಕೊಟ್ಟಾರಿಗಳ ಮುಖದ ಮೇಲೆ ಸೂಕ್ಷ್ಮವಾದ ಹೆಮ್ಮೆಯ ಒಂದು ಅಲೆಯನ್ನು ಮೂಡಿಸಿತು. “ಏನ್ ಸ್ವಾಮಿ?” ಎಂದು ಕೇಳಿದರು.
ಚುಟುಕು ಮಾತುಕತೆ ಮೊದಲಾಯ್ತು
ಕು : “ಹರ್..ಶ, ಎಲ್ಲ ಚೆನ್ನಾಗಿ ಆಯ್ತಾ”
ಕೊ: ಆಯ್ತು ಸ್ವಾಮಿ, ಏನೂ ತೊಂದರೆ ಆಗಿಲ್ಲ. ಯಾವುದು ಕೂಡ ಕಡಿಮೆ ಆಗಿಲ್ಲಕು : ಸಿಹಿತಿಂಡಿ ಕಟ್ಟಿಕೊಡಲು ಬಾಕ್ಸ್ ಕಡಿಮೆ ಆಯ್ತು ಅಂತಾ ಇದ್ರಲ್ಲ?
ಕೊ : ಅದು ಅಡ್ಜಸ್ಟ್ ಆಯ್ತು ಸ್ವಾಮಿಕು. ಎಲ್ಲ ವಿದ್ಯಾರ್ಥಿಗಳಿಗೂ ಸಿಹಿ ತಿಂಡಿ ಸಿಕ್ಕಿತಾ?
ಕೊ : ( ಆ ಇಬ್ಬರು ವಿದ್ಯಾರ್ಥಿಗಳತ್ತ ನೋಡಿ) ಹಾಂ ಸ್ವಾಮಿ ಎಲ್ಲರಿಗೂ ಬಾಕ್ಸ್ ಕೂಡ ಕೊಟ್ಟಿದ್ದೇನೆ. ಊರಿಗೆ ಕಳಿಸಬಹುದು. (ವಿದ್ಯಾರ್ಥಿಗಳು ಅರಳಿದ ತಮ್ಮ ಕಣ್ಣುಗಳಿಂದಲೇ ಹೌದು ಎಂದು ಅನುಮೋದಿಸಿದರು)ಕು. ಊರಿಗೆ ಕಳಿಸೋದಾ? ಅಷ್ಟು ದಿನ ಇರುತ್ತವೇನು ಈ ಸ್ವೀಟ್ಸ್?
ಕೊ. ತುಪ್ಪದಲ್ಲಿ ಮಾಡಿದ ಸ್ವೀಟ್ಸ್ ಮಾತ್ರ ಊರಿಗೆ ಕಳಿಸಲು. ಬಾಕಿ ಎಲ್ಲ ಇಲ್ಲಿಯೇ ತಿನ್ನಲು. (ಪೇರಿಸಿಟ್ಟ ಟ್ರೇಗಳತ್ತ ಕೈತೋರಿಸುತ್ತಾ)ಕು : ಸರೋವರದ ಹತ್ತಿರ ಏನೂ ಹೆಚ್ಚು ಕಡಿಮೆ ಆಗಿಲ್ಲ ತಾನೆ?
ಕೊ: ಇಲ್ಲ ಸ್ವಾಮಿ. ಹಿರಿಯ ವಿದ್ಯಾರ್ಥಿಗಳು ಎಲ್ಲವನ್ನೂ ಸರಿಯಾಗಿ ನೋಡಿಕೊಂಡರು.
ಕುಲಪತಿಗಳು ಸಮಾಧಾನವನ್ನು ವ್ಯಕ್ತಪಡಿಸಿ, ವಿದ್ಯಾರ್ಥಿಗಳತ್ತ ಮುಗುಳ್ನಕ್ಕು ಹೊರಟರು.
ಈ ಮೂವರೂ ಕುಳಿತುಕೊಂಡು ಗುರುಗಳ ಪ್ರೇಮದ ಬಗ್ಗೆ ಮಾತನಾಡಲು ಆರಂಭಿಸಿದರು. 8-10 ನಿಮಿಷಗಳಾಗಿದ್ದವು.
“ಒಂದು ಕೆಲಸ ಆಗಬೇಕಿತ್ತಲ್ಲ ಹರ್…ಶ…!” ಎನ್ನುತ್ತಾ ಕುಲಪತಿಗಳು ಮತ್ತೆ ಒಳ ಬಂದರು. ಎದ್ದು ನಿಲ್ಲುತ್ತಾ “ಏನು ಸ್ವಾಮಿ” ಎಂದು ಕೊಟ್ಟಾರಿಗಳು ಕೇಳಿದರು. “ಹೋಳಿಗೆಗಳು ಏನಾದರೂ ಉಳಿದಿವೆಯಾ” ಎಂದು ಕೇಳಿದರು ಕುಲಪತಿಗಳು. “ಹಾಂ ಸ್ವಾಮಿ, ಉಳಿದಿವೆ. ನಾಳೆ ಎಲ್ಲ ವಿದ್ಯಾರ್ಥಿಗಳಿಗೂ ಸಾಕಾಗುವಷ್ಟು ಉಳಿದಿವೆ” ಎಂದು ಕೊಟ್ಟಾರಿಗಳು ಉತ್ತರಿಸಿದರು. “ಆಂ ಹಾಗಿದ್ದರೆ ಸರಿ” ಎಂದು ಕುಲಪತಿಗಳು ಹೇಳಿ, ಹೊರಡಲು ಅನುವಾದರು. ಆದರೆ ಅವರ ಮನಸ್ಸಲ್ಲಿ ಏನೋ ಉಳಿದಿದೆ ಎಂದು ಗ್ರಹಿಸಿದ ಕೊಟ್ಟಾರಿಗಳು “ಏನಾಗಬೇಕಿತ್ತು ಸ್ವಾಮಿ?” ಎಂದು ತಾವಾಗಿಯೇ ಕೇಳಿದರು. ಆಗಲೂ ಕೂಡ ದಾಕ್ಷಿಣ್ಯದ ಧ್ವನಿಯಲ್ಲಿಯೇ ಕುಲಪತಿಗಳು ಹೇಳಿದರು. “ಏನಿಲ್ಲಾ… ಎರಡು ಹೋಳಿಗೆ ಸಿಗಬಹುದೇ?, ಅಮ್ಮನಿಗೆ ಹೋಳಿಗೆ ಅಂದರೆ ಇಷ್ಟ. ಅವರಿಗೆ ಕಳಿಸಬೇಕಿತ್ತು” ಕೊಟ್ಟಾರಿಗಳು “ಅಯ್ಯೋ ಸ್ವಾಮಿ, ಎಲ್ಲವೂ ನಿಮ್ಮದೇ ಇಲ್ಲಿ. ನೀವು ಅಪ್ಪಣೆ ಮಾಡಿ ಸಾಕು. ಮಾಡ್ತೀನಿ. ಈಗಲೇ ಹೋಗಿ ಕೊಟ್ಟು ಬರ್ತೀನಿ” ಎಂದರು. “ಬೇಡ ಬೇಡ, ಈಗ ತುಂಬಾ ಟೈಮಾಗಿದೆ. ನಾಳೆ ಬೆಳಿಗ್ಗೆ ಅವರಿಗೆ ಮುಟ್ಟಿಸಿದರೆ ಸಾಕು. ಆದರೆ ಹುಡುಗರಿಗೆ ಕಡಿಮೆ ಆಗಬಾರದು ಮಾರಾಯಾ!. ಆಲೋಚನೆ ಮಾಡು. ಏನೂ ತೊಂದರೆ ಇಲ್ಲ ಎಂದಲ್ಲಿ ಮಾತ್ರ ಕೊಡು. ಎರಡೇ ಎರಡು ಸಾಕು” ಎಂದು ಹಿರಿಯರು ಹೇಳಿದರು. ” ಚಿಂತೆ ಇಲ್ಲ ಸ್ವಾಮಿ, ಕಡಿಮೆ ಆದರೆ ಹೊಸದಾಗಿ ಮಾಡಿಸಿಯಾದರೂ ಕೊಟ್ಟು ಬರುತ್ತೇನೆ” ಎಂದು ಕೊಟ್ಟಾರಿಗಳು ಹೇಳಿದರು. “ಬೇಡ ಬೇಡ, ಮತ್ತೆ ಹೊಸದಾಗಿ ಮಾಡುವುದಿದ್ದರೆ ಬೇಡ, ಮಾಡಿರುವುದರಲ್ಲಿ, ನಾಳೆ ಹುಡುಗರು ತಿಂದು ಆದ ನಂತರ ಉಳಿದರೆ ಮಾತ್ರ ಕೊಡು. ಮಕ್ಕಳಿಗೆ ಕಡಿಮೆ ಆಗಬಾರದು ಯಾವ ಕಾರಣಕ್ಕೂ” “ಕೊಟ್ಟರೂ ಸಹ ಎರಡೇ ಸಾಕು. ನೋಡಿದವರು ತಪ್ಪು ತಿಳಿಯುವುದು ಬೇಡ” ಎಂದು ಕುಲಪತಿಗಳು ಮತ್ತೆ ಹೇಳಿದರು. “ಹಾಗೇನಿಲ್ಲ ಸ್ವಾಮಿ. ಎರಡು ಹೋಳಿಗೆಗೆ ಯಾಕಿಷ್ಟು ಚಿಂತೆ ಮಾಡುತ್ತೀರಿ? ನೀವಿನ್ನು ವಿಶ್ರಾಂತಿ ಪಡೆಯಿರಿ. ನಾಳೆ ಅಮ್ಮನಿಗೆ ಹೋಳಿಗೆ ಮುಟ್ಟಿಸುವ ಜವಾಬ್ದಾರಿ ನನ್ನದು” ಎಂದು ನಸುನಗುತ್ತಾ ಗುರುಗಳ ಮೇಲೆ ಪ್ರೇಮದಿಂದಲೇ ಕೋಪಿಸಿಕೊಂಡು ಅವರನ್ನು ವಿಶ್ರಾಂತಿಗೆ ಕಳಿಸಿಕೊಟ್ಟರು.
ಮಾರನೆಯ ದಿನ ಬೆಳಿಗ್ಗೆ ಬಾಳೆಯ ನಾರಿನಲ್ಲಿ ಸುತ್ತಿದ ನಾಲ್ಕಾರು ಹೋಳಿಗೆಗಳು ಶಿಬರೂರಿನ ತಂತ್ರಿಗಳ ಅಡುಗೆ ಕೋಣೆಯನ್ನು ತಲುಪಿದವು. ಕೊಟ್ಟಾರಿಗಳಿಗೂ ಏನೋ ಸಂತೋಷ, ಈ ಕೆಲಸ ಮಾಡಲು. ಆ ದಿನ ಮಧ್ಯಾಹ್ನ ವೈಶ್ವಾನರನ ಆರಾಧನೆ ಮುಗಿದ ನಂತರ ಕುಲಪತಿಗಳಿಗೆ ಈ ವಿಷಯ ತಿಳಿದು ಹೃದಯ ಅರಳಿತು.
ಇದು ಸುಮ್ಮನೆ ಕಲ್ಪನೆಯಲ್ಲಿ ಹೆಣೆದ ಕಥೆಯಲ್ಲ. ಇದು ಸತ್ಯವಾದ ಘಟನೆ. ಅಂದು ಪ್ರತ್ಯಕ್ಷವಾಗಿ ನೋಡಿದ ಸನ್ನಿವೇಶವನ್ನು ಯಥಾವತ್ತಾಗಿಯೇ, ಆದರೆ ನನ್ನ ಶಬ್ದಗಳಲ್ಲಿ ನಿರೂಪಿಸಿದ್ದೇನೆ. ಇದು ಬರೆಯುವ ಚಪಲವಲ್ಲ. ಕುಲಪತಿಗಳ ಹೃದ್ಗತ ವಿಚಾರ ಮತ್ತು ಅಂದಿನ ಸನ್ನಿವೇಶವು ಓದುಗನ ಹೃದಯವನ್ನು ಸಂಪೂರ್ಣವಾಗಿ ಮುಟ್ಟಲಿ ಎಂಬ ಉದ್ದೇಶವಷ್ಟೇ ನನ್ನ ಶಬ್ದಗಳ ಹಿಂದೆ ಇರುವುದು.
ಹರ್….ಶ ಎಂದು ಆತ್ಮೀಯವಾಗಿ ಕರೆಸಿಕೊಂಡ ಭಾಗ್ಯವಂತ ಯಾರೆಂದರೆ, ಎಲ್ಲರಿಗೂ ಸುಪರಿಚಿತರಾದ ಹರೀಶ ಕೊಟ್ಟಾರಿಗಳು. ಆ ಗುರುಕುಲ ಪಲಿಮಾರಿನ ಶ್ರೀಯೋಗದೀಪಿಕಾವಿದ್ಯಾಪೀಠ. ಕುಲಪತಿಗಳು ಬೇರಾರೂ ಅಲ್ಲ. 24×7 ಹಸನ್ಮುಖಿಗಳಾದ ನಮ್ಮ ಪ್ರೀತಿಯ ಶ್ರೀಶ್ರೀವಿದ್ಯಾಧೀಶ.. ಅಲ್ಲಲ್ಲ.. ಕರುಣಾಧೀಶ…. ತೀರ್ಥ ಶ್ರೀಪಾದಂಗಳವರು.
ಘಟನೆ ಏನೋ ಮೇಲ್ನೋಟಕ್ಕೆ ಬಹಳ ಚಿಕ್ಕದೆನಿಸಬಹುದು. ಕೆಲವರಿಗೆ. “ಏನಿದು? ತಾವು ಅಷ್ಟು ಬಿಜಿಯಾಗಿದ್ದರೂ ಸಹ ಅಮ್ಮನಿಗೆ ಹೋಳಿಗೆ ಕಳಿಸಿಕೊಟ್ಟರು ಸ್ವಾಮಿಗಳು ಎಂದಿದ್ದರೂ ಮುಗಿಯುತ್ತಿತ್ತಲ್ಲ” ಎಂದೂ ಕೆಲವರು ಮೂಗು ಮುರಿಯಬಹುದು. ಆದರೆ ಗುರುಗಳ ಕಾರ್ಯಬಾಹುಳ್ಯ, ಅದರ ಆಳ, ವ್ಯಾಪ್ತಿ, ಎಂದೂ ತಪ್ಪದ ಅವರ ಪಾಠ ಪ್ರವಚನಗಳ ಸರಪಳಿ, ಅವರ ತಲೆಯ ಮೇಲೆ ಇರುವ ಜವಾಬ್ದಾರಿಯ ಹಿನ್ನೆಲೆ ಮತ್ತು ಈ ಎಲ್ಲಕ್ಕಿಂತ ಹೆಚ್ಚಾಗಿ ದಾಕ್ಷಿಣ್ಯತುಂಬಿದ ಅವರ ಸ್ವಭಾವ; ಇವುಗಳ ಅರಿವಿದ್ದವರಿಗೆ ಈ ಹೋಳಿಗೆಯ ಪ್ರಸಂಗದ ಹಿಂದೆ ಇರುವ ಮಹತ್ವ ಅರ್ಥವಾಗುತ್ತದೆ.
ಹರೀಶಣ್ಣರು ಹೇಳಿದಂತೆ ಮಠದಲ್ಲಿ ಇರುವ ಎಲ್ಲ ವಸ್ತುಗಳ ಮೇಲೆ ಶ್ರೀಗಳವರದ್ದೇ ಅಂತಿಮ ಅಧಿಕಾರವಿರುತ್ತದೆ. ಆದರೂ ಗುರುಗಳು ಮಠದ ಸಂಪನ್ಮೂಲವನ್ನು ವ್ಯಕ್ತಿಗತ ಸಂತೋಷಕ್ಕೆ ಬಳಸಿದ್ದನ್ನು ಕಂಡವರಿಲ್ಲ. ಸಂನ್ಯಾಸಧರ್ಮ ಮತ್ತು ಪೀಠಾಧಿಪತಿಯೋರ್ವರ ವಾಸ್ತವಪ್ರಜ್ಞೆ ಈ ಎರಡೂ ಗುಣಗಳು ಗುರುಗಳ ಅಣು ಅಣುವಿನಲ್ಲಿಯೂ ವ್ಯಾಪಿಸಿರುವುದೇ ಅದಕ್ಕೆ ಕಾರಣ. ತಾವು ಪೀಠಾಧಿಪತಿಗಳೇ ಆಗಿರಬಹುದು. ಆದರೆ ಮಠದ ವಸ್ತುವೆಂದರೆ ಅದು ಸಮಾಜದ ವಸ್ತು ಎನ್ನುವ ಎಚ್ಚರ ಅವರಲ್ಲಿ ಎಂದಿಗೂ ಇದ್ದೇ ಇದೆ. ಏನೆಲ್ಲವನ್ನು ಬಿಟ್ಟರೂ ಸಂನ್ಯಾಸಿಗೆ ತಾಯಿಯನ್ನು ಬಿಡಲಿಕ್ಕಿಲ್ಲ. ಅಮ್ಮನ ಯೋಗಕ್ಷೇಮವನ್ನು ಸಂನ್ಯಾಸದ ನಂತರವೂ ನೋಡತಕ್ಕದ್ದು ಎಂಬ ನಿಯಮವು ಎಲ್ಲರಿಗೂ ಪರಿಚಯವಿದೆ. ವಾಸ್ತವ ಹೀಗೆ ಇರುವಾಗ ಮತ್ತು ಎಲ್ಲರ ಯೋಗಕ್ಷೇಮದ ಬಗ್ಗೆಯೂ ಚಿಂತಿಸುವ ಶ್ರೀಕರುಣಾಧೀಶತೀರ್ಥರು ತಮ್ಮ ತಾಯಿಗೆ ಎರಡು ಹೋಳಿಗೆಯನ್ನು ಕೊಟ್ಟರೆ ಜನ ಯಾಕೆ ತಪ್ಪು ತಿಳಿದಾರು? ಅಲ್ಲವೇ? ಹೋಳಿಗೆಗಳನ್ನು ಕಳಿಸುವುದಿರಲಿ, “ನಮ್ಮ ಅಮ್ಮನಿಗೆ ಬೇಕು” ಎಂದು ದೊಡ್ಡ ಔತಣವನ್ನೇ ಏರ್ಪಾಡು ಮಾಡಿದರೂ ಯಾರೂ ಏನೂ ತಪ್ಪು ತಿಳಿಯುವುದಿಲ್ಲ. ಅಮ್ಮನಿಗೆ ಕಾರು ಕೊಡಿಸಿದರೂ ಯಾರೂ ಆಡಿಕೊಳ್ಳುವುದಿಲ್ಲ. ಹೀಗಿದ್ದಾಗ್ಯೂ ಅವರು ಹೋಳಿಗೆಯಂತಹ ಪುಟ್ಟ ವಿಷಯಕ್ಕೂ ಅಷ್ಟೊಂದು ಹಿಂಜರಿದದ್ದಕ್ಕೆ ಅವರಲ್ಲಿರುವ ಆರ್ಜವವೇ ಕಾರಣ.
ಕಲಿಗಾಲದಲ್ಲಿ ಇಂತಹ ಚೇತನರೇ ಸಂತ-ಸ ರು. ಇತರರಲ್ಲ.
ಹರೇ ಶ್ರೀನಿವಾಸ !!! ರೊಮಾಂಚನಕಾರಿ ಘಟನೆಗೊಂದು ಅದ್ಭುತ ಲೇಖನ. ಗುರುಗಳ ಕಾಲದಲ್ಲಿ ಇರುವ ನಾವೇ ಧನ್ಯರು. ಗುರೋ ರಾಘವೇಂದ್ರ !!!