ಶ್ರೀರಾಯರ ಮಹಿಮಾಕ್ಷೇತ್ರ – ಕಿರೀಟಗಿರಿ – ಇತಿವೃತ್ತಾಂತ

ಶ್ರೀರಾಘವೇಂದ್ರ ಮಹಾಪ್ರಭುಗಳ ಚರಿತ್ರೆಯಲ್ಲಿ ಬಹುಪ್ರಸಿದ್ಧವಾದ ಒಂದು ಘಟನೆ, ಕಿರೀಟಗಿರಿಯಲ್ಲಿ ಸೀಕರಣೆಯಲ್ಲಿ ಬಿದ್ದುಬಿಟ್ಟ ಬಾಲಕನ ಜೀವವನ್ನು ಕರುಣಿಸಿದ್ದು. ಎಲ್ಲರಿಗೂ ಗೊತ್ತಿರುವ ಚರಿತೆ.

ಕಿರೀಟಗಿರಿಯ ದೇಸಾಯಿಯ ಮನೆಯಲ್ಲಿ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರು ಶ್ರೀಮೂಲರಾಮದೇವರ ಪೂಜೆಯನ್ನು ನಡೆಸಿ, ಭಿಕ್ಷೆಸ್ವೀಕರಿಸುವ ಏರ್ಪಾಟಾಗಿತ್ತು. ಬಂದ ಜನರಿಗೆಲ್ಲ ಮಾವಿನ ರಸಾಯನವನ್ನು (ಸೀಕರಣೆ) ಸಿದ್ಧಪಡಿಸಿದ್ದರು. ಸಿದ್ಧಪಡಿಸಿದ್ದ ಪ್ರಮಾಣವೇ ದೊಡ್ಡ ಕೊಳಗದಷ್ಟು. ಆ ಕೊಳಗದ ಗಾತ್ರವೇ ಮನುಷ್ಯನೊಬ್ಬ ಇಳಿದು, ಮುಳುಗುವಷ್ಟು! ಸೀಕರಣೆಯೇ ಇಷ್ಟು ಪ್ರಮಾಣದಲ್ಲಿ ತಯಾರಾಗಬೇಕೆಂದರೆ ಉಳಿದ ಪದಾರ್ಥಗಳ ಪ್ರಮಾಣವೆಷ್ಟಿದ್ದೀತು? ಅಂದು ಪ್ರಸಾದಕ್ಕೆಂದು ಬಂದ ಭಕ್ತರ ಸಂಖ್ಯೆ ಅದೆಷ್ಟಿದ್ದೀತು? ಇಷ್ಟೆಲ್ಲ ಜನರಿಗೆ ಔತಣವನ್ನು ಮಾಡಿಸುತ್ತಿರುವ ದೇಸಾಯರ ಸಿರಿವಂತಿಕೆ ಅದೆಷ್ಟು ದೊಡ್ಡದಿದ್ದೀತು! ಅಂತೂ ಅಗಾಧತೆಗೆ ಒಂದು ನಿದರ್ಶನ ಆ ಒಂದು ಕಾರ್ಯಕ್ರಮ. ಆದರೆ ಈ ಎಲ್ಲ ಅಗಾಧತೆಗೆ ಮಿಕ್ಕಿ ನಿಂತಿದ್ದು ದೇಸಾಯರ ಪುಣ್ಯ. ಅವರ ಗುರುಹಿರಿಯರೆಲ್ಲರ ಪುಣ್ಯವನ್ನು ಒಟ್ಟಿಗೆ ಸೇರಿಸಿಕೊಂಡೇ ಬಂದಿದ್ದರೇನೋ ಆ ದೇಸಾಯರು. ಅಷ್ಟಿಲ್ಲದೆ ಶ್ರೀರಾಯರಂತಹ ಕಾಮಧೇನುವಿಗೆ ಭಿಕ್ಷೆಸಮರ್ಪಣೆ ಮಾಡುವಷ್ಟು ಮಹದವಕಾಶ ದೊರಕೀತೇನು? ಯತಿಯೊಬ್ಬನುಣವಲ್ಲಿ ಮೂರ್ಜಗವೂ ಉಣುವುದು ಎಂಬ ಮಾತೇ ಇದೆ. ಅಂತಹುದರಲ್ಲಿ ರಾಯರಂತಹ ಮಹಾಮಹಿಮರಿಗೇನೇ ಭಿಕ್ಷೆಯನ್ನು ಸಮರ್ಪಿಸುವ ಅವಕಾಶವನ್ನು ಪಡೆದ ಮಹಾನುಭಾವರು ಆ ದೇಸಾಯರು. ಸಾವಿರಾರು ಜನಕೆ ಶ್ರೀರಾಮದೇವರಿಗೆ ನಿವೇದಿತ ಪ್ರಸಾದದ ದಾನವನ್ನು ಧಾರಾಳವಾಗಿ ಮಾಡಲು ಸಂಕಲ್ಪಿಸಿದ್ದರು. ಅದರಂತೆ ವ್ಯವಸ್ಥೆಯನ್ನು ಮಾಡಿದ್ದರು ಕೂಡ.

ಶ್ರೀಹರಿಯ ವ್ಯಾಪಾರವೆಂದರೇನೇ ಹೀಗೆ. ಮೂರ್ನಾಲ್ಕು ವಿಭಿನ್ನವಾದ ಸೂತ್ರಗಳನ್ನು ಅವನು ಒಂದಕ್ಕೆ ಜೋಡಿಸಿ ಏನೆಲ್ಲಾ ಮಹಿಮೆಯನ್ನು, ತನ್ನಾಪ್ತರ ಹಿರಿಮೆಯನ್ನು ಎತ್ತಿ ಹಿಡಿಯುತ್ತಾನೆ. ಕಿರೀಟಗಿರಿಯಲ್ಲಿ ಆದದ್ದು ಕೂಡ ಹೀಗೆಯೆ. ಸಾವಿರಾರು ಜನರು ಚಪ್ಪರಿಸಬೇಕಿದ್ದ ಸೀಕರಣೆಯು ದೇಸಾಯರ ಮನೆಯ ಸಾವಿನ ಕೊಳಗವಾಗಿ ಬದಲಾಯ್ತು. ಕುತೂಹಲಿಯಾದ ದೇಸಾಯರ ಮಗ ಕೊಳಗದಲ್ಲಿ ಏನಿದೆಯೆಂದು ನೋಡಲು ಹೋಗಿ ಅದರಲ್ಲಿ ಬಿದ್ದು ಮುಳುಗಿಯೇ ಹೋದ. ಯಾರಿಗೂ ಈ ಘಟನೆಯು ಗಮನಕ್ಕೆ ಬರಲೇ ಇಲ್ಲ. ಗೊತ್ತಾದಾಗ ಹುಡುಗನ ಉಸಿರು ನಿಂತೇ ಹೋಗಿತ್ತು. ಸಾವು ಸಂಭವಿಸಿದೆಯೆಂದು ತಿಳಿದರೆ ರಾಯರ ಮನಸ್ಸಿಗೆ ಬೇಸರವಾದೀತೆಂದು ದೇಸಾಯಿ ದಂಪತಿಯರು ಮಿಡುಕಿದರು. ಆದರೆ ರಾಯರ ಚಿತ್ತಕ್ಕೆ ಅಗೋಚರವೇನು ಈ ವಿಷಯ? ಅವರು ಬಾಲಕನ ಶರೀರದಲ್ಲಿ ಶ್ರೀಪ್ರಾಣಪತಿಯ ಅನುಸಂಧಾನವನ್ನು ಮಾಡಿದರು, ಪ್ರಾಣದೇವರ ಸಂಚಾರ ಹುಡುಗನಲ್ಲಿ ಚುರುಕಾಗಿಯೆ ಬಿಟ್ಟಿತು. ಬಾಲಕ ಎದ್ದು ಕುಳಿತ. ಸತ್ತು ಹೋದನೆಂದು ದುಃಖಿತರಾದ ದಂಪತಿಗಳ ಆನಂದಕ್ಕೆ ಮೇರೆ ಮೀರಿತು. ಲೌಕಿಕ ವೈದ್ಯರ ತಿಳಿವಿಗೂ ನಿಲುಕದ ಪ್ರಾಣದೇವರ ಸೂಕ್ಷ್ಮ ಚಲನೆಯು ಶ್ರೀರಾಯರಂತಹ ಭವರೋಗ ವೈದ್ಯರ ಕಣ್ಣಿಗೆ ಸ್ಪಷ್ಟವಾಗಿ ಕಂಡಿತು. ವಾಯುದೇವರ ಕರುಣಾಪಾತ್ರರಾದ ರಾಯರ ಕಣ್ಣಿಗಲ್ಲದೇ ಬೇರಾರ ಕಣ್ಣಿಗೆ ಕಾಣಿಸಬಲ್ಲನವನು ನಮ್ಮ ಪವಮಾನನು? ಅಲ್ಲವೇ? ಹೀಗೆ ದೇಸಾಯರ ಪೂರ್ವಿಕರು, ದೇಸಾಯರ ಉತ್ತರಾಧಿಕಾರಿಗಳು ಮತ್ತು ಶ್ರೀರಾಯರು ಹೀಗೆ ವಿಭಿನ್ನವಾದ ಸೂತ್ರಗಳನ್ನು ಶ್ರೀಸೂತ್ರನಾಮಕನಾದ ವಾಯುದೇವರ ಮೂಲಕ ಏಕತ್ರಗೊಳಿಸಿ ಶ್ರೀಮೂಲರಾಮದೇವರು ಒಂದು ಅಪೂರ್ವವಾದ ಸನ್ನಿವೇಶವನ್ನು ಪ್ರಕಟಗೊಳಿಸಿದ.

ಶ್ರೀರಾಯರು ಕಿರೀಟಗಿರಿ ಮಾತ್ರವಲ್ಲ ಅನೇಕ ಗ್ರಾಮಗಳನ್ನು ಶ್ರೀಮಠಕ್ಕೆ ಉಂಬಳಿಯಾಗಿ ಪಡೆದಿದ್ದರು. ಕಾಲಾನುಕ್ರಮದಲ್ಲಿ ಈ ಗ್ರಾಮಗಳೆಲ್ಲವೂ ಶ್ರೀಮಠದ ಕೈತಪ್ಪಿ ಹೋಗಿದ್ದವು. ಇಂತಹ ವ್ಯವಹಾರಗಳು ಶ್ರೀರಾಯರ ಪೂರ್ವಿಕ ಗುರುಗಳು ಶ್ರೀಮಠಕ್ಕೆ ಕೊಡಮಾಡಿದ ಗ್ರಾಮಗಳ ವಿಷಯದಲ್ಲಿ ಕೂಡ ನಡೆದಿದ್ದವು. ಅಂತಹ ಕೈತಪ್ಪಿ ಹೋಗಿದ್ದ ಪೂರ್ವಯತಿಗಳ ಗ್ರಾಮಗಳೆಲ್ಲವನ್ನು ಆಯಾ ಕಾಲದ ಅಧಿಕಾರಿಗಳು ಮತ್ತೆ ರಾಯರ ಕಾಲದಲ್ಲಿ ಮಠದ ಹೆಸರಿಗೆ ಮಾಡಿಕೊಟ್ಟಿದ್ದಾರೆ. ಅಂತೆಯೇ ರಾಯರ ಕಾಲದಲ್ಲಿ ಬಂದ ಉಂಬಳಿಗಳು ಕೈತಪ್ಪಿ ಹೋದಾಗ ಮುಂದೆ ಪರಂಪರೆಯಲ್ಲಿ ಬಂದ ಯತಿಗಳು ಪುನಃ ಸುವ್ಯವಸ್ಥೆಗೊಳಿಸಿದ್ದಾರೆ. ಅಂತೂ ಇದು ಆಗಾಗ ನಡೆಯಲೇ ಬೇಕಾದ ಒಂದು ಕರ್ತವ್ಯವಾಗಿ ಉಳಿದಿದೆ. ಹೀಗೆ ಶ್ರೀಮಠದ ಕೈತಪ್ಪಿ ಹೋಗಿದ್ದ ಆಸ್ತಿಗಳನ್ನೆಲ್ಲ ಶ್ರೀಮಠಕ್ಕೆ ದೊಡ್ಡ ಪ್ರಮಾಣದಲ್ಲಿ ಪುನಃ ತಂದುಕೊಂಡು, ಶ್ರೀಮಠವನ್ನು ಗಟ್ಟಿಗೊಳಿಸಿದವರಲ್ಲಿ ಶ್ರೀಭುವನೇಂದ್ರತೀರ್ಥರ ಹೆಸರು ಎದ್ದು ಕಾಣುತ್ತದೆ. ಮಹಬೂಬ್ ನಗರ, ಅನಂತಪುರ, ಕಡಪಾ, ಕರ್ನೂಲು ಜಿಲ್ಲೆಗಳಲ್ಲಿ ಪರಭಾರೆಯಾಗಿದ್ದ ಶ್ರೀಮಠದ ಸಹಸ್ರಾರು ಎಕರೆ ಜಮೀನನ್ನು ಪುನಃ ಶ್ರೀಮಠಕ್ಕೆ ಪಡೆದುಕೊಂಡವರು ಇವರು. ಈ ಮೂರೇ ಜಿಲ್ಲೆಗಳಲ್ಲಿ ಇಷ್ಟು ಪ್ರಮಾಣದ ಆಸ್ತಿ ಶ್ರೀಮಠಕ್ಕಿದೆ ಎಂದರೆ ಉಳಿದೆಲ್ಲ ಕಡೆಗಳಲ್ಲಿ ಇರುವ ಜಮೀನುಗಳ ಬಗ್ಗೆ ಊಹೆ ಮಾಡಿಕೊಳ್ಳಿ. ಇದೆಲ್ಲವೂ ಇಂದಿಗೂ ಶ್ರೀಮಠದ ಹೆಸರಿನಲ್ಲಿ ಉಳಿದಿದೆ ಎಂದರೆ ಅದಕ್ಕೆ ಕಾರಣ ಶ್ರೀಭುವನೇಂದ್ರತೀರ್ಥ ಶ್ರೀಪಾದ ವೊಡೆಯರು.

ಅವರ ನಂತರ ಈ ನಿಟ್ಟಿನಲ್ಲಿ, ನಮ್ಮ ಪೀಳಿಗೆಗೆ ಈ ಒಂದು ರೀತಿಯ ದೃಢವ್ಯವಹಾರವನ್ನು ತೋರಿಸಿಕೊಡುತ್ತಿರುವವರು ಪೂಜ್ಯ ಶ್ರೀಸುಬುಧೇಂದತೀರ್ಥ ಶ್ರೀಪಾದಂಗಳವರು. ಕೈತಪ್ಪಿ ಹೋಗಿರುವ ಶ್ರೀಮಠದ ತಾಣಗಳನ್ನು ಪುನಃ ಮಹಾಸಂಸ್ಥಾನಕ್ಕೆ, ಶ್ರೀರಾಯರ, ಶ್ರೀಮಧ್ವಾಚಾರ್ಯರ, ಶ್ರೀಮೂಲರಾಮದೇವರ ಚರಣಗಳಿಗೆ ಅಂಕಿತವನ್ನಾಗಿಸುತ್ತಿರುವವರು ಇವರು.

ಶ್ರೀರಾಯರಿಗೆ ಭಿಕ್ಷೆಯನ್ನು ನೀಡಿದ ಈ ಕಿರೀಟಗಿರಿಯು ಕೂಡಾ ಶ್ರೀರಾಯರ ಪರಂಪರೆಯ ಕೈಯಿಂದ ಜಾರಿ ಹೋಗಿತ್ತು. ಇಡೀ ಊರು ನಮ್ಮದಾಗಬೇಕು ಎಂಬ ಹುಚ್ಚು ಹಟವೇನೂ ನನ್ನದಲ್ಲ. ಆದರೆ ರಾಯರು ಶ್ರೀಮೂಲರಾಮದೇವರ ಪೂಜೆಯನ್ನು ನಡೆಸಿ, ತಾವು ಭಿಕ್ಷೆಯನ್ನು ಸ್ವೀಕರಿಸಿದ ದಿವ್ಯತಾಣವು ಶ್ರೀರಾಯರ ಹೆಸರಿನಲ್ಲಿಯೇ ಇರಬೇಕು ಎಂಬುದು ನನ್ನ ಅಭಿಪ್ರಾಯ. ಶ್ರೀದೇಸಾಯರ ಮನೆತನದವರ ಪುಣ್ಯದ ಬಹಳ ದೊಡ್ಡದು. ಸಾಧಕರ ಸಾಲಿನಲ್ಲಿಯೇ ಇವರಿಗೆ ತಾಣವಿರುವುದು ಸ್ಪಷ್ಟ. ಹಿಂದಿನ ದೇಸಾಯರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿಯೇ ಇಂದು ಅವರ ಪೀಳಿಗೆಯವರು ನಡೆದುಕೊಂಡಿದ್ದಾರೆ. ಶ್ರೀಶ್ರೀಸುಬುಧೇಂದ್ರತೀರ್ಥ ಶ್ರೀಪಾದರ ಮೂಲಕ, ಆ ಒಂದು ಮನೆಯನ್ನು ಇತ್ತೀಚೆಗೆ ಶ್ರೀರಾಯರ ಅಂತರ್ಯಾಮಿ ಶ್ರೀಮುಖ್ಯಪ್ರಾಣ-ಶ್ರೀಪರಮಮುಖ್ಯಪ್ರಾಣದೇವರಿಗೆ ಸಮರ್ಪಣೆ ಮಾಡಿದ್ದಾರೆ. ದೇಸಾಯರ ವಂಶವು ಚೆನ್ನಾಗಿ ಬೆಳಗಲಿ.

ರಾಯರ ಮನೆಯು ರಾಯರಿಗೇನೇ ಸೇರಿತು. ಈ ಸೇರಿಸುವಿಕೆಯ ಕೀರ್ತಿಯು ಶ್ರೀಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೇನೆ ಸೇರಿತು.

ಇಂತಹ ಅನೇಕ ಐತಿಹಾಸಿಕ ಜಾಗಗಳು ನಮ್ಮ ಶ್ರೀಸಂಸ್ಥಾನದ ಕೈತಪ್ಪಿರುವುದು ಶ್ರೀಶ್ರೀಪಾದರಿಗೆ ಬಹುಚೆನ್ನಾಗಿ ಗೊತ್ತು. ಅವೆಲ್ಲವೂ ಸಂಸ್ಥಾನಕ್ಕೇನೆ ಬಂದು ಸೇರಲಿ, ಇಂತಹ ಪುಣ್ಯಕೀರ್ತಿಯು ನಮ್ಮ ಶ್ರೀಪಾದಂಗಳವರಿಗೆ ಸೇರಲಿ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.