ಕೋಟಕೊಂಡ ತಪೋವನದ ಶ್ರೀನಿವಾಸ

ನವರಾತ್ರಿಯಲ್ಲಿ ಶ್ರೀನಿವಾಸರಾಯನ ದರ್ಶನ – 6


ಇಂದಿನ ದರ್ಶನ : ಕೋಟಕೊಂಡ ತಪೋವನದ ಶ್ರೀನಿವಾಸ

ಕರ್ಣಾಟಕ ಮತ್ತು ತೆಲಂಗಾಣದ ಗಡಿಯಲ್ಲಿ ಕೋಟಕೊಂಡ ಎನ್ನುವ ಒಂದೂರಿದೆ. ಒಣಬೆಟ್ಟಗಳು ಮತ್ತು ಕುರುಚಲುಕಾಡಿನಿಂದ ಸುತ್ತುವರೆದ ಹಳ್ಳಿಯಿದು. ಈ ಊರಿನಲ್ಲಿ ಯಥೇಚ್ಚವಾಗಿರುವ ಎರಡು ರತ್ನಗಳೆಂದರೆ ತಲೆ ಒಡೆಯುವ ಬಿಸಿಲು ಮತ್ತು ತಲೆ ತೆಗೆಯುವ ನಕ್ಸಲರು! ಈ ಎರಡರ ಕಾಟದಿಂದ ಬಳಲಿದ ಸಜ್ಜನರಿಗಾಗಿ ಇಲ್ಲಿ ಸಾತ್ವಿಕ ಶಕ್ತಿಯನ್ನು ನಿಲ್ಲಿಸಿಕೊಟ್ಟು ಒಬ್ಬ ದೇವತಾಂಶರು ಉಪಕಾರ ಮಾಡಿದ್ದಾರೆ. ಅವರೇ ಶ್ರೀರಘುಪ್ರೇಮತೀರ್ಥ ಶ್ರೀಪಾದಂಗಳವರು.

ಯಾದಗಿರಿ, ಮಳಖೇಡ, ನಾರಾಯಣಪೇಟೆ, ಪಾಲಮೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಜನ ಹರಿಭಕ್ತರಿದ್ದಾರೆ. ಅವರುಗಳೆಲ್ಲರಿಗೂ ಶ್ರೀಶ್ರೀರಘುಪ್ರೇಮತೀರ್ಥರೆನ್ನುವ ಕಲ್ಪವೃಕ್ಷವು ನೆರಳನ್ನೂ ಜ್ಞಾನವನ್ನೂ ಇತ್ತು ಸಲಹಿದೆ. ಅಂತಹ ಒಬ್ಬ ವಿರಳರಾದ ಸದ್ಭಕ್ತರು ಶ್ರೀಇಟಗಿ ಅನಂತಾಚಾರ್ಯರು. ಅವರ ಪ್ರಾರ್ಥನೆಯ ಮೇರೆಗೆ ಶ್ರೀರಘುಪ್ರೇಮತೀರ್ಥರು ಬಹುಕಾಲ ಇಲ್ಲಿ ಸಾಧನೆಯನ್ನು ನಡೆಸಿದ್ದಾರೆ. ಇವರ ಸಾಧನೆಯ ಮಹಿಮೆಯಿಂದಲೇ ಇಲ್ಲಿ ತಮೋಗುಣಗಳು ತಲೆಯನ್ನು ತಗ್ಗಿಸಿ ನಿಂತಿವೆ. ಅನುಮಾನವೇ ಇಲ್ಲ.

ಕೋಟಕೊಂಡದ ಊರಂಚಿಗೆ ಬೆಟ್ಟಗಳ ಸಾಲಿದೆ. ಈ ಬೆಟ್ಟಗಳ ಬುಡದಲ್ಲಿ ಒಂದು ದೊಡ್ಡ ಸರೋವರವೂ ಉಂಟಾಗಿದೆ. ಮಳೆಯೇ ಅಪರೂಪವಾದ ಈ ಪ್ರದೇಶದಲ್ಲಿ ಹಸಿರಿನ ಬೆಟ್ಟಗಳೂ, ಬೆಟ್ಟಗಳ ಕೆಳಗೆ ತುಂಬಿಕೊಂಡಿರುವ ಸರೋವರವೂ ಇರುವುದು ಶ್ರೀನಿವಾಸನಿಗೆ ಇಷ್ಟವಾಗದೆ ಇದ್ದೀತೇ? ಆತ ಶ್ರೀಇಟಗಿ ಆಚಾರ್ಯರಿಗೆ ಪ್ರೇರೇಪಣೆ ಮಾಡಿ ತನ್ನ ಇಬ್ಬರೂ ಮಡದಿಯರ ಜೊತೆಗೆ ಬಂದು ನಿಂತೇ ಬಿಟ್ಟ. ಅಂದಿನಿಂದ ಈ ಸರೋವರಕ್ಕೆ ಸ್ವಾಮಿಪುಷ್ಕರಿಣಿ ಎಂದೇ ಹೆಸರಾಯಿತು.

ಮುಂದೊಮ್ಮೆ, ಶ್ರೀಇಟಗಿ ಆಚಾರ್ಯರಿಗೆ ಇನ್ನೂ ಒಂದು ಸೂಚನೆ ದೊರಕಿತು. ಗುಡಿಯ ಹೊರಗಿದ್ದ ಶಿಲೆಯೊಂದರಲ್ಲಿ ಶ್ರೀರಘುಪ್ರೇಮತೀರ್ಥರ ಸನ್ನಿಧಾನವಿದೆ ಎಂದು. ಆ ಶಿಲಾರೂಪಿ ಗುರುಗಳನ್ನು ಶ್ರೀಆಚಾರ್ಯರು ಒಳತಂದು ಶ್ರೀನಿವಾಸನ ಪಾದಗಳಲ್ಲಿ ಸ್ಥಾಪಿಸಿದ್ದಾರೆ. ಅಪೂರ್ವವಾದ ಅನುಭವವನ್ನು ಕೊಡುವ ತಪೋವನವಿದು. ಕೋಟಕೊಂಡ.

ಇಲ್ಲಿ ಶ್ರೀಹರಿಯಸೇವೆ ಮಾಡಿದರೆ ಜ್ಞಾನವು ಸಿದ್ಧಿಯಾಗುವುದರಲ್ಲಿ ಸಂದೇಹವಿಲ್ಲ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.