ಶ್ರೀಮಾಧವತೀರ್ಥರ ವೃಂದಾವನವು ಎಲ್ಲಿದ್ದರೇನು ಭಕುತರಿಗೆ?

ಶ್ರೀಮನ್ಮಾಧವತೀರ್ಥ ಶ್ರೀಪಾದಂಗಳವರ ಆರಾಧನೆಯನ್ನು ನಮ್ಮ ಗುರುಗಳು ಮೊನ್ನೆ ಕಂಪ್ಲಿಯಲ್ಲಿ ಆಚರಿಸಿದ ವಿಷಯವನ್ನು ಕುರಿತು ನಡೆದಿರುವ ಚರ್ಚೆಯಲ್ಲಿ ನಾನೊಂದು ಕಮೆಂಟಿಗೆ ಪ್ರತ್ಯುತ್ತರ ನೀಡಿದೆ. ಅದಕ್ಕೆ ಮತ್ತಿತರರು ತಮ್ಮ ಅಭಿಪ್ರಾಯವನ್ನು ಹೇಳಿದರು. ಅವರ ಪ್ರಕಾರ “ರಾಯರ ಮಾತು ತಂದ ತಕ್ಷಣ ನಿಮಗೆ ನಿಮ್ಮ ಭಾವನೆಗಳನ್ನು ಹತ್ತಿಕ್ಕಲಾಗಲಿಲ್ಲ, ಆದರೆ ಅದೇ ರೀತಿಯ ಭಾವನೆಗಳನ್ನು ಶ್ರೀಮಾಧವತೀರ್ಥರ, ಶ್ರೀಜಯಮುನಿಗಳ ವಿಷಯದಲ್ಲಿ ಯಾಕೆ ತೋರಿಸುವುದಿಲ್ಲ? ನೀವು ತೋರದಿದ್ದರೂ ಹೋಗಲಿ, ನಾವು ತೋರಿಸುವ ಭಾವನೆಗಳಿಗೆ ಯಾಕೆ ಅಗೌರವ ಮಾಡುತ್ತೀರಿ” ಎಂಬರ್ಥದ ಮಾತುಗಳನ್ನು ಮಾರುತ್ತರದ ರೂಪದಲ್ಲಿ ಪ್ರಕಟಿಸಿದರು. ಕೆಲವರ ಶಬ್ದಗಳು ಹೀನದರ್ಜೆಯವಾಗಿದ್ದವು. ಕೆಲವರಿಗೆ ತಮ್ಮ ಮಾತುಗಳೇ ನಿರ್ಣಯ ಎಂಬಂತೆ ಕಂಡು ಬಂದಿವೆ. ಹಾಗೆ ಇದೆ ಅವರ ಧ್ವನಿ!. ಇರಲಿ. ಪ್ರತಿಯೊಬ್ಬರಿಗೂ ವ್ಯಕ್ತಿಗತವಾಗಿ ಉತ್ತರಿಸುವುದಕ್ಕಿಂತ ಹೀಗೆ ಒಟ್ಟಾರೆಯಾಗಿ ಉತ್ತರಿಸುವುದು ಸುಲಭ ಎನ್ನಿಸಿತು.
ಕಮೆಂಟಿಗೆ ಉತ್ತರವನ್ನು ನಿರೀಕ್ಷೆಮಾಡುವ ನೀವುಗಳು ಮೊದಲು ಕೊಂಕುಮಾತುಗಳು, ಮೂದಲಿಕೆ, ಕುಹಕ, ಇತರ ಮಠದವರನ್ನು ಕೀಳಾಗಿನೋಡುವ ಪ್ರವೃತ್ತಿಯನ್ನು ಬಿಡಬೇಕು. ಈ ರೀತಿಯ ಅನೇಕ ಅನುಭವಗಳು ಉತ್ತರಾದಿಮಠದವರಿಂದ ಬಹಳ ಮಂದಿಗೆ ಆಗಿವೆ. (ತಿರುಚಾನೂರು ಸಭೆಯು ಇದಕ್ಕೆ ಉತ್ತಮವಾದ ಉದಾಹರಣೆ.) ಇದನ್ನು ಬಿಟ್ಟು ಆರೋಗ್ಯಕರವಾದ ಚರ್ಚೆ ಮಾಡಲು ಸಿದ್ಧರಿರಬೇಕು. ನೀವು ಅಂದರೆ ವ್ಯಕ್ತಿಗತವಾಗಿ ನೀವು ಮಾತ್ರ ಎಂದಲ್ಲ. ನೀವಲ್ಲದಿದ್ದರೆ ಆ ರೀತಿಯ ಮಾತುಗಳನ್ನು ಆಡುವವರು ಎಂದೂ ಅರ್ಥವಾದೀತು. ನಿಮ್ಮ ವಾದಕ್ಕೆ ಒಂದು ಪ್ರಬಲವಾದ ತಳಹದಿ ಇದೆ ಎಂದಾದಲ್ಲಿ ಅದನ್ನು ಸೌಮ್ಯವಾದ ಮಾತುಗಳಿಂದ ಪ್ರಸ್ತುತಪಡಿಸಿ. ಅದನ್ನು ಬಿಟ್ಟು ಚಿಲ್ಲರ್ ಮಂದಿ, ಗೋರಿ, ಸುಡುಗಾಡು, ಹೈಜ್ಯಾಕ್, ಪೇಮೆಂಟು ಎಷ್ಟು ಸಿಕ್ಕಿದೆ? ಎನ್ನುವ ಶಬ್ದಗಳನ್ನೆಲ್ಲ ಪ್ರಯೋಗಮಾಡುತ್ತಿದ್ದರೆ ನಿಮ್ಮ ತಂದೆ ತಾಯಿಯರ ಸಂಸ್ಕಾರವನ್ನು ಪ್ರಶ್ನಿಸಲು ನೀವುಗಳೇ ಅವಕಾಶ ಮಾಡಿದಂತಾಗುತ್ತದೆ. ಅದು ನೆನಪಿರಲಿ.
ನಮ್ಮ ಮಠದವರೂ ಮತ್ತು ಉತ್ತರಾದಿಮಠದವರೂ ಸೇರಿಯೇ ಗಮನಿಸಬೇಕಾದ ಅಂಶಗಳು ಇಲ್ಲಿದೆ. ಉಭಯತ್ರ ಕ್ಷೇಮವನ್ನು ಬಯಸುವರಾದಲ್ಲಿ ಪಾಲಿಸಬಹುದು. (ಇದು ಶ್ರೀಗಳವರ ಮಟ್ಟದಲ್ಲಿ ಅನ್ವಯಿಸದು. ಅರೆಬರೆ ತಿಳಿದು ಕೇವಲ ದುರಭಿಮಾನದಿಂದ ಕಲಹಮಾಡುತ್ತಿರುವ ಬಾಲರಹಿತರಿಗೆ ಮಾತ್ರವೇ ಅನ್ವಯಿಸುತ್ತದೆ)
1. ಒಂದು ವೇಳೆ ನಿಮ್ಮ ಅಭಿಪ್ರಾಯವೇ ಸರಿ ಇದೆ ಎನ್ನುವ ಆತ್ಮವಿಶ್ವಾಸ ನಿಮಗಿದ್ದಲ್ಲಿ ಸಂತೋಷ. ಆದರೆ ಆ ಅಭಿಪ್ರಾಯದ ಪ್ರಸ್ತುತಿಯಲ್ಲಿ “ಅವರನ್ನು ಸೋಲಿಸಿಬಿಟ್ಟೆ” ಎನ್ನುವ ಗರ್ವವೇ ಇಣುಕುವಂತಿದ್ದರೆ ಎದುರಿನವರಿಂದಲೂ ಅಂತಹುದೇ ಉತ್ತರಗಳು ಬರುತ್ತವೆ. ಇದಕ್ಕೆ ಕೊನೆಯೆ ಇರದು. ನಮ್ಮ ಕಡೆಯಿಂದ ಪ್ರಸ್ತುತಪಡಿಸಿದ ದಾಖಲಾತಿಗಳು ಸರಿಯಿವೆ ಎನ್ನುವುದು ನಮ್ಮ ಅಂತರಾಳಕ್ಕೆ ತಿಳಿದಿದ್ದರೆ ಸಾಕು. ಎದುರಿನವರು ಒಪ್ಪಿದರೆಷ್ಟು ಬಿಟ್ಟರೆಷ್ಟು? ಅಲ್ಲವೇ?
2. ಹಿಂದಿನವರ ಬಗ್ಗೆ ಚರ್ಚಿಸುವುದು ಇಲ್ಲಿ ಅನಗತ್ಯ. ಆದರೆ ಇತ್ತೀಚೆಗೆ ಎಳೆಯರೂ ಕೂಡ ಇತಿಹಾಸವನ್ನು ಸಂಪೂರ್ಣ ತಿಳಿಯದೆ ಯುದ್ದೋತ್ಸಾಹದ ರೀತಿಯ ಕಮೆಂಟುಗಳನ್ನು ಪೋಸ್ಟ್ ಮಾಡುತ್ತಿರುವುದನ್ನು ನೋಡಿದರೆ ಖೇದವೆನಿಸುತ್ತದೆ. ಇನ್ನೊಬ್ಬರ ತೇಜೋವಧೆಮಾಡುವಂತಹ ಕಮೆಂಟು ಮಾಡಿದಾಗ ಅವುಗಳಿಗೆ ಇತರ ಮೂರ್ಖರಿಂದ ಹಲ್ಲುಕಿಸಿಯುವ, ಹೆಬ್ಬೆಟ್ಟುತೋರಿಸುವ, ಕೆಂಪು ಹೃದಯಗಳ ಲೈಕುಗಳು ಬರಬಹುದು. ಆದರೆ ಕಿರಿಯರೇ! ನೆನಪಿಡಿ. ನಿಮ್ಮ ಬ್ರಹ್ಮಚರ್ಯವನ್ನು ಇಂತಹ ಕಟುವಾದ ಮಾತುಗಳು ಕೂಡ ಕಸಿದುಹಾಕುತ್ತವೆ. ನಷ್ಟ ನಿಮಗೆಯೇ ಹೊರತು ಹಲ್ಲುಕಿಸಿದು ನಿಮಗೆ ವರ್ಚುವಲ್ ಸಪೋರ್ಟ್ ಮಾಡಿದವರಿಗಲ್ಲ. ಈ ರೀತಿಯ ಬೆಂಬಲ ಕೊಟ್ಟ ಮಂದಿಯು ನಿಮ್ಮ ಮಾತು ತಪ್ಪು ಎಂದು ಗೊತ್ತಾದಾಗ ನಿಮ್ಮ ಹಿಂದೆ ಇರುವುದೇ ಇಲ್ಲ.
3. ಶ್ರೀಸತ್ಯಾತ್ಮತೀರ್ಥಶ್ರೀಪಾದಂಗಳವರು ಇತ್ತೀಚೆಗೆ ಮಾಡಿದ ಅಧಿಕಮಾಸದ ಲಕ್ಷಬ್ರಾಹ್ಮಣಸಂತರ್ಪಣೆಯು ಒಂದು ಉತ್ತಮಕಾರ್ಯ. ಅದಕ್ಕೆ ನಮ್ಮ ಮಠದ ಕೆಲವರು ವಿನಾಕಾರಣ ಅರ್ಥಹೀನವಾದ ಕಮೆಂಟುಗಳನ್ನು ಮಾಡಿದ್ದು ತಪ್ಪು. ಇದರಿಂದ ನಮ್ಮ ಮಠದ ಘನತೆಗೆ ಕುಂದು ಬರುವುದೇ ವಿನಃ ಲಾಭವೇನಿಲ್ಲ. ಅನ್ನಸ್ಯ ಕ್ಷುಧಿತಂ ಪಾತ್ರಂ ಎಂದಿರುವಾಗ ಅದನ್ನು ಯಾರು ಮಾಡಿದರೂ ಮೆಚ್ಚಬೇಕು. ಇತ್ತೀಚೆಗೆ ಯಾರೋ ಅನಾರೋಗ್ಯದಿಂದ ನರಳುತ್ತಾ ಬದಿಯಲ್ಲಿ ಮಲಗಿದ್ದಾಗ ಶ್ರೀಗಳವರೇ ಅಲ್ಲಿ ಹೋಗಿ ಅವರಿಗೆ ಸಾಂತ್ವನ ಹೇಳಿ ಮಂತ್ರಾಕ್ಷತೆಯನ್ನು ಕೊಟ್ಟರೆಂದು ಕೇಳಿದೆ. ಬಹಳ ಹಿಂದೆ ಕೆಂಭಾವಿಯ ಕಾಲುವೆಯಲ್ಲಿ ತನ್ನ ಸೀರೆಯನ್ನೇ ಎಸೆದು ಮುಳುಗುತ್ತಿದ್ದವರನ್ನು ಒಬ್ಬ ಮಹಿಳೆಯು ಕಾಪಾಡಿದ್ದಳು. ನಂತರ ಶ್ರೀಗಳವರು ಆ ಮಹಿಳೆಗೆ ವಸ್ತ್ರಾದಿಗಳನ್ನಿತ್ತು ಹರಸಿದ್ದು ಕೂಡ ನನಗೆ ನೆನಪಿದೆ. (ಈಗ ಕಮೆಂಟು ಬರೆಯುತ್ತಿರುವ ಅನೇಕ ಮಂದಿ ಆ ಘಟನೆ ನಡೆದಾಗ ಇನ್ನೂ ೧-೨ ನೇ ತರಗತಿಯಲ್ಲಿದ್ದರೇನೋ. ) ಹಿಂದೊಮ್ಮೆ ಗುಟಕಾ ತಿನ್ನುವವರಿಂದ ಅದನ್ನು ತ್ಯಜಿಸುವ ಸಂಕಲ್ಪ ಮಾಡಿಸಿ, ಪ್ರಾಯಶ್ಚಿತ್ತ ಹೋಮವನ್ನು ಸಹ ಮಾಡಿಸಿದ್ದರು. ಇಂತಹ ಘಟನೆಗಳನ್ನು ನಾವು ಪ್ರಾಂಜಲಮನಸ್ಸಿನಿಂದ ಗ್ರಹಿಸಬೇಕು. ಅದು ನಮಗೆ ಶ್ರೇಯಸ್ಕರವಾದುದು.
“ನಮ್ಮವರದು ತಪ್ಪು” ಎಂದು ಹೇಳಿದೆ ಎಂದ ಮಾತ್ರಕ್ಕೆ ಉತ್ತರಾದಿಮಠದವರು ಸಂತಸಪಡಬೇಕಿಲ್ಲ. ಇಂತಹ ಕೋತಿಚೇಷ್ಟೆಗಳು ನಿಮ್ಮವರಿಂದಲೇ ಪ್ರಾರಂಭ ಆಗಿರುವ ಅನೇಕ ಉದಾಹರಣೆಗಳನ್ನೂ ನಾನು ಕೊಡಬಲ್ಲೆ. ಆದರೆ ಸಧ್ಯಕ್ಕೆ ಅದು ಬೇಡ. ಅದರಿಂದ ಏನೂ ಸಾಧನೆಯಾಗದು. ಆದರೆ ನಮ್ಮ ಕಮೆಂಟುದಾರರ ದಡ್ಡತನವನ್ನು ನಾನು ಒಪ್ಪಿಕೊಂಡಂತೆ ನಿಮ್ಮವರ ತಪ್ಪನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆ ನಿಮಗೂ ಇರಬೇಕಷ್ಟೇ.
ಶ್ರೀಪದ್ಮನಾಭಾದಿ ನಾಲ್ಕು ಪ್ರಾಚೀನ ಶಿಷ್ಯರು ಮೊದಲ್ಗೊಂಡು ಶ್ರೀಮಟ್ಟೀಕಾಕೃತ್ಪಾದರು ಸೇರಿದಂತೆ ಶ್ರೀರಾಮಚಂದ್ರತೀರ್ಥರವರೆಗೆ ಇರುವ ಪೂರ್ವಸೂರಿಗಳು ಉತ್ತರಾದಿಮಠಕ್ಕೆ ಮಾತ್ರವೇ ಸೇರಿದವರು ಎನ್ನುವ ಕಲ್ಪನೆಯೇ ತಪ್ಪು. ಶ್ರೀವಿದ್ಯಾನಿಧಿತೀರ್ಥ ಶ್ರೀಪಾದಂಗಳವರಿಂದ ಮುಂದಿನ ಪರಂಪರೆಯನ್ನು ಮಾತ್ರವೇ ಪ್ರತ್ಯೇಕವಾಗಿ ನಿಮ್ಮದೆಂದು ಹೇಳಿಕೊಳ್ಳಬಹುದಷ್ಟೇ. ಆ ಮುಂದುವರೆದ ಭಾಗದಲ್ಲಿ ನಮ್ಮವರು ಯಾವತ್ತೂ ತಲೆ ಹಾಕಿಲ್ಲ. ಈ ಮಾತನ್ನು ಹಟಮಾರಿತನ ಧೋರಣೆಯಿಂದ ನೋಡದೆ ನಿಮ್ಮ ಹೃದಯದ ಅಭಿಪ್ರಾಯವನ್ನೇ ಕೇಳಿ. ಪ್ರಾಮಾಣಿಕವಾಗಿ ಏನೆನ್ನಿಸುವುದೋ ಅದನ್ನು ಹೇಳಿ. ಪೂರ್ವಗ್ರಹಪೀಡಿತನೆಂದು ನನಗೆ ಹೇಳುವ ಮಂದಿ ಇದರ ಕಡೆ ಗಮನಕೊಡಲಿ. ಶ್ರೀಮಾಧವತೀರ್ಥರ, ಶ್ರೀಜಯಪ್ರಭುಗಳ ಮೂಲವೃಂದಾವನಗಳ ಬಗ್ಗೆ ನೀವು ಹೇಗೆ ಅಭಿಮಾನದಿಂದ ಮಾತನಾಡುವಿರೋ ಅದೇ ಅಭಿಮಾನ ನಮಗೂ ಇರುವುದಲ್ಲ. ಈ ರೀತಿಯ ಗೊಂದಲಗಳು ಉಂಟಾದಾಗ ಲಭ್ಯವಿರುವ ಪ್ರಮಾಣಗಳನ್ನು ಒಪ್ಪಲು ಹೃದಯವಂತಿಕೆಯು ಬೇಕು. ಶ್ರೀಜಯಮುನಿಗಳ ವೃಂದಾವನದ ಬಗ್ಗೆ ನೀವುಗಳು ಪ್ರಸ್ತುತಪಡಿಸಿರುವ ದಾಖಲಾತಿಗಳನ್ನು ನಿರಾಕರಿಸುವಂತಹ ಮಾಹಿತಿಗಳನ್ನು ನಾವು ಮುದ್ರಿಸಿದ್ದೇವೆ. ಒಪ್ಪಲೇಬಾರದು ಎನ್ನುವ ಒಂದೇ ಒಂದು ಹಟದಿಂದ ನಿಮ್ಮವರು ಆ ಎಲ್ಲ ಪ್ರಮಾಣಗಳನ್ನೂ ತಿರಸ್ಕರಿಸುತ್ತಿದ್ದರೆ ಏನೂ ಮಾಡಲಾಗದು. ತಿರಸ್ಕಾರ ಮಾಡುತ್ತಿರುವವರಲ್ಲಿಯೂ ಎಷ್ಟು ಜನರು ಆ ಪುಸ್ತಕವನ್ನು ಓದಿದ್ದಾರೆ ಎನ್ನುವುದೇ ಒಂದು ಪ್ರಶ್ನೆ. ಈ ಪುಸ್ತಕವಾದರೂ ನಿಮ್ಮವರ ಪುಸ್ತಕಕ್ಕೆ ಪ್ರತ್ಯುತ್ತರವೇ ಹೊರತು ನಾವಾಗಿಯೇ ನಾವು ಬರೆದದ್ದಲ್ಲ. ಇದನ್ನಾದರೂ ಒಪ್ಪುವಿರೋ?
ಶ್ರೀಜಯತೀರ್ಥರ ಮೂಲವೃಂದಾವನವು ಮಳಖೇಡದಲ್ಲಿದೆ ಎಂದು ನಿಮ್ಮ ಅಭಿಪ್ರಾಯವಿದ್ದಲ್ಲಿ ಅದನ್ನು ಮಂಡನೆ ಮಾಡಿ. ನವವೃಂದಾವನದಲ್ಲಿದೆಯೆನ್ನುವ ನಮ್ಮ ಮಾತನ್ನು ಖಂಡನೆ ಕೂಡ ಮಾಡಿರಿ, ಆದರೆ ಸಮರ್ಥವಾದ ದಾಖಲಾತಿಗಳನ್ನು ಪ್ರಸ್ತುತಪಡಿಸುವ ಮೂಲಕವೇ ಹೊರತು ಕೇವಲ ವ್ಯಂಗೋಕ್ತಿಗಳನ್ನು ತೂರುವುದರ ಮೂಲಕ ಅಥವಾ ಅರ್ಥಹೀನವಾದ ಕೊಂಕು ಬಾಣಗಳನ್ನು ಎಸೆಯುವುದರ ಮೂಲಕವಲ್ಲ. ಅದರಿಂದ ನಿಮ್ಮವರು ನಿಮ್ಮ ಜೊತೆಗೆ ಕಿಸಕ್ಕೆಂದು ನಗಬಹುದಷ್ಟೇ. ಅಂತರಂಗದಲ್ಲಿ ನಿಜವಾದ ನಷ್ಟವು ಕಟೂಕ್ತಿಗಳನ್ನು ಹೇಳಿದವರಿಗೇ ಆಗುವುದು. ನಕ್ಕ ಹಿಂಬಾಲಕರಿಗಲ್ಲ.
ಈಗ ಶ್ರೀಮಾಧವತೀರ್ಥರ ವೃಂದಾವನವಿರುವ ಸ್ಥಳದ ಚರ್ಚೆಯ ವಿಷಯವನ್ನು ನೋಡೋಣ.
ಶ್ರೀಮಾಧವತೀರ್ಥರ ವೃಂದಾವನವು ಕಂಪ್ಲಿಯಲ್ಲಿದೆ ಎಂಬ ನಮ್ಮ ಗುರುಗಳ ಮಾತು ನಮಗೆ ಮಾನ್ಯವಾಗಿದೆ. ಅವರು ಅಲ್ಲಿ ಹೋಗಿ ಪೂಜೆ ಮಾಡಿರಿ ಎಂದರೆ ಅಲ್ಲಿಯೇ ಮಾಡುತ್ತೇವೆ. ಅಲ್ಲಿ ಇಲ್ಲ ಪಾಟ್ನಾದಲ್ಲಿದೆ ಅಲ್ಲಿ ಹೋಗಿ ಪೂಜಿಸಿರಿ ಎಂದರೆ ಅಲ್ಲಿಯೇ ಮಾಡುತ್ತೇವೆ. ಬೇಡ ಮಂತ್ರಾಲಯದಲ್ಲಿಯೇ ಇರಿ ಅಂದರೆ ಅದನ್ನೇ ಮಾಡುತ್ತೇವೆ. ಇದರಿಂದ ನಿಮಗೆ ಆಗುವ ಸಮಸ್ಯೆ ಏನು? ಶ್ರೀವಿದ್ಯಾನಿಧಿತೀರ್ಥರ ನಂತರದ ಪರಂಪರೆಯ ಬಗ್ಗೆ ನಾವೇನಾದರೂ ಮಾತನಾಡಿದ್ದಲ್ಲಿ ನೀವು ವೇದನೆ ಪಡುವುದರಲ್ಲಿ ಅರ್ಥವಿದೆ. ಆದರೆ ಇದು ಹಾಗಲ್ಲವಲ್ಲ. ನಮಗೂ ಶ್ರೀಮಾಧವತೀರ್ಥರ ಮೇಲೆ ಸಮಾನವಾದ ಅಭಿಮಾನವಿದೆ. ಅದೂ ಅಲ್ಲದೆ ನಮ್ಮವರು ಮಾಡುವ ಪೂಜೆಗೆ ನಿಮ್ಮ ಮಠದವರಂತೂ ಬರುವುದಿಲ್ಲ ಅಂದ ಮೇಲೆ ಇದರಲ್ಲಿ ಒಡಕುಮೂಡಿಸುವ ಕೆಲಸವೇನು ಬಂತು? ನಿಮ್ಮ ಮಠದಲ್ಲಿ ಕೂಡ ಹೀಗೆಯೇ ಅಲ್ಲವೇನು? ನಿಮ್ಮ ಗುರುಗಳು ಏನು ಹೇಳುವರೋ ಅದೇ ನಿಮಗೆ ಮಾನ್ಯ. ಅವರು ಹೇಳಿದ್ದೇ ನಿಮಗೆ ಮಾನ್ಯವೆಂದ ಮೇಲೆ ನಮ್ಮವರ ಮಾತಿಗೆ ನೀವು ತಲೆಕೆಡಿಸಿಕೊಳ್ಳುವುದಾದರೂ ಯಾಕೆ?
ನಿಮ್ಮ ಸ್ವಾಮಿಗಳನ್ನು ಅಂದಾಗ ನಿಮಗೆ ಹೇಗೆ ಅಸಹನೆ ಆಗುವುದೋ ನಮಗೂ ಅದೇ ರೀತಿ ಆಗುವುದು ಎಂಬುದನ್ನು ಅರಿಯದಷ್ಟು ಇನ್ ಸೆನ್ಸಿಟಿವ್ ಇದ್ದೀರಲ್ಲ ನೀವು!! ಇದೆಂತಹ ಕಮೆಂಟು! ಅಗಸರು, ಲಿಂಗಗಳು, ಯಾವುದೋ ಗುಡಿ ಎಂಬ ಹಗುರ ಮಾತನ್ನು ಆಡುತ್ತಿದ್ದೀರಿ. ದೇವರಪೆಟ್ಟಿಗೆಯನ್ನು ಇಟ್ಟವರು ನಮ್ಮ ಸ್ವಾಮಿಗಳೇ ಹೊರತು ನಾವ್ಯಾರೋ ಕೆಳದರ್ಜೆಯ ಸೇವಕರಲ್ಲ. ನಮ್ಮ ಸ್ವಾಮಿಗಳು ಕೂಡ ಆಚಾರ್ಯ ಮಧ್ವರ ಪೀಠದಲ್ಲಿಯೇ ಬಂದಿರುವವರು. ಸ್ವಲ್ಪ ಮರ್ಯಾದೆಯಿಂದ ಕೂಡಿರಲಿ ನಿಮ್ಮ ಮಾತು. ಅವರು ಮಾಡಿದ ಕೆಲಸವನ್ನು ನೀವು ಪ್ರಶ್ನೆ ಮಾಡುವುದೇಕೆ? ನಿಮ್ಮ ಶ್ರೀಗಳು ಕೂಡ ನದಿಯೊಂದರ ಮಧ್ಯ ಕೂತು ಜಪ ಮಾಡುತ್ತಿದ್ದ ಚಿತ್ರವೊಂದು ಹರಿದಾಡುತ್ತಿತ್ತಲ್ಲ. ನೆನಪಿದೆಯೇ? ಆ ಕಲ್ಲಿನ ಮೇಲೆ ಯಾರೂ ಉಗುಳಿಲ್ಲವೆಂದು ಏನು ಖಾತ್ರಿ? ಕಾಗೆಯೋ ಮತ್ತೊಂದೊ ಪಕ್ಷಿಯೋ ಹೇಸಿಗೆಯನ್ನು ಮಾಡಿಲ್ಲವೆಂದು ಏನು ಗ್ಯಾರಂಟಿ? ಆ ಕಲ್ಲನ್ನು ನೀವು ತೊಳೆದಿದ್ದೀರಿ ಎಂದರೂ ಕೂಡ ಉಗುಳಿದ ಕಲ್ಲನ್ನೇ ತೊಳೆದು ಅದರ ಮೇಲೆ ಕೂತೆ ಎಂದಾಗುತ್ತದಲ್ಲ! ಬೇಕಿತ್ತೇ ನಿಮಗೆ ಈ ಅಪಸವ್ಯದ ಮಾತುಗಳು?
ಅಷ್ಟಕ್ಕೂ ನಿಮ್ಮ ಮೇಲೆ ಹಗೆ ಸಾಧಿಸಲು ಏನಾದರೂ ಕಾರಣವೇನಿದೆ? ನಮಗೆ ಏನಾದರೂ ಕೊರತೆಯಿದ್ದಲ್ಲಿ ಅಥವಾ ಕೀಳರಿಮೆಯಿದ್ದಲ್ಲಿ ನಿಮ್ಮ ಈ ಹಗೆಯ ಮಾತಿಗೆ ಏನಾದರೂ ಅರ್ಥವಿದೆ. ಆದರೆ ವಾಸ್ತವವು ಹಾಗಿಲ್ಲವಲ್ಲ. ದಾರಿಹೋಕರಿಗೂ ನೆರಳು ಕೊಡುವ ಕಲ್ಪವೃಕ್ಷವು ತನ್ನ ಸಂತತಿಯ ಮೇಲೆ ಕೃಪೆಮಾಡದೆ ಇದ್ದೀತೆ?
ಪ್ರಶ್ನೆ : ಶ್ರೀರಾಯರ ಬಗ್ಗೆ ಅಂದರೆ ಕೋಪ ಮಾಡಿಕೊಳ್ಳುತ್ತೀರಿ. ಆದರೆ ಮಾಧವತೀರ್ಥರು ಮತ್ತು ಜಯತೀರ್ಥರ ಬಗ್ಗೆ ಈ ಗೌರವ ಯಾಕಿಲ್ಲ? ಅವರು ರಾಯರಿಗಿಂತ ದೊಡ್ಡವರಲ್ಲವೇ? ಯಾಕೆ ಈ ಡಬಲ್ ಸ್ಟಾಂಡರ್ಡ್?
ಉತ್ತರ: ಶ್ರೀಮಾಧವತೀರ್ಥರು ಮತ್ತು ಶ್ರೀಜಯಮುನಿಗಳು ಶ್ರೀರಾಯರಿಗಿಂತ ಎತ್ತರದಲ್ಲಿ ಇರುವವರೇ. ಇನಿತೂ ಸಂಶಯವಿಲ್ಲ. ತಾರತಮ್ಯ ಜ್ಞಾನವು ನಮಗೂ ಇದೆ. ಆದರೆ ಪ್ರಾಮಾಣಿಕವಾಗಿ ನಾನು ಹೇಳುವುದಾದರೆ ರಾಯರಲ್ಲಿ ನಮಗೆಲ್ಲ ಸಲಿಗೆ, ಪ್ರೇಮ ಮತ್ತು ಅಧಿಕಾರ ಜಾಸ್ತಿ. ಇವರಲ್ಲಿ ಪ್ರೇಮವಿದೆ ಎಂದ ಮಾತ್ರಕ್ಕೆ ಇನ್ನಿತರ ಯತಿಗಳಿಗೆ ಅದು ಅಗೌರವ ಎಂಬರ್ಥದಿಂದ ತೆಗೆದುಕೊಳ್ಳಬಾರದು. ಸಂಕಟ ಬಂದೊದಗಿದ ತಕ್ಷಣವಾಗಲಿ, ಡಿಪ್ರೆಷನ್ನಿನಲ್ಲಿ ಇರುವಾಗಲಿ ಅಥವಾ ಅತೀವವಾದ ಆನಂದವಾದ ಕೂಡಲೆ ನಮ್ಮಲ್ಲಿ ೯೦% ಜನರ ಹೃದಯದಲ್ಲಿ ರಾಯರೇ ಮೂಡುತ್ತಾರೆ. ಇದಕ್ಕೆ ಕಾರಣ ಅವರ ಮೇಲೆ ಇರುವ ಭಕ್ತಿಯೇ ಹೊರತು ಇತರ ಯತಿಗಳಲ್ಲಿ ಸಾಮರ್ಥ್ಯ ಕಡಿಮೆ ಎಂದಲ್ಲ. ಎದೆ ಮುಟ್ಟಿಕೊಂಡು ಹೇಳಿ ನೀವೇ. ರಾಯರಲ್ಲಿ ನೀವು ಪ್ರೀತಿಯಿಂದ ಮಾಡಿದ ಜಗಳವನ್ನು ಶ್ರೀಮಾಧವತೀರ್ಥರಲ್ಲಿ ಎಂದಾದರೂ ಮಾಡಿದ್ದೀರೋ? ಪರೀಕ್ಷೆಯನ್ನು ಬರೆಯಲು ಹೋಗುವಾಗ ನಿಮ್ಮ ಅಮ್ಮ ಅಪ್ಪಂದಿರು ರಾಯರ ಹೆಸರನ್ನು ಸ್ಮರಿಸಿಕೊಂಡುಹೋಗಲು ಹೇಳಿದ್ದಾರೆಯೋ ಅಥವಾ ಶ್ರೀಕವೀಂದ್ರತೀರ್ಥರು ಅಥವಾ ಶ್ರೀವಾಗೀಶತೀರ್ಥರ ಹೆಸರನ್ನು ಸ್ಮರಣೆ ಮಾಡಿಕೊಂಡು ಹೋಗಲು ಹೇಳಿದ್ದಾರೆಯೋ? ಎದ್ದ ತಕ್ಷಣ ರಾಯರ ಸ್ಮರಣೆ ಮಾಡು ಎಂದೇ ತಾನೆ ನಮಗೆ ಅಮ್ಮ ಹೇಳಿಕೊಟ್ಟಿರುವುದು? ರಾಘವೇಂದ್ರ ಪ್ರಸಾದ ಎನ್ನುವ ಹೆಸರೇ ತೋರಿಸುತ್ತದಲ್ಲ ಯಾರ ಕೃಪೆಯಿಂದ ಹುಟ್ಟಿದವರು ಎಂಬುದಾಗಿ! ರಾಘವೇಂದ್ರ ಪ್ರಸಾದ ಎಂಬ ಹೆಸರನ್ನು ಇಟ್ಟ ಮಾತ್ರಕ್ಕೆ ಶ್ರೀಸತ್ಯಬೋಧತೀರ್ಥರನ್ನು ಅಗೌರವಿಸಿದಂತೆ ಆಯ್ತೇನು? ಇಲ್ಲವಲ್ಲ. ಮಾಧ್ವರು ಮಾತ್ರವಲ್ಲ. ಬ್ರಾಹ್ಮಣೇತರರಲ್ಲಿ ಕೂಡ ೭೫%ಕ್ಕೂ ಹೆಚ್ಚಿನ ಮಕ್ಕಳು ಸಂಸ್ಕಾರವನ್ನು ಕಲಿಯಲು ಪ್ರಾರಂಭಿಸುವುದೇ ಪೂಜ್ಯಾಯ ರಾಘವೇಂದ್ರಾಯ…. ಶ್ಲೋಕದಿಂದ. ಅಲ್ಲವೇ? ಇವರೆಲ್ಲರೂ ಇತರ ಯತಿಗಳನ್ನು ನಿಂದಿಸಿದ ಹಾಗಾಯ್ತೇನು? ಇಲ್ಲವಲ್ಲ?
ಹಾಗೆ ನೋಡಿದರೆ “ಯಾವುದೋ” ಒಂದು ತುಳಸೀ ವೃಂದಾವನವನ್ನು ತೋರಿಸಿ ಎನ್ನುವುದರ ಮೂಲಕ ತುಲಸಿಗೂ ನೀವು ಅವಮಾನಮಾಡುತ್ತಿಲ್ಲವೇನು? ತಾರತಮ್ಯದಲ್ಲಿ ತುಲಸಮ್ಮಳು ರಾಯರಿಗಿಂತ ಮೇಲ್ಮಟ್ಟದವಳು. “ಯಾವುದೋ” ಒಂದನ್ನು ತೋರಿಸಿ ಅದನ್ನೇ ರಾಯರ ವೃಂದಾವನ ಎನ್ನುವ ಪೈಕಿ ಇವರು ಎನ್ನುತ್ತೀರಲ್ಲ. ಏಕ ಕಾಲದಲ್ಲಿ ರಾಯರಿಗೂ, ತುಳಸಮ್ಮನಿಗೂ ಅಗೌರವವಲ್ಲವೇ! ಇದರಿಂದ ಶ್ರೀಮಾಧವತೀರ್ಥ ಶ್ರೀಪಾದರು ಮತ್ತು ಶ್ರೀಟೀಕಾಕೃತ್ಪಾದರು ಸಂತಸಪಡುವರೇ?
ಯಾವುದೋ ಒಂದು ಕಟ್ಟೆಯನ್ನು ತೋರಿಸಿ ರಾಯರ ಮೂಲವೃಂದಾವನ ಅಂತ ಹೇಳುವಷ್ಟು ಅವಿವೇಕ ಇನ್ನೂ ನಮ್ಮಲ್ಲಿ ಮೂಡಿಲ್ಲ. ಮೂಡಿದರೂ ಅದನ್ನು ನಂಬಲು ಕೋಟ್ಯಂತರ ಮಂದಿ ಭಕ್ತರು ಮೂರ್ಖರಲ್ಲ. ಅಷ್ಟರ ಮಟ್ಟಿಗೆ ರಾಯರು ಎಲ್ಲರ ಹೃದಯದ ಮಿಡಿತವಾಗಿದ್ದಾರೆ ಎನ್ನುವುದು ನೆನಪಿದ್ದರೆ ಸಾಕು.
ಎಲ್ಲ ಹರಿದಾಸರುಗಳೂ ಶ್ರೀರಾಯರ ಮೇಲೆ ಅತ್ಯಂತ ಹೆಚ್ಚಿನ ಕೃತಿಗಳನ್ನು ರಚನೆ ಮಾಡಿದ್ದಾರೆ. ಅಂದ ಮಾತ್ರಕ್ಕೆ ಅದು ಇನ್ನಿತರ ಯತಿಗಳ ಮೇಲೆ ಅಗೌರವ ಎಂದಾಯಿತೇನು? ಇಲ್ಲವಲ್ಲ! ಇದೂ ಕೂಡ ಹಾಗೆಯೇ. ರಾಯರ ಸ್ಮರಣೆ ಎಂದ ಮಾತ್ರಕ್ಕೆ ಇತರ ಯತಿಗಳನ್ನು ಅವಹೇಳನ ಮಾಡಿದಂತಾಗಲಿಲ್ಲ. ಇದು ರಾಯರ ಮೇಲಿನ ಅದಮ್ಯ ಪ್ರೇಮವಷ್ಟೇ. ನನಗಿಂತಲೂ ಹೆಚ್ಚು ನಿಮಗೆ ಆ ಪ್ರೇಮದ ಅನುಭವ ಇದ್ದಲ್ಲಿ ಇದೋ ನಿಮಗೆ ನನ್ನ ಹೃದಯಪೂರ್ವಕವಾದ ವಂದನೆಗಳು.
ಸಂಪತ್ ಕುಲಕರ್ಣಿ ಇವರ ಕಮೆಂಟು: ” ಅವರ ಉದ್ದೇಶಗಳು ಹಾಗೂ ಗುರಿಗಳು ಸುಖಾಸುಮ್ಮನೆ ಕಲಹಗಳನ್ನು ತಂದೊಡ್ಡುವುದು. ಭಕ್ತಾಧಿಗಳಲ್ಲಿ ವೈಮನಸ್ಸು ತಂದು ಅಧರ್ಮದ ಕಡೆ ನಡೆಸುವುದು ಹಾಗೂ ಇತರ ಮಠಗಳನ್ನು ದ್ವೇಷಿಸುವುದೇ ಆಗಿರುವುದರಿಂದ ಯಾವ ಪರಂಪರೆ ಹಾಗೂ ಯಾವ ಹಿರಿಯರಿಗೆ ಅನ್ಯಾಯ ಹಾಗೂ ದ್ರೋಹ ಮಾಡಿದರೆ ಏನು ಆಗುವುದು .. ಆದರೆ ಆಗಲಿ ಅವರೇನು ಬಂದು ಯಾಕೆ ಈ ತರ ಮಾಡುತ್ತಿದ್ದಿರಿ ಎಂದು ಪ್ರಶ್ನೆ ಮಾಡುವರೆ ಎಂಬ ಮನಸ್ಥಿತಿ ಉಳ್ಳವರು.”
ಉತ್ತರ : ನೀವು ರಾಯರ ಮಠದ ಇತಿಹಾಸ ಬೇಡ. ಇನ್ನಿತರ ಮಠಗಳ ಇತಿಹಾಸವನ್ನು ಏನೂ ಪೂರ್ವಾಗ್ರಹವಿಲ್ಲದೆ ಓದಿ ಕೊಂಡು ಬನ್ನಿ. ಎಲ್ಲಾದರೂ ನಾವು ಬೇರೆ ಮಠಗಳೊಂದಿಗೆ (ನಿಮ್ಮನ್ನು ಹೊರತುಪಡಿಸಿ) ಜಗಳಮಾಡಿರುವುದರ ಒಂದೇ ಒಂದು ಮಾತು ಇದ್ದರೆ ತೋರಿಸಿ. “ಇನ್ನಿತರ ಮಠಗಳನ್ನು ಅವಹೇಳನ ಮಾಡುವುದೇ ನಮ್ಮ ಗುರಿ” ಎನ್ನುವ ನಿಮ್ಮ ಅಭಿಪ್ರಾಯ, ದ್ವೇಷ ಎನ್ನುವ ಮಾತು, “ಅಧರ್ಮದ ಕಡೆಗೆ ನಡೆಸುವುದು” ಎಂಬ ಹೇಳಿಕೆ, ಕಲಹಪ್ರಿಯರು, ಮಠಾಂಧತೆ, ಪೂರ್ವಗ್ರಹ ಎನ್ನುವ ಎಲ್ಲ ಕಮೆಂಟುಗಳನ್ನು ಅನುಭವರಹಿತರು ಅಥವಾ ನಿಜವಾದ ಅರ್ಥದ ಆಗ್ರಹಪೀಡಿತರು ಮಾತ್ರ ಹೇಳಲು ಸಾಧ್ಯ. ಆದಾಗ್ಯೂ ಈ ಎಲ್ಲ ವಿಶೇಷಣಗಳನ್ನು ನೀವು ನಮಗೆ ಹೇಳುವುದೇ ಆದರೆ ಈ ಕೆಳಗಿನ ಪ್ರಶ್ನೆಗಳಿಗೆ ಚೂರು ಉತ್ತರ ಕೊಡುವ ಪ್ರಯಾಸವನ್ನು ಮಾಡಿ.
  1. ಪೇಜಾವರ ಮಠದ ಶ್ರೀವಿಜಯಧ್ವತೀರ್ಥ ಶ್ರೀಪಾದರ ಬಗ್ಗೆ ನಾವೇನಾದರೂ ಹೇಳಿದ್ದೇವೆಯೇ?
  2. ಶ್ರೀವ್ಯಾಸರಾಜತೀರ್ಥ ಗುರುಸಾರ್ವಭೌಮರ ಬಗ್ಗೆ ನಾವೇನಾದರೂ ಮಾತನಾಡಿದ್ದೇವೆಯೇ?
  3. ಶ್ರೀವಾದಿರಾಜತೀರ್ಥ ಗುರುಸಾರ್ವಭೌಮರ ಬಗ್ಗೆ ಹಗುರವಾಗಿ ಏನಾದರೂ ಹೇಳಿದ್ದೇವೆಯೇ?
  4. ಶ್ರೀಶ್ರೀಪಾದರಾಜತೀರ್ಥರ ಬಗ್ಗೆ ಏನಾದರೂ ಮಾತನಾಡಿದ್ದೇವೆಯೇ?
  5. ವೇದಶಾಖೆಯೊಂದರೆ ಪ್ರವರ್ತಕರಾದ ಯಾಜ್ಞ್ಯವಲ್ಕಾಚಾರ್ಯರ ಬಗ್ಗೆ ಹಗುರವಾಗಿ ಎಲ್ಲಾದರೂ ಮಾತನಾಡಿದ್ದೇವೆಯೇ?
  6. ಅಷ್ಟಮಠಗಳ ವೈಶಿಷ್ಟ್ಯವನ್ನು ಒಪ್ಪಿಕೊಳ್ಳದೆ ಅವುಗಳಿಗೆ ಅಗೌರವ ತೋರುವಂತಹ ಘಟನೆಗಳನ್ನೇನಾದರೂ ಹುಟ್ಟು ಹಾಕಿದ್ದೇವೆಯೇ?
  7. ನಾವಾಗಿಯೇ ನಾವು ನಿಮ್ಮ ಪರಂಪರೆಯ ಯತಿಗಳ ದರ್ಜೆಯನ್ನು ಕೀಳಾಗಿ ಚಿತ್ರಿಸಿ ಪುಸ್ತಕಗಳನ್ನು ಮುದ್ರಿಸಿದ್ದೇವೆಯೇ?
  8. ನಮ್ಮ ಮಠದಿಂದ ಮುದ್ರಿಸಿರುವ ಪುಸ್ತಕಗಳೇನಿದ್ದರೂ ನೀವು ಬರೆದಿರುವ ಪುಸ್ತಕಗಳಿಗೆ ಉತ್ತರಗಳು ಮಾತ್ರ ಎನ್ನುವುದನ್ನು ಒಪ್ಪುತ್ತೀರೋ?
  9. ನಮ್ಮಿಂದಲೇ ವಿದ್ಯೆಯನ್ನು ಸಂಪಾದಿಸಿದವರು ಇವರು ಎಂದು ಇತರ ಮಠೀಯ ಗುರುಗಳ ಬಗ್ಗೆ ಹೇಳಿರುವ ಮಾತು ನಮ್ಮಿಂದ ಎಲ್ಲಾದರೂ ಕೇಳುವುದೋ ನಿಮಗೆ?
  10. ನಿಂತು ಹೋಗಲಿದ್ದ ಉತ್ತರಾದಿಮಠವನ್ನು ನಾವು ಉದ್ಧರಿಸಿದೆವು ಎಂದು ಎಲ್ಲಾದರೂ ಬರೆದಿದೆಯೋ?
ಸಂಪತ್ ಕುಲಕರ್ಣಿ ಕೆಂಭಾವಿ, ಶ್ರೀವತ್ಸ ಜಿ. ಕಶ್ಯಪ, ವಿಜಯವಿಠಲ ಆಯಾಚಿತ, ವಾದಿರಾಜ ಕೆಂಭಾವಿ ಮತ್ತಿತರರ ಹಲವು ಕಮೆಂಟುಗಳಿಗೆ ನಾನು ಈ ಲೇಖನದ ಮೂಲಕ ಉತ್ತರಿಸಿದ್ದೇನೆ ಎಂದುಕೊಳ್ಳುತ್ತೇನೆ. ಆಗ್ರಹವಿಲ್ಲದೆ ಇವುಗಳನ್ನು ಒಪ್ಪಿಕೊಂಡಲ್ಲಿ ಸಂತೋಷ. ಸ್ವೀಕರಿಸದೆ ಮತ್ತೂ ಪ್ರಶ್ನೆಗಳನ್ನೇ ಮಾಡಿ ವಿಜಯವಂತರಾಗಲು ಪ್ರಯತ್ನಿಸಿದಲ್ಲಿ ಅದು ನಿಮ್ಮ ಇಷ್ಟ. ಎಲ್ಲರ ಹೆಸರುಗಳು ನೆನಪಿಲ್ಲ. ಆದರೆ ಕೆಲವರಿಗೆ ಒಳ್ಳೆಯ ಬರವಣಿಗೆಯ ಶೈಲಿಯುಂಟು. ಹರಿವಾಯುಗುರುಗಳ ಕೃಪೆಯನ್ನು ಕೇಳಿಕೊಂಡಲ್ಲಿ ಮಧ್ವಸಾಹಿತ್ಯದ ಸುವಾಸನೆಯನ್ನು ಅವರು ಎಲ್ಲೆಡೆ ಪಸರಿಸಬಲ್ಲರು. ಆಯ್ಕೆ ಅವರಿಗೆ ಬಿಟ್ಟದ್ದು.
ನಮ್ಮ ಮಠದ ವರದೇಂದ್ರ, ಸುಜಯ ಜೋಷಿ, ಶ್ರೀನಿಧಿ ಆಚಾರ್ ಮತ್ತಿರರಿಗೆ ನನ್ನ ಸಲಹೆ ಇಷ್ಟೇ. ವಾದಿರಾಜ ಕೆಂಭಾವಿ ಇವರು ಮಾಡುವ ಪ್ರಶ್ನೆಗಳಿಗೆ ಉತ್ತರಿಸುವುದೇ ಆದಲ್ಲಿ ನೀವುಗಳು ಹೇಳಿದ್ದನ್ನೇ ಹೇಳುವ ಬದಲು, ಎರಡೇ ಸಾಲಿನ ಉತ್ತರ ಕೊಟ್ಟು ನಾಲ್ಕಾರು ದಿನಗಟ್ಟಲೆ ಮಾಯವಾಗುವ ಬದಲು, ಹರ್ಟ್ ಆಗುವಂತಹ ಶಬ್ದವನ್ನು ಬಳಸುವ ಬದಲು ಚೆನ್ನಾಗಿ ವಿವರಣೆ ಇರುವಂತಹ ಉತ್ತರವನ್ನು ಕೊಡಿ. ಒಂದು ಎರಡು ದಿನಗಳ ಹೋಂ ವರ್ಕ್ ಮಾಡಿದರೆ ನಿಮ್ಮ ಪ್ರಯತ್ನಕ್ಕೆ ಬೆಲೆ ಇರುತ್ತದೆ. ನಮ್ಮ ಶ್ರೀಗಳವರು ಮತ್ತು ಪೂಜ್ಯ ಆಚಾರ್ಯರು ಪ್ರಮಾಣದ ಉಲ್ಲೇಖವಿಲ್ಲದೆ ಮಾತು ಇರಲಿ, ಒಂದು ಅಕ್ಷರವನ್ನೂ ಪ್ರಕಟಿಸುವುದಿಲ್ಲ ಎಂಬುದು ನಮಗೆ ನೆನಪು ಇರಬೇಕು. ಅವರ ಹತ್ತಿರ ಇದ್ದೂ ಕೂಡ ನಾವುಗಳು ಹೊರಗಿನವರಿಗೆ ಬಾಲಿಶವಾದ ಉತ್ತರ ಕೊಟ್ಟರೆ ಅದರ ಪರಿಣಾಮ ಹೀಗೆಯೇ ಇರುತ್ತದೆ. ಕೊನೆಯಿಲ್ಲದ ವಾದ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.