Read this article in English here
ಮಾಘಮಾಸದ ಒಂದು ಮುಂಜಾವಿನ ವೇಳೆ, ನಸುಗತ್ತಲಿನ ಸಮಯ, ಮಹಾಮಹಿಮರಾದ ವಿಜಯದಾಸರು ಕೊಳವೊಂದರಲ್ಲಿ ಸ್ನಾನವನ್ನಾಚರಿಸಿ ಜಪದಲ್ಲಿ ತೊಡಗಿದ್ದರು. ಆಗಷ್ಟೇ ಸೂರ್ಯೋದಯವಾಗುತ್ತಿತ್ತು. ಪಕ್ಷಿಗಳ ಇಂಪಾದ ಕಲರವ, ದೂರದಲ್ಲೆಲ್ಲೋ ವೇದಘೋಷ, ಹತ್ತಿರದ ದೇವಾಲಯವೊಂದರಿಂದ ಮೆಲುವಾಗಿ ಕೇಳಿಬರುತ್ತಿರುವ ನಾದಸ್ವರ, ಒಟ್ಟಿನಲ್ಲಿ ರಮಣೀಯ ಮಂಜುಳವಾದ ವಾತಾವರಣ ಎಂತಹವರನ್ನೂ ತನ್ಮಯಗೊಳಿಸುವಂತಿತ್ತು. ವಿಜಯದಾಸರ ಪಕ್ಕದಲ್ಲಿಯೇ ಎಡೆಬಿಡದೆ ಅವರನ್ನು ಸೇವಿಸುತ್ತಿದ್ದ ವಿಜಯದಾಸರ ಮಕ್ಕಳಾದ ಶೇಷಗಿರಿದಾಸರು ಹಾಗೂ ಸಾಕುಪುತ್ರರಾದ ಮೋಹನದಾಸರೂ ಕೂಡಾ ಆಹ್ನೀಕದಲ್ಲಿ ತೊಡಗಿದ್ದರು. ಎಲ್ಲಿಂದಲೋ ಬಂದ ಸುಮಾರು ಐದಾರು ವರ್ಷದ ಪ್ರಾಯದ ಬಾಲಕನೋರ್ವನು ದಾಸರ ಮುಂದೆಯೇ ಪಾವಟಿಗೆಯನ್ನಿಳಿದು ಸರೋವರದ ನೀರಿನಲ್ಲಿ ಆಟವಾಡಲು ಆರಂಭಿಸಿದ. ದಾಸರು ಆ ಬಾಲಕನ ಕಡೆಗೆ ಗಮನವನ್ನೀಯದೆ ಸುಮ್ಮನೆ ಧ್ಯಾನಾಸಕ್ತರಾಗಿದ್ದರು. ನೀರಿನಿಂದ ಮೇಲೆ ಬಂದ ಬಾಲಕನು ದಾಸರನ್ನು ಮೆದುವಾಗಿ ಸ್ಪರ್ಶಿಸಿ ಓಡಿಹೋದ. ಶಾಂತ ಸ್ವರೂಪರಾದ ದಾಸರು, ಆ ಬಾಲಕನ ಅಚಾತುರ್ಯವೆಂದು ಭಾವಿಸಿ, ಪುನಃ ಸ್ನಾನಕ್ಕೆ ಇಳಿದರು, ಸ್ನಾನ ಮುಗಿಸಿ ದಾಸರು ಮೇಲೆ ಬರುವುದಕ್ಕೂ, ಆ ಬಾಲಕ ಪುನಃ ನೀರಿನ ಹತ್ತಿರ ಬರುವುದಕ್ಕೂ ಸರಿಹೋಯಿತು. ತಮ್ಮ ಆಹ್ನೀಕದ ಸ್ಥಳದಲ್ಲಿ ಕೂಡುವುದೇ ತಡ, ಆ ಬಾಲಕನು ದಾಸರ ಎಡೆಗೆ ಸರೋವರದ ನೀರನ್ನು ಚಿಮುಕಿಸಿಬಿಟ್ಟನು, ಮಾಘಮಾಸದ ದಿನಗಳು ಚಳಿಯ ಬಗ್ಗೆ ವಿಶೇಷವಾಗಿ ಹೇಳಬೇಕೇ! ವಿಮಲ ಶಾಂತರಾದ ವಿಜಯದಾಸರು ಪುನಃ ಸ್ನಾನವನ್ನಾಚರಿಸಲು ಸರೋವರದಲ್ಲಿ ಇಳಿದರು, ಪ್ರತಿಯೊಂದು ಬಾರಿ ಸ್ನಾನವನ್ನಾಚರಿಸಿ ದಾಸರು ಮೇಲೆ ಬರುವುದೂ ಆ ಬಾಲಕನು ಎಲ್ಲಿಂದಲೋ ಬಂದು ದಾಸರನ್ನು ಸ್ಪರ್ಶಿಸಿ ಮೈಲಿಗೆಗೊಳಿಸುವುದೂ ಹಲವಾರು ಬಾರಿ ಆಯಿತು.
ಈ ಬಾರಿ ದಾಸರಾಯರು ಸ್ನಾನವನ್ನಾಚರಿಸಿ, ದೇವರ ಪೂಜೆಗೆ ಅಗ್ರೋದಕವನ್ನು ತುಂಬಿಕೊಂಡು ಮೇಲೆ ಹೊರಟರು. ಅಲ್ಲಿಯವರೆಗೆ ಸುಮಾರು ಎಂಟು-ಹತ್ತು ಬಾರಿ ಆ ಕೊರೆಯುವ ಚಳಿಯಲ್ಲಿ ಸ್ನಾನವಾಗಿ ಶ್ರಮವೂ ಆಗಿತ್ತು, ಅಲ್ಲದೇ ತಮ್ಮ ಆರಾಧ್ಯ ದೈವವಾದ ವಿಜಯವಿಠ್ಠಲ ಸ್ವಾಮಿಯ ಪೂಜೆಗೆ ತಡವಾಗುವುದೆಂಬ ಕಳವಳಿಕೆಯಿಂದ ಸರೋವರದಿಂದ ಮೇಲೆ ಬಂದರು. ಪುನಃ ಆ ಬಾಲಕ ಎದುರಾದನು. ಪೂಜೆಗೆ ತಡವಾಗುವುದು ಆದ್ದರಿಂದ ನಮ್ಮನ್ನು ಮುಟ್ಟದಿರೆಂದು ಆ ಬಾಲಕನನ್ನು ಗದರಿದರು. ಸ್ವಾರಸ್ಯ ಘಟಿಸಿದ್ದೇ ಆಗ, ಆ ಬಾಲಕನು ತನ್ನ ಬಾಯಲ್ಲಿ ತುಂಬಿಕೊಂಡಿದ್ದ ನೀರನ್ನು ದಾಸರ ಮೇಲೆ ಉಗುಳಿ “ನಾನು ನಿನ್ನ ಎದುರಿದ್ದಾಗಲೂ ಬೇರೆ ಪೂಜೆಯೇ” ಎಂದು ಅದೃಶ್ಯನಾದನು. ಆ ಉಚ್ಛಿಷ್ಠದ ಸೋಕುವಿಕೆಯಿಂದ ದಾಸರಿಗೆ ತಮ್ಮೊಡನೆ ಅಲ್ಲಿಯವರೆಗೂ ಆಟವಾಡಿದ ಬಾಲಕ ಸಾಮಾನ್ಯಬಾಲಕನಲ್ಲ ಬಾಲಗೋಪಾಲನೆಂದು ನಿಶ್ಚಿತವಾಯಿತು. ಬಿಗಿದ ಕಂಠದಿಂದ ಹತ್ತಿರದಲ್ಲಿಯೇ ಇದ್ದ ಕ್ಷೇತ್ರಮೂರ್ತಿಯ ಆಲಯದೆಡೆಗೆ ಧಾವಿಸಿದರು. ಮುದ್ದಾದ ಬಾಲಗೋಪಾಲನ ಉತ್ಸವವಿಗ್ರಹವನ್ನು ನೋಡುತ್ತಾ ಧಾರಾಕಾರವಾಗಿ ಅಶ್ರು ಸುರಿಸುತ್ತಾ ಮಾತು ಬಾರದೇ ಮೂಕಭಾವದಿಂದ ನಿಂತುಬಿಟ್ಟರು. ಸರೋವರದ ತಡಿಯಲ್ಲಿ ಕಂಡ ಆ ಬಾಲಕನ ರೂಪವು ಉತ್ಸವ ವಿಗ್ರಹದ ಸ್ಥಳದಲ್ಲಿ, ದಾಸರಿಗಲ್ಲದಲೇ ಅಲ್ಲಿದ್ದ ಎಲ್ಲರಿಗೂ ಗೋಚರವಾಯಿತು. ಭೋರ್ಗರೆವ ಭಕ್ತಿ ರಸ ಪ್ರವಾಹವು ದಾಸರಾಯರ ಮುಖದಿಂದ ಕೀರ್ತನೆಯಾಗಿ ಹೊರಹೊಮ್ಮಿತು.
ಆ ದೇವರನಾಮವಾದರೋ ಹೀಗಿದೆ.
ರಾಗ : ತೋಡಿ ಆದಿತಾಳ
ಮಾತನ್ನಾಡೈ ಮನ್ನಾರಿ ಕೃಷ್ಣ ಮಾತನ್ನಾಡೈ |
ದಾತನು ನೀನೆಂದು ಬಯಸಿ ಬಂದೆನು ಮಾತನ್ನಾಡೈ || ಪ||
ಊದುವ ಸಿರಿಪೊಂಗೊಳಲೋ |ಜಗ| ದಾಧಾರದ ನಿಜಹೊಳಲೋ |
ಪಾದದ ಪೊಂಗೆಜ್ಜೆ ಘಳಿಲೋ | ಸರ್ವ | ವೇದಗಳರಸುವ ಮಹಿಮೆಯ ತಳಲೋ ||೧||
ಕಸ್ತೂರಿ ಮಾಯದ ಮೃಗವೋ | ಮುಕುಟಾ | ಮಸ್ತಕದಲಿ ಝಗಜಗವೋ ||
ವಿಸ್ತರದಲಿ ಪೊಕ್ಕ ಜಗವೋ | ಪರ | ವಸ್ತುವೆ ನಂದ ಯಶೋದೆಯ ಮಗುವೋ ||೨||
ಆನಂದ ಜ್ನಾನದ ಹೃದವೋ | ಶುದ್ಧ | ಮಾನವರಿಗೆ ಬಲು ವೃದವೋ ||
ಆನನ ಛವಿಯೊಳ್ ವಿಧುವೋ | ಪಾಪ | ಕಾನನ ದಹಿಸುವ ಪಾವಕ ಪದವೋ ||೩||
ನವನೀತ ಪಿಡಿದ ಕರವೋ | ನವ | ನವಮೋಹನದ ಶೃಂಗಾರವೋ |
ಅವನಿತದಾ ಸುರತರುವೋ | ದೇವ | ರವಿಯಂದುಂಗುರವಿಟ್ಟು ತೂಗುವ ಭರವೋ ||೪||
ತ್ರಿಜಗವ ನಿರುತ ಪಾಲಕನೋ | ಪಂ | ಕಜನೇತ್ರಳ ನಾಯಕನೋ |
ಅಜಭವಾದಿಗಳ ಜನಕನೋ | ನಮ್ಮ | ವಿಜಯವಿಠ್ಠಲ ( ಕವರತನೊ) ರೇಯ ಯದುಕುಮಾರಕನೋ ||೫||
ಶ್ರೀ ವಿಜಯದಾಸರ ಜೊತೆಗೆ ಇಂತಹ ಲೀಲಾವಿನೋದವನ್ನು ತೋರಿದ ಶ್ರೀ ಕೃಷ್ಣನ ಸನ್ನಿಧಿ, ದಕ್ಷಿಣ ಭಾರತದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಕುಂಭಕೋಣ ಕ್ಷೇತ್ರಕ್ಕೆ ಹತ್ತಿರದಲ್ಲಿ ಇರುವ ರಾಜಮನ್ನಾರುಗುಡಿ ಪಟ್ಟಣದಲ್ಲಿದೆ. ಇಲ್ಲಿನ ಕ್ಷೇತ್ರಮೂರ್ತಿ ಶ್ರೀ ರಾಜಗೋಪಾಲಸ್ವಾಮಿಯ ಉತ್ಸವ ವಿಗ್ರಹವು ಜನಾಕರ್ಷಣೆಯ ಕೇಂದ್ರ ಬಿಂದುವಾಗಿದೆ. ಒಂದುಕೈಯಲ್ಲಿ ಚಾವಟಿ ಹಾಗೂ ಇನ್ನೊಂದು ಕೈಯ್ಯಲ್ಲಿ ಗೋವಳರು ಉಪಯೋಗಿಸುವ ದೊಣ್ಣೆಯನ್ನು ಧರಿಸಿ ರುಕ್ಮಿಣೀ ಸತ್ಯಭಾಮಾ ಸಮೇತನಾದ ಮನೋಹರರೂಪವನ್ನು ಇಲ್ಲಿ ಕಾಣಬಹುದಾಗಿದೆ. ದಾಸರಾಯರು ಅನುಷ್ಠಾನ ಮಾಡುತ್ತಿದ್ದ ತೀರ್ಥವು ತುಂಬಾ ವಿಸ್ತಾರವಾದ ತಟಾಕವಾಗಿದ್ದು, ಹರಿದ್ರಾ ತೀರ್ಥವೆಂದು ಕರೆಯುತ್ತಾರೆ. ಇಂದಿಗೂ ಹರಿದಾಸಕೂಟಸ್ಥರೆಲ್ಲರೂ ಈ ಸ್ಥಳವನ್ನು ದರ್ಶಿಸಿ ಪುಳಕಿತರಾಗುತ್ತಾರೆ. ವಿಜಯದಾಸರಿಗೆ ತೋರಿದ ಮಹಿಮೆಯನ್ನು ಪುನಃ ಪುನಃ ಸ್ಮರಿಸಿ ಭಾವುಕರಾಗುತ್ತಾರೆ. ದಾಸಸಾಹಿತ್ಯದ ಬೀಡಾದ ರಾಯಚೂರು ಸೀಮೆಯ ಹಳೆಯ ತಲೆಮಾರಿನ ವೃದ್ಧ-ವೃಧ್ಧೆಯರು ತಮ್ಮ ಮುಂದಿನ ತಲೆಮಾರಿನವರಿಗೆ ಈ ಕಥೆಯನ್ನು ಕೀರ್ತನೆಯೊಂದಿಗೆ ಹೇಳಿ ಸಂತೋಷ ಪಡುತ್ತಿದ್ದ ಪ್ರಸಂಗಗಳನ್ನು ನಾನು ಕಣ್ಣಾರೆ ನೋಡಿದ್ದೇನೆ. ಸುಮಾರು ೨-೩ ವರ್ಷಗಳಾದರೂ ಮಗುವಿಗೆ ಮಾತು ಬಾರದೇ ಹೋದಲ್ಲಿ ಈ ದೇವರನಾಮವನ್ನು ತಾಯಂದಿರು ಹೇಳಿಕೊಳ್ಳುತ್ತಿದ್ದ ಸಂಪ್ರದಾಯವು ಇನ್ನೂ ಇರುವುದುಂಟು.
ದಕ್ಷಿಣ ಭಾರತದ ಯಾತ್ರೆಗೆ ಹೋಗುತ್ತಿದ್ದಲ್ಲಿ ಮರೆಯದೇ ಮನ್ನಾರುಗುಡಿ ಕ್ಷೇತ್ರವನ್ನೊಮ್ಮೆ ದರ್ಶಿಸಿ, ಖಂಡಿತವಾಗಿ ಅಲೌಕಿಕ ಹಾಗೂ ಶಬ್ದಗಳಿಗೆ ಮೀರಿದ ಅನುಭವ ನಿಮಗಾಗುವುದು.
- ಈ ದೇವರನಾಮವನ್ನು, ವರದೇಂದ್ರಹರಿದಾಸಸಾಹಿತ್ಯಮಂಡಲದ ಪ್ರಕಟಣೆಗಳು ಹಾಗೂ ನನ್ನ ಹಸ್ತಪ್ರತಿ ಸಂಗ್ರಹದಿಂದ ತೆಗೆದುಕೊಂಡಿದ್ದೇನೆ.
- ಹಿಂದೂಸ್ತಾನಿ ಶೈಲಿಯಲ್ಲಿ ಈ ದೇವರ ನಾಮವನ್ನು ಕೇಳಬೇಕೆಂದಿದ್ದಲ್ಲಿ ಇಲ್ಲಿ ಕ್ಲಿಕ್ಕಿಸಿ
ಮನ್ನಾರುಗುಡಿ ಶ್ರೀರಾಜಗೋಪಾಲಸ್ವಾಮಿಯನ್ನು ಧ್ಯಾನಿಸುತ್ತಾ ಶ್ರೀವಿಜಯದಾಸರು ರಚಿಸಿರುವ ಕೀರ್ತನೆ ಮತ್ತು ಅದರ ಹಿನ್ನಲೆಯನ್ನು ಕೇಳಿ ತು೦ಬಾ ಸ೦ತೋಷವಾಯಿತು. ಸ೦ಪೂರ್ಣ ಮಾಹಿತಿಯನ್ನು ನೀಡಿದ ತಮಗೆ ಹೃದಯಪೂರ್ವಕ ಧನ್ಯವಾದಗಳು.
ಧನ್ಯೋಸ್ಮಿ !!… ಶ್ರೀಗುರು ರಾಯರು ರಚಿಸಿದ ಶ್ರೀರಾಜಗೋಪಾಲಸ್ತುತಿ ತಕ್ಷಣ ಸ್ಮತಿಪಟಲಕ್ಕೆ ಬ೦ದೊದಗಿ ಶ್ರೀಹರಿಸ್ಮರಣೆ ಮಾಡುವ೦ತಾಯಿತು
“ಮದರಾಘವೇ೦ದ್ರತೀರ್ಥವಿರಚಿತ ಶ್ರೀರಾಜಗೋಪಾಲಸ್ತುತಿ”
ಶ್ರೀರಾಘವೇ೦ದ್ರತೀರ್ಥರು ಸ೦ಚಾರತ್ವೇನ ತೀರ್ಥಯಾತ್ರೆಗೆ ಹೂರಡುವಾಗ, ಮಾರ್ಗ ಮಧ್ಯದಲ್ಲಿ ಚ೦ಪಕಾರಣ್ಯದ ಸ್ವಾಮಿಯಾದ ಶ್ರೀರಾಜಗೋಪಾಲಸ್ವಾಮಿಯ ಮನ್ನಾರುಗುಡಿ ಎ೦ಬ ಉತ್ತಮ ಕ್ಷೇತ್ರವನ್ನು ತಲುಪಿದರು. ಆ ಮನ್ನಾರುಗುಡಿಯಲ್ಲಿ ಸ್ವಾಮಿಯನ್ನು ದರ್ಶನ ಮಾಡಿ ಬಹುಕಾಲ ವಾಸಮಾಡಿದಾಗ ಪರಿಪೂರ್ಣನಾದ ಭಕ್ತಿಪ್ರವಾಹದ ಕಾಲುವೆ ಎ೦ಬ ಭ್ರಾ೦ತಿಯನ್ನು೦ಟುಮಾಡುವ ಪರಿಣತರಾದ ಭಕ್ತಜನರ ಚಿತ್ತಗಳಿಗೆ ಸ೦ತೋಷವನ್ನು೦ಟುಮಾಡುವ ವಾಕ್ಯಗಳ ಜೋಡಣೆಗಳಿ೦ದ ಈ ರಾಜಗೋಪಾಲ ಶ್ರೀ ಕೃಷ್ಣನನ್ನು ಕುರಿತು ಈ ರೀತಿಯಾಗಿ ಸ್ತುತಿಸಿದರು.
ಹೃದಿ ಬೋಧದುಗ್ಧರಸವಾಸಕೃತೇ ಪರಿನಿರ್ಮಿತಾವಿವ ಪಯೋಜತಲ್ಲಜೌ |
ಅಪವರ್ಗಮಾರ್ಗಪರಿಬೋಧನಾಯ ಮೇ ಚರಣೌ ತವೇಶ ಕಿಮು ಚಿಹ್ನಪಲ್ಲವೌ || ೧ ||
ನೀರಿನಿ೦ದ ಹುಟ್ಟಿದ ಕಮಲವು ನೀರನ್ನು ಸುವಾಸಿತಗೂಳಿಸುವ೦ತೆ ಧ್ಯಾನ ಜಲದಿ೦ದ ಆವಿರ್ಭಾವ ಹೂ೦ದಿದ ಪರಮಾತ್ಮನ ಪಾದಕಮಲವು ಧ್ಯಾನಜಲವನ್ನು ಸುವಾಸಿತಗೂಳಿಸುತ್ತದೆ. ಮೊದಲು ದಾರಿಯಲ್ಲಿ ನಡೆಯುವವರು ಹಿ೦ದಿನಿ೦ದ ಬರುವವರಿಗೆ ದಾರಿ ತಿಳಿಯಲೆ೦ದು ದಾರಿಯಲ್ಲಿ ಅಲ್ಲಲ್ಲಿ ಗುರುತಿಗೋಸ್ಕರ ಚಿಗುರೆಲೆ ಮು೦ತಾದ್ದನ್ನು ಇಟ್ಟು ಈ ದಾರಿಯಲ್ಲೇ ಬರಬೇಕೆ೦ದು ಸೂಚಿಸುವ೦ತೆ ಶ್ರೀರಾಘವೇ೦ದ್ರತೀರ್ಥರಿಗೂ ಮೋಕ್ಷಮಾರ್ಗವನ್ನು ಕ್ರಮಿಸಲು ಗುರುತಿಗಾಗಿ ಇಟ್ಟಿರುವ ಚಿಗುರೆಲೆಯ ಗೊ೦ಚಲುಗ೦ಳ೦ತೆ ಶ್ರೀಕೃಷ್ಣನ ಎರಡು ಪಾದಗಳಿರುವುವು.(ಸ್ವಾಮಿಯ ಎರಡು ಪಾದಗಳನ್ನು ವರ್ಣಿಸಿದ್ದಾರೆ).
ಉಪರಿಶ್ರಿತೇನ ಪುರತಶ್ಚ ನಶ್ವರವ್ಯವಹಾರದೂರಗಗಿರಾಮನಾರತಮ್ |
ಪ್ರಣವದ್ವಯೇನ ಮಣಿನೂಪುರಾತ್ಮನಾ ಪರಿಕರ್ಮಿತೇ ತವ ಪದೇ ಪದೇ ಮುದಾಮ್ || ೨ ||
ವೇದಮ೦ತ್ರಗಳ ಆದ್ಯ೦ತದಲ್ಲಿ ನಿತ್ಯವಾಗಿರುವ ಎರಡು ಓ೦ಕಾರಗಳು ನಿನ್ನ ಪಾದಗಳಲ್ಲಿರುವ ರತ್ನಖಚಿತವಾದ ಎರಡು ಗೆಜ್ಜೆಗಳ ರೂಪದಲ್ಲಿದೆ (ಪಾದಗಳಲ್ಲಿರುವ ಗೆಜ್ಜೆಗಳು ಓ೦ಕಾರದ೦ತೆ ಕಾಣುತ್ತಿವೆ). ಸಚ್ಚಿದಾನ೦ದಾತ್ಮಕವಾದ ನಿನ್ನ ಪಾದಗಳು ಭಕ್ತರಿಗೆ ನಿತ್ಯಾನ೦ದಪ್ರದವಾಗಿವೆ. ಪರಮಾತ್ಮನು ಓ೦ಕಾರ ಪ್ರತಿಪಾದ್ಯನು. ಪರಮಾತ್ಮನಿಗೂ ಅವನ ಅವಯವಗಳಿಗೂ ಇರುವ ಅಭೇದವನ್ನು ತಿಳಿಸಲಾಗಿದೆ.
ರುಚಿವಾರಿಪೂರರುಚಿತ೦ ಭುಜಾ೦ತರ೦ ಶಿಶಿರ೦ ತಟಾಕಮವಗಾಹ್ಯ ತಾವಕಮ್ |
ತ್ಯಜತಿ ಶ್ರಮ೦ ವ್ರಜತಿ ಹರ್ಷಮದ್ಯ ಮೇ ಭವಘರ್ಮತಾಪಮಪನೀಯ ದೃಗ್ಗವೀ || ೩ ||
ಯಾವುದಾದರೂ೦ದು ಪ್ರಾಣಿಯು ಜಲಪ್ರವಾಹದಿ೦ದ ತು೦ಬಿ ಮನೋಹರನಾದ ಹಾಗೂ ತ೦ಪಾದ ಸರೋವರವನ್ನು ಕ೦ಡರೆ ಅಲ್ಲಿಳಿದು ಸ್ನಾನ ಮಾಡಿ ಬೇಸಿಗೆಯ ಸೆಕೆಯಿ೦ದ ಉ೦ಟಾದ ತಾಪವನ್ನು ಕಳೆದುಕೊ೦ಡು ಸ೦ತೋಷ ಹೊ೦ದುತ್ತದೆ. ಅದರ೦ತೆ ಪರಮಾತ್ಮನ ವಿಶಾಲವೂ ಸು೦ದರವೂ ಆದ ವಕ್ಷಸ್ಥಳವನ್ನು ನೋಡಿ ಗುರುವರ್ಯರು ಸ೦ಸಾರ ತಾಪವನ್ನು ಕಳೆದುಕೊ೦ಡು ಆನ೦ದವನ್ನು ಹೊ೦ದಿದರು.
ಅರುಣಾಧರ೦ ತರುಣಚ೦ದ್ರಸು೦ದರ೦ ಕರುಣಾಧರ೦ ವದನಮೀಶ ತಾವಕಮ್ |
ಸ್ಮಿತಕಾ೦ತಿಪೂರನವಚ೦ದ್ರಿಕಾಭರೈಃ ಭವಶಾರ್ವರ೦ ಕ್ಷಿಪತಿ ಭವ್ಯಚೇತಸಾಮ್ || ೪ ||
ಹೇ, ರಾಜಗೋಪಾಲಸ್ವಾಮಿಯೇ ! ಕೆ೦ಪಾದ ಕೆಳ ತುಟಿಯುಳ್ಳ, ಪೂರ್ಣಚ೦ದ್ರನ೦ತೆ ಸು೦ದರವಾದ, ಭಕ್ತರಲ್ಲಿ ಕರುಣಾಪೂರ್ಣವಾದ ನಿನ್ನ ಮುಖವು, ಮ೦ದಹಾಸದ ಕಾ೦ತಿಗಳ ಪ್ರವಾಹವೆ೦ಬ ಬೆಳದಿ೦ಗಳಿನ ಸಮೂಹಗಳಿ೦ದ ಮುಮುಕ್ಷಗಳ ಸ೦ಸಾರವೆ೦ಬ ಕತ್ತಲೆಯನ್ನು ಪರಿಹರಿಸುತ್ತದೆ. (ಸ್ವಾಮಿಯ ಮುಖಾರವಿ೦ದವನ್ನು ವರ್ಣನೆ ಮಾಡುತ್ತಿದ್ದಾರೆ).
ಪರಿತಃ ಸ್ಥಿತೇಽಪಿ ಚಿಕುರೌಘಶಾರ್ವರೈಃ ವಿಲುಠದ್ಭಿರಾನನವಿಧೌ ವಿಭಾವಿತೇ |
ತಿಲಕೇನ ನದ್ಧಕುಲಕೇನ ಸಾದರ೦ ನ ಹಿ ವೇತ್ತಿ ಬಾಲತಮವತ್ಯುದಾರಗೀಃ || ೫ ||
ಶ್ರೀಗೋಪಾಲಕೃಷ್ಣನ ಮುಖದ ಮೇಲೆಲ್ಲ ಕಪ್ಪಾದ ಗು೦ಗುರು ಕೂದಲುಗಳು ಬಿದ್ದಿರುವುದರಿ೦ದ ಮುಖವು ಪೂರ್ಣವಾಗಿ ಕಾಣದಿದ್ದರೂ ಹಣೆಯ ಮೇಲಿಟ್ಟ ತಿಲಕದಿ೦ದ ಇದು ಶ್ರೀರಾಜಗೋಪಾಲಕೃಷ್ಣನ ಮುಖ ಎ೦ದು ಸ್ವಲ್ಪವಾದರೂ ಮುಖದ ಜ್ಞಾನವಾಗುತ್ತದೆ. ಆದರೆ ” ಯತೋ ವಾಚೋ ನಿವರ್ತ೦ತೇ ಅಪ್ರಾಪ್ಯ ಮನಸಾ ಸಹ ” ಎ೦ದ೦ತೆ ಅಪೌರುಷೇಯವಾದ ವೇದವಾಕ್ಯಗಳು ನಿನ್ನನ್ನು ಇನಿತೂ ತಿಳಿಯಲು ಸಮರ್ಥವಾಗುವುದಿಲ್ಲ.
ಅಲಕಾವೃತಾಲಿಕಮುದಾರಮುನ್ನಸ೦ ಸ್ಮಿತಪುಲ್ಲಗ೦ಡತಲಮುಲ್ಲಸನ್ಮುಖಮ್ |
ದರವಾಮಭಾಗನತಮೌಲಿಮೋಹನ೦ ತವ ದೇವ ನೈವ ಹೃದಯ೦ ಜಹಾತು ಮೇ || ೬ ||
ಹೇ ಸ್ವಾಮಿಯೇ ಗು೦ಗುರು ಕೂದಲುಗಳಿ೦ದ ಸುತ್ತುವರಿಯಲ್ಪಟ್ಟ ಎತ್ತರವಾದ ಮೂಗುಳ್ಳ, ಮ೦ದಹಾಸದಿ೦ದ ವಿಕಸಿತವಾದ ಕಪೋಲಪ್ರದೇಶವುಳ್ಳ, ಎಡಭಾಗದಲ್ಲಿ ಸ್ವಲ್ಪ ಬಾಗಿದ ತಲೆಯಿ೦ದ ಮನೋಹರವಾಗಿರುವ, ಶೋಭಿಸುತ್ತಿರುವ ನಿನ್ನ ಶ್ರೇಷ್ಠವಾದ ಮುಖವನ್ನು ನನ್ನ ಮನಸ್ಸು ಯಾವಾಗಲೂ ಸ್ಮರಿಸುತ್ತಿರಲಿ.
ಈ ರೀತಿಯಾಗಿ ಶ್ರೀರಾಘವೇ೦ದ್ರತೀರ್ಥರು ಕಣ್ಣೀರಿನಿ೦ದಾಗಿ ಬಿಗಿದ ಕ೦ಠದಿ೦ದ ಅಕ್ಷರಗಳು ಸ್ಖಲಿಸುತ್ತಿರಲು ಬಹಳ ಗ೦ಭೀರವಾಗಿ ಮತ್ತು ಹರ್ಷಾತಿರೇಕದಿ೦ದ ಶೋಭೆಯನ್ನು ಹೂ೦ದಿದ ಕ೦ಠವುಳ್ಳವರಾಗಿ ಶ್ರೀರಾಜಗೋಪಾಲಸ್ವಾಮಿಯನ್ನು ಭಕ್ತಿಪೂರ್ಣ ನಮನಗಳಿ೦ದ ಸ್ತುತಿಯನ್ನು ಮುಗಿಸಿ, ರಾಮಸೇತುವನ್ನು ನೋಡಲು ಉತ್ಸುಕರಾಗಿ ಸ೦ಚಾರವನ್ನು ಮು೦ದುವರಿಸಿ ರಾಮಸೇತುವನ್ನು ತಲುಪಿದರು.
||ಶ್ರೀ ಭಾರತೀರಮಣ ಮುಖ್ಯಪ್ರಾಣಾ೦ತರ್ಗತ ಶ್ರೀಕೃಷ್ಣಾರ್ಪಣಮಸ್ತು ||
Courtesy: Sri N.D. Aprameya Neerathadi, Jagaluru.