ನವರಾತ್ರಿಯಲ್ಲಿ ಶ್ರೀನಿವಾಸರಾಯನ ದರ್ಶನ – 7
ಇಂದಿನ ದರ್ಶನ : ಹಲಸಿನ ತೋಪಿನ ಶ್ರೀನಿವಾಸ – ಪಣಸಖಂಡೆ ಮಠ, ಗೋವಾ
ದಕ್ಷಿಣಗೋವಾದ ದಟ್ಟಕಾಡಿನಲ್ಲಿ ಸಾವಿರಾರು ಹಲಸಿನ ಮರಗಳ ತೋಪು ಒಂದಿತ್ತು. ಈ ತೋಪಿನ ಒಂದು ಭಾಗದಲ್ಲಿ ಒಂದು ದೊಡ್ಡ ಮಣ್ಣದಿಬ್ಬವೂ. ದಿಬ್ಬದಿಂದ ಸ್ವಲ್ಪವೇ ದೂರದಲ್ಲಿ ಗಾಳಿಬಾಗ್ ಎನ್ನುವ ಸ್ವಚ್ಛವಾದ ನದಿಯೂ ಇವೆ. ದಿಬ್ಬವೂ ನದಿಯೂ ಈಗಲೂ ಇವೆ. ಸಾವಿರಾರು ಹಲಸಿನ ಮರಗಳಲ್ಲಿ ಸಾವಿರಾ ಅನ್ನುವುದು ಮಾತ್ರ ಕಾಣೆಯಾಗಿದೆ. ಬೆರಳೆಣಿಕೆಯ ಹಲಸು ಮರಗಳು ಉಳಿದಿವೆ. ಆದರೂ, ಈಗಲೂ ಈ ಪ್ರದೇಶವು ಒಳ್ಳೆ ಹಸಿರಿನಿಂದ ಕೂಡಿದ ದಟ್ಟ ಅರಣ್ಯವೇ.
ಹೀಗೆ ಹಲಸಿನ ಮರಗಳ ತೋಪು ಇಲ್ಲಿದ್ದಾಗ ಇದಕ್ಕೆ ಪಣಸಖಂಡೆ ಎಂದು ಕೊಂಕಣಿಯಲ್ಲಿ ಅಲ್ಲಿನ ಸಜ್ಜನರು ಕರೆದರು. ಪಣಸ ಎಂದರೆ ಹಲಸಿನಹಣ್ಣು ಎಂದೂ, ಖಂಡ ಎಂದರೆ ಪ್ರದೇಶ ಎಂದೂ ಅರ್ಥ (ಉತ್ತರಾಖಂಡ, ಬುಂದೇಲ್ ಖಂಡ ಇದ್ದಂತೆ)
ಈ ದಿಬ್ಬದ ಮೇಲೆ ಒಂದು ಪ್ರಾಚೀನವಾದ ಮಠವಿದೆ. ಮಾಧ್ವ ಸಂಪ್ರದಾಯದ ಮಠವಿದು. ಪಣಸಖಂಡದಲ್ಲಿ ಇರುವುದರಿಂದ ಪಣಸಖಂಡೆ ಮಠ ಎಂದೇ ಹೆಸರು ಇದಕ್ಕೆ. ಈ ಮಠಕ್ಕೆ ಪರ್ತಗಾಳಿ ಶ್ರೀಜೀವೋತ್ತಮ ಮಠವೇ ಸಾಂಪ್ರದಾಯಿಕ ಅಮ್ಮನು. ಈ ಮಠದಲ್ಲಿ ಶ್ರೀಶ್ರೀನಿವಾಸ ದೇವರ ಗುಡಿಯನ್ನು ಹಿರಿಯರು ಕಟ್ಟಿಕೊಂಡರು.
ಶ್ರೀನಿವಾಸದೇವರು ಪುಟ್ಟಗಾತ್ರದವರು. ಥಟ್ಟನೆ ಮುಖವನ್ನು ನೋಡಿದರೆ ವಿಠಲನ ನೆನಪಾಗುತ್ತದೆ. ಗುಂಡುಗುಂಡಾಗಿ ಬಹಳ ಮುದ್ದಾಗಿದ್ದಾನೆ ಶ್ರೀನಿವಾಸಪ್ರಭುವು. ಪ್ರತಿನಿತ್ಯ ತಂತ್ರಸಾರೋಕ್ತ ಪೂಜೆಯು ಸಲ್ಲುತ್ತದೆ.
ಪ್ರತಿಷ್ಠಾಪನೆಯನ್ನು ಯಾರು ಮಾಡಿದರು ಎನ್ನುವ ಬಗ್ಗೆ ಕರಾರುವಾಕ್ಕು ವಿವರಗಳು ಈಗಿನ ಅರ್ಚಕರಲ್ಲಿ ಇಲ್ಲ. ಬಹಳ ಹಳೆಯದು, ೩-೪ ನೇ ತಲೆಮಾರಿನವರು ನಾವು ಪೂಜೆ ಮಾಡುತ್ತಿರುವುದು ಎಂದಷ್ಟೇ ಹೇಳುತ್ತಾರೆ. ಗೋವೆಯ ಹೆಚ್ಚಿನ ಮಾಧ್ವರಂತೆ ಪಣಸಖಂಡೆ ಮಠದ ಅರ್ಚಕರು ಸಹ ಶ್ರೀಪರ್ತಗಾಳಿ ಮಠದ ಸಂಪ್ರದಾಯಶೀಲರು. ಪರ್ತಗಾಳಿ ಮೂಲಮಠಕ್ಕೆ ಇಲ್ಲಿಂದ ಹತ್ತೇ ನಿಮಿಷದ ಹಾದಿಯು. ಈ ಅಂಶಗಳನ್ನು ಗಮನಿಸಿದರೆ ಶ್ರೀಪರ್ತಗಾಳಿ ಜೀವೋತ್ತಮ ಮಠದ ಅಂದಿನ ಯತಿಗಳು ಇದನ್ನು ಪ್ರತಿಷ್ಠಾಪನೆ ಮಾಡಿದ್ದಾರೆ ಎಂದು ಸ್ಪಷ್ಟವಾಗಿ ಹೇಳಬಹುದು.
ದೇವಸ್ಥಾನವು ಸುಮಾರು 250-300 ವರ್ಷಗಳಷ್ಟು ಹಳೆಯದು. ಶಿಲಾಮಯವಾದ ದೇವಾಲಯವಿದಲ್ಲ. ಗೋಥಿಕ್ ಶೈಲಿಯ, ದೊಡ್ಡ ದೊಡ್ಡ ಕಂಬಗಳು ಮತ್ತು ಕಮಾನುಗಳನ್ನು ಉಳ್ಳ ಗಾರೆಯ ಕಟ್ಟಡವಿದು. ನೋಡಲು ಬಹಳ ಆನಂದವಾಗುತ್ತದೆ. ಗೋವಾದ ದಕ್ಷಿಣಭಾಗದಲ್ಲಿರುವ ಸನಾತನಿಗಳು ಇಲ್ಲಿ ಬಂದು ಶ್ರೀಶ್ರೀನಿವಾಸನ ದರ್ಶನವನ್ನು ಪಡೆದು, ತಮ್ಮ ತಮ್ಮ ಧಾರ್ಮಿಕ ಅವಶ್ಯಕತೆಗಳನ್ನು ಪೂರೈಸಿಕೊಂಡು ಹೋಗುವ ಪದ್ಧತಿಯಿದೆ. ವಿಶೇಷ ಸೇವೆಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಅರ್ಚಕರಿಗೆ ಮೊದಲೇ ತಿಳಿಸಿದ್ದಲ್ಲಿ ತೀರ್ಥಪ್ರಸಾದಕ್ಕೆ ವ್ಯವಸ್ಥೆಯನ್ನು ಮಾಡುತ್ತಾರೆ.
ಗರ್ಭಗೃಹವನ್ನು ವಿವಿಧ ಕಾಲಘಟ್ಟಗಳಲ್ಲಿ ಎರಡು ಮೂರುಬಾರಿ ನವೀಕರಿಸಿದ್ದಾರೆ. 2023ರ ಲ್ಲಿ ಮತ್ತೊಮ್ಮೆ ನವೀಕರಿಸಿದ್ದು, ಶ್ರೀಶ್ರೀಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀಶ್ರೀವಿದ್ಯಾಧೀಶತೀರ್ಥರು ಬಿಂಬದ ಪುನಃಪ್ರತಿಷ್ಠಾಪನೆಯನ್ನು ಮಾಡಿದ್ದಾರೆ.
ಮಾರ್ಗಶಿರ ಶುಕ್ಲ ಪಂಚಮಿಯಂದು ಶ್ರೀದೇವರ ವಾರ್ಷಿಕ ಉತ್ಸವವು ನಡೆಯುತ್ತದೆ.
ಕಾರವಾರದ ದಿಕ್ಕಿನಿಂದ ನೀವೇನಾದರೂ ಗೋವೆಯನ್ನು ಪ್ರವೇಶಿಸುತ್ತಿದ್ದಲ್ಲಿ ನಿಮ್ಮ ಸಂಧ್ಯಾವಂದನೆ ಮತ್ತು ಜಪಕ್ಕೆ ಹೇಳಿ ಮಾಡಿಸಿದಂತಹ ಕ್ಷೇತ್ರವಿದು. ಎಲ್ಲ ಅನುಕೂಲಗಳೂ ಇವೆ.
ಈ ಮಠವು ಇರುವ ಊರಿನ ಹೆಸರು ಪೈಂಗ್ಣೀ ಎಂದು. ಕಾಣಕೋಣ ತಾಲ್ಲೂಕಿನಲ್ಲಿದೆ. ಕೊಚ್ಚಿನ್-ಪನ್ವೇಲ್ ಹೆದ್ದಾರಿಯಲ್ಲಿ ಮಾಶೆಂ ಎನ್ನುವ ಊರಿನಲ್ಲಿ ಕೇಳಿದರೆ ಈ ಮಠಕ್ಕೆ ದಾರಿಯನ್ನು ತೋರಿಸುತ್ತಾರೆ.
ಶ್ರೀಶ್ರೀನಿವಾಸದೇವರ ಚಿತ್ರದ ಕೃಪೆ : ಪ್ರಸಾದ್ ವಾಮನ ಭಟ್, ಪಣಸಖಂಡೆ ಮಠ.
Be First to Comment