ಸೂಚನೆ: ಈ ಲೇಖನ ಕರ್ಮಾಚರಣೆಯಲ್ಲಿ ಆಸಕ್ತಿ ಇರುವವರಿಗೆ ಮಾತ್ರ.
ಈ ಕಾಲದಲ್ಲಿ ಧರ್ಮ ಗಿರ್ಮ ಅನ್ನುತ್ತ ಕೂತರೆ ಜೀವನ ನಡೆಯೋದು ಕಷ್ಟ ಅಂತ ನಿಮ್ಮ ಅಭಿಪ್ರಾಯವಿದ್ದಲ್ಲಿ ಈ ಲೇಖನವನ್ನು ಒಮ್ಮೆ ನಿಧಾನವಾಗಿ (ಹೌದು! ನಿಧಾ……ನವಾಗಿ) ಓದಿ. ಆಹಾರದ ವಿಷಯದಲ್ಲಿ ಧರ್ಮವು ಏನು ಹೇಳುತ್ತದೆ ಎಂದು ತಿಳಿಸುವುದಷ್ಟೇ ಈ ಲೇಖನದ ಉದ್ದೇಶ. ಈ ಲೇಖನದ ಆಶಯವನ್ನು ಕ್ರಿಯಾರೂಪಕ್ಕೆ ತರುವುದು ಅಥವಾ ಬಿಡುವುದು ನಿಮ್ಮ ಮನಸ್ಸಿನ ಆಯ್ಕೆಗೆ ಬಿಟ್ಟದ್ದು.
ದೇಹವೇ ಭಗವಂತನ ನಿವಾಸ, ನಾವು ಈ ದೇಹೆಂದ್ರಿಯಗಳಿಂದ ಮಾಡುವ ಪ್ರತಿಯೊಂದು ಚಟುವಟಿಕೆಯೂ ಆತನ ಪೂಜೆ ಮತ್ತು ಆ ಪೂಜೆಯಿಂದಲೇ ನಮಗೆ ಆನಂದ ದೊರೆಯುವುದು ಎನ್ನುವ ಸ್ವಾರ್ಥವಿಲ್ಲದ ಜೀವನ ಶೈಲಿಯನ್ನು ಧರ್ಮವು ತಿಳಿಸಿಕೊಡುತ್ತದೆ. ಈ ಧರ್ಮಾಚರಣೆಯಲ್ಲಿ ಕಾಯಿಕ, ವಾಚಿಕ ಹಾಗು ಮಾನಸಿಕ ಎಂಬ ಮೂರು ವಿಧಗಳು. ಊಟ ಮಾಡುವ ವಿಷಯದಲ್ಲಿ ಆಚರಿಸುವ ಧರ್ಮವು ಕಾಯಿಕ ಧರ್ಮದಲ್ಲಿ ಸೇರುತ್ತದೆ.
ಊಟ ಮಾಡುವುದೆಂದರೆ ವಾಸ್ತವವಾಗಿ ದೇಹದಲ್ಲಿ ನೆಲೆಸಿರುವ ಭಗವಂತನ ಹೆಸರಿನಲ್ಲಿ ನಡೆಸುವ ಒಂದು ಪವಿತ್ರವಾದ ಯಜ್ಞವೇ ಹೊರತು ಸಿಕ್ಕಿದ್ದನ್ನು ಒಳಗೆ ಸೇರಿಸಿ ಹೊಟ್ಟೆಯನ್ನು ಭದ್ರಪಡಿಸುವ ಚಟುವಟಿಕೆಯಲ್ಲ. ಪ್ರತಿಯೊಂದು ತುತ್ತು ಸಹ ಅವನಿಗೆ ಅರ್ಪಿಸುವ ಆಹುತಿ ಅಗಿದೆ, ಹೀಗಾಗಿ ಆಹಾರದಲ್ಲಿ ಬಳಸುವ ಪ್ರತಿಯೊಂದು ಪದಾರ್ಥವೂ ಶುದ್ಧವಾಗಿರಬೇಕು. ಯಾವ ಪದಾರ್ಥವನ್ನು ಊಟದಲ್ಲಿ ಬಳಸಬೇಕು ಯಾವುದನ್ನು ಬಳಸಬಾರದು, ಅದಕ್ಕೆ ಏನು ಕಾರಣ ಎನ್ನುವುದನ್ನು ವಿವರಿಸುತ್ತ ಹೊರಟರೆ ಲೇಖನ ಅತಿಯಾಗಿ ಬೆಳೆದುಬಿಡುತ್ತದೆ. ಅದನ್ನೆಲ್ಲ ಇನ್ನಿತರ ಹಿರಿಯರು ಬರೆದಿರುವ ಪುಸ್ತಕಗಳನ್ನು ಓದಿ ತಿಳಿದುಕೊಳ್ಳುವುದು ಉತ್ತಮ. ಈಗ ಸಧ್ಯದಲ್ಲಿ ಈ ಸರಳವಾದ ಕೆಲವು ನಿಯಮಗಳನ್ನು ಅನುಸರಿಸಲು ಪ್ರಯತ್ನಿಸೋಣ.
- ಶಾಸ್ತ್ರದಲ್ಲಿ ನಿಷೇಧಕ್ಕೆ ಒಳಪಟ್ಟಿರುವ ಪದಾರ್ಥಗಳ ಬಳಕೆಯನ್ನು ನಿಲ್ಲಿಸೋಣ.
- ಹಾರ್ಡ್‍ಕೋರ್ ಮಡಿ ಮಾಡಲು ಸಾಧ್ಯವಿದ್ದರೆ ಒಳ್ಳೆಯದು. ಆದರೆ ಅದು ತುಂಬಾ ಕಷ್ಟವೆನಿಸಿದಾಗ ಏನು ಅಡಿಗೆ ಮಾಡಿದ್ದೇವೆಯೋ ಅದನ್ನು ಭಕ್ತಿಯಿಂದ ಭಗವಂತನಿಗೆ ಸಮರ್ಪಿಸೋಣ. ಅದನ್ನು ಅವನು ಸ್ವೀಕರಿಸುತ್ತಾನೆ. ಒಟ್ಟಿನಲ್ಲಿ ಭಗಂತನಿಗೆ ಅರ್ಪಿತವಲ್ಲದ ಆಹಾರ ಬೇಡವೇ ಬೇಡ.
- ಜ್ಞಾನಿಗಳ ಮಾತುಗಳನ್ನು ಕೇಳುತ್ತ ಊಟವನ್ನು ಮಾಡೋಣ.
- ಊಟ ಮಾಡುವಾಗ ಸಾಧ್ಯವಾದಷ್ಟೂ ಹರಿಯ ನಾಮವನ್ನು ಸ್ಮರಿಸೋಣ.
- ಸಾಧ್ಯವಾದಷ್ಟೂ ನಮ್ಮ ನಮ್ಮ ಮನೆಯಲ್ಲಿಯೇ ಶುದ್ಧವಾದ ಊಟವನ್ನು ಮಾಡೋಣ.
- ಊಟವಾಗುವ ಮೊದಲು ಹಾಗು ಆದಮೇಲೆ ಎರಡು ಸಂದರ್ಭದಲ್ಲಿಯೂ ಕೈ ಹಾಗು ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳೋಣ.
ಈ ಮೇಲ್ಕಂಡ ಕ್ರಿಯೆಗಳು ಸಮಾಧಾನವಾದ ಆಹಾರಸ್ವೀಕಾರಕ್ಕೆ ಅನುವು ಮಾಡಿಕೊಡುತ್ತವೆ. ಸಮಾಧಾನವಾಗಿ ಮಾಡಿದ ಊಟವು ದೇಹಕ್ಕೆ ಹಿತಕರ ಎನ್ನುವುದನ್ನು ಬಿಡಿಸಿಹೇಳುವ ಅಗತ್ಯವಿಲ್ಲ.
ಭಗವಂತನಿಗೆ ಅರ್ಪಿತವಲ್ಲದ ಆಹಾರವನ್ನು ಸ್ವೀಕರಿಸುವ ಪ್ರಕ್ರಿಯೆಯನ್ನು ಶಾಸ್ತ್ರವು ಯಾವ ಕಾರಣಕ್ಕೂ ಒಪ್ಪುವುದಿಲ್ಲ. ಈ ರೀತಿಯಾದ ಆಹಾರವು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದು ಶಾಸ್ತ್ರದ ಖಚಿತ ಅಭಿಪ್ರಾಯ.(ಊಟದ ವಿಷಯದಲ್ಲಿ ಈ ರೀತಿಯಾದ ಶಾಸ್ತ್ರವನ್ನು ಒಪ್ಪದವರು, i’m lovin’ it ಎನ್ನುತ್ತಲೇ ಎಲ್ಲವನ್ನೂ ತಿನ್ನಿಸುವ ಮೆಕ್ ಡೊನಾಲ್ಡ್ ಕಂಪನಿಯು ತನ್ನ ಕೆಲಸಗಾರರಿಗೇ “ಅತಿಯಾಗಿ ತನ್ನ ಪದಾರ್ಥಗಳನ್ನು ತಿನ್ನದಿರಿ” ಎಂಬ ಮಾತನ್ನು ಹೇಳಿದೆ ಎನ್ನುವುದನ್ನು ಗಮನಿಸಲಿ) ನಾಲಗೆಯ ದಾಸರಾಗಿ, ಅನಿವಾರ್ಯತೆ ಎನ್ನುತ್ತ ಎಲ್ಲಿ ಬೇಕೆಂದರಲ್ಲಿ ತಿನ್ನುವವರ ಫಜೀತಿಯನ್ನು ಶಾಸ್ತ್ರಕಾರರು ಹೀಗೆ ವರ್ಣಿಸುತ್ತಾರೆ.
ಪ್ರಾಯಶ್ಚಿತ್ತವು ಎನಗೆ ಇಲ್ಲವಯ್ಯಾ | ನಾಯಿಯಂತೆ ಕಂಡಕಂಡಲ್ಲಿ ತಿಂಬುವಗೆ ||ಪ||
ಮಾನಸದಿ ತದೇಕಧ್ಯಾನದಲ್ಲೇ ಕುಳಿತು | ಜ್ಞಾನಿಗಳ ಸಹವಾಸ ಮಾಡದಲೇ ||
ಹೀನರಾಶ್ರಯಿಸಿ ನಾಲಿಗ್ಗೆ ಹಿತವನೆ ಬಯಸಿ | ಮೀನು ಗಾಳಕೆ ಬಿದ್ದು ಮಿಡುಕುವಂದದಲಿ ||೧||
ಸರಸರನೆ ಕಂಠವನು ಕರಗಸದಿ ಕೊಯ್ದರೂ | ತರಹರಿಸದೇ ಪರರ ಮನೆಯ ಅನ್ನವನ್ನು ||
ಕರದಲ್ಲಿ ಸ್ಪರ್ಶ ಸಲ್ಲದು ಎಂದು ಪೇಳುತಿರೆ | ಹಿರಿದಾಗಿ ಕುಳಿತು ಭುಂಜಿಸುವ ಪಾತಕಿಗೆ ||೨||
ಪರರಿತ್ತ ಕೂಳಿನಲಿ ಅವರ ಕುಲಕೋಟಿ ಸಾ | ವಿರ ಜನುಮದಲಿ ಅರ್ಜಿಸಿದ ಪಾಪ ||
ಬೆರೆತಿಹುದು ಎಂದ್ಹೇಳೆ ಕೇಳಿ ಕೇಳಿ ನಗುತ | ಹರುಷದಿಂ ಕುಳಿತು ವಿಷವುಂಬ ಪಾತಕಿಗೆ ||೩||
ಯಾತ್ರೆಯ ಪೋಪದಲ್ಲಿ ತಿಥಿ ಮಿತಿ ಹವ್ಯದಲಿ | ಮತ್ತೆ ಕುಲಹೀನರಲಿ ಅನ್ನ ತಿಂದು |
ನಿತ್ಯ ಹಿಂಗದಲೆ ಈ ನೀಚ ಒಡಲನು ಹೊರೆವ | ತೊತ್ತುಬಡಕಗೆ ಪುಣ್ಯವೆತ್ತ ದೊರಕುವದೊ ||೪||
ಕ್ಷಿಪ್ರಪ್ರಾಯಶ್ಚಿತ್ತವೊಂದಿಹದು ಕೇಳಯ್ಯ | ಈ ಪೃಥ್ವಿಯೊಳಗೆಲ್ಲ ನಿನ್ನ ನಾಮ ||
ಅಪ್ರಾಕೃತಕಾಯ ವಿಜಯವಿಠ್ಠಲರೇಯ | ಸುಪ್ರಸಾದವನಿತ್ತು ಶುದ್ಧಾತ್ಮನ್ನ ಮಾಡು || ೫||
ಆದರೆ, ಇಲ್ಲಿ ಕೇಳಿ. ಪದೇ ಪದೇ ಅಶುದ್ಧ ಪದಾರ್ಥವನ್ನು ತಿಂದು ಬಂದು ವಿಜಯವಿಠಲ ಕ್ಷಮಿಸಯ್ಯ ಎಂದರೆ ಆತ ಪಾಪಿಗಳನ್ನು ಕ್ಷಮಿಸುವ ದೇವನಲ್ಲ. ನೆನಪಿರಲಿ. ಆದರೂ…. ಒಂದು ಮಾತು ನಿಜ. ಶಾಸ್ತ್ರವು ಮೇಲ್ನೋಟಕ್ಕೆ ಕಠೋರವೆಂದು ಕಾಣಿಸಬಹುದು. ಮಾಡಿರುವ ಕೃತ್ಯಗಳು ತಪ್ಪೆಂದು ಕಂಡುಬಂದು ಅದರಿಂದ ಹೊರಬರಲು ನೈಜವಾದ ಮನಸ್ಸಿದ್ದಲ್ಲಿ ಅದಕ್ಕೆ ಅತ್ಯಂತ ಸರಳವಾದ ಪರಿಹಾರವನ್ನೂ ಶಾಸ್ತ್ರವೇ ತಿಳಿಸಿಕೊಡುತ್ತದೆ. ಈ ಮಾತಿಗೆ ಶ್ರೀವಿಜಯರಾಯರ ಮೇಲಿನ ಪದ್ಯವೇ ಸಾಕ್ಷಿ.
ನಿರಂತರವಾಗಿ ಧರ್ಮದ ದಾರಿಯಲ್ಲಿ ಇದ್ದರೆ ಮನೋಬಲವು ಪುಷ್ಟಿಯಾಗುವುದು ಹಾಗು ಆ ಪುಷ್ಟಿಯಿಂದ ಆನಂದವು ವೃದ್ಧಿಯಾಗುವುದು. ಆನಂದವೇ ಜೀವನದ ಪರಮೋದ್ದೇಶವಲ್ಲವೇ?
Be First to Comment