ಶ್ರೀಚಿನ್ನಜೀಯರ್ ಶ್ರೀಗಳವರು ಒಮ್ಮೆ ಶ್ರೀಮಂತ್ರಾಲಯಪ್ರಭುಗಳ ದರ್ಶನಕ್ಕೆ ಬಂದಾಗ ತೆಗೆದ ಚಿತ್ರ ಇದು.
ಶ್ರೀಗಳವರ ಪಕ್ಕದಲ್ಲಿ ಶುಭ್ರಬಿಳಿಯ ಬಟ್ಟೆ ಮತ್ತು ಅಷ್ಟೇ ಶುಭ್ರವಾದ ನಗುವಿನೊಂದಿಗೆ ನಿಂತಿದ್ದಾರಲ್ಲ ಅವರು ರಾಮಕೃಷ್ಣಾಚಾರ್ಯ ವಾಜಪೇಯೀ. ಇಂದಿನ ನೂರಾರು ವೇದವಿದರ ಮೆಚ್ಚಿನ ಗುರುಗಳಿವರು.
ಮಂತ್ರಾಲಯದ ಶ್ರೀಗುರುಸಾರ್ವಭೌಮ ವಿದ್ಯಾಪೀಠದಲ್ಲಿ ಋಗ್ವೇದವನ್ನು ಕಲಿಸುವ ಆಚಾರ್ಯರಾಗಿದ್ದರು. ಈಗ ರಿಟೈರಾಗಿ ತಮಿಳುನಾಡಿನ ತಮ್ಮೂರಿನಲ್ಲಿಯೇ ಗುರುಕುಲವನ್ನು ನಡೆಸುತ್ತಾ ವೇದಪುರುಷನ ಸೇವೆಯನ್ನು ಮಾಡುತ್ತಾ ಇದ್ದಾರೆ. ಇವರ ಮನೆಯೇ ವೈದಿಕರ ಆಶ್ರಮ!
ಕುಲಪತಿಯು ಹೇಗೆ ಇರಬೇಕು ಎನ್ನುವ ವಿಷಯದಲ್ಲಿ ಆಚಾರ್ಯರು ಒಂದು ಸ್ಪಷ್ಟವಾದ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ನಾನು ಪ್ರತ್ಯಕ್ಷವಾಗಿ, ಸಮೀಪದಿಂದಲೇ ಇವರನ್ನು ಗಮನಿಸಿದವನು.
ತಮ್ಮ ಬಳಿ ಓದಿದ ವಿದ್ಯಾರ್ಥಿಗಳಲ್ಲಿ ಪ್ರತಿಯೊಬ್ಬನ ಬಗ್ಗೆಯೂ ಅವರದು ಪರ್ಸನಲ್ ಆದ ಕಾಳಜಿ.
ಎಷ್ಟೋ ವಿದ್ಯಾರ್ಥಿಗಳು ಸಂಹಿತಾ ಅಧ್ಯಯನವನ್ನು ಮುಗಿಸಿದ ನಂತರ ಅವರ ಮುಂದಿನ ಉನ್ನತ ಓದಿಗಾಗಿ ವ್ಯವಸ್ಥೆಯನ್ನು ಮಾಡಿದ್ದಾರೆ. ಮುಂದೆ ಓದುವ ಆಸಕ್ತಿ ಇಲ್ಲದವರಿಗೆ ಸಂಹಿತೆಯ ಓದು ಮುಗಿದ ನಂತರ ತಕ್ಷಣವೇ ಉತ್ತಮ ಉದ್ಯೋಗಗಳನ್ನೂ ಸಹ ಕೊಡಿಸಿದ್ದಾರೆ. ಪ್ರತಿಯೊಬ್ಬನ ಸಾಮರ್ಥ್ಯವನ್ನೂ ಕ್ವಿಕ್ಕಾಗಿ ಅಳತೆ ಮಾಡಿ, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಒಂದಲ್ಲ ಒಂದು ಏಳ್ಗೆಯ ದಾರಿಗೆ ತಂದಿರಿಸಿದ್ದಾರೆ.
ನಮ್ಮವರಲ್ಲಿ ಒಬ್ಬನ ಜೀವನವೂ ಜೀವನವು ಆರ್ಥಿಕ ತಲ್ಲಣದಲ್ಲಿ ಬೀಳಬಾರದು ಎಂಬುದು ಅವರ ಮಾತು. ಅವರಲ್ಲಿ ಓದಿರುವ ಎಲ್ಲ ವಿದ್ಯಾರ್ಥಿಗಳೊಂದಿಗೆ ಇಂದಿಗೂ ಇವರು ವ್ಯಕ್ತಿಗತ ಮಟ್ಟದಲ್ಲಿ ನಿರಂತರ ಸಂಪರ್ಕದಲ್ಲಿ ಇದ್ದು, ಇಂದಿಗೂ ಮಾರ್ಗದರ್ಶನವನ್ನು ಮಾಡುತ್ತಾ ಇದ್ದಾರೆ! ಎಂಥ ಕರ್ತವ್ಯ ಪ್ರಜ್ಞೆ!
ಪಾಠವನ್ನೇ ಮಾಡದೆ ಕೂಡುವವರ, ಪಾಠವೊಂದನ್ನು ಹೇಳಿ ಬಿಟ್ಟರೆ ಮುಗಿಯಿತು ನಮ್ಮ ಜವಾಬ್ದಾರಿ ಎನ್ನುವವರ ಮಧ್ಯ ಶ್ರೀರಾಮಕೃಷ್ಣಾಚಾರ್ಯರು ನಿಜಕ್ಕೂ ವಿಭಿನ್ನವಾಗಿ ನಿಲ್ಲುತ್ತಾರೆ.
Be First to Comment