ನಾನೊಬ್ಬ ಭಾರತೀಯ. ನನ್ನ ಮನೆ ಮತ್ತು ಮನ ಎರಡರಲ್ಲೂ ಭಾರತೀಯತೆಯೇ ಹಾಸು ಹೊಕ್ಕಾಗಿ ಸೇರಿಕೊಂಡಿದೆ. ಅಹಂಕಾರವಲ್ಲ ಇದು. ಹೆಮ್ಮೆ ನನಗೆ.
ಭಾರತಮಾತೆಯು ಹೆಮ್ಮೆ ಪಡುವ ಸುಪುತ್ರನಾದ ಶ್ರೀಮಧ್ವರ ಅನುಯಾಯಿ ನಾನು. ಮಧ್ವರ ಸಂಪ್ರದಾಯದಲ್ಲಿಯೇ ಜೀವಿಸಲು ನನಗೆ ಆನಂದವಿದೆ. ಇದರ ಅರ್ಥ ಇತರರನ್ನು ದೂಷಿಸುತ್ತೇನೆ ಎಂದೇನಲ್ಲ.
ಶ್ರೀಮಧ್ವರ ಪ್ರೇಮದ ಪುತ್ಥಳಿಯಾದ ಶ್ರೀರಾಯರ ಭಕ್ತ ನಾನು. ಶ್ರೀರಾಯರ ಮಠದ ಶಿಷ್ಯನೂ ಹೌದು. ಗ್ರೇಟ್ ಡಿವೋಟೀ ಆಫ್ ರಾಯರು ಎಂದೇನೂ ನಾನು ಹೇಳಿಕೊಳ್ಳಲಾರೆ. ಆದರೆ ಅವರ ಕರುಣೆಗೆ ಹಂಬಲಿಸುತ್ತಲೇ ಇರುವವನು ಎಂದು ಹೃದಯತುಂಬಿ ಹೇಳಿಕೊಳ್ಳಬಲ್ಲೆ. ಅವರಿಂದಲೇ ನನ್ನ ಜೀವನವು ಸುಸಂಸ್ಕೃತವೆನಿಸಿಕೊಂಡಿದೆ, ಜೀವನವು ನಡೆಯುತ್ತಿದೆ ಕೂಡಾ.
ಆದಾಗ್ಯೂ…..
ರಾಯರ ಮನಸ್ಸಿಗೂ ಒಪ್ಪದ ಅಶಾಸ್ತ್ರೀಯವಾದ ಘಟನೆಗಳನ್ನು ನಾನು ಕಣ್ಣುಮುಚ್ಚಿಕೊಂಡು ಒಪ್ಪಿಕೊಳ್ಳಲಾರೆ. ಈ ಫೋಟೋ ವಿಷಯದಲ್ಲಿ ಕೂಡ ನನ್ನದು ಇದೇ ಅಭಿಪ್ರಾಯವಿದೆ.
ಈ ಫೋಟೋ ಈಗಾಗಲೇ ಬಹಳಷ್ಟು ಜನರಿಗೆ ಚಿರಪರಿಚಿತವಾಗಿದೆ. ಇದು ಪ್ರಖ್ಯಾತವಾಗಲು ಇರುವ ಕಾರಣಗಳು ಎರಡು.
-
- ಮೊದಲನೆಯ ಕಾರಣ ಇದು ಫುಲ್ವಾಮಾ ಹತ್ಯಾಕಾಂಡವು ನಡೆದ ಆಸುಪಾಸಿನ ದಿನಗಳಲ್ಲಿ ಪ್ರಕಟಗೊಂಡದ್ದು.
- ಎರಡನೆಯ ಕಾರಣ ಇದರಲ್ಲಿ ಶ್ರೀರಾಯರ ಚಿತ್ರವಿದೆ ಎನ್ನುವುದು.
ಸೈನಿಕರಲ್ಲಿ ಅನೇಕರು ಶ್ರೀರಾಯರ ಭಕ್ತರಿರುವುದನ್ನು ನಾನು ಪ್ರತ್ಯಕ್ಷವಾಗಿ ನೋಡಿ ಬಲ್ಲೆ. “ರಾಯರ ಫೋಟೋವನ್ನು ತಮ್ಮ ಕಪಾಟಿನಲ್ಲಿ ಇಟ್ಟುಕೊಂಡಿದ್ದೇವೆ, ನಿತ್ಯವೂ ಅವರನ್ನು ಪ್ರಾರ್ಥಿಸುತ್ತೇವೆ” ಎನ್ನುವವರನ್ನು ನಾನು ಬಲ್ಲೆ. “ರಣಾಂಗಣಕ್ಕೆ ಹೋದಾಗ ನನ್ನ ಜೇಬಿನಲ್ಲಿ ಶ್ರೀರಾಯರ ಚಿತ್ರವಿಟ್ಟುಕೊಂಡಿದ್ದೆ” ಎಂದು ಭಾವುಕರಾಗಿ ಹೇಳಿದ ಸೈನಿಕರೂ ನನಗೆ ಪರಿಚಯವಿದ್ದಾರೆ. ಅವರ ಅನುಭವಗಳನ್ನು ಕೇಳುತ್ತಿರುವಾಗ ನಿಜಕ್ಕೂ ಆನಂದವೆನಿಸುತ್ತದೆ. ಆದರೆ ಇಲ್ಲಿರುವ ಸೈನಿಕ ಮತ್ತು ಅವನ ಸುತ್ತಲಿರುವ ಸನ್ನಿವೇಶವನ್ನು ನೋಡಿದಾಗ ಆತ ಪ್ರಾರ್ಥಿಸುತ್ತಿರುವುದು ಶ್ರೀರಾಯರನ್ನು ಅಲ್ಲವೆಂದು ಅನಿಸಿತು. ನೋಡಿದಾಕ್ಷಣವೇ ತಿಳಿಯುತ್ತದೆ ಇದೊಂದು ಫೋಟೋಶಾಪ್ ಕೈಚಳಕವೆಂದು.
ನಿಜ ಹೇಳಬೇಕೆಂದರೆ ಈ ಚಿತ್ರವು 2018ರಲ್ಲೇ ಒಮ್ಮೆ ಪ್ರಕಟಗೊಂಡಿದೆ. ಆದರೆ ರಾಯರ ಚಿತ್ರದೊಂದಿಗೆ ಅಲ್ಲ. ಅದರಲ್ಲಿ ಇರುವುದು ನಮಗೆ ತದ್ವಿರುದ್ಧವೆನಿಸುವ ದಾರಿಯಲ್ಲಿ ನಡೆದು ಪ್ರಖ್ಯಾತರಾದ ಡಾ. ಅಂಬೇಡ್ಕರರು. ಅಂಬೇಡ್ಕರ್ ವಾದಿಯೋ ಅಥವಾ ಅಂಬೇಡ್ಕರ್ ವಾಡಿಯೋ ಪಕ್ಕಾ ಗೊತ್ತಿಲ್ಲ. ಆದರೆ ಅಂಬೇಡ್ಕರರ ಅನುಯಾಯಿಗಳದ್ದೇ ಒಂದು ವೆಬ್ ಪುಟದಲ್ಲಿ ( https://www.bestphotos2019.com/tag/ambedkarwadi-photos.html) ಈ ಚಿತ್ರವು 13.12.2018ರಲ್ಲೇ ಪ್ರಕಟಗೊಂಡಿದೆ. ಆ ಯುವಕರೂ ಕೂಡಾ ಬೇರೊಂದು ಚಿತ್ರದ ಮೇಲೆ ಅಂಬೇಡ್ಕರರನ್ನು ಕೂಡಿಸಿ ನಂತರ ಪ್ರಚಾರ ಮಾಡಿರುವ ಸಾಧ್ಯತೆಯೂ ಇಲ್ಲದಿಲ್ಲ. ಸೈನಿಕನು ಪ್ರಾರ್ಥಿಸುತ್ತಿದ್ದಾನೆಯೋ ಅಥವಾ ಸುಮ್ಮನೆ ನೋಡುತ್ತಿದ್ದಾನೆಯೋ ಎಂದೂ ಗೊತ್ತಿಲ್ಲ. ಆದರೆ ಅದೇನೇ ಇರಲಿ. ಮೂಲ ಚಿತ್ರದಲ್ಲಿ ರಾಯರು ಇಲ್ಲ ಎನ್ನುವುದಂತೂ ಸ್ಪಷ್ಟ. ಯಾರೋ ಫೋಟೋಶಾಪ್ ಕೆಲಸಗಾರರು ಅಂಬೇಡ್ಕರರ ಚಿತ್ರದ ಮೇಲೆ ರಾಯರನ್ನು ಇಟ್ಟು ಸೈನಿಕನನ್ನು ರಾಯರ ಭಕ್ತನನ್ನಾಗಿಸಿದ್ದಾರೆ. ಇದೆಷ್ಟರ ಮಟ್ಟಿಗೆ ಸರಿ? ಇಂತಹ ಅಗತ್ಯವಾದರೂ ಏನಿದೆ?
ಪುಲ್ವಾಮಾದ ಘಟನೆಯು ನಿಜಕ್ಕೂ ನಮ್ಮಲ್ಲಿ ರೋಷವನ್ನು ಬಡಿದೆಬ್ಬಿಸುವಂತಹ ಘಟನೆಯು. ಎರಡು ಮಾತಿಲ್ಲ ಇದರಲ್ಲಿ. ಆದರೆ ವಾಸ್ತವ ಏನಪ್ಪಾ ಅಂದರೆ ಅಲ್ಲಿರುವ ನಿಜವಾದ ಸೈನಿಕರನ್ನು ಹೊರತು ಪಡಿಸಿ ನಮಗಾರಿಗೂ ಯುದ್ಧದಂತಹ ಒಂದು ಸಂದರ್ಭವು ಮೈಮೇಲೆ ಬಿದ್ದರೆ ಏನು ಮಾಡಬೇಕೆನ್ನುವ ತಿಳುವಳಿಕೆ ಮತ್ತು ತರಬೇತಿ ಇಲ್ಲ. ಇವೆರಡರ ಜೊತೆಗೆ ಧೈರ್ಯವೂ ಬೇಕೇ ಬೇಕು. ಎಲ್ಲರಲ್ಲಿಯೂ ಇದು ಇದೆಯೆಂದು ಹೇಗೆ ಹೇಳುವುದು? ನಾವುಗಳು ಸುಮ್ಮನೆ ಬಾಯ್ಮಾತಿನಿಂದ ರೋಷವನ್ನು ವ್ಯಕ್ತಪಡಿಸಿದರೆ ಏನು ದೊರೆಯುವುದು? ಹಾಗಂತ ಯುದ್ಧಭೂಮಿಗೂ ನಾವು ಹೋಗಲಾರೆವು. ಹೀಗೆ ಕುಳಿತಲ್ಲೇ ಹಾರಾಡುತ್ತಾ, ಅಪರಾಧಿ ಮುಸ್ಲಿಮರ ಜೊತೆಗೆ ನಿರಪರಾಧಿಗಳಾದ ಮುಸ್ಲಿಮರನ್ನೂ ಸೇರಿಸಿಕೊಂಡು ಅಸಹ್ಯ ಶಬ್ದಗಳಲ್ಲಿ ಬೈದರೆ ನಮಗೆ ವಿಜಯವು ದಕ್ಕುವುವುದೇ? ನಿಜ ಹೇಳಬೇಕೆಂದರೆ ಈ ರೀತಿಯಾದ ಅವಾಚ್ಯ ಶಬ್ದಗಳಿಂದ ಖಂಡನೆ ಮಾಡುವುದರಿಂದ ರಾಯರಿಗೆ ಸಂತಸವಾಗುವುದೆ?
ಬಾಯಿಮಾತಿನಿಂದ ರೋಷ – ಜಗಳಗಳು ಹೆಚ್ಚಬಹುದೇ ಹೊರತು ಪರಿಣಾಮಕಾರಿಯಾದ ಫಲಿತಾಂಶವು ದೊರೆತಿರುವ ಉದಾಹರಣೆಗಳು ವಿರಳಾತಿ ವಿರಳ. ಅದರಲ್ಲೂ ಯುದ್ಧದಂತಹ ಸನ್ನಿವೇಶದಲ್ಲಿ ಮಾತಿಗಿಂತ ಕೃತಿಗೇ ಬೆಲೆ ಹೆಚ್ಚು.
ಯುದ್ಧದಲ್ಲಿ ಭಾಗವಹಿಸುವ ದೇಹಶಕ್ತಿ ಮತ್ತು ಧೈರ್ಯ ಇಲ್ಲದ ನಾವುಗಳು ಕೂಡ ಸೈನಿಕರ ಮನಃಸ್ಥೈರ್ಯವನ್ನು, ದೇಶದ ಕ್ಷಾತ್ರತೇಜಸ್ಸನ್ನು ಬಲಪಡಿಸುವಲ್ಲಿ ಪರೋಕ್ಷವಾಗಿ ಭಾಗವಹಿಸಬಹುದು. ಅದು ಹೇಗೆಂದರೆ, ಸೈನಿಕರಿಗೆ ನೈತಿಕವಾದ ಧೈರ್ಯವನ್ನು ತುಂಬುವ ಯಾವುದಾದರೂ ಒಂದು ಸಾತ್ವಿಕ ಮಾರ್ಗವನ್ನು ಅನುಸರಿಸುವುದರ ಮೂಲಕ. ಉದಾ : ಸೇನೆಗೆ ಕೈಲಾದಷ್ಟು ಧನವನ್ನು ಸಂದಾಯಮಾಡುವುದರ ಮೂಲಕ, ಸೈನಿಕರ ಮಕ್ಕಳಿಗೆ ವಿದ್ಯಾದಾನ ಮಾಡುವ ಮೂಲಕ ಅಥವಾ ಸೈನಿಕರಿಗಾಗಿ ಮನಸ್ಪೂರ್ತಿಯಾಗಿ ಪ್ರಾರ್ಥನೆ ಮಾಡುವ ಮೂಲಕ.
ನಮ್ಮಲ್ಲಿ ದೇಹಬಲ, ಧನ ಅಥವಾ ವಿದ್ಯೆಯು ಇಲ್ಲದೆ ಇದ್ದಾಗ ನಾವು ಅನುಸರಿಸಬಹುದಾದ ಅತ್ಯಂತ ಶ್ರೇಯಸ್ಕರವಾದ ಮಾರ್ಗವೆಂದರೆ ನಾವು ನಂಬಿದ ಗುರುಗಳಲ್ಲಿ, ದೈವದಲ್ಲಿ ಸೈನಿಕರಿಗಾಗಿ ಶುದ್ಧಾಂತಃಕರಣದ ಒಂದು ಪ್ರಾರ್ಥನೆ ಮಾಡುವುದು. ಅದು ನಿಜಕ್ಕೂ ಪರಿಣಾಮಕಾರಿಯಾದದ್ದು. ನಾವೆಲ್ಲರೂ (ಅಂದರೆ ಇದನ್ನು ಓದುತ್ತಿರುವವರು) ರಾಯರ ಭಕ್ತರಾದ್ದರಿಂದ ಅವರಲ್ಲಿಯೇ ಪ್ರಾರ್ಥನೆಯನ್ನು ಮಾಡೋಣ. ಇದು ರಾಯರಿಗೆ ಖಂಡಿತವಾಗಿಯೂ ಮುಟ್ಟುತ್ತದೆ. ಅವರ ಅಂತರ್ಯಾಮಿಯಾದ ತತ್ವಾಭಿಮಾನಿದೇವತೆಗಳು, ಶ್ರೀಮುಖ್ಯಪ್ರಾಣದೇವರು ಮತ್ತು ಮಹಾಪರಾಕ್ರಮಿಯಾದ ಶ್ರೀಪರಶುರಾಮದೇವರು ಇದರಿಂದ ಪ್ರೀತರೂ ಆಗುತ್ತಾರೆ. ಅದನ್ನು ಬಿಟ್ಟು ಹೀಗೆ ಸಹಜವಲ್ಲದ ರೀತಿಯಲ್ಲಿ ಶ್ರೀರಾಯರ ಫೋಟೋವನ್ನು ಹೀಗೆ ಬಳಸುವುದು ಸರಿಯಲ್ಲ. ಆ ಚಿತ್ರದಲ್ಲಿರುವ ಸೈನಿಕನಿಗೆ ರಾಯರ ಬಗ್ಗೆ ಅರಿವೇ ಇಲ್ಲದಿರುವಾಗ ಹೀಗೊಂದು ಸನ್ನಿವೇಶವಾದರೂ ಯಾಕೆ ನಿರ್ಮಾಣವಾದೀತು?
ಫೋಟೋವನ್ನು ಒಂದು ಒಳ್ಳೆಯ ಉದ್ದೇಶದಿಂದಲೇ ಮಾಡಿದ್ದು ಎಂದುಕೊಳ್ಳೋಣ. ಆದರೆ ಕ್ರಮವು ಮಾತ್ರ ಸರಿಯಾದುದಲ್ಲ. ಯಾಕೆಂದರೆ ಹೀಗೆ ಮಾಡುವುದರಿಂದ ಇತರರನ್ನು ದಾರಿತಪ್ಪಿಸಿ ಮಿಥ್ಯಾಜ್ಞಾನದ ಕಡೆಗೆ ಎಳೆದಂತೆ ಆಗುತ್ತದೆ. ರಾಯರ ಮೇಲೆ ಭಕ್ತಿಯನ್ನು, ಸರಿಯಾದ ಮಾರ್ಗವನ್ನು ಪ್ರೀತಿಯಿಂದ ಪ್ರಚಾರ ಮಾಡಬೇಕೇ ಹೊರತು ಹೀಗೆ ವಿಚಿತ್ರರೀತಿಯಲ್ಲಿ ಅಲ್ಲ. ಹೀಗೆ ಮಾಡಿದರೆ ನಮಗೂ ಮಿಶನರಿಗಳಿಗೂ ವ್ಯತ್ಯಾಸವೇ ಇಲ್ಲವಾಗುತ್ತದೆ.
ಶ್ರೀಮಧ್ವರ ಆದೇಶದಂತೆ ಯಥಾರ್ಥಜ್ಞಾನವನ್ನು ಬೋಧಿಸುವ ರಾಯರು ಅಸಲಿ ಫೋಟೋ ಬೇಕೋ ಅಥವಾ ಮಿಥ್ಯಾಜ್ಞಾನದೆಡೆಗೆ ಸೆಳೆವ ಇಂತಹ ನಕಲಿ ಫೋಟೋಗಳು ಬೇಕೋ ಎನ್ನುವುದನ್ನು ಭಕ್ತರೇ ನಿರ್ಧರಿಸಬೇಕು.
ಬೇರೆ ಯಾರು ಏನು ಮಾಡುತ್ತಾರೆಯೋ ಅದು ಅವರ ಇಷ್ಟ ಆದರೆ ತತ್ವವಾದದವನ್ನು ನಂಬುವವರು ಇದನ್ನು ಸುತರಾಂ ಮಾಡಕೂಡದು ಎನ್ನುವುದು ನನ್ನ ಅಭಿಪ್ರಾಯ.
Be First to Comment