ಶಿಂಶುಮಾರನು ಬಂದನು

ಗುರುಗಳ ಸ್ತುತಿಯನ್ನು ಮಾಡಿದರೆ, ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಕೇವಲ ಬಾಯ್ಮಾತಲ್ಲ. ಅನುಭವದ ಮಾತು. ಕೆಲಸವಾಗುವುದು ಸ್ವಲ್ಪ ತಡವಾದೀತೇನೊ, ಆದರೆ ಆಗುವುದು ಖಂಡಿತ.

ತುಂಬಾ ಒಳ್ಳೆಯ ಕುಟುಂಬದವರು ಮೊನ್ನೆ ನನಗೆ ಅಪರೂಪದ ವಸ್ತುವೊಂದನ್ನು ದಾನವಾಗಿತ್ತರು. ಅವರು ಕೊಟ್ಟು ಕೃಷ್ಣಾರ್ಪಣ ಎಂದ ನಂತರವೇ ನನಗೆ ಗೊತ್ತಾಗಿದ್ದು, ಅದು ಸಾಲಿಗ್ರಾಮ ಎಂದು. ಶಿಂಶುಮಾರ ಸಾಲಿಗ್ರಾಮ ಎಂದು ಅವರೇ ತಿಳಿಸಿದರು. ದಾನವನ್ನು ಪಡೆದು ಬಹಳ ಸಂತಸಬಟ್ಟೆ. ಅಷ್ಟೆ ಸಂತೋಷ ಮತ್ತೊಂದು ಕಾರಣಕ್ಕಾಯ್ತು.

ಈ ಕುಟುಂಬದವರು ಗುರುಗಳಾದ ಶ್ರೀಸುವಿದ್ಯೇಂದ್ರತೀರ್ಥ ಶ್ರೀಪಾದರ ವಿಶ್ವಾಸಪಾತ್ರರಾದ ಭಕ್ತರು. ಶಿಷ್ಯರು. ಶ್ರೀಗಳವರ ಆಶ್ರಮಸ್ವೀಕಾರದ 16ನೇಯ ವರ್ಷಾಚರಣೆಯ ದಿನ ನಾನು ಬರೆದ ಲೇಖನವನ್ನು ನೋಡಿ, ನನ್ನ ಬಗ್ಗೆ ಶ್ರೀಗಳವರಲ್ಲಿಯೇ ತಿಳಿದುಕೊಂಡು, ನನ್ನನ್ನು ಪರಿಚಯ ಮಾಡಿಕೊಂಡಿದ್ದರು. ಪ್ರಸಂಗವೊಂದರಲ್ಲಿ, ಈ ಸಾಲಿಗ್ರಾಮವನ್ನು ನನಗೆಂದೇ ಅವರು ತೆಗೆದಿಟ್ಟುಕೊಂಡಿದ್ದರಂತೆ. ಅವರ ಮಟ್ಟಿಗೆ ನಾನೊಬ್ಬ ಯೋಗ್ಯನು.

ಸ್ವಚ್ಛವಾದ ಕನ್ನಡವನ್ನು ಮಾತನಾಡಬಲ್ಲೆ ಎಂಬುದನ್ನು ಬಿಟ್ಟರೆ ಬೇರೆ ಏನೂ ಇಲ್ಲ ನನ್ನಲ್ಲಿ ಎಂದು ತಿಳಿಯಲು ಸಮಯ ಬೇಕೇನೊ ಅವರಿಗೆ. ಇರಲಿ. ನಾನು ಈ ಸಾಲಿಗ್ರಾಮವನ್ನು ತೆಗೆದುಕೊಂಡು ಮನೆಗೆ ಬರುತ್ತಿರುವಾಗ, ಸ್ನೇಹಿತನೊಬ್ಬನಿಂದ ಮೆಸೇಜು ಬಂತು. ಇವತ್ತು ಸ್ವಾಮಿಗಳವರ ಆಶ್ರಮ ಸ್ವೀಕಾರವಾದ ದಿನ ಎಂದು! ಅರೆ ಎಂಥಾ ಒಳ್ಳೆಯ ದಿನವಾಯ್ತಲ್ಲ ಇದು ಎಂದುಕೊಂಡೆ. ಹಿಂದೆ ಅವರು ಆಶ್ರಮವನ್ನು ಸ್ವೀಕರಿಸಿದ ದಿನಕ್ಕೆಂದು ಬರೆದ ಲೇಖನವನ್ನು ಶ್ರೀಹರಿಯು ಒಪ್ಪಿಕೊಂಡಿದ್ದಾನೆ ಎಂಬ ಭಾವನೆಯು ನನಗಾಯ್ತು. ಅದಕ್ಕಾಗಿಯೇ ಅವನು ಶ್ರೀಗಳವರ ಆಶ್ರಮವಾದ ದಿನವನ್ನೇ ಆಯ್ದುಕೊಂಡು ನಮ್ಮ ಮನೆಗೆ, ಮನಕ್ಕೆ ನಡೆದು ಬಂದನು ಎಂದು ನಾನು ಭಾವಿಸುತ್ತೇನೆ.

ಶ್ರೀಗಳವರ ಸ್ತುತಿಯಿಂದ ಪರಿಚಿತರಾದವರ ಮೂಲಕವೇ ಈ ಒಂದು ಕೊಡುಗೆಯು ನನಗೆ ಬಂದಿತಾದ ಕಾರಣ ಇದಕ್ಕೆ ಶ್ರೀಗಳವರೇ ನೇರಕಾರಣರು. ಅನುಮಾನವಿಲ್ಲ. ಗುರುಗಳನ್ನು ಹೊಗಳಿದರೆ ಇವರಿಗೆ ಸಂತೋಷವಾಗಿದೆ ಎಂದರೆ ಇವರ ಮನಸ್ಸು ಎಷ್ಟು ಸರಳ ಮತ್ತು ಗುರುಗಳ ಪ್ರಭಾವ ಎಷ್ಟು ತೀವ್ರವಾದದ್ದು ಎನ್ನುವ ಅಂಶವು ಕೂಡ ಗಮನಿಸತಕ್ಕದ್ದು.

ನಮ್ಮ ಮನೆಯಲ್ಲಿ ನನ್ನ ಹಿರಿಯರ ದಯೆಯಿಂದ ಅಪರೂಪದ ಕೆಲ ಸಾಲಿಗ್ರಾಮಗಳಿವೆ. ಶಿಂಶುಮಾರ ಸಾಲಿಗ್ರಾಮವನ್ನು ಪೂಜಿಸಲು ಒಂದು ಅವ್ಯಕ್ತವಾದ ಆಶಯವಿತ್ತು. ಗುರುಗಳ ಸ್ತೋತ್ರದಿಂದ ಆ ಇಷ್ಟಾರ್ಥವು ಈಡೇರಿತು. ಇದರ ಪೂಜಾಫಲವು ಅವರಂತರ್ಯಾಮಿಯಾದ ಪ್ರಾಣಸ್ಥ ಶಿಂಶುಮಾರನಿಗೇ ಸಲ್ಲಲಿ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.