ನಿನ್ನೆ, ನಮ್ಮ ಶ್ರೀಗಳವರ ೧೭ನೇ ಸುಧಾಮಂಗಲದ ಕೊನೆಯದಿನ. ಬಹಳ ದೊಡ್ಡ ಸಜ್ಜನಸಮಾವೇಶವದು. ಕರ್ತವ್ಯರೂಪದಲ್ಲಿ ಭಾಗವಹಿಸಲು ನನಗೂ ಚೂರು ಭಾಗ್ಯವು ಸಿಕ್ಕಿತ್ತು. ನಿನ್ನೆ, ನನ್ನ ಪಾಲಿನ ಕೆಲಸವು ಮುಗಿದ ನಂತರ, ನನಗೆ ಇದ್ದಕ್ಕಿದ್ದಂತೆ ಸಹಿಸಲು ಅಸಾಧ್ಯವಾದ ಹೊಟ್ಟೆನೋವು ಶುರುವಾಯ್ತು. ನಿಧಾನವಾಗಿ ಶುರುವಾಗಿ ದೊಡ್ಡದಾಗಲಿಲ್ಲ ಅದು. ಧಡಕ್ಕನೆ ಯಾರೋ ಒಬ್ಬರು ಹಿಂಡಿದರೆ ಹೇಗೋ ಹಾಗೆ ಉಂಟಾದ ನೋವು ನನ್ನ ಜೀವಮಾನದಲ್ಲಿಯೇ ಅನುಭವಿಸಿರದ ಹೊಟ್ಟೆನೋವದು. ಅದರ ಹಿಂದೆಯೇ ಚಳಿಜ್ವರವು ಸಹ ಮೊದಲಾಯ್ತು. ಸಭೆಯ ಮಧ್ಯದಿಂದಲೇ ಎದ್ದು ಕೋಣೆಗೆ ಬಂದು ಮಲಗಿಬಿಟ್ಟೆ. ನನ್ನಾಕೆ ಬಂದು ತನ್ನ ಕೈಲಾದ ಮದ್ದು ಮಾಡಿದರೂ ಏನೂ ಕಡಿಮೆಯಾಗಲಿಲ್ಲ.
ಜಾಸ್ತಿಯಾಗುತ್ತಲೇ ಹೋದ ಹೊಟ್ಟೆ ನೋವಿನೊಂದಿಗೇ ಮತ್ತೆ ಶ್ರೀರಾಮದೇವರ ಪೂಜೆ ನಡೆಯುತ್ತಿದ್ದ ಜಾಗಕ್ಕೆ ಹೋದೆ. ಹೋಗಿದ್ದು ಊಟಮಾಡಲೆಂದು. ಆದರೆ ಹೊಟ್ಟೆ ನೋವು ತಡೆಯಲಾಗದೆ ಅಲ್ಲಿಯೇ, ಕಸ ಬಳಿಯುವವರ ಪಕ್ಕದಲ್ಲೇ ಕುಕ್ಕುರುಗಾಲಿನಲ್ಲಿ ಕುಳಿತೆ. ಹಾಗೆಯೆ ನೋವು ಅನುಭವಿಸುತ್ತಾ ಕುಳಿತಿದ್ದಾಗ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಯತಿಗಳೂ ಒಬ್ಬೊಬ್ಬರಾಗಿ, ಭಿಕ್ಷೆಮುಗಿಸಿ, ಕೈತೊಳೆಯಲೆಂದು ಹೊರಬರತೊಡಗಿದರು. ನಮ್ಮ ಶ್ರೀಗಳು ಸಹ ಬರುತ್ತಾರೆ ಆಗ ಅವರು ನನ್ನತ್ತ ನೋಡಿದರೆ ನೋವಿನ ಬಗ್ಗೆ ಹೇಳಿಕೊಂಡರಾಯ್ತು ಎಂದುಕೊಂಡೆ. ಆದರೆ ಶ್ರೀಗಳು ಹೋಗುವಾಗಲೂ ಬರುವಾಗಲೂ ನನ್ನತ್ತ ನೋಡಲೇ ಇಲ್ಲ. ಬೇಸರವಾಯ್ತು. ನಿಜಕ್ಕೂ.
ಆದರೆ ಶ್ರೀಗಳು ಸಭೆಗೆ ಹೊರಡಲೆಂದು ಹೊರಬಂದಾಗ ನೇರವಾಗಿ ನನ್ನತ್ತಲೇ ನೋಡಿ, “ಊಟಕ್ಕೆ ಹೋಗಲಿಲ್ಲವೇ? ಯಾಕಿದು ಮುಖ ಹೀಗಿದೆ? ಏನಾಯ್ತು” ಎಂದು ಕಕ್ಕುಲಾತಿಯಿಂದ ಕೇಳಿದರು. ಇಷ್ಟು ಕೇಳಿದ್ದೇ ಸಾಕಾಯ್ತು ನನಗೆ. ನೋವಿನಿಂದ ಕಣ್ಣಲ್ಲಿ ನೀರು ತುಂಬಿಕೊಂಡೇ ನನ್ನ ಅವಸ್ಥೆಯನ್ನು ಅವರಿಗೆ ವಿವರಿಸಿದೆ. ಶ್ರೀಗಳವರಿಗೆ ಮುಂದಿನ ಕಾರ್ಯಕ್ರಮಕ್ಕೆ ಹೊರಡುವ ಬಹುದೊಡ್ಡ ತುರ್ತು ಇತ್ತು. ಆದರೆ ಅದನ್ನು ಬಿಟ್ಟು, ತಾವಾಗಿಯೇ ಪೂಜಾಮಂದಿರದ ಒಳಗೆ ಹೋಗಿ, ಶ್ರೀರಾಮದೇವರ ಗಂಧವನ್ನು ತಂದು, ತಮ್ಮ ಶಿಷ್ಯರಾದ ಶ್ರೀಶ್ರೀವಿದ್ಯಾರಾಜೇಶ್ವರತೀರ್ಥರ ಕೈಗಳಿಂದ ನನಗೆ ಕೊಡಿಸಿ, ತಾವು ಸಹ ವಿಶೇಷ ಪ್ರಾರ್ಥನೆಯನ್ನು ಮಾಡುತ್ತಾ, ದೇವರಿಗೆ ಸಮರ್ಪಿಸಿದ ಖರ್ಜೂರವನ್ನು ಹಾಗೆಯೇ ಮಂತ್ರಾಕ್ಷತೆಯನ್ನು ಸಹ ಕೊಟ್ಟರು. ಈ ಗಂಧವನ್ನು ಹೊಟ್ಟೆಗೆ ಸವರಿಕೊಳ್ಳಿ ಎಂದು ಹೇಳಿದರು. ಹಾಗೆ ಸವರಿಕೊಂಡಿದ್ದೇ ತಡ, ಎಂತಹ ದಿವ್ಯಮಹಿಮೆಯದು? ಥಟ್ಟನೆ ನೋವು ನಿಂತೇ ಹೋಯಿತು. ಶ್ರೀಗಳವರು ಮುಗುಳ್ನಗೆಯಿಂದ ಮುನ್ನಡೆದರು.
ನನ್ನ ನೋವನ್ನು ಕೇಳಿದೆ ಯಾರೇ ಆಗಲಿ ನನಗೆ ಡಾಕ್ಟರರ ಬಳಿ ಹೋಗಲು ಹೇಳಿರುತ್ತಿದ್ದರೇನೋ. ಹೆಚ್ಚೆಂದರೆ ಡಾಕ್ಟರರಿಗೆ ಒಂದು ಫೋನಾಯಿಸಿ “ಇವರು ನಮ್ಮವರು, ಚೂರು ಗಮನಿಸಿ” ಎಂದು ಹೇಳಿರುತ್ತಿದ್ದರೇನೋ. ಆದರೆ ನಮ್ಮ ಗುರುಗಳು ತಾವಾಗಿಯೇ ವೈದ್ಯರ ಬಳಿ ಹೋಗಿ, ಔಷಧವನ್ನು ತಂದರು. ಭವರೋಗವೈದ್ಯನು ಇವರ ಮಾತನ್ನಲ್ಲದೇ ಇನ್ಯಾರ ಮಾತನ್ನು ನಡೆಸಿಕೊಡಬೇಕು ಅಲ್ಲವೇ? ಶ್ರೀಹರಿಯ ಮೇಲೆ ಶ್ರೀಗಳವರಿಗೆ ಇರುವ ನಂಬಿಕೆ ಅಂತಹ ಉನ್ನತ ಮಟ್ಟದ್ದು. ಶ್ರೀಹರಿಗೆ ಶ್ರೀಗಳವರ ಮೇಲೆ ಇರುವ ಪ್ರೀತಿ ಅಂತಹ ದೊಡ್ಡ ಮಟ್ಟದ್ದು.
ತಮ್ಮ ಮೇಲೆ ಅವಲಂಬಿತರಾದವರ ಬಗ್ಗೆ, ಸುತ್ತಮುತ್ತಲಿನವರ ಬಗ್ಗೆ ಶ್ರೀಗಳವರು ಮಾಡುವ ಕಾಳಜಿ ಅನನ್ಯವಾದುದು. ತಮ್ಮ ಜವಾಬ್ದಾರಿಯಿದು ಎಂದೇ ಅವರು ಗ್ರಹಿಸುತ್ತಾರೆ. ಗುರುವಿನ ಹೆಸರಿಗೆ ಸರಿಯಾದ ಅರ್ಥವನ್ನು ಕೊಟ್ಟವರಿವರು. ತಪಸ್ವಿಯು ಹೇಗಿರಬೇಕು ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ನಮ್ಮ ಗುರುಗಳು.
ಬೇಲೂರಿನಲ್ಲಿ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ೧೭ನೇ ವರ್ಗದ ಶಿಷ್ಯರುಗಳಿಗೆ ನಿನ್ನೆ ಸುಧಾಮಂಗಲವನ್ನು ನೆರವೇರಿಸಿದ್ದು ಸಜ್ಜನಿರೆಗೆಲ್ಲಾ ತಿಳಿದ ವಿಷಯವು. ಇದೊಂದು ಬಹುದೊಡ್ಡ ಕಾರ್ಯಕ್ರಮವು. ಸಾವಿರಾರು ಜನರ ಸಮಾವೇಶ. ಕೇಂದ್ರಸರ್ಕಾರದ ಅನೇಕ ಕಟ್ಟುನಿಟ್ಟಿನ ನಿಯಮಗಳ ಒತ್ತಡವು ಶ್ರೀಗಳವರ ಮೇಲೆ ಬಹಳ ಇತ್ತು. ಶ್ರೀಗಳವರು ಈ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿಯೇ ಪಾಲಿಸಿ, ಅತ್ಯಂತ ವೈಭವದ ಮಹೋತ್ಸವವನ್ನು ನೆರವೇರಿಸಿದರು. ಇಂತಹ ತೀವ್ರವಾದ ಒತ್ತಡದ ಮಧ್ಯವೂ ತೀರಾ ಸಾಮಾನ್ಯ ಉದ್ಯೋಗಿಯಾದ ನನ್ನನ್ನು ಶ್ರೀಗಳವರು ಗಮನಿಸಿ, ಮಾತನಾಡಿಸಿ, ಕುಸಿದಿದ್ದ ನನ್ನನ್ನು ಎತ್ತಿ ನಿಲ್ಲಿಸಿದರು.
ಮಹಾನುಭಾವರು.
Be First to Comment