ಕೆಮ್ಮಿದಾಕ್ಷಣವೇ ಎಲ್ಲರ ಪ್ರಾಣ ಹೋಗುವುದಿಲ್ಲವಾದರೂ ಬಹಳದಿನಗಟ್ಟಲೆ ಕೆಮ್ಮು ಇದ್ದರೆ ಅದು ಪ್ರಾಣವನ್ನು ಹಿಂಡುವುದಂತೂ ನಿಜ. ದೊಡ್ಡವರು ಹೇಗೋ ಒಂದು ಮಾಡಿ ಕೆಮ್ಮಿನ ನೋವನ್ನು ತಡೆದುಕೊಂಡಾರು. ಆದರೆ ಕೆಮ್ಮಲಿಕ್ಕೇ ಶಕ್ತಿಯಿಲ್ಲದ ಮಕ್ಕಳು ಮೇಲಿಂದ ಮೇಲೆ ಬಂದೆರಗುವ ಕೆಮ್ಮಿನ ದಾಳಿಯನ್ನು ಹೇಗೆ ತಡೆದುಕೊಂಡಾವು? ಹೀಗಾಗಿ ಶುರುವಾತಿನಲ್ಲಿಯೇ ಅದನ್ನು ತಡೆದುಬಿಟ್ಟರೆ ಒಳ್ಳೆಯದು.
ಎಲ್ಲ ರೀತಿಯ ಕೆಮ್ಮುಗಳಿಗೆ ಆದಿಯಲ್ಲಿಯೇ ತಡೆಗೋಡೆಯನ್ನು ನಿರ್ಮಿಸುವ ಒಂದು ಆಯುರ್ವೇದ ವಿಧಾನವಿದೆ. ಅದು ಸುವರ್ಣಾಮೃತಪ್ರಾಶನ. ಸುವರ್ಣದ ಭಸ್ಮ, ಜೇನು, ಹಸುವಿನ ತುಪ್ಪ ಮತ್ತಿತರ ಆಯುರ್ವೇದ ವನಸ್ಪತಿಯಿಂದ ತಯಾರಿಸಿದ ಔಷಧವಿದು. ಪುಟಾಣಿಮಕ್ಕಳಿಗೆ ವಯಸ್ಸಿಗೆ ತಕ್ಕಂತೆ ನಿಗದಿತ ಪ್ರಮಾಣದಲ್ಲಿ ಈ ಔಷಧವನ್ನು ಕುಡಿಸುವುದರಿಂದ ಮಕ್ಕಳಲ್ಲಿ ಕೆಮ್ಮಿನ ವಿರುದ್ದ ಒಂದು ಅತ್ಯುತ್ತಮವಾದ ಶಕ್ತಿಯು ಉತ್ಪನ್ನವಾಗುವುದು.
ಪುಷ್ಯಾನಕ್ಷತ್ರದ ದಿನದಂದು ಹಸುಳೆಗಳಿಗೆ ಈ ಪ್ರಾಶನವನ್ನು ಮಾಡಿಸುವುದು ವಾಡಿಕೆ. ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಗಳೆಲ್ಲವೂ ಈ ಸುವರ್ಣಪ್ರಾಶನವನ್ನು ಒಂದು ಅಭಿಯಾನವನ್ನಾಗಿಯೇ ಪರಿಗಣಿಸಿ ಪ್ರತೀತಿಂಗಳ ಪುಷ್ಯಾನಕ್ಷತ್ರದ ದಿನ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ವರ್ಷವಿಡೀ ಈ ಕಾರ್ಯಕ್ರಮವು ನಡೆಸಲ್ಪಡುತ್ತದೆ.
ಯಾರಿಗೆ ಪುಟಾಣಿ ಮಕ್ಕಳಿದ್ದಾರೆಯೋ, ಯಾರಿಗೆ ಪುಷ್ಯಾನಕ್ಷತ್ರಗಳಿರುವ ದಿನಗಳ ಬಗ್ಗೆ ಗೊತ್ತಿಲ್ಲವೋ ಅವರೆಲ್ಲರೂ ಈ ಪಟ್ಟಿಯನ್ನು ನೋಡಿಕೊಂಡು ನಿಮಗೆ ಸಮೀಪವಿರುವ ಆಯುರ್ವೇದಾಲಯಕ್ಕೆ ಹೋಗಿ ಸುವರ್ಣಪ್ರಾಶನವನ್ನು ಮಾಡಿಸಬಹುದು.
ನಿಮ್ಮ ನಿಮ್ಮ ಫೋನಿನಲ್ಲಿ ಈ ದಿನಕ್ಕೆ ಒಂದೆರಡು ದಿನಗಳ ಮೊದಲೇ ಒಂದು ಅಲಾರ್ಮ್ ಅನ್ನು ಸೆಟ್ ಮಾಡಿಟ್ಟುಕೊಂಡರೆ ಸಹಾಯವಾಗುವುದು.
ಇಲ್ಲಿರುವ ಮಾಹಿತಿಯನ್ನು ನಾನು ನನಗೆ ಪರಿಚಿತರಿಂದ ಮತ್ತು ಇಂಟರ್ ನೆಟ್ಟಿನಿಂದ ಪಡೆದಿದ್ದೇನೆ. ಮಗುವಿನ ಸುವರ್ಣಪ್ರಾಶನವನ್ನು ಮಾಡಿಸುವ ವಿಷಯದಲ್ಲಿ ನಿಮಗೆ ಸಂದೇಹಗಳಿದ್ದಲ್ಲಿ ನೇರವಾಗಿ ನಿಮ್ಮ ವೈದ್ಯರನ್ನೇ ಸಂಪರ್ಕಿಸಬೇಕು.
Be First to Comment