ಶ್ರೀಃ
ಶ್ರೀವೇದವ್ಯಾಸಾಯನಮಃ
ಶ್ರೀಮಧ್ವರಾಜಗುರುಭ್ಯೋನಮಃ
ಶ್ರೀಮಂತ್ರಾಲಯಪ್ರಭುಗಳಿಗೆ ಜಯವಾಗಲಿ.
ಇಂದ್ರದ್ಯುಮ್ನನು ಕೀರ್ತಿವಂತನು. ರಾಜರ್ಷಿಯಿವ. ಇಳೆಯ ಮೇಲಿದ್ದಷ್ಟೂ ದಿನ ಬಲು ಒಳ್ಳೆಯ ಕೆಲಸಗಳನ್ನು ಮಾಡಿ ಕೀರ್ತಿಯನ್ನು ಗಳಿಸಿದ್ದಾತನು. ಈ ಕೀರ್ತಿಯ ಕಾರಣದಿಂದ ಬಹುಕಾಲ ನಾಕದ ನಿವಾಸಿಯಾಗಿದ್ದನು. ಕಾಲಾಂತರದಲ್ಲಿ ಭೂಲೋಕದಲ್ಲಿ ಈ ಕೀರ್ತಿಯು ಸವೆಯುತ್ತಾ ಬಂದು, ಕೊನೆಗೊಮ್ಮೆ ಇಲ್ಲದಂತಾಯಿತು. ಅಂದೇ ನಮ್ಮ ರಾಜರ್ಷಿಯು ಸ್ವರ್ಗದಿಂದ ಬಿದ್ದುಬಿಟ್ಟನು. ಸ್ವರ್ಗಕ್ಕೆ ಹಿಂದಿರುಗಲು ದೇವತೆಗಳೊಂದು ಉಪಾಯವನ್ನು ಹೇಳಿದರು. ಒಂದು ವೇಳೆ ಭೂಮಿಯಲ್ಲಿ ಇನ್ನೂ ಯಾರಿಗಾದರೂ ನಿನ್ನ ನೆನಪಿದ್ದಲ್ಲಿ ನಿನಗೆ ಮತ್ತೂ ಸ್ವರ್ಗಾವಕಾಶವುಂಟು ಎಂಬುದೇ ಆ ಉಪಾಯ.
ಸ್ವರ್ಗದಲ್ಲಿದ್ದೇ ಬಹುಕಾಲಕಳೆದವನು ಈಗ ತನ್ನ ನೆನಪು ಇರುವವರನ್ನು ಭೂಮಿಯಲ್ಲಿ ನೋಡಬೇಕೆಂದರೆ ವಯಸ್ಸಿನಲ್ಲಿ ಸಾಕಷ್ಟು ದೊಡ್ಡವರನ್ನೇ ಕಾಣಬೇಕು.
ನೇರವಾಗಿ ಹೋಗಿ ಮಾರ್ಕಂಡೇಯರನ್ನೇ ಕಂಡ. ಅವರಿಗೆ ನಮಿಸಿ “ನನ್ನ ಗುರುತು ಹತ್ತಿತಾ ನಿಮಗೆ” ಎಂದು ಕೇಳಿದ. ಅವರು “ನೆಲದಮಂದಿ ನಾವು. ಏನೆಲ್ಲ ಕಾರಣಗಳಿಂದ ಮೈಮೆತ್ತಗಾಗಿ ಹೋಗಿದೆ. ನಿತ್ಯದ ಅನುಷ್ಠಾನಗಳನ್ನೇ ಮಾಡಲಾಗುತ್ತಿಲ್ಲ. ನೀನಾರೆಂದು ನನಗೆ ಗುರುತಾಗುತ್ತಿಲ್ಲ” ಎಂದು ಹೇಳಿದರು. ಆಗ ರಾಜನು ” ನಿಮಗಿಂತಲೂ ಮೊದಲು ಹುಟ್ಟಿದವರು ಯಾರಾದರೂ ಇದ್ದಾರೆಯೋ” ಎಂದು ಕೇಳಿದ.
“ಹಾಂ, ಹಿಮಾಲಯದಲ್ಲಿ ಪ್ರಾಕಾರಕರ್ಣನೆಂಬ ಗೂಬೆಯು ಇದೆ. ನನಗಿಂತ ಮೊದಲೇ ಹುಟ್ಟಿದೆ ಅದು” ಎಂದು ಮಾರ್ಕಂಡೆಯರು ಹೇಳಿದರು. ಇಂದ್ರದ್ಯುಮ್ನನು ಕುದುರೆಯ ರೂಪತಾಳಿ ಮಾರ್ಕಂಡೇಯರನ್ನು ಕೂಡಿಸಿಕೊಂಡು ಪ್ರಾಕಾರಕರ್ಣನನ್ನು ಸೇರಿದ. ಆ ಗೂಬೆಯೂ ಇಂದ್ರದ್ಯುಮ್ನನನ್ನು ಗುರುತಿಸದೆ ಹೋಯಿತು. ಆದರೆ ತನಗಿಂತಲೂ ಮೊದಲೇ ಹುಟ್ಟಿರುವ ನಾಲೀಜಂಘನೆಂಬೊಬ್ಬ ಕೊಕ್ಕರೆಯ ಬಳಿ ರಾಜ ಮತ್ತು ಋಷಿಗಳನ್ನು ಕರೆದೊಯ್ದಿತು. ಅದು ಇದ್ದ ವಿಳಾಸದ ಹೆಸರೇ ಇಂದ್ರದ್ಯುಮ್ನ ಸರೋವರವೆಂದು. ಆದರೇನು? ನಾಲೀಜಂಘನು ಸಹ ರಾಜನನ್ನು ಗುರುತಿಸಲಿಲ್ಲ. ಆದರೆ ಅದು ಅದೇ ಸರೋವರದಲ್ಲಿ ವಾಸಿಸುತ್ತಿರುವ ಇನ್ನೂ ದೀರ್ಘಾಯುಷಿಯಾದ ಆಮೆಯ ಬಳಿ ಕರೆದೊಯ್ದು ಕೇಳಿತು. ಅದರ ಹೆಸರು ಅಕೂಪಾರನೆಂದು. ಮುಪ್ಪಾತಿ ಮುಪ್ಪಿನ ಮುದುಕನದು.
ಮಾರ್ಕಂಡೇಯರು ಮತ್ತು ನಾಲೀಜಂಘರು “ಈ ಇಂದ್ರದ್ಯುಮ್ನ ರಾಜನನ್ನು ನೀನು ಬಲ್ಲೆಯಾ?” ಎಂದು ಅಕೂಪಾರನಿಗೆ ಕೇಳಿದರು. ಆ ಪ್ರಶ್ನೆಯನ್ನು ಕೇಳಿ ಅಕೂಪಾರನು ಒಂದು ಮುಹೂರ್ತದ ಕಾಲ ಯೋಚಿಸಿ, ಕಣ್ಣುಗಳಲ್ಲಿ ನೀರನ್ನು ತುಂಬಿಕೊಂಡು, ಉದ್ವೇಗದ ಮನಸ್ಸಿನಿಂದ ನಡುಗುತ್ತಾ ಎಚ್ಚರವನ್ನೇ ಕಳೆದುಕೊಂಡಂತಾಗಿ, ಎರಡೂ ಕೈಗಳನ್ನು ಜೋಡಿಸಿ ಹೇಳಿತು.
“ಈ ಪುಣ್ಯವಂತನನ್ನು ನಾನು ತಿಳಿಯದೇ ಇರಲು ಹೇಗೆ ಸಾಧ್ಯ? ಹಿಂದೆ ಯಾಗಗಳನ್ನು ಮಾಡುವಾಗ, ನನ್ನನ್ನು ಅನೇಕ ಬಾರಿ ದಯಾಮಯನಾಗಿ ಕಟ್ಟಿಗೆಗಳ ರಾಶಿಯ ಮಧ್ಯ ಹಾಕಿ, ಅವರಿವರ ಕಾಲಿಗೆ ಸಿಲುಕದಂತೆ ರಕ್ಷಿಸಿದ್ದಾನೆ. ಈ ಸರೋವರವಾದರೂ ಹೇಗೆ ಉಂಟಾಯಿಂತೆಂದುಕೊಂಡಿರುವಿರಿ? ದಕ್ಷಿಣಾಜಲಸಹಿತವಾಗಿ ದಾನ ಮಾಡಿದ ಆಕಳುಗಳು, ಆ ಜಲವನ್ನು ದಾಟಿ ದಾಟಿ ಉಂಟಾದುದು. ಆಗಿನಿಂದಲೂ ನಾನು ಇಲ್ಲಿಯೇ ಮನೆಮಾಡಿಕೊಂಡಿರುವೆ. “
ಆಮೆಯು ಈ ಮಾತನ್ನು ಹೇಳಿದ್ದೇ ತಡ, ದೇವಲೋಕದಿಂದ ರಥವು ಕಾಣಿಸಿಕೊಂಡಿತು. ಹಿಂದಿನಿಂದ ಮಾತೂ ಕೇಳಿಸಿದವು. “ಎಲ್ಲಿಯವರೆಗೆ ಮನುಷ್ಯನು ಮಾಡಿದ ಪುಣ್ಯಕರ್ಮದ ಸದ್ದು ಸ್ವರ್ಗ ಮತ್ತು ಭುವಿಗಳನ್ನು ತಾಕುವುದೋ ಅಲ್ಲಿನವರೆಗೆ ಅವನು ಸ್ವರ್ಗದಲ್ಲಿ ಮೆರೆಯುವನು. ಯಾವನು ಭೂಮಿಯ ಮೇಲೆ ಕುಖ್ಯಾತನೋ ಆ ಅಕೀರ್ತಿಯ ಭೂಮಿಯ ಮೇಲೆ ಕೇಳುತ್ತಿರುವಷ್ಟು ಕಾಲವೂ ಅಧಮಲೋಕದಲ್ಲಿ ಬಿದ್ದಿರುತ್ತಾನೆ. ಹೀಗಾಗಿ ಪಾಪದ ಕಾರ್ಯಗಳನ್ನು ಬಿಟ್ಟು, ಮಂಗಲಕರವಾದ ನಡತೆಯನ್ನೇ ಹೊಂದಿರಬೇಕು. ಇಂದ್ರದ್ಯುಮ್ನನೇ ನಿನ್ನ ಕೀರ್ತಿಯು ಭುವಿಯಲ್ಲಿ ಸ್ಥಿರವಾಗಿದೆ. ಹೀಗಾಗಿ ಸ್ವರ್ಗವಾಸವು ನಿನಗೆ ಮುಂದುವರೆದಿದೆ. ಯಾವ ವಿಶಾದವೂ ಇಲ್ಲದೆ ಸ್ವರ್ಗಕ್ಕೆ ನಡೆ. “
ಈ ಮಾತನ್ನು ಕೇಳಿದ ರಾಜನು ರಥದಲ್ಲಿದ್ದ ದೇವದೂತರನ್ನು ಕುರಿತು “ಈ ಇಬ್ಬರೂ ವೃದ್ಧರನ್ನು ಅವರವರ ಜಾಗಕ್ಕೆ ಸೇರಿಸು ಬರುವೆ. ಅಲ್ಲಿಯ ತನಕ ಸ್ವಲ್ಪ ನಿಂತಿರು” ಎಂದು. ಪ್ರಾಕಾರಕರ್ಣನನ್ನೂ ಶ್ರೀಮಾರ್ಕಂಡೆಯರನ್ನೂ ಅವರರ ಸ್ಥಾನಗಳಿಗೆ ಸೇರಿಸಿ ತಾನು ಸ್ವರ್ಗಕ್ಕೆ ನಡೆದನು.
ಈ ವೃತ್ತಾಂತವನ್ನು ಮಾರ್ಕಂಡೆಯರೇ ಪಾಂಡವರಿಗೆ ಹೇಳಿದರು. ಮಹಾಭಾರತದ ವನಪರ್ವದಲ್ಲಿ ಬರುವ ಚರಿತೆಯಿದು. ಮೇಲ್ನೋಟಕ್ಕೆ “ಧರ್ಮನಿಷ್ಠರಿಗೆ ಸ್ವರ್ಗವು ಸಿಗುತ್ತದೆ” ಎಂದಷ್ಟೇ ಕಂಡರೂ ಅನೇಕ ಸೂಕ್ಷ್ಮಗಳನ್ನು ನಾವು ಗಮನಿಸಬಹುದು.
ಆಮೆಯಂತೆ ಬದುಕಬೇಕು
ಆಮೆಯು ಭೂಮಿಯ ಮೇಲೆ ಇರುವ ಜೀವಿಗಳಲ್ಲಿ ಅತ್ಯಂತ ಹೆಚ್ಚು ಕಾಲ ಬದುಕುವುದು. ಕೆಲವು ಜಾತಿಯ ಆಮೆಗಳಂತೂ ೧೫೦ ವರ್ಷಗಳ ಕಾಲ ಬದುಕಬಲ್ಲವು. ಕೋಲ್ಕತ್ತ ಮೃಗಾಲಯದ ಆಮೆಯು ೨೫೬ ವರ್ಷಗಳ ಕಾಲ ಬದುಕಿತ್ತು! ಇತರರಿಗೆ ತೊಂದರೆ ಕೊಡದೆ, ಸಾತ್ವಿಕ ಸಾಧನೆಯನ್ನು ಮಾಡುತ್ತಾ ಆಮೆಯಂತೆ ಬದುಕಬೇಕು. (ಗೀತೆ : ೨:೫೮)
ಗೋದಾನವು ಕ್ರಮವಾಗಿ ಇರಬೇಕು
ಗೋವನ್ನು ದಕ್ಷಿಣೆಯ ಸಮೇತ, ನೀರನ್ನು ಧಾರೆಯೆರೆದೇ ದಾನವಾಗಿ ಕೊಡಬೇಕು. ಆ ದಕ್ಷಿಣೆಯು ಸ್ವೀಕಾರ ಮಾಡಿದವನು ಹಸುವನ್ನು ಸಲಹಲು ಬೇಕಾಗುವಷ್ಟು ಇರಬೇಕು. ಇಲ್ಲವಾದಲ್ಲಿ ಹಸುವು ಒಂದು ಹೊರೆಯಾಗುವುದಷ್ಟೆ. ಸಾಕಲು ಇನ್ನಿಲ್ಲದಷ್ಟು ಕಷ್ಟಪಡಬೇಕು ಅವನು. ಇದರಿಂದ ಪುಣ್ಯವೆಲ್ಲಿಂದ ಬಂದೀತು?
ಕೃತಜ್ಞತೆಯು ಇರಬೇಕು.
ಅಕೂಪಾರನು ಇಂದ್ರದ್ಯುಮ್ನ ರಾಜನು ತನ್ನನ್ನು ಬದುಕಿಸಿದ ಬಗೆಗೆ ಅಕೂಪಾರನು ಅಷ್ಟು ವರ್ಷಗಳಾದರೂ ನೆನಪಿಟ್ಟಿತ್ತು. ಅಷ್ಟೇ ಸಂತಸದಿಂದ ರಾಜನನ್ನು ನೆನಪಿಸಿಕೊಂಡಿತು ಕೂಡ.
ನಂಬಿದವರನ್ನು ಕೈಬಿಡಬಾರದು.
ರಾಜನು ಸ್ವರ್ಗಕ್ಕೆ ಮರಳುವ ಮುನ್ನ ಪ್ರಾಕಾರಕರ್ಣನನ್ನೂ ಮಾರ್ಕಂಡೇಯರನ್ನೂ ವಾಪಸ್ಸು ಅವರ ಸ್ಥಳಗಳಿಗೆ ಸೇರಿಸಿದ. ಅವರಿಬ್ಬರೂ ಇವನಿಗಾಗಿ ಬಂದಿದ್ದರಲ್ಲವೇ? ನಾವು ಮುನ್ನಡೆದರೂ ಸಹ ನಮ್ಮನ್ನು ನಂಬಿಕೊಂಡು ಬಂದವರನ್ನು ನಾವು ಕೈಬಿಡಬಾರದು
ಎಲ್ಲಕ್ಕಿಂತ ಮುಖ್ಯವಾದುದೆಂದರೆ, ಮೋಕ್ಷವು.
ಶ್ರೀಮಧ್ವಾಚಾರ್ಯರು ಸ್ವರ್ಗಾದಿ ಲೋಕಗಳ ಪ್ರಾಪ್ತಿಯ ಮಾತನ್ನು ಹೇಳುತ್ತಾ
ಶುಭೇನ ಕರ್ಮಣಾ ಸ್ವರ್ಗಂ. ನಿರಯಂ ಚ ವಿಕರ್ಮಣಾ |
ಮಿಥ್ಯಾ ಜ್ಞಾನೇನ ಚ ತಮೋ ಜ್ಞಾನೇನೈವ ಪರಂ ಪದಮ್ ||
ಎಂದಿದ್ದಾರೆ.
ಒಳ್ಳೆಯ ಕೆಲಸದಿಂದ ಸ್ವರ್ಗ ಸಿಗುವುದು, ಕೆಟ್ಟ ಕೆಲಸಕ್ಕೆ ನರಕ ವಾಸದ ಶಿಕ್ಷೆ ಎನ್ನುವುದು ಮೇಲಿನ ಕಥೆಯಿಂದ ತಿಳಿಯಿತು. ಆದರೆ ಆಚಾರ್ಯರು ಇನ್ನೂ ಮುಂದುವರೆದು “ಮಿಥ್ಯಾಜ್ಞಾನದಿಂದ ನರಕಕ್ಕೂ ತೀವ್ರವಾದ ಶಿಕ್ಷೆಯಾದ ಯಾವಜ್ಜೀವ ಕತ್ತಲೆಯ ವಾಸವೇ ಗತಿಯು. ಮೋಕ್ಷ ಬೇಕೆಂದರೆ ಶ್ರೀಹರಿಯನ್ನು ಕುರಿತ ಶುದ್ಧವಾದ ಜ್ಞಾನದಿಂದ ಮಾತ್ರವೇ ಸಾಧ್ಯ” ಎಂದು ಸ್ಪಷ್ಟಪಡಿಸಿದ್ದಾರೆ. ಈ ಮಾತು ಇಲ್ಲಿ ಏಕೆ ಪ್ರಸ್ತುತವೆಂದರೆ, ಇಂದ್ರದ್ಯುಮ್ನನು ಅಷ್ಟು ಪುಣ್ಯಸಂಪಾದನೆಯನ್ನು ಮಾಡಿದ್ದರೂ ಕೂಡ ಅವನ ಕೀರ್ತಿಯು ಕ್ಷಯಿಸಿತು. ಅವನ ತಲೆಮಾರಿನವರಿಗೆ ಮಾತ್ರವೇ ಅದು ನೆನಪಿತ್ತು. ಪುಣ್ಯಕಾರ್ಯಗಳಿಂದ ಗಳಿಸಿದ ಕೀರ್ತಿಯೂ ಸಹ ಕೇವಲ ಸ್ವರ್ಗವನ್ನು ಗಳಿಸಿಕೊಡಬಲ್ಲದು. ಹೆಚ್ಚೆಂದರೆ ಸ್ವರ್ಗವಾಸವನ್ನು ಮತ್ತೊಂದಿಷ್ಟು ಅವಧಿಗೆ ಮುಂದುವರೆಸಿಕೊಡಬಲ್ಲದು. ಸ್ವರ್ಗಕ್ಕಿಂತಲೂ ಮಿಗಿಲಾದ, ಆನಂದವು ಸಿಗಬೇಕೆಂದರೆ ಶ್ರೀಹರಿಯಲ್ಲಿ ಜ್ಞಾನಪೂರ್ವಕವಾಗಿ ಭಕ್ತಿಯನ್ನು ಮಾಡಬೇಕು. ಈ ಜ್ಞಾನದಿಂದಲೇ ಪರಮ ಪದವು ದೊರಕುವುದು. ಇದೇ ಶಾಶ್ವತವು.
Be First to Comment