ಇಷ್ಟೆಲ್ಲಾ ವ್ಯವಹಾರ ನಡೆಯುವ ಈ ನಗರದ ಹಿಂದೆ ಯಾವ ಮನೆಮುರುಕರ ತಂತ್ರಗಾರಿಕೆಯೂ ಇಲ್ಲ. ಇಲ್ಲಿ ಉಸಿರಾಡುವ ಯಾವ ಜೀವಿಯೂ ಆಧುನಿಕ ಎಂಬಿಯೇ ಮತ್ತಿತರ ಹಣಮಾಡುವ ಡಿಗ್ರಿಯನ್ನು ಪಡೆದಿಲ್ಲ. ಯಾವ ಗಂಡಸೂ ಟೈ ಹಾಕಿಕೊಂಡಿಲ್ಲ, ಯಾವ ಹುಡುಗಿಯೂ ಲೋಗೋ ಇರುವ, ಮೈ ಬಿಗಿವ ಬಟ್ಟೆಯನ್ನು ಧರಿಸಿಲ್ಲ! ಯಾರ ಮುಖವೂ ಅಸಹಜವಾದ ಪೌಡರು, ತುಟಿರಂಗುಗಳನ್ನು ಬಳಿದುಕೊಂಡಿಲ್ಲ! ಯಾರ ಮುಖವನ್ನು ನೋಡಿದರೂ ಅದು ಕಷ್ಟವನ್ನು ಎತ್ತಿ ತೋರಿಸುವ ಬೆವರಿನಿಂದಲೇ ಕೂಡಿದೆ! ವಿನಯಭರಿತವಾಗಿಯೇ ಗಂಟಲಿಗೆ ಗಾಳ ಹಾಕುವ ಸೃಗಾಲ ನೀತಿಗೆ ಇಲ್ಲಿ ತಾವಿಲ್ಲ! ಇಲ್ಲಿರುವುದು ಏನಿದ್ದರೂ ಏರುಧ್ವನಿಯ, ಜೋರು ಮಾತಿನ ಪ್ರಾಮಾಣಿಕತೆ ಮಾತ್ರ. ಬೇಕಿದ್ದರೆ ತೊಗೋ ಇಲ್ಲದಿದ್ದರೆ ಇಲ್ಲ ಎನ್ನುವ ನೇರವಂತಿಕೆ ಮಾತ್ರ.