ಅರಳುಮಲ್ಲಿಗೆ

ಅರಳುಮಲ್ಲಿಗೆ ಅನ್ನುವ ಚಿಕ್ಕ ಊರು (ನಿಜವಾಗಿಯೂ ಅದೆಷ್ಟು ದೊಡ್ಡದಿದೆ ಅಂತ ನನಗೆ ಗೊತ್ತಿಲ್ಲ,  ಗೂಗಲ್ ಮ್ಯಾಪಿನಲ್ಲಿ ಇನ್ನೂ ಸ್ಪಷ್ಟವಾದ ಚಿತ್ರಗಳು ಮೂಡಿಬಂದಿಲ್ಲ)  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಸನಿಹದಲ್ಲಿದೆ. ಊರು ಚಿಕ್ಕದಾದರೂ ಊರಿನ ಹೆಸರು ಮಾತ್ರ ಖ್ಯಾತ ವಿದ್ವಾಂಸರಾದ ಅರಳುಮಲ್ಲಿಗೆ ಪಾರ್ಥಸಾರಥಿಯವರೊಂದಿಗೆ ಜಗತ್ತನ್ನು ಸುತ್ತಿಬಂದಿದೆ. ನಮ್ಮವರೊಬ್ಬರ ಕಾರಣದಿಂದ ಈ ಊರಿನ ಹೆಸರು ಖ್ಯಾತಿ ಹೊಂದಿರುವುದು ಸಂತಸದ ವಿಷಯ. ಆದರೆ ಈ ಊರಿಗೆ ಆ ಹೆಸರು ಬಂದಿರುವುದರ ಹಿನ್ನೆಲೆಯನ್ನು ತಿಳಿದರೆ ನಿಮಗೆ ಉಂಟಾದ ಆ ಸಂತೋಷವು ಉಕ್ಕಿ ಹೊರಚೆಲ್ಲುವುದು. ಹೌದು! ಅಷ್ಟು ಭಕ್ತಿ ರಸಭರಿತವಾದ ಘಟನೆ ಅದು.

ಅಜ್ಞಾನತಿಮಿರಮಾರ್ತಾಂಡ ಎನ್ನುವ ಬಿರುದು ಧರಿಸಿರುವ ಪೂಜ್ಯ ಶ್ರೀಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರು ಈ ವಿಷಯವನ್ನು ೮-೧೦ ವರ್ಷಗಳ ಹಿಂದೆ ಮಂತ್ರಾಲಯದಲ್ಲಿ ಮಾಡಿದ ಪ್ರವಚನವೊಂದರಲ್ಲಿ ತಿಳಿಸಿಕೊಟ್ಟ ಮಾಹಿತಿ ಇದು.

ಗುರುಸಾರ್ವಭೌಮ ಶ್ರೀರಾಘವೇಂದ್ರತೀರ್ಥರ ಗುರುಗಳಾದ ಶ್ರೀ ಸುಧೀಂದ್ರತೀರ್ಥರು ತಮ್ಮ ಸಂಚಾರಕ್ರಮದಲ್ಲಿ ಈ ಸ್ಥಳಕ್ಕೆ ಬರುತ್ತಾರೆ. ಅವರು ಬಂದಾಗ ಮುಸ್ಸಂಜೆಯ ಸಮಯ. ಶ್ರೀಗಳವರು ಈ ಗ್ರಾಮದಲ್ಲಿ ತಮ್ಮ ಗತಿಯನ್ನು ಮುಂದುವರೆಸುವುದಕ್ಕಿಂತಲೂ ಮೊದಲಿಗೆ, ಅಲ್ಲಿ ಸಮೀಪದಲ್ಲಿಯೇ ಇದ್ದ,  ಶ್ರೀವ್ಯಾಸರಾಜರು  ಪ್ರತಿಷ್ಠಾಪಿಸಿದ ಮುಖ್ಯಪ್ರಾಣನ ಸನ್ನಿಧಿಗೆ ಹೋಗಿ ದರ್ಶನ ಮಾಡಲು ಇಚ್ಛಿಸಿದರು. ದರ್ಶನಕ್ಕೆ ಹೋದಾಗ ಪ್ರಾಣದೇವರಿಗೆ ಸಮರ್ಪಿಸಲು ಹೂವುಗಳು ದೊರೆಯಲಿಲ್ಲ.  ಆದರೆ ಪುಷ್ಪ ಸಮರ್ಪಣೆ ಮಾಡಲೇಬೇಕೆಂಬ ಪ್ರಬಲೇಚ್ಛೆಯಿಂದ ಶ್ರೀಗಳವರು ತಮ್ಮ ಬಳಿಯಿದ್ದ ಬಂಗಾರದ ಮಲ್ಲಿಗೆಯ ಮೊಗ್ಗುಗಳನ್ನು ಪ್ರಾಣದೇವರಿಗೆ ಸಮರ್ಪಿಸಿ, ಸ್ತುತಿಸಿ ಮುಂದೆ ಗ್ರಾಮದಲ್ಲಿ ವಾಸ್ತವ್ಯವನ್ನು ಮಾಡಿದರು.

ಮಾರನೆ ದಿನ ಮುಂಜಾವದಲ್ಲಿ ಪ್ರಾಣದೇವರ ಸನ್ನಿಧಿಯಲ್ಲಿ ಬಂದು ನೋಡಿದಾಗ ಅಪೂರ್ವವಾದ ದೃಶ್ಯವು ಭಕ್ತರನ್ನು ಎದುರುಗೊಂಡಿತು! ಹಿಂದಿನ ದಿನ ಸಂಜೆಯಲ್ಲಿ ಶ್ರೀಸುಧೀಂದ್ರತೀರ್ಥರು ಸಮರ್ಪಿಸಿದ್ದ ಬಂಗಾರದ ಮಲ್ಲಿಗೆಯ ಮೊಗ್ಗುಗಳೆಲ್ಲ ಅರಳಿದ ಮಲ್ಲಿಗೆಗಳಾಗಿ ಮುಗುಳ್ನಗೆಯ ಸುವಾಸನೆಯನ್ನು ಬೀರುತ್ತಿವೆ!  ಸುಧೀಂದ್ರತೀರ್ಥರು ತುಂಬು ಭಕ್ತಿಯಿಂದ ಸಮರ್ಪಿಸಿದ್ದ ಮೊಗ್ಗುಗಳನ್ನು ಮುಖ್ಯಪ್ರಾಣದೇವರು ತುಂಬು ಮನಸ್ಸಿನಿಂದ ಸ್ವೀಕರಿಸಿದ್ದ!  ಅತಿಶಯವಾದ ಈ ಭಕ್ತಿ ಹಾಗು ವಾತ್ಸಲ್ಯದ ಘಟನೆಯನ್ನು ನೋಡಿ ಭಕ್ತರು ಆಶ್ಚರ್ಯ ಹಾಗು ಆನಂದದ  ಸಂಗಮದಲ್ಲಿ ಮಿಂದು ಆ ಗ್ರಾಮವನ್ನು “ಅರಳುಮಲ್ಲಿಗೆ” ಎಂದು ಕರೆದರು!

ಇದು ಶ್ರೀಸುಧೀಂದ್ರತೀರ್ಥ ಶ್ರೀಪಾದಂಗಳವರ ಭಕ್ತಿಯ ಔನ್ನತ್ಯ ಹಾಗು ಪ್ರಾಣದೇವರ ಭಕ್ತವಾತ್ಸಲ್ಯದ ಪರಾಕಷ್ಠೆ. ಈಗ ಅಲ್ಲಿ ಪೂಜೆ ಸಲ್ಲಿಸುತ್ತಿರುವ ಅರ್ಚಕರಿಗೆ ಈ ಘಟನೆಗೆ ಸಂಬಂಧಪಟ್ಟಂತೆ ಏನಾದರೂ ಹೆಚ್ಚಿನ ಮಾಹಿತಿಗಳಿದ್ದರೂ ಇರಬಹುದು. ಅಲ್ಲಿಗೆ ಹೋಗಿ ತಿಳಿದುಕೂಂಡು ಬರಬೇಕು ಆದಷ್ಟು ಬೇಗ.

ಕೊ: ಈ ಲೇಖನದ ಮೊದಲಿಗೆ ಹಾಕಿರುವ ಚಿತ್ರ ಅರಳುಮಲ್ಲಿಗೆಯದಲ್ಲ. ನ್ಯಾಶನಲ್ ಜಿಯೋಗ್ರಫಿ ವೆಬ್ಸೈಟಿನಿಂದ ತೆಗೆದುಕೊಂಡಿದ್ದೇನೆ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts