ಉತ್ತರಾಯಣದಂದು ಉಸಿರು ನೀಡಿದ ಪೇಜಾವರ ಶ್ರೀಗಳು.
————————————————————————–
ನೀರಿನಲ್ಲಿ ಮುಳುಗಿಹೋಗುತ್ತಿರುವವನಿಗೇನಾದರೂ ಅದೃಷ್ಣವಿದ್ದರೆ, ಹಿಡಿದುಕೊಂಡು ತೇಲುವುದಕ್ಕೆ ಗಂಧದ ಕಟ್ಟಿಗೆಯೇ ಸಿಗುವುದಂತೆ. ಅದೇ ಸುಭಾಷಿತವು ಇಂದು ನೆನಪಾಯಿತು.
ಇಂದು ಉಡುಪಿಯಲ್ಲಿ ಚೂರ್ಣೋತ್ಸವದ ಗೌಜಿ. ಬಹುದೊಡ್ಡ ಭಕ್ತ ಸಮೂಹವು ಸಪ್ತೋತ್ಸವದ ಅವಬೃಥದಲ್ಲಿ ಮೀಯಲು ಸೇರಿತ್ತು. ಶ್ರೀಕೃಷ್ಣನ ವಸಂತ ಉತ್ಸವವನ್ನು ಮುಗಿಸಿಕೊಂಡು ಶ್ರೀಗಳವರ ಸಮೂಹವು ಮಧ್ವ ಸರೋವರಕ್ಕೆ ಬರುವ ಮೊದಲೇ ನೂರಾರು ಜನ ಸರೋವರದ ಕಟ್ಟೆಯ ಮೇಲೆ, ಸರೋವರದ ಒಳಗೆ ಇಳಿದಾಗಿತ್ತು. ಇವರಲ್ಲಿ ಯಾರೋ ಇಬ್ಬರು ಭಾಗ್ಯಶಾಲಿಗಳು ಸಹ ಇದ್ದರು. ಪ್ರಾಯಶಃ ಇವರು ಸಹ ಮೊದಲೇ ಇಳಿದಿರಬೇಕು. ಸರೋವರದಲ್ಲಿ ಇಳಿದು ತಮಗೆ ಅನುಕೂಲವಾಗುವ ಮೆಟ್ಟಿಲೊಂದರ ಮೇಲೆ ನಿಂತಿದ್ದರು.
ಶ್ರೀಕೃಷ್ಣದೇವರನ್ನು ಸರೋವರಕ್ಕೆ ಎಲ್ಲ ಶ್ರೀಗಳವರು ಕರೆತಂದರು. ಅವರ ಹಿಂದೆ ಮುಂದೆ ಮತ್ತೂ ನೂರಾರು ಜನ ಸರೋವರದೊಳಗೆ ಪ್ರವೇಶಿಸಿದರು. ಇನ್ನೇನು ಶ್ರೀಕೃಷ್ಣದೇವರ ಅಭಿಷೇಕವು ಮೊದಲಾಗಬೇಕು. ಅಷ್ಟರೊಳಗೆ ಮೇಲೆ ಹೇಳಿದ ಇಬ್ಬರು ಭಾಗ್ಯಶಾಲಿಗಳು ಜನಸಂದೋಹದ ಮಧ್ಯ ಸಿಲುಕಿ ಸರೋವರದ ಆಳದ ಭಾಗಕ್ಕೆ ಬಿದ್ದು ಬಿಟ್ಟರು. ಈಜಲಾಗದೆ ಮುಳುಗುತ್ತಿದ್ದ ಅವರಿಗೆ ಒದಗಿ ಬಂದದ್ದು ಶ್ರೀಪೇಜಾವರ ಶ್ರೀಗಳವರ ಕಾವಿ ಮೇಲು ವಸ್ತ್ರ! ಅದನ್ನು ಶ್ರೀಗಳವರೇ ತಮ್ಮ ಹೆಗಲ ಮೇಲಿಂದ ತೆಗೆದು ಅವರ ಕೈಗೆ ಎಸೆದದ್ದು! ಇದೆಲ್ಲ ನಡೆದದ್ದು ಕ್ಷಣಾರ್ಧದಲ್ಲಿ. ಶ್ರೀಗಳವರು ಎಸೆದ ಆ ವಸ್ತ್ರದ ತುದಿಯನ್ನು ಹಿಡಿದು ಕೊಂಡ ಆ ಇಬ್ಬರು ಭಕ್ತರನ್ನು ಇತರರು ಎಳೆದುಕೊಂಡು ದಡಕ್ಕೆ ಸೇರಿಸಿದರು.
ಇಷ್ಟೆಲ್ಲ ನಡೆದರೂ ಅದು ಹೆಚ್ಚಿನ ಜನರ ಗಮನಕ್ಕೆ ಬರಲೇ ಇಲ್ಲ. ಶ್ರೀಗಳವರು ಶ್ರೀಕೃಷ್ಣನ ಸ್ತೋತ್ರವನ್ನು ಪಾರಾಯಣ ಮಾಡುತ್ತಲೇ, ಮುಳುಗುತ್ತಿದ್ದವರತ್ತ ಎಷ್ಟು ಸಹಜವಾಗಿ, ತ್ವರಿತವಾಗಿ ಶಾಟಿಯನ್ನು ಎಸೆದರೋ, ಅಷ್ಟೆ ಸಹಜವಾಗಿ ಮತ್ತೆ ಶ್ರೀಕೃಷ್ಣನ ಸ್ತುತಿ ಮತ್ತು ಅಭಿಷೇಕದಲ್ಲಿ ಮಗ್ನರಾಗಿ ಬಿಟ್ಟರು. ಏನೂ ನಡೆದೇ ಇಲ್ಲವೆಂಬಂತೆ. ಅವರ ಅಸಾಧಾರಣವಾದ ಸಮಯಪ್ರಜ್ಜೆ ಅವರದು ಎಂಬುದಕ್ಕೆ ಇಂದಿನ ಈ ಘಟನೆಯು ಸಾಕ್ಷಿ.
ಶಾಟಿಯನ್ನು ಬೀಸಿ ಹಡಗನ್ನು ರಕ್ಷಿಸಿದವರ, ಶಾಟಿಯನ್ನು ಅಂತರಿಕ್ಷದಲ್ಲಿ ನಿಲ್ಲಿಸಿ ಗರ್ಭರಕ್ಷಣೆ ಮಾಡಿದರವರ ಪರಂಪರೆಯವರು ನಾವು. ಈ ಪರಂಪರೆಗೆ ಶಾಟಿಯನ್ನು ಕೊಟ್ಟು ಜೀವರಕ್ಷಣೆ ಮಾಡಿದ ಗುರುಗಳೂ ಸೇರಿಕೊಂಡರು.
ಎಂಥಾ ಸಮಯಪ್ರಜ್ಞೆ, ಎಂಥಾ ಸಮಚಿತ್ತ! ಅಪೂರ್ವ. ಅಪೂರ್ವ. ಅವರ ಮುಖದಲ್ಲಿದ್ದ ಆ ಒಂದು ಸಮಚಿತ್ತವು ದೂರದಿಂದಲೂ ಗೋಚರವಾಯ್ತು.
ಅಷ್ಟೊಂದು ಜನರು ಈಜುಪಟುಗಳಿದ್ದರೂ ಆ ಸಮಯದಲ್ಲಿ ಆ ಇಬ್ಬರು ಭಕ್ತರಿಗೆ ಶ್ರೀಗಳವರ ಕರಾವಲಂಬನವೇ ಸಿಕ್ಕಿತಲ್ಲ. ಕುಸಿಯುತ್ತಿದ್ದ ಅವರ ಅಸುವು ಮತ್ತೆ ದೇಹದೊಂದಿಗೆ ಬೆಸುಗೆಯಾಯ್ತು. ಅದಕ್ಕಾಗಿಯೇ ನಾನು ಅವರನ್ನು ಭಾಗ್ಯಶಾಲಿಗಳು ಎಂದು ಕರೆದದ್ದು.
ನೂರಾರು ಜನರು ಅವಬೃಥಸ್ನಾನದ ವಿಡಿಯೋ ಮಾಡಿಕೊಂಡಿದ್ದಾರೆ. ಯಾವುದಾದರೂ ಒಂದು ವಿಡಿಯೋದಲ್ಲಿ ಈ ಶಾಟಿ ಬೀಸುವ ಒಂದು ಕ್ಷಣವು ಸೆರೆಯಾಗಿರುತ್ತದೆ. ಸಿಕ್ಕರೆ ತಪ್ಪದೇ ಗಮನಿಸಿ.
ಇನ್ನೊಂದು ಮಾತು : ಶ್ರೀಗಳವರು ಬರೀ ಪಶು-ಪಕ್ಷಿ, ಬಾವಿ, ಈಜು, ಸಾಹಸ ಇಂತದ್ದೇ ಮಾಡುತ್ತಾರೆ ಎಂದೆಲ್ಲ ಊಳಿಡುವ ನರಿಗಳೇ, ದಿವ್ಯ ಪುರುಷರ ಮಹಿಮೆಯು ನಿಮ್ಮಂತಹವರಿಗೆ ತಿಳಿಯುವಷ್ಟು ಅಗ್ಗವಾದ ಸರಕಲ್ಲ. ಸೈಲೆಂಟಾಗಿ ಸೈಡಿನಲ್ಲಿರಿ. ಹೊಟ್ಟೆಕಿಚ್ಚಿನಲ್ಲೇ ಬೇಯುತ್ತಾ. ಅಷ್ಟೆ.
Be First to Comment