ಖರ್ಜೂರಪುರದ ವಾಮನ

ಒಂದು ಅನ್ಯೋನ್ಯಾಶ್ರಯವನ್ನು ನೋಡಿ.

ಭಕ್ತರ ಬೇಡಿಕೆ
೧) ದೇವಾಲಯಗಳಲ್ಲಿ ನಿತ್ಯ ಪೂಜೆಯು ನಡೆಯುತ್ತಿದ್ದರೆ ಮಾತ್ರವೇ ಅಲ್ಲಿನ ಶಕ್ತಿಯು ಜಾಗೃತವಾಗಿ ಇರುವುದು. ಶಕ್ತಿಯು ಇಲ್ಲದೆ ಹೋದರೆ ಜನರು ದೇವಾಲಯಕ್ಕೆ ಯಾಕೆ ಬರುತ್ತಾರೆ?

ಅರ್ಚಕರ ಅಳಲು.
೨) ಜನರು ಬರುತ್ತಿದ್ದರೆ ಮಾತ್ರ ಪೂಜೆಯು ನಿರಂತರವಾಗಿ ನಡೆಯುತ್ತಿರಲು ಸಾಧ್ಯ. ಪೂಜೆಯು ಇಲ್ಲದೆ ಹೋದರೆ ದೇವತಾಸನ್ನಿಧಾನ ಹೇಗೆ ಸ್ಥಿರವಾಗಿ ನಿಲ್ಲುವುದು?

ಧರ್ಮವು ಗಟ್ಟಿಯಾಗಿಯೇ ನಿಲ್ಲಲು ಬೇಕಾದರೆ ಮೇಲೆ ಹೇಳಿದ ಎರಡೂ ಅಂಶಗಳು ಒಂದಕ್ಕೊಂದು ಹೆಣೆದುಕೊಂಡೇ ಇರಬೇಕಾದದ್ದು ಅನಿವಾರ್ಯ. ಎರಡರಲ್ಲಿ ಒಂದರ ಕಣ್ಮರೆಯಾದರೂ ಸಂಸ್ಕೃತಿಯ ಬೇರು ಸಡಿಲಗೊಳ್ಳುತ್ತಿದೆ ಎಂದೇ ಅರ್ಥ. ಅಲ್ಲವೇ?

ಸಂಸ್ಕೃತಿಯು ಸಡಿಲಗೊಳ್ಳಬಹುದಾದ ಮತ್ತೊಂದು ಅಂಶವೂ ಇದೆ. ಅದೇನೆಂದರೆ ಮೂಲವ್ಯಾಧಿಯವರು ದೇವತಾಸನ್ನಿಧಾನವನ್ನೇ ನಾಶ ಮಾಡಿಬಿಡುವುದು. ಎಲ್ಲೆಲ್ಲಿ ಸನಾತನದ ಪ್ರಾಚೀನ ಆಶ್ರಯತಾಣಗಳಿವೆಯೋ ಅಲ್ಲೆಲ್ಲಾ ಅಗಿರುವುದು ಇದೇ ಕೆಲಸ.

ಇಂದು ವಾಮನಜಯಂತಿ.

ವಾಮನನ ಗುಡಿಗಳು ತೀರಾ ಅಪರೂಪ ನಮ್ಮಲ್ಲಿ. ಮಧ್ಯಪ್ರದೇಶದ ಖಜುರಾಹೋದಲ್ಲಿ ಒಂದು ಸುಂದರವಾದ ವಾಮನನ ಗುಡಿಯಿದೆ. ಎತ್ತರವಾದ ಜಗತಿಯ ಮೇಲೆ ಕಟ್ಟಿರುವುದು. ವಾಮನನಂತೂ ತುಂಬಾ ಮುದ್ದಾಗಿದ್ದಾನೆ. ಕೇವಲ ತಾಯ ಹಾಲಿನ ಮೇಲೆಯೇ ಬೆಳೆಯುತ್ತಿರುವಾಗ ಮಗು ಹೇಗೆ ಗುಂಡುಗುಂಡಾಗಿ ಇರುತ್ತದೋ ಹಾಗೆ ತಲೆಯ ಮೇಲೆಲ್ಲ ಗುಂಗುರುಕೂದಲು! ಮುದ್ದಾಗಿ ಬೆಣ್ಣೆಯ ಮುದ್ದೆಯಂತಹ ಕೆನ್ನೆ, ಹೊಟ್ಟೆ, ತೊಡೆಗಳು ಈ ಪುಟ್ಟ ಮೂರ್ತಿಗೆ. ಕೆನ್ನೆಯನ್ನು ಸವರಲೇಬೇಕೆಂಬ ಆಸೆಯು ಉಂಟಾಗುವುದು ಖಂಡಿತ.

ಕಲಿಯ ಪ್ರಾಬಲ್ಯದಿಂದ ಕೆಟ್ಟವರ ಕಣ್ಣು ಇಂಥಾ ಮುದ್ದು ಮೂರ್ತಿಯ ಮೇಲೂ ಬಿದ್ದು, ದೇವರ ಮುಂಗೈಗಳನ್ನೇ ಕತ್ತರಿಸಿ ಹಾಕಿದ್ದಾರೆ. ದೇವಾಲಯದ ಸುತ್ತ ಮುತ್ತಲೂ ಇರುವ ದಿವ್ಯವಾದ ಕೆತ್ತನೆಗಳನ್ನೂ ಯಥಾಶಕ್ತಿ ಯಥಾಮತಿ ನಾಶಗೊಳಿಸಿದ್ದಾರೆ!

ಅವರ ಬುದ್ಧಿ ಹೇಗಾದರೂ ಇರಲಿ. ಆದರೆ ನಮ್ಮದು ನೋಡಿ. ನಮಗೊಂದು ವಿಚಿತ್ರ ಸ್ವಭಾವ. ನಮ್ಮ ದೇವರುಗಳ ಸನ್ನಿಧಿಯನ್ನು ಯಾರಾದರೂ ಅಪವಿತ್ರಗೊಳಿಸಿದರೆ, ನಾಶಗೊಳಿಸಿದರೆ ಆ ಸನ್ನಿಧಿಯತ್ತ ಹೋಗುವುದನ್ನೇ ಬಿಟ್ಟು ಬಿಡುತ್ತೇವೆಯೇ ಹೊರತು. ಸನ್ನಿಧಿಗೆ ಮತ್ತೆ ಶಕ್ತಿಯನ್ನು ತುಂಬುವ ಪ್ರಯತ್ನವನ್ನೇ ಮಾಡುವುದಿಲ್ಲ. ಪುನರುತ್ಥಾನಕ್ಕೆ ಶಾಸ್ತ್ರಗಳ ಸಮ್ಮತಿಯೂ ಇದೆ. ಆದರೆ ದಿವ್ಯವಾದ ಸೋಮಾರಿತವನ್ನು ನಮ್ಮವರು ಶ್ರೀವಾಮನನ ದೇವಾಲಯದ ವಿಷಯದಲ್ಲೂ ತೋರಿದ್ದಾರೆ! ಇಷ್ಟರ ಮಟ್ಟಿಗೆ ಸೋಮಾರಿತನವನ್ನು ನಾನು ಇನ್ಯಾವ ಜನಾಂಗದಲ್ಲೂ ನೋಡಿಲ್ಲ! ಎಂಥ ವಿಪರ್ಯಾಸವಿದು!

ಗುಪ್ತರು, ಚಾಂದೇಲರು ಶುದ್ಧಸನಾತನಿಗಳು. ಮಧ್ಯಪ್ರದೇಶದ ಉದ್ದಗಲಕ್ಕೂ ವಿಷ್ಣುವಿನ ನಾನಾವತಾರದ ದೇಗುಲಗಳು, ಸುಂದರವಾದ ಶಿವಾಲಯಗಳು, ದೇವಿಯ ಅದ್ಭುತವಾದ ಗುಡಿಗಳನ್ನು ನಿರ್ಮಿಸಿಕೊಟ್ಟು ಹೋದರು. ಈ ಎಲ್ಲ ದೇಗುಲಗಳನ್ನೂ ನೀಚರು ಹಾಳುಮಾಡಿದ್ದಾರೆ. ಸರಿ ಸುಮಾರು ೨-೩ ಶತಮಾನಗಳ ಕಾಲ ಈ ಗುಡಿಗಳನ್ನು ಜೀರ್ಣೋದ್ಧಾರ ಮಾಡಲು ಸನಾತನರಿಗೆ ಅವಕಾಶ ದೊರೆಯದೆ ಹೋಗಿದೆ. ಒಪ್ಪೋಣ. ಆದರೆ ಕನಿಷ್ಠಪಕ್ಷ ದೇವತಾಸನ್ನಿಧಾನವನ್ನಾದರೂ ನಮ್ಮವರು ಪುನಸ್ಥಾಪಿಸದೇ ಹೋದದ್ದು ನಿಜಕ್ಕೂ ಸೋಜಿಗೆ. ಅಂಥಾದ್ದು ಏನಿತ್ತೋ ಅನಿವಾರ್ಯತೆ. ನಮ್ಮ ಪೂರ್ವಪಿತೃಗಳೇ ಬಲ್ಲರು.

ಮಹಾದೇವಿ ಅಹಲ್ಯಾಬಾಯಿ ಹೋಳ್ಕರ್ ಮತ್ತು ಶಿವಛತ್ರಪತಿಯಂತಹ ದಿವ್ಯಶಕ್ತಿಗಳ ಉದಯ ಮತ್ತೆ ಆಗಬೇಕು ನಮ್ಮಲ್ಲಿ. ಪೂಜೆ ನಿಂತ ಎಲ್ಲ ಗುಡಿಗಳಲ್ಲಿ ಮತ್ತೆ ನಂದಾದೀಪದ ಬೆಳಕು ಹೊಮ್ಮುವಂತೆ ಆಗಬೇಕು. ನಾವು ಇಂತಹ ಗುಡಿಗಳಿಗೆ ಮತ್ತೆ ಮತ್ತೆ ಹೋಗುವಂತೆ ಆಗಲಿ. ಈ ನಡೆಯು ಪೂಜಾಕೈಂಕರ್ಯಗಳಿಗೆ ಬಲ ತುಂಬುವಂತೆ ಆಗಲಿ. ಆ ನಿತ್ಯಪೂಜೆಯಿಂದ ಮತ್ತೆ ಅಲ್ಲಿ ದೇವತಾಸನ್ನಿಧಾನವು ನಿತ್ಯ ನೆಲೆಗೊಳ್ಳುವಂತೆ ಆಗಲಿ. ಸಾತ್ವಿಕ ಸಮಾಜವು ಮತ್ತೆ ಗಟ್ಟಿಯಾಗಲಿ.


ವಾಮನಜಯಂತಿಯಂದೇ, ಬೇಕೆಂದೇ ಹೊಟ್ಟೆಯು ಉರಿಯುವಂತಹ ಮತ್ತೊಂದು ಸಂಗತಿಯನ್ನು ಹೇಳುತ್ತೇನೆ ಕೇಳಿ. ಕಂಫರ್ಟ್ ಜೋನಿನ ಒಳಗೆಯೇ ಬದುಕುವ ಯಾರಿಗೂ ಇದು ತಿಳಿದಿಲ್ಲ.

“ಬಲಿಯು ತಮ್ಮವನು. ಇವನ ಏಳ್ಗೆಯನ್ನು ಸಹಿಸದೆ ವಾಮನನು ಇವನನ್ನು ಕೊಂದುಬಿಟ್ಟ. ಹೀಗಾಗಿ ವಾಮನನು ತಮ್ಮ ಶತೃವು ಎಂದು ಭಾವಿಸುವ ಒಂದು ದೊಡ್ಡ ವರ್ಗವು ಇಂದಿಗೂ ಇದೆ. ಇವರೂ ಸಹ ಒಂದು ವಿಶಿಷ್ಟವಾದ ರೀತಿಯಲ್ಲಿ ತಮ್ಮ ಹತಾಶೆಯನ್ನು ಹೊರಚೆಲ್ಲುತ್ತಾ ಮೆರವಣಿಗೆಯನ್ನು ಮಾಡುತ್ತಾರೆ. ಒಂದು ಮಡಕೆಗೆ ತೂತುಗಳನ್ನು ಮಾಡಿ, ವಿಕಾರವಾದ ಮೀಸೆ ಬಳಿದು, ಒಂದು ಕೋಲಿಗೆ ಚುಚ್ಚಿ, ಪೊರಕೆಯನ್ನು ಕೊಟ್ಟು ಅದಕ್ಕೆ ವಾಮನ ಎನ್ನುವ ಬೋರ್ಡು ತಗುಲಿಸಿ ಅದರ ಮೆರವಣಿಗೆಯನ್ನು ಮಾಡುತ್ತಾರೆ. ಅವಮಾನ ಮಾಡಿ ಸಂತೋಷಪಡುವ ಒಂದು ವರ್ಗ ಇದು. ಮಹಾರಾಷ್ಟ್ರದ ವಿದರ್ಭಪ್ರದೇಶದಲ್ಲಿ ಒಮ್ಮೆ ನಾನು ಕಣ್ಣಾರೆ ಕಂಡ ಸಂಗತಿ ಇದು. ಕೆಲವರನ್ನು ಕೇಳಿದಾಗ, ಇದು ಕಾಮನ್ ಇಲ್ಲಿ ಎಂದು ಬಿಟ್ಟರು!

ಸರಿ, ಕಲಿಗಾಲ, ಇಂಥದೆಲ್ಲಾ ಇದ್ದದ್ದೇ ಎಂದು ಇವರನ್ನು ನಿರ್ಲಕ್ಷ್ಯ ಮಾಡಿಬಿಡುವ ಹಾಗೆ ಇಲ್ಲ. ಹಾಗೆಂದು ಇಂಥವರ ವಿರುದ್ದ ನೇರವಾಗಿ ಕೈ ಕೈ ಮಿಲಾಯಿಸಿ ಜಗಳವನ್ನೂ ಮಾಡುವ ಹಾಗಿಲ್ಲ. ಆದರೆ ನಮ್ಮ ಸಂಸ್ಕೃತಿಯನ್ನು ಚೆನ್ನಾಗಿ ಮುನ್ನಡೆಸಿಕೊಂಡು ಹೋಗುವ ಮತ್ತೊಂದು ಕ್ರಮವು ಇದ್ದೇ ಇದೆ. ನಾವು ಅದನ್ನು ಅಳವಡಿಸಿಕೊಳ್ಳಬೇಕಷ್ಟೆ.

ನಮ್ಮ ನಮ್ಮ ಮಕ್ಕಳಿಗೆ ಬಲಿ-ವಾಮನ-ತ್ರಿವಿಕ್ರಮರ ಕಥೆಯನ್ನು, ವರಾಹ-ಹಿರಣ್ಯಾಕ್ಷರ ಕಥೆಯನ್ನು, ಕೃಷ್ಣ-ಪಂಚಜ ರಾಕ್ಷಸರ ಕಥೆಯನ್ನು, ರಾಮ-ರಾವಣರ ಕಥೆಯನ್ನು ಅವುಗಳ ತಿರುಳಿನ ಸಹಿತ ಆಗಾಗ ಹೇಳುತ್ತಲೇ ಇರಬೇಕು. ಮಕ್ಕಳನ್ನು ಸನಾತನದ ತಿರುಳನ್ನು ಮಕ್ಕಳಿಗೆ ಉಣಬಡಿಸುತ್ತಾ ಬೆಳೆಸಬೇಕು. ಆಗ ಕನಿಷ್ಠಪಕ್ಷ ಮುಂದಿನ ಪೀಳಿಗೆಯವರೆಗೆ ಆದರೂ ಈ ವೃಕ್ಷವು ಉಸಿರಾಡಿಕೊಂಡು ಇರುತ್ತದೆ.

ಈ ಒಂದು ಉತ್ತಮಕಾರ್ಯವನ್ನು ಮಾಡುವ ಸಂಕಲ್ಪವನ್ನು ಈ ವಾಮನಜಯಂತಿಯಂದೇ ನಾವೆಲ್ಲರೂ ಮಾಡುವಾ.

ಮಕ್ಕಳಿಗೆ ಸಂಸ್ಕೃತಿಯ ಊಟ ಬಡಿಸುವುದೇ ಉತ್ತಮ ಮಾರ್ಗ ಎನ್ನುವ ನನ್ನ ಅನಿಸಿಕೆ ಸರಿ ಎನಿಸಿದರೆ, ಈ ಲೇಖನವನ್ನು ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಿರಿ.
ವಾಮನದೇವರ ಚಿತ್ರಕೃಪೆ : Kvain Standage

ಈಶಾವಾಸ್ಯಂ ಶರ್ಮ
ತ.ಸಂ.ಸಂ. ಬೆಳ್ಳಿಪುರ

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.