ವೈದಿಕ ಬದ್ಧತೆಯು ಅಷ್ಟು ಸರಳವೇ?

ಯಾವಾಗ ಕಾಶಿ / ಗಯಾಕ್ಕೆ ಹೋದರೂ ನಮ್ಮ ಗುಂಪಿನಲ್ಲಿರುವ ಅನೇಕರು ಕೇಳುವ ಒಂದು ಮಾತು. ಸಾರನಾಥಕ್ಕೆ / ಬೋಧಗಯಾಕ್ಕೆ ಕರೆದುಕೊಂಡು ಹೋಗುವುದಿಲ್ಲವೇ? ಎಂದು . ಅವರಿಗೆ ನಾನು ಹೇಳುವುದು ಸಿದ್ಧ ಉತ್ತರ. 1) ಅದು ನನ್ನ ವೇಳಾಪಟ್ಟಿಯಲ್ಲಿ ಇಲ್ಲ. 2) ನನಗೆ ಈಗ ಸಮಯ ಇದ್ದರೂ ಅಲ್ಲಿಗೆ ನಾನು ಮಾರ್ಗದರ್ಶನ ಮಾಡಲು ಬರಲಾರೆ.

ಕಟುವಾಗಿ ಹೇಳಿದ ನನ್ನ ಧ್ವನಿಯನ್ನು ಕೇಳಿ ಬಹುತೇಕರು ಗಾಬರಿಗೊಂಡೇ ಬೋಧಗಯಾ ಮಾತನ್ನು ನಿಲ್ಲಿಸುತ್ತಾರೆ. ಆದರೆ ಕೆಲವರು ಮಾತ್ರ ತಾವೇ ಒಂದು ಗಾಡಿ ಮಾಡಿಕೊಂಡು ಹೋಗಿ ಬರುತ್ತಾರೆ. ಈ ಹೋಗಿ ಬರುವವರಲ್ಲಿ ನಾವು ಸ್ಟಾಂಚ್ ಮಾಧ್ವರು, ನಮ್ಮದು ಆ ಮಠ ಈ ಮಠ ಎಂದು ಕಾಲರು ಹಾರಿಸಿಕೊಳ್ಳುವವರೂ, ನಿಮ್ಮದು ಬರೀ ಮಡಿ ಮಡಿ ಆಯ್ತು, ವೇದಗಳನ್ನು ನಮ್ಮಷ್ಟು ಚೆನ್ನಾಗಿ ಹೇಳಬಲ್ಲಿರೋ ಎಂದು ಪ್ರಶ್ನೆ ಮಾಡುವ ಸ್ಮಾರ್ತರೂ ಇರುತ್ತಾರೆ ಎನ್ನುವುದು ಗಮನಾರ್ಹ.

ಏನೋ ಎಂತೋ ಅಂತೂ ಹೋಗಿ ಬಂದು ಒಂದು ಸಾಧನೆ ಮಾಡಿದ ನಗು ಅವರ ಮುಖದಲ್ಲಿ ಇರುವುದು.

ಕಳೆದ ಬಾರಿ ಕಾಶಿಗೆ ಹೋದಾಗ ನಮ್ಮಲ್ಲಿ ಒಬ್ಬರು ಜ್ಯೋತಿಷಿಗಳು ಬಂದಿದ್ದರು. ಅವರು ಸಾರನಾಥಕ್ಕೆ ಗಾಡಿ ಮಾಡಿಕೊಡಿ ಎಂದು ನನ್ನನ್ನು ಕೇಳಿದರು. ನಾನು ನಮ್ಮ ಗೆಸ್ಟ್ ಹೌಸಿನ ಮಾಲಕನತ್ತ ಕೈತೋರಿದೆ. ಆತ ಒಬ್ಬ ವೈಶ್ಯರವನು. ಮೂಲತಃ ಮಹಾರಾಷ್ಟ್ರದವನು. ಆತ ಇವರನ್ನು ಕುರಿತು ಹಿಂದಿಯಲ್ಲಿ “ಗಾಡಿ ಕೊಡಲು ನಮಗೇನು? ದುಡ್ಡೇ ಸಿಗೋದು ನಮಗೆ. ಆದರೆ ನೀವು ವೈದಿಕರು . ಇವತ್ತು ನಿಮ್ಮ ಹಿರಿಯರ ಶ್ರಾದ್ಧ ಬೇರೆ ಮಾಡಿದ್ದೀರಿ. ಎಲ್ಲಾ ಬಿಟ್ಟು ಸಾರನಾಥಕ್ಕೆ ಯಾಕೆ ಹೋಗ್ತೀರಿ? ನೀವು ಯಾತ್ರೆಗೆ ಬಂದಿರೋರು. ತೀರ್ಥ ಸ್ಥಳ ಅಲ್ಲ ಅದು ಸಾರನಾಥ. ಪಿಕ್ ನಿಕ್ ರೀತಿ ಬಂದಿದ್ದರೆ ಹೋಗಿಬನ್ನಿ” ಎಂದು ಸಲಹೆ ಮಾಡಿದ. ಇವರು ” ನೀವು ಹೀಗ್ಯಾಕೆ ಹೇಳ್ತಾ ಇದೀರಿ” ಅಂತ ಕೇಳಿದರು. ಅದಕ್ಕೂ ಆತ ಸರಿಯಾದ ವಿವರಣೆ ನೀಡಿದ. “ನೋಡಿ, ಸಾರನಾಥ, ಬೋಧಗಯಾ ಇವೆಲ್ಲವೂ ವೇದನಿಂದಕರ ಸ್ಥಳಗಳು. ಯಾವ ವೇದಗಳು ನಮಗೆ ದೇವರನ್ನು ತಿಳಿಸಿಕೊಡುತ್ತವೋ ಆ ವೇದಗಳೇ ಸುಳ್ಳಿನ ಸರಗಳು ಎಂದು ಹೇಳುವವರ ಜಾಗಗಳು. ನಮ್ಮ ಹಿರಿಯರು ಹೇಳಿದ ಎಲ್ಲವನ್ನೂ ಅವರು ನಿರಾಕರಣೆ ಮಾಡ್ತಾರೆ. ಅಷ್ಟೇ ಆಗಿದ್ದರೆ ಏನೋ ಅನ್ನಬಹುದಿತ್ತು, ಆದರೆ ಈಗಲೂ ಸಹ ಅವರು ನಮ್ಮ ಸಂಸ್ಕೃತಿಯನ್ನು ಗೇಲಿ ಮಾಡುವುದು. ಪರಶುರಾಮ, ವಾಮನ, ರಾಮ ಇವರನ್ನೆಲ್ಲ ಬಹಿರಂಗವಾಗಿ ಅವಮಾನಿಸುತ್ತಾರೆ. ಇಂತಹವರ ಸ್ಥಳಗಳಿಗೆ ಹೋಗಲು ವೈದಿಕರಿಗೆ ಏನು ಅಗತ್ಯವಿದೆ?” ಎಂದು.

ಈ ಮಾತು ಕೇಳಿ ನಮ್ಮವರು ಕ್ಷಣಕಾಲ ಗೊಂದಲಕ್ಕೆ ಬಿದ್ದರು. “ಸಧ್ಯಕ್ಕೆ ಗಂಗಾ ನದಿ ಕಡೆ ಹೋಗ್ತೀವಿ. ಆಮೇಲೆ ನೋಡ್ತೀವಿ ಸಾರನಾಥದ ಬಗ್ಗೆ” ಅಂತ ಹೇಳಿ ಹೊರಗೆ ಹೋದರು.

ಅವರು ಹೋದಮೇಲೆ ಗೆಸ್ಟ್ ಹೌಸಿನ ಮಾಲಕನು ಹೇಳಿದ. ಹೊರಗೆ ಹೋಗಿ ತಾವೇ ಒಂದು ಗಾಡಿ ಮಾಡಿಕೊಂಡು ಸಾರನಾಥಕ್ಕೆ ಹೋಗಿ ಬರುತ್ತಾರೆ ನೋಡಿ ಅಂತ. ಅದು ಹಾಗೆಯೇ ಆಗಿತ್ತು.

ಗೋವೆಗೆ ಹೋದಾಗ ನಾವು ಮಹಾದೇವನ, ಗೋಪಾಲಕೃಷ್ಣನ ದರ್ಶನ ಮಾಡಲಾರೆವು. ಒಣಗಿದ ಹೆಣಗಳಿಗೆ ತಲೆಬಾಗಿ ಬರುತ್ತೇವೆ. ಆಗ್ರಾದಲ್ಲಿರುವಾಗ ಅಗ್ರೇಶ್ವರನ ಬಗ್ಗೆ ನಮಗೆ ತಿಳಿಯದು. ಗೋರಿಗೆ ಪ್ರದಕ್ಷಿಣೆ ಬರುವೆವು. ದೆಹಲಿಗೆ ಬಂದಾಗ ಪರಿಪರಿಯಾಗಿ ಹೇಳಿದರೂ ವಿಷ್ಣುಸ್ಥಂಬಕ್ಕಿಂತ ಹೆಚ್ಚು ಸಮಯ ಕುತುಬ್ ಮಿನಾರಿನ ಮುಂದೆ ಕಳೆಯುತೇವೆ.

ನಮಗೆ ರೋಮಿನಲ್ಲಿ ರೋಮನ್ನರಾಗಿರುವುದು ಸುಲಭ. ನಮ್ಮದೇ ನೆಲದಲ್ಲಿ, ಸನಾತನಿಗಳಾಗಿ ಇರಲು ಕಷ್ಟ.

ಯಾರು ಎಲ್ಲಿಗೆ ಹೋಗಬೇಕು ಎಲ್ಲಿಗೆ ಹೋಗಬಾರದು ಎನ್ನುವುದನ್ನು ನಾನು ಇಲ್ಲಿ ಹೇಳುತ್ತಿಲ್ಲ. ಅದು ನನ್ನ ಅಧಿಕಾರವೇ ಅಲ್ಲ. ಅವರವರ ವಯಕ್ತಿಕ ಇಚ್ಚೆಯದು. ಆದರೆ ವೈದಿಕರಾಗಿ, ಸನಾತನ ಪರಂಪರೆಯ ಭಾರತೀಯರಾಗಿದ್ದೇವೆ ಎಂದು ನಾವು ಕೊಚ್ಚಿಕೊಳ್ಳುವುದೇ ಆಗಿದ್ದರೆ ವೈದಿಕ ನಿಲುವನ್ನೇ ಎತ್ತಿಹಿಡಿಯಬೇಕು. ಇದಕ್ಕಾಗಿ ಕಠೋರವಾದ ನಿರ್ಣಯವನ್ನು ತೆಗೆದುಕೊಂಡರೂ ತಪ್ಪಿಲ್ಲ ಎನ್ನುವುದಷ್ಟೆ ನನ್ನ ಅಭಿಪ್ರಾಯ.

ಸೂಚನೆ: ಇಲ್ಲಿ ವೈದಿಕ ಎನ್ನುವ ಶಬ್ದಕ್ಕೆ ಶ್ರಾದ್ಧ ಮಾಡಿಸುವ ವೃತ್ತಿಯವರು ಎಂದು ತಿಳಿಯಬಾರದು. ವೇದವಿಹಿತ ಧರ್ಮಾಚರಣೆ ಮಾಡುವವ ಎಲ್ಲರೂ ಎಂದು ತಿಳಿಯಬೇಕು. ಶಾಂಕರರೂ, ರಾಮಾನುಜೀಯರೂ, ಮಾಧ್ವರೂ ಮತ್ತು ಇವರ ಅವಾಂತರ ಶಾಖೆಗಳೆಲ್ಲವುಗಳ ಅನುಯಾಯಿಗಳು ಎಂದು ಅರ್ಥ ಮಾಡಬೇಕು

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.