ತುಂಗಭದ್ರೆಯ ದಂಡೆಯ ಊರೊಂದರಲ್ಲಿ ಅಮ್ಮ ಮಗನ ಜೋಡಿಯಿತ್ತು. ಊಟಕ್ಕ ಕರೀಬ್ಯಾಡ್ರಿ, ಕೆಲಸಕ್ಕ ಮರೀಬ್ಯಾಡ್ರಿ ಎಂಬ ಮಾತು ಈ ಅಮ್ಮ ಮಗನನ್ನು ನೋಡಿಯೇ ಹೊರಟದ್ದು.
ತಾಯಿಯ ಜೊತೆಗೆ ಎಲ್ಲರ ಮನೆಗೂ ಹೋಗುವುದು. ಚಾಕರಿ ಮಾಡುವುದು. ಆಸೆಗಂಗಳಿಂದ ಊಟಕ್ಕಾಗಿ ಎದುರು ನೋಡುವುದು. ಇದುವೇ ಟೈಂ ಟೇಬಲ್. ಸಂಜೆಯಾದರೂ ಉಣ್ಪು ಸಿಕ್ಕೀತೆಂಬ ಭರವಸೆಯೇನೂ ಇಲ್ಲ! ಇದೇ ನಿತ್ಯದ ಮಾತಾಗಿ ಹೋಗಿತ್ತು. ಎಳೆಯನು ಬಳಲಿಹೋಗಿದ್ದ. ಒಂದು ಸೌಟಿನಷ್ಟು ಗಂಜಿಯನ್ನೂ ಗಳಿಸಿಕೊಡದ ಜೀವನವು ಆತನಿಗೆ ಸಾಕಾಗಿತ್ತು. ಅಪ್ಪಿಕೊಂಡು ಸಿಹಿತಿಂಡಿಯನ್ನು ಕೊಡಬೇಕಾದ ಅಮ್ಮನ ಕಣ್ಣೀರೇ ಒಣಗಿ ಹೋಗಿದ್ದರಿಂದ ಸಾಂತ್ವನ ಹೇಳುವರಾರು?
ಏನಾದರಾಗಲಿ. ಜೀವ ಯೋಗ್ಯತೆಯು ಬಹುದೊಡ್ಡದಿತ್ತಲ್ಲ! ಹೀಗಾಗಿ ಅವರಿವರಂತಾಗದೆ, ತನ್ನ ಸಾಂತ್ವನವನ್ನು ತಾನೇ ಹುಡುಕಿಕೊಂಡು ಹೊರಟ. ಆ ಸಾಂತ್ವನವು, ತುಂಗೆಯಿಂದ ಬಹುದೂರ, ಸಾಸಿರ ಮೈಲ್ದೂರದಲ್ಲಿ ಕಾಯುತ್ತಿತ್ತು. ಗಂಗೆಯ ತಟದಿ. ಕೂಸಮ್ಮನ ಮಗ ದಾಸಪ್ಪನು ಚೀಕಲಪರ್ವಿ ಎಂಬ ಊರು ಬಿಟ್ಟು ಹೋದದ್ದು ಅಲ್ಲಿನವರಿಗೆ ಏನೂ ವ್ಯತ್ಯಾಸವೇ ಎನಿಸಲಿಲ್ಲ.
ದಾಸಪ್ಪನು ನಡೆದೇ ನಡೆದ. ಕಲ್ಯಾಣ, ನೈಜಾಮ, ವಿದರ್ಭಗಳನ್ನು ದಾಟಿದ. ನರ್ಮದೆಯಲ್ಲಿ ಮಿಂದ. ಗಂಗೆಯ ಮಡಿಲಿಗೆ ಬಂದು ಸೇರಿಯೇ ಬಿಟ್ಟ. ಅಲ್ಲಿ ತಮ್ಮ ದಾಸನ ಬರುವಿಕೆಯನ್ನೇ ಎದುರು ನೋಡುತ್ತಾ ಕುಳಿತಿದ್ದರಲ್ಲ ವ್ಯಾಸದೇವನೂ-ವಾಮದೇವರೂ.
ಕಾಶಿಯು ಜ್ಞಾನನಗರಿಯಷ್ಟೆ. ಅಲ್ಲಿಗೆ ಒಮ್ಮೆ ವೇದವ್ಯಾಸದೇವರು ಆಗಮಿಸಿದರು. ಆದರೆ ಅಲ್ಲಿ ತಮಗೆ ಬೇಕಾದ ಭಿಕ್ಷೆಯು ಲಭಿಸದೇ ಹೋಗಿದ್ದರಿಂದ ಗಂಗೆಯ ಪೂರ್ವತಟದಲ್ಲಿ ಕುಳಿತರು. ಅವರು ಕುಳಿತ ಮೇಲೆ ಎಲ್ಲ ದೇವತೆಗಳೂ ಅಲ್ಲಿ ಬಂದು ಕೂಡುವುದು ಸಹಜವೇ. ಹೀಗೆ ಶ್ರೀಬಾದರಾಯಣರ, ಸಕಲ ದೇವತಾಸಮೂಹದ ತೇಜಸ್ಸಿನಿಂದ ಪ್ರಕಾಶಿಸಿದ ಗಂಗೆಯ ಈ ಭಾಗವು ವ್ಯಾಸಕಾಶಿ ಎನಿಸಿತು. (ಕಾಶ ಎಂದರೆ ಬೆಳಕೂ, ಕಾಶಿ ಎಂದರೆ ಬೆಳಗುತ್ತಿರುವುವುದು ಎಂದೂ ಅರ್ಥ). ಇದೊಂದು ಹೊಸ ನಗರವೇ ಆಗಿ ಬೆಳೆಯಿತು.
ದಾಸಪ್ಪನು ಬಂದು ಸೇರಿದ್ದೂ ಈ ವ್ಯಾಸಕಾಶಿಗೇನೆ. ಇವನನ್ನು ವ್ಯಾಸದೇವನು ದಯದಿಂದ ಸೂಸಿ ಪೊರೆದನು. ವರ್ಷಟ್ಟಲೆ ತನ್ನ ಸೇವೆಯ ಭಾಗ್ಯವನ್ನು ನೀಡಿದನು. ಶುಭಗಳಿಗೆಯಲ್ಲಿ ಶ್ರೀಪುರಂದರದಾಸರ ಮೂಲಕ ದಾಸಪ್ಪನ ಸ್ವರೂಪವನ್ನೂ ಬೆಳಗಿಸಿಕೊಟ್ಟನು.
ಸೋತುಹೋಗಿದ್ದ ದಾಸಪ್ಪನು ಮರೆಯಾಗಿ ಸಜ್ಜನರಿಗೆ ವಿಜಯವನ್ನು ತಂದುಕೊಡುವ ವಿಜಯದಾಸರು ಪ್ರಕಟಗೊಂಡರು. ಸೌಟುಗಂಜಿಗಾಗಿ ಬಳಲಿದ ದಾಸಪ್ಪನು ಲಕ್ಷಾಂತರ ಸಜ್ಜನರಿಗೆ ಪಾಯಸವನ್ನೇ ಒದಗಿಸಿಕೊಡುವ ವಿಜಯಪ್ರಭುಗಳಾದರು.
ಕಾಶೀಯಾತ್ರೆಯು ಸಂಪೂರ್ಣವಾಗಬೇಕೆಂದರೆ ಆ ದೇವಸ್ಥಾನವನ್ನು ನೋಡಲೇ ಬೇಕು, ಈ ದೇವಸ್ಥಾನವನ್ನು ನೋಡಲೇಬೇಕು ಎಂದು ವಿಭಿನ್ನವಾದ ಅಭಿಪ್ರಾಯಗಳಿವೆ. ಅವರವರ ಭಕ್ತಿಯದು. ಅದಕ್ಕೆ ನನ್ನ ತಲೆಯು ಖಂಡಿತವಾಗಿಯೂ ಬಾಗುತ್ತದೆ. ಆದರೆ, ನೀವು ತಿಳಿ-ವು-ಗಂಜಿಯನ್ನು ಬಯಸುವರಾಗಿದ್ದಲ್ಲಿ ನಿಮ್ಮ ಕಾಶಿಯಾತ್ರೆಯು ಪೂರ್ಣವಾಗುವುದೇ ವ್ಯಾಸಕಾಶಿಯನ್ನು ದರ್ಶಿಸಿದ ನಂತರ ಎಂದು ನಾನು ಚೂರೂ ಸಂದೇಹವಿಲ್ಲದೆ ಹೇಳುತ್ತೇನೆ. ಸ್ವಲ್ಪವೂ ಗದ್ದಲವಿಲ್ಲ. ದುಡ್ಡು ತಿನ್ನುವ ಏಜೆಂಟರುಗಳ ಹಾವಳಿಯಂತೂ ಮೊದಲೇ ಇಲ್ಲ. ಇಲ್ಲಿರುವುದು ಪ್ರಶಾಂತ ಪರಿಸರ, ಚಿಕ್ಕಮಕ್ಕಳ ಒಂದು ಶಾಲೆ ಮತ್ತು ಜ್ಞಾನಸ್ರೋತರಾದ ಶ್ರೀವೇದವ್ಯಾಸರ ಜಾಗೃತ ಸನ್ನಿಧಿ. ಶ್ರೀಮಧ್ವಾಚಾರ್ಯರೂ, ಶ್ರೀವಿಶ್ವನಾಥನೂ, ಶ್ರೀಪುರಂದರದಾಸರೂ ಇಲ್ಲಿದ್ದಾರೆ. ಇದೇ ಸನ್ನಿಧಿಯಲ್ಲಿಯೇ ಶ್ರೀವಿಜಯದಾಸರೂ ಲಿಂಗರೂಪದಿಂದ ಜನರಿಂದ ಗೌರವವನ್ನು ಸ್ವೀಕರಿಸುತ್ತಾ ಕುಳಿತಿದ್ದಾರೆ.
ಶ್ರೀವಿಜಯರಾಯರಿಗೆ ಅಪರೋಕ್ಷವನ್ನು ಕೊಟ್ಟ ಈ ದಿವ್ಯಕ್ಷೇತ್ರ ವ್ಯಾಸಕಾಶಿಯು ವಾರಾಣಸಿ ನಗರದಿಂದ 10-12 ಕಿಲೋಮೀಟರು ದೂರದಲ್ಲಿದೆ. ವಾರಾಣಸಿಯಿಂದ ಗಂಗೆಯನ್ನು ದಾಟಿ, ರಾಮನಗರದ ಮೂಲಕ ಸಾಹೂಪುರಿಗೆ ಬರಬೇಕು. ಅಲ್ಲಿಂದ ಚಾಂದೀತಾರಾ ಎನ್ನುವ ಹಳ್ಳಿಯಲ್ಲಿ ಈ ಸನ್ನಿಧಾನವಿದೆ. ಆಟೋ ಅಥವಾ ಜೀಪುಗಳ ಮೂಲಕ ಇಲ್ಲಿಗೆ ಬರುವುದು ಸುಲಭ.
Be First to Comment