ಕುಂಭದಿಂದ ತೆಗೆದಷ್ಟೂ ಇದೆ

ಇಲ್ಲಿ ನೀವು ನೋಡುತ್ತಿವುದು ಕುಂಭಕೋಣದ ಶ್ರೀಕುಂಭೇಶ್ವರನ ಗುಡಿ. ಶ್ರೀಮಂಗಲಾಂಬಿಕೆಯ ಸನ್ನಿಧಿಯಲ್ಲಿ ಇರುವ ಒಂದು ಮಂಟಪ. ಬರೀ ಮಂಟಪವಲ್ಲ. ಇದು ಒಂದು ಐತಿಹಾಸಿಕ ಸ್ಥಳ. ಶ್ರೀವಿಜಯಿಂದ್ರತೀರ್ಥರು ಮತ್ತು ಶ್ರೀಅಪ್ಪಯ್ಯ ದೀಕ್ಷಿತರಿಗೂ ವಾಕ್ಯಾರ್ಥಗಳು ನಡೆಯುತ್ತಿದ್ದ ಸ್ಥಳ ಇದುವೇ.

ಅಪ್ಪಯ್ಯ ದೀಕ್ಷಿತರು ಅದ್ವೈತದ ಪ್ರಬಲ ಪ್ರತಿಪಾದಕರು. ಬಹುದೊಡ್ಡ ವಿದ್ವಾಂಸರು. ಶ್ರೀವಿಜಯಿಂದ್ರತೀರ್ಥರು ರಚಿಸಿದ 104 ಗ್ರಂಥಗಳಲ್ಲಿ ಹೆಚ್ಚಿನವು ಇವರಿಬ್ಬರ ನಡುವೆ ಇಲ್ಲಿ ನಡೆದ ವಾಕ್ಯಾರ್ಥಗಳದ್ದೇ ಅಕ್ಷರರೂಪಗಳು.
ವಾಕ್ಯಾರ್ಥವೊಂದರಲ್ಲಿ ಶ್ರೀವಿಜಯಿಂದ್ರರು ಸಿದ್ಧಾಂತ ಸ್ಥಾಪನೆ ಮಾಡಿದಾಗ ಶ್ರೀಮಂಗಲಾಂಬಿಕೆಯು ಸಂತಸಬಟ್ಟ ಸೂಚನೆಯಾಗಿ, ಒಂದು ವಿಜಯಮಾಲೆಯು ತಾನಾಗಿಯೇ ಬಂದು ಅವರ ಕೊರಳನ್ನು ಅಲಂಕರಿಸಿತು. ಹೀಗೆ ಹಾರವು ಗುರುಗಳ ಕೊರಳಿಗೆ ಬಂದು ಬಿದ್ದ ಸ್ಥಳದಲ್ಲಿ, ನೆಲದ ಮೇಲೆ ಒಂದು ಶಾಶ್ವತವಾದ ವೃತ್ತವನು ಬರೆದು, ಅದರ ಮಧ್ಯದಲ್ಲಿ ಒಂದು ಚೌಕಕಾರದ ಬೆಳ್ಳಿಯ ಮಣೆಯನ್ನು ಇರಿಸಿದ್ದಾರೆ. ಇಂದಿಗೂ ಅದನ್ನು ನೋಡಬಹುದು.

ಶ್ರೀವಿಜಯಿಂದ್ರರ ಮೇಲೆ ಶ್ರೀಮಂಗಲಾಂಬಿಕೆಗೆ ಇರುವ ವಾತ್ಸಲ್ಯಕ್ಕೆ ದ್ಯೋತಕವಾಗಿ, ತನ್ನ ನೋಟದಳತೆಯಲ್ಲೇ ಇರುವಂತೆ ಒಂದು ಶಾಶ್ವತವಾದ ಸ್ಥಾನವನ್ನೇ ಆಕೆ ಕೊಡಮಾಡಿದ್ದಾಳೆ. ಆಕೆಗೆ ಸರಿಯಾಗಿ ಎದುರಿನಲ್ಲಿ, ಒಂದು ಕಂಬದಲ್ಲಿ ವಿಜಯಿಂದ್ರರ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಇಂದಿಗೂ ನಿತ್ಯವೂ ಭಕ್ತರು ನಮಿಸಿ ದೀಪವನ್ನು ಇರಿಸಿ ತಮ್ಮ ಗೌರವವನ್ನು ಸಲ್ಲಿಸುತ್ತಾರೆ.

ಗಮನಿಸಬೇಕಾದ ವಿಷಯವಿದೆ. ಶ್ರೀಕುಂಭೇಶ್ವರನ ಸನ್ನಿಧಿಯಲ್ಲಿ ಶೈವಾಗಮದ ಸಂಪ್ರದಾಯವು ಕೆನೆಗಟ್ಟಿ ನಿಂತಿದೆ. ಸಂಪ್ರದಾಯ ವೈರುಧ್ಯವು ಇರುವಲ್ಲಿಯೇ “ಹೃದಯಪೂರ್ವಕವಾದ” ಗೌರವವನ್ನು ಪಡೆಯುತ್ತಾ ಶಾಶ್ವತವಾಗಿ ಕೂತಿದ್ದಾರಲ್ಲ! ಎಷ್ಟು ಎತ್ತರದ ತಪಸ್ಸು ಇವರದು?

ಹೃದಯಪೂರ್ವಕವಾದ ಗೌರವ ಎಂದೆನಲ್ಲ, ಅದಕ್ಕೆ ಕಾರಣವಿದೆ. ಪ್ರತ್ಯೇಕವಾಗಿಯೇ ಬರೆಯಬೇಕಾದಷ್ಟು ಸುಂದರ ವಿಷಯ ಅದು.

ಕಂಚಿಯ ಪೂಜ್ಯ ಮಹಾಪೆರಿಯವರ್ ಅವರಿಗೆ ಶ್ರೀವಿಜಯಿಂದ್ರತೀರ್ಥ ಗುರುಸಾರ್ವಭೌಮರ ಮೇಲೆ ವಿಶೇಷ ಭಕ್ತಿ ಇತ್ತು ಎಂದು ನಾನು ಹಿರಿಯರಿಂದ ಕೇಳಿ ತಿಳಿದಿದ್ದೆ. ಅದರೆ ಈಗ ಕೆಲದಿನಗಳ ಹಿಂದೆ ಇನ್ನೂ ಎರಡು ವಿಷಯಗಳು ತಿಳಿದುಬಂದು ಹೃದಯ ತುಂಬಿತು.

ಈಗ ಒಂದು 25-30 ವರ್ಷಗಳ ಕೆಳಗೆ ಮೇಲುಕಾವೇರಿ ಎನ್ನುವ ಊರಿನ ಒಬ್ಬ ಸಂಗೀತ ವಿದ್ವಾಂಸರು ಹೇಳಿದ್ದ ಸಂಗತಿ.

ಕಂಚಿಯ ಮಹಾಪೆರಿಯವರು (ಶ್ರೀ ಶ್ರೀ ಪೂಜ್ಯ ಚಂದ್ರಶೇಖರ ಸರಸ್ವತಿ ಸ್ವಾಮಿಗಳು ) ಪಲ್ಲಕ್ಕಿಯಲ್ಲಿ ಕುಳಿತು ಸಂಚಾರ ಮಾಡುವುದು ಒಂದು ಸಂಸ್ಥಾನದ ಮರ್ಯಾದೆ, ಸಂಪ್ರದಾಯ. ಹೀಗೆ ಅವರು ಕುಂಭಕೋಣಕ್ಕೆ ಬಂದಾಗ, ಶ್ರೀವಿಜಯಿಂದ್ರತೀರ್ಥರ ಮಠದ ಪರಿಸರ ಬಂದಾಗ, ಬೀದಿಯ ಪ್ರಾರಂಭದಲ್ಲಿಯೇ ಪಲ್ಲಕ್ಕಿಯಿಂದ ಇಳಿದು, ಕಾಲ್ನಡಿಗೆಯಲ್ಲಿಯೇ ಮುಂಬರಿದು, ಸನ್ನಿಧಿಗೆ ನಮಿಸಿ, ಬೀದಿಯ ಕೊನೆಗೆ ಬಂದ ನಂತರವೇ ಪಲ್ಲಕ್ಕಿ ಹತ್ತಿ ತಮ್ಮ ಸಂಚಾರ ಮುಂದುವರೆಸುತ್ತಿದ್ದರು. ಶ್ರೀವಿಜಯೀಂದ್ರತೀರ್ಥರ ಮೇಲೆ ಅವರಿಗೆ ಅಪಾರವಾದ ಗೌರವವು ಇತ್ತು ಎನ್ನುವುದಕ್ಕೆ ಇದು ದ್ಯೋತಕ. ನನಗೆ ಈ ವಿಷಯವನ್ನು ಹೇಳಿದ ವಿದ್ವಾಂಸರು ವಿಶಿಷ್ಟಾದ್ವೈತ ಸಂಪ್ರದಾಯದವರಾಗಿದ್ದರು ಎನ್ನುವುದು ಗಮನಾರ್ಹ.

ಈ ವಿಷಯವನ್ನೊಮ್ಮೆ ನಾನು ಬೇರೆ ಸಂದರ್ಭದಲ್ಲಿ ಹೇಳಿದಾಗ ಒಬ್ಬರು “ಓಹೋ ಅದೇನು ಮಹಾ? ಮಹಾಪೆರಿಯವರು ಯಾವ ಊರಿಗೆ ಹೋದರೂ ಅಲ್ಲಿನ ದೇವಾಲಯದ ಬೀದಿಯಲ್ಲಿ ಮೇನೆಯಿಂದ ಇಳಿದು ನಡೆದೇ ಹೋಗುತ್ತಿದ್ದರು. ವಿಶೇಷವೇನಿಲ್ಲ ಇದರಲ್ಲಿ” ಅಂದರು.

ಇದ್ದೀತು. ಒಟ್ಟಿನಲ್ಲಿ ಸದಾಚಾರ ಸನ್ನಡತೆಗೆ ಮಹಾಪೆರಿಯವರು ಒಂದು ಮೇಲ್ಪಂಕ್ತಿ ಎಂದುಕೊಂಡು ಸುಮ್ಮನಾಗಿದ್ದೆ. ಆದರೆ ಈಗ 20 ದಿನಗಳ ಕೆಳಗೆ ಶ್ರೀವಿಜಯೀಂದ್ರತೀರ್ಥರ ವರ್ಚಸ್ಸಿನ ಬಗ್ಗೆ ಎರಡು ಅಪೂರ್ವ ವಿಷಯಗಳು ತಿಳಿದವು.

ಈಗ 15 – 20 ದಿನಗಳ ಕೆಳಗೆ ನಮ್ಮ ಶ್ರೀಗಳವರು ನಡೆಸಿದ ಸುಧಾಮಂಗಲದ ಸಂದರ್ಭದಲ್ಲಿ ನನಗೆ ಕುಂಭಕೋಣದ ದರ್ಶನವು ಆಯಿತು. 14 ವರ್ಷಗಳ ನಂತರದ ದರ್ಶನವದು. ಶ್ರೀವಂಶೀಕೃಷ್ಣಾಚಾರ್ಯರ ಜೊತೆಗೆ ಹೋಗಿದ್ದು ಈ ಬಾರಿ. ಶ್ರೀಕುಂಭೇಶ್ವರನ ಗುಡಿಯನ್ನು ತೋರಿಸಲು ನಾನು ವಂಶೀ ಆಚಾರ್ಯರು ಮತ್ತು ಶ್ರೀನಿವಾಸಭಟ್ಟರನ್ನು ಕರೆದೊಯ್ದಿದ್ದೆ. ಅಲ್ಲಿ ಶ್ರೀಮಂಗಲಾಂಬಿಕೆಯ ಅಂಗಳದಲ್ಲಿ ಶ್ರೀವಿಜಯೀಂದ್ರತೀರ್ಥರ ಪ್ರತಿಮೆಯನ್ನು ನಾನು ತೋರಿಸಿದ್ದೇ ತಡ, ವಂಶೀ ಆಚಾರ್ಯರು ಹಿಂದೆ ಓಡಿ ಹೋಗಿ ಒಬ್ಬ ವಯೋವೃದ್ಧರನ್ನು ಕರೆತಂದು ಅವರಿಗೂ ಈ ಸನ್ನಿಧಿಯನ್ನು ತೋರಿಸುತ್ತಾ “ಇದೇ ನೋಡಿ ನೀವು ಕೇಳಿದ ವಿಜಯೀಂದ್ರರ ಪ್ರತಿಮೆ” ಎಂದು ಹೇಳಿದರು. ಅದನ್ನು ಕೇಳಿದ್ದೇ ಆ ವೃದ್ಧರು ತಮ್ಮ ಎದೆಗೂಡಿನ ತುಂಬಾ ಭಕ್ತಿಯನ್ನು ತುಂಬಿಕೊಂಡು ವಿಜಯೀಂದ್ರರಿಗೆ ಸಾಷ್ಟಾಂಗ ನಮನವನ್ನು ಸಲ್ಲಿಸಿದರು.

ಕಂಚಿಯ ಶ್ರೀಜಯೇಂದ್ರಸರಸ್ವತಿ ಸ್ವಾಮಿಗಳವರ ಆಪ್ತ ಪರಿಚಿತರಲ್ಲಿ ಇವರೂ ಒಬ್ಬರು. ಶ್ರೀಗಳವರ ಜೊತೆಗೆ ಒಮ್ಮೆ ಇವರು ಸಹ ಕುಂಭಕೋಣಕ್ಕೆ ಬಂದಾಗ, ಶ್ರೀಗಳವರು ಇವರಿಗೆ ಶ್ರೀವಿಜಯೀಂದ್ರತೀರ್ಥರ ಮೂರ್ತಿ ಮತ್ತು ಅದರ ಸ್ಥಾಪನೆಯ ಹಿನ್ನೆಲೆಯನ್ನು ವಿವರಿಸಿ ತಾವೂ ನಮಸ್ಕರಿಸಿ ಇವರಿಗೂ ನಮಸ್ಕರಿಸಲು ಸೂಚಿಸಿದ್ದರಂತೆ. ಅದಾದ ನಂತರ ಒಂದೆರಡು ಸಲ ಬಂದಿದ್ದು ಅಷ್ಟೇ. ಸುಮಾರು 20 ವರ್ಷಗಳ ನಂತರ ಇದೇ ಬಾರಿ ಬಂದಿರುವುದು ಹೀಗಾಗಿ ಇವರ ಮೂರ್ತಿ ಎಲ್ಲಿದೆ ಎನ್ನುವುದು ಸರಿಯಾಗಿ ನೆನಪಾಗಲಿಲ್ಲ. ನೀವು ಸಹಾಯ ಮಾಡಿದಿರಿ. ಧನ್ಯವಾದಗಳು ಎಂದು ಆ ವೃದ್ಧರು ಹೇಳಿದರು.

ಇದಾದ ಮಾರನೆಯ ದಿನ ನಾನು ಮತ್ತೊಮ್ಮೆ ಶ್ರೀಕುಂಭೇಶ್ವರನ ದರ್ಶನ ಮಾಡಲು ಹೋದೆ. ಅಲ್ಲಿ ಮಂಗಲಾಂಬಿಕೆಯ ಸನ್ನಿಧಿಯಲ್ಲಿ ಶ್ರೀವಿಜಯೀಂದ್ರರ ಮುಂದೆ ಕುಳಿತು ಶ್ರೀಮಧ್ವವಿಜಯವನ್ನು ನೋಟ್ ಬುಕ್ಕಿನಲ್ಲಿ ಬರೆಯತೊಡಗಿದೆ. ಮಧ್ಯದಲ್ಲಿ ಒಮ್ಮೆ ಅಲ್ಲಿನ ಕಿರಾತಮೂರ್ತಿ ದೇವಾಲಯದ ಅರ್ಚಕರು ಬಂದದ್ದನ್ನು ಗಮನಿಸಿದೆ. ಅವರು ಸುಮಾರು 25-30 ವರ್ಷ ವಯಸ್ಸಿನ ಯುವಕರು. ಶೈವ ಸಂಪ್ರದಾಯದವರು. ಅವರನ್ನೇ ಹೋಗಿ ಹರಕು ಮುರುಕು ತಮಿಳಿನಲ್ಲಿ ಕೇಳಿದೆ. ಇದು ವಿಜಯೀಂದ್ರತೀರ್ಥರ ಪ್ರತಿಮೆಯೇ ಎಂದು. ನನಗೆ ಅನುಮಾನವೇನೂ ಇದ್ದಿಲ್ಲ. ಆದರೆ ಈಗಿನ ಪೀಳಿಗೆಯ ಅಭಿಪ್ರಾಯವೇನಿದೆ ಎಂದು ತಿಳಿಯುವ ಕುತೂಹಲವಿತ್ತು ಅಷ್ಟೇ. ನಾನು ಕೇಳಿದ ಪ್ರಶ್ನೆಗೆ ಅವರು “ಹೌದು. ಇದು ಶ್ರೀವಿಜಯೀಂದ್ರತೀರ್ಥರ ಪ್ರತಿಮೆ. ಅವರು ಇಲ್ಲಿಯೆ ಕುಳಿತು ಅಪ್ಪಯ್ಯದೀಕ್ಷಿತರೊಡನೆ ವಾದ ಮಾಡಿದ್ದು. ಇಲ್ಲಿಯೇ ಮಂಗಲಾಂಬಿಕೆಯ ಹಾರ ಅವರ ಕುತ್ತಿಗೆಗೆ ಬಿದ್ದಿದ್ದು ಎಂದೆಲ್ಲ ವಿಷಯಗಳನ್ನು ಹೇಳಿ ಒಂದು ಚಿಕ್ಕ ಉಪನ್ಯಾಸವನ್ನೇ ಮಾಡಿದರು.
ನನಗೆ ಆ ತಮಿಳು ಅರ್ಥವಾದರೂ ಮಾತನಾಡಲು ಬರದೇ ಇದ್ದುದರಿಂದ ಅವರು ಹೇಳುತ್ತಿದ್ದುದನೆಲ್ಲ ಕೇವಲ ಕೇಳುತ್ತ ಸಂತಸಬಡುತ್ತಿದ್ದೆ. ಆದರೆ ಅಲ್ಲಿಗೆ ಬಂದ ಒಬ್ಬ ತಮಿಳು ದಂಪತಿ ಈ ಉಪನ್ಯಾಸವನ್ನು ಇನ್ನೂ ಶ್ರದ್ಧೆಯಿಂದ ಆಲಿಸುತ್ತಿದ್ದರು. ಅವರನ್ನು ಕುರಿತು ಈ ವಾದ್ಯಾರರು “ವಿಜಯೀಂದ್ರರೆಂದರೆ ಏನೆಂದು ತಿಳಿದಿರಿ. 64 ವಿದ್ಯೆ ಬಲ್ಲವರು. ಮಹಾತ್ಮರು. ಕುಂಭಕೋಣದಲ್ಲಿ ಪರಂಪರೆಯನ್ನೇ ಉಳಿಸಿದವರು” ಎಂದು ಬಹಳ ಹೆಮ್ಮೆಯಿಂದ ಹೇಳಿದರು.

ಮತ್ತೂ ಮುಂದುವರೆಸಿ, ಕಂಚಿಯ ಮಹಾಪೆರಿಯವರು ಮತ್ತು ಪೆರಿಯವರು ಇಬ್ಬರಿಗೂ ಶ್ರೀವಿಜಯೀಂದ್ರತೀರ್ಥರೆಂದರೆ ಬಹಳ ಗೌರವ. ಶ್ರೀವಿಜಯೀಂದ್ರತೀರ್ಥರ ಮೇಲಿನ ಗೌರವದಿಂದಲೇ ಪೆರಿಯವರು ತಮ್ಮ ಶಿಷ್ಯರಿಗೆ ವಿಜಯೇಂದ್ರಸರಸ್ವತಿ ಎಂಬ ಆಶ್ರಮನಾಮವನ್ನು ಕೊಟ್ಟಿದ್ದು ಎಂಬ ಒಂದು ವಿಷಯವನ್ನೂ ಹೇಳಿದರು. ವಿಜಯೀಂದ್ರರು ಮಾಧ್ವಸಂಪ್ರದಾಯದವರು ಎಂದು ಹೇಳುತ್ತಾ, ನನ್ನನ್ನು ತೋರಿಸಿ “ಅಯ್ಯನಾರರು ಸಹ ಶ್ರೀವಿಜಯೀಂದ್ರರ ಸಂಪ್ರದಾಯದವರೇ” ಎಂದು ಹೇಳಿದರು!

ಈ ವಿಷಯವನ್ನು ತಿಳಿದ ಆ ದಂಪತಿ ಇಂಥಾ ದೊಡ್ಡ ವಿಷಯ ಕುಂಬಕೋಣದವರಾದ ನಮಗೇ ತಿಳಿದಿಲ್ಲವಲ್ಲ ಎಂದು ಕೆನ್ನೆ ಕೆನ್ನೆ ತಟ್ಟಿಕೊಂಡು, ಶ್ರೀವಿಜಯೀಂದ್ರತೀರ್ಥರಿಗೆ ತಪ್ಪಾಯಿತು ಎನ್ನುವ ಮುಖ ಮಾಡಿ ನಮಸ್ಕರಿಸಿದರು. ಮಾತ್ರವಲ್ಲ ತಕ್ಷಣವೇ ಹೊರಹೋಗಿ ಒಂದು ಜೋಡಿ ದೀಪವನ್ನೂ ತಂದು ಗುರುಗಳ ಮುಂದೆ ಬೆಳಗಿಸಿ ಸಮಾಧಾನಪಟ್ಟರು.

ಇದನ್ನು ಇತರರು ನಂಬುವರೋ ಬಿಡುವರೋ ಆಸಕ್ತಿಯಿಲ್ಲ ನನಗೆ. ಆದರೆ ನನಗಂತೂ ಇದು ಅಪೂರ್ವವಾದ ವಿಷಯ. ವಾದ್ಯಾರರು ಹೇಳಿದ ಈ ಕೊನೆಯ “ಅಯ್ಯನಾರರು ಕೂಡಾ ವಿಜಯೀಂದ್ರರ ಸಂಪ್ರದಾಯದವರೇ” ಎನ್ನುವ ಮಾತನ್ನೇ ನಾನು ಮತ್ತೂ ಮತ್ತೂ ಮೆಲುಕು ಹಾಕುತ್ತಾ ಹೊರಬಂದೆ. ಶ್ರೀವಿಜಯೀಂದ್ರತೀರ್ಥರ ಸಂಪ್ರದಾಯದವನು ಎನ್ನುವುದಕ್ಕಿಂತ ದೊಡ್ಡ ಗುರುತು ಬೇಕಾದರೂ ಯಾಕೆ?

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.