ಶ್ರೀಹರಿಯು ಎಮಗೆ ಸಂಪದವೀಯಲಿ || ವಾಣೀಪತಿಯು ನಮಗೆ ದೀರ್ಘಾಯು ಕೊಡಲಿ
ಇಂದು ಗುರುಗಳ ೬೫ನೆಯ ಜನ್ಮನಕ್ಷತ್ರ. ಇವರು ನನಗೆ ರಾಯರೇ ಕೊಟ್ಟಿರುವ ಕರದೀಪ. ಈ ದೀಪದ ಬೆಳಕಿನಲ್ಲಿ ನನ್ನ ಜೀವನ ನಡೆಯುತ್ತಿದೆ. ದೀಪದ ಬೆಳಕು ಇನ್ನೂ ನೂರಾರು ವರ್ಷಗಳ ಕಾಲ ಹಬ್ಬಿಯೇ ಇರಲಿ ಎಂದು ಆಶಿಸುತ್ತಾ ಅದೇ ಬೆಳಕಿನಲ್ಲಿಯೇ ಬರೆದ ಒಂದು ನುಡಿ ನಮನವಿದು. ಅವರ ಅಂತರ್ಯಾಮಿಯಾದ ಶ್ರೀರಾಯರು, ಶ್ರೀಹನುಮ ಮತ್ತು ಶ್ರೀರಾಮನಿಗೆ ಪ್ರಿಯವಾಗಲಿ.
ಕಸ್ತೂರಿಯಮ್ಮನವರು ಹೆತ್ತದ್ದು ಕೇವಲ ಒಬ್ಬ ಬುದ್ಧಿವಂತನಾದ ಮಗನನ್ನಲ್ಲ. ಅವರು ಕಸ್ತೂರಿಯ ನಿಧಿಯನ್ನೇ ಹೆತ್ತರು. ಅಷ್ಟೆ ಅಲ್ಲ ಕಸ್ತೂರಿಯ ಪರಿಮಳವನ್ನು ತಮ್ಮ ದೇವರಮನೆಗೆ ಮೀಸಲಿಡದೆ ಜಗತ್ತಿಗೆಲ್ಲ ಹಂಚಿಬಿಟ್ಟರು. ಆ ಕಿರಿಯ ಕಸ್ತೂರಿಯು ಶ್ರೀವಿದ್ಯಾಧೀಶತೀರ್ಥಶ್ರೀಪಾದಂಗಳವರಾಗಿ ಭಕ್ತರ ಮನೆಮನಗಳನ್ನೆಲ್ಲ ಉಲ್ಲಸಿತವಾಗಿಡುತ್ತಿದೆ. ಇದು ಉತ್ಪ್ರೇಕ್ಷೆಗೆಂದು ಹೇಳುತ್ತಿರುವ ಮಾತೇನಲ್ಲ. ಶ್ರೀಪಲಿಮಾರುಶ್ರೀಗಳವರ ವ್ಯಕ್ತಿತ್ವವನ್ನು ಅರಿತ ಎಲ್ಲರೂ ಒಮ್ಮತದಿಂದ ಹೇಳುವ ಮಾತು ಇದು.

ಇವರಿಗೆ ಕೇವಲ ವಿದ್ಯೆ ಮಾತ್ರವಲ್ಲ ನಾಯಕತ್ವದ ಗುಣವೂ ಹುಟ್ಟಿನಿಂದಲೇ ಬಂದಿದೆ. ಒಂದು ವೇಳೆ ಶ್ರೀಹಯಗ್ರೀವತಂತ್ರಿಗಳು ಮತ್ತು ಶ್ರೀಮತಿ ಕಸ್ತೂರಿಯಮ್ಮನವರು ಇವರ ಸಂನ್ಯಾಸಾಶ್ರಮ ಸ್ವೀಕಾರಕ್ಕೆ ಒಪ್ಪಿಗೆ ಕೊಡದೆ ಹೋಗಿದ್ದಲ್ಲಿ ನಾವೆಲ್ಲ ಇಂದು ರಮೇಶ ತಂತ್ರಿಗಳ ಅಪಾಯಿಂಟ್ಮೆಂಟ್ ಪಡೆಯಲು ತಿಂಗಳುಗಟ್ಟಲೆ ಕಾಯಬೇಕಿತ್ತು. ಜ್ಯೋತಿಷ್ಯ ಪ್ರಶ್ನೆಕೇಳಲೆಂದೋ ಅಥವಾ ದೇವಾಲಯದ ವಾಸ್ತುವನ್ನು ಕುರಿತು ಅಭಿಪ್ರಾಯ ಕೇಳಲೆಂದೋ ಇವರ ಮನೆಯ ಮುಂದೆ ದೊಡ್ಡ ಸಾಲೇ ನೆರೆದಿರುತ್ತಿತ್ತೇನೋ. ಒಂದು ವೇಳೆ ಇವರು ಸಾಂಪ್ರದಾಯಿಕ ತಂತ್ರಿಗಳಾಗದೇ ಇದ್ದಲ್ಲಿ ಖಂಡಿತವಾಗಿಯೂ ಒಂದು ದೊಡ್ಡ ಕಂಪನಿಯನ್ನು ಸ್ಥಾಪಿಸಿ ಇಂದಿಗೆ ನೂರಾರು ಜನರಿಗೆ ಅನ್ನದಾತರಾಗಿರುತ್ತಿದ್ದರು. ಅಂತೂ ಏನೇ ಮಾಡಿದರೂ ತಮ್ಮೊಂದಿಗೆ ನೂರಾರು ಜನರಿಗೆ ಜೀವನವನ್ನು ಕಟ್ಟಿಕೊಡುತ್ತಾರೆ ಎನ್ನುವುದು ಮಾತ್ರ ಖಂಡಿತ. ಈಗ ಯತ್ಯಾಶ್ರಮದಲ್ಲಿದ್ದು, ಆಶ್ರಮದ ಕಟ್ಟುಪಾಡುಗಳನ್ನು ಚೂರೂ ದಾಟದೆಯೂ ಬಹುರಾಷ್ಟ್ರೀಯ ಕಂಪನಿಯೊಂದಕ್ಕೆ ಸರಿ ಮಿಗಿಲೆನಿಸುವ ಹಾಗೆ ಸಾಧನೆಗಳನ್ನು ಮಾಡುತ್ತಿರುವುದು ಅವರ ಧೀಮಂತಿಕೆಗೆ ಜ್ವಲಂತ ಸಾಕ್ಷಿ.
ಅನೇಕರಿಗೆ ತಿಳಿದಿಲ್ಲ. ಶ್ರೀಶ್ರೀಪಾದರು ಒಬ್ಬ ಗಣಿತಜ್ಞರೂ ಹೌದು, ಹಾಗೆಯೇ ಆಗಮ ಮತ್ತು ಜ್ಯೌತಿಷದಲ್ಲಿ ಅವರಿಗೆ ಆಳ ಜ್ಞಾನವುಂಟು ಎಂಬುದರ ಬಗ್ಗೆ. ಅದಕ್ಕೇ ನಾನು ಹೇಳಿದ್ದು ಅವರು ಸ್ವಾಮಿಗಳಾಗದೇ ಹೋಗಿದ್ದರೆ ಒಬ್ಬ ಪ್ರಸಿದ್ಧ ತಂತ್ರಿಗಳಾಗಿರುತ್ತಿದ್ದರು ಎಂದು. ಇಂದು ನೇರವಾಗಿ ಅವರು ಜ್ಯೋತಿಷ್ಯನೋಡುವುದು, ಮುಹೂರ್ತಗಳನ್ನು ಇಡುವ ಕೆಲಸಕ್ಕೆ ಕೈಹಾಕದೇ ಇದ್ದರೂ ಕೂಡ ಮಠದ ಹಿರಿಯ ಜ್ಯೌತಿಷ್ಯರು ನಡೆಸುವ ಪಂಚಾಂಗಗಣನೆಯೆ ಮೊದಲಾದ ವಿಷಯಗಳಲ್ಲಿ ಶ್ರೀಗಳವರ ಅಭಿಪ್ರಾಯಕ್ಕೆ ತೂಕವುಂಟು. ಅವರ ಗಮನ ಎಷ್ಟು ಸೂಕ್ಷ್ಮವಾಗಿ ಕೆಲಸ ಮಾಡುತ್ತಿರುತ್ತದೆ ಎಂಬುದನ್ನು ಇತ್ತೀಚೆಗೆ ನಡೆದ ಒಂದು ಘಟನೆಯಿಂದ ತಿಳಿಯೋಣ.
ಇತ್ತೀಚೆಗೆ ಶ್ರೀಗಳವರ ಹಳೆಯ ಶಿಷ್ಯನೊಬ್ಬನ ಮಗನ ಉಪನಯನವು ನಿಶ್ಚಿತವಾಗಿತ್ತು. ಆಹ್ವಾನಪತ್ರಿಕೆಯನ್ನು ಕೂಡ ಮುದ್ರಿಸಿ ಆಗಿತ್ತು. ಮೊದಲ ಆಹ್ವಾನವನ್ನು ಶ್ರೀಗುರುಗಳಿಗೆ ಕೊಡಬೇಕೆಂದು ದಂಪತಿಗಳು ಮಠಕ್ಕೆ ಬಂದರು. ಆಗ ಆಹ್ವಾನಪತ್ರಿಕೆಯ ಮೇಲೊಮ್ಮೆ ಕಣ್ಣಾಡಿಸಿದ ಶ್ರೀಗಳವರು ” ಮುಹೂರ್ತವನ್ನು ಎಲ್ಲರೂ ಸರಿಯಾಗಿ ನೋಡಿದ್ದೀರಾ” ಎಂದು ಕೇಳಿದರು. ಯಾಕೆ ಎಂದು ಇವರು ಕೇಳಲಾಗಿ “ಏನಿಲ್ಲ ಚೂರು, ಅನುಮಾನ ಬರ್ತಾ ಉಂಟು ನನಗೆ ಅದರ ಮೇಲೆ, ಮತ್ತೊಮ್ಮೆ ಕೇಳಿ ನೋಡು” ಎಂದು ಶ್ರೀಗಳವರು ಹೇಳಿದರು. ಅದರಂತೆ ಮುಹೂರ್ತವನ್ನು ಪುನಃ ಪರಿಶೀಲನೆ ಮಾಡಲಾಯಿತು. ಆಗ ಗಮನಕ್ಕೆ ಬಂದದ್ದೇನೆಂದರೆ ಮುಹೂರ್ತದ ದಿನಕ್ಕೆ ಭರಣೀ ನಕ್ಷತ್ರದ ಸ್ಪರ್ಷವಿತ್ತು! ಭರಣೀ ನಕ್ಷತ್ರವು ಶುಭವಲ್ಲ. ಶ್ರೀಗಳವರ ಶಿಷ್ಯನೂ ಸೇರಿದಂತೆ ಮುಹೂರ್ತವನ್ನು ನಿಗದಿಪಡಿಸಿದಿದ್ದವರೆಲ್ಲರೂ ಪ್ರಸಿದ್ಧ ಜೋಯಿಸರುಗಳೇ ಆಗಿದ್ದರೂ ಇದೊಂದು ಪ್ರಮಾದವು ಯಾರ ಗಮನಕ್ಕೂ ಬಂದಿದ್ದಿಲ್ಲ. ಆದರೆ ಶ್ರೀಗಳವರ ಜೋತಿರ್ವಿಜ್ಞಾನದ ಬೆಳಕಿನಲ್ಲಿ ಆ ತಪ್ಪು ಕ್ಷಣಾರ್ಧದಲ್ಲಿ ಕಂಡುಬಂದಿತು. ಮುಂದೆ ಬೇರೆ ಮುಹೂರ್ತವನ್ನು ನಿಗದಿಪಡಿಸಲಾಯಿತು.
ಇತರರಾಗಿದ್ದರೆ “ಏನು ಮಾಡುವುದು? ಕಾರ್ಡು ಹಂಚಿ ಆಗಿದೆ, ಕಲ್ಯಾಣಮಂಟಪ ಬುಕ್ ಮಾಡಿ ಆಗಿದೆ” ಎಂದು ಸುಮ್ಮನೆ ಮಂತ್ರಾಕ್ಷತೆಯನ್ನು ಕೊಟ್ಟು ಕಳುಹಿಸಿಬಿಡುತ್ತಿದ್ದರೇನೋ. ಆದರೆ ಶ್ರೀಗಳವರು ಹಾಗಾಗಲು ಬಿಡಲಿಲ್ಲ. ಉಪನಯನ ಆಗುವುದು ಜೀವನದಲ್ಲಿ ಒಂದೇ ಬಾರಿಯಲ್ಲವೇ?. ಅದು ಪ್ರಶಸ್ತವಾಗಬೇಕು. ಶಿಷ್ಯನ ಸಂತತಿಗೆ ಕಲ್ಯಾಣವಾಗಬೇಕು ಎನ್ನುವುದು ಅವರ ಅಪೇಕ್ಷೆ. ಅದಕ್ಕಾಗಿಯೇ ಕ್ಲೃಪ್ತಸಮಯದಲ್ಲಿ ಅವನನ್ನು ಎಚ್ಚರಿಸಿದರು. ಅಂತೆಯೇ “ಮುಹೂರ್ತದ ಬಗ್ಗೆ ಮತ್ತೊಮ್ಮೆ ಕೇಳಿನೋಡು” ಎಂದ ಅವರ ಮಾತಿನಲ್ಲಿಯೇ ಅವರ ವಿನಯವೂ ವ್ಯಕ್ತವಾಗುತ್ತಿದೆ. ಅಲ್ಲವೇ?
ಇನ್ನು ಅವರ ಕ್ರಿಯಾಶೀಲವ್ಯಕ್ತಿತ್ವಕ್ಕೆ ಸಾಕ್ಷಿಯಾಗಿ ಅವರು ಸಾಧಿಸಿರುವ ವಿಕ್ರಮಗಳು ಕಣ್ಣ ಮುಂದೆಯೇ ಇವೆ. ವಜ್ರಕವಚ, ಹರಿದ್ವಾರದ ಪ್ರಾಣದೇವರು, ಕುಂಜಾರಿನ ಮಧ್ವರು, ಚಿಣ್ಣರಸಂತರ್ಪಣೆ, ಬಂಗಾರದ ಗೋಪುರ, ಪಲಿಮಾರು ಹಾಗು ಉಡುಪಿಯ ವಿದ್ಯಾಪೀಠಗಳು, ಪ್ರಕಾಶನಗೊಂಡ ನೂರಾರು ಗ್ರಂಥಗಳು ಇವು ಯಾವುವೂ ಸಹ ಸಾಧಾರಣರಿಂದ ಆಗದ ಕಾರ್ಯಗಳು. ಎರಡನೆಯ ಪರ್ಯಾಯದ ಸಮಯದಲ್ಲಿ ನಾನೊಮ್ಮೆ ಕುಳಿತು ಅವರು ಪ್ರತಿನಿತ್ಯ ಸಂಪಾದಿಸಬೇಕಾದ ದ್ರವ್ಯದ ಲೆಕ್ಕಾಚಾರವನ್ನು ಮಾಡಿದ್ದೆ. (ಪ್ರಾಯಶಃ ಅವರು ಮಾಡಿದ್ದೇ ಇಲ್ಲವೆಂದು ತೋರುತ್ತದೆ. ಅವರಿಗೆ ಅದು ಅಗತ್ಯವೂ ಇಲ್ಲ) ಅದರಂತೆ ಶ್ರೀಗಳವರು ಆಗ ದಿನಕ್ಕೆ ಕನಿಷ್ಠ ಹತ್ತು ಲಕ್ಷರೂಪಾಯಿಗಳ ಸಂಪಾದನೆಯನ್ನು ಮಾಡಬೇಕಿತ್ತು. ಅಷ್ಟಾಗಿದ್ದರೆ ಮಾತ್ರ ಸಂಬಳ, ಕರೆಂಟ್ ಬಿಲ್ಲು, ಲಕ್ಷಾಂತರ ಜನಗಳಿಗೆ ಅನ್ನದಾನ ಎಲ್ಲವೂ ಪೂರೈಸಿ ಆಮೇಲೆ ಬಂಗಾರದ ಗೋಪುರವು ನಿರ್ಮಾಣವಾಗುತ್ತಿತ್ತು. ಅದೂ ಕೂಡ ಆಗಿಯೇ ಬಿಟ್ಟಿತಲ್ಲ!!! ಹುಟ್ಟಾ ನಾಯಕನಿಗೆ ಅಸಾಧ್ಯವೇನಿದೆ? ಈಶಾವಾಸ್ಯಂ
ಪರ್ಯಾಯದ ಸಂದರ್ಭದಲ್ಲಿಯೇ ಶ್ರೀಮಠದ ಉದ್ಯೋಗಿಯೊಬ್ಬ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಅದರಿಂದ ಇತರ ಕೆಲಸಗಳು ನಿಧಾನವಾಗಿ ತೊಂದರೆಯಾಗುತ್ತಿತ್ತು. ಎಷ್ಟೇ ಬುದ್ದಿ ಹೇಳಿದರೂ ಕೇಳದ ಆತ ತನ್ನದೇ ಗತಿಗೆ ಅಂಟಿಕೊಳ್ಳುವ ಪ್ರವೃತ್ತಿಯವನು. ಹಿರಿಯ ಅಧಿಕಾರಿಗಳು ಶ್ರೀಗಳವರಲ್ಲಿ ಇದರ ಬಗ್ಗೆ ತಿಳಿಸಿ ಇವನನ್ನು ಕೆಲಸದಿಂದ ತೆಗೆದು ಹಾಕೋಣ, ಬೇರೆ ಅವರು ಬಂದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು. ಆದರೆ ಶ್ರೀಗಳವರು ಅದನ್ನು ನೋಡಿದ್ದೇ ಬೇರೆಯ ದೃಷ್ಟಿಕೋನದಿಂದ. “ನೋಡಿ ನನಗೆ ಮತ್ತು ನಿಮಗೆ ವಿದ್ಯೆಯಿದೆ. ಮಠವು ಹೊರಗೆ ಹಾಕಿದರೆ ನಾನೂ ಬದುಕಬಲ್ಲೆ. ಹೊರಗೆ ಹೋದರೆ ನೀವು ಕೂಡ ಚೆನ್ನಾಗಿ ಸಂಪಾದಿಸಬಲ್ಲಿರಿ. ಆತ್ಮವಿಶ್ವಾಸವುಂಟು ನಮಗೆ. ಆದರೆ ಅವನಿಗೆ ವಿದ್ಯೆ ಕಡಿಮೆ, ವಿಶ್ವಾಸವೂ ಇದ್ದಂತಿಲ್ಲ. ಹಾಗಾಗಿ ಕೆಲಸದಿಂದ ತೆಗೆಯುವುದು ಬೇಡ. ಬೇರೆ ಏನನ್ನಾದರೂ ಉಪಾಯ ಮಾಡಿ. ಏನೂ ಉಪಾಯ ಕಾಣದಿದ್ದರೆ ಮತ್ತೊಬ್ಬನನ್ನು ಕೆಲಸಕ್ಕೆ ತೆಗೆದುಕೊಳ್ಳೋಣ. ಆದರೆ ಇವನೂ ಇರಲಿ.” ಎಂದು ಹೇಳಿ ತಮ್ಮ ಕೆಳಗಿನವನ ಜೀವನವನ್ನು ಮತ್ತೂ ಭದ್ರಗೊಳಿಸಿದರು. ತಮ್ಮ ಕೈಯನ್ನು ತಮ್ಮ ಎದೆಯ ಮೇಲೆ ಇಟ್ಟುಕೊಂಡು ಅದೆಷ್ಟು ಮಧುರವಾಗಿ ತಮ್ಮ ನಿರ್ಣಯವನ್ನು ಹೇಳಿದರೆಂದರೆ ಆ ದೃಶ್ಯವನ್ನು ನಾನು ಸಾಯುವವರೆಗೆ ಮರೆಯಲಾರೆ. ಇಂತಹ ಇನ್ನೂ ಹಲವಾರು ಉದಾಹರಣೆಗಳು ಇವೆ. ಇದಲ್ಲವೇ ನಾಯಕತ್ವದ ಗುಣ?
ಎಷ್ಟೇ ಒತ್ತಡವಿದ್ದರೂ ಒಂದು ವಿಷಯಕ್ಕೆ ಶ್ರೀಗಳವರು ತಕ್ಷಣ ಸಮಯವನ್ನು ಒದಗಿಸಿಕೊಳ್ಳುತ್ತಾರೆ. ಅದೇನೆಂದರೆ ದ್ವೈತವೇದಾಂತಕ್ಕೆ ಸಂಬಂಧಪಟ್ಟ ಸಂದೇಹನಿವಾರಣೆಗೆ. ಶ್ರೀಗಳವರು ತುರ್ತಿನಲ್ಲಿದ್ದಾಗ್ಯೂ ಕೂಡ ನೀವು ಅವರಿಗೆ ಶ್ರೀಹರಿವಾಯುಗುರುಗಳ ಬಗ್ಗೆ ಏನನ್ನಾದರೂ ಪ್ರಶ್ನೆ ಮಾಡಿದರೆ ಒಂದು ಕ್ಷಣ ಅಲ್ಲಿ ನಿಂತು ನಿಮಗೆ ಉತ್ತರಿಸಿಯೇ ಮುಂದೆ ಹೋಗುತ್ತಾರೆ. ಆರಾಮವಾಗಿ ಇದ್ದಾಗಲಂತೂ ತಾತ್ಪರ್ಯನಿರ್ಣಯದ ಮೊದಲಾದ ಬೃಹತ್ ಗ್ರಂಥಗಳ ಶ್ಲೋಕಗಳನ್ನು ಶ್ಲೋಕ ಮತ್ತು ಪುಟ ಸಂಖ್ಯೆಯ ಸಹಿತವಾಗಿ ಉದ್ಧರಿಸಿ ಸಮಾಧಾನವನ್ನು ಕೊಡುತ್ತಾರೆ. ಇದಲ್ಲವೇ ನಾಯಕನ ಸ್ವಭಾವ?
ಏಕಕಾಲದಲ್ಲಿ ಹಲವಾರು ಪ್ರೊಜೆಕ್ಟುಗಳನ್ನು ನಿಭಾಯಿಸುತ್ತಾ, ಯಾರಿಗೂ ಪಿಂಕ್ ಸ್ಲಿಪ್ ಕೊಡದೆ, ಯಾರ ಮೇಲೂ ಹಾರಾಡದೆ, ಡೆಡ್ ಲೈನ್ಗಳನ್ನು ಮುಂದೂಡದೆ, ದಿನವೊಂದಕ್ಕೆ ಹತ್ತು ಲಕ್ಷರೂಪಾಯಿಗಳನ್ನು ಸಂಪಾದಿಸಿಕೊಡಬಲ್ಲ ಸಿ.ಇ.ಓ ಯಾರಾದರೂ ಇದ್ದಾರೆಯೇ ಇಂದಿನ ಪ್ರಖ್ಯಾತ ಕಂಪೆನಿಗಳಲ್ಲಿ? ಒಂದು ವೇಳೆ ಶ್ರೀಗಳವರು ಆಶ್ರಮವನ್ನು ತೆಗೆದುಕೊಳ್ಳದೆ ಇದ್ದಲ್ಲಿ ಜಗತ್ತಿನ ಪ್ರಖ್ಯಾತ ಕಂಪೆನಿಯೊಂದರ ಮಾಲಕರೇ ಆಗಿರುತ್ತಿದ್ದರಲ್ಲವೇ?.
ಎರಡನೆಯ ಪರ್ಯಾಯದ ಹೆಚ್ಚು ಕಡಿಮೆ ಕೊನೆಯ ದಿನಗಳು. ಒಂದು ದಿನ ರಾಜಾಂಗಣದಲ್ಲಿ ಶ್ರೀಗಳವರಿಂದ ಕುಂತಿಯ ಚಿಂತನೆ ನಡೆಯುತ್ತಿತ್ತು. ನಾನು ಅಂದು ಕೊನೆಯ ಸಾಲಿನಲ್ಲಿ ಉಪನ್ಯಾಸವನ್ನು ಕೇಳುತ್ತಾ ಕುಳಿತಿದ್ದೆ. ಅದೇ ಸಾಲಿನಲ್ಲಿ ಹಲವರು ದಂಪತಿಗಳು ಸಹ ಕುಳಿತಿದ್ದರು. ಅವರೆಲ್ಲ ರಾಯಚೂರು ಜಿಲ್ಲೆಯ ಮಾನವಿಯವರು. ಶ್ರೀಗಳವರಲ್ಲಿ ಅಪಾರ ಭಕ್ತಿ ಅವರಿಗೆ ಎಂಬುದು ಅವರ ಮುಖದಲ್ಲಿ ಏಳುತ್ತಿದ್ದ ಸಂತಸದ ಅಲೆಗಳಿಂದಲೇ ಕಂಡುಹಿಡಿಯಬಹುದಿತ್ತು. ಮಧ್ಯದಲ್ಲಿ ಒಬ್ಬಾತ ತನ್ನ ಜೊತೆಗಾರನಿಗೆ ಕೇಳುವಂತೆ ” ಏನೇ ಅನ್ನಪ, ಪಲಿಮಾರು ಶ್ರೀಗಳವರು ವಾಯುದೇವರ ಅವತಾರನ ಸೈ. ಇಲ್ಲಿಕ್ರ ಇಷ್ಟೊಂದು ಜ್ಞಾನ ಬರದು ಸಾಧ್ಯನ ಇಲ್ಲ ಬಿಡು” ಎಂದರು. ಇವರ ಮುಂದಿನ ಸಾಲಿನಲ್ಲಿ ಕುಳಿತವರೊಬ್ಬರಿಗೂ ಈ ಮಾತು ಕೇಳಿಸಿತು. ಅವರು “ಏನ್ರೀ ಹಿಂಗೆಲ್ಲ ಅನ್ನಬಾರದು ನೀವು. ವಾಯುದೇವರಿಗೆ ಯಾರೂ ಸಮರಲ್ಲ. ಹೀಗೆಲ್ಲ ಮಾತಾಡಿದರೆ ಶ್ರೀಗಳವರಿಗೂ ಇಷ್ಟವಾಗೊಲ್ಲ.” ಎಂದು ಹೇಳಿದರು. ಆಗ ಇವರು ಅದಕ್ಕೆ ಉತ್ತರರೂಪವಾಗಿ ಒಂದು ಉಪನ್ಯಾಸವನ್ನೇ ಮಾಡಿಬಿಟ್ಟರು. ಅದರ ಸಾರಾಂಶವಿಷ್ಟು. “ವಾಯುದೇವರ ಅವತಾರವೇ ಇವರು ಎಂಬುವುದು ತಪ್ಪು ಎಂದು ನಮಗೂ ಗೊತ್ತು. ಆದರೆ ಇವರ ಜ್ಞಾನ ಮತ್ತು ತಪಸ್ಸನ್ನು ಶಕ್ತಿಯನ್ನು ನೋಡಿ ನಮಗೆ ವಾಯುದೇವರೇ ಇವರ ರೂಪದಲ್ಲಿ ಬಂದಿದ್ದಾರೆ ಅನ್ನಿಸುತ್ತದೆ. ಯಾರು ಏನೇ ಅಂದುಕೊಂಡರೂ ನಾವಂತೂ ಇವರನ್ನು ಆಧುನಿಕ (ಅಭಿನವ ಎನ್ನುವ ಪದ ಅವರರಿಗೆ ಸ್ಮರಣೆಗೆ ಬರಲಿಲ್ಲವೆನಿಸುತ್ತದೆ.) ಮಧ್ವಾಚಾರ್ರು ಎಂದೇ ಕರೆಯುತ್ತೇವೆ”. ಇದನ್ನು ಕೇಳಿದ ಆ ಹಿರಿಯರು ಏನು ಹೇಳುವುದೋ ತಿಳಿಯದೆ ಮುನ್ನಡೆದರು.
ಶಾಸ್ತ್ರೀಯ ವಿಚಾರವಾಗಿ ಆ ಹಿರಿಯರು ಹೇಳಿದ್ದೇ ಸರಿ. ಒಪ್ಪುವಾ. ಶ್ರೀಶ್ರೀವಿದ್ಯಾಧೀಶತೀರ್ಥರನ್ನು ಜನರು ಎಷ್ಟರ ಮಟ್ಟಿಗೆ ಆರಾಧಿಸುತ್ತಾರೆ ಎಂಬುದಕ್ಕೆ ಮೇಲೆ ಹೇಳಿದ ಘಟನೆಯು ಒಂದು ಚಿಕ್ಕ ನಿದರ್ಶನವಷ್ಟೇ. ಲೌಕಿಕವ್ಯಾಪಾರದಲ್ಲಿ ಮುಳುಗಿಹೋದ ಶ್ರೇಷ್ಠಿಯೊರ್ವನ ಹೃದಯವು ಈ ರೀತಿಯಾಗಿ ಮಾತನಾಡಬೇಕೆಂದರೆ ಶ್ರೀಗಳವರ ವ್ಯಕ್ತಿತ್ವವು ಅದೆಷ್ಟು ಪರಿಣಾಮವನ್ನು ಬೀರಿರಬಹುದು ಇವರ ಮೇಲೆ? ಅಲ್ಲವೇ? ವರ್ಣಭ್ರಷ್ಟರಾಗಲಿದ್ದವರು, ಧರ್ಮಭ್ರಷ್ಟರಾಗಲಿದ್ದವರು, ಸೋತು ಜೀವನಭ್ರಷ್ಟರಾಗಲಿದ್ದವರು ಹೀಗೆ ಅನೇಕರ ಜೀವನಗಳನ್ನು ಶ್ರೀಗಳವರ ವ್ಯಕ್ತಿತ್ವವು ಮೇಲಕ್ಕೆತ್ತಿದೆ.
ಯತಿಗಳನ್ನು ಕಂಡಾಕ್ಷಣ ಭಯಮಿಶ್ರಿತವಾದ ಭಾವನೆಯಿಂದ ಕಾಲಿಗೆರಗುವ ಅನೇಕರನ್ನು ನಾನು ನೋಡಿದ್ದೇನೆ. ಆದರೆ ಪಲಿಮಾರು ಶ್ರೀಗಳವರಲ್ಲಿ ಭಯಕ್ಕೆ ತಾವಿಲ್ಲ. ಇಲ್ಲಿರುವುದು ಸ್ನೇಹದ ಸೆಲೆ ಮಾತ್ರ. ಹೃದಯದುಂಬಿ ತಲೆಬಾಗುವ, ಇವರ ನೋಟಕ್ಕಾಗಿ ಕಾತುರದಿಂದ ಕಾಯುವ, ನಮ್ಮನ್ನೂ ಮಾತನಾಡಿಸಲಿ ಎಂದು ಪರಿತಪಿಸುವ, ಇವರ ಜನ್ಮ ದಿನವನ್ನು ನೆನಪಿಟ್ಟುಕೊಂಡು ಮನೆಯಲ್ಲಿಯೇ ಆಚರಿಸುವ ಪ್ರೇಮಮಯಿ ಭಕ್ತಸಂಪದವೇನಾದರೂ ಇದ್ದಲ್ಲಿ ಅದು ಶ್ರೀವಿದ್ಯಾಧೀಶತೀರ್ಥರಿಗೆ ಮಾತ್ರ. ಮುಗುಳ್ನಗೆಯ ಒಂದು ಚಿಕ್ಕ ಎಳೆ ಸಾಕು ಭಕ್ತನ ವ್ಯಾಕುಲತೆಯನ್ನು ಹೊಡೆದೋಡಿಸಲು. ಇಂತಹ ಪ್ರಫುಲ್ಲವಾದ ಮನಸ್ತತ್ವ ಶ್ರೀವಾಯುದೇವರ ನಿಜವಾದ ಕೃಪಾಪಾತ್ರರಿಗೇ ಇರಲು ಸಾಧ್ಯ. ಸೂಕ್ಷ್ಮವಾಗಿ ಆಲೋಚಿಸಿದರೆ ನಾನು ಈ ಮಾತನ್ನು ಯಾಕೆ ಹೇಳಿದೆ ಎಂಬುದರ ಅರಿವಾಗುವುದು. ಈ ದಿಸೆಯಲ್ಲಿ ಮಾನವಿಯ ಶ್ರೇಷ್ಠಿಯ ಮಾತುಗಳು ನಿಜಕ್ಕೂ ತೂಕವುಳ್ಳದ್ದೇ ಅಗಿವೆ.
ಮಗನಾಗಿ, ವಿದ್ಯಾರ್ಥಿಯಾಗಿ, ಸ್ನೇಹಿತನಾಗಿ, ಸಂನ್ಯಾಸಿಯಾಗಿ, ಶಿಷ್ಯನಾಗಿ, ಪೀಠಾಧಿಪತಿಯಾಗಿ, ಗುರುವಾಗಿ ಹೀಗೆ ಎಲ್ಲ ಸ್ತರಗಳಲ್ಲಿ ಶ್ರೀಗಳವರು ಆದರ್ಶಜೀವನಕ್ಕೆ ಒಂದು ಮೇಲ್ಪಂಕ್ತಿಯಾಗಿದ್ದಾರೆ. ಆಧುನಿಕರ ಭಾಷೆಯಲ್ಲಿ ಹೇಳಬೇಕೆಂದರೆ ಲೀಡರ್ ಎಂಬ ಶಬ್ದಕ್ಕೆ ಶ್ರೀವಿದ್ಯಾಧೀಶತೀರ್ಥರು ಪರ್ಯಾಯಪದವಾಗಿದ್ದಾರೆ. ಸಂದೇಹವೇ ಇಲ್ಲ.
ಲೇಖನವು ದೀರ್ಘವಾಯಿತು ಎನ್ನದಿರಿ. ಅವರ ಚರಿತ್ರೆಯ ವಿಸ್ತಾರದ ಮುಂದೆ ನಾನು ಬರೆದದ್ದು ಅಲ್ಪ. ಅತ್ಯಲ್ಪ. ಮುಂದೆ ಇನ್ನೂ ಬೇಕಾದಷ್ಟು ಉಂಟಲ್ಲ ಬರೆಯಲು. ಆದರೆ ಗುರುಗಳ ಕಣ್ಣೋಟ ನನ್ನ ಮೇಲೂ ಇರಬೇಕು, ಆ ಭಾಗ್ಯ ನನ್ನದಾಗಲಿ.
- ನಿ. ಗು. ಈಶಾವಾಸ್ಯಂ ಶರ್ಮ,
ಪಣಿಯಾಡಿ, ಬೆಳ್ಳಿಪುರ
Oh super , no words to express
acharyare swamigala poojya maata pitrugala pata ondu kalisi save madalu anukulavagirali
Leader is a small word for his description. His holiness is spiritual guru and Loka uddharaka