ಮಗುವ ರಕ್ಷಿಸಿದ ತಂದೆ-ವ್ವ

ಪ್ರಯಾಣ ಪ್ರಾರಂಭಿಸಿದ್ದಷ್ಟೇ ನೆನಪು ರಘುವೀರನಿಗೆ. ಎಚ್ಚರವಾಗಿ ನೋಡಿದಾಗ ಕಂಡದ್ದು ಎಲ್ಲವೂ ಘೋರವೇ. ಅಪರಿಚಿತವಾದ ಸ್ಥಳವೊಂದರಲ್ಲಿ ಕಾರು ಮರಕ್ಕಿ ಗುದ್ದಿ ಹಾಳಾಗಿ ಹೋಗಿದೆ. ಮೈಮೂಳೆಯೆಲ್ಲವೂ ಮುರಿದುಹೋಗಿವೆಯೇನೋ ಎಂಬಂತಹ ನೋವನ್ನು ಅನುಭವಿಸುತ್ತಲೇ ಹೆಂಡತಿಯತ್ತ ನೋಡಿದ. ಅಮ್ಮಯ್ಯ!! ರಘುವೀರನ ನಾಲಿಗೆ ಕ್ಷಣಾರ್ಧದಲ್ಲಿ ಒಣಗಿ, ಇರುವ ಜೀವವೆಲ್ಲ ಕಾಲಬುಡಕ್ಕೆ ಜಾರಿಬಿದ್ದಂತಾಯ್ತು. ಜಾಹ್ನವಿಯ ಕಣ್ಣುಗಳು ಸುಣ್ಣದಂತೆ ಬೆಳ್ಳಗಾಗಿದ್ದವು, ಮಾತ್ರವಲ್ಲ. ಬಾಯಿಯು ರಕ್ತದಾಹದಿಂದ ಹಪಹಪಿಸುತ್ತಿದ್ದರೆ, ಕ್ರೂರವಾದ ಉಗುರಿನಿಂದ ಆಕೆ ರಘುವೀರನನ್ನು ತಿನ್ನಲು ಹಾತೊರೆಯುತ್ತಿದ್ದಾಳೆ. ಆಕೆ ದೆವ್ವವಾಗಿ ಬದಲಾಗಿ ಹೋಗಿದ್ದಾಳೆ! ನಿಃಶಕ್ತನಾಗಿದ್ದ ರಘುವೀರನನ್ನು ಆಕೆ ಹಿಡಿದೆಳೆದು ತಿನ್ನಲು ಪ್ರಯತ್ನಿಸುತ್ತಳೇ ಇದ್ದಳು. ಆದರೆ ಅವಳಿಂದ ಅದಾಗದೇ ಇದ್ದದ್ದು ಒಂದೇ ಒಂದು ಕಾರಣದಿಂದ.

ರಘುವೀರ ಮತ್ತು ಜಾಹ್ನವಿ ಇಬ್ಬರೂ ವಿದ್ಯಾವಂತರು. ಆಸ್ಟ್ರೇಲಿಯದಲ್ಲಿ ಉದ್ಯೋಗಿಗಳು. ಅಪ್ಪ ಅಮ್ಮಂದಿರ ವಿರೋಧದಲ್ಲಿಯೂ ಆಸ್ಟ್ರೇಲಿಯಕ್ಕೆ ಬಂದು ನಿಂತವರು. ಅಶ್ವಿನಿಯು ಹುಟ್ಟಿದ ಮೇಲೆ ರಘುವೀರನ ತಾಯಿಯು ಬಂದು ಇವರೊಟ್ಟಿಗೆ ಇದ್ದರು. ಮೊಮ್ಮಗಳ ಆರೈಕೆಗೆ ಬಂದೆ ಎಂದು ಇದ್ದದ್ದು ಹೆಸರಿಗಷ್ಟೇ. ಸೊಸೆಯೊಂದಿಗೆ ಅವರ ಒಡನಾಟ ಬೆಳೆಯಲೇ ಇಲ್ಲ. ಇವಳಾದರೂ ಅಷ್ಟೆ. ಹೆಚ್ಚು ತಲೆಕೆಡಿಸಿಕೊಳ್ಳದೆ ತನಗೇನು ಬೇಕೋ ಅದನ್ನು ಮಾಡಿಕೊಂಡು ಇದ್ದಳು. ಒಳ್ಳೆಯವಳೇ ಇವಳು. ಆದರೆ ಹಟಮಾರಿತನವು ಬೇಕಾದಷ್ಟಿತ್ತು. ಇಂಥದೇ ಒಂದು ಹಟದಿಂದಾಗಿ ಅಶ್ವಿನಿ, ರಘುವೀರ ಮತ್ತು ಜಾಹ್ನವಿ ಒಂದು ಔಟಿಂಗಿಗೆ ಹೊರಟರು. ಈ ಔಟಿಂಗ್ ಎನ್ನುವ ಶಬ್ದಕ್ಕೇನೇ ಮುಜುಗರ ಪಟ್ಟುಕೊಂಡ ರಘುವೀರನ ಅಮ್ಮನು ಮನೆಯಲ್ಲೇ ಉಳಿದರು. ಉಳಿದು ಬಿಟ್ಟರು.

ಆಸ್ಟ್ರೇಲಿಯಾದ ಒಂದು ದೂರದ, ಕಾಡಿನ ಮಧ್ಯದ ಒಂದು ರಿಸಾರ್ಟಿಗೆ ಜಿಪಿಎಸ್ ನೋಡಿಕೊಂಡು ಹೊರಟದ್ದಷ್ಟೇ. ಯಾಕೋ ರಘುವೀರನ ಮನವು ಕೆಡುಕನ್ನು ಸಂಶಯಿಸುತ್ತಲೇ ಇತ್ತು. ಅದನ್ನು ವ್ಯಕ್ತಪಡಿಸಿದರೆ ಜಾಹ್ನವಿಯು ಹಾಸ್ಯಮಾಡಿ ಸುಮ್ಮನಾದಳು. ರಿಸಾರ್ಟಿಗೆ ಹತ್ತಿರವಾದಂತೆಲ್ಲ ಏನೋ ಅವ್ಯಕ್ತವಾದ ಕೆಡುಕಿನ ಅಲೆಗಳು ಜಾಹ್ನವಿಯನ್ನು ಸಹ ಆವರಿಸತೊಡಗಿದವು. ಆದರೆ ಅದನ್ನು ಹೇಳಿದರೆ ರಘುವು ತಿರುಗಿ ಬೈದರೆ ಅವಮಾನವಾದೀತು ಎಂದು ಸುಮ್ಮನಾದಳು. ನೀರವವಾದ, ಅಸಹ್ಯವಾದ ಮೌನವೇ ಅವರ ದಾರಿಯಾಗಿಬಿಟ್ಟಿತ್ತು. ದಾರಿಯುದ್ದಕ್ಕೂ ಅಲ್ಲಲ್ಲೇ ಅನೇಕ ಕಡೆಗಳಲ್ಲಿ ಬಾಯ್ದೆರೆದುಕೊಂಡಿದ್ದ ಗೋರಿಗಳು ಆಕೆಯ ಮನಸ್ಸಿನೊಳಗೂ ಒಂದು ಅಧೀರತೆಯನ್ನು ನಿರ್ಮಿಸಿದ್ದವು. ಆಗೊಮ್ಮೆ ಈಗೊಮ್ಮ ವಿಕಾರಧ್ವನಿಯ ಅಲೆಗಳು ಕ್ಷೀಣವಾಗಿ ಅವಳ ಹೃದಯವನ್ನು ಸೀಳುವ ಪ್ರಯತ್ನವನ್ನು ನಡೆಸಿದ್ದವು. ಆದರೆ ಇದನ್ನೆಲ್ಲ ಹೇಳಿಕೊಳ್ಳುವುದು ಆಕೆಯ ಅಹಮ್ಮಿಗೆ ಒಪ್ಪದ ಮಾತು ಆಗಿತ್ತು. ಹೇಳಿದ್ದರೇನೇ ಒಳ್ಳೆಯದಿತ್ತೇನೊ. ಅವನೂ ವಾಪಸ್ಸು ಹೋಗಿಬಿಡಲು ತವಕಿಸುತ್ತಲೇ ಇದ್ದನೆಂಬುದು ಆಕೆಯ ಮನಸ್ಸಿಗೆ ತಿಳಿಯಲಿಲ್ಲ. ತಾನಾಗಿಯೇ ವಾಪಸ್ಸು ತಿರುಗಿಸಿಬಿಟ್ಟಿದ್ದರೆ ಅದನ್ನು ಒಪ್ಪಿಕೊಳ್ಳಲು ಅವಳು ತಯಾರಾಗಿದ್ದಾಳೆಂಬುದು ಇವನ ಅರಿವಿಗೂ ಬರಲಿಲ್ಲ. ವ್ಯಾಕುಲಚಿತ್ತದಿಂದಲೇ ಅವನು ಗಾಡಿಯನ್ನು ಮುಂದೋಡಿಸುತ್ತಿದ್ದ. ಪಿಸ್ತೂಲು ತನ್ನ ಜೇಬಿನಲ್ಲಿಯೇ ಇದೆ ಎಂಬ ಒಂದು ವಿಷಯವು ಅವನಿಗೆ ಚೂರು ಧೈರ್ಯವನ್ನು ಕೊಟ್ಟಿತ್ತಷ್ಟೇ.

ಸುಮಾರು ೫೦೦ ಕಿ.ಮೀ ಪಯಣದ ನಂತರ ಒಂದೆಡೆ ರಘುವೀರನ ಕಣ್ಣಿಗೆ ಇದ್ದಕ್ಕಿದ್ದ ಹಾಗೆ ವಿಪರೀತ ವೇಗದ ಬೆಳಕಿನ ಅಲೆಯೊಂದು ಬಂದು ಅಪ್ಪಳಿಸಿತು. ಏನೆಂದು ತಿಳಿಯದೆ ಮರವೊಂದಕ್ಕೆ ಗುದ್ದಿದ. ಅದರ ತೀವ್ರತೆಗೆ ಗಂಡ ಹೆಂಡಿರಿಬ್ಬರೂ ಎಚ್ಚರ ತಪ್ಪಿ ಹಾಗೆಯೇ ಸೀಟಿಗೆ ಒರಗಿದರು. ಹಸುಳೆ ಅಶ್ವಿನಿಗೆ ಏನೂ ಆಗದೆ ಕ್ಷೇಮವಾಗಿ ಹಿಂದಿನ ಸೀಟಿನಲ್ಲಿ ನಿದ್ದೆಗೆ ಜಾರಿದ್ದು ಹಾಗೆಯೇ ಇತ್ತು. ಈ ಅವಘಡವು ಸಂಭವಿಸಿದ ಜಾಗವು ರಕ್ತದಾಹಿ ದೆವ್ವಗಳ ಆಟದ ಜಾಗ ಎಂಬುದು ಇಬ್ಬರಿಗೂ ಗೊತ್ತಿರಲಿಲ್ಲ. ಶಿಶುವಿಗೆ ಗೊತ್ತಿದ್ದರೂ ಹೇಳಲು ಅದಕ್ಕೆ ಇನ್ನೂ ಮಾತೇ ಬಂದಿರಲಿಲ್ಲ.

ಇವರು ಹೀಗೆ ಎಚ್ಚರದಪ್ಪಿ ಬಿದ್ದಿದ್ದಾಗ ಹತ್ತಿರವಿದ್ದ ಗೋರಿಗಳಿಂದ ಕೆಲವು ದೆವ್ವಗಳು ಎದ್ದು ಬಂದು ಇವರ ರಕ್ತವನ್ನು ಹೀರಲು ಪ್ರಯತ್ನಿಸಿವೆ. ಆದರೆ ಅವರ ದಾಳಿಗೆ ಸಿಕ್ಕಿದ್ದು ಕೇವಲ ಜಾಹ್ನವಿ ಮಾತ್ರವೇ. ಚೂರೇ ಚೂರು ತೆರೆದಿದ್ದ ಕಿಟಕಿಯ ಮೂಲಕ ಅವಳ ಕೈಯನ್ನೆಳೆದು ಆ ದೆವ್ವಗಳು ಕಚ್ಚಿ ಕಚ್ಚಿ ಎಳೆದಾಡಿವೆ. ಧೈರ್ಯವನ್ನು ಒಟ್ಟುಗೂಡಿಸಿಕೊಂಡ ಆಕೆ ತನ್ನ ಧೈರ್ಯವನ್ನು ಒಟ್ಟುಗೂಡಿಸಿಕೊಂಡು ಹೋರಾಟನಡೆಸಿ, ಅವುಗಳ ಕೈಗಳನ್ನು ಕಿಟಕಿಯಿಂದಾಚೆಗೆ ನೂಕಿ, ಗಾಜನ್ನು ಏರಿಸಿಕೊಂಡಳು. ಆದರೆ ಅಷ್ಟು ಹೊತ್ತಿಗೆ ಆಗಬೇಕಾಗಿದ್ದ ಅನಾಹುತವು ಆಗಿಯೇ ಹೋಗಿತ್ತು.

ಅಂತೂ ರಘುವೀರನಿಗೆ ಪ್ರಜ್ಞೆ ತಿಳಿದಾಗ ಅದೇ ತಾನೆ ತಿಳಿಯಾಗಿ ಹರಡಿತ್ತು. ಅವನಿಗೆ ಅದು ಸಹಿಸಲು ಅಸಾಧ್ಯವಾದ ಯಾತನೆ. ಪಕ್ಕಕೆ ನೋಡಿದಾಗ ಜಾಹ್ನವಿಯು ಭಯಾನಕವಾಗಿ ಬದಲಾಗಿದ್ದಾಳೆ. ಆಕೆಯ ಗಂಟಲಿನಿಂದ ಅಸಹ್ಯವಾಗಿ, ಗೊಗ್ಗರ ಧ್ವನಿಯು ಬರುತ್ತಿದೆ.

ಜಾಹ್ನವಿಯು ದೆವ್ವಗಳನ್ನು ಹೊರದೂಡಿದ್ದೇನೋ ನಿಜವೇ. ಆದರೆ ಅವುಗಳು ಇವಳ ಕೈಯನ್ನು ಪರಚಿ ಕಚ್ಚಿ ಗಾಯಮಾಡಿಹೋಗಿದ್ದರಿಂದ, ಅವುಗಳ ಜೊಲ್ಲಿನಿಂದ ವಿಷವು ಇವಳದೇಹದಲ್ಲಿ ಸೇರಿಕೊಂಡು, ಸ್ವಲ್ಪ ಹೊತ್ತಿನಲ್ಲಿ ಇವಳು ಸತ್ತು, ದೇಹವು ಪಿಶಾಚಿಯಾಗಿ ಪರಿವರ್ತನೆಯಾಗಿ ಹೋಗಿತ್ತು.

ತನಗೂ ಎಚ್ಚರವಾದ ನಂತರ, ಆಕೆ ದೆವ್ವವಾಗಿ ಬದಲಾಗಿರುವುದನ್ನು ತಿಳಿದ ರಘುವೀರನು ತನ್ನನ್ನು ತಾನು ತನ್ನ ಬದಿಯ ಬಾಗಿಲಿನತ್ತ ಒತ್ತಿಕೊಂಡೇ ಕುಳಿತ. ಜಾಹ್ನವಿಯು ಧರಿಸಿದ್ದ ಸೀಟಿನ ಬೆಲ್ಟು ಅವಳನ್ನು ಇವನತ್ತ ಬರದಂತೆ ಗಟ್ಟಿಯಾಗಿ ಕಟ್ಟಿಹಾಕಿತ್ತು. ಅದುವೆ ರಘುವಿನ ಜೀವವನ್ನು ಕಾಪಾಡಿದ್ದು. ರಘು ಎನ್ನುವುದಕ್ಕಿಂತ ಅಶ್ವಿನಿಯ ಜೀವವನ್ನು ಕಾಪಾಡಿದ್ದು ಎಂದರೆ ಸರಿ. ದೆವ್ವವು ಬೆಲ್ಟಿನಲ್ಲಿ ಬಂಧಿತವಾಗಿದೆ ಎಂಬುದನ್ನು ಕ್ಷಣಾರ್ಧದಲ್ಲಿ ಗ್ರಹಿಸಿದ ಅವನು ಕಾರಿನಿಂದ ಹೊರಬಿದ್ದ. ಮರುಕ್ಷಣದಲ್ಲಿಯೇ ಅಶ್ವಿನಿಯತ್ತ ನೋಡಿದ, ಹಿಂದಿನ ಸೀಟಿನಲ್ಲಿ ಮಲಗಿದ್ದ ಶಿಶುವು ಅದೇ ತಾನೆ ಎದ್ದು ಹಾಲಿಗಾಗಿ ಎದುರು ನೋಡುತ್ತಿತ್ತು. ಮಗುವನ್ನೆತ್ತಿಕೊಳ್ಳುವ ಮೊದಲು ರಘುವು ಮಾಡಿದ ಮತ್ತೊಂದು ಕೆಲಸವೆಂದರೆ, ಹೃದಯವನ್ನು ಇನ್ನಿಲ್ಲದಷ್ಟು ಕಲ್ಲಾಗಿಸಿಕೊಂಡು, ಪಿಸ್ತೂಲಿನಿಂದ ಜಾಹ್ನವಿಯ ಹಣೆ ಎದೆ ಮುಖ ಎನ್ನದೆ ನಾಲ್ಕಾರು ಗುಂಡುಗಳನ್ನು ಹಾರಿಸಿದ್ದು. ಆ ದೆವ್ವ ಇನ್ನು ಸತಾಯಿಸಲಾರದು ಎಂದು ಖಚಿತವಾದ ಮೇಲೆ, ಮಗುವನ್ನು ಎತ್ತಿಕೊಂಡು ಹೊರಬಂದ. ಕಾರು ಮುಂದೆ ಹೋಗದಂತೆ ಹಾಳಾಗಿ ಹೋಗಿತ್ತು. ಮಗುವನ್ನೆತ್ತಿಕೊಂಡು, ಅದರ ನೆತ್ತಿಗೊಂದು ಹೂಮುತ್ತನ್ನಿತ್ತು, ಎದೆಗೆ ಗಟ್ಟಿಯಾಗಿ ಅವಚಿಕೊಂಡ. ಹಾಗೆಯೇ ಕಾರಿನ ಹಿಂದೆ ಬಂದು, ಇತ್ತೀಚೆಗೆ ತಾನೇ ಅಂಟಿಸಿದ್ದ ಅಮ್ಮ, ಮಗು ಮತ್ತು ಅಪ್ಪನ ಸ್ಟಿಕ್ಕರಿನಿಂದ ಅಮ್ಮನ ಭಾಗವನ್ನು ಮಾತ್ರ ಕಿತ್ತು ಭಾರವಾದ ಮನಸ್ಸಿನಿಂದ, ಮಗುವಿನ ಕೈಯಲ್ಲಿತ್ತ. ತಿಳಿಗೊಳದ ಮನಸ್ಸಿನ ಆ ಮಗುವು ಅಮ್ಮನ ಚಿತ್ರವನ್ನು ತನ್ನ ಎಳೆಯ ಬೆರಳುಗಳಿಂದ ತೆಗೆದುಕೊಂಡು ನಲಿಯಿತು.

ಮಗುವನ್ನು ಗಟ್ಟಿಯಾಗಿ ಅವಚಿಕೊಂಡವನು, ಮುಂದೇನು ಮಾಡುವುದು ಎಂದು ಒಂದು ಕ್ಷಣ ಆಲೋಚನೆ ಮಾಡಿದ. ಮಗುವಿನ ನಿರ್ಮಲ ಮುಖದಿಂದ ತನ್ನ ದೃಷ್ಟಿಯನ್ನು ಸರಿಸಿ, ತನ್ನ ಅವಸ್ಥೆಯನ್ನೊಮ್ಮೆ ನೋಡಿಕೊಂಡ. ಬಲ ಮುಂಗೈ ಬಹಳವಾಗಿ ಉರಿಯುತ್ತಿತ್ತು. ಅಂಗಿಯ ಮುಂದೋಳನ್ನು ಸರಿಸಿ ನೋಡಿಕೊಂಡ. ಯಾಕಿಷ್ಟು ಉರಿಯುತ್ತಿದೆ? ಎಂದು. ಅಷ್ಟೇ. ಎದೆ ಮತ್ತೊಮ್ಮೆ ಧಸಕ್! ಎಂದಿತು. ಸಾವು ಕಣ್ಣಮುಂದೆ ಅಸ್ಪಷ್ಟವಾಗಿ ಅಡ್ಡಾಡಿದ್ದು ತಿಳಿಯಿತು ಅವನಿಗೆ. ಅಷ್ಟೂ ಹೊತ್ತಿನಿಂದ ಕೂಡಿಸಿಟ್ಟುಕೊಂಡಿದ್ದ ಧೈರ್ಯವು ಕ್ಷಣಾರ್ಧದಲ್ಲಿ ಹಾರಿಹೋಯಿತು. ಹೃದಯವು ಅಯ್ಯೋ ದೇವರೇ ಎಂದು ಅಪಾರವಾದ ವೇದನೆಯಿಂದ ಅತ್ತಿತು.

ಸೀಟುಬೆಲ್ಟಿನಿಂದ ಗಟ್ಟಿಯಾಗಿ ಬಿಗಿಯಲ್ಪಟ್ಟಿದ್ದ ಕಾರಣದಿಂದ ಜಾಹ್ನವಿಯ ದೆವ್ವವು ಇವನನ್ನು ತಿನ್ನಲಾಗದೆ ಬಿಟ್ಟಿದ್ದೇನೋ ಹೌದು. ಆದರೆ ಬೆಳಗಿನ ಜಾವದಲ್ಲೆಲ್ಲೋ ಇವನ ಕೈಯನ್ನು ಎಳೆದುಕೊಂಡು ಆಳವಾಗಿ ಕಚ್ಚಿಯೇಬಿಟ್ಟಿತ್ತು. ಎಚ್ಚರ ತಪ್ಪಿದ್ದ ರಘುವಿಗೆ ಇದರ ಅರಿವೇ ಇದ್ದಿರಲಿಲ್ಲ. ಅವನ ಕೈ ಉರಿಯುತ್ತಾ ಇದ್ದಿದ್ದು ಈ ಗಾಯದ ಕಾರಣದಿಂದಲೇ. ಬರಿ ಉರಿ ಆಗಿದ್ದರೆ ಸಹಿಸಬಹುದಿತ್ತು. ಆದರೆ ಕಚ್ಚಿದ್ದು ದೆವ್ವ. ಆ ದೆವ್ವದ ಸೋಂಕು ಇವನಿಗೂ ತಗುಲಿತ್ತು. ಈ ಸೋಂಕಿನ ಪರಿಣಾಮ ಏನಾಗುವುದು ಎಂಬ ಅರಿವು ಇದ್ದಿದ್ದಕ್ಕೇ ರಘುವೀರನ ಎದೆ ಧಸಕ್ ಎಂದಿದ್ದು. ಅದೇ ಕ್ಷಣದಲ್ಲಿಯೇ ಅವನಿಗೆ ತನ್ನ ಸಾವು ಕಣ್ಣಿಗೆ ಕಂಡದ್ದು. ಮಗುವಿನ ಪರಿಶುಭ್ರವಾದ ನಗುವನ್ನು ನೋಡಿ ಕ್ಷಣದ ಮಟ್ಟಿಗೆ ತನ್ನ ಭಯವನ್ನು ಮರೆತಿದ್ದನಷ್ಟೇ. ಇನ್ನು ಮುಂದೆ ತಾನು ಮಗುವಿನ ನಗುವನ್ನು ಆನಂದಿಸಲಾಗದು ಎಂಬ ಘೋರ ಸತ್ಯ ಅವನಿಗೆ ಹೊಳೆಯಿತು. ನಗುವನ್ನು ಆನಂದಿಸುವುದಿರಲಿ, ಆ ಮಗುವು ಜೀವಸಹಿತ ಉಳಿವುದೇ? ಎಂಬುದೇ ಒಂದು ಪ್ರಶ್ನೆಯಾಯಿತು. ಇಂದು ರಾತ್ರಿಯೊಳಗಾಗಿ ತಾನು ಕೂಡ ದೆವ್ವವಾಗುವುದು ಗ್ಯಾರಂಟಿ. ತನ್ನದೇ ದೆವ್ವದಿಂದ ಮಗುವಿಗೆ ತೊಂದರೆಯಾಗದೆ ಇರಲು ತಾನು ಅಲ್ಲಿರಕೂಡದು. ಮಗುವನ್ನು ಅಲ್ಲಿಯೇ ಬಿಟ್ಟರೆ ಅದಕ್ಕೆ ದೆವ್ವಗಳಿಂದ ಆಪತ್ತು ಖಂಡಿತ. ಹಾಗೆಂದು ಅದನ್ನೆತ್ತಿಕೊಂಡು ಬೇರೆಡೆ ಹೋಗೋಣವೆಂದರೆ ತಾನೇ ದೆವ್ವವಾಗಲಿರುವವನು. ತಾನೇ ಮಗುವಿಗೆ ಬಾಯಿ ಹಾಕಿಬಿಟ್ಟರೆ????

ತನ್ನ ಈ ಅಸಹಾಯಕತೆಗಾಗಿಯೇ ಅವನ ಹೃದಯವು ವೇದನೆಯಿಂದ ಗೋಳಿಟ್ಟಿತು.

ಆದರೆ, ಅವನ ಅಪಾರವಾದ ಸಮಯಪ್ರಜ್ಞೆ ಆ ಸಮಯದಲ್ಲಿ ಕಾರ್ಯಾಚರಣೆಗೆ ತೊಡಿಕೊಂಡೇ ಬಿಟ್ಟಿತು. ಗಾಯದ ತೀವ್ರತೆಯನ್ನು ನೋಡಿದವನೇ ಚಕಚಕನೆ ಕಾರಿನಲ್ಲಿದ್ದ ಮ್ಯಾಪ್, ಟಾರ್ಚು, ಒಂದು ಪರ್ಮನೆಂಟ್ ಮಾರ್ಕರ್ ಹಾಗು ಕೂಸಿನ ತಳ್ಳುಗಾಡಿ ಎಲ್ಲವನ್ನೂ ಹೊರತೆಗೆದ. ಮತ್ತೊಮ್ಮೆ ಗಾಯದತ್ತ ನೋಡಿದ. ತಾನು ಸತ್ತು ದೆವ್ವವಾಗಿ ಪರಿವರ್ತನೆಯಾಗಲಿಕ್ಕೆ ಇನ್ನು ಮೂರುಗಂಟೆಗಳ ಸಮಯ ಇದೆ ಎಂದು ಅಂದಾಜು ಸಿಕ್ಕಿತು. ಮ್ಯಾಪಿನಲ್ಲಿ ನೋಡಿ, ಹತ್ತಿರವಿದ್ದ ಜನವಸತಿಯ ದಿಕ್ಕನ್ನು ತಿಳಿದ. ಗಾಯಕ್ಕೆ ಪಟ್ಟಿ ಕಟ್ಟಿಕೊಂಡ. ಮಗುವಿನ ಮುಖವನ್ನು ಮತ್ತೊಮ್ಮೆ ಕಣ್ಣುತುಂಬಾ ನೋಡಿ, ಅದರ ಹೊಟ್ಟೆಯ ಮೇಲೆ “ನನ್ನ ಹೆಸರು ಅಶ್ವಿನೀ” ಎಂದು ಪರ್ಮನೆಂಟ್ ಮಾರ್ಕರಿನಿಂದ ಬರೆದ. ಅದರ ಬಾಯಲ್ಲಿ ರಬ್ಬರಿನ ನಿಪ್ಪಲನ್ನು ಇಟ್ಟ. ಬ್ಯಾಕ್ ಪ್ಯಾಕಿನಲ್ಲಿ ಮಗುವನ್ನು ಇಟ್ಟುಕೊಂಡು ಮ್ಯಾಪನ್ನು ಅನುಸರಿಸುತ್ತಾ ಧಡಧಡನೆ ಹೆಜ್ಜೆ ಹಾಕತೊಡಗಿದ.

ನಡೆಯುವ ವೇಗವೇನೇ ಇದ್ದರೂ, ಮಗುವಿನ ಕಡೆಗೆ ಅವನ ಗಮನ ಚೂರು ಇದ್ದೇ ಇತ್ತು. ಆದರೆ ಅದರ ಮುಖದತ್ತ ಮಾತ್ರ ತಾನು ನೋಡದೇ ಇರುವಂತೆ ಎಚ್ಚರವಹಿಸುತ್ತಲೇ ಇದ್ದ. ಯಾಕೆಂದರೆ ಯಾವ ಕ್ಷಣದಲ್ಲಿ ತನ್ನಲ್ಲಿ ಪಿಶಾಚಮನೋವೃತ್ತಿ ತಲೆ ಎತ್ತುವುದೋ, ಆಗ ಮಗುವನ್ನು ಕೊಂದೇ ಬಿಟ್ಟರೆ ಕಷ್ಟವೆಂದು.

ದಾರಿಯಲ್ಲಿ ಒಂದೆಡೆ ಕೊಳೆತ ಮಾಂಸವಿಷ್ಟು ಬಿದ್ದಿತ್ತು. ದೆವ್ವಗಳ ಪ್ರಿಯವಾದ ಆಹಾರವದು! ಅದನ್ನು ತಿನ್ನುವಂತೆ ಮನಸ್ಸು ಹಪಹಪಿಸಿತು. ಆಗ ರಘುವೀರನಿಗೆ ಅರ್ಥವಾಗಿಬಿಟ್ಟಿತು. ದೆವ್ವವು ತನ್ನ ಹೆಗಲಮೇಲೆಯೇ ಕೈ ಇಟ್ಟಿದೆ ಎಂದು. ಹೆಚ್ಚು ರುಚಿಯಾದ ಈ ಕೊಳೆಮಾಂಸವಿರಲು ಹಿಂದಿರುವ ಎಳೆಮಾಂಸದ ಕಡೆಗೆ ಗಮನ ಹೋಗದು! ಅದೂ ಅಲ್ಲದೆ ತನ್ನ ಮಗುವಿನಿಂದ ಆದಷ್ಟೂ ತನ್ನ ಗಮನ ದೂರವಿರಬೇಕು. ಆ ಸಮಯದಲ್ಲೂ ಅವನಿಗೆ ಉಪಾಯವೊಂದು ಹೊಳೆಯಿತು. ಆ ಮಾಂಸವನ್ನೆಲ್ಲ ಹೆಕ್ಕಿಒಂದು ಪ್ಲಾಸ್ಟಿಕ್ಕಿನ ಚೀಲದಲ್ಲಿ ತುಂಬಿಕೊಂಡ. ಆಳೆತ್ತರದ ಕೋಲೊಂದನ್ನು ಕೂಡ ಸಂಪಾದಿಸಿಕೊಂಡ. ಸಾವಿನ ಆಕೃತಿ ಅವನಿಗೆ ಹೆಚ್ಚು ಹೆಚ್ಚು ಸ್ಪಷ್ಟವಾಗತೊಡಗಿತ್ತು. ಸಾವಿನ ಭಯವೇ ಉಳಿದಿರಲಿಲ್ಲ ಅವನಲ್ಲಿ ಈಗ. ಆದರೆ ದೆವ್ವವಾಗಿ ಬದಲಾಗುತ್ತಿರುವ ಲಕ್ಷಣಗಳು ಅವನ ಚಿಂತೆಯನ್ನು ಹೆಚ್ಚಿಸಿದವು.

ಹೀಗೆಯೇ ಧಾವಿಸುತ್ತಾ, ದಾರಿಯಲ್ಲಿ ಕಂಡ ಒಂದು ಮನೆಯ ಹಿತ್ತಲಿಗೆ ಹೋದ. ಅಲ್ಲಿ ಹಿಂದೆ ಯಾರೋ ಒಬ್ಬರು ಪಾರ್ಟಿ ಮಾಡಿ ಹೋದಂತಿತ್ತು. ಅಳುವ ಮಗುವನ್ನು ಸಮಾಧಾನಿಸಲು ಏನೇನೋ ಆಟಿಕೆಗಳನ್ನು ತೋರಿದ, ಅದು ಅಳುವನ್ನುಅ ನಿಲ್ಲಿಸಲಿಲ್ಲ. ಕೊನೆಗೆ ಒಂದು ಬಲೂನಿನ ಸಿಲಿಂಡರು ಕಾಣಿಸಿತು. ಒಂದು ಬಲೂನು ಉಬ್ಬಿಸಿ ಮಗುವಿಗೆ ತೋರಿದರೆ ಅದು ಅಳು ನಿಲ್ಲಿಸಿತು. ಸಮಾಧಾನಗೊಂಡ ಅರ್ಧ ರಘುವೀರನು ಅದಕ್ಕೊಂದು ದಾರ ಕಟ್ಟಿ ತನ್ನ ಕುತ್ತಿಗೆಗೆ ಅದನ್ನು ಸಿಕ್ಕಿಸಿಕೊಂಡು ಸರಸರನೆ ತನ್ನ ಗಮ್ಯದತ್ತ ನಡೆದ. ಮಗುವು ಅದನ್ನು ನೋಡುತ್ತಾ ನಲಿಯುತ್ತಾ ಇತ್ತು.

ತನ್ನ ಗಮ್ಯವು ಇನ್ನೂ ಸ್ವಲ್ಪವೇ ದೂರವಿದೆ ಎನ್ನುವಷ್ಟರಲ್ಲಿ ವಿಪರೀತ ಸುಸ್ತೆನಿಸಿ ಕುಸಿದು ಬಿದ್ದೇ ಬಿಟ್ಟ. ತನ್ನ ಸಮಯ ಹತ್ತಿರವಾದದ್ದು ತಿಳಿಯಿತು. ಏನು ಮಾಡುವುದು ಎಂದು ಭಯವಾಯಿತು. ತನ್ನ ಮೈಯಲ್ಲಿನ ಸಾತ್ವಿಕ ಶಕ್ತಿ ನಿಧಾನಕ್ಕೆ ಹೊರಹೋಗುತ್ತಿರುವುದೂ, ಪೈಶಾಚಿಕ ಲಕ್ಷಣಗಳು ಒಂದೊಂದಾಗಿ ಒಳಬರತೊಡಗಿರುವುದೂ ಅರ್ಥವಾಗತೊಡಗಿತ್ತು. ಕಣ್ಣ ಮುಂದೆ ದಪ್ಪದಾದ ಬಿಳಿಯ ಪ್ಲಾಸ್ಟಿಕ್ ತುಣುಕು ಅಡ್ಡ ಇಟ್ಟರೆ ಹೇಗೆ ಕಾಣಿಸುವುದೋ ಹಾಗೆ ಎಲ್ಲ ದೃಶ್ಯಗಳೂ ಮಂಜಾಗತೊಡಗಿದ್ದವು. ದೇಹದ ಆಯಾಸಗೊಂಡಂತೆಲ್ಲ ದೆವ್ವದ ಹಸಿವು ಹೆಚ್ಚತೊಡಗಿತು. ಆದರೆ ಅಶ್ವಿನಿಯನ್ನು ಸುರಕ್ಷಿತ ಜಾಗಕ್ಕೆ ಸೇರಿಸುವ ಉತ್ಕಟ ಬಯಕೆಯೇ ಮೇಲ್ಗೈ ಸಾಧಿಸಿತು. ಶಕ್ತಿಯನ್ನು ಸಂಚಯಿಸಿಕೊಂಡು ಆ ಉದ್ದನೆಯ ಕೋಲಿನ ಸಹಾಯದಿಂದ ಮೇಲೆದ್ದು ನಿಂತ. ಆದರೆ ಕಣ್ಣು ಪೂರ್ತಿ ಎಳೆನೀರಿನ ಗಂಜಿಯಂತೆ ಬೆಳ್ಳಗಾಗಿ ಹೋಗಿದ್ದವು. ಮುಂದೆ ಏನೂ ಕಾಣದಂತೆ ಆಗಿತ್ತು. ಇನ್ನು ಏನಿದ್ದರೂ ಮಾಂಸದ ವಾಸನೆಯಷ್ಟೇ ತಿಳಿಯುವುದು. ತನ್ನ ಸೊಂಟಕ್ಕೆ ಕಟ್ಟಿದ್ದನಲ್ಲ ಕೊಳೆತ ಮಾಂಸದ ಪ್ಲಾಸ್ಟಿಕ್ಕಿನ ಚೀಲ, ಅದನ್ನು ತಡಕಾಡಿ ತೆಗೆದುಕೊಂಡು ಹುಷಾರಾಗಿ ಆ ಉದ್ದನೆಯ ಕೋಲಿನ ತುದಿಗೆ ಸಿಕ್ಕಿಸಿಕೊಂಡ. ತನ್ನ ಕೈಗೆ ಸಿಗದಷ್ಟು ದೂರಕ್ಕೆ ಅದನ್ನು ಚಾಚಿ, ತನ್ನ ಹೆಗಲ ಮೇಲೆಯೇ ಆ ಕೋಲನ್ನು ಇಟ್ಟುಕೊಂಡು, ತಡಬಡಾಯಿಸುತ್ತಾ ಮುಂದೆ ಹೊರಟ. ಆ ಮಾಂಸದ ವಾಸನೆಯನ್ನೇ ಹಿಂಬಾಲಿಸಿಕೊಂಡು ಮುಂದೆ ಮುಂದೆ ಹೋಗುತ್ತಾ ಇದ್ದ. ಇವನು ಮುಂದೆ ಹೆಜ್ಜೆಯನ್ನು ಊರಿದಷ್ಟೂ ಆ ಮಾಂಸ ಮುಂದೆ ಹೋಗುತ್ತಲೇ ಇತ್ತು. ಅದು ಮುಂದೆ ಹೋದಷ್ಟೂ ಇವನು ಅದನ್ನು ಹಿಡಿಯಲು ಅದನ್ನು ಹಿಂಬಾಲಿಸುವುದು. ಹೀಗೆ ಮಾಂಸದ ಬಲವಾದ ಆಸೆಯಿಂದ ಮುಂದೆ ಹೋಗುತ್ತಾ ಇದ್ದಲ್ಲಿ ಮಗುವಿಗೆ ರಕ್ಷಣೆ ಸಿಗುವ ಸಾಧ್ಯತೆ ಹೆಚ್ಚು ಎಂಬ ಆಶಯ ಅವನಲ್ಲಿ ಇತ್ತು. ಅದೂ ಅಲ್ಲದೆ ಒಂದು ವೇಳೆ ಹಸಿವು ಎನಿಸಿದಾಗಲೇ ಆ ಮಾಂಸವನ್ನು ತಾನು ತಿಂದು ಬಿಟ್ಟಿದ್ದರೆ ಮುಂದೆ ಸ್ವಲ್ಪವೇ ಸಮಯದಲ್ಲಿ ಮತ್ತೊಮ್ಮೆ ಹಸಿವಾಗುವುದು ಖಚಿತ, ಆಗ ಮಗುವಿಗೆ ಬಾಯಿ ಹಾಕಿಬಿಟ್ಟರೆ? ಅದಾಗದಂತೆ ತಡೆಯಲು, ತನ್ನ ಮಗುವಿನ ಜೀವಕ್ಕಾಗಿ ತನ್ನ ದೆವ್ವಕ್ಕೆ ವಂಚನೆ ಮಾಡಿಕೊಳ್ಳುತ್ತಾ ರಘುವು ಮುಂದುವರೆದ.

ಸ್ವಲ್ಪ ಮುಂದೆ ಹೋಗಿದ್ದನಷ್ಟೇ. ದೆವ್ವದ ಹಸಿವು ಮಿತಿ ಮೀರಿತು. ಮುಂದೆ ಇರುವ ಮಾಂಸವು ಸಿಗುತ್ತಲೇ ಇಲ್ಲ. ಆಗ ಕ್ಷಣಮಾತ್ರಕ್ಕೆ ಅದರ ಗಮನ ಹಿಂದೆ ಇರುವ ಜೀವದ ಕಡೆ ಹೋಯಿತು. ಅದರ ಕೈ ಎರಡೂ ಅಶ್ವಿನಿಯ ಕಡೆಗೆ ಒಂದು ಇಂಚಿನಷ್ಟು ಚಲಿಸಿದವು. ಅಷ್ಟೆ. ತಕ್ಷಣವೇ ಅಪ್ಪನ ಪ್ರೇಮವು ದೆವ್ವದ ಶಕ್ತಿಯನ್ನು ಮೀರಿ ಎದ್ದು ನಿಂತಿತು. ರಘುವೀರನು ಚೀಲಕ್ಕೆ ಹಾಕುವ ಪಟ್ಟಿಯಿಂದಲೇ ದೆವ್ವದ ಎರಡೂ ಕೈಗಳನ್ನು ಕಟ್ಟಿಕೊಂಡ. ಇನ್ನು ದೆವ್ವದ ಕೈಗಳು ಎಷ್ಟು ಪ್ರಯತ್ನಿಸಿದರೂ ಮಗುವಿನ ಕಡೆ ಚಾಚಲು ಆಗುವುದಿಲ್ಲ. ಅಷ್ಟು ಮಾತ್ರದ ಒಂದು ಭರವಸೆಯೊಂದಿಗೆ ರಘುವೀರನ ಸತ್ವವು ಸಂಪೂರ್ಣವಾಗಿ ದೇಹದಿಂದ ಸೋರಿ ಹೋಯಿತು. ಮಾಂಸದ ಆಸೆಗೆ ಜೊಲ್ಲು ಸುರಿಸುತ್ತಾ ದೆವ್ವವು ಮುಂದೆ ನಡೆಯತೊಡಗಿತು.

ಒಂದೇ ಸಮನೆ ನಡೆಯುತ್ತಾ ಅದು ಪರ್ವತದ ಮೇಲೆ ಇದ್ದ ದೊಡ್ಡ ಬಂಗಲೆಯೊಂದರ ಬಳಿ ಬಂತು. ಮೂಗಿಗೆ ಬರುತ್ತಿರುವುದು ಕೇವಲ ವಾಸನೆಯಷ್ಟೆ. ಮಾಂಸವು ಸಿಗದು ಎಂತಲೂ ಅಥವಾ ಹಿಂದೆ ಇರುವ ಎಳೆಯದೇಹದ ಕಡೆ ಮನಸ್ಸು ಮಾಡಿತೋ ಗೊತ್ತಿಲ್ಲ, ಮಗುವನ್ನು ಹಿಡಿಯಲು ಕಷ್ಟಪಟ್ಟು ಎರಡೂ ಕಟ್ಟಿದ ಕೈಗಳನ್ನು ಚಾಚಿತು. ಅಷ್ಟರಲ್ಲಿ ತನ್ನ ಕುತ್ತಿಗೆಗೆ ಸಿಕ್ಕಿ ಹಾರಾಡುತ್ತಿದ್ದ ಬಿಳಿಯ ಬಲೂನು ಅದರ ಮುಖದ ಮುಂದೆ ಬಂದಿತು. ಅಸ್ಪಷ್ಟವಾದ ಆ ಬಲೂನಿನ ಹಾರಾಟವು ದೆವ್ವದ ಮನಸ್ಸನ್ನು ವಿಚಲಿತಗೊಳಿಸಿತು. ಅದನ್ನು ಗಬಕ್ಕನೆ ಹಿಡಿದು ಒಂದು ಕ್ಷಣ ಏನಿರಬಹುದು ಇದು ಎಂದು ಆಲೋಚನೆಗೆ ಬಿತ್ತು ದೆವ್ವ. ಅಷ್ಟೆ. ಎಲ್ಲಿಂದಲೋ ಬಂದ ಒಂದು ತೀವ್ರವಾದ ಆಘಾತದ ಹೊಡೆತವು ಆ ದೆವ್ವವನ್ನು ನೆಲಕ್ಕೆ ಕೆಡವಿ ಹಾಕಿತು.

ಮಾಂಸದ ಆಸೆಗೆ ಒಳಗಾಗಿ ದೆವ್ವವು ಹೆಜ್ಜೆಯ ಹಿಂದೆ ಹೆಜ್ಜೆಯನ್ನು ಹಾಕಿಕೊಂಡು, ತನ್ನ ಕಾಲುಗಳನ್ನು ಎಳೆದು ಹಾಕುತ್ತಾ ಆ ಬಂಗಲೆಯ ಫಾಸಲೆಯೊಳಗ ಬಂದಿದ್ದಷ್ಟೇ. ಅದಕ್ಕೆ ಇದಮಿತ್ಥಂ ಎನ್ನುವ ಉದ್ದೇಶವೇನೂ ಇದ್ದಿಲ್ಲ, ಆ ಮಾಂಸಭಕ್ಷಣೆಯೊಂದನ್ನು ಬಿಟ್ಟರೆ. ಅದು ಹಾಗೆ ಬಂದ ಬಂಗಲೆಯಲ್ಲಿ ನಾಲ್ಕಾರು ಜನರು ವಾಸವಾಗಿದ್ದರು. ಅವರೆಲ್ಲರೂ ಈ ರೀತಿಯಾದ ಸಾಂಕ್ರಾಮಿಕ ದೆವ್ವಗಳ ಕಾಟದಿಂದ ಬಚಾವಾಗಿ ಬಂದವರೇ. ತಮ್ಮ ರಕ್ಷಣೆಗಾಗಿ ಅವರು ಶಕ್ತಿಶಾಲಿ ಬಂದೂಕುಗಳು, ತಾವು ಕೊಂದ ದೆವ್ವಗಳನ್ನು ಹೂಳಲು ವ್ಯವಸ್ಥೆ ಎಲ್ಲವನ್ನೂ ಮಾಡಿಕೊಂಡೇ ಅಲ್ಲಿ ವಾಸವಾಗಿದ್ದರು. ರಘುವೀರನ ದೆವ್ವವು ಅಲ್ಲಿಗೆ ಬರುತ್ತಿದ್ದಾಗ ಆ ಬಂಗಲೆಯ ಮೇಲಿನಿಂದಲೇ ಇದನ್ನು ಗಮನಿಸಿದ ಒಬ್ಬ ತನ್ನ ಸ್ನೈಪರ್ ಬಂದೂಕಿನಿಂದ ಶೂಟ್ ಮಾಡಿ ಹಾಕಿದ. ಆ ಗುಂಡಿನ ಏಟೇ ದೆವ್ವವನ್ನು ಸಂಹರಿಸಿದ್ದು.

ಎಲ್ಲರೂ ಒಟ್ಟಿಗೆ ಬಂದು ನೋಡಿದಾಗ ಅವರಿಗೆ ಕಂಡದ್ದು ರಘುವೀರನ ಶರೀರ ಮಾತ್ರ. ಅವರಿಗೆ ಪಿಚ್ಚೆನ್ನಿಸಿತು. ಬರೀ ಇದೇ ಆಯ್ತಲ್ಲ ನಮ್ಮ ಕಥೆ ಎಂಬ ಜಿಗುಪ್ಸೆಯ ಉದ್ಗಾರದೊಡನೆ ಅದನ್ನು ಹೂಳುವ ತಯಾರಿಗೆ ಹೊರಟರು. ಅವರಲ್ಲಿ ಒಬ್ಬ ಹೆಂಗಸೂ ಇದ್ದಳು. ಅವಳಿಗೆ ಯಾಕೋ ಒಂದು ವಿಶೇಷವುಂಟು ಈ ದೆವ್ವದ ಜೊತೆಗೆ ಎನ್ನಿಸಿತು. ಏನೆಂದು ನೋಡಿದರೆ ಏನೂ ತಿಳಿಯಲಿಲ್ಲ. ಅವಳು ಕೂಡ ವಾಪಸ್ ಹೊರಟಿದ್ದಳು. ಆದರೆ ಗಾಳಿಯ ಅಲೆಯು ಪುಟಾಣಿ ಮಗುವಿನ ಆ..ಆಅ..ಆ ಎಂಬ ದನಿಯೊಂದನ್ನು ತಂದು ಅವಳ ಕಿವಿಗೆ ಹಾಕಿತು. ಏನೋ ಒಂದು ಉದ್ವೇಗದಿಂದ ಅವಳು ವೇಗವಾಗಿ ವಾಪಸ್ ಬಂದು ನೋಡಿದರೆ ಅಶ್ವಿನಿಯು ಆಂ ಆಂ ಆಂ…. ಎಂದು ಸದ್ದು ಮಾಡುತ್ತ ತನ್ನ ಹೊನ್ನಸದೃಶವಾದ ನಗುವನ್ನು ಸೂಸುತ್ತಾ ಇವಳತ್ತ ಕೈಚಾಚಿದಳು. ಹೊಟ್ಟೆಯ ಮೇಲೆ ನನ್ನ ಹೆಸರು ಅಶ್ವಿನೀ ಎಂದು ರಘುವೀರನು ಬರೆದದ್ದುಅವಳಿಗೆ ಕಾಣಿಸಿತು. ಜಾಣೆಯಾದ ಆಕೆಗೆ ಏನು ನಡೆದಿರಬಹುದು ಎಂಬುದನ್ನು ಊಹಿಸಲು ತಡವಾಗಲಿಲ್ಲ. ಮಗುವನ್ನು ಎತ್ತಿಕೊಂಡು ತನ್ನ ಎದೆಗೆ ವಾತ್ಸಲ್ಯದಿಂದ ಅವಚಿಕೊಂಡು ಬಂದಳು. ಉಳಿದವರು ರಘುವೀರನ ಶರೀರವನ್ನು ಹೂಳಲು ಮುನ್ನಡೆದರು.

ಇದು ಸುಮಾರು ೬ ವರ್ಷಗಳ ಹಿಂದೆ ಬಂದ ಒಂದು ಕಾಲ್ಪನಿಕ ಕಿರುಚಿತ್ರದ ಕನ್ನಡದ ಓದು. ಕಾರ್ಗೋ ಎಂದು ಅದರ ಹೆಸರು. ದೆವ್ವದ ಸಿನೆಮಾ ಒಂದು ನೋಡುಗರ ಹೃದಯವನ್ನು ಮುಟ್ಟಿ, ವಾತ್ಸಲ್ಯದ ಕಣ್ಣೀರನ್ನು ಹಾಕಿಸಿದ ಉದಾಹರಣೆ ಎಂದರೆ ಇದೊಂದೇ ಇರಬೇಕು. ತಾಯಿಯಷ್ಟೇ ಮಮತೆ ತಂದೆಗೂ ಇದ್ದೇ ಇದೆ. ತನ್ನ ಶಿಶುವಿನ ರಕ್ಷಣೆಗಾಗಿ ತಂದೆಯು ಏನೆಲ್ಲ ತೊಂದರೆಯನ್ನು ಎದುರಿಸಬಲ್ಲ ಎನ್ನುವುದು ಲೋಕವಿದಿತ. ಚಲನ ಚಿತ್ರಗಳಲ್ಲಿ ಗುಂಡೇಟು ತಿಂದು ಸಾಯಲಿರುವ ಮಗನ ಮುಂದೆ ಬಂದು ನಿಂತು ತಾವು ಗುಂಡೇಟು ತಿಂದು ಸತ್ತುಹೋಗುವ ಅನೇಕ ಅಪ್ಪ ಅಮ್ಮಗಳನ್ನು ಕೂಡ ನಾವು ನೋಡಿದ್ದೇವೆ. ಅವೆಲ್ಲವುಗಳ ಮುಂದೆ ಈ ಅಪ್ಪನ ಚಿತ್ರ ವಿಶಿಷ್ಟವಾಗಿ ನಿಲ್ಲುತ್ತದೆ. ಮೊನ್ನೆ ನಾನು ಇದರ ವಿಡಿಯೋವನ್ನು ನನ್ನ ವಾಟ್ಸ್ ಅಪ್ಪಿನ ಸ್ಟೇಟಸ್ಸಿನಲ್ಲಿ ಹಾಕಿದ್ದೆ. ಅನೇಕ ಸ್ನೇಹಿತರು “ಅಪ್ಪ ಮಗುವನ್ನು ರಕ್ಷಿಸಿದ್ದು ಮಾತ್ರ ಗೊತ್ತಾಯಿತು, ಮಧ್ಯದಲ್ಲಿ ಏನಾಗಿದೆ ಎಂದು ತಿಳಿಯಲಿಲ್ಲ” ಎಂದರು. ಅವರಿಗಾಗಿ ಈ ಕಥೆಯನ್ನು ಕನ್ನಡದ ಓಣಿಯೊಳಗೆ ತಂದಿದ್ದೇನೆ.

ನಿರ್ದೇಶಕರನ್ನು ಮೆಚ್ಚಬೇಕೋ, ನಾಯಕನ ನಟನೆಯನ್ನು ಮೆಚ್ಚಬೇಕೋ, ದೆವ್ವದಂತೆ ಅಲಂಕರಿಸಿದವನನ್ನು ಮೆಚ್ಚಬೇಕೋ, ಅಥವಾ ಮುದ್ದಾದ ಆ ಮಗುವನ್ನು ನೋಡುತ್ತಾ ಆನಂದಿಸಬೇಕೋ? ಎಲ್ಲವನ್ನೂ ಮಾಡಬೇಕೆಂದಿದ್ದರೆ ಇಲ್ಲಿ ಕೆಳಗಡೆ ಉಂಟು, ಮೂವಿ. ನೋಡಿ. ನಿಮ್ಮೊಳಗಿನ ಅಪ್ಪ ಎರಡು ಹನಿ ಕಣ್ಣೀರು ಹಾಕಿದರೆ ಆ ಅನುಭವವನ್ನು ನನಗೂ ಹೇಳಿ.

ಅಂದ ಹಾಗೆ ಬೆನ್ ಹೌಲಿಂಗ್ ಮತ್ತು ಯೋಲಾಂದಾ ರಾಮ್ಕೆ ಎಂಬ ಇಬ್ಬರು ಒಟ್ಟಿಗೇ ಈ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಯೋಲಾಂದಾ ಎಂಬಾಕೆಯೇ ಚಲನಚಿತ್ರದ ಕೊನೆಗೆ ಮಗುವನ್ನು ಅಪ್ಪಿಕೊಳ್ಳುವವಳು. ಉಳಿದೆಲ್ಲ ಮಾಹಿತಿ ಇಂಟರ್ ನೆಟ್ಟಿನಲ್ಲಿ ಭರಪೂರವುಂಟು.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.