ಧರ್ಮಶಾಸ್ತ್ರಗಳೇ ಬದಲಾಗಬೇಕೆ?

ಯಾರಿಗೆ ಏನೋ ಬೇಕೋ ಅದನ್ನು ಮಾಡಿಕೊಂಡು ಇರಲು ಧರ್ಮಸೂತ್ರಗಳು ಬೇಡ ಎನ್ನುವುದಿಲ್ಲ. ಮನುಕುಲಕ್ಕೆ ಒಳಿತಾಗುವುದನ್ನೇ ಅವುಗಳು ಬಯಸಿವೆ, ಬಯಸುತ್ತಿವೆ ಕೂಡಾ. ಅವುಗಳ ಚೌಕಟ್ಟಿನಲ್ಲಿಯೇ ಬದುಕಿ ಸುಖವಾಗಿರುತ್ತೇವೆ ಎನ್ನುವರಿಗೆ ಖಂಡಿತವಾಗಿಯೂ ಸುಖವೇ ಇದೆ. “ನಿಮ್ಮ ಈ ನಿಯಮಗಳನ್ನು ನಮ್ಮಿಂದ ಪಾಲಿಸಲಾಗುವುದಿಲ್ಲ, ನಮ್ಮ ಪಾಡಿಗೆ ನಾವು, ನಮಗೆ ಹೇಗೆ ಬೇಕೋ ಹಾಗೆ ಬದುಕುತ್ತೇವೆ” ಎನ್ನುವರಿಗೆ ಎಳೆ ತಂದು ಬಲವಂತವನ್ನೂ ಇವುಗಳು ಮಾಡಿಲ್ಲ. ಆದರೂ ಸಹ ಜನರು “ನಿಯಮಗಳನ್ನೇ ಬದಲಾಯಿಸಬೇಕು ಎನ್ನುವುದು ಎಷ್ಟು ಸಮಂಜಸ?” ಕೆಲವರಂತೂ ತಾವೇ ಧರ್ಮಶಾಸ್ತ್ರಕಾರರು ಎಂಬಂತೆ “ಈ ನಿಯಮ ಸರಿ ಇಲ್ಲ. ಹೀಗೆ ಮಾಡಿ ಹಾಗೆ ಮಾಡಿ ಎಂದು ಅಪ್ಪಣೆ ಕೊಡುವುದೂ ಉಂಟು. ಇನ್ನೂ ಕೆಲವರಿಗೆ “ಇದು 21ನೆಯ ಶತಮಾನ ಗೆಟ್ ಅಪ್ ಡ್ಯೂಡ್, ಚೇಂಜ್ ಯುವರ್ಸೆಲ್ಫ್!” ಎನ್ನುತ್ತಾ ಹೊಸದಾದ ದಿಗಂತದತ್ತ ದಾರಿ ತೋರುವ ಹಂಬಲ.

ಹೇಗೆ ಬದುಕಬೇಕು ಅಥವಾ ಹೇಗೆ ಬದುಕಬಾರದು ಎನ್ನುವುದು ವ್ಯಕ್ತಿಗತವಾದ ಆಯ್ಕೆ. ಒಪ್ಪೋಣ. ಆದರೆ ಸೂತ್ರಗಳು ಕೊಡಮಾಡುವ ವಿಶೇಷಾಧಿಕಾರಗಳೂ ಬೇಕು ಅದರ ಜೊತೆಗೆ ನಮ್ಮ ಮನಸ್ಸಿಗೆ ಬೇಕಾದಂತೆ ಬದುಕುವ ಸ್ವೇಚ್ಛಾಚಾರವೂ ಬೇಕು ಎಂದರೆ ಹೇಗೆ? ಬ್ರಾಹ್ಮಣ್ಯವೂ ಬೇಕು, ಯಜ್ಞೋಪವೀತವೂ ಬೇಕು, ಮಠಕ್ಕೆ ಬಂದಾಗ ಅಲಂಕಾರ ಪಂಕ್ತಿಯವರ ಕೋಣೆಯಲ್ಲಿಯೇ ಊಟಬೇಕು. ಆದರೆ ಸಂಧ್ಯಾವಂದನಾದಿಗಳನ್ನು ಮಾಡಲಾಗದು, ಎಂಜಲು ಮುಸುರೆ ಎನ್ನುವ ಆಚರಣೆಗಳೇ ಇರಬಾರದು, ಹೋಟಲಿನಲ್ಲಿಯೂ ತಿನ್ನಲು ಅವಕಾಶ ಬೇಕು, ಮಕ್ಕಳು ಮರಿಗಳೊಂದಿಗೆ ನಲಿಯಲು ಪಾರ್ಟಿಗಳೂ ಬೇಕು ಎಂದರೆ ಹೇಗಾಗುತ್ತದೆ? ಬಾಟಲಿಯನ್ನು ಹಿಡಿದುಕೊಂಡು ನಿಂತಿರುವ ವ್ಯಕ್ತಿಯ ಚಿತ್ರದ ಮೇಲೂ ಲೈಕು ಒತ್ತುತ್ತೇನೆ, ರಾಯರ ಚಿತ್ರದ ಮೇಲೂ ಲೈಕನ್ನು ಒತ್ತುತ್ತೇನೆ ಎಂದರೆ ಹೇಗಾದೀತು?

ಜೀವನದಲ್ಲಿ ಅವರದ್ದೇ ಆಗಿರುವ ಆಯ್ಕೆಗಳನ್ನು ಮಾಡಿಕೊಳ್ಳಲು ಅನುಕೂಲವಿದೆ. ಆದರೆ ಯಾವ ಆಯ್ಕೆಯನ್ನು ಮಾಡಿಕೊಳ್ಳುತ್ತೇವೆಯೋ ಅದೇ ವರ್ಗದ ನಿಯಮಗಳೇ ಅನ್ವಯಿಸುತ್ತವೆ ಎಂಬುದನ್ನು ನಾವು ಗಮನಿಸಲೇಬೇಕು. ಅಲ್ಲೊಂದು ಇಲ್ಲೊಂದು ತಿಂಡಿಯನ್ನು ಆಯ್ದುಕೊಂಡು ತಿನ್ನುವ ಬಫೆಯಂತೆ ಅನುಕೂಲವಾದ ನಿಯಮಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಅನುಕೂಲ ಇಲ್ಲಿ ಇಲ್ಲ. ಎರಡೂ ದೋಣಿಗಳಲ್ಲಿ ಕಾಲಿಡುವ ಫ್ಲೆಕ್ಸಿಬಲಿಟಿ ಇಲ್ಲ. ದ್ವಂದ್ವನೀತಿಗೆ ಇಲ್ಲಿ ಜಾಗವಿಲ್ಲ. “ಸುರಾಪಾನಿಗಳ ಸಹವಾಸ ಬೇಕೆ ನಿನಗೆ? ಹಾಗಾದೆ ಮನೆಯಿಂದ ಹೊರಗಿರು, ನೀನೆಂದುಕೊಂಡಂತೆ ಇರು. ಮನೆಯ ಸಾಂಪ್ರದಾಯಿಕ ವಾತಾವರಣವು ಬೇಕೆ? ಹಾಗಾದರೆ ಬಾಟಲಿಯವರ ಸಹವಾಸವನ್ನು ಬಿಡು, ಸುಖವಾಗಿರು.” ಇದು ಆಚಾರಸಂಹಿತೆಗಳು ಕೊಡುವ ಆಯ್ಕೆಗಳ ವಿಧಾನ.

ವ್ಯಕ್ತಿಯೊಬ್ಬನು ಕರ್ಮಠನಾಗಿರಬೇಕೆಂದು ಯಾರೂ ಬಲವಂತ ಮಾಡುವುದಿಲ್ಲ. ಆದರೆ ಧರ್ಮಸೂತ್ರಗಳೇ ಬದಲಾಗಬೇಕೆಂಬ ಮಾತು ಆಡುವುದು ನಗರ ನಕ್ಸಲರಂತಹುದೇ ವಾದವಲ್ಲವೇ? ಹೀಗೆ ದ್ವಂದ್ವ ನೀತಿಯನ್ನು ನಾವು ಅನುಸರಿಸಿದರೆ ಈ ನಗರ ನಕ್ಸಲರಂತಹ ಅವಕಾಶವಾದಿಗಳನ್ನು ಖಂಡಿಸುವ ನೈತಿಕತೆಯೇ ನಮಗಿರುವುದಿಲ್ಲ.

ಗಮನಿಸಿ. ಶಾಸ್ತ್ರಗಳನ್ನು ಬದಲಾಯಿಸುವ ಅಧಿಕಾರವಿರುವುದು ಜ್ಞಾನಿಗಳಿಗೆ ಮಾತ್ರ. ನಮಗಾರಿಗೂ ಇಲ್ಲ. ಶತಮಾನ ಎಷ್ಟನೆಯದ್ದೇ ಆದರೂ ಕೂಡ ಸಾಮಾನ್ಯ ಧರ್ಮಗಳೇನಿವೆ ಅವು ಭಗವಂತನ ಇಚ್ಛೆಯ ಹೊರತಾಗಿ ಎಂದೂ ಬದಲಾಗವು. (ಉದಾ: ಎದ್ದ ನಂತರ ಸ್ನಾನ ಮಾಡುವುದು, ಆಚಮನ ಮಾಡುವುದು, ಪೂಜೆಯನ್ನು ಮಾಡುವುದು, ಗುರುಗಳಿಗೆ ನಮಸ್ಕರಿಸುವುದು, ಯಾವುದನ್ನು ತಿನ್ನಬೇಕು ಯಾವುದನ್ನು ತಿನ್ನಬಾರದು ಎನ್ನುವ ನಿಯಮವನ್ನು ಪಾಲಿಸುವುದು, ಶ್ರಾದ್ಧಾದಿಗಳನ್ನು ಮಾಡುವುದು, ಪ್ರಾಮಾಣಿಕರಾಗಿರುವುದು ಇತ್ಯಾದಿ) ವಿಶೇಷಧರ್ಮಗಳನ್ನು ಭಗವಂತನ ಅಪ್ಪಣೆಯಿಂದ ಕಾಲಕಾಲಕ್ಕೆ ಋಷಿಗಳು ರಚಿಸಿದ್ದಾರೆ. ಅಗತ್ಯ ಬಿದ್ದಲ್ಲಿ ಅವರೇ ಅದಕ್ಕೆ ಅಪವಾದಗಳನ್ನೂ ಹೇಳಿರುತ್ತಾರೆ. ಸಾತ್ವಿಕವಾದ ಜೀವನ ಶೈಲಿ ಬೇಕೆನ್ನುವವರು ಇವುಗಳನ್ನು ಪಾಲಿಸಲೇಬೇಕು. ಅಷ್ಟೆ. ಯಾವ ನಿಯಮಗಳು ನಮಗೆ ಅಪ್ಲೈ ಆಗಬಾರದು ಆದರೆ ದೇವನ ದಯೆ ನಮ್ಮ ಮೇಲೆ ಇರಬೇಕು ಎಂದರೆ ನಾವು ಶುಕಾಚಾರ್ಯರಂತೆ, ಶ್ರೀಜಿತಾಮಿತ್ರತೀರ್ಥರಂತೆ, ಶ್ರೀವಿದ್ಯಾಮಾನ್ಯರಂತೆ, ಶ್ರೀಸುಶಮೀಂದ್ರರಂತೆ ಅವಧೂತರಾಗಿರಬೇಕು. ಈ ನಿಯಮಗಳನ್ನು ಪಾಲಿಸದೇ ಇರುವವರಿಗೆ ಉತ್ತಮರ ಜೊತೆಗೆ ಸಾಂಗತ್ಯ ದೊರಕದು ಎನ್ನುವುದು ಕಹಿ ಸತ್ಯ.

ಮಡಿವಂತಿಕೆಯ ಹುಚ್ಚನ್ನು ಹಿಡಿಸಿಕೊಂಡ ಜನರು ಮಾಡುವ ತಪ್ಪು ಆಚರಣೆಗಳನ್ನು ನೋಡಿ ಶಾಸ್ತ್ರವೇ ಔಟ್ ಡೇಟೆಡ್ ಎನ್ನುವ ವಿಪರೀತದ ನಿರ್ಧಾರಕ್ಕೆ ಬರುವುದು ತಪ್ಪು. ಮನುಷ್ಯತ್ವವನ್ನು ಬಿಟ್ಟು ವ್ಯವಹರಿಸು ಎಂದು ಶಾಸ್ತ್ರಗಳು ಎಂದೂ ಹೇಳಿಲ್ಲ. ಹಾಗೆ ಹೇಳಿದ್ದೇ ಆದರೆ ರಾಯರು ಸರಸ್ವತೀದೇವಿಗೆ ಪಿಶಾಚಜನ್ಮದಿಂದ ಮುಕ್ತಿಗೊಳಿಸುವುದಾಗಲಿ, ಶ್ರೀವಾದಿರಾಜರು ವಿಧವಾ ಸ್ತ್ರೀಯಳ ಬಗ್ಗೆ ಅನುಕಂಪದ ಮಾತನ್ನಾಗಲಿ, ವಿಜಯದಾಸರು ಸಾಯುತ್ತಿದ್ದ ಕತ್ತೆಗೆ ನೀರು ಕುಡಿಸುವುದಾಗಲಿ ಮಾಡುತ್ತಿದ್ದಿಲ್ಲ. ಅಲ್ಲವೇ.

ಮಾಧ್ವರೆನಿಸಿಕೊಳ್ಳಲು ಶ್ರೀಮಧ್ವರ ಶಾಸನಗಳನ್ನು, ಶಾಂಕರರೆನಿಸಿಕೊಳ್ಳಲು ಶ್ರೀಶಂಕರರ ನಿಯಮಗಳನ್ನು, ರಾಮಾನುಜೀಯರಾಗಲು ಶ್ರೀರಾಮಾನುಜರ ಪಂಕ್ತಿಯನ್ನು ಅನುಸರಿಸುವುದು ಕಡ್ಡಾಯವಲ್ಲವೇ? ಭಾರತೀಯನಾಗಲು ಭಾರತದ ನಿಯಮಗಳನ್ನು ಅನುಸರಿಸುವುದು ಹೇಗೆ ಕಡ್ಡಾಯವೋ ಇದೂ ಕೂಡ ಹಾಗೆಯೇ. ರೋಮಿನಲ್ಲಿರುವಾಗ ರೋಮನ್ನನಂತೆ ಇರು ಎಂಬುವುದನ್ನು ಬಲು ಖುಷಿಯಿಂದ ಪಾಲಿಸುವ ಜನರು ಮಾಧ್ವನಾಗಲು ಮಧ್ವರ ನಿಯಮವನ್ನು ಪಾಲಿಸು ಎಂದಾಗ ಮಧ್ವಶಾಸ್ತ್ರವನ್ನು ಅಮೆಂಡ್ ಮಾಡಬೇಕು ಎಂದು ಒರಲುತ್ತಾರೆ. ಎಂತಹ ವಿಪರ್ಯಾಸವಿದು!

“ಆಯ್ತಪ್ಪಾ ನಿಮ್ಮ ಇಷ್ಟದಂತೆ ನೀವಿರಿ, ತೊಂದರೆ ಇಲ್ಲ” ಎಂದರೆ ಅದನ್ನೂ ಕೇಳುವುದಿಲ್ಲ. “ಇಲ್ಲ, ಇಲ್ಲ, ಯಾವುದೋ ಕಾಲದ ನಿಯಮಕ್ಕೆ ಜೋತು ಬೀಳದಿರಿ, ನೀವು ಕೂಡ ಈ ಆಚಾರವನ್ನು ಮಾಡುವುದನ್ನು ಬಿಡಿ ಎಂಬ ಹಟವನ್ನೂ ಮಾಡುತ್ತಾರಲ್ಲ?” ಏನೆನ್ನ ಬೇಕು ಇದಕ್ಕೆ? ಕಲಿಯ ಮಹಿಮೆ. ಅಷ್ಟೇ.

ಒಂದೊಮ್ಮೆ ಯಾವುದೋ ಒಂದು ನಿಯಮದಲ್ಲಿ ಸಂಶಯವು ಕಂಡು ಬಂದಿತು ಎಂದುಕೊಳ್ಳಿ. ಆಗ ಕೂಡ ನಮ್ಮ ನಮ್ಮ ಗುರುಮಠೀಯ ಪ್ರಧಾನರು ಅದಕ್ಕೆ ಪರಿಹಾರವನ್ನು ಹೇಳುತ್ತಾರೆಯೇ ವಿನಾ ನಿಯಮವನ್ನೇ ತಿದ್ದುಪಡಿ ಮಾಡಬೇಕೆಂದು ಹೇಳುವುದಿಲ್ಲ. ಓದಿರುವ, ಸಾಧನೆ ಮಾಡುತ್ತಿರುವ ಹಿರಿಯರೇ ಹೀಗೆ ಹೇಳುತ್ತಿರುವಾಗ ಎಲ್ಲವೂ ಗೊತ್ತಿರುವ ದೊಡ್ಡಮನುಷ್ಯರಂತೆ ನಾವು ನಿರ್ಣಯಗಳನ್ನು ಕೊಡುವುದು ತಪ್ಪಲ್ಲವೇ?

ಮಡಿವಂತಿಕೆಯನ್ನು ಮಾಡುವ ಜನರೂ ಕೂಡ ತಮ್ಮ ವರ್ತನೆಯಲ್ಲಿ ಸ್ವಲ್ಪ ಮಾಧುರ್ಯವನ್ನು ತಂದುಕೊಳ್ಳುವುದು ಸರಿ ಎನಿಸುತ್ತದೆ. ತಮ್ಮ ಮಡಿಯಲ್ಲಿ ಕೊಂಚವೂ ರಾಜಿ ಮಾಡಿಕೊಳ್ಳದೆಯೂ ವೃತ್ತಿ – ಪ್ರವೃತ್ತಿಗಳನ್ನು ನಿರ್ವಹಿಸಲು ಖಂಡಿತ ಅವಕಾಶವಿದೆ. ಇತರರು ಮಡಿ ಮಾಡುತ್ತಾರೋ ಇಲ್ಲವೋ ಎಂಬ ವಿಷಯದಲ್ಲಿ ಗಮನ ಹರಿಸಿ ಸ್ನಾನದ ಅನುಸಂಧಾನದಿಂದ, ಪೂಜೆಯ ಅನುಸಂಧಾನದಿಂದ ವಿಮುಖರಾಗುವ ಬದಲು ಹೊರಗಿನ ವಿಷಯಕ್ಕೆ ಕಿವುಡರಾಗುವುದು ಒಳಿತು. ಇದರ ಜೊತೆಗೆ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯವೊಂದಿದೆ. ಮಡಿಯ ಆಚರಣೆಯನ್ನು ಮಾಡಲು ಅನುಕೂಲವಿರದೇ ಇದ್ದವರನ್ನು ಹಂಗಿಸುವ ನೋಟದಲ್ಲಿ ನೋಡಕೂಡದು.  ಕೊಂಕು ನುಡಿಗಳಿಂದ ಇತರರ ಮನಸ್ಸನ್ನು ಘಾಸಿ ಮಾಡದಿರೋಣ. ಶಾಸ್ತ್ರಾಚಾರದಲ್ಲಿ ಇರುವ ಆನಂದವನ್ನು ಇತರರಿಗೆ ತಿಳಿಸಿ, ಪ್ರೀತಿ ಮೂಡಿಸಲು ಪ್ರಯತ್ನಿಸೋಣ. ಅವರು ಒಪ್ಪದೇ ಇದ್ದರೆ ಅವರ ಇಷ್ಟ.  ಕರ್ಮಾಚರಣೆಯಲ್ಲಿ ಎಲ್ಲರೂ ತೊಡಗಲು ಆಗದು. ಈ ಅಂಶವನ್ನು ದಯಮಾಡಿ ಒಪ್ಪಿಕೊಳ್ಳಿರಿ. 

ಓದುಗರಲ್ಲಿ ಮನವಿ. ಈ ಲೇಖನವನ್ನು ಯಾರನ್ನೋ ಗುರಿಯಾಗಿರಿಸಿಕೊಂಡು ಬರೆದಿಲ್ಲ. ಕಮೆಂಟುಗಳನ್ನು ಬರೆಯುವ ಮೊದಲು ಎರಡು ಬಾರಿ ಲೇಖನವನ್ನು ಓದಿ. ನಿಮ್ಮ ಸ್ವಭಾವವನ್ನು ಜೀವನ ಶೈಲಿಯನ್ನು ಬದಲಿಸಿಕೊಳ್ಳಿ ಎನ್ನುವ ನಿರ್ಣಯವನ್ನೇನೂ ನಾನು ಮಾಡುತ್ತಿಲ್ಲ. ಆದರೆ ಆಚರಣೆಯೊಂದರೆ ಶಾಸ್ತ್ರೀಯ ಹಿನ್ನೆಲೆಯನ್ನು ಚೆನ್ನಾಗಿ ತಿಳಿದುಕೊಳ್ಳದೆ ಧರ್ಮಶಾಸ್ತ್ರವು ಬದಲಾಗಬೇಕೆಂಬ ಸುಗ್ರೀವಾಜ್ಞೆಯನ್ನು ಹೇರಲು ಹೋಗದಿರಿ ಅಷ್ಟೆ.

೨೮.೧೦.೨೦೧೮

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.