ದದ್ದಲಗ್ರಾಮದ ಪ್ರಾಣದೇವರು

ಅಪೇಕ್ಷೆ ಎನ್ನುವುದು ಮನುಷ್ಯ ಜನ್ಯ ಒಂದು ಗುಣ. ಅದು ಭಗವತ್ಪರವಾಗಿದ್ದಲ್ಲಿ ಮಾತ್ರ ಆ ಗುಣಕ್ಕೊಂದು ಮಾನ್ಯತೆ. . ಈಗಣ ಕರ್ನಾಟಕ ಹಾಗು ಆಂಧ್ರ ದೇಶದ ಗಡಿಯಾಗಿ ಹರಿಯುತ್ತಿರುವ ತುಂಗಭದ್ರೆ ಹಲವು ವಿಸ್ಮಯಗಳ ತವರು ಆಕೆ ತನ್ನ ಹರವನ್ನು ಬದಲಿಸುವ ಸ್ಥಳದಲ್ಲಿ ತನ್ನದೇ ಆದ ಇತಿಹಾಸವನ್ನು ಸೃಷ್ಟಿ ಮಾಡಿಹಳು. ಇಂತಹ ತುಂಗಭದ್ರೆಯ ದಡದಲ್ಲಿಯೇ ಇರುವುದು ನನ್ನ ಊರು. ವಿಸ್ತಾರವಾದ ಪಾತ್ರ ಇಲ್ಲಿ ಆಕೆಯದ್ದು. ಸುಮಾರು ಮುನ್ನೂರು ವರ್ಷಗಳ ಹಿಂದೆ ಆಕೆಯ ಭವ್ಯ ಸಾಕ್ಷ್ಯದಲ್ಲಿ ನಡೆದ ಇತಿಹಾಸದ ಮೆಲುಕು ಇಲ್ಲಿದೆ.ಅದೇನು ಎಂದು ಸ್ವಲ್ಪ ನೋಡೋಣ.

ನನ್ನ ಊರು ದದ್ದಲ ಎನ್ನುವ ತುಂಗಭದ್ರಾತೀರದ ಗ್ರಾಮ. ನನ್ನ ಪೂರ್ವಿಕರಿಗೆಲ್ಲ ನದಿಯಾಚೆಗಿನ ವೀರನರಸಿಂಹ ಕುಲದೈವ. ಹೊಳೆಯನ್ನು ದಾಟಿ ದೇವರ ದರ್ಶನಕ್ಕೆ ಹೋಗಿ ಬರುವುದು ಇವರ ಸಂಪ್ರದಾಯ. ಒಮ್ಮೆ ದೇವರ ದರ್ಶನಕ್ಕೆ ಬರುವಾಗ ಕುದುರೆ ಜಾಡು ತಪ್ಪಿ ಕುಗ್ರಾಮವಾಗಿದ್ದ ತಿಪ್ಪಲದೊಡ್ಡಿಯ ಮಾರ್ಗ ಹಿಡಿಯಿತು. ಗ್ರಾಮದ ಹೊರಗೆ ಕಂಡಿತೊಂದು ಮಾರುತಿಯ ಭವ್ಯ ಸನ್ನಿಧಿ. ಎವೆಯಿಕ್ಕದೆ ನೋಡಬೇಕೆನ್ನಿಸುವ ಭವ್ಯ ಸನ್ನಿಧಾನ. ವ್ಯಾಸರಾಜರೇ ಸ್ಥಾಪನೆ ಮಾಡಿದ್ದೂ ಎನ್ನಲಿಕ್ಕೆ ಕುರುಹು ತೋರ್ವ ಭವ್ಯ ಎರಡೆರಡು ಶಂಖ ಚಕ್ರಗಳು. ಒಟ್ಟಿನಲ್ಲಿ ಮನಮುದಗೊಳಿಸುವ ಭವ್ಯಾಕಾರ. ದೈವಲೀಲೆಯೋ ಅದಾವ ಭಗವತ್ ಸಂಕಲ್ಪವೋ ಗೊತ್ತಿಲ್ಲ ಈ ಮುಖ್ಯಪ್ರಾಣನನ್ನು ತನ್ನ ಗ್ರಾಮಕ್ಕೆ ಹೊತ್ತೊಯ್ದು ಅಲ್ಲಿ ಸ್ಥಾಪನೆ ಮಾಡಬೇಕು. ಎನ್ನುವ ವಿಚಿತ್ರ ಅಭಿಲಾಶೆ ಆ ಕರಣೀಕರಿಗೆ ಮೂಡಿತು.

ಪ್ರೇರ್ಯ ಪ್ರೇರಕ ಆತನೆ ಅಲ್ಲವೇ !! ಏನೋ ಸರಿ ಅಲ್ಲಿಂದ ಹೊರತು ಗ್ರಾಮವನ್ನು ಸೇರಿದರು. ಇಲ್ಲಿನ ಕ್ಷೇತ್ರಾಧಿಪತಿಯನ್ನು ಪ್ರಾರ್ಥಿಸಿ ಪುನಃ ತನ್ನ ಆಪ್ತರಾದ ಗ್ರಾಮೀಕರನ್ನು ಸೇರಿಸಿ ಕಾರ್ಯಸಾಧಿಸಿಕೊಂಡು ಬರಲು ಯೋಜನೆ ರೂಪಿಸಿದರು. ಹೊಳೆಯಲ್ಲಿ ನೀರು ಸಾಧಾರಣವಾಗಿರುವ ಕಾಲ. ಜನರು ಜಾಸ್ತಿ ಹೊರಬರದ ದಿನಗಳು ಹಾಗೂ ದೇವರು ಏನಾಯಿತು? ಎಂದು ಯಾರಿಗೂ ತಿಳಿಯಬಾರದು ಇಷ್ಟೇಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಕಾರ್ಯ ಸಾಧಿಸಲಾಯಿತು.

ಮಾರ್ಗಶಿರ ಅಮಾವಾಸ್ಯೆಯ ಮುಂದಿನ ದಿನಗಳು ವಿಪರೀತ ಚಳಿಯ ದಿನಗಳು – ಸುಗ್ಗಿಯಕಾಲ ಮುಗಿದದಿನಗಳವು – ಚಳಿಗೆ ಜನರು ಹೊರಬರುವುದೂ ಕಡಿಮೆ -ನದಿಯ ನೀರೂ ಕಡಿಮೆ. ಎಲ್ಲವನ್ನೂ ಅನುಸರಿಸಿ ರಾತ್ರಿ ಸರಿ ಹೊತ್ತಿನಲ್ಲಿ ಕಾರ್ಗತ್ತಲಿನಲ್ಲಿ ಗುಪ್ತವಾಗಿ ಎತ್ತಿನಬಂಡಿಯೊಂದು ನಾಲಕು ಕುದುರೆಗಳು ಹಾರೆ ಗುದ್ದಲಿ ಪಿಕಾಸಿಗಳು ಅಗತ್ಯಬಿದ್ದರೆ ಬೇಕಾಗುವಷ್ಟು ಭರ್ಚಿ ಕಠಾರಿ ಜಂಬೆ ಬಾಕುಗಳು. ಈ ವಿಚಾರವನ್ನು ಬಾಯಿಬಿಡದಂತೆ ನಿಯುಕ್ತರಾದ ಅಂಬಿಗರು ಹೀಗೆ ಹೇಗಾದರೂ ಆ ದನುಜಾಂತಕನನ್ನು ಕರೆತರಲು ಹೊರಟಿತು ದದ್ದಲದ ಪಡೆ.

ನದಿಯನ್ನು ದಾಟಿತು. ತಿಪ್ಪಲದೊಡ್ಡಿ ಗ್ರಾಮದ ಸರಹದ್ದನ್ನು ಸೇರಿ ದೇವರಿಗೆ ವಂದಿಸಿ ವಿಗ್ರಹವನ್ನು ಎತ್ತಿ ಚಕ್ಕಡಿಯಲ್ಲಿ ಇಟ್ಟುದಾಯಿತು. ಬೇಗ ಸಾಗಿಸಿರೀ ಎಂದು ಅಪ್ಪಣೆಯಾದೊಡನೆ ದದ್ದಲದ ಎಡೆಗೆ ಹೊರಟಿತು, ಆ ಬೇಡ ಪಡೆ !! ಹರದಾರಿ ದೂರ ಹೋಗಿರಲಿಕ್ಕೂ ಸಾಕು. ಸಿಡಿಲು ಬಡಿದಂತೆ ಭೀತವಾಗಿ ನಿಂತುಬಿಟ್ಟವು ಎತ್ತುಗಳು. ಎಲ್ಲೆಲ್ಲೂ ಮುಂದೆ ಸರಿಯಲೊಲ್ಲವು. ಏನೆಂದು ನೋಡಲು ಅಪ್ಪಣೆಯಾದೊಡನೆ ಚಕ್ಕಡಿ ಮುಟ್ಟ ಹೊರಟ ಆಳುಗಳಿಗೆ ಏನೋ ಭಯ ಆವರಿಸಿತು. ತಳಮಳ ಮೊದಲಾಯಿತು. ಕಣ್ಣು ಕಾಣದಂತೆ ಆಯಿತು. ಏನೀ ವಿಚಿತ್ರ? ಎಂದು ಆ ಗ್ರಾಮಾಧಿಕಾರಿ ಕರಣಿಕ ನಿಂತು ನೋಡಿರಲಿಕ್ಕೆ ಬಂಡಿಯಲ್ಲಿ ಒಪ್ಪವಾಗಿ ಇರಿಸಿದ್ದ ಪ್ರಾಣದೇವರ ವಿಗ್ರಹವು ಸರಸರನೆ ಸರಿದು ಅಲ್ಲಿನ ನೆಲದಲ್ಲಿ ತಾನೇ ನಿಂತಿತು.

ಕರಣಿಕರ ಎದೆ ಝಲ್ಲೆಂದಿತು. ಸ್ವಾಮೀ !! ನಿನ್ನ ಇಚ್ಛೆ ಇಲ್ಲಿಯೇ ಇರಬೇಕೆಂದು ಇದೆಯೇ? ಎಂದು ಪ್ರಾರ್ಥಿಸಿ ನನ್ನ ಅನುಚರರ ಅರೋಗ್ಯ ಸರಿಮಾಡು ಪುನಃ ಸ್ವಸ್ಥಾನಕ್ಕೆ ಸೇರಿಸಿ ಬರುವೆ ಎಂದು ಬೇಡಿಕೊಂಡ !! ಅನುಚರರ ಕಣ್ಣು ಕಾಣತೊಡಗಿದವು. ಆದರೆ ಮಾರುತಿಯರಾಯ ಒಂದು ಇಂಚೂ ಅಲುಗುತ್ತಿಲ್ಲ. !!! ಪುನಃ ಬೇಡಿಕೊಂಡ ಕರಣಿಕ.. ಸ್ವಾಮಿಯ ವಿಗ್ರಹದಿಂದ ಭವ್ಯ ಬೆಳಕು ಗೋಚರವಾಯಿತು. ಪ್ರಾಣದೇವರು ” ನಾನಿಲ್ಲಿಯೇ ಇರುವೆನು ವತ್ಸ ! ಈ ಸ್ಥಳಕ್ಕೆ ಬರಬೇಕೆಂಬ ಉದ್ದೇಶದಿಂದ ನಿನಗೆ ಇನಿತು ಪ್ರೇರಿಸಿ ಸೇವೆ ಕೈಕೊಂಡಿರುವೆ… ಇದು ನಿನ್ನಿಂದ ಘಟಿಸಿದ ಅಚಾತುರ್ಯವಲ್ಲ.! ನಿನ್ನ ಮೇಲೆ ನಾ ಮಾಡಿದ ಅಂತಃಕರಣ. ನಾನು ನಿನ್ನ ಊರಿಗೆ ಈ ರೂಪದಿಂದ ಬರದಿದ್ದರೂ.. ನಿಮ್ಮ ನಿಮಿತ್ತವಾಗಿ ಇಲ್ಲಿ ನೆಲೆಗೊಂಡದ್ದರಿಂದ ನನ್ನನ್ನು ದದ್ದಲದ ಪ್ರಾಣದೇವರೆಂದೇ ಜನ ಕರೆಯುವರು ! ನೀನಿನ್ನು ಗ್ರಾಮಕ್ಕೆ ತೆರಳಿ ಕೀರ್ತಿವಂತನಾಗಿ ಬಾಳು. ಇಲ್ಲಿಯೇ ನೆಲೆನಿಂತ ನನ್ನನ್ನು ಸೇವಿಸಿ ಧನ್ಯನಾಗು” ಎಂದು ಸೂಚನೆ ಕೊಟ್ಟ. ಕೃತಕೃತ್ಯನಾದ ಕರಣಿಕ ತನ್ನ ಅನುಚರರನ್ನು ಕರೆದುಕೊಂಡು ದದ್ದಲ ಗ್ರಾಮಕ್ಕೆ ತೆರಳಿದ.ಮುಖ್ಯಪ್ರಾಣನನ್ನು ಉಪಾಸಿಸಿದ.

ಕಾಲಗಳು ಉರುಳಿದವು. ಕರಣಿಕನೂ ತನ್ನ ವಾರಸುದಾರನಿಗೆ ಈ ವೃತ್ತಾಂತ ಗುಪ್ತವಾಗಿ ತಿಳಿಸಿ ಗತಿಯೈದಿದ. ಮುಂದಿನ ದಿನಗಳಲ್ಲಿ ಪ್ರಾಣದೇವರ ಸುತ್ತ ಹುತ್ತು ಬೆಳೆದು ಪ್ರಾಣದೇವರು ಅದರಲ್ಲಿ ಕುಳಿತುಬಿಟ್ಟರು ! ನಾಗ-ನಾಗಭೂಷಣನಿಂದ ಸೇವೆಕೈಕೊಳುತಾ !! ಆ ಮೇಲೆ ವಾಲ್ಮೀಕಿ ಜನಾಂಗದ ಓರ್ವ ಕುರುಡನಿಗೆ ಸೂಚನೆಯಾಗಿ ಅವನು ಹುತ್ತನ್ನು ನಿತ್ಯ ಪೂಜಿಸುತ್ತಿದ್ದನಂತೆ । ಒಮ್ಮೆ ಭೋರೆಂದು ಮಳೆಬಂದು ಆ ಹುತ್ತು ಕರಗಿ ಸ್ವಾಮಿ ಎಲ್ಲರಿಗೂ ಗೋಚರನಾದನಂತೆ. ಈಗ ಒಂದು ಹಂತದ ಆಲಯವು ಅಲ್ಲಿ ಆಗಿದೆ. ಊರೂರು ಅಲೆಯುತ್ತ ಬರುತ್ತಿದ್ದ ನನಗೆ ಕಾಡು ಅಡವಿಯಲ್ಲಿ ಈ ಆಲಯ ಗೋಚರವಾಯಿತು. ಇತಿಹಾಸವೇನೆಂದು ಹಿರಿಯರನ್ನು ಕೇಳಿ ತಿಳಿದಾಗ ಇಷ್ಟು ಐತಿಹ್ಯ ಹೊರಬಂದಿತು. ನನ್ನ ಹಿರಿಯರ ಮುಖ್ಯಪ್ರಾಣ ಉಪಾಸನೆಯ ಬಗ್ಗೆ ನೆನಪಾಗಿ ಮನದುಂಬಿ ಬಂತು. ಎಲ್ಲೋ ಕಾಡಿನಲ್ಲಿರುವ ಹನುಮಪ್ಪನಿಗೆ ಎಲ್ಲೊಇರುವ ದದ್ದಲಕ್ಕೆ ಏನು ಸಂಬಂಧ ಎಂದು ಅನುಮಾನ ಬಂದಾಗ ಹೊರಬಿದ್ದ ಸತ್ಯವಿದು. !!! ಸ್ವಾರಸ್ಯವೆಂದರೆ ಆ ಭಾಗದ ಜನರು ಪ್ರೀತಿಯಿಂದ ದದ್ದಲದಯ್ಯ ಎಂದು ಹನುಮಪ್ಪನನ್ನು ಕರೆಯುತ್ತಾರೆ.

ಸೌಮಿತ್ರಿ............!!

ರಮಾಕಾಂತ ಕರಣಿಕ ಎಂದು ನಾಮಧೇಯ, ನೈಜಾಂ ಕರ್ನಾಟಕದ ಮಾನವೀ ಸೀಮೆಯವ, M.Sc ( Instrumentation Technology) ಪದವೀಧರ. ಮಂತ್ರಾಲಯ ಮಠದ Web Team ನ ಒಂದು ಭಾಗ, ಒಟ್ಟಾರೆ ಶ್ರೀರಾಯರನ್ನು ನಂಬಿ ಬದುಕುತ್ತಿರುವ ಒಬ್ಬ ಭಾವುಕ ................

More Posts

ರಮಾಕಾಂತ ಕರಣಿಕ ಎಂದು ನಾಮಧೇಯ, ನೈಜಾಂ ಕರ್ನಾಟಕದ ಮಾನವೀ ಸೀಮೆಯವ, M.Sc ( Instrumentation Technology) ಪದವೀಧರ. ಮಂತ್ರಾಲಯ ಮಠದ Web Team ನ ಒಂದು ಭಾಗ, ಒಟ್ಟಾರೆ ಶ್ರೀರಾಯರನ್ನು ನಂಬಿ ಬದುಕುತ್ತಿರುವ ಒಬ್ಬ ಭಾವುಕ ................

Be First to Comment

Leave a Reply

This site uses Akismet to reduce spam. Learn how your comment data is processed.