ಕನ್ನಡದಲ್ಲಿ ೫ ರೂಪಾಯಿ ಎಂದು ಬರೆದಿರುವ ನೋಟನ್ನು ಗ್ರೀಸ್ ದೇಶವು ಮುದ್ರಿಸಿ ಚಲಾಯಿಸುತ್ತಿದೆ. ಇದು ನಮಗೆ ಹೆಮ್ಮೆಯ ವಿಷಯ ಎಂದು ಬಂಡವಾಳವಿಲ್ಲದ ಬಡಾಯಿ ಒಂದು ಹಲವಾರು ವರ್ಷಗಳಿಂದ ಎಲ್ಲೆಡೆ ಹರಿದಾಡುತ್ತಿದೆ. ಗ್ರೀಸ್ ದೇಶವು ರುಪಾಯಿ ಎಂಬ ಕರೆನ್ಸಿಯನ್ನು ಯಾಕಾದರೂ ಇಟ್ಟುಕೊಂಡೀತು ಎಂಬ ಸಾಮಾನ್ಯಜ್ಞಾನವೂ ಇಲ್ಲದಿರುವ ಜನ ಇದನ್ನು ನೋಡಿ ಹೃದಯ ತುಂಬಿಕೊಳ್ಳುತ್ತಿದ್ದಾರೆ. ಪ್ರಪಂಚದ ಎಲ್ಲೆಡೆಯೂ ಕನ್ನಡವೇ ರಾರಾಜಿಸಲಿ. ನಮಗೂ ಸಂತೋಷವೇ ಅದು. ಆದರೆ ಇಲ್ಲದಿರುವ ಕಿರೀಟದ ಮೇಲೆ ಈ ತುರಾಯಿಯನ್ನು ಸಿಕ್ಕಿಸಿಕೊಳ್ಳುವ ಚಪಲ ಯಾಕೆ?
ಅಸಲಿಗೆ ಗ್ರೀಸ್ ದೇಶದ್ದೇನಲ್ಲ ಈ ನೋಟು. ಪೋರ್ಚ್ಗೀಸರು ಗೋವೆಯನ್ನು ಆಕ್ರಮಣ ಮಾಡಿ ಆಳ್ವಿಕೆ ನಡೆಸುತ್ತಿದ್ದರಲ್ಲ ಆಗ ಗೋವಾದಲ್ಲಿ ಅವರು ಚಲಾಯಿಸುತ್ತಿದ್ದ ನೋಟುಗಳು ಇವು. ನಮ್ಮ ದೇಶದ್ದೇ. ನಾವು ಗುಲಾಮರಾಗಿ, ಅವರು ನಮ್ಮನ್ನು ಆಳುತ್ತಿದ್ದ ದುರ್ದೆಸೆಯ ದಿನಗಳಲ್ಲಿ ಮುದ್ರಿತವಾದ ನಮ್ಮ ದೇಶದ ನೋಟುಗಳೇ ಇವು. ನಮ್ಮ ದೀನಾವಸ್ಥೆಯ ಟೋಕನ್ನುಗಳು.
ಬ್ಯಾಂಕೋ ನ್ಯಾಶನಲ್, ಅಲ್ಟ್ರಾಮರಿನೋ ಅನ್ನುವ ಬ್ಯಾಂಕು 1860ರ ಆಸುಪಾಸಿನಲ್ಲಿ ಮಕಾವು ದ್ವೀಪದಲ್ಲಿ ಸ್ಥಾಪಿತವಾಯ್ತು. ಪೋರ್ಚುಗೀಸರೇ ಇದರ ಜನಕರು.ಲುವಾಂಡಾ, ಅಂಗೋಲಾ, ಮೊಝಾಂಬಿಕ್ ರೀತಿಯ ದುರ್ದೈವಿ ರಾಷ್ಟ್ರಗಳಲ್ಲಿಯೂ ಇವರ ಹೊಲಸು ಅಧಿಕಾರವಿತ್ತಲ್ಲ. ಇಂತಹ ಅನೇಕ ದೇಶಗಳ ಮಧ್ಯ ಚಲಾಯಿಸಲು ಅನುಕೂಲವಾಗುವಂತಹ ನೋಟುಗಳನ್ನು ಈ ಬ್ಯಾಂಕು ಮುದ್ರಿಸುತ್ತಿತ್ತು. ನೋಟುಗಳನ್ನು ಮುದ್ರಿಸುವ ಕೆಲಸವನ್ನು ಈ ಬ್ಯಾಂಕು ಮಾತ್ರವೇ ಮುದ್ರಿಸುತ್ತಿತ್ತು. ಇವರದ್ದೇ ಪಾರುಪತ್ಯ ಆಗ ಈ ದೇಶದೆಲ್ಲೆಡೆ. ನಮ್ಮ ದೇಶದಲ್ಲಿ ಗೋವನ್ನು ಇಂತಹ ದುರ್ದೆಸೆಗೆ ಒಳಗಾಗಿದ್ದರು. ಕಾಲಾನುಕ್ರಮದಲ್ಲಿ ಆಯಾ ದೇಶಗಳೆ ತಮ್ಮ ಬ್ಯಾಂಕು ಮತ್ತು ನೋಟು ಮುದ್ರಣಾಲಯಗಳನ್ನು ಹೊಂದತೊಡಗಿದ ಮೇಲೆ ಈ ಬ್ಯಾಂಕಿನ ಏಕಸ್ವಾಮ್ಯ ಮುರಿಯಿತು.
ಇದೇನೇ ಇರಲಿ, ಈ ನೋಟಿನಲ್ಲಿ ಕನ್ನಡಾಕ್ಷರಗಳು ಪ್ರಧಾನವಾದ ಜಾಗದಲ್ಲಿ ಕಂಡಿವೆ ಎಂದರೆ ಗೋವೆಯಲ್ಲಿ ಕನ್ನಡದ ಪ್ರಭಾವ ಎಷ್ಟಿತ್ತು ಎಂಬುದನ್ನು ತಿಳಿಯಬಹುದು. ಅಷ್ಟರ ಮಟ್ಟಿಗೆ ಈ ನೋಟು ಒಂದು ಐತಿಹಾಸಿಕ ದಾಖಲೆ ಆಗುತ್ತದೆ.
Be First to Comment