ಮಾರಿಕಣಿವೆ – ಮರೆಯಾಗುತ್ತಿರುವ ನೀರು

ಸನಾತನ ಭಾರತದ ನಕ್ಷೆಯಂತೆ ಸುಂದರವಾಗಿ ಕಾಣುತ್ತಿರುವ ಈ ಜಲಾಶಯ ಮಾರೀಕಣಿವೆ. ಹಿರಿಯೂರು ತಾಲ್ಲೂಕಿನಲ್ಲಿದೆ. ವೇದವತಿ ನದಿಗೆ ಕಟ್ಟಿರುವ ಆಣೆಕಟ್ಟೆಯಿದು. ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಹರಿದು ಮುಂದೆ ಆಂಧ್ರದ ಸರಹದ್ದಿನಲ್ಲಿ ತುಂಗಭದ್ರೆಯಲ್ಲಿ ಒಂದಾಗುತ್ತಾಳೆ ಈಕೆ.ಬಳ್ಳಾರಿ ಜಿಲ್ಲೆಯಲ್ಲಿ ಇವಳ ಹೆಸರು ಹಗರಿ. ಒಂದೊಮ್ಮೆ ಅತ್ಯಂತ ಮೈತುಂಬಿ ಹರಿದು ಬಳ್ಳಾರಿ ಸೀಮೆಯ ಬರವನ್ನು ನೀಗಿಸಿದೆ ಅವ್ವ ಇವಳು. ಮುಂದೆ ನಮ್ಮ ಮೈಸೂರಿನ ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಮಹಾಸನ್ನಿಧಾನದವರ ದೂರದೃಷ್ಟಿಯಿಂದ, ಹಿರಿಯೂರಿನ ಬಳಿಯ ಬೆಟ್ಟಗಳ ಮಧ್ಯ ಈ ನದಿಗೆ ಆಣೇಕಟ್ಟು ಕಟ್ಟಲಾಯಿತು. ಅದುವೆ ವಾಣಿವಿಲಾಸ ಸಾಗರ. ಈ ಬೆಟ್ಟಗಳ ಮಧ್ಯದ ಜಾಗಕ್ಕೆ ಹಳೆಯ ಹೆಸರು ಮಾರಿಕಣಿವೆ. ಹೀಗಾಗಿ ಈ ಜಲಾಶಯಕ್ಕೆ ವಾಣಿವಿಲಾಸ ಸಾಗರ ಎಂದೂ, ಮಾರಿಕಣಿವೆ ಅಣೆಕಟ್ಟು ಎಂದೂ ಕರೆಯುತ್ತಾರೆ. ಈ ಡ್ಯಾಮನ್ನು ಕಟ್ಟಿದ್ದು ನಮಗೆ ಸ್ವಾತಂತ್ರ್ಯ ಸಿಗುವ ಮೊದಲೇನೆ.

ಕಲಿಪ್ರಭಾವವೋ ನಮ್ಮ ಅಧರ್ಮದ ನಡತೆಯೋ ಏನೋ, ಸಾವಿರಾರು ಎಕರೆ ಜಾಗಕ್ಕೆ ನೀರೊದಗಿಸುತ್ತಿದ್ದ ಜಲಾಶಯಕ್ಕೇ ನೀರಿನ ಕೊರತೆಯಾಗಿದೆ. ಹೀಗಾಗಿ ಕರ್ನಾಟಕ ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ತುಂಗಾ ಮತ್ತು ಭದ್ರಾ ಜಲಾಶಯಗಳಿಂದ ತಲಾ ಇಂತಿಷ್ಟು (೧೭ ಮತ್ತು ೧೨.೫ ಟಿ.ಎಂ.ಸಿ) ಅಂತ ನೀರನ್ನು ಈ ಜಲಾಶಯಕ್ಕೆ ಕಾಲುವೆಯ ಮೂಲಕ ಹರಿಸುವ ಒಂದು ಯೋಜನೆಯನ್ನು ಹುಟ್ಟುಹಾಕಿದೆ.

ಬಳ್ಳಾರಿ ಜಿಲ್ಲೆಯ (ಈಗಿನ ವಿಜಯನಗರ) ಬೊಮ್ಮನಹಳ್ಳಿ ಎಂಬ ಚಿಕ್ಕ ಪಟ್ಟಣವೊಂದು ಈ ನದಿಯ ಮೇಲೆ ತಂಪಾಗಿ ನೆಲೆಸಿತ್ತು. ಅದರ ಹೆಸರೇ ಹಗರೀಬೊಮ್ಮನ ಹಳ್ಳಿ. ಈಗ ಏನಿದೆ ತಂಪು ಅಲ್ಲಿ? ನದಿಯೂ, ನದಿಯಪಕ್ಕದ ಊರೂ ಎರಡೂ ಸುಟ್ಟು, ಒಣಗಿ ಧೂಳಿನ ಸ್ನಾನ ಮಾಡುತ್ತಿವೆ. ನದಿಯ ಪಾತ್ರ ಮೋರಿಯಂತೆ ಬದಲಾಗಿ ಹೋಗಿದೆ. ಈಗ ಏನಿದ್ದರೂ ಬರೀ ಜಾಲಿಗಿಡಗಳು, ಹೊಲಸು ಮತ್ತು ಮರಳುಗಳ್ಳರ ಹಾವಳಿ ಇಷ್ಟೇ.

ತುಂಗಭದ್ರೆಯೂ ಸೊರಗಿದ್ದಾಳೆ. ಹಡಗಲಿ ಪ್ರಾಂತ್ಯದಲ್ಲಿ ತುಂಗಭದ್ರಾ ನದಿಯ ಅವಸ್ಥೆಯೂ ಏನು ಆರೋಗ್ಯಕರವಾಗಿಲ್ಲ. ಅಲ್ಲಿ ಸಧ್ಯಕ್ಕೆ ಕೊಳಚೆ ನೀರು ಬಂದು ಸೇರಿಲ್ಲ ಅಷ್ಟೇ. ಜೀವದಾಯಿನಿಗಳಾದ ಚಿಕ್ಕ ಚಿಕ್ಕ ನದಿಗಳೆಲ್ಲ ನಿಧಾನವಾಗಿ ಒಣಗುತ್ತಿವೆ. ತುಂಗಭದ್ರಾ ನದಿಯ ಪ್ರಧಾನ ಉಪನದಿಗಳಾದ ವರದಾ ಮತ್ತು ವೇದಾ ಇಬ್ಬರಲ್ಲಿಯೂ ಈಗ ನೀರಿಲ್ಲ.

ಅಂತೂ ಮುಂದಿನ ೨೫-೪೦ ವರ್ಷಗಳಲ್ಲಿ ಹುಟ್ಟುವ ಪೀಳಿಗೆಯು ನೂರು ರುಪಾಯಿಗೆ ಕೊಟ್ಟು ಲೀಟರು ನೀರು ಕುಡಿಯುವಂತಾದರೆ ಅಚ್ಚರಿ ಏನಿಲ್ಲ.  ಯಾರನ್ನು? ಏನೆಂದು ದೂಷಿಸಬೇಕಿದಕ್ಕೆ?

ಚಿತ್ರ ಕೃಪೆ :Twitter,com @MNVGowda

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.