Guru Raghavendra Charana Kamala

ಭಾನುಸಿಂಹ ಮೈಸೂರಿನ ಕುಡಿ. ಅತ್ಯಂತ ಸರಳ ಸಜ್ಜನ ಹಾಗು ಸ್ನೇಹಜೀವಿ. ರಾಯರು ಹಾಗು ವಿಜಯದಾಸರ ಮೇಲೆ ಅತೀವ ಭಕ್ತಿಯನ್ನು ಮಾಡುತ್ತಾನೆ. ಅಪಾರವಾದ ಸ್ನೇಹಿತರನ್ನು ಸಂಪಾದಿಸಿದ್ದಾನೆ. ಯಾರಿಂದಲೂ ಒಂದೇ ಒಂದು ನೆಗಟಿವ್ ಅಭಿಪ್ರಾಯವನ್ನು ಪಡೆದವನಲ್ಲ. ಹೌದು, ಯಾರನ್ನೇ ಕೇಳಿದರೂ ಇವನ ಬಗ್ಗೆ ಸಂತಸದ ಮಾತನ್ನೇ ಆಡುತ್ತಾರೆ. ಸಧ್ಯಕ್ಕೆ ಬೆಂಗಳೂರಿನ ವಿದೇಶೀ ಕಂಪನಿಯೊಂದಕ್ಕೆ ತನ್ನ ಬುದ್ಧಿಯನ್ನು ಅಭಿಷೇಕ ಮಾಡುತ್ತಿದ್ದಾನೆ.

ಹಾಡುಗಾರಿಕೆಯಲ್ಲಿಯೂ ಭಾನುವು ಒಳ್ಳೆಯ ಶಾರೀರವುಳ್ಳ ವ್ಯಕ್ತಿ. ಇತ್ತೀಚೆಗೆ ಗೋವಾಕ್ಕೆ ಬಂದಿದ್ದ. ಆಯಾಸವಾಗಿದ್ದರೂ ಬಿಡದೆ ಹಾಡು ಹಾಡು ಎಂದು ಒತ್ತಾಯಿಸಿ ಕೆಲವು ಹಾಡನ್ನು ಹೇಳಿಸಿದೆ. ಅವನು ಹಾಡುವ ಹಾಡುಗಳಲ್ಲಿ ನನಗೆ ಅತಿ ಇಷ್ಟವಾಗುವುದು ಗೋಪಾಲದಾಸರ ಈ ರಚನೆ. ಇದನ್ನು ರೆಕಾರ್ಡ್ ಮಾಡಿಕೊಂಡು ಆಮೇಲೆ ಸ್ವಲ್ಪ ಡಿಜಿಟಲ್ ಮಸಾಲೆ ಸೇರಿಸಿದ್ದೇನೆ. ಅದನ್ನು ನೀವು ಡೌನ್ ಲೋಡ್ ಮಾಡಿಕೊಳ್ಳಬಹುದು.

ಅಂದ ಹಾಗೆ ಇವ ನನಗೆ ತಮ್ಮನೂ ಹೌದು. ಇವನ ಫೇಸ್ ಬುಕ್ಕಿನ ಅಕೌಂಟ್ ಇಲ್ಲಿದೆ.

ಈ ಕೃತಿಯಲ್ಲಿ ಶ್ರೀಗುರುರಾಘವೇಂದ್ರರ ಪಾದಗಳನ್ನು ದರ್ಶಿಸಿದಾಗ ಆಗುವ ಲಾಭವನ್ನು ಶ್ರೀಗೋಪಾಲದಾಸರು ವಿವರಿಸಿದ್ದಾರೆ. ಮೂಲಕೃತಿಗೂ ಹಾಗು ಭಾನು ಹೇಳಿದ ಹಾಡಿಗೂ ಸ್ವಲ್ಪ ಪಾಠಾಂತರ ಹಾಗು ವ್ಯತ್ಯಾಸವಿದೆ. ಭಾನುವಿನ ಹಾಡಿನ ಶೈಲಿ ಹಾಗು ಕೆಳಗೆ ಕೊಟ್ಟಿರುವ ಹಾಡಿನ ಸಾಹಿತ್ಯ ಎರಡಕ್ಕೂ ನೀವು ಗಮನಕೊಟ್ಟಲ್ಲಿ ಹಾಡನ್ನು ಬಾಯಿಪಾಠ ಮಾಡುವುದು ಸುಲಭ.

ವಿ.ಸೂ : ನಿದ್ದೆಗಣ್ಣಿನಲ್ಲಿ ಭಾನುಸಿಂಹ ಕೇವಲ ಮೂರು ನುಡಿಗಳನ್ನು ಮಾತ್ರ ಅದೂ ಹಿಂದೆ ಮುಂದಾಗಿ ಹಾಡಿದ್ದಾನೆ. ಅದೂ ಅಲ್ಲದೆ ಹಾಡಿನ ಕೊನೆಯಲ್ಲಿ ಆಕಳಿಸಿದ್ದಾನೆ ಕೂಡ. ನೀವು ಹಾಡನ್ನು ಕಲಿಯುವಾಗ ಇವಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳದೆ ಕೇವಲ ಹಾಡುವ ಶೈಲಿ ಹಾಗು ಲಾಲಿತ್ಯಕ್ಕೆ ಗಮನಕೊಡಿ. ಸಾಹಿತ್ಯಕ್ಕೆ ಹಾಡು ಇಲ್ಲಿದ್ದೇ ಇದೆ.

ಗುರು ರಾಘವೇಂದ್ರರ ಚರಣಕಮಲವನ್ನು
ಸ್ಮರಿಸುವ ಮನುಜರಿಗೆ
ಕರೆಕರೆಗೊಳಿಸುವ ದುರಿತ ದುಷ್ಕೃತಗಳೆಲ್ಲ
ಕರಿಯು ಸಿಂಹನ ಕಂಡ ತೆರನಾಗುವುದಯ್ಯ || (ಕರಿ=ಆನೆ)

ಗುರುಮಧ್ವಮತವೆಂಬ ವರ ಕ್ಷೀರಾಬ್ದಿಯಲ್ಲಿ
ಹರ ಧರಿಸಿದ ಶಶಿಯಂತುದಿಸಿ
ಪರಮತ ತಿಮಿರಕೆ ತರಣಿ ಕಿರಣವೆನಿಸಿ  (ತಿಮಿರ=ಕತ್ತಲು, ತರಣಿ=ಸೂರ್ಯ)
ಧುರದಿ ಮೆರೆವ ನರಹರಿರಾಮಾರ್ಚಕರಾದ || ೧ ||

ಹರಿಯೆ ಸರ್ವೋತ್ತಮ ಸಿರಿಯು ಆತನ ರಾಣಿ
ಪರಮೇಷ್ಠಿ ಮರುತರೆ ಗುರುಗಳೆಂದು
ಗರುಡಶೇಷರುದ್ರ ಸಮರೆಂದು ಸ್ಥಾಪಿಸಿ
ತರತಮ ಪಂಚಭೇದವೆ ಸತ್ಯವೆಂಬ || ೨ ||

ಅಂಧಕರಿಗೆ ಚಕ್ಷು ವಂಧ್ಯರಿಗೆ ಸುತರ
ಬಂದ ಬಂದವರಿಗಭೀಷ್ಟವ ಕೊಡುವ
ಒಂದಾರುನೂರುವತ್ಸರ ಬೃಂದಾವನದಲಿ
ಚಂದಾಗಿ ನಿಂತು ಮೆರೆವಾ ಕೃಪಾಸಿಂಧು || ೩ ||

ರಾ ಎನ್ನೆ ರಾಶಿದೋಷಗಳನೆ ದಹಿಸುವ
ಘ ಎನ್ನೆ ಘನಜ್ಞಾನಭಕುತಿಯೀವ
ವೇಂ ಎನ್ನೆ ವೇಗದಿ ಜನನ ಮರಣ ದೂರ
ದ್ರ ಎನ್ನೆ ದ್ರವಿಣಾರ್ಥ ಶ್ರುತಿಪ್ರತಿಪಾದ್ಯನ ಕಾಂಬ || ೪ ||

ವರ ತುಂಗಾತೀರ ಮಂತ್ರಾಲಯದಲಿ ಪುರದಲ್ಲಿ
ಪರಿಪರಿಸೇವೆ ಭೂಸುರರಿಂದ ಕೊಳುತಾ
ಭಾವಜನಯ್ಯ ಶ್ರೀಗೋಪಾಲವಿಠಲನ್ನ   (ಭಾವಜ = ಮನ್ಮಥ. ಭಾವಜನಯ್ಯ=ಕೃಷ್ಣ)
ಸೇವಿಸುತ ಯತಿಕುಲ ಶಿಖಾಮಣಿಯಾದ || ೫ ||

Download Plain Song Download a little modified song

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.