Kannada Raghavendra Vijaya

ಶ್ರೀಗುರುಜಗನ್ನಾಥದಾಸರು

(Skip reading and go to the download link)

ರಾಯರನ್ನು ಯೋಗನಿದ್ರೆಗೆ ಕಳುಹಿಸಲು ನಮ್ಮ ತೃಪ್ತಿಗಾಗಿ ನಾವು ಹಾಡುವ ಜೋಗುಳವೊಂದಿದೆ. ಅದು ಅತ್ಯಂತ ಸುಪ್ರಸಿದ್ಧ. ಕನ್ನಡವನ್ನು ಓದಲು ಬರೆಯಲು ಇರಲಿ ಮಾತನಾಡಲು ಬಾರದ ಭಕ್ತರೂ ಸಹ ಹಾಡುವ ಪದವಿದು. ಅದು ಮತ್ತ್ಯಾವುದೋ ಅಲ್ಲ, “ತೂಗಿರೆ ರಾಯರ ತೂಗಿರೆ ಗುರುಗಳ ತೂಗಿರೆ ಯತಿಕುಲತಿಲಕರ” ಎನ್ನುವ ಪ್ರಸಿದ್ಧ ಲಾಲಿಪದ.  ಪ್ರೀತಿಯ ಗುರುಗಳನ್ನು ನಮ್ಮ ಕೂಸಿನೋಪಾದಿಯಲ್ಲಿ ಪ್ರೀತಿಸುತ್ತಾ ಅವರಿಗೆ ವಿಶ್ರಾಂತಿ ಸಿಗಲಿ ಎನ್ನುವ ಮೇಲ್ನೋಟದ ಅರ್ಥದೊಂದಿಗೆ, ಗಹನವಾದ ಆಧ್ಯಾತ್ಮದ ಚಿಂತನೆಯೊಂದಿಗೆ ಗುರುಗಳಲ್ಲಿ ಭಕ್ತಿಯನ್ನು ಮಾಡಿಸುವ ಈ ಲಾಲಿಪದವನ್ನು ರಚಿಸಿದ್ದು ರಾಯರ ಅಪಾರ ಕರುಣೆಗೆ ಪಾತ್ರರಾಗಿದ್ದ ಶ್ರೀಗುರುಜಗನ್ನಾಥದಾಸರು.

ಬಳ್ಳಾರಿ ಹಾಗು ರಾಯಚೂರು ಪ್ರಾಂತ್ಯದ ಸುತ್ತಮುತ್ತಲಿನ ರಣಬಿಸಿಲಿನ ಪ್ರಾಂತ್ಯ, ಎತ್ತ ನೋಡಿದರೂ ಬೃಹದಾಕಾರದ ಬಂಡೆಗಳ ಬೆಟ್ಟಗಳು, ಅವುಗಳ ಮಧ್ಯ ಅಲ್ಲೊಂದು ಇಲ್ಲೊಂದು ಚೂರು ಹಸಿರಿನ ಸೆಲೆ. ಅಂತಹ ಒಂದು ಬೆಟ್ಟದ ಬುಡದಲ್ಲಿ ಇರುವ ಒಂದು ಊರು ಕೌತಾಳಂ. ಹಿಂದಿನ ಬಳ್ಳಾರಿ ಜಿಲ್ಲೆಗೆ ಸೇರಿತ್ತು, ಈಗ ಆಂಧ್ರದ ಕರ್ನೂಲು ಜಿಲ್ಲೆಯ ಆದವಾನಿ ತಾಲ್ಲೂಕಿಗೆ ಸಂಬಂಧಿಸಿದ  ಊರು. ಉರಿವ ಸೂರ್ಯನಿಗೆ ಪರಮಪ್ರೀತಿ ಈ ಊರ ಮೇಲೆ. ಆದರೂ ಭಕ್ತರ ಮನಕ್ಕೆ ಈ ಊರು ತಂಪು ಎನಿಸುವ ಜೀವ ಸೆಲೆಯನ್ನು ಹೊಂದಿದೆ. ಅದೇ ಶ್ರೀಗುರುಜಗನ್ನಾಥದಾಸರ ಸನ್ನಿಧಾನ. ಇದು ಅವರ ತಪೋಭೂಮಿ. ಶ್ರೀರಾಯರ ಕೃಪೆಗಾಗಿ ನಿರಂತರವಾಗಿ ತಪಸ್ಸನ್ನು ಆಚರಿಸಿರುವದರ ಗುರುತ್ವ ಈ ಭೂಮಿಯ ಮೇಲೆ ಇಂದಿಗೂ ಅನುಭವವೇದ್ಯವಾಗುತ್ತದೆ.

ಹದಿನೆಂಟನೆಯ ಶತಮಾನದ ಕೊನೆಯ ಭಾಗ; ಶ್ರೀವೇಂಕಟಗಿರಿಯಾಚಾರ್ಯ ಮತ್ತು ಶ್ರೀಮತಿ ಸೀತಮ್ಮ ಎನ್ನುವ ಸಾತ್ವಿಕ ದಂಪತಿಗಳಿಗೆ ಜನಿಸಿದ ಶಿಶು ಸ್ವಾಮಿರಾಯಾಚಾರ್ಯ. ಅಪಾರ ಪ್ರತಿಭಾಶಾಲಿಯಾಗಿ ಬೆಳೆದು, ಮುಂದೆ ಶ್ರೀರಾಘವೇಂದ್ರತೀರ್ಥರ ಸಂಪೂರ್ಣ ಕೃಪೆಗೆ ಪಾತ್ರವಾಯಿತು ಈ ಶಿಶು.

ಸ್ವಾರಸ್ಯವೆಂದರೆ ಲೌಕಿಕ ವಿದ್ಯೆಯು ಅನವಶ್ಯಕವಾಗಿ ತೋರಿತೋ ಏನೊ ಬಾಲಕ ಸ್ವಾಮಿರಾಯನು ಶಾಲೆಯನ್ನು ಅರ್ಧಕ್ಕೆ ಬಿಟ್ಟು ಬಿಟ್ಟ! ಆದರೆ ಅಲೌಕಿಕವಾದ ವಿದ್ಯೆಯು ಆತನ ಕೈಹಿಡಿಯಿತು, ದೇವಭಾಷೆಯ ಪ್ರಕಾಂಡ ಪಂಡಿತನಾಗಿ ಸ್ವಾಮಿರಾಯ ಹೊರಹೊಮ್ಮಿದ. ಮುಂದೊಂದು ದಿನ ಶ್ರೀಗೋಪಾಲದಾಸರು ಸ್ವಪ್ನದಲ್ಲಿ ದರ್ಶನವಿತ್ತು ಸ್ವಾಮಿರಾಯನಿಗೆ “ಗುರುಜಗನ್ನಾಥವಿಠಲ” ಎನ್ನುವ ಅಂಕಿತವನ್ನು ಪ್ರದಾನ ಮಾಡಿದರು. ಇದೇ ಅಂಕಿತನಾಮದಲ್ಲಿ ಶ್ರೀಗುರುಜಗನ್ನಾಥದಾಸರು ಸಂಸ್ಕೃತ ಹಾಗು ಕನ್ನಡ ಭಾಷೆಗಳಲ್ಲಿ ಅನೇಕಗ್ರಂಥಗಳನ್ನೂ, ಸ್ತೋತ್ರಗಳನ್ನೂ ಹಾಗು ಕನ್ನಡದಲ್ಲಿ ಕೀರ್ತನೆಗಳನ್ನೂ ರಚನೆ ಮಾಡಿದರು. ಶ್ರೀರಾಯರ ಮೇಲೆ ಅತಿ ಹೆಚ್ಚಿನ ಕೃತಿಗಳನ್ನು ರಚನೆ ಮಾಡಿದ್ದು ಇವರೇ.

ಕೌತಾಳ ಗ್ರಾಮದಲ್ಲಿ ಶ್ರೀಗುರುರಾಜರ ಮೃತ್ತಿಕಾ ವೃಂದಾವನವನ್ನು ಇವರು ಪ್ರತಿಷ್ಠಾಪನೆ ಮಾಡಿದ್ದಾರೆ. ಇದೊಂದು ಪ್ರಶಾಂತವಾದ ಸ್ಥಾನ. ಮಂತ್ರಾಲಯಕ್ಕೆ ಹೋದಾಗ ಅನುಕೂಲ ಮಾಡಿಕೊಂಡು ಈ ಕ್ಷೇತ್ರಕ್ಕೂ ಭೇಟಿ ನೀಡಿ ಬನ್ನಿ. ರಾಯರು, ಶ್ರೀದಾಸರು, ದಾಸರು ಪೂಜಿಸಿದ ಪ್ರತಿಮೆಗಳು, ಅಮೂಲ್ಯವಾದ ಹಸ್ತ್ರಪ್ರತಿಗಳ ದರ್ಶನವನ್ನು ನೀವು ಮಾಡಿಕೊಳ್ಳಬಹುದು.

ದಾಸರು ಹರಿಪದವನ್ನು ಸೇರಿದ್ದು ೧೯೧೮ರಲ್ಲಿ.

ಎಲ್ಲಿದೆ ಈ ಕೌತಾಳಂ?

ದಾಸಸಾಹಿತ್ಯಕ್ಕೆ ಸಂಬಂಧಿಸಿದಂತೆ ಕವಿತಾಳ ಎನ್ನುವ ಎರಡು ಊರುಗಳು ಇವೆ. ಒಂದು ಕರ್ನಾಟಕದ ಮಾನವಿ ತಾಲ್ಲೂಕಿನಲ್ಲಿದೆ ಇನ್ನೊಂದು ಹಳೆಯ ಕರ್ನಾಟಕದಲ್ಲಿತ್ತು ನಮ್ಮ ಕೈತಪ್ಪಿ ಈಗಿನ ಆಂಧ್ರಪ್ರದೇಶದಲ್ಲಿ ಸೇರಿಬಿಟ್ಟಿದೆ. ಹೀಗೆ ತಪ್ಪಿಸಿಕೊಂಡು ಹೋಗಿರುವ ಕೌತಾಳವೇ ಗುರುಜಗನ್ನಾಥದಾಸರ ಸನ್ನಿಧಾನವಿರುವ ಕ್ಷೇತ್ರ.

ಬೆಂಗಳೂರಿನಿಂದ ಮಂತ್ರಾಲಯಕ್ಕೆ ರೈಲಿನಲ್ಲಿ ಪ್ರಯಾಣಮಾಡುವಾಗ ಆದವಾನಿ ದಾಟಿದ ಮೇಲೆ ಕುಪ್ಪಗಲ್ಲು ಮತ್ತು ಕೋಸಿಗಿ ಎನ್ನುವ ಎರಡು ಚಿಕ್ಕ ನಿಲ್ದಾಣಗಳಲ್ಲಿ ಕೆಲವು ರೈಲುಗಳು ನಿಲ್ಲುತ್ತವೆ. ಈ ಎರಡೂ ಊರುಗಳಿಂದಲು ಕೌತಾಳವು ಹತ್ತಿರ.

ಮಂತ್ರಾಲಯಕ್ಕೆ ಬಂದು, ದರ್ಶನ ಮತ್ತು ಊಟ ಎರಡೂ ಮುಗಿದ ನಂತರ ನೀವು ನಿದ್ದೆ ಹೊಡೆದು ಮಂಕುಗೊಳ್ಳುವುದರ ಬದಲು ಕೌತಾಳ, ಕಾಮವರ, ಬಸಲದೊಡ್ಡಿ, ಬುಡುಮುಲದೊಡ್ಡಿ, ಪೆದ್ದತುಂಬಳ, ಚಿನ್ನ ತುಂಬಳದಂತ ಸಮೀಪದ ಕ್ಷೇತ್ರಗಳಿಗೆ ಒಂದು ಗಾಡಿಯನ್ನು ಮಾಡಿಕೊಂಡು ಹೋಗಿಬರುವುದು ಉತ್ತಮ.

ಸ್ವಂತ ಗಾಡಿಯಿದ್ದಲ್ಲಿ ಹೀಗೆ ಮಾಡಿ.

 • ಮಂತ್ರಾಲಯದಿಂದ ಮಾಧವರದವರೆಗೆ ಹೋಗಿ.
 • ರಾಯಚೂರು, ತುಂಗಭದ್ರ ರೈಲ್ವೇ ನಿಲ್ದಾಣ ಮತ್ತು ಆದವಾನಿಗೆ ಹೋಗುವ ಜಂಕ್ಷನ್ನಿನ್ನಲ್ಲಿ ಆದವಾನಿಯ ದಿಕ್ಕಿಗೆ ಮುಂದುವರೆಯಿರಿ
 • ೮ ಕಿ.ಮೀ ಕ್ರಮಿಸಿದ ನಂತರ ಏತನೀರಾವರಿಯ ಒಂದು ಕೆರೆ ಕಾಣಿಸುತ್ತದೆ. ಅದರ ಪಕ್ಕದಲ್ಲಿರುವ ಕಚ್ಚಾದಾರಿಯಗುಂಟ ಮುಂದುವರೆಯಿರಿ. ಸುಮಾರು ೧೨ ಕಿ.ಮೀ ಆದನಂತರ ಕೋಸಿಗಿ ಎನ್ನುವ ಗ್ರಾಮಸಿಗುತ್ತದೆ.
 • ಕನ್ನಡದಲ್ಲಿಯೇ ಕೇಳಿ ಕೌತಾಳಕ್ಕೆ ಹೇಗೆ ಹೋಗುವುದು? ಅಂತ. ಈ ಪ್ರಾಂತ್ಯದಲ್ಲಿ ಇರುವ ಎಲ್ಲ ಗ್ರಾಮಗಳ ಜನರಿಗೆ ಕನ್ನಡ ಚೆನ್ನಾಗಿ ಬರುತ್ತದೆ.
 • ಅಲ್ಲಿಂದ ಮುಂದೆ ಕೌತಾಳಕ್ಕೆ ಹೋಗಿರಿ. ಅಲ್ಲಿ ನಿಮ್ಮ ಮುಖ ನೋಡಿದ ಜನರು ತಾವಾಗಿಯೇ ದಾಸರಾಯರ ಸನ್ನಿಧಾನ ಇರುವ ಸ್ಥಳವನ್ನು ತೋರಿಸುತ್ತಾರೆ.

ಏನು ಮಾಡಬೇಕು ಕೌತಾಳದಲ್ಲಿ?

 • ಈಗಾಗಲೇ ಹೇಳಿರುವಂತೆ ಕೌತಾಳವು ಒಂದು ಸಾಧನಾಕ್ಷೇತ್ರ. ಶ್ರೀಗುರುಜಗನ್ನಾಥದಾಸರು ಪ್ರತಿನಿತ್ಯ ಶ್ರೀರಾಯರ ಸೇವೆಯಲ್ಲಿ ನಿರತರಾಗಿರುವ ಒಂದು ದಿವ್ಯ ತಪೋಭೂಮಿ. ಇಲ್ಲಿಗೆ ಬಂದು ದಾಸರ ದರ್ಶನ, ಶ್ರೀಗುರುಗಳ ದರ್ಶನ, ಅವರ ಗ್ರಂಥಗಳ ದರ್ಶನವನ್ನು ಮಾಡಿರಿ, ಆ ದಿವ್ಯ ಅನುಭವವನ್ನು ಅನುಭವಿಸಿ.
 • ಗುರುಗಳ ದರ್ಶನವನ್ನು ಬರಿಗೈಯಲ್ಲಿ ಮಾಡಬಾರದು ಎನ್ನುತ್ತಾರೆ. ಬರುವಾಗ ಫಲ, ತೆಂಗಿನಕಾಯಿ ಅಥವಾ ಒಂದು ಹಿಡಿಯ? ಕಲ್ಲುಸಕ್ಕರೆಯನ್ನು ತನ್ನಿರಿ.
 • ಕೈಕಾಲು ತೊಳೆದುಕೊಂಡು ಚೆನ್ನಾಗಿ ಕಾಲು ಒರೆಸಿಕೊಂಡು (ಹೌದು, ಒರೆಸಿಕೊಳ್ಳದೆ ಹಾಗೆಯೇ ಒದ್ದೆ ಕಾಲಿನಲ್ಲಿ ಒಳಗೆ ಹೋಗಿ ಗುಡಿಯನ್ನು ರಾಡಿ ಮಾಡದಿರಿ. ಮಠವನ್ನು ಪದೇ ಪದೇ ಶುಚಿ ಮಾಡುವುದು ತುಂಬ ಕ?ದ ಕೆಲಸ) ಒಳ ಪ್ರವೇಶಿಸಿ.
 • ಮನದಲ್ಲೇ ಶ್ರೀರಾಯರ ಸ್ತೋತ್ರ ಅಥವಾ ಕೀರ್ತನೆಗಳನ್ನು ಹೇಳಿಕೊಳ್ಳುತ್ತಾ ಪ್ರದಕ್ಷಿಣೆ ಹಾಕಿ.
 • ನಿಮ್ಮ ಯೋಗ್ಯತೆಗೆ ತಕ್ಕಂತೆ ಒಂದಿ? ಧ್ಯಾನವನ್ನು ಮಾಡಿರಿ.
 • ಇದು ಹರಿಕಥಾಮೃತಸಾರಮಂದಿರ. ಗದ್ದಲ ಮಾಡದೆ ದರ್ಶನ ಮಾಡಿ. ನೀವು ಇದುವರೆಗೂ ಕೇಳಿರದ ಅನೇಕ ಆಧ್ಯಾತ್ಮಿಕ ವಿ?ಯಗಳು ನಿಮಗೆ ಗೊತ್ತಾಗುತ್ತವೆ. ಏನೂ ಅರ್ಥವಾಗದಿದ್ದರೆ, ಹಿರಿಯರಾದ ಶ್ರೀ ಅಪ್ಪಣಾಚಾರ್ಯರು ಮಾರ್ಗದರ್ಶನ ಮಾಡುತ್ತಾರೆ. ಒಂದು ಚಿಕ್ಕ ಪುಸ್ತಕದಲ್ಲಿ ಅವುಗಳನ್ನು ನೋಟ್ ಮಾಡಿಕೊಂಡು ಬನ್ನಿ.
 • ಅತಿ ಮುಖ್ಯವಾಗಿ : ಸನ್ನಿಧಾನವನ್ನು ನಿಮ್ಮ ಕಣ್ಣುಗಳಿಂದಲೇ ನೋಡಿರಿ. ನಿಮ್ಮ ಮೊಬೈಲ್ ಫೋನಿನಿಂದ ಅಲ್ಲ.  ಅಲ್ಲಿ ಸಮಯ ಕಳೆದ ನಂತರವೇ ಫೋಟೋವನ್ನು ತೆಗೆದುಕೊಳ್ಳಿರಿ. ಅಲ್ಲಿಂದ ಬಂದ ನಂತರ ನಿಮ್ಮ ಫೇಸ್‌ಬುಕ್ಕಿನಲ್ಲಿ, ವಾಟ್ಸ್ಯಾಪಿನಲ್ಲಿ ಫೋಟೋ ಮಾತ್ರವಲ್ಲ ಏನೇನು ಕಲಿತಿರಿ ಅನ್ನುವುದನ್ನು ಕೂಡ ಶೇರ್ ಮಾಡಿಕೊಳ್ಳಿ.

ಏನು ಮಾಡಬಾರದು?

 • ಕೈಕಾಲು ತೊಳೆಯದೆ ಒಳಗೆ ಪ್ರವೇಶಮಾಡದಿರಿ.
 • ಬಾಯಲ್ಲಿ, ಹಲ್ಲಿನ ಸಂದಿಯಲ್ಲಿ ಬೆರಳು ತೂರಿಸಿಕೊಂಡಲ್ಲಿ ಕೈತೊಳೆಯದೆ ಏನನ್ನೂ ಮುಟ್ಟದಿರಿ.
 • ಚಿಕ್ಕ ಮಕ್ಕಳಿದ್ದಲ್ಲಿ ಅವುಗಳನ್ನು ಸರಿಯಾದ ರೀತಿಯಲ್ಲಿ ನಿಯಂತ್ರಿಸಿ. ಅವುಗಳ ಆಟವು ನೋಡಲು ಚಂದ ನಿಜ. ಆದರೆ ಅಶಿಸ್ತಿನ ಗದ್ದಲ ಸನ್ನಿಧಾನ ಪಾವಿತ್ರ್ಯತೆಯನ್ನು ಹಾಳು ಮಾಡುತ್ತದೆ.
 • ಸನ್ನಿಧಾನದಲ್ಲಿ ಹರಟೆಯನ್ನು ಸರ್ವಥಾ ಹೊಡೆಯದಿರಿ.
 • ತಂದಿರುವ ತೆಂಗಿನ ಕಾಯಿಯನ್ನು ಸಮರ್ಪಣೆ ಮಾಡಿಸಿದ್ದಲ್ಲಿ, ಅದನ್ನು ಅಲ್ಲಿಯೇ ತಿಂದು ಚಿಪ್ಪು, ಬಾಳೆಯಣ್ಣಿನ ಸಿಪ್ಪೆಯನ್ನು ಅಲ್ಲಿಯೇ ಬಿಟ್ಟು ಬರದಿರಿ. ಕಸದ ಬುಟ್ಟಿಯಲ್ಲಿಯೇ ಹಾಕಿರಿ.
 • ಪರವಾನಗಿ ಇಲ್ಲದಿರುವ ಸ್ಥಳದಲ್ಲಿ ಫೋಟೋ ತೆಗೆಯದಿರಿ.

ಕನ್ನಡ ರಾಘವೇಂದ್ರ ವಿಜಯ

ಬ್ರಹ್ಮಸೂತ್ರಭಾಷ್ಯದ ಹಾಗು ಭಾಗವತದ ಮೇಲೆ ಟೀಕೆಯೂ ಸೇರಿದಂತೆ ಅನೇಕ ಟೀಕಾಗ್ರಂಥಗಳು ಹಾಗು ಸ್ವತಂತ್ರವಾಗಿ ೪೦ಕ್ಕೂ ಹೆಚ್ಚಿನ ಸಂಸ್ಕೃತ ಗ್ರಂಥಗಳು ಸಾರಸ್ವತ ಲೋಕಕ್ಕೆ ಇವರಿತ್ತ ಕೊಡುಗೆಯಾಗಿವೆ. ಕನ್ನಡದಲ್ಲಿ ಅಸಂಖ್ಯವಾದ ದೇವರನಾಮಗಳು ಇವರಿಂದ ರಚಿತವಾಗಿವೆ. ಶ್ರೀರಾಘವೇಂದ್ರ ಗುರುಸಾರ್ವಭೌಮರನ್ನು ಅವರ ಅವತಾರದ ಹಿನ್ನೆಲೆಯ ವರ್ಣನೆಯೊಂದಿಗೆ ಸ್ತುತಿಸುವ ಒಂದು ಕೃತಿ ಕನ್ನಡ ರಾಘವೇಂದ್ರವಿಜಯ. ಭಾಮಿನಿಷಟ್ಪದಿಯಲ್ಲಿ ಈ ಕೃತಿಯು ರಚನೆಗೊಂಡಿದೆ.

ವಿಜಯಕಾವ್ಯಗಳು ಸಾಹಿತ್ಯಲೋಕದ ವಿಶಿಷ್ಟಪ್ರಕಾರದ ಕೃತಿಗಳಾಗಿವೆ. ಇವುಗಳಲ್ಲಿ ಕವಿಯು ಕಥಾನಾಯಕನ ಚರಿತೆಯನ್ನು ತನ್ನೆಲ್ಲ ಭಕ್ತಿಯನ್ನು ಧಾರೆಯೆರೆದು ಸ್ತುತಿಸುತ್ತಾನೆ. ಕಥಾನಾಯಕನ ಪ್ರತಿಯೊಂದು ಚರ್ಯೆಯೂ ಕವಿಗೆ ಇಲ್ಲಿ ಕೌತುಕದ ಸಂಗತಿಯಾಗುತ್ತದೆ. ಆದರೆ ವಾಸ್ತವವನ್ನು ಅರುಹಲು ಯತ್ನಿಸುವ ಕವಿಯು ತನ್ನ ಕವಿತೆಯನ್ನು ಶಬ್ದಗಳ ಜಾಲವಾಗಿಸಲು ಬಿಡುವುದಿಲ್ಲ. ಆತನ ಉದ್ದೇಶವೇನಿದ್ದರೂ ಚರಿತೆಯನ್ನು ಬರೆಯುವಾಗ, ಓದುವಾಗ ಮತ್ತು ಕೇಳುವಾಗ ಭಕ್ತಿಯನ್ನು ಉದ್ದೀಪನಗೊಳಿಸುವುದು ಮಾತ್ರವೇ ಆಗಿರುತ್ತದೆ. ಇನ್ನೂ ಕೆಲವರು ಈ ಭಕ್ತಿಯ ಜೊತೆಗೆ ಓದುಗರಿಗೆ ಜ್ಞಾನದ ಸಂಪನ್ಮೂಲಗಳೇ ಆಗಿಬಿಡುತ್ತಾರೆ. ಆಚಾರ್ಯ ಮಧ್ವರ ಚರಿತ್ರೆಯನ್ನು ಬರೆದ ಶ್ರೀನಾರಾಯಣಪಂಡಿತಾಚಾರ್ಯರು, ಸಂಸ್ಕೃತದಲ್ಲಿ ಶ್ರೀರಾಘವೇಂದ್ರವಿಜಯ ಕಾವ್ಯವನ್ನು ಬರೆದ ಮಹಾಕವಿ ನಾರಾಯಣಾಚಾರ್ಯರು ಇಂತಹ ವರ್ಗಕ್ಕೆ ಸೇರಿದ ಮಹಾತ್ಮರು.

ಈ ಎರಡೂ ಕಾವ್ಯಗಳು ಸಂಸ್ಕೃತಬಲ್ಲವರಿಗೆ ಅತಿ ಮಧುರವೆನಿಸಬಲ್ಲವು. ಸಂಸ್ಕೃತ ಬಾರದಿರುವ ಸಜ್ಜನರು ಈ ಮಾಧುರ್ಯದಿಂದ ವಂಚಿತರಾಗುವುದು ಸಹಜ. ಆದರೆ ಈ ಕೊರತೆಯನ್ನು ನಿವಾರಿಸಲಿಕ್ಕಾಗಿಯೇ ಎನ್ನುವಂತೆ ಶ್ರೀಗುರುಜಗನ್ನಾಥದಾಸರು ಕನ್ನಡದಲ್ಲಿ ಶ್ರೀರಾಘವೇಂದ್ರತೀರ್ಥರ ಚರಿತ್ರೆಯನ್ನು ವಿವರಿಸುವ ಸಂಕ್ಷಿಪ್ತವಾದ ಕಾವ್ಯವನ್ನು ರಚಿಸಿದ್ದಾರೆ. ಇದಕ್ಕೂ ಶ್ರೀರಾಘವೇಂದ್ರವಿಜಯ ಎನ್ನುವ ಹೆಸರನ್ನೇ ಅವರು ಇಟ್ಟಿದ್ದಾರೆ.

ಮೇಲ್ನೋಟಕ್ಕೆ ಕೇವಲ ಶ್ರೀರಾಘವೇಂದ್ರರ ಚರಿತೆ ಮಾತ್ರ ಎನಿಸಬಹುದು. ಆದರೆ ನಿಧಾನವಾಗಿ, ಸಮಾಧಾನ ಚಿತ್ತದಿಂದ ಓದಿದರೆ ವೇದ ಹಾಗು ಪುರಾಣಗಳ ಸಾರವನ್ನು, ಅನೇಕ ಪ್ರಮೇಯವಿಷಯಗಳನ್ನು ದಾಸರು ಶ್ರೀ ಕೃತಿಯಲ್ಲಿ ವಿವರಿಸಿದ್ದಾರೆ ಎನ್ನುವುದು ತಿಳಿಯುತ್ತದೆ. ಹರಿಸರ್ವೋತ್ತಮ ತತ್ವದ ಹಿರಿಮೆಯನ್ನು ದಾಸರು ಎತ್ತಿ ಹಿಡಿಯುವುದು ಇಲ್ಲಿನ ಅನೇಕ ಪದ್ಯಗಳಲ್ಲಿ ವೇದ್ಯವಾಗುತ್ತದೆ. ಹಾಗಾಗಿ ಇದು ಶ್ರೀರಾಯರನ್ನು ತಿಳಿದುಕೊಳ್ಳುವ ತವಕದಲ್ಲಿ  ಇರುವವರಿಗೆ ರಾಯರಿಗೂ ಪ್ರಿಯವಾದ ಮಧ್ವಶಾಸ್ತ್ರವನ್ನು ತಿಳಿಸುವ ಕಾವ್ಯವಾಗಿದೆ. ಮಗುವಿಗೆ ಬಾಯಿಗೆ ತಾಯಿಯು ಮೊದಲು ಕಲ್ಲುಸಕ್ಕರೆಯ ತುಣುಕನ್ನು ಹಾಕಿ ಅದರ ಹಿಂದೆ ಔಷಧವನ್ನು ಕುಡಿಸುವ ರೀತಿ ಇದು ಎಂದರೆ ತಪ್ಪಾಗಲಿಕ್ಕಿಲ್ಲ.

ಅಂದ ಹಾಗೆ, ಇದು ಮಹಾಕವಿ ಶ್ರೀನಾರಾಯಣಾಚಾರ್ಯರು ಬರೆದಿರುವ ಸಂಸ್ಕೃತ ರಾಘವೇಂದ್ರವಿಜಯ ಕಾವ್ಯದ ಸಂಸ್ಕೃತ ಅನುವಾದವಲ್ಲ. ಇದು ದಾಸರು ಶ್ರೀರಾಯರನ್ನು ಕಂಡ ನೂರಾರು ಬಗೆಗಳಲ್ಲಿ ಒಂದಿಷ್ಟೇ ಇಷ್ಟು ವಿವರಣೆ ಮಾತ್ರ.

ಶ್ರೀರಾಯರ ಚರಿತ್ರೆಯನ್ನು ಹೇಳುವುದು ಸಾಮಾನ್ಯರ ಕೈಲಾಗುವ ಮಾತಲ್ಲ.  ಅವರ ಕೃಪೆಗೆ ಸಂಪೂರ್ಣವಾಗಿ ಪಾತ್ರರಾದವರಿಗೆ ಮಾತ್ರವೇ ಇದು ಸಾಧ್ಯ. ಹಿಂದೆ ಹೇಳಿದಂತೆ ಶ್ರೀಗುರುಜಗನ್ನಾಥದಾಸರು ಶ್ರೀರಾಯರ ಅಂತರಂಗದ ಭಕ್ತರು. ಆದರೂ ಅವರು ತಮ್ಮ ಬಗ್ಗೆ ಸ್ವಾಹಂಕಾರ ಖಂಡನೆ ಮಾಡಿಕೊಂಡ ನಂತರ “ರಾಯರ ಕರುಣೆಯ ಬಲದಿಂದಲೇ ಅವರ ಚರಿತೆಯನ್ನು ಹೇಳುತ್ತೇನೆ” ಎಂದು ಈ ಕಾವ್ಯವನ್ನು ಪ್ರಾರಂಭಿಸುತ್ತಾರೆ.

ಶ್ರೀನೃಸಿಂಹಾವತರದ ಹಿನ್ನೆಲೆಯನ್ನು ವರ್ಣಿಸಿ, ಶ್ರೀಪ್ರಹ್ಲಾದನ ಭಕ್ತಿಯನ್ನು ಮೊದಲಿನೆರಡು ಸಂಧಿಗಳು ವಿವರಿಸಿದರೆ, ನಂತರದ ನಾಲ್ಕು ಸಂಧಿಗಳು ಶ್ರೀವ್ಯಾಸರಾಜರ ಅವತಾರ, ಅವರ ಕಾಲದ ಐತಿಹಾಸಿಕ ಘಟನೆಗಳನ್ನು ವಿವರಿಸುತ್ತವೆ. ಕೊನೆಯ ಮೂರು ಸಂಧಿಗಳಲ್ಲಿ ಶ್ರೀರಾಘವೇಂದ್ರಪ್ರಭುಗಳ ಮಹಿಮೆಯನ್ನು ಕೊಂಡಾಡುತ್ತವೆ.

ಈ ಕಾವ್ಯರಚನೆ ಅಭಿಪ್ರಾಯವು ಸುಸ್ಪಷ್ಟ. ಮಹಾತ್ಮರಾದವರ ಬಗ್ಗೆ ತಿಳಿದಷ್ಟು ಮಾತುಗಳನ್ನು ಒಳ್ಳೆಯ ಭಾವನೆಯಿಂದ ಆಡುತ್ತಿದ್ದರೆ ಅದು ನಮ್ಮ ಶ್ರೇಯಸ್ಸಿನ ಮಾರ್ಗವಾಗುವುದು ಎಂಬುದು. ಈ ಅಂಶವನ್ನು ಮನಸ್ಸಿನಲ್ಲಿಟ್ಟು ಕೊಂಡು ದಿನಕ್ಕೆ ಒಂದಾದರೂ ಸಂಧಿಯನ್ನು ಓದಿದರೆ ಶ್ರೀಗುರುರಾಜರಿಗೆ ಅದು ಸಂತೋಷವನ್ನು ಕೊಡುತ್ತದೆ.

Download : Download Kannada Raghavendra Vijaya E-Book  File Size : 9.6 MB

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

Mobile Wallpapers set 2

Is it is impossible to lift a pebble for the one who lifts the mountain?

Is it is impossible to lift a small stone for the one who lifts the mountain?

Oh Lord! Hari is it possible to live after renouncing your lotus feet?

toredu

Shri Krishna is my Lord
spd
Problem with nice persons
hurt-wp

Please note : None of the images of Krishna used here are owned by me. They all are taken from various websites. Pic of Krishna’s feet and that adorable calf was originally posted by ISKCON.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

Santana Gopala Krishna – Wallpapers

Download here Santana Gopala Krishna’s wallpaper for your desktops and handhelds.

For Desktops:

GOLD DUST

Sri Santana Gopala Krishna - Sri Rayara Matha
Sri Santana Gopala Krishna Devaru – Desktop Version

 GRAY CLOUDS

gray clouds
Sri Santana Gopala Krishna Devaru – Sri Rayara Matha

 BLUE LAGOON

santanagopalakrishna-srsmutt-blue-lagoon
Sri Santana Gopala Krishna Devaru – Sri Rayara Matha

  GOLDEN SPARKLES

santanagopalakrishna-srsmutt-golden stars
Sri Santana Gopala Krishna Devaru – Sri Rayara Matha

MONSOON GREEN

santanagopalakrishna-srsmutt-monsoon - Green
Sri Santana Gopala Krishna Devaru – Sri Rayara Matha

PURPLE FEAST

Sri Santana Gopala Krishna Devaru - Rayra Matha
Sri Santana Gopala Krishna Devaru – Rayra Matha

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ಶ್ರೀ ವಾಮನ ಪುರಾಣ ಪ್ರವಚನ

ವಿಷ್ಣುಪ್ರೀತ್ಯರ್ಥವಾಗಿ ಮಾಡುವ ಹಲವು ವ್ರತಗಳಲ್ಲಿ ಪಯೋವ್ರತವೂ ಒಂದು. ಫಾಲ್ಗುಣಮಾಸದ ಶುಕ್ಲ ಪ್ರತಿಪದೆಯಿಂದ ಪ್ರಾರಂಭಿಸಿ ದ್ವಾದಶಿಯವರೆಗೆ ಇದನ್ನು ಆಚರಿಸಬೇಕು. ಈ ಅವಧಿಯಲ್ಲಿ ವಿಷ್ಣುವಿಗೆ ಅರ್ಪಿತವಾದ ಹಾಲನ್ನು ಒಂದು ಲೋಟದಷ್ಟು ಮಾತ್ರವೇ ಸೇವಿಸಿ ಶ್ರೀವಿಷ್ಣುಚಿಂತನೆ, ಶ್ರೀವಿಷ್ಣುಸರ್ವೋತ್ತಮತ್ವವನ್ನು ಪ್ರತಿಪಾದಿಸುವ ಸದ್ಗ್ರಂಥಗಳ ಪಠಣದ / ಶ್ರವಣದಲ್ಲಿಯೇ ಮಗ್ನರಾಗಿರಬೇಕು. ಆ ಒಂದು ಲೋಟ ಹಾಲು ಮಾತ್ರವೇ ಆಹಾರ. ಮಿಕ್ಕಿದ್ದು ಉಪವಾಸದ ಸಮಯ.

ನಿಷ್ಕಾಮಕರ್ಮವಾಗಿ ಪಯೋವ್ರತವನ್ನು ಆಚರಿಸುವುದು ಉತ್ತಮ ಪಕ್ಷ. ಸಕಾಮವಾಗಿ ಆಚರಿಸುವುದು ಮಧ್ಯಮ ಪಕ್ಷ. ಏನೂ ಆಚರಿಸದೆ ನನ್ನ ಹಾಗೆ ಸುಮ್ಮನೆ ಕೂಡುವುದು ಅಧಮಾತಿ ಅಧಮ ಪಕ್ಷ.

ವಿವಿಧ ಸಲ್ಲಾಭಗಳು ಈ ವ್ರತದಿಂದ ದೊರೆಯುವುದಾದರೂ ಅನೇಕರು ಸತ್ಸಂತಾನದ ಬಯಕೆಯಿಂದ ಈ ವ್ರತವನ್ನು ಆಚರಿಸುತ್ತಾರೆ.

ನನ್ನ ತಾಯಿ ವಿಷ್ಣುಪಾರಮ್ಯದ ಕೆಲವು ಕ್ಲಿಷ್ಟವ್ರತಗಳನ್ನು ಆಚರಿಸಿದ್ದಾರೆ. ಒಂದು ಬಾರಿ ವಿಷ್ಣುಪಂಚಕ ವ್ರತ, ಎರಡು ಬಾರಿ ಭೀಷ್ಮಪಂಚಕ ವ್ರತಗಳನ್ನು ಈಗಾಗಲೇ ವಿಧ್ಯುಕ್ತವಾಗಿ ಆಚರಿಸಿ ಮಂಗಳವನ್ನು ಮಾಡಿದ್ದಾರೆ. ಹಾಗೆಯೇ ಎರಡು ಬಾರಿ ಪಯೋವ್ರತವನ್ನೂ ಮಾಡಿದ್ದಾರೆ. ಅವರ ಮಗನಾಗಿ ಇದು ನನಗೆ ಹೆಮ್ಮೆಯನ್ನು ತರುವಂತಹ ವಿಷಯ. (ನಾನೂ ಇವುಗಳನ್ನು ಆಚರಿಸಬೇಕು ಎಂಬ ಯೋಗ್ಯತೆ ಮೀರಿದ ಬಯಕೆಯೇನೋ ನನ್ನಲ್ಲಿ ಮೂಡುತ್ತದೆ. ಆದರೆ ನನ್ನಲ್ಲಿ ತಮೋಗುಣದ ಮೆರೆದಾಟವೇ ಹೆಚ್ಚಾಗಿ ನಡೆಯುತ್ತಿದೆ, ಹಾಗಾಗಿ ಸಧ್ಯಕ್ಕೆ ಅಮ್ಮನ ನೆರಳಿನಲ್ಲಿಯೇ ಒಂದಿಷ್ತು ಜಂಬ ಪಡುವ ಸನ್ನಾಹ ನನ್ನದು!)

ಹಿಂದಿನ ಬಾರಿ ವ್ರತವನ್ನು ಆಚರಿಸಿದ್ದಕ್ಕಿಂತಲೂ ಈ ಬಾರಿ ಅವರ ವ್ರತ ಹೆಚ್ಚು ಅರ್ಥಪೂರ್ಣವಾಗಿತ್ತು. ಶ್ರೀಶುಕಾಚಾರ್ಯರ ಸಂಪೂರ್ಣ ಕೃಪೆಗೆ ಪಾತ್ರರಾಗಿರುವ ಶ್ರೀಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರಿಂದ ವ್ರತದ ಅವಧಿಯಲ್ಲಿ ಶ್ರೀವಾಮನ ಪುರಾಣದ ಪ್ರವಚನವು ನಡೆಯಿತು. ಒಂಭತ್ತು ದಿನಗಳ ಕಾಲ ನಡೆದ ಈ ಪವಿತ್ರ ಕಾರ್ಯದಲ್ಲಿ ಅನೇಕ ಮಂದಿ ಸಜ್ಜನರು ವಾಮನಪುರಾಣದ ಕಥಾಮೃತದಲ್ಲಿ ಹರ್ಷದಿಂದ ಮಿಂದೆದ್ದರು. ಶ್ರೀಶ್ರೀಪಾದರಾಜರ ಮಠದ ಆವರಣದಲ್ಲಿ ಈ ಪ್ರವಚನ ನಡೆಯಿತು. ಶ್ರೀಕೇಶವನಿಧಿತೀರ್ಥ ಶ್ರೀಪಾದಂಗಳವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದುದು ಈ ವ್ರತದ ಆಚರಣೆಗೆ ಇನ್ನಷ್ತು ಅರ್ಥವನ್ನು ತಂದು ಕೊಟ್ಟಿತು.

ಅಮ್ಮನ ಈ ವ್ರತವು ಶಾಸ್ತ್ರವತ್ತಾಗಿ ನಡೆಯಲು ಬೆನ್ನೆಲುಬಾಗಿ ನಿಂತವರು ಸಾತ್ವಿಕರಾದ ನನ್ನ ಭಾವನವರಾದ ಮುದುಗಲ್ ವೆಂಕಟನರಸಿಂಹ ಆಚಾರ್ಯರು. ಸಂಪ್ರದಾಯ ಪಾಲನೆ, ಪಾಠ ಪ್ರವಚನ ಹಾಗು ಕಟ್ಟುನಿಟ್ಟಿನ ಪೌರೋಹಿತ್ಯಕ್ಕಾಗಿ ಹೆಸರಾಗಿದ್ದಾರೆ. ಅವರು ಒಂದು ಚೂರೂ ಕ್ರಮತಪ್ಪದಂತೆ ಈ ವ್ರತವನ್ನು ಮಾಡಿಸಿದರು. ಇನ್ನುಳಿದಂತೆ ಅಮ್ಮನಿಗೆ ತೊಂದರೆಯಾಗದ ಹಾಗೆ ಅವಳನ್ನು ಮುಚ್ಚಟೆಯಿಂದ ನೋಡಿಕೊಂಡಿದ್ದು ನನ್ನ ಅಕ್ಕ ಸುಧಮ್ಮ! ಹದಿನೈದು ದಿನ ತನ್ನ ನೌಕರಿಗೆ ರಜೆ ಹಾಕಿ ಅಮ್ಮನ ಜೊತೆಗೆ ಇದ್ದು ತನ್ನ ಕರ್ತವ್ಯವನ್ನು ಮಾಡಿದ್ದಾಳೆ. ಇಬ್ಬರಿಗೂ ನಾವು ಋಣಿಗಳು. ಇವರೀರ್ವರ ಚಿರಂಜೀವ ಐತರೇಯ. ಪ್ರವಚನವನ್ನು ತನ್ನ ಫೋನಿನಲ್ಲೂ ಹಾಗು ತನ್ನ ಇನ್ನೊಬ್ಬ ಸೋದರ ಮಾವನಾದ ವಿಜಯನ ವಿಡಿಯೋ ಕ್ಯಾಮೆರಾದಲ್ಲೂ ರೆಕಾರ್ಡು ಮಾಡಿದ್ದಾನೆ. ಚಿಕ್ಕವನಾದರೂ ಹೆಚ್ಚು ಕಿರಿಕಿರಿಯಾಗದಂತೆ ಪ್ರವಚನವನ್ನು ಮುದ್ರಿಸಿಕೊಂಡಿದ್ದಾನೆ. ಅವನಿಗೆ ಶ್ರೀಹರಿವಾಯುಗುರುಗಳು ಜ್ಞಾನ ಹಾಗು ಭಕ್ತಿಯನ್ನು ಕೊಟ್ಟು ಸಲಹಲಿ.

ವಿಜಯನು ತನ್ನ ಹೆಂಡತಿ ರಚನೆಯೊಂದಿಗೆ ಈ ದಿನಗಳಲ್ಲಿ ಬೆಂಗಳೂರಿನಲ್ಲಿ ಇದ್ದು ತನ್ನ ಕೈಲಾದ ಸೇವೆ ಮಾಡಿದ್ದಾನೆ. ಅವರಿಬ್ಬರಿಗೂ ಈ ಪುಣ್ಯದಲ್ಲಿ ಪಾಲು ಉಂಟು. ಅನಿವಾರ್ಯ(?) ಕಾರಣಗಳಿಂದ ನಾನು ಹಾಗು ನನ್ನ ಯಜಮಾನಿತಿಯಾದ ಶಿರೀಷೆಯು ಈ ಕಾರ್ಯಕ್ರಮದಲ್ಲಿ ಯಾವ ರೀತಿಯಿಂದಲೂ ಪಾಲ್ಗೊಳ್ಳಲು ಆಗಿಲ್ಲ. ಐತರೇಯನು ಮುದ್ರಿಸಿಕೊಂಡಿರುವ ಪ್ರವಚನಗಳನ್ನು ನನ್ನ ಯಜಮಾನಿತಿಯು ತಾಂತ್ರಿಕವಾಗಿ ಸ್ವಲ್ಪ ಸಂಸ್ಕರಿಸಿ ಕೊಟ್ಟಿದ್ದಾಳೆ. ಅವುಗಳನ್ನೇ ಇಲ್ಲಿ ಡೌನ್ ಲೋಡ್ ಮಾಡಲಿಕ್ಕೆ ಕೊಟ್ಟಿರುವುದು. ಹೀಗಾಗಿ ಅವಳೂ ಸಹ ಒಂದಿಷ್ಟು ಪುಣ್ಯಭಾಗಿ.

ಮಂಗಳವು ಮುಗಿದ ನಂತರ ಹೋಗಿ ಅಮ್ಮನನ್ನು ಮಾತನಾಡಿಸಿ ಅವಳು ಮಾಡಿದ ಹದವಾದ ಅಡುಗೆಯನ್ನು ಹೊಟ್ಟೆ ತುಂಬಾ ತಿಂದು ರೈಲಿನಲ್ಲಿ ನಿದ್ದೆ ಮಾಡುತ್ತಾ ವಾಪಸ್ಸು ಬಂದಿದ್ದೇ ನನ್ನ ಸಾಧನೆ.

ನಮ್ಮ ಮನೆಯ ಬಗ್ಗೆ ಅನ್ಯಥಾ ಕೊಚ್ಚಿಕೊಳ್ಳುತ್ತಿದ್ದೇನೆ ಎಂದು ದಯವಿಟ್ಟು ಭಾವಿಸದಿರಿ. ಕಾರ್ಯಕ್ರಮ ಸುಗಮವಾಗಿ ನಡೆಸಲು ಕಾರಣರಾದ ವ್ಯಕ್ತಿಗಳಿಗೆ ಅಭಾರಮನ್ನಣೆ ಮಾಡುವುದು ಶ್ರೇಯಸ್ಕರವಲ್ಲವೇ? ಹಾಗಾಗಿ ಇದನ್ನೆಲ್ಲ ಹೇಳಿದ್ದೇನೆ.

ಶ್ರೀಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರ ನಿರರ್ಗಳ ವಾಗ್ಝರಿಯ ಬಗ್ಗೆ ನಾನೇನು ವರ್ಣಿಸಬಲ್ಲೆ? ಅಷ್ಟು ಶಬ್ದಗಳಾದರೂ ನನ್ನಲ್ಲಿ ಎಲ್ಲಿವೆ?. ಅವರು ಮೇರುಸದೃಶರು. ನಾನು ಅದರ ಪದತಲದಲ್ಲಿರುವ ಚಿಕ್ಕ ಮಣ್ಣಕಣ. ಅಷ್ಟು ದೊಡ್ಡವರು ನಮ್ಮಮನೆಯಲ್ಲಿ ಪ್ರವಚನ ಮಾಡಿದರು ಎನ್ನುವುದೇ ನನಗೆ ರೋಮಾಂಚನವಾಗುವ ಸಂಗತಿ. ಅವರ ಬಗ್ಗೆ ನಾನು ವಿವರಣೆ ಕೊಡುತ್ತೇನೆ ಎಂದರೆ ಅದು ಅವಿವೇಕವಾದೀತು. ನಾನು ಏನೇನೋ ಮಾತನಾಡುವುದೂ ಬೇಡ, ನೀವು ಅವುಗಳನ್ನು ಕೇಳಿ ಬೇಸರಿಸಿಕೊಳ್ಳುವುದೂ ಬೇಡ. ಪ್ರವಚನಗಳನ್ನು ಡೌನ್ ಲೋಡ್ ಮಾಡಿಕೊಳ್ಳಿರಿ, ಅಪರೂಪದ ಅನೇಕ ಸಂಗತಿಗಳನ್ನು ತಿಳಿದುಕೊಳ್ಳಿರಿ.

Sri Vamana Purana Pravachana
Sri Vamana Purana Pravachana

Part 1/9 19.0 MB

Part 2/9 36.7 MB

Part 3/9 46.4 MB

Part 4/9 51.4 MB

Part 5/9 44.2 MB

Part 6/9 40.7 MB

Part 7/9 37.6 MB

Part 8/9 51.2 MB

Part 9/9 43.7 MB

ಬಿ.ಟಿ.ಡಬ್ಲು: ಜ್ಞಾನವನ್ನು ಶೇರ್ ಮಾಡಿರಿ. ಇಲ್ಲದಿದ್ದರೆ ಬ್ರಹ್ಮಪಿಶಾಚದ ಜನ್ಮ ಕಟ್ಟಿಟ್ಟದ್ದು.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

I trust rayaru to the core

A few wallpapers for your smart phones in different colors are given here for free downloading. These were originally designed for FB page of Goa Rayara Matha. You can download the images either individually or the entire collection in a zip archive.

Set 1 : I trust Rayaru to the core

 

Set 2: Shri Raghavendraya Namaha

Download complete set 4.7 MB

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

Guru Raghavendra Charana Kamala

ಭಾನುಸಿಂಹ ಮೈಸೂರಿನ ಕುಡಿ. ಅತ್ಯಂತ ಸರಳ ಸಜ್ಜನ ಹಾಗು ಸ್ನೇಹಜೀವಿ. ರಾಯರು ಹಾಗು ವಿಜಯದಾಸರ ಮೇಲೆ ಅತೀವ ಭಕ್ತಿಯನ್ನು ಮಾಡುತ್ತಾನೆ. ಅಪಾರವಾದ ಸ್ನೇಹಿತರನ್ನು ಸಂಪಾದಿಸಿದ್ದಾನೆ. ಯಾರಿಂದಲೂ ಒಂದೇ ಒಂದು ನೆಗಟಿವ್ ಅಭಿಪ್ರಾಯವನ್ನು ಪಡೆದವನಲ್ಲ. ಹೌದು, ಯಾರನ್ನೇ ಕೇಳಿದರೂ ಇವನ ಬಗ್ಗೆ ಸಂತಸದ ಮಾತನ್ನೇ ಆಡುತ್ತಾರೆ. ಸಧ್ಯಕ್ಕೆ ಬೆಂಗಳೂರಿನ ವಿದೇಶೀ ಕಂಪನಿಯೊಂದಕ್ಕೆ ತನ್ನ ಬುದ್ಧಿಯನ್ನು ಅಭಿಷೇಕ ಮಾಡುತ್ತಿದ್ದಾನೆ.

ಹಾಡುಗಾರಿಕೆಯಲ್ಲಿಯೂ ಭಾನುವು ಒಳ್ಳೆಯ ಶಾರೀರವುಳ್ಳ ವ್ಯಕ್ತಿ. ಇತ್ತೀಚೆಗೆ ಗೋವಾಕ್ಕೆ ಬಂದಿದ್ದ. ಆಯಾಸವಾಗಿದ್ದರೂ ಬಿಡದೆ ಹಾಡು ಹಾಡು ಎಂದು ಒತ್ತಾಯಿಸಿ ಕೆಲವು ಹಾಡನ್ನು ಹೇಳಿಸಿದೆ. ಅವನು ಹಾಡುವ ಹಾಡುಗಳಲ್ಲಿ ನನಗೆ ಅತಿ ಇಷ್ಟವಾಗುವುದು ಗೋಪಾಲದಾಸರ ಈ ರಚನೆ. ಇದನ್ನು ರೆಕಾರ್ಡ್ ಮಾಡಿಕೊಂಡು ಆಮೇಲೆ ಸ್ವಲ್ಪ ಡಿಜಿಟಲ್ ಮಸಾಲೆ ಸೇರಿಸಿದ್ದೇನೆ. ಅದನ್ನು ನೀವು ಡೌನ್ ಲೋಡ್ ಮಾಡಿಕೊಳ್ಳಬಹುದು.

ಅಂದ ಹಾಗೆ ಇವ ನನಗೆ ತಮ್ಮನೂ ಹೌದು. ಇವನ ಫೇಸ್ ಬುಕ್ಕಿನ ಅಕೌಂಟ್ ಇಲ್ಲಿದೆ.

ಈ ಕೃತಿಯಲ್ಲಿ ಶ್ರೀಗುರುರಾಘವೇಂದ್ರರ ಪಾದಗಳನ್ನು ದರ್ಶಿಸಿದಾಗ ಆಗುವ ಲಾಭವನ್ನು ಶ್ರೀಗೋಪಾಲದಾಸರು ವಿವರಿಸಿದ್ದಾರೆ. ಮೂಲಕೃತಿಗೂ ಹಾಗು ಭಾನು ಹೇಳಿದ ಹಾಡಿಗೂ ಸ್ವಲ್ಪ ಪಾಠಾಂತರ ಹಾಗು ವ್ಯತ್ಯಾಸವಿದೆ. ಭಾನುವಿನ ಹಾಡಿನ ಶೈಲಿ ಹಾಗು ಕೆಳಗೆ ಕೊಟ್ಟಿರುವ ಹಾಡಿನ ಸಾಹಿತ್ಯ ಎರಡಕ್ಕೂ ನೀವು ಗಮನಕೊಟ್ಟಲ್ಲಿ ಹಾಡನ್ನು ಬಾಯಿಪಾಠ ಮಾಡುವುದು ಸುಲಭ.

ವಿ.ಸೂ : ನಿದ್ದೆಗಣ್ಣಿನಲ್ಲಿ ಭಾನುಸಿಂಹ ಕೇವಲ ಮೂರು ನುಡಿಗಳನ್ನು ಮಾತ್ರ ಅದೂ ಹಿಂದೆ ಮುಂದಾಗಿ ಹಾಡಿದ್ದಾನೆ. ಅದೂ ಅಲ್ಲದೆ ಹಾಡಿನ ಕೊನೆಯಲ್ಲಿ ಆಕಳಿಸಿದ್ದಾನೆ ಕೂಡ. ನೀವು ಹಾಡನ್ನು ಕಲಿಯುವಾಗ ಇವಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳದೆ ಕೇವಲ ಹಾಡುವ ಶೈಲಿ ಹಾಗು ಲಾಲಿತ್ಯಕ್ಕೆ ಗಮನಕೊಡಿ. ಸಾಹಿತ್ಯಕ್ಕೆ ಹಾಡು ಇಲ್ಲಿದ್ದೇ ಇದೆ.

ಗುರು ರಾಘವೇಂದ್ರರ ಚರಣಕಮಲವನ್ನು
ಸ್ಮರಿಸುವ ಮನುಜರಿಗೆ
ಕರೆಕರೆಗೊಳಿಸುವ ದುರಿತ ದುಷ್ಕೃತಗಳೆಲ್ಲ
ಕರಿಯು ಸಿಂಹನ ಕಂಡ ತೆರನಾಗುವುದಯ್ಯ || (ಕರಿ=ಆನೆ)

ಗುರುಮಧ್ವಮತವೆಂಬ ವರ ಕ್ಷೀರಾಬ್ದಿಯಲ್ಲಿ
ಹರ ಧರಿಸಿದ ಶಶಿಯಂತುದಿಸಿ
ಪರಮತ ತಿಮಿರಕೆ ತರಣಿ ಕಿರಣವೆನಿಸಿ  (ತಿಮಿರ=ಕತ್ತಲು, ತರಣಿ=ಸೂರ್ಯ)
ಧುರದಿ ಮೆರೆವ ನರಹರಿರಾಮಾರ್ಚಕರಾದ || ೧ ||

ಹರಿಯೆ ಸರ್ವೋತ್ತಮ ಸಿರಿಯು ಆತನ ರಾಣಿ
ಪರಮೇಷ್ಠಿ ಮರುತರೆ ಗುರುಗಳೆಂದು
ಗರುಡಶೇಷರುದ್ರ ಸಮರೆಂದು ಸ್ಥಾಪಿಸಿ
ತರತಮ ಪಂಚಭೇದವೆ ಸತ್ಯವೆಂಬ || ೨ ||

ಅಂಧಕರಿಗೆ ಚಕ್ಷು ವಂಧ್ಯರಿಗೆ ಸುತರ
ಬಂದ ಬಂದವರಿಗಭೀಷ್ಟವ ಕೊಡುವ
ಒಂದಾರುನೂರುವತ್ಸರ ಬೃಂದಾವನದಲಿ
ಚಂದಾಗಿ ನಿಂತು ಮೆರೆವಾ ಕೃಪಾಸಿಂಧು || ೩ ||

ರಾ ಎನ್ನೆ ರಾಶಿದೋಷಗಳನೆ ದಹಿಸುವ
ಘ ಎನ್ನೆ ಘನಜ್ಞಾನಭಕುತಿಯೀವ
ವೇಂ ಎನ್ನೆ ವೇಗದಿ ಜನನ ಮರಣ ದೂರ
ದ್ರ ಎನ್ನೆ ದ್ರವಿಣಾರ್ಥ ಶ್ರುತಿಪ್ರತಿಪಾದ್ಯನ ಕಾಂಬ || ೪ ||

ವರ ತುಂಗಾತೀರ ಮಂತ್ರಾಲಯದಲಿ ಪುರದಲ್ಲಿ
ಪರಿಪರಿಸೇವೆ ಭೂಸುರರಿಂದ ಕೊಳುತಾ
ಭಾವಜನಯ್ಯ ಶ್ರೀಗೋಪಾಲವಿಠಲನ್ನ   (ಭಾವಜ = ಮನ್ಮಥ. ಭಾವಜನಯ್ಯ=ಕೃಷ್ಣ)
ಸೇವಿಸುತ ಯತಿಕುಲ ಶಿಖಾಮಣಿಯಾದ || ೫ ||

Download Plain Song Download a little modified song

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

Sri Rudra Dwadashana Nama

Wish you all a very happy and prosperous Maha Shivaratri. Lord Rudra has countless names and titles. Our boundless ocean of literature can give us all those names. On this occasion of Maha Shivaratri I have tried to give you a wallpaper of the beautiful and divine mount. That is none other than The Kailash.  I have added Sri Rudra Dwadasha Nama of Lord Shiva to this wall paper as an essence. This stotra has been fetched from Skanda Purana.

This image is just for reference. The actual high-res image with Sanskrit and Kannada version is available at the download link.  Feel free to share it with every one.

Maha Shiva Ratri
Sri Rudra Dwadasha Nama Stotra – Kailasa Parvata

Download File size : 2.3Mb

Let me know if you wish to have this pic with a different resolution.

Image courtesy : www.tibettour.org

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

I love Maruti

Today while discussing some thing interesting with my lovely wife I received an email with an attractive pic of Hanumanji. Immediately a thought of doing something cool flashed  in my mind. With that inspiration I have created few cool looking wall papers of our Guru Lord Hanumanji. It was a day of happiness for me.

Scroll one by one, download any wallpaper that suits your mood. Let me know if you wish to have another mood 😉 I will try to create one for you too.  It would make me happy if you tell me which one is your favorite. There is a comment box given below this post, use it to express your mood!

Btw you are free to redistribute / share  it with your loved ones. Share it where ever you wish except unpleasant and forbidden places.

Please note : The images displayed inline are just for visual reference. Click on the download button given below the pictures to download the actual High Definition wallpaper.

White Feather

White feather-sm

Download HD White Feather

Blue Delight

Blue Delight-sm

Download HD Blue Delight

 Cool Brown

Cool Brown-sm

Download HD Cool Brown

Magical Magenta

magical meganta-sm

Download HD Magical Magenta

Shining Aqua

shining aqua-sm

Download HD Shining Aqua

Twilight Rays

twilight rays-sm

Download HD Twilight Rays

Midnight Sparkles

midnight sparkle-sm

Download HD Midnight Sparkles

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ಮಗು ವಿಪರೀತವಾಗಿ ಅಳುತ್ತಿದೆಯೇ?

Read English version of this article here

ಚಿಕ್ಕ ಮಕ್ಕಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಎಲ್ಲರಿಗೂ ಅದು ಇಷ್ಟವೇ ಆದ ವಸ್ತು. ಮಗುವಿನ ನಗು, ಅದರ ಮುದ್ದು ಮಾತು, ಮಗುವು ತೋರಿಸುವ ಬುದ್ಧಿವಂತಿಕೆ, ಮಗುವು ಹಟ ಮಾಡಿ ತನಗೆ ಬೇಕಾದ ವಸ್ತುವನ್ನು ತನ್ನ ಕೈಯಲ್ಲಿ ಪಡೆಯುವ ಪರಿ ಎಲ್ಲವೂ ಸಂತಸದಾಯಕವೇ. ಮಗುವಿನ ಹಟವನ್ನು ಸಹ ಬಂದವರೆದುರು ಬಣ್ಣಿಸಬೇಕು, ಅವರು ಕಣ್ಣರಳಿಸಿ ಈ ಬಣ್ಣನೆಯನ್ನು ಕೇಳಬೇಕು ಎಂಬುದು ಹೆತ್ತವರ ತವಕ.  ಈ ಹಟವು ಸ್ವಲ್ಪ ಹೆಚ್ಚಾಯಿತು ಎನಿಸಿದಾಗ ಮಾತ್ರ ಅವರ ಮುಖದಲ್ಲಿ ಚಿಂತೆಯು ಮೂಡತೊಡಗುವುದು, ಅದರಲ್ಲೂ ಹಟವು ಅತಿರೇಕಕ್ಕೆ ಹೋದಾಗ ಹೆತ್ತವಳು ಪಡುವ ಹಿಂಸೆಯ ಆಳವು ಅನುಭವಿಸಿದವರಿಗೆ ಮಾತ್ರವೇ ಗೊತ್ತು. ಆಟ ಆಡುತ್ತಿರುವವರೆಗೂ ಎಲ್ಲವೂ ಚೆನ್ನ. ಆದರೆ ಮಗುವು ತನಗಾಗುತ್ತಿರುವ ಸಮಸ್ಯೆಯನ್ನು ಹೇಳಲಾಗದೆ ಚಿರ್ರೆಂದು ಭುರ್ರೆಂದು ತಾರಕಸ್ವರದಲ್ಲಿ ಅಳುತ್ತಿರುವಾಗ ಎಲ್ಲರಿಗೂ ದುಃಖ!

ಚಿಕ್ಕ ಮಕ್ಕಳಿರುವ ಮನೆಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ. ಹಿರಿಯರೇನಾದರೂ ಅಲ್ಲಿದ್ದರೆ ಒಳ್ಳೆಯದು. ಎಲ್ಲರೂ ತಮ್ಮ ತಮ್ಮ ಅನುಭವರತ್ನಾಕರದೊಳಗಿನಿಂದ ಒಂದೊಂದು ರತ್ನವನ್ನು ತೆಗೆದು ಮಗುವಿನ ಸಮಸ್ಯೆಯನ್ನು ಪರಿಹರಿಸಲು ಸಹಾಯವಾಗುತ್ತಾರೆ. ಇವರ ಅನುಭವಕ್ಕೆ ಮೀರಿದ ಸಮಸ್ಯೆಯಾದರೆ ಡಾಕ್ಟರ್ ಮಾಮ ಇದ್ದೇ ಇದ್ದಾರೆ. ಆದರೆ ರಾತ್ರಿಯೇನಾದರೂ ಈ ಸಮಸ್ಯೆ ಒದಗಿದಲ್ಲಿ ಅಥವಾ ಡಾಕ್ಟರ್ ಮಾಮನ ಬಳಿಹೋಗಲು ತಕ್ಷಣಕ್ಕೆ ಸಾಧ್ಯವಾಗದಿದ್ದಲ್ಲಿ ಸಹಜವಾಗಿಯೇ ಗಾಬರಿಯಾಗುವುದು. ತಾಳ್ಮೆಗೆಟ್ಟ ಅಸಹಾಯಕ ಗಂಡ ಹೆಂಡಿರಲ್ಲಿ ಪರಸ್ಪರ ದೂಷಣೆಗಳು ಪ್ರಾರಂಭವಾಗುವುವು.

ಜಗಳವಾಡಬೇಡಿ, ಇಲ್ಲಿ ನೋಡಿ 5 ನಿಮಿಷ.

 • ನೀವು ಇತ್ತೀಚೆಗೆ ಜನಿಸಿದ ಮಗುವೊಂದರ ತಂದೆ ತಾಯಿಗಳಾಗಿದ್ದಲ್ಲಿ
 • ನಿಮ್ಮ ಮಗುವು ತನಗೆ ಒದಗಿ ಬರುತ್ತಿರುವ ತೊಂದರೆಗಳ ಬಗ್ಗೆ ವಿವರವಾಗಿ ಹೇಳಲು ಇನ್ನೂ ಅಶಕ್ತವಾಗಿದ್ದಲ್ಲಿ
 • ನಿಮ್ಮ ಸಮೀಪದಲ್ಲಿ ಹಿರಿಯರ ಸಹಾಯ ಲಭ್ಯವಿಲ್ಲದಿದ್ದಲ್ಲಿ
 • ನೀವು ಮಗುವಿಗೆ ಹಾಕಿದ ಔಷಧ ಕೆಲಸ ಮಾಡುತ್ತಿಲ್ಲ ಎಂದು ನಿಮಗೆ ಅನ್ನಿಸಿದಲ್ಲಿ
 • ಮಗುವಿಗೆ ದೃಷ್ಟಿಯಾಗಿದೆ ಆದರೆ ಎಷ್ಟು ಸಲ ದೃಷ್ಟಿ ನಿವಾಳಿಸಿ ತೆಗೆದರೂ ಅಳು ನಿಲ್ಲಿಸುತ್ತಿಲ್ಲ ಎಂದಾಗ
 • ನಿಮ್ಮ ಮಗುವಿಗೆ ಏನಾಗುತ್ತಿದೆ ಎಂದು ನಿಮಗೆ ಅರ್ಥವಾಗದಿದ್ದಲ್ಲಿ
 • ಮಗು ದುಃಸ್ವಪ್ನದಿಂದ ಬೆಚ್ಚುತ್ತಿದೆ (nightmare) ಎಂದಲ್ಲಿ

ಗಾಬರಿ ಪಡಬೇಡಿ. ಇವೆಲ್ಲ ಲೋಕದಲ್ಲಿ ಸಹಜವಾಗಿಯೇ ಕಾಣಿಸುವ ತೊಂದರೆಗಳು.  ಇದಕ್ಕೆ ಪರಿಹಾರವನ್ನು ಸಾಕ್ಷಾತ್ ವೇದವ್ಯಾಸದೇವರೇ ಒದಗಿಸಿದ್ದಾರೆ. ಅವರು ತೋರಿಸಿದ ಉಪಾಯವನ್ನು ಮನಸ್ಸು ಹಾಗು ದೇಹವನ್ನು ಶುಚಿಗೊಳಿಸಿಕೊಂಡು, ವಿಶ್ವಾಸಪೂರ್ವಕವಾಗಿ ಪಾಲಿಸಿರಿ. ಖಂಡಿತವಾಗಿ ನಿಮ್ಮ ಮಗುವಿನೆಡೆಗೆ ಭಗವಂತ ಸಹಾಯಹಸ್ತವನ್ನು ಚಾಚುತ್ತಾನೆ. ಮಗುವಿಗೆ ಬೇಕಾದ ನಿಶ್ಚಿಂತೆಯ ಸೆಲೆಯನ್ನು ಯಾವುದಾದರೂ ಒಂದು ಮಾರ್ಗದಿಂದ ಚಿಮ್ಮಿಸಿಬಿಡುತ್ತಾನೆ. ಮಗು ಹಾಯಾಗಿ ಕ್ಷಣಾರ್ಧದಲ್ಲಿ ನಿದ್ದೆಗೆ ಜಾರಿ, ಬೆಳಿಗ್ಗೆ ಎಂದಿನಂತೆ ತಾನಾಗಿಯೆ ಬಂದು ನಿಷ್ಕಳಂಕ ನಗುವಿನೊಂದಿಗೆ ನಿಮ್ಮನ್ನು ಎಬ್ಬಿಸುವುದು!

ಭಾಗವತದ ಏಳನೆಯ ಸ್ಕಂದವು ಶ್ರೀಕೃಷ್ಣನ ದಿವ್ಯಲೀಲೆಯನ್ನು ವಿವರಿಸುತ್ತದೆ. ದೇವಕಿ ಹಾಗು ವಸುದೇವರಿಂದ ಹುಟ್ಟುವ ಮಗುವು ತನ್ನನ್ನು ಕೊಲ್ಲುವುದು ಎಂದು ತಿಳಿದ ಕಂಸನು ಅವರ ಎಲ್ಲ ಶಿಶುಗಳನ್ನು ಕೊಲ್ಲುವುದು ನಮಗೆಲ್ಲ ತಿಳಿದಿದೆ. ಎಂಟನೆ ಶಿಶುವಾಗಿ ಭಗವಂತನೇ ಧರೆಗಿಳಿದ. ಪೂತನಿಯು ಶ್ರೀಕೃಷ್ಣನನ್ನು
ಕೊಲ್ಲಲು ಹೋಗಿ ತಾನೇ ಹತಳಾಗಿದ್ದು ಸಹ ಎಲ್ಲರಿಗೂ ಗೊತ್ತು. ಶಿಶುರೂಪಿಯಾದ ಕೃಷ್ಣನ ಈ ಅದ್ಭುತಕಾರ್ಯವನ್ನು ನೋಡಿ ಎಂದು ವ್ರಜಕುಲದ ಗೋಪ ಗೋಪಿಯರೆಲ್ಲ ಬೆರಗಾದರು. ಇದು ಸಾಧಾರಣ ಶಿಶುವಲ್ಲ, ವಿಶೇಷವಾದದ್ದು ಎಂದು ಅವರಿಗೆ ಗೊತ್ತಾಯಿತು. ಆದರೂ ಮಾನವ ಸಹಜವಾದ ಸ್ವಭಾವದಿಂದ ಪುಟ್ಟ ಬಾಲನಿಗೆ ಏನೂ ಆಗದಿರಲಿ, ಈ ಬಾಲಗೋಪಾಲನ ಅವಯವಗಳನ್ನು ಭಗವಂತನ ಅಜಾದಿರೂಪಗಳು ಸಂರಕ್ಷಿಸಲಿ ಎಂದು ಪ್ರಾರ್ಥಿಸಿದರು.

ಭಯವನ್ನು ಹುಟ್ಟಿಸಿ ಅದರ ನಾಶವನ್ನೂ ಮಾಡಬಲ್ಲ ವಿಷ್ಣುವೇ ಕೃಷ್ಣನಾಗಿ ಅವತರಿಸಿರುವಾಗ ಗೋಪಿಕೆಯರು ಈ ಸ್ತುತಿಯನ್ನು ಮಾಡುವ ಅವಶ್ಯಕತೆಯಾದರೂ ಏನು ಎಂಬ ಪ್ರಶ್ನೆ ಬರಬಹುದು. ಅದಕ್ಕೆ ಹೀಗೆ ಸಮಾಧಾನವಿದೆ. ಭಗವಂತನಿಗೆ ಈ ಸ್ತೋತ್ರದಿಂದ ಆಗಬೇಕಾದದ್ದು ಏನೂ ಇಲ್ಲ. ಅವನ ಭಕ್ತರೇ ಲೋಕ ಕಲ್ಯಾಣಕ್ಕಾಗಿ
krishna-gopika2 ಅವನನ್ನು ಸ್ತುತಿಸುವುದು. ವಾಸ್ತವವಾಗಿ ಕೃಷ್ಣನು ಈ ಕಾರ್ಯವನ್ನು ಮಾಡಿದ್ದು ಪೂತನಿಯ ಒಳಗಿದ್ದ ಶಾಪಗ್ರಸ್ತ ಅಪ್ಸರೆ ಊರ್ವಶಿಯ ಶಾಪವಿಮೋಚನೆಗಾಗಿ. ಮೇಲಾಗಿ ಅವನು ಮಾನವರೂಪದಲ್ಲಿ ಅವತಾರ ಮಾಡಿದಾಗ ಮಾನವನ ರೀತಿಯ ನಡುವಳಿಕೆಗಳನ್ನೇ ಅಲ್ಲವೇ ತೋರಬೇಕಾದದ್ದು? ಹಾಗಾಗಿ ಅವನು ಸಾಧಾರಣ ಶಿಶುವಿನ ಹಾಗೆಯೆ ನಟಿಸಿದ. ಅದೂ ಅಲ್ಲದೆ ಅವರೆಲ್ಲರಿಗೂ ಭಗವಂತನ ಸಂಪೂರ್ಣ ಜ್ಞಾನ ಇದ್ದಿಲ್ಲವಾದ್ದರಿಂದ ಇದು ವಿಶಿಷ್ಟವಾದ ಶಿಶುವೇನೋ ಹೌದು ಆದರೆ ಮಾನವ ಶಿಶು ಎನ್ನುವ ಅಭಿಪ್ರಾಯವು ಇತ್ತು. ಹೀಗಾಗಿ ಆ ಅಬೋಧ ವ್ರಜನಿವಾಸಿಗಳು “ಈ ಶಿಶುವನ್ನು ದೇವರು ರಕ್ಷಣೆ ಮಾಡಲಿ” ಎಂದು ಪ್ರಾರ್ಥಿಸಿದರು.

ಒಟ್ಟಿನಲ್ಲಿ ಮಗುವಿನ ಮೇಲಿದ್ದ ಅತಿಶಯವಾದ ಪ್ರೇಮವೇ ಗೋಪಿಕೆಯರಿಂದ ಈ ಸ್ತೋತ್ರವನ್ನು ಮಾಡಿಸಿತು. ಅವರೆಲ್ಲರ ಈ ಪ್ರಾರ್ಥನೆಯೇ ನಮ್ಮ ನಿಮ್ಮ ಮಗುವನ್ನು ಭಯ, ಕೆಟ್ಟ ದೃಷ್ಟಿ, ಕೆಟ್ಟ ಸ್ವಪ್ನ, ದೇಹದ ಅವಯವಗಳ ನೋವುಗಳಿಂದ ಪಾರು ಮಾಡುವ ದಿವ್ಯ ಮಂತ್ರ. ಇದುವೇ ಶ್ರೀವೇದವ್ಯಾಸದೇವರು ನಮಗಾಗಿ ಸಂಗ್ರಹ ಮಾಡಿಕೊಟ್ಟಿರುವ ದಿವ್ಯ ಔಷಧ.

ಈ ಲೇಖನದ ಕೊನೆಗೆ ಈ ಮಂತ್ರವನ್ನು ನನಗೆ ತಿಳಿದ ವಿವಿಧ ಭಾಷೆಗಳಲ್ಲಿ ಕೊಟ್ಟಿದ್ದೇನೆ. ಇದನ್ನು ಮುದ್ರಿಸಿ ಇಟ್ಟುಕೊಂಡಿರಿ. ಪ್ರತಿನಿತ್ಯ ಕೈಕಾಲು ತೊಳೆದು ಕೊಂಡು, ಶುಭ್ರವಸ್ತ್ರವನ್ನು ಧರಿಸಿ ರಾಯರ ಮುಂದೆ ಕುಳಿತು, ಅವರ ಅಂತರ್ಗತರಾದ ಭಾರತೀರಮಣಾಂತರ್ಗತ ಶ್ರೀವಿಷ್ಣುವನ್ನು ಸ್ಮರಿಸುತ್ತಾ ಒಂದು ಬಾರಿಯಾದರೂ ಈ ಮಂತ್ರವನ್ನು ಪಠಿಸಿ. ಪಠಿಸುವಾಗ ಮಗುವನ್ನು ಹತ್ತಿರವೇ ಮಲಗಿಸಿಕೊಳ್ಳಿರಿ. ಮಗುವಿಗೆ ಒದಗಬಹುದಾದ ಪೀಡೆಗಳನ್ನು ಇದು ಖಂಡಿತವಾಗಿ ದೂರ ಮಾಡುತ್ತದೆ.

ನಡುರಾತ್ರಿಯಲ್ಲಿ ಗಂಡ ಹೆಂಡತಿ ಇಬ್ಬರೇ ಮನೆಯಲ್ಲಿದ್ದು, ಮಗು ಅತೀವ ವೇದನೆಯಿಂದ ಅಳುತ್ತಿರುವಾಗ ಚಿಂತಿಸಬೇಡಿ. ಈ ಮಂತ್ರವನ್ನು ರಾಯರ ಮುಂದೆ ಕುಳಿತು ೩-೪ ಬಾರಿ ಓದಿ. ಆಮೇಲೆ ಡಾಕ್ಟರ್ ಮಾಮನಿಗೆ ಫೋನ್ ಮಾಡಿ. ತುಂಬಾ ಗಾಢನಿದ್ರೆಯಲ್ಲಿರುವ ಡಾಕ್ಟರ್ ಮಾಮನನ್ನು ಸಹ ಈ ಮಂತ್ರ ಎಬ್ಬಿಸಿ ನಿಮ್ಮ ಮನೆಯೆಡೆಗೆ ಕರೆತರುತ್ತದೆ.

ನನಗೆ ಗುರುಗಳಾದ ಶ್ರೀ ಪಡುಬಿದ್ರಿ ಹರಿನಾಥರು ಈ ಮಂತ್ರವನ್ನು ಸ್ಪಷ್ಟವಾಗಿ ಉಚ್ಚಾರಣೆಯೊಂದಿಗೆ ಪಠನ ಮಾಡಿದ್ದಾರೆ. ಅದರ ಧ್ವನಿಮುದ್ರಣವನ್ನು ಸಹ ನಾನು ಡೌನ್ಲೋಡ್ ಮಾಡಲು ಲೇಖನದ ಕೊನೆಗೆ ಕೊಟ್ಟಿದೇನೆ. ಅದು ನಿಮಗೆ ಸಹಾಯವಾಗುವುದು.

 ನೆನಪಿಡಿ, ಭಗವಂತನಿಗೆ ನೀವು ಸಲ್ಲಿಸಬೇಕಾದ ಶುಲ್ಕವೆಂದರೆ ವಿಶ್ವಾಸ ಮಾತ್ರ. ಅದುವೇ ಮಗುವಿಗೆ ಶ್ರೀರಕ್ಷೆ ಕೂಡ.

Download MP3 3 MB

Download PDF 356 KB

ಕೃತಜ್ಞತೆಗಳು ***********************

 1. ಗೋಳಾಡುತ್ತಿರುವ ಮಗುವಿನ ಚಿತ್ರ ಇಲ್ಲಿಂದ ತೆಗೆದುಕೊಂಡದ್ದು
 2. ಕೃಷ್ಣನ ಸುತ್ತಲೂ ಗೋಪಿಕೆಯರು ಕುಳಿತು ಸ್ತೋತ್ರ ಮಾಡುತ್ತಿರುವುದು. ಇಲ್ಲಿದೆ

 

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಾಘವೇಂದ್ರಂ ತಂ ಆಶ್ರಯೇ

ರಾಘವೇಂದ್ರ ಗುರುಸಾರ್ವಭೌಮರು ಅದ್ವಿತೀಯ ವೈಣಿಕರೆನ್ನುವುದು ಅವರ ಎಲ್ಲ ಭಕ್ತರಿಗೂ ಗೊತ್ತು.  ಯಾವ ವರ್ಗದ ಸಂಗೀತಗಾರರೇ ಆಗಲಿ ರಾಯರ ಬಳಿ ಬಂದು ಪ್ರಾರ್ಥನೆ ಮಾಡಿದಲ್ಲಿ ಅವರಿಗೆ ಸಂಗೀತವು ಒಲಿಯುವುದ ಶತಸ್ಸಿದ್ಧ. ಈ ಕಾರಣದಿಂದ ಎಷ್ಟೇ ಉಚ್ಚತರಗತಿಯ ಕಲಾವಿದರಿದ್ದರೂ ಮಂತ್ರಾಲಯಕ್ಕೆ ಬಂದು ಗುರುರಾಜರ ಮುಂದೆ ಸಂಗೀತದ ಸೇವೆಯನ್ನು ಸಲ್ಲಿಸಲು ಹಾತೊರುವುದು ಸಹಜ.  ನಾನು ನೋಡಿರುವಂತೆ ದಿನಕ್ಕೆ ಒಬ್ಬನಾದರೂ ಕಲಾವಿದ ಮಠದ ಯಾವುದಾದರೂ ಮೂಲೆಯಲ್ಲಿ ಕುಳಿತು ಶ್ರದ್ಧಾವಂತ ವಿದ್ಯಾರ್ಥಿಯಾಗಿ ರಾಯರ ಮುಂದೆ ಪರೀಕ್ಷೆ ಒಪ್ಪಿಸುವಂತೆ ರಾಗಾಲಾಪನೆಯನ್ನು ಮಾಡುತ್ತಿರುತ್ತಾನೆ.  ಪ್ರಖ್ಯಾತ ಕಲಾವಿದರೂ ಸಹ ಇಲ್ಲಿಗೆ ಬಂದು ತಮ್ಮ ಪಾಡಿಗೆ ತಾವು ಹಾಡಿ, ಧನ್ಯರಾಗಿ ಮರಳಿಹೋಗುವುದನ್ನು ಸಹ ನಾನು ಹಲವಾರು ಬಾರಿ ನೋಡಿದ್ದೇನೆ.  ಸಂಗೀತವನ್ನು ಸವಿಯುವ ರಸಿಕರೇನಾದರೂ ನೀವಾಗಿದ್ದಲ್ಲಿ ಸುಮ್ಮನೆ ಈ ಸಂಗೀತಗಾರರ ತಲ್ಲೀನತೆಯ ಪರಿಯನ್ನು ನೋಡುತ್ತ ಕುಳಿತುಬಿಡುವಿರಿ.  ಆ ಮಟ್ಟಿಗೆ ನಾನೊಬ್ಬ ಅದೃಷ್ಟಶಾಲಿ.

ಹದಿನೈದು ದಿನಗಳ ಕೆಳಗೆ ಮದರಾಸಿನಿಂದ ಡಾ. ಆರ್. ಗಣೇಶ್ ಹಾಗು ಎಸ್. ಎಸ್. ಮುರಳಿ ಇಬ್ಬರೂ ಮಂತ್ರಾಲಯಕ್ಕೆ ಬಂದು ಶ್ರೀರಾಯರ ಸನ್ನಿಧಿಯಲ್ಲಿ ಸಂಗೀತ ಸೇವೆಯನ್ನು ಸಲ್ಲಿಸಿ ಹೋದರು. ಈ ಇಬ್ಬರೂ ನನ್ನ ಸ್ನೇಹಿತರಾಗಿರುವುದು ಸಹ ರಾಯರು ನನ್ನ ಮೇಲೆ ಮಾಡಿರುವ ಒಂದು ಕೃಪೆ ಎಂದು ಭಾವಿಸುವೆ. ಇಬ್ಬರೂ ಹುಟ್ಟಿದ್ದು ಸಾಂಪ್ರದಾಯಿಕ ಅದ್ವೈತಿಗಳ ಕುಟುಂಬದಲ್ಲಿ. ಆದರೆ ಇವರು ಶ್ರೀರಾಘವೇಂದ್ರಗುರುಸಾರ್ವಭೌಮರ ಸ್ತೋತ್ರ, ಮಂಗಳಷ್ಟಕ, ನಾಮಾವಳಿ ಹಾಗು ಇನ್ನಿತರ ಹರಿದಾಸರ ಕೀರ್ತನೆಗಳನ್ನು ಭಕ್ತಿಭರಿತರಾಗಿ ಹೇಳುವುದನ್ನು ನಾನು ಹಲವಾರು ಬಾರಿ ನೋಡಿ ಸಂತಸಪಟ್ಟಿದ್ದೇನೆ. ಸಾಮಾನ್ಯವಾಗಿ ತಮಿಳು ಭಾಷಿಕರು ಇನ್ನಿತರ ಭಾಷೆಗಳನ್ನು ಉಚ್ಚರಿಸುವಾಗ ಸಂಭವಿಸಬಹುದಾದ ಉಚ್ಚಾರದ ವ್ಯತ್ಯಾಸಗಳು ರಾಯರ ವಿಷಯದಲ್ಲಿ ಆಗಬಾರದು ಎನ್ನುವ ದೃಷ್ಟಿಯಿಂದ ನನ್ನ ಬಳಿ ಹಲವಾರು ಬಾರಿ ಇವುಗಳನ್ನು ಹೇಳಿ ವ್ಯತ್ಯಾಸಗಳಾದಲ್ಲಿ ಸರಿಪಡಿಸಿಕೊಂಡಿದ್ದಾರೆ. ಪ್ರತಿನಿತ್ಯ ಶ್ರೀಗುರುರಾಜರ ಸ್ತೋತ್ರವನ್ನು ಹೇಳುವುದು ಮಾತ್ರವಲ್ಲ ಶ್ರೀಮಠದ ಗುರುಪರಂಪರೆಯ ಬಗ್ಗೆಯೂ ವಿವರವಾಗಿ ತಿಳಿದುಕೊಂಡಿದ್ದಾರೆ.  ನನ್ನ ಮಟ್ಟಿಗೆ ಹೇಳುವುದಾದಲ್ಲಿ ಇದು ಅತ್ಯುತ್ತಮ ನಡುವಳಿಕೆಗೆ ಉದಾಹರಣೆ.

ಸಾಮಾನ್ಯವಾಗಿ ನಾನು ಯಾರದೇ ಸಂಗೀತದ ಕಚೇರಿಗೆ ಹೋದಲ್ಲಿ ಕಲಾವಿದರಲ್ಲಿ ಮೋಹನಕಲ್ಯಾಣಿ ಅಥವಾ ಮೋಹನ ರಾಗದ ಒಂದಾದರೂ ಕೃತಿಯನ್ನು ಹಾಡಲು ವಿನಂತಿಸಿಕೊಳ್ಳುತ್ತೇನೆ. ನನಗೆ ಈ ರಾಗಗಳೆಂದರೆ ಅತೀವ ಪ್ರೀತಿ.  ಗಣೇಶ್ ಮತ್ತು ಮುರಳಿ ಇಬ್ಬರಲ್ಲಿ ನನಗೆ ಸಲಿಗೆಯಿರುವುದರಿಂದ ಮಂತ್ರಾಲಯಕ್ಕೆ ಬಂದಾಗಲೆಲ್ಲ ಈ ರಾಗದಲ್ಲಿ ಆಲಾಪನೆ ಮಾಡಲು ಕೇಳುತ್ತೇನೆ. ಆದರೆ ಈ ಬಾರಿ ನನಗೆ ಕೆಲಸದ ಅತೀವ ಒತ್ತಡವಿದ್ದುದರಿಂದ ಇಬ್ಬರು ನಡೆಸಿದ ಸಂಗೀತೆ ಸೇವೆಯಲ್ಲಿ ನೇರವಾಗಿ ಭಾಗವಹಿಸುವ ಅವಕಾಶ ಸಿಗಲಿಲ್ಲ. ಆದರೆ ನನ್ನ ಪುಟ್ಟ ಆಫೀಸಿನಲ್ಲಿಯೇ ಕುಳಿತು ಈ ಸಂಗೀತ ಕಚೇರಿಯನ್ನು ಕಂಪ್ಯೂಟರಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದೇನೆ.

ಇಬ್ಬರೂ ಬಂದು ಹೋದದ್ದು ಒಂದು ದಿನದ ಅಂತರದಲ್ಲಿ. ಅವರು ಸಂಗೀತ ಸೇವೆ ಸಲ್ಲಿಸುವಾಗ  ಇಬ್ಬರಿಂದಲೂ ಒಂದೊಂದು ರಸವತ್ತಾದ ಆಲಾಪನೆಯು ಮೂಡಿ ಬಂದಿದೆ.  ಈರ್ವರೂ ಶ್ರೀರಾಘವೇಂದ್ರವಿಜಯದಿಂದ ಆಯ್ದ ಒಂದೊಂದು ಶ್ಲೋಕವನ್ನು ಭಕ್ತಿಯುತವಾಗಿ ಆಲಾಪನೆಗಳನ್ನು ಮಾಡಿದ್ದಾರೆ. ಅವರು ಮಾಡಿದಾಗ ಹೊರಹೊಮ್ಮಿದ್ದು ಕೇವಲ ಮಾಧುರ್ಯಷ್ಟೇ ಅಲ್ಲ.  ಹೊರ ಹೊಮ್ಮಿದ್ದು ಕಲಾವಿದರು ಶ್ರೀರಾಯರ ಮೇಲಿಟ್ಟಿರುವ ಭಕ್ತಿಯ ತೀವ್ರತೆ.  ಡಾ. ಗಣೇಶರು ಶ್ರೀಮತೋ ರಾಘವೇಂದ್ರಸ್ಯ ನಮಾಮಿ ಪದಪಂಕಜೇ ಎನ್ನುವ ಶ್ಲೋಕವನ್ನು ಹಾಡಿದರೆ. ಮುರಳಿಯವರು ಮಾಡಿದ್ದು ಮೂಕೋಪಿ ಯತ್ಪ್ರಸಾದೇನ ಎನ್ನುವ ಪ್ರಸಿದ್ಧ ಶ್ಲೋಕದ ಆಲಾಪನೆ. ಆಶ್ಚರ್ಯವೆಂಬಂತೆ ಅದು ಮೋಹನಕಲ್ಯಾಣಿರಾಗದಲ್ಲಿಯೇ ಮೂಡಿ ಬಂದಿದೆ. ನಾನು ಕಛೇರಿಯಲ್ಲಿ ಭಾಗವಹಿಸದೇ ಹೋದರೂ ರಾಯರು ನನಗೋಸ್ಕರವೇನೋ ಎನ್ನುವಂತೆ ಇವರಿಂದ ನನಗೆ ಪ್ರಿಯವಾದ ರಾಗದಲ್ಲಿ ಹಾಡನ್ನು ಹೇಳಿಸಿದರು! ಹೌದು ಮತ್ತೆ! ರಾಯರಿಗೋಸ್ಕರ ನಡೆದ ಕಛೇರಿಗಳೇ ಇವುಗಳೆಲ್ಲ.  ಅದರಲ್ಲಿ ನನಗೆ ಪ್ರಿಯವಾದ ರಾಗವೇ ಮೂಡಿಬಂದಿರುವುದು ಸಹ ರಾಯರ ಕೃಪೆಯೇ.

Dr. R. Ganesh

ಡಾ. ಗಣೇಶ್ ಮಾಡಿದ ಶ್ಲೋಕಾಲಾಪನೆ ಇದು

ಶ್ರೀಮತೋ ರಾಘವೇಂದ್ರಸ್ಯ ನಮಾಮಿ ಪದಪಂಕಜೇ |
ಕಾಮಿತಾಽಶೇಷಕಲ್ಯಾಣಕಲನಾ ಕಲ್ಪಪಾದಪೌ ||

ಅರ್ಥ: (ನಮ್ಮ) ಕಲ್ಯಾಣಮಯವಾದ ಎಲ್ಲ ರೀತಿಯ ಅಭೀಷ್ಟಗಳನ್ನು ಈಡೇರಿಸುವ ವಿಷಯದಲ್ಲಿ ಕಲ್ಪವೃಕ್ಷದಂತಿರುವ, ಸಕಲ ಮಂಗಲಕರವಾದ ಸಂಪತ್ತಿನಿಂದ ಕೂಡಿರುವಂತಹ ಶ್ರೀರಾಘವೇಂದ್ರತೀರ್ಥರ ಪಾದಕಮಲಗಳಲ್ಲಿ ನಾನು ನಮಸ್ಕಾರಗಳನ್ನು ಅರ್ಪಿಸುತ್ತೇನೆ.

ಶಬ್ದಾರ್ಥ : ಶ್ರೀಮತಃ = ಸಂಪತ್ತಿನಿಂದ ಕೂಡಿದ; ಪದಪಂಕಜ = ಪಾದಕಮಲ ಅರ್ಥಾತ್ ಕಮಲದಂತೆ ಕೋಮಲವಾದ ಪಾದಗಳು ; ಕಲ್ಪಪಾದಪಃ = ಕಲ್ಪವೃಕ್ಷ.

Download

 

A.S. Muraliಮುರಳಿಯವರು ಆಲಾಪಿಸಿದ ರಾಯರ ಶ್ಲೋಕ

ಮೂಕೋ‍ಽಪಿ ಯತ್ಪ್ರಸಾದೇನ ಮುಕುಂದ ಶಯನಾಯತೇ  |
ರಾಜರಾಜಾಯತೇ ರಿಕ್ತೋ ರಾಘವೇಂದ್ರಂ ತಮಾಶ್ರಯೇ ||

ಅರ್ಥ: ಇದು ಶ್ರೀರಾಘವೇಂದ್ರವಿಜಯದ ಮೊದಲನೆಯ ಸರ್ಗದ ಮಂಗಳಾಚರಣೆಯ ಶ್ಲೋಕಗಳಲ್ಲಿ ಒಂದು. ಶ್ರೀರಾಯರನ್ನು ಆಶ್ರಯಿಸಿದರೆ ಉಂಟಾಗುವ ಸತ್ಪರಿಣಾಮಗಳನ್ನು ನಾರಾಯಣ ಪಂಡಿತಾಚಾರ್ಯರು ವರ್ಣಿಸುವ ಪರಿ ಇದು.
ಯಾರ ಕೃಪೆಯಿಂದ ಮಾತು ಬಾರದವನೂ ಸಹಸ್ರಹೆಡೆಗಳನ್ನು ಹೊಂದಿದ ಶೇಷದೇವರಂತೆ ಮಾತನಾಡಲು ತೊಡಗುತ್ತಾನೊ, ಖಾಲಿ ಕೈಯುಳ್ಳ ಅತಿ ದೀನನೂ ಸಹ ಮಹಾರಾಜನೇ ಆಗಿಬಿಡುತ್ತಾನೆಯೋ ಅಂತಹ (ಕೃಪೆಮಾಡುವ) ಶ್ರೀರಾಘವೇಂದ್ರರೇ ನಿಮ್ಮನ್ನೇ ನಾನು ಆಶ್ರಯಿಸುತ್ತೇನೆ.

ಶಬ್ದಾರ್ಥ  : ಮುಕುಂದಶಯನ = ವಿಷ್ಣುವಿನ ಹಾಸಿಗೆ ಅರ್ಥಾತ್ ಶೇಷದೇವರು. ರಿಕ್ತಃ = ಬರಿಗೈಯವನು, ಬಡವ.

Download Mookopi Yatprasadena Shloka

ಅಂದಹಾಗೆ : ಮೋಹನಕಲ್ಯಾಣಿ ರಾಗದ ಹಿನ್ನೆಲೆ ಸಹ ಆಸಕ್ತಿಕರವಾಗಿದೆ. ಇನ್ನೊಂದು ಸಲ ಬರೆಯುವೆ.


ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts